Archive for July, 2007

ಪಡಖಾನೆಯ ಹುಡುಗಿ ಹೇಳಿದ್ದು – 2

grace-temp-india1.jpg 

ಹಿತ್ತಲ ಬೇಲಿಯ
ಹಕ್ಕಿ ಸಖಿಯ ಕರೆಯುತ್ತಿದೆ.
ನೀನೂ ಒಂದಿಷ್ಟು ಪದಗಳ
ನನ್ನ ಉಡಿಗೆ ಸುರಿ.
ಘಮ್ಮೆಂದಾವು ಅರಳಿ.
ನನ್ನ ಮೂಗಲ್ಲಿ ಮಳೆಯ ಪರಿಮಳ
ನಿನ್ನ ಕಣ್ಣಲ್ಲಿ ಮಧುವಿನ ರಂಗು
ಈ ಕೋಣೆಯ ಬಾಗಿಲು
ಮಜಬೂತಾಗಿದೆಯೊ
ನೋಡಿಕೊ
ನಿನಗೆ ಇಷ್ಟವಿಲ್ಲ ಬಚ್ಚಲಲ್ಲಿ
ನೀ
ರು
ತೊ
ಟ್ಟಿ
ಕ್ಕು


ದ್ದು
ಆಮೇಲೆ ಸಬೂಬು
ಹುಡುಕುವುದು ಬೇಡ.
ಈಗ ಕವನ ಅರ್ಧ ಸೀಳಿದ
ದೇವದಾರು ಮರದಂತೆ ಅನ್ನಿಸುತ್ತಿದೆ.

Comments (2)

ಹಂಗಾಮದ ಗಾನಾ ಈಗ ಅವಧಿಯ ಚೇತನಾ!!

Come and have a look. You may surprise yourself.
-Stuart Rose

ಅವಧಿಯಲ್ಲಿ ಗಾನಾ ಜೋಯ್ಸರ ’ಅಮ್ಮ ಆಗ್ಲಿಕ್ಕೆ ಹೆರಲೇಬೇಕಾ’ ಓದಿ ಪ್ರತಿಕ್ರಿಯಿಸಿದ್ದೆ. ಅದಕ್ಕೆ ಉತ್ತರವೊಂದು ಬಂತು. ಬೇರಾರಿಂದಲೂ ಅಲ್ಲ. ಹಂಗಾಮದ ನಂತರ ಕಾಣಿಸದಿದ್ದ ಗಾನಾ ಈಗ ಚೇತನಾ ಆಗಿ ಪ್ರತ್ಯಕ್ಷರಾಗಿದ್ದಾರೆ!! ಪ್ರಪಂಚ ಏನೆಂದರೂನು ಗುಂಡಗಿದೆ, ಅಲ್ಲವೆ? ಹೀಗೆ ಯಾರಯಾರೊಡನೆಯೊ ಮಾತನಾಡುತ್ತ ಇರುವಾಗ ಯಾರೊ ಮರೆತುಹೋಗಿದ್ದವರು ಧುತ್ತನೆ ಮರಳಿಬಂದು ಇಣುಕಿದರೆ ಏನು ಸಡಗರ!!

ಹೋದ ತಿಂಗಳು ಸಿಂಧುವಿನೊಡನೆ ಮಾತನಾಡುವಾಗ ಶಶಿ ಸಂಪಳ್ಳಿ ಎಲ್ಲಿಂದಲೋ ಬಂದ. ಈಗ ಬ್ಲಾಗುಗಳನ್ನ ಅಡಿಮೇಲು ಮಾಡುತ್ತಿರುವಾಗ ಗುರುದೇವ್ ಎಂಬುವರ ಬ್ಲಾಗು ನೋಡಿದೆ. ಆರೇಳು ವರುಷಗಳ ಹಿಂದೆ ’ನೀನಾಸಂ’ ಸಂಸ್ಕೃತಿ ಶಿಬಿರವೊಂದರಲ್ಲಿ ಭೇಟಿಯಾಗಿದ್ದ ಗುರುದೇವ ಇವರೇನೇ ಎಂದು ಅನ್ನಿಸಿತು. ಶ್ರೀನಿವಾಸರಾಜು ಮೇಷ್ಟರ ಆಭಿನಂದನಾ ಸಮಾರಂಭದ ಕವಿಗೋಷ್ಟಿಗೆ ಕಿರಣನೊಡನೆ ಕುತೂಹಲದಿಂದ ಬಂದವಳಿಗೆ ’ನೀನಾಸಂ’ ನಲ್ಲಿಯೇ ಆತ್ಮೀಯಳಾದ ರಶ್ಮಿ ಹೆಗಡೆ ಭೇಟಿಯಾದಳು. ಚೆಂದವಾಗಿ ಕವನ ಬರೆಯುವ ಹುಡುಗಿ. ಹಾಗೆಯೆ ಅಲ್ಲಿ ಕಂಡವರು ಸ್ನೇಹಿತರಾದ ಆನಂದ ಋಗ್ವೇದಿ ಮತ್ತು ವಿಕ್ರಮ ವಿಸಾಜಿ. ನಮಗೆಲ್ಲ ನಾಸ್ಟಾಲ್ಜಿಯಾ ಉಕ್ಕಿಬಂದು ಗಾಂಭೀರ್ಯವೆಲ್ಲ ಮರೆತುಹೋಗಿ ಯಾರ ಪರಿವೆ ಇಲ್ಲದವರ ಹಾಗೆ ಪರಿಪರಿಯಾಗಿ ನಗಾಡಿಕೊಂಡು ಕೂತಿದ್ದೆವು. ವಿಕ್ರಮನ ಕವನಸಂಕಲನವನ್ನ ಗಾಳಿಬೀಸಿಕೊಳ್ಳಲು ಕೇಳಿ ಬೈಯಿಸಿಕೊಂಡೆ. ಇದಾದ ಕೆಲವು ದಿನಗಳ ಮೇಲೆ ಹೈಸ್ಕೂಲಿನ ಸ್ನೇಹಿತೆ ಪರಿಮಳ ಆರ್ಕುಟ್ಟಿನಿಂದ ಅದು ಹೇಗೋ ನನ್ನನ್ನು ಕಂಡುಹಿಡಿದು ಮುಂಬಯಿಯಿಂದ ಫೋನಾಯಿಸಿ ರಾಶಿ ಮಾತನಾಡಿದಳು. ಈಗ ಮೊನ್ನೆ ರಶ್ಮಿಗೆ ಫೋನು ಮಾಡಿದರೆ ಬಿ.ಎ., ಎಂ.ಎ. ಗಳಲ್ಲಿ ಐದು ವರುಷ ಸಹಪಾಠಿಯಾಗಿದ್ದ ಡಂಕಿನ್ ಝಳಕಿ ಇಲ್ಲಿಯೆ ಇದ್ದಾನೆ ಅಂದಳು.

Whatever. All this did wonders to me.
ಖುಶಿಯಾಗುತ್ತ ಇದೆ.

ಗಾನಾ ಅಲಿಯಾಸ್ ಚೇತನಾ ಮತ್ತು ಅವಧಿ,
ಇದನ್ನೆಲ್ಲ ನೆನಪಿಸಿದ್ದಕ್ಕೆ ಥ್ಯಾಂಕ್ಯೂ!!

Comments (10)

ಕಥೆಗಳ ಕೇಳುವ ಅಸಂಗತ ತವಕದಲ್ಲಿ…

womanwindow1.jpg

ಬೆಳ್ಳಂಬೆಳಗ್ಗೆ ಕೊರೆಯುವ ಚಳಿಯಲ್ಲಿ ಎದ್ದು ಹೂಮಾರುವ ಮುದುಕಿಯನ್ನೆ ಅಭಿಸಾರಿಕೆಯ ಹಾಗೆ ಕಾಯುತ್ತ ಕುಳಿತಿದ್ದೇನೆ. ಆಕೆ ಕ್ಯಾತ್ಸಂದ್ರದ ಯಾವುದೋ ಮೂಲೆಯಿಂದ ಬಿಡಿಹೂವುಗಳನ್ನು ಬುಟ್ಟಿತುಂಬ ತುಂಬಿಕೊಂಡು ಮೆಲ್ಲನೆ ನಡೆದುಕೊಂಡು ಬರಬಹುದು, ಮನೆಯ ಪಡಸಾಲೆಯಲ್ಲಿ ಕುಕ್ಕರುಗಾಲಲ್ಲಿ ಕೂತು ಅವನ್ನೆಲ್ಲ ಸುರುವಿ ತಲೆಬಗ್ಗಿಸಿ ತಾಳ್ಮೆಯಿಂದ ಕಟ್ಟಿಕೊಡಬಹುದು, ನಾನಾಗ ಅರ್ಧಗಂಟೆ ಆಕೆಯನ್ನು ದಿಟ್ಟಿಸುತ್ತ ಕುಳಿತಿರಬಹುದು ಎನ್ನುವ ಹುಂಬ ಆಸೆ. ಆಕೆಯ ಕೈ ಕೊರಳು ಮುಖಗಳ ಸುಕ್ಕುಗಳು, ಗುಳಿಬಿದ್ದ ಕಂದುಗಣ್ಣುಗಳ ಪ್ರಶಾಂತ ಓಡಾಟ, ಆಗೊಮ್ಮೆ ಈಗೊಮ್ಮೆ ಬಿಡುವ ನಿಟ್ಟುಸಿರು, ಸರಸರನೆ ಹೂವುಕಟ್ಟುವ ನೀಳ ಕೈಬೆರಳುಗಳು, ಬೊಚ್ಚುಬಾಯಿಂದ ಉದುರುವ ಅಸ್ಪಷ್ಟ ಕಥೆಗಳು – ಎಲ್ಲವೂ ನನ್ನ ಪ್ರೀತಿಯ ಮುದುಕಿಯರನ್ನು ನೆನಪಿಸುತ್ತವೆ. ಆಕೆ ಮಳೆಚಳಿಗಳ ಪರಿವೆಯಿಲ್ಲದೆ ಗೂನಿಕೊಂಡು ಓಡಾಡುವುದನ್ನು ನೆನೆದುಕೊಂಡು ಆಕೆಯ ಆರೋಗ್ಯ ಹಾಳಾಗದಿರಲಿ ಎಂದು ಪ್ರಾರ್ಥಿಸಿಕೊಂಡು ಹಾದಿ ಕಾಯುತ್ತ ನನಗೆ ಯಾವುದೋ ಹಳೆಯ ವಿರಹ ವಾಪಾಸು ಕಾಡಲಿದೆ ಎಂದು ಹೆದರಿಕೊಂಡು ಕಂಗಾಲಾಗಿದ್ದೇನೆ. ಅನಂತಮೂರ್ತಿಯವರು ಬರೆದ ಸಾಲುಗಳಂತೆ “ಎಲ್ಲ ನೆನಪಾಗುತಿದೆ…”

ಸೌದೆಯೊಲೆಯ ಮುಂದೆ ಬೆಳಜಾವ ಬೆಲ್ಲದಕಾಫಿ ಕಾಸಿಕೊಂಡು ಹೊಗೆಕೊಳವೆಯಿಂದ ಫೋಂ ಫೋಂ ಎಂದು ಊದುತ್ತ ಹೊಗೆಯಿಂದ ಆವೃತವಾದ ಅರೆಗತ್ತಲ ಕೋಣೆಯಲ್ಲಿ ತೆಳ್ಳಗೆ ಕ್ಯಾರಿಕೇಚರಿನಂತೆ ಯಾವಾಗಲೂ ಕುಳಿತಿರುತ್ತಿದ್ದ ನನ್ನಜ್ಜಿ. ಆಕೆಯ ಸೀರೆಸೆರಗು ಬೆಚ್ಚಗೆ ಸುತ್ತಿಕೊಂಡು ಕೈಯ ಸುಕ್ಕುಗಳನ್ನು ನೇವರಿಸುತ್ತ ಇದ್ದರೆ ನನಗೆ ಪಾತ್ರೆಯಲ್ಲಿ ನೀರ ಮಧ್ಯ ಗಟ್ಟಿ ಕುಳಿತ ಬೆಲ್ಲದ ಹಾಗೇ ಕರಗಿಹೋಗುವ ಎನ್ನಿಸುತ್ತಿತ್ತು. ನನ್ನಜ್ಜಿ ತನ್ನ ಲೋಟಕ್ಕೊಂದಿಷ್ಟು ಕಾಫಿ ಹುಯಿದು ಯಾರಿಗೂ ಕಾಣದಂತೆ ನನಗೆ ಕೊಟ್ಟು ಬೊಚ್ಚುಬಾಯಿಯನ್ನು ಸ್ವಲ್ಪವೇ ಓರೆಮಾಡಿ ನಗುತ್ತಿದ್ದರು. ನಾನು ಬೇರಾವ ಮಕ್ಕಳಿಗೂ ಉಪಲಬ್ಧವಾಗದ ಆ ವಿಶೇಷದ್ರವವನ್ನು ಗುಟುಕರಿಸುತ್ತ ಆಕೆಯ ಕೋಲುಮುಖದ ಗೆರೆಗಳನ್ನೆ ದಿಟ್ಟಿಸುತ್ತ ಇರುತ್ತಿದ್ದೆ. ಆಗೆಲ್ಲ ಆಕೆ ಕಾಗೆಗುಬ್ಬಚ್ಚಿ ಪಕ್ಕಪಕ್ಕ ಗೂಡುಕಟ್ಟಿಕೊಂಡು ಜಗಳವಾಡಿದ ಕಥೆಯೊಂದನ್ನು ಹೇಳುತ್ತಿದ್ದರು. ಬಿಸಿಲೇರುತ್ತಿದ್ದ ಹಾಗೆ ಆಕೆಯ ವಯಸ್ಸಿನ ಹಲವಾರು ಮುದುಕಿಯರು ಕಾಫಿಕುಡಿಯಲೆಂದೇ ಮೆಲ್ಲನೆ ಬಂದು ಕೂರುತ್ತ ನನ್ನ ಮೂಗು ಕೆನ್ನೆ ಹಿಂಡುತ್ತ ಇರುತ್ತಿದ್ದರು. ಅವರೆಲ್ಲರ ದಿನನಿತ್ಯದ ಕತೆಗಳ ಭರಾಟೆ ಪ್ರಾರಂಭವಾಗುತ್ತಿತ್ತು. ಏನೂ ಆರ್ಥವಾಗದೆ ಇದ್ದರೂ ಸುಮ್ಮನೆ ಕುಳಿತು ಎಲ್ಲವನ್ನು ಕೇಳುತ್ತಿದ್ದೆ- ಇದೆಲ್ಲ ಯಾವಾಗಲೂ ಹೀಗೇ ಇರುತ್ತದೆ ಎಂಬ ಸಂತಸದೊಡನೆ.

christineatwindow61.jpg

 ನನ್ನಜ್ಜಿ ತೀರಿಕೊಂಡ ದಿನ ನನ್ನನ್ನು ವಿಪರೀತ ಗಲಾಟೆಮಾಡಿದೆನೆಂದು ಪಕ್ಕದ ಮನೆಯ ಕೋಣೆಯೊಂದರಲ್ಲಿ ಕೂಡಿಹಾಕಿದ್ದರು. ನಾನು ಅಜ್ಜಿಯ ಬಾಯಿಂದ ಕಾಗೆಗುಬ್ಬಚ್ಚಿಯ ಕಥೆ ಕೇಳಬೇಕೆಂದು ಒಂದೇಸವನೆ ಚೀರಾಡುತ್ತಿದ್ದೆನಂತೆ. ಅಜ್ಜಿಯ ಗೆಳತಿಯರಾಗಿದ್ದ ಮುದುಕಿಯರೆಲ್ಲ ಒಬ್ಬೊಬ್ಬರಾಗಿ ಬಂದು ಆಕೆಯ ಸೀರೆಗಳನ್ನು ನೆನಪಿಗಾಗಿ ಇಸಿದುಕೊಂಡುಹೋಗಿ ನಮ್ಮ ಪಾಲಿಗೆ ಆಕೆಯ ಕೆಲವು ವಾಯಿಲ್ ಸೀರೆಗಳು ಉಳಿದುಕೊಂಡಿದ್ದವು. ನಾನು ಆಗಾಗ ಆಕೆಯ ಮರದ ಟ್ರಂಕು ಬಿಚ್ಚಿ ಅವನ್ನು ಮುಟ್ಟಿ ಖುಶಿಪಡುತ್ತಿದ್ದೆ. ಆಮೇಲೆ ಅವೇನಾದವೊ ತಿಳಿಯದು.

ನನಗೆ ಅರ್ಥವಾಗದ ವಿಚಿತ್ರ ನೋವುಗಳು, ಹೊಯಿಲಾಟಗಳು ಶುರುವಾಗಿದ್ದು ನಿನ್ನೆ ಟ್ರಕ್ ಡ್ರೈವರುಗಳಿಗೋಸ್ಕರ ಕಾಯುತ್ತ ನಿಂತಿದ್ದ ಹೈವೇ ಹೆಂಗಸೊಬ್ಬಳನ್ನು ನೋಡಿದ ಮೇಲೆ. ಮೈಗಂಟುವ ಪೀಚ್ ಬಣ್ಣದ ಸಲ್ವಾರುಕಮೀಜು, ಅದಕ್ಕೆ ಯಾವ ವಿಧದಲ್ಲಿಯೂ ಹೊಂದದ ಅಚ್ಚಹಸಿರು ಬಣ್ಣದ ವೆಯಿಲು ತೊಟ್ಟು ಟೋಲ್ ಗೇಟಿಂದ ಸ್ವಲ್ಪ ದೂರದಲ್ಲಿ ನಿಂತಿದ್ದ ಆಕೆ ಮಳೆಯಿಂದ ರಕ್ಷಣೆಗೋ ಏನೋ, ಒಂದು ಪ್ರಿಂಟುಗಳಿರುವ ಕಾಟನ್ ಬಟ್ಟೆಯನ್ನು ತಲೆಗೆ ಸುತ್ತಿಕೊಂಡಿದ್ದಳು. ಬಸ್ಸು ನಿಂತಿದ್ದ ಐದು ನಿಮಿಷಗಳೂ ಆಕೆಯ ಮೇಲಿಂದ ನನಗೆ ಕಣ್ಣು ಕೀಳುವುದು ಅಸಾಧ್ಯವಾಗಿತ್ತು.

painting_picasso_woman1.jpg

ಆಕೆಯ ಮುಖದಲ್ಲಿ ವರುಷಗಟ್ಟಲೆಯ ಅಲೆಮಾರಿತನ, ಉದ್ವಿಗ್ನತೆ, ಕಾದು ಉಂಟಾದ ಬೇಸರಗಳು ಹಾಗೂ ಹುಟ್ಟಲಾರಂಭಿಸಿದ್ದ ಸುಕ್ಕುಗಳು ಎಷ್ಟೊಂದು ಸ್ಪಷ್ಟವಾಗಿದ್ದುವೆಂದರೆ ನನಗೆ ಯಾವಾಗಲೋ ಕೇಳಿದ್ದ ಹಿಂದೂಸ್ತಾನೀ ಹಾಡೊಂದರ ಸಾಲುಗಳು ಒತ್ತರಿಸಿಕೊಂಡು ನೆನಪಾದವು..

ಸಾವನ್ ಬೀತೀ ಜಾಯೆ ಪೀಹರವಾ..
ಮನ್ ಮೋರಾ ಲಲಚಾಯೆ ರಹೇ
ಐಸೆ ಗಯೋ ಪರದೇಸ್ ಪಿಯಾ ತುಮ್..
ಚೈನ್ ಹಮೇ ನಹಿ ಆಯೆ ರಹೇ

ನಾನು ಆಕೆಯನ್ನೆ ಮೈಮರೆತು ದಿಟ್ಟಿಸುತ್ತಿದ್ದನ್ನು ನೋಡಿದ ಪಕ್ಕದ ಸೀಟಿನವ ನನ್ನನ್ನೆ ಕುತೂಹಲದಿಂದ ನೋಡಲಾರಂಭಿಸಿದ. ನಾನು ಆತನನ್ನೆ ದುರುಗುಟ್ಟಿ ನೋಡಲಾರಂಭಿಸಿದೆ. ತಿರುಗಿ ಏನೋ ಗೊಣಗಿಕೊಂಡು ಸುಮ್ಮನಾದ.

ಈ ಹೈವೇ ಹೆಂಗಸಿನ, ಮುದುಕಿಯರ ಮೈ ಮುಖಗಳ ಸುಕ್ಕುಗಳ ಪರಿವೆ ನನಗೇಕೆ ಬಂತೊ? ಹೊರಗೆ ವಿಪರೀತ ಚಳಿ ತುಂಬಿಕೊಂಡಿರಬೇಕು. ಯಾರಾದರೂ ಸೌದೆಒಲೆಯ ಪಕ್ಕ ಕೂತುಕೊಂಡು ಒಂದು ರಾಶಿ ಕಥೆ ಹೇಳಬೇಕು. ಹಗಲುರಾತ್ರಿಯೆನ್ನದೆ ಕೂತುಕೊಂಡು ಕೇಳಬೇಕು. ನಾನೂ ‘ವೆಯಿಟಿಂಗ್ ಫಾರ್ ಗೋಡೋ’ ನಾಟಕದ ಕ್ಯಾರೆಕ್ಟರುಗಳ ತರಹ ಅಸಂಗತವಾಗಿ ಏನೇನೆಲ್ಲ ಅಂದುಕೊಂಡು ಏನನ್ನೋ ಕಾದುಕೊಂಡು ಕುಳಿತಿದ್ದೇನಲ್ಲ ಅನ್ನಿಸಿ ನಗು ಬಂತು.

ಅಷ್ಟು ದೂರದಲ್ಲಿ ಹೂಮಾರುವ ಮುದುಕಮ್ಮನ ಗೂನುಛಾಯೆ ಕಾಣುತ್ತಿದೆ.
 

Leave a Comment

ಪಡಖಾನೆಯ ಹುಡುಗಿ ಹೇಳಿದ್ದು – 1

manet1.jpg

(ಚಿತ್ರ: ಮಾನೆ)

ಎಲ್ಲವ ತೊರೆದು ನಿನ್ನಲ್ಲಿಗೆ
ಬರಬೇಕೆಂದುಕೊಳ್ಳುವಾಗೆಲ್ಲ
ನಿನ್ನ ಕಡುವೈರಾಗ್ಯದ ಗಳಿಗೆಗಳು
ನೆನಪಾಗಿ ಹಿಂಜರಿವೆ

ಬೇಸರವಾದಾಗೆಲ್ಲ 
ಪದಗಳ ತಾಕಲಾಟ
ಒಂದಿಷ್ಟು ಮದಿರೆ, ಸುರುಳಿಹೊಗೆ
ಕಳೆದ ಭೇಟಿಯ ಅಮಲು
ಏಕಾಂತ ಹುಟ್ಟಿಸುವ ಹಾಡು
ಸರಳವಲ್ಲ ನಮ್ಮೀ ಮೋಹ.

ನನ್ನ ದಿಟ್ಟಿಸುತ್ತ ನೀನೆನ್ನುವೆ,
“ಇದು ಬರಿ ಮೋಹವಲ್ಲ.”
ಸುಮ್ಮನೇಕೆ ಸುಳ್ಳು ನುಡಿಯುತ್ತೀಯ?
ಅದೆಲ್ಲ ಬಿಡು ಹಾಳುರಗಳೆ.
ಗಡಿಯಾರದ ಮುಳ್ಳು ನೋಡು
 

Comments (3)

ಕಾರ್ಗಿಲ್ ಮತ್ತು ಕೊನಾರಕದಿಂದ ಎರಡು ಕಥೆಗಳು

ಪ್ರೇಮಜಿತ್ ಯಾಕೆ ಅಷ್ಟೊಂದೆಲ್ಲ ಮಾತನಾಡುತ್ತಾನೆ ಹಾಗೂ ಅದನ್ನೆಲ್ಲ ಯಾಕೆ ಏರುದನಿಯಲ್ಲಿ ಹೇಳುತ್ತಾನೆ ಅನ್ನುವುದು ನನ್ನ ಮನೆಯವರಿಗೆ ಬಿಡಿಸಲಾರದ ಕಗ್ಗಂಟಾಗಿತ್ತು. ಆದರೆ ನನಗೆ ಮಾತ್ರ ಆತನ ಕಷ್ಟ ಸುಮಾರು ಮಟ್ಟಿಗೆ ಅರ್ಥ ಆಗತೊಡಗಿತ್ತು. ಆತ ನನ್ನ ಗುಂಡಗಿರುವ ಮಗಳನ್ನು ಮೇಲಕ್ಕೆ ಎತ್ತಿ ಎಸೆದು ಆಕೆಯೊಡನೆ ದೋಸ್ತಿ ಬೆಳೆಸಿಕೊಳ್ಳಲು ಹವಣಿಸುತ್ತಿದ್ದ. ಆಕೆ ಅದನ್ನು ಸಾರಾಸಗಟಾಗಿ ತಿರಸ್ಕರಿಸಿ ಭಯದಿಂದ “ಇಲ್ಲಾಆಆಆ!!” ಎಂದು ಸೂರುಹಾರಿಹೋಗುವಂತೆ ಅರಚಾಡುತ್ತಿದ್ದಳು. ಆತ ಹಠತೊಟ್ಟು ನಿನ್ನ ಬಿಡಲಾರೆ ಎನ್ನುತ್ತ ಮರಳಿ ತನ್ನ ಸ್ನೇಹಸೇತು ನಿರ್ಮಾಣಪ್ರಯತ್ನದಲ್ಲಿ ತೊಡಗಿದ್ದ. ಮನೆಯಲ್ಲಿ ಒಳ್ಳೆಯ ಸ್ಕ್ರೀಮ್ ಶೋ ನಡೆಯುತ್ತ ಇತ್ತು.

ತಿಂಗಳೊಂದರ ಹಿಂದೆ ಪ್ರೇಮಜಿತ್ ಕುಮಾರ್ ದಾಸ್ ಎಂಬ ಒರಿಸ್ಸಾ ಮೂಲದ ಸಾಫ್ಟ್ವೇರ್ ಪರಿಣತ ಈ ರೀತಿ ಇರಲಿಲ್ಲ ಅಂದುಕೊಳ್ಳುತ್ತೇನೆ. ಏಕೆಂದರೆ ಆತ ಇಂಗ್ಲೆಂಡಿನ ಸರ್ಕಾರೀ ಸಂಪರ್ಕ ಸಂಸ್ಥೆಯೊಂದರ ವಿಶೇಷ ಅಧಿಕಾರಿಯಾಗಿ ಲಂಡನ್ ಜಿಲ್ಲೆಯ ಕೆಲಸವನ್ನೆಲ್ಲ ಮಾಡುತ್ತ ಕೆರೆದುಕೊಳ್ಳಲೂ ಪುರುಸೊತ್ತಿಲ್ಲದೆ ಇದ್ದವ. ಬೆಂಗಳೂರಿನ ಹಳೆಯ ಸ್ನೇಹಿತನೊಬ್ಬ ತನ್ನ ಕಂಪನಿಗೆ ಬಾರೆಂದು ಆಹ್ವಾನ ನೀಡಿದ. ಇವನಿಗೆ ಅದೇನೆನ್ನಿಸಿತೊ, ಹೆಂಡತಿ ಮಕ್ಕಳನ್ನು ತನ್ನ ತಂದೆತಾಯಿಯ ಬಳಿ ನಾಗಪುರಕ್ಕೆ ಬಿಟ್ಟು ಉಟ್ಟಬಟ್ಟೆಯಲ್ಲಿಯೇ ಬೆಂಗಳೂರಿಗೆ ಬಂದಿಳಿದ. ನನ್ನವಗೆ ಯಾವುದೊ ಕೆಲಸದ ಹಿನ್ನೆಲೆಯಲ್ಲಿ ಈತನ ಪರಿಚಯವಾಯಿತು. ತಿಂಗಳೊಪ್ಪತ್ತಿನಿಂದ ಸರಿಯಾದ ವಸತಿ ವ್ಯವಸ್ಥೆಯಿಲ್ಲದೆ ಒದ್ದಾಡುತ್ತಿದ್ದ ಈತನಿಗೊಂದು ಬಾಡಿಗೆಮನೆ ಮಾಡಿಸಿಕೊಟ್ಟು ವೀಕೆಂಡಿಗೆಂದು ನಮ್ಮ ಮನೆಗೆ ಕರೆತಂದ. ವಾರದಿಂದ ಉಟ್ಟು ಕೊಳೆಯಾಗಿದ್ದ ಆತನ ಬಟ್ಟೆಗಳನ್ನೆಲ್ಲ ನಾನು ಬಲವಂತ ಮಾಡಿ ವಾಶಿಂಗ್ ಮಶೀನಿಗೆ ಹಾಕಿ ಹೊರತೆಗೆದು ಒಣಗಿಸುತ್ತಿದ್ದರೆ ಆತ ಮುಜುಗರದಿಂದ ಹಿಂದೆಮುಂದೆ ಓಡಾಡುತ್ತ ತನ್ನ ನಾಚಿಕೆಯನ್ನು ಅಡಗಿಸಲು ಯತ್ನಿಸುತ್ತಿದ್ದ. ನಾನು ಒಳಗೊಳಗೇ ನಗುತ್ತ ಆತನ ಚಡಪಡಿಕೆ ಕಡಮೆ ಮಾಡಲು ಆತನ ಊರಿನ ಬಗ್ಗೆ, ಆತನ ಕೆಲಸದ ಬಗ್ಗೆ ಕೇಳಲಾರಂಭಿಸಿದೆ. ನನಗೆ ಹಿಂದೀ ಸುಲಲಿತವಾಗಿ ಬರುತ್ತಿದ್ದುದು ಆತನಿಗೆ ಸಂತಸವಾಗಿತ್ತೆಂದು ತೋರುತ್ತದೆ. ಮಾತನಾಡುತ್ತ ಹೋದಹಾಗೆ ಒಳ್ಳೆಯ ಕಥೆಗಾರನೊಬ್ಬ ನನ್ನ ಮುಂದಿದ್ದಾನೆಂಬುದು ಅರಿಕೆಯಾಗತೊಡಗಿತು.

war1.jpg

ಪ್ರೇಮಜಿತನ ಮನೆತನದ ಕಳೆದ ಮೂರು ತಲೆಮಾರಿನ ಗಂಡಸರೆಲ್ಲ ಒಂದಿಲ್ಲೊಂದು ರೀತಿಯಿಂದ ಸೈನ್ಯದಲ್ಲಿ ಇದ್ದವರೇ. ಈತನ ಅಣ್ಣಂದಿರೆಲ್ಲ ಭಾರತೀಯ ಸೈನ್ಯ, ವಾಯುದಳಗಳಲ್ಲಿ ಉನ್ನತ ಹುದ್ದೆಗಳಲ್ಲಿರುವವರು. ಈತನೂ ಕುಟುಂಬದ ಸಂಪ್ರದಾಯ ಮುರಿಯದೆ ಬೆಳಗಾಂನ ಮಿಲಿಟರಿ ಸ್ಕೂಲಿನಲ್ಲಿ ಓದಿ ನೌಕಾದಳ ಸೇರಿದ. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ನೌಕೆಗಳು ಅಂತರ್ರಾಷ್ಟ್ರೀಯ ಸಮುದ್ರಮಾರ್ಗದಿಂದ ಭಾರತವನ್ನು ಪ್ರವೇಶಿಸದಂತೆ ಇವರು ತಡೆಹಾಕಿದ್ದರಂತೆ. ಸೈನ್ಯದಲ್ಲಿದ್ದ ಆತ್ಮೀಯ ಗೆಳೆಯನೊಬ್ಬ ಕಾರ್ಗಿಲ್ಲಿಗೆ ಹೊರಡುವ ಮುನ್ನ ಇವನ ಬಳಿಬಂದು, “ನಾವೇ ಗೆಲ್ಲಬೇಕು ಅಂತ ಹಾರೈಸು” ಅಂದನಂತೆ. ಇವನು “ಅದೆಲ್ಲ ಸರಿ. ನೀನು ಸುರಕ್ಷಿತವಾಗಿ ಮರಳಿ ಬಾ.” ಎಂದು ತಬ್ಬಿ ಕಳಿಸಿಕೊಟ್ಟನಂತೆ. ಮಾರನೇ ದಿನ ಸಂಜೆ ಸಿಡಿದ ಶೆಲ್ಲೊಂದು ಎದೆಯೊಳಹೊಕ್ಕು ಆತ ಮರಣಹೊಂದಿದ ಸುದ್ದಿ ತಲುಪಿತು. “ಅವರು (ಪಾಕಿಸ್ತಾನ) ಎರಡುಮೂರು ತಿಂಗಳ ಮೊದಲೇ ರೆಡಿಯಾಗಿದ್ದರು. ಅವರ ಹತ್ತಿರ ಮದ್ದುಗುಂಡು, ಆಹಾರ ಎಲ್ಲ ಇತ್ತು. ನಮ್ಮ ಹತ್ತಿರ ಇದ್ದಿದ್ದು ಅಂದರೆ ನಮ್ಮಿಂದ ಅನ್ಯಾಯವಾಗಿ ಅವರು ಕಿತ್ತುಕೊಂಡ ಭೂಮಿಯನ್ನು ವಾಪಾಸು ಪಡೆದುಕೊಳ್ಳುವ ಹಠ ಮಾತ್ರ. ಅಲ್ಲಿ ಎಂಥ ಕಷ್ಟವಿತ್ತು ಅಂದರೆ ಮಾಮೂಲು ವ್ಯಕ್ತಿಯೊಬ್ಬ ಅಲ್ಲಿಗೆ ಕಾಲಿಡುವುದನ್ನೂ ಅಂದಾಜು ಮಾಡಲು ಸಾಧ್ಯವಿರಲಿಲ್ಲ. ಆ ಲೆಕ್ಕದಲ್ಲಿ ನಾವು ಗೆದ್ದಿದ್ದು ಕೆಟ್ಟದ್ದರ ಮೇಲೆ ಒಳ್ಳೆಯದು ಸಾಧಿಸಿದ ವಿಜಯ” ಎಂದು ಹೇಳುತ್ತ ಪ್ರೇಮಜಿತ ಭಾವುಕನಾದ. ಯುದ್ಧದ ನಂತರ ಆತ ಎಂ.ಬಿ.ಎ. ಮುಗಿಸಿ ಹಲವಾರು ತಂತ್ರಾಂಶಗಳನ್ನು ಕಲಿತುಕೊಂಡು ನೌಕಾದಳದಲ್ಲಿ ಕೆಲವಾರು ವರುಷ ಕೆಲಸ ಮಾಡಿದನಂತೆ. ನಿವೃತ್ತಿಯ ನಂತರ ಲಂಡನ್ನಿಗೆ ಹೋಗಿ ನೆಲೆಸಿದ.

konark1.jpg

ಊಟವಾದ ಮೇಲೆ ಒರಿಸ್ಸಾದ ಬಗ್ಗೆ ಹೇಳು ಎಂದು ಕೇಳಿದೆ. “ಏನು ಹೇಳಲಿ? ಕೊನಾರಕ್ ಕಥೆ ಕೇಳಿದ್ದೀಯ?” ಎಂದ. ಇಲ್ಲವೆಂದೆ. ಕೊನಾರಕ್ ದೇವಾಲಯ ಕಟ್ಟಿದ ರಾಜ ಬಲು ಕೋಪಿಷ್ಟನಂತೆ. ತನಗೆ ಸರಿಹೋಗದಂತೆ ಕೆಲಸಮಾಡಿದ ಶಿಲ್ಪಿಗಳ ತಲೆಕಡಿಸುವುದೋ, ಸೆರೆಮನೆಗೆ ತಳ್ಳುವುದೋ ಮಾಡುತ್ತಿದ್ದವನು. ಆಗ ಕೊನಾರಕ್ನ ಬಳಿ ಮಹಾನದಿ ಹರಿಯುತ್ತಿತ್ತಂತೆ. ದೇವಸ್ಥಾನದ ಕಳಸದಗೋಪುರದ ಹೊರತು ಎಲ್ಲ ಪೂರ್ಣವಾದವು. ಆಗಲೇ ದೇವಸ್ಥಾನ ತೆರೆಯಲು ಒಳ್ಳೆಯ ಮುಹೂರ್ತ ಒದಗಿಬಿಟ್ಟಿತು. ರಾಜ ಒಂದು ದಿನ ಗಡು ನೀಡಿ ಶಿಲ್ಪಿಗಳು ಗೋಪುರವನ್ನು ಪೂರ್ತಿಮಾಡದಿದ್ದರೆ ತಲೆಕಡಿಸಲಾಗುವುದೆಂದು ತಾಕೀತು ಮಾಡಿದ. ಶಿಲ್ಪಿಗಳ ಪ್ರಕಾರ ಕಳಸದ ಗೋಪುರವನ್ನು ಮಾಡುವವನು ಅಸಾಧಾರಣನಾಗಿರಬೇಕಾಗಿತ್ತು. ಏಕೆಂದರೆ ಗೋಪುರದ ಭಾಗ ಬಹಳ ಎತ್ತರದಲ್ಲಿತ್ತು. ಅಲ್ಲಿಗೆ ಹತ್ತಿಹೋಗಿ ಕೆಲಸ ಪೂರ್ತಿಗೊಳಿಸುವ ಕೌಶಲ್ಯ ಯಾರಲ್ಲಿಯೂ ಇರಲಿಲ್ಲ. ಕೊಟ್ಟ ಗಡುವಿನ ರಾತ್ರಿ ಮುಗಿದು ಬೆಳಗಾಯಿತು. ಶಿಲ್ಪಿಗಳು ಜೀವದ ಆಸೆ ತೊರೆದು ತಲೆಕೆಳಗುಮಾಡಿ ನಿಂತರು. ರಾಜ ಬಂದವನೇ ತಲೆಯೆತ್ತಿ ನೋಡಿದ. “ಎಂಥ ಅಪೂರ್ವ ಕಲೆಗಾರಿಕೆ!” ಎಂದು ಉದ್ಗರಿಸಿದ. ಶಿಲ್ಪಿಗಳೆಲ್ಲ ದಂಗುಬಡಿದುಹೋದರು. ಗೋಪುರ ಪೂರ್ಣವಾಗಿತ್ತು. ಅಸಲಿಗೆ ಆ ಕೆಲಸ ಮಾಡಿದ್ದು ಅವರಾರೂ ಆಗಿರಲಿಲ್ಲ. ಮುಖ್ಯಶಿಲ್ಪಿಯ ಹನ್ನೆರಡು ವರುಷದ ಮಗ ರಾಜನ ಫರಮಾನು ಕೇಳಿ ತನ್ನ ಪರಿವಾರಕ್ಕೆ ಒದಗಿದ್ದ ವಿಪತ್ತನ್ನು ಅರಿತು ರಾತೋರಾತ್ರೆ ಮೇಲೆ ಏರಿಹೋಗಿ ಕೆಲಸ ಪೂರ್ಣಗೊಳಿಸಿದ್ದ. ವಿಷಯ ರಾಜನಿಗೆ ತಿಳಿದರೆ ತನ್ನ ತಂದೆಗೆ ಅವಮಾನವಾಗುವುದೆಂದು ಹುಡುಗನಿಗೆ ಯೋಚನೆ ಬಂತು. ಪೂಜೆಗೆ ಮುನ್ನ ಗೋಪುರದಿಂದ ಏನೋ ಧೊಪ್ಪನೆ ನದಿಗೆ ಬಿದ್ದ ಸದ್ದು ಶಿಲ್ಪಿಗಳಿಗೆ ಕೇಳಿತು. ಹುಡುಗ ನದಿಗೆ ಹಾರಿಕೊಂಡಿದ್ದ. ಬಾಲಹತ್ಯಾದೋಷ ರಾಜನಿಗೆ ಅಂಟಿತು. ಮಹಾನದಿ ಆ ಕೋಪದಿಂದ ತನ್ನ ಹರಿವು ಬದಲಾಯಿಸಿ ದೂರ ಸರಿಯಿತು ಎಂದು ಪ್ರತೀತಿ.

ಈ ಕೊನಾರಕದ ಬಾಲಶಿಲ್ಪಿ ಮತ್ತು ಕಾರ್ಗಿಲ್ಲಿನ ಸಹಸ್ರಾರು ಸೈನಿಕರ ಬಲಿದಾನಗಳಲ್ಲಿ ಏನೋ ಲಿಂಕ್ ಇರುವ ಹಾಗೆ ನನಗೆ ಭಾಸವಾಗತೊಡಗಿತು. ಪ್ರೇಮಜಿತನ ಬಳಿ ಇನ್ನೂ ಅಂಥ ನೂರಾರು ಕತೆಗಳಿದ್ದವು. ಆತ ಅವನ್ನೆಲ್ಲ ಹೇಳಲಾಗದೆ ಬಿಡಲೂ ಆಗದೆ ಒದ್ದಾಡುತ್ತಿರುವುದು ಹಾಗೂ ಅದರಿಂದಾಗಿ ವಟವಟ ಮಾತಾಡುವುದನ್ನು ಅಭ್ಯಾಸ ಮಾಡಿಕೊಂಡಿರುವುದು ನನಗೆ ತಿಳಿಯುತ್ತಿತ್ತು. ಮಳೆ ಬರಬಹುದೊ ಎಂದು ನೋಡುತ್ತ ಸುಮ್ಮನೆ ಕುಳಿತುಕೊಂಡೆವು. ಪ್ರೇಮಜಿತ್ ಯಾಕೊ ಮೌನವಾಗಿದ್ದ.
 

Leave a Comment

Older Posts »