Archive for September, 2007

ಬೇರುಗಳು.

(ನನ್ನ ಹಿಂದಿನ ಬ್ಲಾಗ್ ಲೇಖನದಲ್ಲಿ ಕಾಣುವ ಅಲೆಕ್ಸ್ ಹ್ಯಾಲಿಯ ’ರೂಟ್ಸ್’ ಅನ್ನು ಮೊದಲ ಬಾರಿಗೆ ಶಿವಮೊಗ್ಗೆಯಿಂದ ದಸರಾ ರಜಕ್ಕೆಂದು ಮನೆಗೆ ಬಂದಾಗ ಓದಿದ್ದು. ಈ ಪುಸ್ತಕ ನನಗೆ ಅಚಾನಕ್ಕಾಗಿ ನನ್ನೂರಿನ ಪಬ್ಲಿಕ್ ಲೈಬ್ರರಿಯ ಕಪಾಟೊಂದರ ಮೂಲೆಯಲ್ಲಿ ಸಿಕ್ಕಿದ್ದು. ಹಾಗೆ ಓದಿದ ಪುಸ್ತಕ ನನ್ನನ್ನು ವಿಪರೀತ ಕಾಡಲು ತೊಡಗಿ ಬರೆದ ಕವಿತೆ ಇದು.) 

ಪ್ರೀತಿಯ ಅಲೆಕ್ಸ್,
ಹೇಗೆ ಹೋದೆಯೊ ನೀನು
ವಾಪಾಸು ಹಿಂದಕ್ಕೆ,
ಸ್ಲೋ ಮೋಶನ್ನಿನಲ್ಲಿ ನಿನ್ನ
ಬೇರುಗಳಿಗೆ…

ನಿನ್ನ ಅರೆ-ಆತ್ಮಕಥೆಯ
ಕೊನೆಯ ಪುಟವನ್ನ, ಅಮ್ಮನ
ಮಲಗೇ ಹುಚ್ಚುಮುಂಡೇದೆ.. ಇತ್ಯಾದಿ
ಸಿಡುಕುಗಳ, ತಮ್ಮನ ಕ್ರಿಕೆಟ್ ಕನವರಿಕೆಗಳ,
ಹಿಂದಿನ ಗಲ್ಲಿಯಾಚೆಗಿನ ಅಡಿಕೆಭಟ್ಟರ
ತೋಟದ ಗುಳ್ಳೆನರಿಗಳ ಊಳಿನ ಮಧ್ಯೆ
ಅಡಿಗೆಮನೆಯ ಮೆಟ್ಟಿಲ ಮೇಲೆ
ಬಲ್ಬಿನ ಮಂಕುಬೆಳಕಲ್ಲಿ ಓದಿ
ಮುಗಿಸಿದಾಗ ಬೆಳಿಗ್ಯೆ ಎರಡೂಮುಕ್ಕಾಲು.
ಮೂರರ ತನಕ, ಯಾಕೋ ಗೊತ್ತಿಲ್ಲ
ನೀರವವಾಗಿ ತೃಪ್ತಿಯಿಂದ ಚೆನ್ನಾಗಿ ಅತ್ತೆ.
ಮಲಗಿದ್ದ ಕಂದುಬಣ್ಣದ ಬೆಕ್ಕು ಒಮ್ಮೆ
ತಲೆಯೆತ್ತಿ ನೋಡಿ ಮತ್ತೆ ಮಲಗಿತು.
ನಾನೂ ಬೆಳಕಾರಿಸಿ ಬಂದು
ರಗ್ಗೆಳೆದುಕೊಂಡೆ.
*    *    *    *
ಅಂದಿನಿಂದ ಶುರುವಾದ ಒದ್ದಾಟ
ಇವತ್ತಿನವರೆಗೂ ಅಮರಿಕೊಂಡಿದೆ.
ಎಲ್ಲಿ ನನ್ನ ಬೇರುಗಳು?
ಹೇಗಿರಬಹುದು ನನ್ನ ವಂಶವೃಕ್ಷ?
ಅಮ್ಮನೆಡೆಗೆ ನೊಡಲೆ? ಅಪ್ಪನೆಡೆಯೆ?
ಅವರೆಡೆ ನೋಟ ಹಾಯಿಸಿದಾಗಲೆಲ್ಲ
ನಿಜವಾಗಿ ನನಗೆ ಆತ್ಮವೇ ಇಲ್ಲ
ಇದ್ದರೂ ಪೂರ್ಣವಿಲ್ಲ ಅನ್ನುವ
ವಿಚಿತ್ರ ಖಯಾಲು ಹೆದರಿಸುತ್ತದೆ.
ಮೊದಲಬಾರಿಗೆ ನೀನು ನಿನ್ನ
ಕತ್ತಲುಗಪ್ಪು ಬಣ್ಣದ ವಂಶಜರನ್ನು
ಸಂಧಿಸಿದಾಗ, ಅವರು ನಿನ್ನನ್ನು
‘ಮಿಸ್ಟರ್ ಕೀಂಟೆ!’ ಎಂದಾಗ
ಎಣ್ಣೆಗೆಂಪು ಬಣ್ಣದ ನಿನ್ನ ಸಂತಸಭರಿತ
ಮುಜುಗರದ ಪರಕೀಯಭಾವವನ್ನು
ಚೆನ್ನಾಗಿ ಅರಿತಿದ್ದೇನೆ;
ಅದು ನನ್ನದು ಕೂಡಾ…
ಆಶ್ಚರ್ಯವಿಲ್ಲ, ನಿನಗೆ ಆ ಕ್ಷಣ
ಆ ಬಾಂಧವರ ಮಧ್ಯೆ ನೀನು
‘ಶುದ್ಧ’ನಲ್ಲವೆನಿಸಿದರ ಬಗ್ಗೆ.
*    *    *    *
ನನ್ನ್ಯಾಕೆ ಬಿಡಲೊಲ್ಲರು ಅಲೆಕ್ಸ್
ನಿನ್ನೀ ವಂಶಜರು?
ಕುಂಟಾ ಕಿಂಟೆ, ಕಿಜಿ, ಚಿಕನ್ ಜ್ಯಾಕ್, ಎಲ್ಲರೂ
ಕೂಡಿ ನನ್ನ ಹಿಂಡಿಹಾಕುತ್ತಾರೆ ಮಾರಾಯಾ..
ಸಿಕ್ಕಾನೆ ಹುಡುಕಿದರೆ ನನ್ನ ಮೊದಲ ತಂದೆ?
ಇದ್ದಿರಬಹುದಾದರೂ ಹೇಗೆ ಅವನ ಚಹರೆ?
ಕಾಬೂಲು ದಾಟಿ ಖೈಬರ್ ನುಸುಳಿ ಬಂದ
ದಂಡಿನವನಿರಬಹುದೆ?
ಅಥವಾ ತನ್ನ ಬೇರ ಕಳಚಿ
ಇನ್ನೊಂದನ್ನಾಯ್ದ ಇಲ್ಲಿನವ ಇರಬಹುದೆ?
ಇಲ್ಲದಿದ್ದರೆ, ದಕ್ಷಿಣದ್ರಾವಿಡದೇಶದ
ಪುಟ್ಟಹಳ್ಳಿಯೊಂದರ ಗೃಹಸ್ಥನಿರಬಹುದೆ?
ಅವನೂರಿಗೆ ಬರಬಂದು ಅವನೀಕಡೆ
ವಲಸೆ ಬಂದಿರಬಹುದೆ?
ಮೊತ್ತಮೊದಲಿಗೆ, ಎಲ್ಲಕಿಂತಲೂ ಹಿಂದೆ?
ನನಗೆ ಗೊತ್ತು
ನಾನು ಹೆಣ್ಣು.
ನನ್ನ ಪೂರ್ವೀಕರಲ್ಲಿ ‘ಅವನನ್ನು’ ಹುಡುಕಬಹುದು,
‘ಅವಳ’ನ್ನಲ್ಲ.
‘ಅವಳು’ ಹೇಗಿದ್ದಳೊ?
‘ಅವಳ’ ಅರಿಕೆಯೆ ಉಸಿರುಕಟ್ಟಿಸುತ್ತದೆ,
ಬೇಡವಾಗುತ್ತದೆ,
‘ಅವಳು’ ಎಂದರೆ ಬರೀ ಹೊಗೆತುಂಬಿದ
ಕತ್ತಲುಕೋಣೆಗಳು, ಸಾಂಬ್ರಾಣಿ, ಮೂಗುನತ್ತು
ಕಾಲಂದುಗೆ, ಮುಖಮುಚ್ಚುವ ಮುಸುಕುಗಳೇ
ನೆನಪಾಗುತ್ತವೆ.
‘ಅವಳು’ ಜಿಗುಪ್ಸೆ ಹುಟ್ಟಿಸುತ್ತಾಳೆ
‘ಅವನು’ ಕೂಡ ದೂರ ಸಾಗುತ್ತಿದ್ದಾನೆ..
*    *    *    *
ಮನೆಯಂಗಳದ ಹುಣಿಸೆ, ದೇವದಾರು
ಹಿತ್ತಲ ತೆಂಗಿನಮರಗಳು
ಮತ್ತೂ ಸ್ಥಿರವಾಗಿ ನಿಲ್ಲಲು ಗೇಯುತ್ತಿವೆ
ಗೊಬ್ಬೆಸೀರೆಯ ಬಿಳಿತಲೆ ಮುದುಕಿಯೊಬ್ಬಳು
ಮರುಳುಮಾತೇನನ್ನೊ ಗೊಣಗುತ್ತ
ಬುತ್ತಿಹಿಡಿದು ಕಾಫಿತೋಟದೆಡೆ ನಡೆಯುತ್ತಾಳೆ
ಇಲ್ಲಿ ಆಕಾಶ ಇನ್ನೂ ಆಪ್ತವಾಗುತ್ತಿದೆ.

ತನ್ನದೆಂಬುದನ್ನು ಇಲ್ಲಿ ಯಾರೂ ಬಿಟ್ಟಿಲ್ಲ.
ನಾನೂ ಬಿಡುವುದಿಲ್ಲ.
ಅಲೆಕ್ಸ್, ನೀನೂ ತಿರುಗಿಹೋದೆ. ಅಲ್ಲವೆ?
ಅಮೆರಿಕಾದಿಂದ ಆಫ್ರಿಕಾಗೆ
ಆಫ್ರಿಕಾದಿಂದ ಅಮೆರಿಕಾಗೆ…
ಅದನ್ನು ಮರೆತಿದ್ದೆ.
ಥ್ಯಾಂಕ್ಯೂ ಎನ್ನಲೆ ಅಲೆಕ್ಸ್?
ಇವೆಲ್ಲದಕ್ಕೆ……
 

Comments (7)

ಬೇರುಗಳ ಹುಡುಕುತ್ತ ಹೋದೇವು ಎತ್ತ?

ನಾವೆಲ್ಲ ಇತಿಹಾಸದ ಭಾರವನ್ನು ಹೊತ್ತುಕೊಂಡೇ ಬೆಳೆಯುತ್ತೇವೆ. ನಮ್ಮ ಪೂರ್ವಜರು ನಮ್ಮ ದೇಹದ ಪ್ರತಿ ಕಣದಲ್ಲಿ ಸುರುಳಿಯಂತೆ ಪ್ರವಹಿಸುವ ಅದೃಶ್ಯ ಅರಿವಿನಲ್ಲಿ ವಾಸ ಮಾಡುವ ಹಾಗೆಯೆ ನಮ್ಮ ಮೆದುಳುಗಳ ಅಟ್ಟಣಿಗೆಗಳಲ್ಲಿ ವಾಸವಾಗಿರುವರು. -ಶರ್ಲಿ ಆಬಟ್. 
                                                     

“ನಿಮ್ಮಲ್ಲಿ ಎಷ್ಟು ಜನಕ್ಕೆ ನಿಮ್ಮ ಮುತ್ತಜ್ಜ, ಮುತ್ತಜ್ಜಿಯರ ಹೆಸರು ತಿಳಿದಿದೆ?” ಸವಾಲು ಹಾಕಿದೆ. ಗೆಳೆಯರಲ್ಲಿ ಹಲವಾರು ಜನ ತಬ್ಬಿಬ್ಬಾದರು. “ನಮಗೆ ನಮ್ಮ ಕಸಿನ್ನುಗಳ ಹೆಸರೇ ಗೊತ್ತಿಲ್ಲ, ಮುತ್ತಜ್ಜ, ಮುತ್ತಜ್ಜಿ ದೂರದ ಮಾತು!!” ಪ್ರೀತಿ ಮೂಗು ಮುರಿದಳು. “ಅವರೆಲ್ಲ ಹೇಗಿದ್ದರೂ ಅಂತ ಕುತೂಹಲ ಹುಟ್ಟಲ್ವ?” ಕೇಳಿದೆ. “ಅನ್ನಿಸುತ್ತೇನೋ ಸರಿ. ಆದರೆ ರಿಸರ್ಚ್ ಮಾಡೋಕೆ ಸಮಯ ಎಲ್ಲಿದೆ?” ಹರ್ಷ ಕೇಳುತ್ತಿದ್ದ.

ನನಗೆ ದುಗುಡ.

ಅಷ್ಟರತನಕ ಸುಮ್ಮನಿದ್ದ ಶಶಿ, “ನಿಮಗೇನು ಗೊತ್ರೋ ರಿಡಿಸ್ಕವರಿಯ ಖುಶಿ? ನನ್ನ ತಾತ ಸಾಯೋವಾಗಲು ಅವರು ಹುಟ್ಟಿ ಬೆಳೆದ ಊರು ಹೊಳವನಹಳ್ಳಿಯ ಬಗ್ಗೇನೆ ಮಾತಾಡೋರು. ನಮ್ಮಪ್ಪ ಆ ಜಾಗಾನೆ ಗೊತ್ತಿಲ್ಲ ಅಂದರು. ನಾನು ಒಂದು ವೀಕೆಂಡೆಲ್ಲ ಬೈಕಲ್ಲಿ ಅಲೆದೆ. ಕೊನೇಗೆ ಸಿಕ್ತು. ಏನು ಮಸ್ತ್ ಅನ್ನಿಸ್ತು! ತಾತ ಹೇಳ್ತಿದ್ ಗುಡಿ, ಗದ್ದೆ, ಹೊಳೆ ಎಲ್ಲ ನೋಡಿಕೊಂಡು ಬಂದೆ. ತಾತ ಮೇಲೆ ಕೂತು ನಗಾಡ್ತಿದಾರೇನೋ ಅನ್ಸೋಕೆ ಶುರುವಾಯ್ತು.” ಅಂದ. ಎಲ್ಲರೂ ಮೌನವಾಗಿದ್ದರು. ನಾನು “ಶಶಿ, ನೀನು ಒಬ್ಬ ಇಂಡಿಯನ್ ಅಲೆಕ್ಸ್ ಹ್ಯಾಲಿ ಆದೆಯಲ್ಲ!!” ಎಂದು ರೇಗಿಸಿದೆ. ಶಶಿ ನಗುತ್ತ  ”ಅವನ್ಯಾರು ಮಾರಾಯಿತಿ?” ಅಂದ.

alex1h11.jpg

ಆಗಸ್ಟ್ 11, 1921 ರಂದು ನ್ಯೂಯಾರ್ಕಿನ ಕಪ್ಪು ಅಮೆರಿಕನ್ ಮನೆಯೊಂದರಲ್ಲಿ ಜನಿಸಿದ ಅಲೆಕ್ಸಾಂಡರ್ ಮರ್ರೆ ಪಾಮರ್ ಹ್ಯಾಲಿಗೆ ತಾನು ಅಮೆರಿಕದ ದೊಡ್ಡ ಚಳುವಳಿಯೊಂದರ ವಕ್ತಾರನಾಗಲಿರುವ ಯಾವ ಸುಳಿವೂ ಇರಲಿಲ್ಲ. ತನ್ನ ತಾಯಿಯ ತವರೂರಾದ ಹೆನ್ನಿಂಗ್ಸ್ ಗೆ ಭೇಟಿ ನೀಡಿದಾಗೆಲ್ಲ ಆತನ ಅಜ್ಜಿ, ಚಿಕ್ಕಮ್ಮಂದಿರು ತಮ್ಮ ಪೂರ್ವಜನಾದ ‘ಕುಂಟಾ ಕಿಂಟೆ’ ಎಂಬಾತ ಆಫ್ರಿಕಾದಿಂದ ಅಪಹರಿಸಲ್ಪಟ್ಟು ‘ನಾಪ್ಲಿಸ್’ ಎಂಬ ಪಟ್ಟಣಕ್ಕೆ ಬಿಳಿಯರ ಗುಲಾಮನಾಗಿ ಬಂದಿದ್ದಾಗಿಯೂ, ಆತ ತನ್ನ ಕಥೆಯನ್ನು ತನ್ನ ಮಕ್ಕಳಿಗೆ ಹೇಳಿ ಅದನ್ನು ಮುಂದಿನ ಪೀಳಿಗೆಯವರಿಗೆ ಹೇಳುವಂತೆ ತಿಳಿಸಿದ್ದನೆಂದೂ ಹೇಳುತ್ತಿದ್ದರು. ಇದಲ್ಲದೆ ಈ ಕುಂಟಾಕಿಂಟೆ ಮಾತಾಡುತ್ತಿದ್ದ ಭಾಷೆಯ ಹಲವಾರು ಪದಗಳನ್ನು ಅವರು ಉಚ್ಛರಿಸಬಲ್ಲವರಾಗಿದ್ದರು. ಅಲೆಕ್ಸನ ಕುತೂಹಲ ಗರಿಗೆದರಿತು. ಆತ ತನ್ನ ಅಜ್ಜಿ ಹೇಳುತ್ತಿದ್ದ ಪದಗಳೊಡನೆ ವಿಶ್ವವಿದ್ಯಾನಿಲಯಗಳ ಭಾಷಾಪರಿಣತರನ್ನು ಸಂಪರ್ಕಿಸಿದರೆ ಆಶ್ಚರ್ಯ ಕಾದಿತ್ತು! ಆ ಪದಗಳು ಆಫ್ರಿಕಾದ ’ಮ್ಯಾಂಡಿನ್ಕಾ’ ಬುಡಕಟ್ಟಿಗೆ ಸಂಬಂಧಿಸಿದವೆಂದು ತಿಳಿದುಬಂತು.  ಆಫ್ರಿಕಾದಿಂದ ಅಮೆರಿಕಾಗೆ ಕುಂಟಾ ಕಿಂಟೆ ಬಂದಿರಬಹುದಾದ ಅಂದಾಜು ಕಾಲವನ್ನು ಲೆಕ್ಕಹಾಕಿ ಹಡಗುಗಳ ದಾಖಲೆಗಳನ್ನು ಹುಡುಕಿದಾಗ ಗ್ಯಾಂಬಿಯಾದಿಂದ ಅನಾಪೊಲಿಸ್(ನಾಪ್ಲಿಸ್?)ಗೆ ಹಡಗೊಂದು ಗುಲಾಮರೊಡನೆ ಬಂದಿದ್ದ ಪುರಾವೆ ದೊರೆಯಿತು. ಅಲೆಕ್ಸ್ ಗ್ಯಾಂಬಿಯಕ್ಕೆ ತೆರಳಿ ಕುಂಟಾ ಕಿಂಟೆಯ ಹಳ್ಳಿ ಜುಫುರಿಯನ್ನು ಪತ್ತೆಹಚ್ಚಿ ಅಲ್ಲಿನ ‘ಗ್ರಿಯಟ್’ ಎಂಬ ವಂಶವೃಕ್ಷಪರಿಣತನನ್ನು ಭೇಟಿಮಾಡಿದ. ಕುಂಟಾ ಆಗ ಹಡಗಿನಲ್ಲಿ ಅಟ್ಲಾಂಟಿಕ್ ಸಾಗರವನ್ನು ದಾಟಿದ ಅನುಭವ ಪಡೆಯಲು ಹಡಗೊಂದರ ನೆಲಮಾಳಿಗೆಯಲ್ಲಿ ಅರೆನಗ್ನನಾಗಿ ಪಯಣಿಸಿದ. ಕುಂಟಾಕಿಂಟೆಯಿಂದ ತನ್ನ ಪೀಳಿಗೆಯವರೆಗಿನ ವಂಶಜರ ಬದುಕಿನ ಹೋರಾಟದ ಕಥೆಯನ್ನು 1976ರಲ್ಲಿ ‘ರೂಟ್ಸ್’ ಎಂಬ ಪುಸ್ತಕದ ಮೂಲಕ ಪ್ರಪಂಚಕ್ಕೆ ಸಾರಿದ. ಅಮೆರಿಕದಲ್ಲಿ ಈ ಪುಸ್ತಕದಿಂದ ಹೊಸತೊಂದು ethnic ಕ್ರಾಂತಿ ಉಂಟಾಯಿತು. ಲಕ್ಷಗಟ್ಟಲೆ ‘ರೂಟ್ಸ್’ ಮಾರಾಟವಾಗಿಹೋದವು. ‘ರೂಟ್ಸ್’ ಆಧರಿತ ಟೆಲಿಸೀರೀಸಿಗೆ ಮಿಲಿಯಗಟ್ಟಲೆ ವೀಕ್ಷಕರು ಹುಟ್ಟಿಕೊಂಡರು. ಕಪ್ಪುಅಮೆರಿಕನ್ನರನ್ನು ಬಿಳಿಯರು ತಕ್ಕಮಟ್ಟಿಗಿನ ಗೌರವದಿಂದ ನೋಡತೊಡಗಿದರು. ಇದು ನನ್ನ ಪ್ರಕಾರ ಅಕ್ಷರಕ್ಕೆ ದೊರಕಿದ ಅತ್ಯುನ್ನತ ಗೌರವಗಳಲ್ಲೊಂದು. ಪುಸ್ತಕದ ಸಾರಾಂಶ ಇನ್ನಾವಾಗಲಾದರು ಹೇಳುವೆ.

alex_haley1.gif

“ಹೌದಲ್ಲ, ನಾವೆಲ್ಲ ಅಮ್ಮ, ಅಜ್ಜಿಯಂದಿರು ಹೇಳುವ ಕಥೆ, ಹಾಡು, ಘಟನೆಗಳನ್ನೆಲ್ಲ ಅಸಡ್ಡೆ ಮಾಡಿರ್ತೀವಿ. ಆದ್ರೆ ಅದರ ಹಿಂದೆ ಒಂದು ಜನಪದ ಟ್ರೆಡಿಶನ್, ಪರಂಪರೇನೇ ಇರುತ್ತೆ ಅಲ್ವಾ? ಆ ಕಥೆಗಳು ಎಲ್ಲೆಲ್ಲಿಂದ ಹೇಗೆ ಶುರುವಾದುವೋ?” ಹರ್ಷ ಗಂಭೀರವಾಗಿ ಹೇಳಿದ.

ಚಿತ್ರ-1:’ರೂಟ್ಸ್’
ಚಿತ್ರ-2: ಅಲೆಕ್ಸ್ ಹ್ಯಾಲಿ ಕುಂಟಾಕಿಂಟೆಯ ಹಳ್ಳಿಯಲ್ಲಿ
 

Comments

ಪಡಖಾನೆಯ ಹುಡುಗಿ - ಎರಡು ಯೋಚನೆಗಳು

schielesitting-woman171.jpg

ಯೋಚನೆ - ೧

ಯಾರೊಡನೋ ಭೇಟಿ, ಎಲ್ಲಿಯೋ ನೋಡುವುದು
ಹುಣ್ಣಿಮೆಯ ಬೀದಿಗಳಲಿ ಕೂದಲ ಹರವಿ ನಡೆಯುವುದು
ಕನ್ನಡಿ ಕಂಡಾಗ ಮುಂಗುರುಳು ಒಪ್ಪ ಮಾಡುವುದು
ನಿನ್ನ ಸೂಳೆಯಂಥ ಕಣ್ಣುಗಳ ನೆನೆದು ತಣಿಯುವುದು
ಹೀಗೆಲ್ಲ ಇರುವುದು
ಎಷ್ಟು ಚೆಂದ
ಎಂದುಕೊಳ್ಳುತ್ತಲೆ ಎಚ್ಚರವಾಗಿ ನನಗೆಂದೆ ಕಾದಿರುವ
ಸೂರ್ಯನನ್ನು ಎದುರಿಸಲು ಅಣಿಯಾಗುತ್ತೇನೆ,
ನಿನ್ನೊಡನೆ ಇರುಳು ಕಳೆದ ಕೋಣೆಯ ಕದ ತೆರೆದು.

ಯೋಚನೆ - ೨

ನಿನ್ನ ಓಣಿ ಬಿಟ್ಟು ನಡೆವಾಗ
ಮದಿರೆಯ ರುಚಿಯೂ ಹಳಸಲು.
ನನ್ನ ಕೊರಳ ಮೂಲೆಯಲಿ ನಿನ್ನ ಪರಿಮಳ
ಮಾಗಿಯ ಬೆಳಗಿನಲ್ಲಿ ಉಣ್ಣೆ ಬಟ್ಟೆಯ ಹಿತ
ನೀನೂ ನನ್ನ ಹಾಗೆಯೇ ಹಾವಿನಂಥವನೆ ಎನಿಸಿ
ತೊಡೆಗಳನು ಎದೆಗವಚಿ ನಗುತ್ತೇನೆ
ತಿಳಿದುಕೋ, ಎಲ್ಲದಕಿಂತ ಮೊದಲು ನಾವಿದ್ದೆವು
ನಾವು ಇದ್ದೇ ಇರುವೆವು, ಎಂದೆಂದಿಗೂ.

(Painting: ‘Sitting Woman’ by Egon Shiele, 1917)

Comments (3)

ಬಿಎನ್ನೆನ್ ಎಂಬ ಮೇಷ್ಟರೂ, ಹೆಗ್ಗಣಗಳೂ.

ಅವರ ಪೂರ್ತಿ ಹೆಸರು ಬಿ.ಎನ್. ನಂಜುಂಡಶೆಟ್ಟಿ. ನಮಗೆ ಬಿಎನ್ನೆನ್.

“ಹೆಗ್ಗಣಾ ತಿನ್ರೋ ಹೋಗ್ರೋ ದರವೇಶಿಗಳಾ!!” ಎಂದೇ ಬಿಯೆನ್ನೆನ್ ಮೇಷ್ಟರು ತಮ್ಮ ಇಂಗ್ಲೀಷ್ ಪಾಠದ ಪ್ರತಿ ಪೀರಿಯಡ್ ಅನ್ನು ಶುರು ಮಾಡುತ್ತಿದ್ದದ್ದು ಹಾಗೂ ಮುಗಿಸುತ್ತಿದ್ದದ್ದು. ನಾವು ಹೈಕಳಿಗೆ ಅವರ ಕೈಯಲ್ಲಿ ಬೈಸಿಕೊಳ್ಳುವುದೆಂದರೆ ಖುಶಿಯೋ ಖುಶಿ. ತಮ್ಮ ಪ್ಯಾಂಟನ್ನು ಸದಾಕಾಲ ತಮ್ಮ ಡೊಳ್ಳುಹೊಟ್ಟೆಯ ಮೇಲೇರಿಸಿಕೊಳ್ಳುವ ಪ್ರಯತ್ನ ಮಾಡುತ್ತ ವಿಫಲರಾಗುತ್ತ ಸೋಡಾಬುಡ್ಡಿ ಕನ್ನಡಕ ಹಾಗೂ ಹಿಟ್ಲರ್ ಮೀಸೆಯ ಸಮೇತ ವಾಲಾಡುತ್ತ ಅವರು ಕ್ಲ್ಲಾಸಿನೊಳಗೆ ಹಾಜರಾದರೆಂದರೆ ನಮಗೆ ಥ್ರಿಲ್ಲು. ಹೈಸ್ಕೂಲಿನ ಮೂರೂ ವರ್ಷಗಳು ನಾವು ಎಲ್ಲ ನಾರ್ಮಲ್ ಹುಡುಗರ ಹಾಗೆ ನಮ್ಮೊಳಗಿನ ತರಲೆಬುದ್ಧಿಯನ್ನು ಜೀವಂತವಾಗಿಟ್ಟುಕೊಳ್ಳಲು ಬಿಯೆನ್ನೆನ್ ಮೇಷ್ಟರೂ ಒಂದು ಪ್ರಮುಖ ಕಾರಣವಾಗಿದ್ದರು.

image0021.jpg

ದಿನದ ಮೊದಲನೇ ಪೀರಿಯಡ್ಡೇನಾದರೂ ಬಿಯೆನ್ನೆನ್ ಮೇಷ್ಟರದಾಗಿದ್ದರೆ ಹುಡುಗರಿಗೆ ಸುಗ್ಗಿ. ಬೇಕೆಂದೇ ಲೇಟಾಗಿ ಕ್ಲಾಸಿಗೆ ಎಂಟ್ರಿ ಕೊಡುವುದು, ಕ್ಲಾಸು ಮುಗಿದ ನಂತರ ಮೇಷ್ಟರ ಹಿಂದೆ ಅಟೆಂಡೆನ್ಸಿಗೆ ಗೋಗರೆಯುತ್ತ ಕಿಸಿಕಿಸಿ ನಗುತ್ತ ಓಡಿಹೋಗುವುದು ನಮ್ಮ ಸ್ಕೂಲಿನ ‘ಅನಫಿಷಿಯಲ್ ಟ್ರಾಡಿಷನ್’ ಆಗಿತ್ತು. ಈ ರೀತಿಯಾಗಿ ಸೈನ್ಸ್ ಅಥವ ಗಣಿತದ ಮೇಷ್ಟರುಗಳ ಹತ್ತಿರ ನಡೆದುಕೊಂಡು ಫ್ರೀಯಾಗಿ ದೊರಕುವ ತಪರಾಕಿ ತಿನ್ನುವ ಧೈರ್ಯ ನಮ್ಮ ಹೈಸ್ಕೂಲಿನ ಇತಿಹಾಸದಲ್ಲೇ ಯಾರಿಗೂ ಬಂದಿರಲಿಲ್ಲ ಅನ್ನುವುದು ಬೇರೆಯ ವಿಷಯ. ಬೇರೆ ಕ್ಲಾಸುಗಳಲ್ಲಿ ಅತಿಯೆನ್ನುವಷ್ಟು ಗಂಭೀರನಾಗಿ ಪಾಠ ಕೇಳುತ್ತಿದ್ದ ಪುಸ್ತಕದ ಹುಳು ಜಾವೇದ ಕೂಡ ಬಿಯೆನ್ನೆನ್ನರ ಕ್ಲಾಸಿನಲ್ಲಿ ಹಲ್ಲುಬಿಟ್ಟು ನಗಾಡುತ್ತಿದ್ದದ್ದು ನಾವು ಹುಡುಗಿಯರಿಗೆ ತಮಾಷೆಯ ವಿಷಯವಾಗಿತ್ತು.

ಬಿಯೆನ್ನೆನ್ ಮೇಷ್ಟರು ನಮಗೆ ಪಾಠಮಾಡಲು ಬಂದಾಗ ಅವರ ನಿವೃತ್ತಿಯ ಸಮಯ ಹತ್ತಿರವಾಗಿಬಿಟ್ಟಿತ್ತು. ಕಣ್ಣು ಮಂದವಾಗಿತ್ತು. ಸ್ಕೂಲಿನಲ್ಲಿ ಪಾಠ ಮಾಡುತ್ತಿದ್ದ ಮುಕ್ಕಾಲುಪಾಲು ಮೇಷ್ಟರುಗಳು ಅವರ ಶಿಷ್ಯರೇ ಆಗಿದ್ದಿದ್ದು ಇನ್ನೊಂದು ವಿಶೇಷ. ಸೈಗಲ್ಲನ ಕಂಠ ಹೊಂದಿದ ಬಿಯೆನ್ನೆನ್ ಮೇಷ್ಟರು ಪಾಠ ಮಾಡುವ ರೀತಿಗೆ ಒಂದು ಅಪೂರ್ವ ಕ್ವಾಲಿಟಿ ಇತ್ತು. ಅದನ್ನು ಕೇಳಿದವರೆಲ್ಲ ನಿದ್ದೆಗೆ ಶರಣಾಗದೆ ಇರುವುದು ಸಾಧ್ಯವೇ ಇರಲಿಲ್ಲ. ನಾವೆಲ್ಲ ನಿದ್ದೆ ಮರೆಸಲು ಅವರು ಎಷ್ಟು ಸಾರಿ ಹೆಗ್ಗಣ ತಿನ್ನಲು ನಮಗೆ ಹೇಳಿದರೆಂದು ಲೆಕ್ಕವಿಡುವುದು, ರಾಕೆಟ್ಟು ದೋಣಿ ಮುಂತಾದ ಡಿಸೈನುಗಳನ್ನು ಕಾಗದದಲ್ಲಿ ರಚಿಸುವುದು, ಚುಕ್ಕಿಯಾಟ ಆಡುವುದು, ಕಷ್ಟಪಟ್ಟು ಪಾಠ ಕೇಳುವುದು - ಏನೆಲ್ಲ ಮಾಡಿದರೂ ಒಂದು ತೂಕಡಿಕೆಯಾದರೂ ಬಂದುಬಿಡುತ್ತ ಇತ್ತು. ಆಗಾಗ ಅವರು ಸರ್ಪ್ರೈಸ್ ಟೆಸ್ಟುಗಳನ್ನು ಕೂಡ ಕೊಡುತ್ತಿದ್ದದ್ದುಂಟು. ಆಗೆಲ್ಲ ಬಿಎನ್ನೆನ್ ಎನೋ ಓದುವವರಂತೆ ನಟಿಸುತ್ತ ಹಾಗೇ ನಿದ್ದೆಗೆ ಶರಣಾಗುತ್ತಿದ್ದರು. ನಾವೋ, ಊರಿಗೆ ಮುಂಚೆ ಟೆಸ್ಟು ಬರೆದು ಮುಗಿಸಿ ತೂಕಡಿಸುತ್ತಿದ್ದ ಬಿಎನ್ನೆನ್ರನ್ನು ಗೋಳುಹುಯಿದುಕೊಳ್ಳುತ್ತಿದ್ದೆವು. ಬೋರ್ಡಿನ ಮೇಲೆ ಅವರು ಬರೆದದ್ದನ್ನು ಅಳಿಸಿಹಾಕುವುದು, ಡಸ್ಟರನ್ನು ಕೈಗೆ ಸಿಗದಂತೆ ದೂರ ಇಡುವುದು, ‘ಹೋ’ ಎಂದು ಅವರ ಕಿವಿಯ ಹತ್ತಿರ ಕೂಗಿ ಸುಮ್ಮನಾಗುವುದು ನಮಗೆ ಮಾಮೂಲಾಗಿದ್ದವು. ಒಮ್ಮೆ ಅವರು ಜೂನಿಯರ್ ಕ್ಲಾಸಿನಲ್ಲಿ ಮೂಗು ಒರೆಸಲು ಕರ್ಚೀಫು ಮರೆತು ಬಂದು ಅವಾಂತರವಾಗಿ ಬಟ್ಟೆಯ ಡಸ್ಟರಿನಲ್ಲಿಯೇ ಮೂಗು ಒರೆಸಿ ಇಟ್ಟದ್ದು, ಕ್ಲಾಸ್ ಮಾನಿಟರ್ ಪ್ರವೀಣ ಬೋರ್ಡು ಒರೆಸಲು ಕುಣಿದುಕೊಂಡು ಹೋಗಿ ಅದನ್ನು ಮುಟ್ಟಿಬಿಟ್ಟದ್ದು, ಮಾರನೆಯ ದಿನ ಹೊಸಾ ಡಸ್ಟರೊಂದನ್ನು ತಂದಿಟ್ಟದ್ದನ್ನು ನೆನೆಸಿಕೊಂಡು ಈಗಲೂ ಉರುಳಾಡಿ ನಗುತ್ತೇವೆ.

ಇಷ್ಟೆಲ್ಲ ಇದ್ದರೂ ಬಿಎನ್ನೆನ್ ಮೇಷ್ಟರು ರಜಾ ಹಾಕಿದ ದಿನ ನಾವೆಲ್ಲ ಹುಳ್ಳಗೆ ಮುಖ ಮಾಡಿಕೊಂಡಿರುತ್ತಿದ್ದೆವು. ದಿನವಿಡೀ ಕಾಟಕೊಡುವ ತಾತ ಒಂದುದಿನ ಕಾಣದ ಹೋದರೆ ಬೇಸರವಾಗುತ್ತದಲ್ಲ - ಥೇಟ್ ಹಾಗೇ. ಬಿಎನ್ನೆನ್ ಹೊಸ ಶರಟು, ಪ್ಯಾಂಟು ಧರಿಸಿ ಬಂದ ದಿನ ನಮ್ಮ ಕ್ಲಾಸಿಗೆ ಕಾಲಿಟ್ಟ ಕೂಡಲೆ ನಮಗೆಲ್ಲ ಏನೋ ಖುಶಿ. ‘ಹೇಏಏಏ’ ಎಂದು ಜೋರಾಗಿ ಕಿರುಚಿಕೊಂಡು ನಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದೆವು. ಆಗೆಲ್ಲ ಬಿಎನ್ನೆನ್ ನಗುತ್ತಲೆ ನಮಗೆ ಹೆಗ್ಗಣ ತಿನ್ನಲು ಸಜೆಸ್ಟ್ ಮಾಡುತ್ತಿದ್ದರು. ಅವರು ಹೇಳಿದಾಗಲೆಲ್ಲ ನಾವು ಹೆಗ್ಗಣಗಳನ್ನು ತಿಂದಿದ್ದರೆ ನಮ್ಮೂರಿನ ಹೆಗ್ಗಣಗಳ ಸಂತಾನವೆಲ್ಲ ನಿರ್ಮೂಲನಗೊಂಡಿರಬೇಕಾಗಿತ್ತು. ಬಿಎನ್ನೆನ್ ಮೇಷ್ಟರ ಹೆಗ್ಗಣಗಳ ಅಫಿನಿಟಿ ನಮಗೆ ಬಿಡಿಸಲಾರದ ಕಗ್ಗಂಟಾಗಿದ್ದಂತೂ ನಿಜ. ಇವತ್ತು ಬಿಎನ್ನೆನ್ ಇಲ್ಲ. ಯಾರಿಂದಲೋ ಅವರು ತೀರಿಕೊಂಡ ಸುದ್ದಿ ಕೇಳಿದೆ. ಇಂದಿಗೂ ಮೋರಿಗಳ ಬಳಿ ಹೆಗ್ಗಣಗಳು ಕಂಡಾಗಲೆಲ್ಲ ಬಿಎನ್ನೆನ್ ನೆನಪಾಗುತ್ತಾರೆ.

ಥಾಂಕ್ಯೂ ಬಿಎನ್ನೆನ್ ಸಾರ್. ನಮ್ಮನ್ನು ನಗಿಸಿದ್ದಕ್ಕೆ. ನಮ್ಮ ಅನಫಿಶಿಯಲ್ ತಾತನ ಪಾತ್ರ ವಹಿಸಿದ್ದಕ್ಕೆ.

(Picture courtesy:gmachnut.wordpress.com)
 

Comments (1)

ರಾಬಿಯಾ - ಎರಡು ಸೂಫೀ ಕವಿತೆಗಳು.

grindinggrain10th_16thcenturypersiandictionarygrind_large1.jpg

ರಾಬಿಯಾ ಅಲ್-ಎದವಿಯ್ಯ (ಕ್ರಿ.ಶ. 717 - 801)

ಸೂಫೀ ಪಂಥದ ಪ್ರಪ್ರಥಮ ಮಹಿಳಾ ಕವಿ. ಜನನ ಇಂದಿನ ಇರಾಕಿನ ಬಸ್ರಾ ಪಟ್ಟಣದಲ್ಲಿ. ತನ್ನ ತಂದೆತಾಯಂದಿರ ಮರಣದ ನಂತರ ಗುಲಾಮಳಾಗಿ ಜೀವನ ಸವೆಸಬೇಕಾಗಿ ಬಂತು. ಕೆಲವುಕಾಲ ಗುಲಾಮಗಿರಿಯ ನಂತರ ಆಕೆಯಲ್ಲಿ ಆಧ್ಯಾತ್ಮಿಕ ಬದಲಾವಣೆಗಳು ಕಾಣತೊಡಗಿದವು. ರಾಬಿಯಾ ತನ್ನ ‘ಪ್ರಿಯತಮ’ನ ಸೇವೆ ಮಾಡುತ್ತ ಬಾಳುವೆ ನಡೆಸಲಾರಂಭಿಸಿದಳು. ಆಕೆಯ ಮಾಲೀಕ ಆಕೆಯಿಂದ ಪ್ರಯೋಜನ ಕಾಣದೆ ಬೇಸತ್ತು ಗುಲಾಮಗಿರಿಯಿಂದ ಬಿಡುಗಡೆ ನೀಡಿದ.
ರಾಬಿಯಾಳ ಪ್ರಕಾರ ನಿಜವಾಗಿ ಪ್ರೀತಿಸುವವರ ಪ್ರಜ್ನೆ ಅವರ ಪ್ರೀತಿಪಾತ್ರರ ನಿರಂತರ ಧ್ಯಾನದಲ್ಲಿರುವುದರಿಂದ ಭೌತಿಕ ಅನುಭವಗಳಾದ ನೋವು ಸಂತಸಗಳನ್ನು ಅನುಭವಿಸಲಾರದು. ಇದು ಎಂದೂ ಕಡಿಮೆಯಾಗದ ದಿವ್ಯ ಪ್ರೇಮದಿಂದ ಉಂಟಾಗುವುದು. ಒಮ್ಮೆ ಯಾರೊ ರಾಬಿಯಾಳನ್ನು “ನೀನೀ ಮಟ್ಟಕ್ಕೆ ಹೇಗೆ ತಲುಪಿದೆ?” ಎಂದು ಕೇಳಿದರಂತೆ. ಆದಕ್ಕೆ ರಾಬಿಯಾಳ ಉತ್ತರ ಹೀಗಿತ್ತು: “ನಾನು ನನ್ನ ಪ್ರೀತಿಪಾತ್ರನನ್ನು ಪ್ರಾರ್ಥಿಸುವೆ - ಓ ದೇವರೆ, ನಿನ್ನಿಂದ ನನ್ನ ದೂರ ತಳ್ಳುವ, ನಿನ್ನಿಂದ ನನ್ನ ಗಮನ ಬೇರೆಡೆ ಸೆಳೆವ ಎಲ್ಲದರಿಂದ ತಪ್ಪಿಸಿಕೊಳ್ಳಲು ನಾನು ನಿನ್ನಲ್ಲಿ ಶರಣಾಗುವೆ.”
ಆಕೆಯ ಎರಡು ಕವಿತೆಗಳ ಅನುವಾದ ಇಲ್ಲಿವೆ:

ಪ್ರೀತಿಯಲಿ ಹೃದಯಗಳ ನಡುವೆ ಇರದು ಏನೂ,

ಮಾತು ಹಂಬಲದಿಂದ ಹುಟ್ಟುವುದು,

ನಿಜರುಚಿಯಿಂದ ವಾಸ್ತವಚಿತ್ರ ಹುಟ್ಟುವ ತೆರದಿ. 

ರುಚಿಕಂಡವ ತಿಳಿವ;

ಬಣ್ಣಿಸುವವನದು ಮಿಥ್ಯೆ.

ಯಾರೆದುರು ನಿನ್ನ ಅಸ್ತಿತ್ವ ಅಳಿಸಿಹೋಗುವುದೊ,

ಯಾರ ಜೀವದೊಳಗೆ ನೀನಿರುವೆಯೊ

ಯಾರು ನಿನ್ನೀ ಯಾತ್ರೆಗೆ ಸಾಕ್ಷಿಯಾಗಿ ಬದುಕಿಹರೊ

ಬಣ್ಣಿಸಬಲ್ಲೆಯ ಅವರ ನಿಜರೂಪವನು?

******                                

ನಿನ್ನ ಪ್ರೇಮಿಸಲು ನನಗೆರಡು ದಾರಿ;                                                

ಒಂದು ಸ್ವಾರ್ಥದ ಪ್ರೇಮ                                                       

ಇನ್ನೊಂದು ನಿನಗೆ ಯೋಗ್ಯವಾದುದು.                                                  

ನನ್ನ ಸ್ವಾರ್ಥೀ ಪ್ರೇಮದಲಿ, ನಿನ್ನ ಮಾತ್ರ ನೆನೆವೆ                                       

ಇನ್ನೊಂದು ಪ್ರೇಮದಲಿ, ನೀನೆನ್ನ ಮುಸುಕು ಸರಿಸಿ                                           

ನಿನ್ನ ಜೀವಂತ ಮುಖವ ಕಣ್ತುಂಬಿ ಆಸ್ವಾದಿಸಲು ಬಿಡುವೆ.

Comments (7)

« Previous entries