Archive for November, 2007

ಕಮೆಂಟು ಮಾಡುವ ಕಲೆ

comments1.jpg

ಆಗ ಹೈಸ್ಕೂಲಿನಲ್ಲಿದ್ದೆ. ಮನೆಯಿಂದ ಗಡಬಡಿಸಿ ಹೊರಟೆ ಅಂದರೆ ಸ್ಕೂಲಿಗೆ ತಲುಪಿದ ಮೇಲೇ ಉಸಿರು ಬಿಡುತ್ತ ಇದ್ದ ಪ್ರಾಣಿ ನಾನು. ತರಗತಿಯೊಳಗೆ ಹೈಸ್ಪೀಡಿನಲ್ಲಿ ಎಂಟರಾಗುತ್ತಿದ್ದ ಹಾಗೇ ಹುಡುಗರೆಲ್ಲ - ‘ಹೋ! ಕಾಳಿ, ದುರ್ಗಿ, ಚೌಡಿ ಬಂದ್ಲು ಕಣ್ರಪ್ಪೋ! ದಾರಿಬಿಡಿ!’ ಎಂದೆಲ್ಲ ಕೂಗಾಡಿಕೊಳ್ಳುತ್ತ ಸುಮ್ಮಸುಮ್ಮನೆ ಬೆಂಚು, ಡೆಸ್ಕು ಎಲ್ಲ ಕುಟ್ಟಿ ಧಡಧಡ ಸದ್ದು ಮಾಡಲು ಆರಂಭಿಸುತ್ತಿದ್ದರು. ನಾನು ಯಾವತ್ತೂ ಮನೆಯಲ್ಲಿ ‘ಹೋಂವರ್ಕ್’ ಮಾಡ್ತಲೇ ಇರ್ಲಿಲ್ಲ. ಮೇಷ್ಟ್ರು ಬರುವ ವೇಳೆ, ಬೈಸಿಕೊಳ್ಳಬೇಕಲ್ಲ ಎನ್ನುವ ಟೆನ್ಷನ್, ಇರುವ ಐದೇ ನಿಮಿಷದಲ್ಲಿ ಹೋಂವರ್ಕ್ ಬರೆದು ಮುಗಿಸುವ ಆತುರ, ಜೊತೆಗೆ ಈ ಹುಡುಗರ ಧಾಂಧಲೆ. ಕೋಪದಿಂದ ಅವರನ್ನ ದುರುದುರು ನೋಡಿದರೂ ಮರುನಿಮಿಷವೆ ನಗು ಉಕ್ಕಿ ಬರುತ್ತಿತ್ತು. ಆಗೆಲ್ಲ ನಮ್ಮ ಪಾಲಿಗೆ ಕಮೆಂಟ್ಸ್ ಅಂದರೆ ಇಷ್ಟೆ. ಕೋತಿಗಳಂತಾಡುವ ಹುಡುಗರು, ಜಗಳಗಂಟಿ ಹುಡುಗಿಯರು, ಸ್ಪೋರ್ಟ್ಸಿನಲ್ಲಿ ನಮ್ಮ ಸೆಕ್ಷನ್ನಿನ ಟೀಮಿಗೆ ಸವಾಲೊಡ್ಡುವ ಬೇರೆ ಕ್ಲಾಸುಗಳ ಹುಡುಗ ಹುಡುಗಿಯರು - ಇವರೆಲ್ಲ ನಮಗೆ ಬಲಿಪಶುಗಳಾಗುತ್ತಿದ್ದರು. ನಮ್ಮೆದುರಿಗೆ ಇವರು ಓಡಾಡಿದಾಗೆಲ್ಲ ಅವರನ್ನು ಚುಡಾಯಿಸುವುದು, ಇಲ್ಲವೇ ಅವರ ಕ್ಲಾಸಿನೆದುರಿಗೇ ಹೋಗಿ ಅವರನ್ನು ಅಣಗಿಸಿ ಓಡಿಬರುವುದು ನಮ್ಮ ಅಚ್ಚುಮೆಚ್ಚಿನ ಟೈಂಪಾಸ್.

ಕಾಲೇಜು ದಿನಗಳನ್ನ, ಕ್ಯಾಂಪಸ್ಸುಗಳನ್ನ ಕಮೆಂಟುಗಳಿಲ್ಲದೇ ಊಹಿಸಿಕೊಳ್ಳಲು ಸಾಧ್ಯವೇ ಇಲ್ಲ. ನನಗಂತೂ ಕಾಲೇಜು ಸೇರುವ ಮುನ್ನವೇ ಹಿರಿಯ ಗೆಳತಿ ಸಂಧ್ಯಾ, ’ನೋಡೇ ನೀನಂತೂ ಹುಶಾರಾಗಿರು. ಹಾಳು ಹುಡುಗ್ರು ನಿಂತಲ್ಲೂ ಕೂತಲ್ಲೂ ಕಮೆಂಟು ಮಾಡ್ತವೆ. ತಿರುಗೂ ನೋಡಬೇಡ, ಎದುರು ಬೈಬೇಡ. ಬೈದ್ರೆ ಜಾಸ್ತಿ ತಿಮಿರು ತೋರಿಸ್ತವೆ!’ ಎಂದು ಅಪ್ಪಣೆ ಕೊಡಿಸಿಬಿಟ್ಟಿದ್ದಳು ಕಾಲೇಜಿನ ಮೊದಲನೇ ದಿನವೇ ದಿಗಿಲು. ಭಯ. ಹೊಸ ಊರು, ಹೊಸ ವಾತಾವರಣ, ಹಾಸ್ಟೆಲ್ ವಾಸ ಬೇರೆ. ಮೊದಲ ದಿನ ಹೇಗೋ ಕಳೆಯಿತು. ’ಅಬ್ಬ, ಏನೂ ಇಲ್ಲ” ಎಂದು ಖುಶಿಪಟ್ಟುಕೊಳ್ಳುತ್ತ ನನ್ನ ರೂಂಮೇಟಿನ ಜೊತೆ ನೋಟುಬುಕ್ಕು ತೆಗೆದುಕೊಳ್ಳಲು ಸ್ಟೇಶನರಿ ಅಂಗಡಿಗೆ ಹೋಗಿ ನಿಂತೆನೋ ಇಲ್ಲವೋ..ಧಾಂಡಿಗರ ಥರ ಇದ್ದ ಏಳೆಂಟು ಹುಡುಗರು ಸುತ್ತ ಬಂದು ನಿಂತರು. ನನಗೆ ಯಾಕೊ ನಾನು ಒಂದು ರೆಫ್ರಿಜಿರೇಟರೊಳಗಿದ್ದೀನೇನೊ ಅನ್ನಿಸಲು ಶುರುವಾಯಿತು. ’ಫಸ್ಟ್ ಪೀಯೂಸೀನಾ?’ ಪ್ರಶ್ನೆ ಬಂತು. ಕುರಿಯ ಥರ ’ಹೂಂ’ ಅಂದೆ.’ಯಾವೂರು?’. ಹೇಳಿದೆ. ’ಏನ್ಹೆಸ್ರು” ಗಡಸುದನಿ. ’ಟೀನಾ’ ಅಂದಿದ್ದೇ ತಡ -’ಟೀನಾ ಅಂತೆ ಕಣ್ರೋ!’ ಒಬ್ಬ ಕಿರುಚಿದ. ’ಟೀನಾಮೀನಾಡಿಕಾ.’ ಅಂತ ನನ್ನ ಸುತ್ತ ಕೋರಸ್ಸಿನ ಗಾಯನ ಶುರುವಾಯ್ತು. ನಾನು ಅಳುವುದೊಂದು ಬಾಕಿ. ಕೊನೆಗೆ ಅವರ ಪೈಕಿ ಒಬ್ಬ ದಯಾಮಯಿ -’ಸಾಕು ಮಾರಾಯಾ, ಪಾಪ, ಹೆದರಿಕೊಂಡಿದೆ’ ಎಂದು ಹೇಳಿ ನನಗೆ ’ಹೋಗು ಮರಿ.’ ಎಂದ. ಕಾಲ್ಕಿತ್ತೆ. ಈಗ ನಗು ಬರುತ್ತೆ. ಮುಂದಿನ ಎರಡು ವರ್ಷಗಳಲ್ಲಿ ಕಮೆಂಟುಗಳಿಗೆ ತಿರುಗಿ ಕಮೆಂಟು ಕೊಡುವಷ್ಟು ಪ್ರವೀಣಳಾಗಿದ್ದು ಬೇರೆ ಮಾತು.

ಕಾಲೇಜು ಮುಗಿದ ನಂತರ ಟೀ, ಕಾಫಿ ಕುಡಿಯುತ್ತ ಹುಡುಗಿಯರು ಮಾತನಾಡುತ್ತ ಇದ್ದಿದ್ದು ಅಂದು ಅವರಿಗೆ ದೊರೆತ ಕಮೆಂಟುಗಳ ವೈಖರಿಯ ಬಗ್ಗೆ. ಹೆಣ್ಣುಮಕ್ಕಳದೊಂದು ಅಭ್ಯಾಸವಿದೆ. ಕಚಡಾ, ಅಶ್ಲೀಲ ಕಮೆಂಟುಗಳನ್ನು ನಾವು ನೆನಪಿಸಿಕೊಳ್ಳುವುದೇ ಇಲ್ಲ. ಅಂಥವನ್ನು ನಮ್ಮ ಕಿವಿ, ಮೆದುಳುಗಳು ರಿಸೀವ್ ಮಾಡಿದರೂ ನಿರ್ಲಿಪ್ತವಾಗಿಬಿಡುತ್ತವೆ. ಆದರೆ ಅವೇ ಕಮೆಂಟುಗಳು ಒಳ್ಳೆ ಹಾಸ್ಯಭರಿತವಾಗಿದ್ದರೆ ಹೊರನೋಟಕ್ಕೆ ಹುಸಿಕೋಪ ನಟಿಸಿದರೂ ಒಳೊಳಗೇ ನಕ್ಕಿರ್ತೇವೆ. ಕಾಫಿಯ ಮಗ್ನಿಂದ ಬಿಸಿಬಿಸಿ ಕಾಫಿ ಹೀರುತ್ತ ಅದನ್ನು ಗೆಳತಿಯರ ಜತೆಗೆ ಹಂಚಿಕೊಂಡಿರುತ್ತೇವೆ.

ಕಮೆಂಟುಗಳನ್ನು ಮಾಡೋದು ಒಂದು ಕಲೆ. ಕೆಲವರಿಗೆ ಮಾತ್ರ ಇದು ಸಿದ್ಧಿಸುವುದು.. ಕಮೆಂಟುಗಳೆದರೆ ಕೇವಲ ಟೀಕೆಯಲ್ಲ. ಕಮೆಂಟುಗಳು ಹೇಗಿರಬೇಕೆಂದು ನನ್ನ ಗೆಳತಿ ವಿದ್ಯಾ ಹೇಳಿದ ಮಾತುಗಳು ನೆನಪಾಗುತ್ತವೆ - ’ಕಮೆಂಟುಗಳು ಹಿತಮಿತವಾಗಿರಬೇಕು, ಒಗ್ಗರಣೇ ಹಾಗೆ. ಕಮೆಂಟು ಮಾಡಿದವರನ್ನ ನಾವು ಮಾರನೇ ದಿನ ಹುಡುಕೋ ಹಾಗಿರಬೇಕು.’ ಅಲ್ಲವೆ? ಗೆಳತಿ ಸ್ಮಿತಾ ಮಂಗಳೂರಿಂದ ಬೆಂಗಳೂರಿಗೆ ಪ್ರಯಾಣಿಸುತ್ತ ಇರುವಾಗ ನಡೆದ ಘಟನೆಯಿದು: ಬಸ್ಸಿನ ತುಂಬಾ ಕಾಲೇಜು ವಿದ್ಯಾರ್ಥಿಗಳೇ ತುಂಬಿಕೊಂಡಿದ್ದರು. ಬೆಂಗಳೂರು ತಲುಪಿ ಬಸ್ಸಿಳಿಯುತ್ತಿದ್ದಾಗ ಹುಡುಗನೊಬ್ಬ ಆಕೆಯ ಬಳಿ ಬಂದು -’ತಪ್ಪು ತಿಳಿಯದಿದ್ರೆ ಒಂದು ಮಾತು ಕೇಳಲೆ? ನೀವು ಬಹಳ ಸುಂದರವಾಗಿದೀರಿ ಅಂತ ನನಗಿಂತ ಮೊದಲು ನಿಮಗೆ ಎಷ್ಟು ಜನ ಹೇಳಿದಾರೆ?’ಎಂದು ನಗೆ ಮಿನುಗಿಸಿದ. ಆಕೆಗೆ ಆ ಮಾತಿನ ಅರ್ಥ ಹೊಳೆಯುವ ಮುನ್ನವೇ ಆತ ಬಸ್ಸಿಳಿದು ಮಾಯವಾಗಿದ್ದ.

ಕೆಲವೊಂದು ಸಾರೆ ಸುಮ್ಮನೆ ಆಡಿದ ಮಾತುಗಳೂ ಪೇಚಿಗೆ ಸಿಕ್ಕಿಸುವುದುಂಟು. ಒಮ್ಮೆ ನಾನೂ ನನ್ನ ಗೆಳತಿಯರಿಬ್ಬರೂ ಲಂಚ್ ಬ್ರೇಕಿನ ನಂತರ ಕ್ಲಾಸಿಗೆ ಹಿಂತಿರುತ್ತ ಇದ್ದಾಗ ಕ್ಯಾಂಟೀನಿನ ಬಳಿ ಹೊಸಮುಖವೊಂದು ಕಂಡಿತು. ಹೊಸ ವಿದ್ಯಾರ್ಥಿಯಿರಬಹುದೆಂದು ಭಾವಿಸಿದ ನನ್ನ ಗೆಳತಿ,’ಸಚ್ ಎ ಹ್ಯಾಂಡ್ಸಂ ಫೇಸ್! ಆದ್ರೆ ಫೇರ್ ಎಂಡ್ ಲವ್ಲಿ ಸ್ವಲ್ಪ ಕಡಿಮೆ ಮಾಡಿದ್ರೆ ಚೆನ್ನಾಗಿತ್ತು!’ ಎಂದು ಜೋರಾಗಿ ಹೇಳಿ ನಕ್ಕಳು. ನಾವೂ ಅತನನ್ನು ತಿರುಗಿನೋಡಿ ನಕ್ಕೆವು. ನಮ್ಮ ದುರಾದೃಷ್ಟಕ್ಕೆ ಆತ ನಮ್ಮ ಕಾಲೇಜಿನ ಹಳೆಯ ಕುಖ್ಯಾತ ವಿದ್ಯಾರ್ಥಿಯಾಗಿರಬೇಕೆ! ಆತನೋ, ಸಂತಸದಿಂದ, ’ಹೇಯ್! ಯೂ ಗರ್ಲ್ಸ್! ನಿಲ್ರೀ ಒಂದ್ನಿಮಿಷ!’ ಎಂದು ನಮ್ಮ ಬೆನ್ನಟ್ಟಿ ಬರಲಾರಂಭಿಸಿದ. ನಾವು ಗಾಬರಿಯಾಗಿ ಒಂದೇ ಉಸುರಿಗೆ ಓಟಕಿತ್ತು ಯಾವುದೋ ಲ್ಯಾಬಿನೊಳಗೆ ನುಗ್ಗಿ ಅವಿತುಕೊಂಡು ಬಚಾವಾದೆವು.

ಈ ಕೆಳಗಿನ ಎಚ್.ಎಸ್. ಬಿಳಿಗಿರಿಯವರ ನಾಲ್ಕು ಸಾಲುಗಳು ನಾನು ಕೇಳಿರುವ ‘ಕ್ಲಾಸಿಕ್’ ಕಮೆಂಟುಗಳ ಸಾಲಿಗೆ ಸೇರುತ್ತದೆ. ನಾಲಕ್ಕೈದು ಸಾರಿ ಓದಿದ ನಂತರವೂ ಹೊಸ ಹೊಸ ಅರ್ಥಗಳನ್ನು ಚಿಮ್ಮಿಸುವ ರಸವಂತಿಕೆ ಈ ಸಾಲುಗಳಿಗಿದೆ.
ಕರಿಯ ಹುಡುಗಿಯು ನಗಲು ಕಾಣುವ
ಬಿಳಿಯ ಹಲ್ಲಿನ ಮಿಂಚೊಲು
ಬೆಂಗಳೂರಿನ ಟಾರ ರೋಡೊಳು
ಬೆಣಚುಕಲ್ಲಿನ ಗೊಂಚಲು!

ಚಿತ್ರ: noisydecentgraphics.typepad.com

Comments (3)

ಕ್ಷಮೆಗಳ ಭಾರ

( ಒಂಭತ್ತು ವರ್ಷಗಳ ಹಿಂದಿನ ಒಂದು ಸಂಜೆ. ನಾನೂ, ಕಿರಣ ಮೊದಲು ಮಾತನಾಡಿದ್ದು ನಮ್ಮ ಕವಿತೆಗಳ ಮೂಲಕ. ಕಿರಣನಿಗೆ ಅಂದಿನಿಂದ ಇಂದಿನವರೆಗೂ ನನ್ನ ಮೇಲೆ, ನನ್ನ ಲೇಖನಿಯ ಮೇಲೆ ಬಹಳ ಅಕ್ಕರೆ, ವಿಶ್ವಾಸ. ಕಂಪ್ಯೂಟರುಗಳ ಕೀಲಿಮಣೆಯ ನಡುವೆಲ್ಲೋ ಕಳೆದುಹೋದ ಆತನ ಲೇಖನಿಯ ಬಗ್ಗೆ ನನಗೆ ದುಗುಡ. ಹೀಗಿರುವಾಗ..ನವೆಂಬರಿನ ಛಳಿಯ ಸಂಜೆಯೊಂದರಲ್ಲಿ ಕಿರಣನಿಗೆ ಕವಿಸಮಯ. ಆತನ ಕಳೆದುಹೋಗಿದ್ದ ಪದಗಳ ಚುರುಕಿನ ಕಿಡಿ ಪುನಃ ಎಲ್ಲೋ ಹೊತ್ತಿದಂತಾಗಿ ನನಗೆ ಸಂತಸ. ಆತನ ಪುಟ್ಟ ಕವಿತೆ ’ಕ್ಷಮೆಗಳ ಭಾರ’ ಇದೋ ನಿಮಗಾಗಿ..)

ಕ್ಷಮೆಗಳ ಭಾರ

ಮಾತಾಡದೆ ಹಲವು ವರ್ಷಗಳೇ ಕಳೆದವು
ಮಾತು ಎಲ್ಲಿ ಮನೆ ಮುರಿವುದೋ
ಅಳುಕಿ ಸುಮ್ಮನಿದ್ದೆ.

ಈ ಮಳೆಗಾಲ ಧೋ ಎಂದು ಮಳೆಸುರಿದು
ಇದ್ದಕಿದ್ದಂತೆ ಬೆಂಗಳೂರಿನ ಮೋಡ ಕರಗಿ
ನವೆಂಬರಿನಲ್ಲೇ ಚಳಿ ಮೊಳೆ ಕೊರೆದಾಗ 
ಒಂದು ಸಂಜೆ
ಹೆಪ್ಪುಗಟ್ಟುತ್ತಿದ್ದ ರಕ್ತ ಮಾತಾಡಿತು.

ಪ್ರೀತಿಯ ಮೊದಲ ಪಟ್ಟು ಕಲಿಸಿದ ಗುರು ಅವಳು
ಶಬ್ದದ ಲಜ್ಜೆಯುಕ್ಕಿಸಬಲ್ಲ ಹುಡುಗಿ

ಈಗ
ಮೋಹದ ಮಾಯೆಯನ್ನೂ ಮೀರಿದಳೆ?

ನನ್ನ ಕ್ಷಮೆಗಳ ಭಾರ ಹೆಚ್ಚುತ್ತಿದೆ.

Comments (3)

ಪಡಖಾನೆಯ ಹುಡುಗಿಯ ಪ್ರೇಮಲಹರಿ

daydreamer1.jpg

ಅವನ ಕೈಬೆರಳುಗಳಲಿ ನನ್ನ ಮುಂಗುರುಳು
ನನ್ನ ತುಟಿಯಂಚಲಿ ಅವನ ತುಂಟಾಟದ ಛಾಪು
ಕಣ್ಣಮೇಲೆ ಅವನಿಟ್ಟ ಒಂದು ಪುಟ್ಟ ಮುತ್ತು
ಏಕಾಂತದಲ್ಲು
ಕಿಕ್ಕಿರಿದ ಜನಸಂದಣಿಯ
ಮಧ್ಯೆ ಓಡಾಡುವಾಗಲು
ನಮ್ಮನ್ನು ಕಾಡುವುದೊಂದೇ-
ಸೇರುವ ಮರುಳು.

***
ಅಂದು ಬೀದಿಗಳಲ್ಲಿ ನಿನ್ನ
ಕೈಹಿಡಿದು ನಡೆವಾಗ
ನನ್ನ ಕಿಬ್ಬೊಟ್ಟೆಯ ಕಾವು
ನಿನ್ನ ತಾಕುವುದೇನೋ ಎಂಬ ಮುಜುಗರ
ನನ್ನ ಸೀರೆಯ ಹೊಳೆವ ನಿರಿಗೆ
ನಿನ್ನ ಹೆಜ್ಜೆಯ ಲಹರಿ
ಬೆಚ್ಚಗಿನ ಸ್ಪರ್ಶ
ಬೆರಳತುದಿ ಮಿಂಚು
ನಮ್ಮ ಅಸಂಗತ ಬಯಕೆಗಳು
ಮತ್ತು ಈ ಪೇಟೆಯ ಗೌಜಿ ಗದ್ದಲ
ಅರೆಗತ್ತಲಿನ ಪಿಸುಮಾತುಗಳು ಮುಗಿದು
ನಿನ್ನ ಬೀಳ್ಕೊಡುವಾಗ
ಸಂಜೆಗೂ ಗೊಂದಲ

***
ನಿನ್ನಲೊಂದು ಕೇಳುವೆ
ಕಂಗಳನಾಚೀಚೆ ಸರಿಸದಿರು
ನಿನ್ನ ನೋಟವನೆ ಹೊದ್ದು ಮಲಗುವವಳಿಗೆ
ಕೌದಿಯಿಲ್ಲದಾದೀತು

ಚಿತ್ರ: www.crossedbrushstudio.com 

Comments (4)

ಎಪ್ಪತ್ತರ ಬಾಲಿವುಡ್

bollywood2.jpg

‘ಓಂ ಶಾಂತಿ ಓಂ’ ಈಗಾಗಲೆ ‘ಬ್ಲಾಕ್ ಬಸ್ಟರ್’ಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಶಾರುಖ್ ಖಾನನ ದೊಡ್ಡ ಕಾಲರಿನ ಚೆಕ್ಡ್ ಸೂಟುಗಳು, ಬೆಲ್ಬಾಟಂ ಪ್ಯಾಂಟುಗಳು ಮತ್ತು ಸೈಡ್ ಬರ್ನುಗಳು, ದೀಪಿಕಾಳ ಚಿತ್ರವಿಚಿತ್ರ ಬಣ್ಣಗಳ ಸಲ್ವಾರ್ ಸೂಟುಗಳು, ತಲೆಗೆ ಕಟ್ಟುವ ಸ್ಕಾರ್ಫುಗಳು ವಿಪರೀತ ಜನಪ್ರಿಯವಾಗತೊಡಗಿವೆ. ಎಪ್ಪತ್ತರ ದಶಕದ ಫ್ಯಾಶನ್ ವಾಪಾಸು ಬಂದಿದೆ ಎಂದು ಎಲ್ಲರೂ ಹೇಳಿಕೊಳ್ಳುತ್ತಿದ್ದಾರೆ. ಆದರೆ ಇಂದಿನ ಹದಿಹರೆಯದ ಹುಡುಗಹುಡುಗಿಯರಿಗೆ ಬಹುಶಃ ಏನೂ ಅರ್ಥವಾಗದೆ ಇರಬಹುದು. ಏನಿದು ಎಪ್ಪತ್ತರ ದಶಕ? ಏನಾಯಿತು ಆಗ? ನಿರ್ದೇಶಕಿ ಫರಾಖಾನ್ ಎಪ್ಪತ್ತರ ಬಾಲಿವುಡ್ ಅನ್ನು ಈಗ ವೈಭವೀಕರಿಸಿರುವುದು ಏಕೆ?

ಎಪ್ಪತ್ತರ ದಶಕ ಭಾರತೀಯ ಫಿಲ್ಮೀ ಜಗತ್ತಿನಲ್ಲಿ ಬಹಳ ಮುಖ್ಯವಾದ ಸಮಯ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಹೆಚ್ಚೂಕಡಮೆ ಒಂದೂವರೆ ದಶಕ ಕಳೆದುಹೋಗಿತ್ತು. ಉಪಖಂಡ ಭಾರತ, ಪಾಕಿಸ್ತಾನಗಳಾಗಿ ಒಡೆದುಹೋಗುವ ಸಮಯದಲ್ಲಿ ಲಕ್ಷೊಪಲಕ್ಷ ಜನರು ಸಾವುನೋವು ಅನುಭವಿಸಿದರು. ನೆಹರೂ ಯುಗ ಅರವತ್ತರ ದಶಕದಲ್ಲಿ ಮುಗಿದುಹೋಯಿತು. ಎಲ್ಲೆಡೆ ನಿರುದ್ಯೋಗ, ಬರ, ಬಡತನದಂಥ ಸಮಸ್ಯೆಗಳು ತಲೆಯೆತ್ತಿ ಹೆಡೆಯಾಡುತ್ತ ಇದ್ದವು. ಹೊಸ ನಾಯಕರು ರಾಜಕೀಯ ರಂಗದಲ್ಲಿ ಹೊಸಹೊಸ ಯೋಚನೆಗಳೊಡನೆ ನೆಲೆಯಾಗಲು ತೊಡಗಿದರು. ನಗರಜೀವನ ಹಾಗೂ ಮಧ್ಯಮವರ್ಗಕ್ಕೆ ಪ್ರಾಮುಖ್ಯತೆ ದೊರಕಲಾರಂಭಿಸಿತು. ಯುವಜನರು ಯುರೋಪು, ಅಮೆರಿಕಗಳ ಬೊಹೆಮಿಯನ್, ಹಿಪ್ಪೀ ಸಂಸ್ಕೃತಿಗಳಿಂದ ಪ್ರಭಾವಿತರಾಗತೊಡಗಿದರು. ಹೆಣ್ಣುಮಕ್ಕಳು ಪಾಶ್ಚಾತ್ಯ ‘ಫ್ಲವರ್ ಪವರ್’ ಚಳುವಳಿಯಿಂದ ಪ್ರೇರೇಪಣೆ ಪಡೆದು ಸಾಮಾಜಿಕ ಕಟ್ಟುಪಾಡುಗಳನ್ನು ಮುರಿದು ಬದುಕುವ ಇಚ್ಛೆ ತೋರಲು ಆರಂಭಿಸಿದರು. ಸಮಸ್ಯೆಗಳಿಂದ ಹತಾಶರಾದ ಕೆಲವು ಯುವಕರು ತಮಗೆ ಬೇಕಾದ್ದನ್ನು ಹೇಗಾದರೂ ಕಿತ್ತುಕೊಳ್ಳಬೇಕೆಂದು ಹಿಂಸಾವೃತ್ತಿಗಿಳಿದರು. ಬರಪೀಡಿತ ಬಿಹಾರ, ಮಧ್ಯಪ್ರದೇಶ, ಆಂಧ್ರ ಮುಂತಾದೆಡೆಯಲ್ಲೆಲ್ಲ ಡಕಾಯಿತರ ಗುಂಪುಗಳು ಸುಲಭವಾಗಿ ಹಣ ದಕ್ಕಿಸಿಕೊಳ್ಳಲೋಸುಗ ಲೂಟಿ, ಕೊಲೆ, ದರೋಡೆ ನಡೆಸಲಾರಂಭಿಸಿದವು. ಒಟ್ಟಿನಲ್ಲಿ ಎಪ್ಪತ್ತರ ದಶಕ ಭಾರತದ ಪಾಲಿಗೆ ‘ಕ್ರಾಸ್ ಓವರ್’ ದಶಕ.

ಬಾಲಿವುಡ್ ಮೊದಲಿನಿಂದಲೂ ಹಾಲಿವುಡ್ ಸಿನೆಮಾದಿಂದ ಸ್ಫೂರ್ತಿ ಪಡೆಯುತ್ತ ಬಂದಿದೆ. ಎಪ್ಪತ್ತರ ದಶಕದಲ್ಲಿ ಹಾಲಿವುಡ್ ಕೂಡ ಹಲವಾರು ಬದಲಾವಣೆಗಳನ್ನು ಮೈಗೂಡಿಸಿಕೊಂಡು ಹೊಸ ರೂಪ ಪಡೆಯಿತು. ಶಾನ್ ಕಾನರಿಯ ಜೇಮ್ಸ್ ಬಾಂಡ್ ಸೀರೀಸ್, ಬ್ರೂಸ್ ಲೀಯ ‘ಎಂಟರ್ ದ ಡ್ರಾಗನ್’, ಜೀನ್ ಹ್ಯಾಕ್ಮನ್ನನ ‘ಪೊಸೀಡನ್ ಅಡ್ವೆಂಚರ್’ ಮತ್ತು ‘ದ ಫ್ರೆಂಚ್ ಕನೆಕ್ಷನ್’, ಸಿಲ್ವೆಸ್ಟರ್ ಸ್ಟಲೋನನ ‘ರಾಕಿ’, ಸ್ಪೀಲ್ ಬರ್ಗನ ‘ಜಾಸ್’ನಂತಹ ಸಾಹಸಭರಿತ ಚಲನಚಿತ್ರಗಳು ಬಹಳ ಜನಪ್ರಿಯವಾದವು. ಜತೆಗೇ ‘ಸ್ಟಾರ್ ವಾರ್ಸ್’, ‘ಕ್ಲೋಸ್ ಎನ್ಕೌಂಟರ್ಸ್ ಆಫ್ ದ ಥರ್ಡ್ ಕೈಂಡ್’, ‘ಸುಪರ್ ಮ್ಯಾನ್’ನಂತಹ ಫ್ಯಾಂಟಸಿ ಚಲನಚಿತ್ರಗಳು, ಜಾನ್ ಟ್ರವೋಲ್ಟಾನ ‘ಸ್ಯಾಟಡರ್ೇ ನೈಟ್ ಫೀವರ್’, ‘ಗ್ರೀಸ್’ನಂತಹ ನೃತ್ಯ, ಸಂಗೀತ ಆಧಾರಿತ ಮೂವೀಗಳು ಯುವಜನಾಂಗವನ್ನು ಹುಚ್ಚೆಬ್ಬಿಸಿದವು. ಇದಲ್ಲದೆ ‘ಗಾಡ್ ಫಾದರ್’ ನಂತಹ ಗ್ಯಾಂಗ್ಸ್ಟರ್ ಚಿತ್ರಗಳು, ಆಫ್ರೋ-ಅಮೆರಿಕನ್ ‘ಶ್ಯಾಫ್ಟ್’, ಮತ್ತು ‘ಎಕ್ಸಾರ್ಸಿಸ್ಟ್’, ‘ಟೆಕ್ಸಾಸ್ ಚೈನ್ ಸಾ ಮಸಾಕ್ರ್’, ‘ದ ಒಮೆನ್’, ‘ಹಿಲ್ಸ್ ಹ್ಯಾವ್ ಐಸ್’ ನಂತಹ ಹಾರರ್ ಚಲನಚಿತ್ರಗಳಿಗೆ ಕೂಡ ಪ್ರೇಕ್ಷಕವರ್ಗ ಹುಟ್ಟಿಕೊಂಡಿತು.

ಎಪ್ಪತ್ತರ ದಶಕದ ಬಾಲಿವುಡ್ ಹಲವಾರು ನಟನಟಿಯರನ್ನು ಹುಟ್ಟುಹಾಕಿತು. ಹಳಬರು ನೇಪಥ್ಯಕ್ಕೆ ಸರಿದು ಹೊಸ ಪೀಳಿಗೆಗೆ ದಾರಿ ಮಾಡಿಕೊಟ್ಟರು. ಅಮಿತಾಬ್ ಬಚ್ಚನ್ನ ದೀವಾರ್, ಶೋಲೇ, ಜಂಜೀರ್, ಮುಂತಾದ ಚಲನಚಿತ್ರಗಳು ‘ಆಂಗ್ರಿ ಯಂಗ್ ಮ್ಯಾನ್’ ಅನ್ನು ಹುಟ್ಟುಹಾಕಿದವು. ‘ಡಾನ್’ನ ಅಮಿತಾಭ್ ಪೋಲೀಸರಿಂದ ತಪ್ಪಿಸಿಕೊಳ್ಳುವುದರಲ್ಲಿ ನಿಷ್ಣಾತ. ಈ ಕೋಪಿಷ್ಟ ಯುವಕ ಸಮಾಜದ ಎಲ್ಲ ಕಟ್ಟುಕಟ್ಟಳೆ, ಧರ್ಮ, ರಾಜಕೀಯ, ಎಲ್ಲವನ್ನು ಧಿಕ್ಕರಿಸುವವನಾಗಿದ್ದ. ಎಪ್ಪತ್ತರ ದಶಕದ ಹೀರೋಯಿನ್ನುಗಳಾದ ಪರ್ವೀನ್ ಬಾಬಿ, ಜೀನತ್ ಅಮಾನ್ ತಮ್ಮ ‘ಬೋಲ್ಡ್ ಎಂಡ್ ಫ್ಯಾಶನಬಲ್’ ಧೋರಣೆಯಿಂದ ಜನಪ್ರಿಯರಾದರು. ರೇಖಾ, ಹೇಮಾಮಾಲಿನಿ, ನೀತೂ ಸಿಂಗ್ ತಮ್ಮ ‘ಪಕ್ಕದ ಮನೆ ಹುಡುಗಿ’ಯ ಇಮೇಜಿನಿಂದ ಖ್ಯಾತಿ ಗಳಿಸಿದರು. ಎಪ್ಪತ್ತರ ದಶಕದ ಚಿತ್ರಗಳಲ್ಲಿ ಒಂದು ಕವ್ವಾಲಿ. ಒಂದು ಕ್ಯಾಬರೆ, ಒಬ್ಬ ಭಯಂಕರ ವಿಲನ್, ಎಮೋಶನ್ನು ಇರಲೇಬೇಕಿತ್ತು. ಇಂಥ ಮಸಾಲಾ ಚಲನಚಿತ್ರಗಳಲ್ಲದೆ ‘ಅಮರ್ ಅಕ್ಬರ್ ಆಂಥೋನಿ’, ‘ಬಾಂಬೆ ಟು ಗೋವಾ’ದಿಂದ ಹಿಡಿದು ಹೃಶಿಕೇಶ್ ಮುಖರ್ಜಿಯವರ ‘ಗುಡ್ಡಿ’, ‘ಬಾವರ್ಚಿ’, ‘ಗೋಲ್ಮಾಲ್’ನಂತಹ ಹಾಸ್ಯ ಚಲನಚಿತ್ರಗಳು ಕೂಡ ಗಲ್ಲಾಪೆಟ್ಟಿಗೆ ಸೂರೆಮಾಡಿದವು. ಎಪ್ಪತ್ತರ ದಶಕ ತನ್ನ ಕೌಟುಂಬಿಕ ಕಥೆಗಳುಳ್ಳ ಚಲನಚಿತ್ರಗಳನ್ನು ಹೊಸ ರೂಪದೊಡನೆ ಹೊರತರಲಾರಂಭಿಸಿತು. ಅಂದಿನ ಚಲನಚಿತ್ರಗಳು ಎಪ್ಪತ್ತರ ದಶಕದ ಸಾಮಾಜಿಕ ಸಮಸ್ಯೆಗಳಾದ ನಿರುದ್ಯೋಗ, ಹೆಣ್ಣಿನ ಶೋಷಣೆ, ಬಡತನ, ಲಂಚ, ದುಶ್ಚಟಗಳು ಮೊದಲಾದವನ್ನು ಬಿಂಬಿಸಿದ್ದಲ್ಲದೆ ಅವುಗಳಿಗೆ ಸ್ವ-ಉದ್ಯೋಗ, ಹೆಣ್ಣಿಗೆ ಸ್ವಾತಂತ್ರ್ಯ, ಜನಜಾಗೃತಿ, ಕುಡಿತ ಹಾಗೂ ಡ್ರಗ್ಸ್ ಮುಂತಾದವುಗಳ ಬಗ್ಗೆ ಅರಿವು ಮೂಡಿಸಿ ತಮ್ಮದೇ ಆದ ರೀತಿಯಲ್ಲಿ ಈ ಸಮಸ್ಯೆಗಳಿಗೆ ಉತ್ತರ ಹುಡುಕುವ ಪ್ರಯತ್ನ ನಡೆಸಿದವು. ಎಪ್ಪತ್ತರ ಯುವಜನಾಂಗ ‘ಬಾಬಿ’, ‘ಯಾದೋಂ ಕೀ ಬಾರಾತ್’, ‘ಹಂ ಕಿಸೀಸೆ ಕಂ ನಹೀಂ’ ಯಂತಹ ಚಲನಚಿತ್ರಗಳಿಂದ ಪ್ರಭಾವಿತಗೊಂಡಿತು. ‘ಪಾಕೀಜಾ’, ‘ಅಭಿಮಾನ್’, ‘ಮಂಥನ್’, ‘ಆಂಧೀ’, ‘ಭೂಮಿಕಾ’, ‘ಗರಂ ಹವಾ’, ‘ಶತ್ರಂಜ್ ಕೆ ಖಿಲಾಡಿ’ಯಂತಹ ‘ಕ್ರಾಸೋವರ್’ ಚಲನಚಿತ್ರಗಳು ಶ್ಯಾಮ್ ಬೆನಗಲ್, ಸತ್ಯಜಿತ್ ರೇ, ಕಮಲ್ ಅಮ್ರೋಹಿ ಹಾಗೂ ಎಂ.ಎಸ್. ಸತ್ಯುರಂಥ ಪ್ರತಿಭಾವಂತ ನಿರ್ದೇಶಕರ ಕುಲುಮೆಯಿಂದ ಮೂಡಿಬಂದವು. ಕಿಶೋರ್ ಕುಮಾರ್, ಆರ್.ಡಿ. ಬರ್ಮನ್ ಹಾಗೂ ಲಕ್ಷ್ಮೀಕಾಂತ್-ಪ್ಯಾರೇಲಾಲ್ ಈ ದಶಕದ ಪ್ರಮುಖ ಸಂಗೀತ ನಿರ್ದೇಶಕರಾಗಿ ಹೆಸರುಮಾಡಿದರು.

ಎಪ್ಪತ್ತರ ದಶಕದಲ್ಲಿ ಯಾವುದೂ ‘ಮಿನಿಮೈಸ್ಡ್’ ಆಗಿರಲಿಲ್ಲ, ಅಲ್ಲಿ ಭಾವನೆಗಳು, ಸಂಬಂಧಗಳು, ಪ್ರೀತಿ, ದ್ವೇಷ, ವೈರಾಗ್ಯ, ಎಲ್ಲವೂ ವೈಭವೀಕರಿಸಲ್ಪಡುತ್ತಿತ್ತು. ಅಲ್ಲಿ ಕಳೆದುಹೋದ ಅಣ್ಣತಮ್ಮಂದಿರ ಪುನರ್ಮಿಲನ ಕೇವಲ ಒಂದು ಹಚ್ಚೆಯಿಂದಲೋ, ಲಾಕೆಟಿನಿಂದಲೋ ಆಗಿಹೋಗುತ್ತಿತ್ತು. ಡಕಾಯಿತರು ಕ್ರೂರಿಗಳಾಗಿದ್ದರೂ ತಮ್ಮ ತಂಗಿಯಿಂದ ರಾಖಿ ಕಟ್ಟಿಸಿಕೊಳ್ಳುವುದನ್ನು ತಪ್ಪಿಸುತ್ತಿರಲಿಲ್ಲ! ಹಾವೊಂದು ತನ್ನ ಸಖನನ್ನು ಕೊಂದವರ ಮೇಲೆ ಮನುಷ್ಯರೂಪ ತಾಳಿ ಸೇಡು ತೀರಿಸಿಕೊಳ್ಳುತ್ತಿತ್ತು. ಕ್ಯಾಬರೆ ನರ್ತಕಿಯೊಡನೆ ತಕತಕನೆ ಕುಣಿವ ನಾಯಕ ತಾಯಿಯ ಮಡಿಲು ಕಂಡೊಡನೆ ಮಗುವಾಗಿ ಕರಗುತ್ತಿದ್ದ. ಅಂಬ್ಯಾಸಿಡರ್ ಕಾರುಗಳು ವೈಭವದ ಸಂಕೇತವಾಗಿದ್ದವು. ಪೊಲೀಸರು ಎಲ್ಲ ಫೈಟಿಂಗ್ ಮುಗಿದ ನಂತರವೇ ವಿನೀತರಾಗಿ ಹಾಜರಾಗುತ್ತಿದ್ದರು. ಅಂದಿನ ನಟನಟಿಯರು, ಅವರ ಜೀವನಶೈಲಿ, ಉಡುಗೆತೊಡುಗೆಗಳು, ಸಿನಿಮಾದ ಪಾತ್ರಗಳು, ಸಂಗೀತ ಯುವಜನಾಂಗವನ್ನು ಇನ್ನಿಲ್ಲದಂತೆ ಮೋಡಿಗೊಳಿಸಿದವು. ಒಟ್ಟಿನಲ್ಲಿ ಎಪ್ಪತ್ತರ ಭಾರತೀಯ ಸಿನೆಮಾ ಒಂದಲ್ಲ, ಎರಡಲ್ಲ, ನೂರಾರು ಬೆಳವಣಿಗೆಗಳನ್ನು ಮೈಗೂಡಿಸಿಕೊಂಡು ಇಂದಿನ ಬೃಹತ್ ಸಿನೆಮಾ ಉದ್ಯಮ ರೂಪುಗೊಳ್ಳಲು ಅಡಿಪಾಯ ಹಾಕಿತು. ‘ಓಂ ಶಾಂತಿ ಓಂ’  ಮಿನುಗುವ ಎಪ್ಪತ್ತರ ಬಾಲಿವುಡ್ ದಶಕಕ್ಕೆ ಇಂದಿನ ಬಾಲಿವುಡ್ ಸಿನೆಮಾ ಸಲ್ಲಿಸಿರುವ ಅಪರೂಪದ ಗೌರವ. 

Comments (3)

ಅಲೆಮಾರಿ ಹುಡುಗ ಮತ್ತು ಒಂದು ಗಜಲ್.

stars20061.jpg

 ”ಆಮೇಲೆ?” ನಾನು ಕೇಳಿದೆ.
“ಥಾಯ್ಲೆಂಡಿಗೆ ಹೋಗ್ತೇನೆ.”
“ಅದಾದ ಮೇಲೆ?”
“ಯೂಎಸ್ಎ ತಿರುಗ್ತೇನೆ!”
“ಆಮೇಲೆ?”
“ಐ ರಿಯಲೀ ಡೋಂಟ್ ನೋ. ಈ ‘ವಾಂಡರಿಂಗ್ ಸೌಲ್’ ಅಂತಾರಲ್ಲ, ಹಾಗಾಗಿಬಿಟ್ಟಿದೀನಿ. ನಂಗೆ ಜೋರ್ಡಾನಿಗೆ ವಾಪಾಸು ಹೋಗಲಿಕ್ಕಾಗದು ಟೀನಾ!” ಎಂದು ಹೇಳಿ ಆ ಹುಡುಗ ತನ್ನ ಸರೋವರಗಳಂಥ ಕಣ್ಣುಗಳಿಂದಲೇ ನಕ್ಕುಬಿಟ್ಟಿದ್ದ. ನನಗೆ ಆತ ನಮ್ಮ ನಾಗರೀಕತೆಯ ಎಲ್ಲ ದುರವಸ್ಥೆಗಳ ಪ್ರತೀಕ ಅನ್ನಿಸಿತ್ತು.

ಏಳು ವರ್ಷಗಳ ಹಿಂದೆ ಮೈಸೂರು ವಿಶ್ವವಿದ್ಯಾನಿಲಯದ ಲೈಬ್ರರಿಯಲ್ಲಿ ಪರಿಚಯವಾದ ಮಹ್ಮೂದ್ ಅಲಿಯಾಸ್ ಶಾಹಿದ್ ಉರ್ಫ್ ಸಬೀಲ್ ಜೋರ್ಡಾನಿನ ಪ್ಯಾಲೆಸ್ತೈನೀ ಮೂಲದ ಹುಡುಗ. ಮೊದಮೊದಲು ಆವನ ಆಂಗ್ಲ ಆಕ್ಸೆಂಟಿಗೆ ಹೊಂದಿಕೊಳ್ಳುವುದು ಕಷ್ಟವಾದರೂ ಮಾತನಾಡಿದೆ. ಆತನ ತಂದೆ ಜೋರ್ಡಾನಿನಲ್ಲಿ ಕಂಪ್ಯೂಟರ್ ಪ್ರೋಗ್ರಾಮರ್. ನಾಲ್ಕು ಅಕ್ಕತಂಗಿಯಂದಿರು, ಆರು ಅಣ್ಣತಮ್ಮಂದಿರು. ನನ್ನ ಓದಿನ ಬಗ್ಗೆ ಹೇಳಿದ್ದನ್ನು ಆಸಕ್ತಿಯಿಂದ ಕೂತು ಕೇಳಿ ಮಾರನೇ ದಿನವೇ ಸುಮಾರು ಬರಹಗಳು, ಪುಸ್ತಕಗಳನ್ನು ತಂದು ನನ್ನೆದುರಿಗಿಟ್ಟ. ಜತೆಗೊಂದು ಕಪ್ಪು ಬಣ್ಣದ ಹೊದಿಕೆಯ ಮೇಲೆ ಚಿನ್ನದ ಬಣ್ಣದ ಅಕ್ಷರಗಳಿದ್ದ ಕುರಾನಿನ ಆಂಗ್ಲ ಅನುವಾದ. ನನಗೆ ಏನು ಹೇಳಬೇಕೊ ತೋಚಲಿಲ್ಲ. ಆತನನ್ನು ಹೇಗೆ ಅವಾಯ್ಡ್ ಮಾಡಲಿ ಎಂದು ಅಲ್ಲಿಯತನಕ ಯೋಚನೆ ಮಾಡುತ್ತ ಇದ್ದ ನನ್ನ ಹಿಪಾಕ್ರಸಿಯನ್ನ ಶಪಿಸಿಕೊಂಡೆ.

ಆತ ಪ್ಯಾಲೆಸ್ತೈನಿನವನೆಂದು ತಿಳಿದ ತಕ್ಷಣ ಜತೆಯ ಹುಡುಗರು ಅವನನ್ನು ದೂರಮಾಡಿಬಿಡುತ್ತಿದ್ದರು. ತಾನು ಮುಸಲ್ಮಾನನೆಂದು ಪ್ರತಿಕ್ಷಣವೂ ಅರಿವು ಮೂಡಿಸುವ ಆತನ ಜೀವನ ಬಹಳ ವಿಚಿತ್ರವಾಗಿ ಕಳೆಯುತ್ತ ಇತ್ತು. ಇಲ್ಲಿನ ಹುಡುಗರು ಕ್ರಿಕೆಟ್ ಆಡುವುದನ್ನು ನೋಡಿದಾಗಲೆಲ್ಲ ಅವನಿಗೆ ತನ್ನೂರ ಫುಟ್ಬಾಲ್ ಮೈದಾನಗಳು ನೆನಪಾಗಿಬಿಡುತ್ತಿದ್ದವು. ಪಾಕಿಸ್ತಾನ, ಅಫಘಾನಿಸ್ತಾನಗಳನ್ನು ಕುತೂಹಲದಿಂದ ನೋಡಲು ಹೋದವ ಜಿಗುಪ್ಸೆ ಹೊಂದಿ ವಾಪಾಸು ಬಂದಿದ್ದ ಮಹ್ಮೂದ್ ಅಲೀಘಡ ವಿಶ್ವವಿದ್ಯಾನಿಲಯದಿಂದ ಆಂಗ್ಲಸಾಹಿತ್ಯದಲ್ಲಿ ಪದವಿ ಪಡೆದಿದ್ದ. ಅಲ್ಲಿನ ಹುಡುಗಿಯೊಬ್ಬನ್ನು ಪ್ರೀತಿಸಿ ಆಕೆಯ ತಂದೆತಾಯಂದಿರು ಮದುವೆಯಾಗಿ ಅಲ್ಲೇ ನೆಲೆಸಲು ಒತ್ತಾಯಿಸಿದಾಗ ಹೇಳದೆ ಕೇಳದೆ ಹೊರಟುಬಂದಿದ್ದ. “ಯಾಕೆ ಹಾಗೆ ಮಾಡಿದೆ?” ನಾನು ಕೇಳಿದ್ದೆ. “ಗೊತ್ತಿಲ್ಲ! ನನ್ನ ಬಗ್ಗೆ ಅವರೇನಂದುಕೊಂಡಿದ್ರೋ? ಈಗ ಅವಳ ಮದುವೆ ಆಗಿಹೋಗಿರಬಹುದು” ಮತ್ತೆ ಆತ ನಕ್ಕಿದ್ದ. ಯಾಕೊ ಆತನ ಕೃತಘ್ನತೆಯ ಮೇಲೆ ಸಿಟ್ಟು ಬಂದಿರಲಿಲ್ಲ.

ಮಹ್ಮೂದನಿಗೆ ಸಿಟ್ಟಿನ ಮೇಲೆ ಹತೋಟಿ ಕಡಿಮೆ ಎಂದು ಆತನೇ ನನಗೆ ತಿಳಿಸಿದ. “ಹೊರದೇಶದಲ್ಲಿದೀಯ. ಹುಶಾರಾಗಿರು.” ಎಚ್ಚರಿಸಿದ್ದೆ. “ನಂಗೊತ್ತು. ಸಿಟ್ಟು ಮಾಡಬಾರದು. ಕೆಟ್ಟದು. ನಮ್ಮ ಹುಡುಗರಿಗೆಲ್ಲ ಹೀಗೇ. ವಿಚಿತ್ರ ಸಿಟ್ಟು. ನನ್ನ ಕಸಿನ್ ಒಬ್ಬ, ಬರೇ ಹದಿನಾರು ವರ್ಷದವ. ಪೊಲೀಸರ ವಿರುದ್ಧ ಗಲಭೆಯಲ್ಲಿ ಭಾಗವಹಿಸಿದ. ಕೈಯಲ್ಲಿ ಬರೀ ಕಲ್ಲುಗಳು. ಅವರ ಕೈಯಲ್ಲಿ ಗನ್ನುಗಳು. ನಾಲ್ಕು ತಿಂಗಳಾಯಿತು ಅವನು ಸತ್ತುಹೋಗಿ!” ಮತ್ತದೇ ನಿರ್ವಿಕಾರ, ನಿರ್ಲಿಪ್ತ ಮುಗ್ಧನಗು. ನಮ್ಮ ಇಪ್ಪತ್ತೊಂದನೇ ಶತಮಾನದ ನಾಗರೀಕತೆಯ ಕೂಸು ಇವನು. ಆತನಿಗೂ ಆಸೆ ಆಕಾಂಕ್ಷೆಗಳಿದ್ದವು, ಒಳ್ಳೆಯ ಸ್ನೇಹಿತರ ಅವಶ್ಯಕತೆಯಿತ್ತು, ಬಾಳಗೆಳತಿಯ ಬಗ್ಗೆ ಕಲ್ಪನೆಗಳಿದ್ದವು. ಆದರೆ ಅಭದ್ರತೆಯಿಂದ ಪ್ರೇರೇಪಿತವಾದ ಅಲೆಮಾರಿತನ ಆತನನ್ನು ಒಂದೆಡೆ ನೆಲೆಸಲು ಬಿಡುತ್ತಿರಲಿಲ್ಲ. ಇಂತಹ ಇನ್ನೆಷ್ಟು ಹುಡುಗ ಹುಡುಗಿಯರು ನಮ್ಮ ನೆಲದ ಮೇಲೆ ಅಲೆದಾಡಬೇಕೊ ಏನೊ?

ಎಲ್ಲ ಕಡೆ ಕಾರ್ತೀಕದ ಬೆಳಕು. ಮಕ್ಕಳ ಕೇಕೆ. ನನ್ನ ಕಿವಿಗಳಲ್ಲಿ ಜಗಜೀತ್ ಸಿಂಗರ ಒಂದು ಗಜಲ್. ಬರೆದವರಾರೊ? ನೆನಪಾಗುತ್ತ ಇಲ್ಲ.

“ಬಚ್ಚೋಂಕೋ ಛೋಟೇ ಹಾಥೋಂಸೆ ಚಾಂದ್ ಸಿತಾರೇ ಛೂನೇ ದೋ..
ಚಾರ್ ಕಿತಾಬೇಂ ಪಢ್ ಕರ್ ವೋ ಭೀ ಹಂ ಜೈಸೇ ಹೋಜಾಯೇಂಗೇ..”
(ಮಕ್ಕಳ ಪುಟ್ಟ ಕೈಗಳು ಮುಟ್ಟಲಿ ಬಿಡು ಚಂದ್ರ ತಾರೆಗಳ
ನಾಲಕ್ಕು ಪುಸ್ತಕಗಳನ್ನೋದಿ ಅವರು ನಮ್ಮಂತೆಯೆ ಆಗಿಹೋಗುವರು..)

ಚಿತ್ರ: www.allendale4kids.org 

Comments (8)

« Previous entries