Archive for December, 2007

ಕಳೆದ ವರುಷ - ಒಂದು ಪಟ್ಟಿ.

2657444480044617040adiggd_fs1.jpg 

ಮತ್ತೊಂದು ಹೊಸ ವರುಷ.
ಹೊಸ ಕಾಯುವಿಕೆ.
ಇನ್ನೇನಾದೀತೊ? ಹೊಸತೇನು ಕಂಡೀತೊ?
ಹೊಸತರ ಸಂಭ್ರಮದಲ್ಲಿ ಹಳೆಯದೆಲ್ಲ ಮರೆತೇ ಹೋಗುವುದು.
ಯಾವುದೊ ತಿಳಿಗೊಳದಂಥ ದಿನ ಮರಳಿ ನೆನಪಾಗುವುದು.

ಅದಕು ಮುನ್ನ..ನೆನೆಸಿಕೊಳ್ಳುವೆ..
ಏನೇನು ಮಾಡಿದೆ ಕಳೆದ ವರುಷ?
ಅದು ಚೆನ್ನಾಗಿತ್ತೊ? ಬೇಸರ ಹುಟ್ಟಿಸಿತೊ?
ಹೇಗಿತ್ತು ಒಟ್ಟಾರೆ?
ಹಾಗು ಹೀಗು ಕಳೆಯಿತು ಎಂದು ಹೇಳಿ ಅದಕ್ಕೆ ಅವಮಾನ ಮಾಡಲಾರೆ.
ನಾಲಕ್ಕು ವರುಷಗಳಿಂದ ಲೇಖನಿ ಎತ್ತದೆ ಕುಳಿತಿದ್ದ ನಾನು, ಹಾಗೆ ಹೇಳಬಹುದೆ?
ಈ ವರುಷ ನಾನು ಬರೆದೆ. ಮನಸಾರೆ.
ಕಥೆ. ಕವಿತೆ. ಅಂಕಣ. ವಿಮರ್ಶೆ…. ಏನೇನೊ.
ಪದಗಳು ತಂದಿಕ್ಕಿದ ಜವಾಬ್ದಾರಿಯ ಹೊತ್ತುಕೊಳ್ಳುವ ಧೈರ್ಯ ಮಾಡಿದೆ.
ನನ್ನ ಭುಜಗಳ ಮೇಲೆ ತಲೆಯಿರುವಂತೆ ನೋಡಿಕೊಂಡೆ.
ಪ್ರೇಮ, ವಿರಹ, ಮಮತೆ, ಕೋಪ, ಪಶ್ಚಾತ್ತಾಪ - 
ಎಲ್ಲವೂ ಸಮಯಕ್ಕೆ ತಕ್ಕನಾಗಿ ಜತೆ ನೀಡಿದವು.
ಕೆಲವು ಮಾತು ಮುರಿದೆ. ಕೆಲವು ನಿಭಾಯಿಸಿದೆ.
ಹಳೆಯ ಗೆಳೆಯರು, ಮರೆತುಹೋಗಿದ್ದವರು, ಎದುರಾದರು.
ಇನ್ನು ಕೆಲವರು ದೂರಾದರು. ಹೊಸಬರು ಪರಿಚಯದ ನಗೆ ನಕ್ಕರು.
ಹೊಸ ಗೂಡು ಮಾಡಿದೆ. ಅದರೊಳಗೆ ಕೆಲದಿನ ಮುದುರಿ ಕುಳಿತೆ.
ಆಮೇಲೆ ಹಂಬಲ ಬಂದು ರೆಕ್ಕೆ ಬಿಚ್ಚಿ ಹಾರಿದೆ.
ಕೆಲವು ಸತ್ಯಗಳ ಎದುರಿಸಲಾಗದೆ ಓಡಬೇಕೆನ್ನಿಸಿದರು ಸುಮ್ಮನೆ ನಿಂತು ಧ್ಯಾನಿಸಿದೆ
ಕೆಲವರ ಬಳಿ ಮುಗುದೆಯೆನ್ನಿಸಿಕೊಂಡೆ, ಕೆಲವರು ಮುಂಗೋಪಿಯೆಂದು ಹಳಿದರು.
ಗೋರ್ಕಲ್ಲ ಮೇಲೆ ಮಳೆ ಸುರಿಯಿತು.
ಒಳಗಿನ ಮೂಢತನಗಳು ಹೊರಬಂದು ಅಣಕಿಸಿದವು.
ಮೂಟೆಕಟ್ಟಿ ಬಿಸಾಡಿದೆ.
ಹವಣಿಕೆಗಳು ನಾಚಿಕೆ ಹುಟ್ಟಿಸಿ ಕೈಬಿಟ್ಟವು.
ನನ್ನ ಮೊದಲ ಸೋಲು ಅನುಭವಿಸಿದೆ. ತಣ್ಣಗೆ. ನಕ್ಕೆ.
ಮೂಲೆಸೇರಿ ಅತ್ತೆ. 
ಇನ್ನೇನು ಎಲ್ಲ ಮುಗಿಯಿತು ಅಂದುಕೊಳ್ಳುವಷ್ಟರಲ್ಲಿ ಒಂದು ಹುಲ್ಲುಕಡ್ಡಿ.
ಎಣಿಸಿರದ ಕಡೆಯಿಂದ ಒಂದು ಮಾಗಿದ ಮಾತು. ಒಂದು ನಗು.
ಸುಲಭವಿರಲಿಲ್ಲ ಅದು. ಕಳೆದ ವರುಷ.
ಕಳೆಯಲಾಗದಷ್ಟು ಹಿಂಸೆಯನ್ನೂ ಕೊಡಲಿಲ್ಲ.
ಉಫ್!!!

ಹೀಗೆಲ್ಲ ಕುಳಿತುಕೊಂಡು ಪಟ್ಟಿ ಮಾಡುವುದು ಚೆನ್ನಿರುತ್ತದೆ ಅಲ್ಲವೆ? ನೀವು ಯಾವಾಗಲಾದರು ಹೀಗೆ ಕಳೆದ ವರುಷವನ್ನು ಅವಲೋಕಿಸಿದ್ದೀರ? ಇನ್ನೂ ಸಮಯವಿದೆ. ಒಂದು ಖಾಲಿಹಾಳೆ, ಲೇಖನಿ ಎದುರಿಗಿಟ್ಟುಕೊಳ್ಳಿ. ನಿಮ್ಮ ಕಳೆದ ವರುಷದ ಅನುಭವಗಳನ್ನೆಲ್ಲ ಒಂದೊಂದಾಗಿ ಪಟ್ಟಿಮಾಡಿ. ಹಳೆಯದರೊಡಗೂಡಿ ಹೊಸ ವರುಷವನ್ನು ಸ್ವಾಗತಿಸಿ. ಹಗುರವೆನ್ನಿಸಬಹುದು. ನಿಮಗಾಗಿ ಹಿಬ್ರೂ ಬೈಬಲ್ಲಿನ ಭಾಗವೊಂದನ್ನು ಅನುವಾದಿಸಿ ನೀಡುತ್ತ ಇದ್ದೇನೆ.

ಎಲ್ಲದಕು ಸರಿಯಾದ ಕಾಲವೊಂದಿರುವುದು,
ಮತ್ತು ಸ್ವರ್ಗದಡಿಯಲಿರುವ ಎಲ್ಲದಕು ಸರಿಯಾದ ಸಮಯವೊಂದಿಹುದು:
ಹುಟ್ಟಿಗೊಂದು ಸಮಯ, ಸಾವಿಗೊಂದು ಸಮಯ;
ಬಿತ್ತಲೊಂದು ಸಮಯ, ಬೆಳೆದದ್ದ ಕೀಳಲೊಂದು ಸಮಯ;
ಕೊಲ್ಲಲೊಂದು ಸಮಯ, ಗಾಯ ವಾಸಿಯಾಗಲೊಂದು ಸಮಯ;
ಕೆಡವಲೊಂದು ಸಮಯ, ಕಟ್ಟಲೊಂದು ಸಮಯ;
ಅಳುವಿಗೊಂದು ಸಮಯ, ನಗಲೊಂದು ಸಮಯ;
ಶೋಕಕ್ಕೊಂದು ಸಮಯ, ನರ್ತಿಸಲೊಂದು ಸಮಯ;
ಕಲ್ಲುಗಳ ಬಿಸಾಡಲೊಂದು ಸಮಯ, ಕಲ್ಲುಗಳ ಪೇರಿಸಿಕೊಳ್ಳಲೊಂದು ಸಮಯ;
ಅಪ್ಪಿಕೊಳಲೊಂದು ಸಮಯ, ಅಪ್ಪುಗೆಯ ನಿರಾಕರಿಸಲೊಂದು ಸಮಯ;
ಪಡೆಯಲೊಂದು ಸಮಯ, ಕಳೆದುಕೊಳಲೊಂದು ಸಮಯ;
ಉಳಿಸಲೊಂದು ಸಮಯ, ಎಸೆಯಲೊಂದು ಸಮಯ;
ಹರಿಯಲೊಂದು ಸಮಯ, ಹೊಲಿಯಲೊಂದು ಸಮಯ;
ಮೌನಕೊಂದು ಸಮಯ, ಮಾತಿಗೊಂದು ಸಮಯ;
ಪ್ರೀತಿಗೊಂದು ಸಮಯ, ದ್ವೇಷಕೊಂದು ಸಮಯ;
ಕದನಕೊಂದು ಸಮಯ, ಶಾಂತಿಗೊಂದು ಸಮಯ.
- ಎಕ್ಲೆಸಿಯಾಸ್ಟೆಸ್ 3:1-8

ಚಿತ್ರ: www.digital-photography-school.com

P.S. As I was scrolling through top ten blogs on my dashboard this evening, spotted avisblog proclaiming Benazir Bhutto’s assassination. Could not believe she came back to her homeland for this gruesome fate. Remembered her father’s death which only matched hers. Whatever she was, she had the credit of being the first woman leader of a fundamentalist-dominated country. She spent her years of exile with painful dignity. Nobody deserved her fate. May her soul rest in peace. May no innocent soul of her country be punished or victimized in the aftermath. 

Comments (4)

ಸ್ಪಿರಿಟ್ ಆಫ್ ಕ್ರಿಸ್ಮಸ್

royal-christmas-candleholder-twig-jpg1.jpg

‘ರೋಶನ್ ಹುಯೀ ರಾತ್
ವೋ ಆಸ್ಮಾ ಸೇ
ಉತರ್ ಕೇ ಜಮೀಂ ಪೆ ಆಯಾ..’

2004 ಡಿಸೆಂಬರ್ 24ರ ರಾತ್ರಿ. ಮೈಸೂರಿನ ಸೆಂಟ್ ಫಿಲೊಮಿನಾಸ್ ಚರ್ಚಿನಲ್ಲಿ ಮಧ್ಯರಾತ್ರಿಯ ಪ್ರಾರ್ಥನೆ ನಡೆಯುತ್ತ ಇತ್ತು. ನಾನು, ಅಪ್ಪ, ಹೇಮಂತ ಹೊರಗೆ ನಿಂತುಕೊಂಡು ಚಳಿಯನ್ನ, ಎಲ್ಲ ಕಡೆ ಆವರಿಸಿಕೊಂಡಿದ್ದ ಕ್ರಿಸ್ಮಸ್ ಹುಮ್ಮಸ್ಸನ್ನು ಮೆಲ್ಲುತ್ತ ಆನಂದಿಸುತ್ತ ನಿಂತುಕೊಂಡಿದ್ದೆವು. ಇದು ನಾವು ಪ್ರತಿ ವರುಷವೂ ತಪ್ಪದೆ ಮಾಡುವ ಕೆಲಸ. ಮಧ್ಯರಾತ್ರಿ ಸರಿಯಾಗಿ ಅಲ್ಲಿಗೆ ಧಾವಿಸಿ ಬರುವ ಸ್ನೇಹಿತರಿಗೆಲ್ಲ ‘ಹ್ಯಾಪಿ ಕ್ರಿಸ್ಮಸ್!’ ಹೇಳಬೇಕು. ಚರ್ಚಿನಲ್ಲಿ ಹಾಡುವ ಸುಮಧುರ ಕ್ಯಾರೊಲುಗಳನ್ನು ಕೇಳಬೇಕು. ನಾವು ಆ ಯಮಚಳಿಯಲ್ಲಿ ನಿದ್ದೆಗೆಟ್ಟುಕೊಂಡು ಚರ್ಚಿನಲ್ಲಿ ಆ ಹೊತ್ತು ಇರಬೇಕು ಎಂದು ಯಾರೂ ನಿಯಮಿಸಿಲ್ಲ. ಆದರೆ ಒಮ್ಮೆ ಆ ರಾತ್ರಿಯ ಗುಂಗು ಹತ್ತಿದರೆ ಬಿಡದು. ಪುನಃ ಮುಂದಿನ ವರ್ಷ ಆ ರಾತ್ರಿ ಯಾವಾಗ ಬರುತ್ತದೊ ಎಂದು ಕಾಯುವ ಹಾಗಾಗುತ್ತದೆ. ಆಗಷ್ಟೆ ವಿನಯ್, ನವೀನ್, ಸುನಿ, ಅರುಣ್ ಎಲ್ಲ ಬಂದು ಕೋತಿಗಳ ಥರ ಕುಣಿದಾಡಿ ‘ಒಂದ್ ರೌಂಡ್ ಬೀಟ್ಸ್ ಹೊಡ್ಕೊಂಡ್ ಬರ್ತೀವ್ ಮಾ!’ ಎಂದು ಓಡಿಹೋಗಿದ್ದರು. ನಾವು ಹೊರಗಿದ್ದ ಗೋದಲಿಯ ಬಳಿ ಸುಮ್ಮನೆ ಕುಳಿತುಕೊಂಡಿದ್ದೆವು. ಸ್ವೆಟರು ಟೋಪಿಗಳೊಳಗೆ ಮುಳುಗಿಹೋಗಿದ್ದ ನನ್ನ ಮಗಳು ಅಲ್ಲೆ ಸುತ್ತಮುತ್ತ ಕುಣಿದು ಕುಪ್ಪಳಿಸುತ್ತ ಇದ್ದಳು. ಆಕೆ ಕಂಡಕಂಡವರಿಗೆಲ್ಲ ಹ್ಯಾಪಿ ಕ್ರಿಸ್ಮಸ್ ಹೇಳುವುದನ್ನು ನೋಡುತ್ತ ಕುಳಿತಿದ್ದ ಒಬ್ಬಾತ ಇದ್ದಕ್ಕಿದ್ದ ಹಾಗೆ ಎದ್ದು ’ನೀನೇಮ್ಮಾ ಕರ್ನಾಟಕದ ಮುಂದಿನ ಮುಖ್ಯಮಂತ್ರಿ!’ ಎಂದು ಜೋರಾಗಿ ಘೋಷಿಸಿದ. ನಾವುಗಳು ಈ ಭವಿಷ್ಯವಾಣಿಯನ್ನು ಅರ್ಧ ಸಂತಸ, ಅರ್ಧ ಆತಂಕದಿಂದ ಸ್ವೀಕರಿಸಿ ಒಬ್ಬರೊಬ್ಬರ ಮುಖ ನೋಡುತ್ತ ಮುಸಿಮುಸಿ ನಗುತ್ತಿದ್ದೆವು.

ಹನ್ನೆರಡು ಗಂಟೆಗೆ ಐದು ನಿಮಿಷಗಳಿದ್ದುವೇನೊ. ಇದ್ದಕ್ಕಿದ್ದ ಹಾಗೆ ಗೋದಲಿಯ ಮೇಲೆ ಹೊದಿಸಿದ್ದ ಹುಲ್ಲಿನ ಮೇಲೆ ಬೆಳಕು ಕಂಡ ಹಾಗಾಯಿತು. ಅಪ್ಪ, ಹೇಮಂತರನ್ನು ಕರೆದು ತೋರಿಸಿದೆ. ಅಲಂಕಾರಿಕ ವಿದ್ಯುದ್ದೀಪಗಳಿಗಾಗಿ ಬಳಸಿದ್ದ ವೈರೊಂದು ಕಳಚಿಕೊಂಡು ನಿಧಾನವಾಗಿ ಬೆಂಕಿ ಹೊತ್ತಲು ಆರಂಭವಾಗಿತ್ತು. ಕೂಡಲೆ ಓಡಿಹೋಗಿ ವಾಚ್ಮನ್ನನನ್ನು ಕರೆತಂದೆ. ಜನ ಗುಂಪು ಸೇರಲಾರಂಭಿಸಿದರು. ಬೆಂಕಿ ಜೋರಾಗತೊಡಗಿತು. ಯಾರೊ ಒಬ್ಬ ಹುಡುಗ ಹುಲ್ಲು ತಾರಸಿಯ ಮೇಲೆ ಹತ್ತಿಯೇಬಿಟ್ಟ. ತೊಟ್ಟಿದ್ದ ಜರ್ಕಿನನ್ನೆ ಬಿಚ್ಚಿ ಹೊಡೆಹೊಡೆದು ಬೆಂಕಿ ನಂದಿಸಿದ. ವೈರು ಎಳೆದುಹಾಕಿದ ಮೇಲೆ ಕೆಲವು ಬಕೆಟ್ ನೀರು ಹಾಕಿ ಅಳಿದುಳಿದಿದ್ದ ಬೆಂಕಿಯನ್ನು ಆರಿಸಿದರು. ಚರ್ಚಿನೊಳಗಿರುವವರಿಗೆ ಇದಾವುದರ ಅರಿವೂ ಇಲ್ಲ. ದೇವರ ಮಗ ಧರೆಯಲ್ಲಿ ಅವತರಿಸಿದ ಸಮಯದ ಆನಂದ ಅವರೆಲ್ಲರಲ್ಲಿ ತುಂಬಿಕೊಂಡಿತ್ತು. ಹನ್ನೆರಡು ಗಂಟೆ ಕಳೆದುಹೋಗಿದ್ದು ನಮಗೆ ತಿಳಿದಿದ್ದು ಎಲ್ಲರು ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡುವದನ್ನು ನೋಡಿದಾಗಲೆ. ಅಪ್ಪ ‘ಯಾಕೊ ಒಳ್ಳೆಯ ಶಕುನ ಅಲ್ಲ’ ಎಂದು ಮೆಲ್ಲನೆ ಗೊಣಗಿದರು ನನಗೆ ಕೇಳಿಯೇ ಬಿಟ್ಟಿತ್ತು. ಹೇಮಂತ, ‘ನೀವ್ಯಾಕೆ ಮುಖ ಇಳಿಸ್ಕೊಂಡಿದೀರ? ಕಮಾನ್ ಟೀನಾ, ಇಟ್ ಈಸ್ ಕ್ರಿಸ್ಮಸ್!’ ಎಂದು ನಕ್ಕ. ಚರ್ಚನ್ನು ಅಲಂಕರಿಸಿದ್ದ ಸಹಸ್ರಾರು ದೀಪಗಳೂ ಮಿನುಗುತ್ತ ನಕ್ಕವು. ನಾನೂ ನಗಲು ಪ್ರಯತ್ನಿಸಿದೆ.

ಚರ್ಚಿನಿಂದ ಮನೆಗೆ ಬಂದ ಮೇಲೂ ವಿಚಿತ್ರ ಸಂಕಟ. ಚೆನ್ನೈನಲ್ಲಿದ್ದ ಇವನಿಗೆ ಅಷ್ಟು ಹೊತ್ತಿಗೇ ಫೋನಾಯಿಸಿದೆ. ’ಹ್ಯಾಪಿ ಕ್ರಿಸ್ಮಸ್! ಯಾಕೊ ನಿಮ್ಮನ್ನೆಲ್ಲ ನೋಡಬೇಕು ಅನ್ನಿಸ್ತಿದೆ. ಆಫೀಸಲ್ಲಿ ನಾಡಿದ್ದು ಬೀಚ್ ಔಟಿಂಗ್ ಇಟ್ಕೊಂಡಿದ್ರು. ನಾನು ಮೈಸೂರಿಗೆ ಹೊರಟಿದೀನಿ ಅಂತ ಎಲ್ಲ ಸಿಟ್ಟಾಗಿದಾರೆ!’ ಅತ್ತಕಡೆಯಿಂದ ಮಾತು ಕೇಳುತ್ತ ಇತ್ತು. ಅದೂ ಇದೂ ಮಾತನಾಡಿ ಫೋನು ಇಟ್ಟೆ. ಮತ್ತೆ ಎರಡು ದಿನ ಕಳೆದದ್ದೆ ತಿಳಿಯದು. ಇಪ್ಪತ್ತೇಳನೆಯ ತಾರೀಖು ಮುಂಜಾವ ಫೋನು ಅರಚಾಡಿತು. ಆಚೆಯಿಂದ ಗುಣ ಮಾತಾಡುತ್ತಿದ್ದ. ‘ಟೀವಿ ಹಾಕಿ ನೋಡಿ. ಚೆನ್ನೈ ಸೈಡೆಲ್ಲ ಸುನಾಮಿ ಬಂದಿದೆ. ಸಚ್ಚಿನೂ ಹೆಂಡ್ತಿ ಮಗು ಸಮೇತ ಅಂಡಮಾನಿಗೆ ಹೋಗಿದಾನೆ. ಕಾಂಟಾಕ್ಟ್ ಮಾಡೋಕೇ ಆಗ್ತಿಲ್ಲ!’ ನಿದ್ದೆಯೆಲ್ಲ ಹಾರಿಹೋಯಿತು. ಟಿವಿ ಆನ್ ಮಾಡಿದರೆ ನರಕ ಎಂದರೆ ಹೀಗಿರಬೇಕು ಅನ್ನಿಸುವ ಹಾಗಿನ ದೃಶ್ಯಗಳು. ಬೆಚ್ಚಿಬೀಳಿಸುವ ವಿಡಿಯೋಗಳು. ಎಲ್ಲಿ ನೋಡಿದರಲ್ಲಿ ಮೊಸರು ಕಡೆವ ಹಾಗೆ ಎಬ್ಬುತ್ತಿರುವ ಕಡಲು. ಎಲ್ಲೆಲ್ಲು ನೀರಿನ ಸಮಾಧಿ. ಹೊಟ್ಟೆ ತೊಳಸಿದ ಹಾಗಾಗಿ ಕುಕ್ಕರಿಸಿದೆ. ನಾನು ಯಾವಾಗಲು ಶಕುನಗಳಲ್ಲಿ ವಿಶ್ವಾಸವಿಡುವವಳಲ್ಲ. ಆದರು ಯಾಕೊ ಚರ್ಚಿನ ಘಟನೆ ನೆನಪಾಯಿತು. ಇಪ್ಪತ್ತಾರರ ಬೆಳಗ್ಗೆ ಅಂಡಮಾನಿನ ಬೀಚಿನಲ್ಲಿ ಅಡ್ಡಾಡಿಕೊಂಡು ಬರಲು ಹೋದ ಸಚ್ಚಿಯ ಹೆಂಡತಿ ಮೇಘಾಳ ಹೆಣವೂ ದೊರೆತಿರಲಿಲ್ಲ. ಇವನೂ ಅಂದು ಬೀಚಿಗೆ ಹೋಗಬೇಕಾಗಿತ್ತಲ್ಲ ಎಂದು ನೆನೆಸಿ ನಡುಕ ಬಂತು.

ಜನವರಿ 2005. ವಾಪಾಸು ಇವನ ಜತೆ ಚೆನ್ನೈಗೆ ಪಯಣ. ಅಲ್ಲಿ ಮುತ್ತುಕ್ಕಾಡಿನಲ್ಲಿ ಅಡ್ಡಾಡಲು ಹೋಗಿದ್ದಾಗ ಸುನಾಮಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಬೆಸ್ತನೊಬ್ಬ ನಮ್ಮನ್ನು ತನ್ನ ಗುಡಿಸಿಲಿಗೆ ಕರೆದುಕೊಂಡುಹೋಗಿ ಉಪ್ಪುಮೀನು ಕರಿದುಕೊಟ್ಟು ಒಂದು ರಾಶಿ ಸುನಾಮಿಕಥೆಗಳನ್ನು ಹೇಳಿದ. ಆವತ್ತು ಕಡಿಮೆಯೆಂದರು ಮೂವತ್ತೈದು ಜೀವಗಳನ್ನು ಉಳಿಸಿದ್ದ ಅವನ ಮಾತುಗಳನ್ನು ಕೇಳುತ್ತ ಇದ್ದರೆ ನಾವು ಹೇಡಿಗಳು ಅನ್ನಿಸುತ್ತ ನಾಚಿಕೆ ಆಗುತ್ತ ಇತ್ತು. ಅಂದು ಆತನ ಹತ್ತಾರು ಸ್ನೇಹಿತರು ನೀರಿನಲ್ಲಿ ತೊಳೆದುಹೋದರಂತೆ. ಆದರೆ ಆತ ಹೇಳಿದ್ದು ಒಂದೇ ಮಾತು.’ಅಮ್ಮ, ನಾನೂ ಓಡಿಹೋಗಬೋದಿತ್ತು. ಆದ್ರೆ ಹಿಂದಿನ ದಿನ ಚರ್ಚಿಗೆ ಹೋಗಿಬಂದಿದ್ದೆ ನಾನು. ಶಿಲುಬೇ ಮೇಲಿರೋನು ಬೇರೆಯೋರಿಗೋಸ್ಕರ ಅಲ್ಲಿಗೆ ಹೋದ. ಅಷ್ಟು ಗೊತ್ತು. ಆವತ್ತು ನಾನು ಹಿಂದೆ ತಿರುಗಿ ನೋಡದಿದ್ದರೆ ಆಮೇಲೆ ಯಾವತ್ತೂ ಚರ್ಚಿನಲ್ಲಿ ತಲೆಯೆತ್ತಿ ನಿಲ್ಲೋಕಾಗ್ತಿತ್ತೆ?’

ವಾಪಾಸು ದಾರಿಯುದ್ದಕ್ಕು ನೂರಾರು ಪುಟ್ಟಪುಟ್ಟ ಟೆಂಟುಗಳು. ಅವುಗಳ ಸುತ್ತ ಆಡುವ ಮಕ್ಕಳು. ಬಟ್ಟೆ, ಆಹಾರ ಹೊತ್ತು ತರುವ ವ್ಯಾನುಗಳು. ಸಕ್ಕರೆಯಂಥ ಮರಳು. ಕೆಂಪಗೆ ಹೊಳೆವ ಕಡಲು. ಆ ಹೊತ್ತು, ಆ ಸಂಜೆ ನಾನು ಸಂಪೂರ್ಣವಾಗಿ ನನ್ನನ್ನು ನಂಬಲು ತೊಡಗಿದೆ. ಎಲ್ಲದಕ್ಕು ಸರಿಯಾದ ಉತ್ತರಗಳಿರುವುದಿಲ್ಲ ಎಂಬುದನ್ನು ಕೂಡಾ.

Comments (4)

ಹೀಗೊಂದು ಬಾಲ್ಯಕಾಲದ ದಿನ…

f_06461.jpg

 ಮಸಳಿ ಡಾಕ್ಟರು ನನ್ನ ಗದ್ದಕ್ಕೆ ಹೊಲಿಗೆ ಹಾಕಿದ ಪ್ರಸಂಗವನ್ನ ಇನ್ನಾವಾಗಲಾದರು ಹೇಳುವೆ. ಆದರೆ ಆ ದಿನದಿಂದ ನನಗೆ ಶ್ರೀಮಾನ್ ಮಸಳಿಯವರು ಮಾರ್ಕೆಟಿನ ಕಟುಕನಂತೆಯೂ, ಸರ್ಕಾರೀ ಆಸ್ಪತ್ರೆ ನನ್ನಂಥ ಬಡಪಾಯಿ ಕುರಿಗಳನ್ನು ಬಲಿಕೊಡಲು ಕಟ್ಟಿರುವ ಕಸಾಯಿಖಾನೆಯಂತೆಯೂ ಕಾಣತೊಡಗಿದ್ದರಲ್ಲಿ ಯಾವ ವಿಶೇಷವೂ ಇಲ್ಲ. ಉತ್ತರ ಕರ್ನಾಟಕದವರಾದ ಅವರ ಹೆಸರನ್ನು ಸರಿಯಾಗಿ ಹೇಳಲು ಬರದ ನಮ್ಮೂರಿನವರು ಅವರನ್ನು ‘ಮೊಸಳೆ ಡಾಕ್ಟರು’ ಎಂದೇ ಕರೆಯುತ್ತಿದ್ದುದು. ಆಗ ಬಹಳಷ್ಟು ಮಕ್ಕಳು ಡಾಕ್ಟರಲ್ಲಿಗೆ ಹೋಗಬೇಕೆಂದರೆ ಬೆಚ್ಚಿಬೀಳುವ ಪರಿಸ್ಥಿತಿ. ಈಗ ಮಕ್ಕಳ ಪ್ರತಿಯೊಂದು ಕಾಯಿಲೆಗೂ ಸಪರೇಟು ತಜ್ನರಿದ್ದಾರೆ. ಅವರೆಲ್ಲ ಇಂದಿನ ನವೀನ ಮ್ಯಾನೇಜ್ಮೆಂಟ್ ವಿಧಾನಗಳನ್ನು ಬಳಸಿ ಮಕ್ಕಳಲ್ಲಿ ‘ತಾವು ಬಂದಿರುವುದು ಡಾಕ್ಟರ ಬಳಿಗಲ್ಲ, ಯಾರೊ ನೆಂಟರ ಮನೆಗೆ’ ಎಂಬ ಭ್ರಮೆ ಮೂಡಿಸಿ ಚಿಕಿತ್ಸೆ ನೀಡಿಬಿಡುತ್ತಾರೆ. ಆಗ ನಮಗೆ ಆ ಸೌಭಾಗ್ಯ ಲಭ್ಯವಿರಲಿಲ್ಲ. ಮಸಳಿಯವರು ಬಹಳ ಒಳ್ಳೆಯ ವೈದ್ಯರೆಂದು ಹೆಸರುವಾಸಿಯಾಗಿದ್ದರು. ಹಾಗಾಗಿ ನಮ್ಮ ತುಡುಗುಬುದ್ಧಿಯ ದುಷ್ಪರಿಣಾಮಗಳಾದ ಕಾಯಿಲೆಗಳು ತೋರಿದಾಗ ಮಸಳಿಯವರನ್ನು ಬಿಟ್ಟು ಬೇರಾವ ದಾರಿಯೂ ಇರಲಿಲ್ಲ. ಆಸ್ಪತ್ರೆಯ ಪರೀಕ್ಷಾ ಕೋಣೆಯಲ್ಲಿ ಕಾಣುತ್ತಿದ್ದ ಚಿತ್ರವಿಚಿತ್ರ ಪರಿಕರಗಳು, ಅಲ್ಲಿಯ ವಾತಾವರಣ, ಎಲ್ಲಕಿಂತ ಹೆಚ್ಚಾಗಿ ಸ್ಟೀಲು ಡಬ್ಬವೊಂದರಲ್ಲಿ ಕೊತಕೊತ ಕುದಿಯುತ್ತಿದ್ದ ಸಿರಿಂಜುಗಳು ನಮ್ಮಲ್ಲಿ ಎಲ್ಲಿಲ್ಲದ ಭಯ ಮೂಡಿಸುತ್ತ ಇದ್ದವು. ನಾನಂತು ಆಸ್ಪತ್ರೆಯ ಬಳಿಯ ದಾರಿಗಳನ್ನು ಆದಷ್ಟು ಕಡಿಮೆ ಬಳಸುತ್ತಿದ್ದೆ.

ಹೀಗೆಲ್ಲ ನಾವು ಆಸ್ಪತ್ರೆಯಿಂದ ದೂರವಿರಲು ಯತ್ನಿಸುತ್ತ ಇರುವಾಗ ಒಂದು ಸುಂದರ ಮುಂಜಾವ ನನಗೆ ‘ಕಣ್ಣಾಕುಟಿಗೆ’ ಎಂಬ ಪುಟ್ಟ ತೊಂದರೆ ಅಮರಿಕೊಂಡಿತು. ಇದು ‘ಮದ್ರಾಸ್ ಐ’ ಅಲ್ಲ. ಇದರಲ್ಲಿ ಕಣ್ಣಿನ ಯಾವುದಾದರು ಭಾಗ ಊದಿಕೊಂಡು ಹಿಂಸೆ ನೀಡಲು ಶುರುವಿಡುತ್ತದೆ. ಈ ಸಾರಿ ನನ್ನ ಕಣ್ಣೊಳಗೇ ಊತವಾಗಿ ಅಮ್ಮ ನನ್ನನ್ನು ‘ಡಾಕ್ಟರ ಹತ್ರ ಹೋಗಿಬಾ’ ಎಂದು ತಂಗಿಯನ್ನು ಜತೆಮಾಡಿ ಕಳಿಸಿದರು. ನಾನು ಆಸ್ಪತ್ರೆಗೇ ಹೋದೆನೆಂದು ಖಚಿತಪಡಿಸಬೇಕಲ್ಲ! ನಾವು ಒಬ್ಬರನ್ನೊಬ್ಬರು ದಾರಿಯುದ್ದಕ್ಕು ತಳ್ಳಾಡಿಕೊಂಡು ಬರುತ್ತ ಇರುವಾಗ ತಂಗಿಯ ಸ್ನೇಹಿತೆಯೊಬ್ಬಳು ಸಿಕ್ಕಿದಳು. ಎಷ್ಟಾದರು ವಯಸ್ಸಿನಲ್ಲಿ ಸಣ್ಣವು. ಅವುಗಳ ಹತ್ತಿರ ಏನು ಮಾತು? ಅವರನ್ನು ಮಾತನಾಡಲು ಬಿಟ್ಟು ನಾನು ಆಸ್ಪತ್ರೆಯ ಕಾಂಪೌಂಡಿನೊಳಗೆ ಓಡಿದೆ. ಸಣ್ಣಗೆ ಮಳೆ ಹನಿಯಲು ಆರಂಭವಾಗಿತ್ತು. ಆಲ್ಲಿಯೆ ಒಂದು ಚಕ್ಕಡಿಯ ಸುತ್ತ ಸುಮಾರು ಜನರು ಸೇರಿಕೊಂಡಿದ್ದರು. ನಾನೂ ಕುತೂಹಲದಿಂದ ಇಣುಕಿದೆ. ಅಷ್ಟೆ.

ನನ್ನ ಜೀವಮಾನದಲ್ಲಿಯೆ ಅಲ್ಲಿಯತನಕ ಕಂಡಿರದಾಗಿದ್ದ ಅತ್ಯಂತ ಭಯಾನಕ ದೃಶ್ಯ ಅದು. ಚಾಪೆಯ ಮೇಲೆ ಮಲಗಿಸಿದ್ದ ಹೆಂಗಸೊಬ್ಬಳನ್ನು ಜನರು ಚಕ್ಕಡಿಯಿಂದ ಕೆಳಗಿಳಿಸುತ್ತಿದ್ದರು. ಆ ಹೆಂಗಸಿನ ಮೈಯ ಪ್ರತಿಯೊಂದು ಇಂಚೂ ಸುಟ್ಟುಹೋಗಿತ್ತು. ಆಕೆಯ ಅರೆಪ್ರಜ್ನೆಯ ನರಳಾಟ ಕೇಳಲಾಗುತ್ತಿರಲಿಲ್ಲ. ಆಕೆಯ ಮೈಮೇಲೊಂದು ಹತ್ತಿಯ ಬಟ್ಟೆಯನ್ನು ಸುತ್ತಲಾಗಿತ್ತು. ಮೈಯಿಂದ ಏನೇನೋ ದ್ರವಗಳು ಒಸರುತ್ತಿದ್ದವು. ಕೂದಲೆಲ್ಲ ಸುಟ್ಟುಹೋಗಿ ವಿಕಾರವಾಗಿ ಕಾಣುತ್ತಿದ್ದ ಆಕೆಯ ಬಳಿ ಕೈಕಾಲು ಮಾತ್ರ ಸುಟ್ಟಿದ್ದ ವ್ಯಕ್ತಿಯೊಬ್ಬ ಕುಳಿತು ಏನೇನೋ ಬಡಬಡಿಸುತ್ತಿದ್ದ. ಜನರು ಆತನನ್ನು ಸಂತಯಿಸಲು ಪ್ರಯತ್ನಿಸುತ್ತಿದ್ದರೆ ಆತ ಪ್ರಪಂಚದ ಅರಿವೇ ಇಲ್ಲದಹಾಗೆ ಆಕೆಯನ್ನೆ ದಿಟ್ಟಿಸುತ್ತ ಕುಳಿತುಬಿಟ್ಟಿದ್ದ. ಆತನ ಮಾತುಗಳು ಆಕೆಯ ರೋದನದಷ್ಟೆ ಅಸ್ಪಷ್ಟವಾಗಿದ್ದವು. ಅವಕ್ಕೆ ಅರ್ಥವೇ ಇರಲಿಲ್ಲ. ಇದ್ದರೂ ಅದು ನಮ್ಮನ್ನೆಲ್ಲ ಮೀರಿದ್ದು ಅನ್ನಿಸುವ ಹಾಗಿತ್ತು. ಅಲ್ಲಿದ್ದ ಯಾರನ್ನೊ ಕೇಳಿದೆ -’ ಏನಾಯ್ತು? ’. ಅವರು ಸೊಟ್ಟಮುಖ ಮಾಡಿದರು.’ಚೆನ್ನಾಗೇ ಇದ್ರು. ಅದೇನಾಯ್ತೊ? ಇವುಳು ಸೀಮೆಣ್ಣೆ ಹಾಕ್ಕೊಂಡು ಸುಟ್ಕೊಂಡ್ಲು. ಇವ್ನು ಉಳ್ಸೋಕೋದ. ಇವ್ನೂವೆ ಸುಟ್ಕೊಂಡ. ಬೇಕಿತ್ತ ಇದು?’

ಸುಮ್ಮನೆ ಒಳಹೋದೆ. ಡಾಕ್ಟರು ಒಳಬರಲು ಸನ್ನೆ ಮಾಡಿದರು. ಕಣ್ಣು ತೋರಿಸಿ, ಇಂಜೆಕ್ಷನ್ ಕೊಡ್ತೀರ? ಕೇಳಿದೆ. ಡಾಕ್ಟರು ನಕ್ಕು ಆಯಿಂಟ್ಮೆಂಟು ಕೊಟ್ಟು ಕಳಿಸಿದರು. ಹೊರಬಂದರೆ ಮತ್ತದೇ ಸುಟ್ಟವಾಸನೆ. ನರಳಾಟ. ಡಾಕ್ಟರು ’ಇಲ್ಲಿ ಆಗಲ್ಲ. ಬರ್ನ್ಸ್ ಪರ್ಸೆಂಟೇಜು ಜಾಸ್ತಿಯಿದೆ. ಮಣಿಪಾಲಿಗೆ ಕರ್ಕೊಡೋಗಿ. ನಾನು ಲೆಟರ್ ಕೊಡ್ತೀನಿ’ ಎನ್ನುತ್ತ ಇದ್ದರು. ಸುಟ್ಟುಕೊಂಡವಳ ಗಂಡ ಅಂಗಲಾಚುತ್ತಿದ್ದ. ತನ್ನ ಕೈಕಾಲುಗಳ ಸುಟ್ಟಗಾಯ ತೋರಿಸಿ ಏನೇನೊ ಬಡಬಡಿಸುತ್ತಿದ್ದ. ಪ್ರಯೋಜನವಿಲ್ಲವೆಂದು ತಿಳಿದಿದ್ದರೂ…

’ಇಲ್ಯಾಕಮ್ಮ ನಿಂತಿದೀಯ? ಇದೆಲ್ಲ ಮಕ್ಕಳು ನೋಡ್ಬಾರ್ದು. ನಡಿನಡಿ’ ಗುರುತಿನ ನರ್ಸೊಬ್ಬರು ಬೈದರು. ಹೊರಬಂದು ತಂಗಿಯನ್ನೆಳೆದುಕೊಂಡು ಹೊರಟೆ. ಆಕೆಗೆ ಅದಾವುದೂ ಕಾಣಲಿಲ್ಲವೆಂಬ ವಿಚಿತ್ರ ಸಮಾಧಾನ.

ಈವತ್ತು ಬೆಳಜಾವ ಆಸ್ಪತ್ರೆಯ ಕನಸು. ಬಿಳಿಬಿಳಿ ಆಸ್ಪತ್ರೆ. ತಿಳಿಹಳದಿ ಬಣ್ಣದ ಕಾಂಪೌಂಡು. ಕಾಂಪೌಂಡಿನ ಕಪ್ಪುಮಣ್ಣಿನ ಮಳೆತೇವದ ಭೂಮಿ. ಭೂತಾಕಾರದ ಮರಗಳು. ಬಿಳಿಬಟ್ಟೆಯ ನರ್ಸುಗಳು. ಮಸಳಿ ಡಾಕ್ಟರು. ಉದ್ದುದ್ದ ಕಾರಿಡಾರುಗಳು. ಕಲ್ಲುಮೆಟ್ಟಿಲುಗಳು. ಕುಂಟುಗಾಲಿನ ಕಾಂಪೌಂಡರು. ಬಿಳಿಬಿಳಿ ಹಾಸಿಗೆಗಳು. ಕೆಂಪು ಕಂಬಳಿಗಳು. ಪಾಚಿಯ ವಾಸನೆ… ಎಲ್ಲವೂ ಆಗ ಇದ್ದಂತೆಯೆ. ನಾನು ಅಲ್ಲೆಲ್ಲ ಓಡಾಡುತ್ತಿರುವಂತೆ..

ಎಚ್ಚರವಾಯಿತು. ಎರಡು ನಿಮಿಷ ಸುಮ್ಮನೆ ಕೂತುಕೊಂಡೆ. ಯಾಕೊ, ಮಸಳಿ ಡಾಕ್ಟರು ನೆನಪಾಗಿ ನಕ್ಕೆ. ಅವರು ನನ್ನ ಗದ್ದಕ್ಕೆ ಹಾಕಿದ ಹೊಲಿಗೆಯ ಗುರುತನ್ನೊಮ್ಮೆ ಮುಟ್ಟಿಕೊಂಡೆ. ಬಾಯಾರಿದ ಹಾಗೆನಿಸಿತು. ಅಂದು ಸುಟ್ಟುಕೊಂಡಿದ್ದ ಹೆಂಗಸು ಏನಾದಳೊ ಎಂದುಕೊಳ್ಳುತ್ತ ನೀರು ಗುಟುಕರಿಸಿದೆ.
 

ಚಿತ್ರ: ‘Ward in the hospital in Arles’ from www.vggallery.com

Comments (7)

My English Blog.

Dear readers,

I was reminded by a fellow blogger that I have an English blog and I should be updating it. I have just uploaded something on my blog www.tindrum.wordpress.com. The link to this page is on my blogroll which appears as ‘Nanna Aangla Puta’. I decided I should give it some publicity as it is an integral part of media biz nowadays! You fellows keep us alive and writing with your comments and observations. Do care to tell me what you think of it. So far, great journey!

 - affection, Tina.

Comments

ನಾವು ಪಯಣಿಸುವ ಹಾದಿ.

I travel Not to go anywhere, but to go. I travel for travel’s sake. The great afair is to move. - Robert Louis Stevenson.
ಎಲ್ಲಿಗಾದರು ಪ್ರಯಾಣ ಹೊರಡಬೇಕೆಂದರೆ ಅಮ್ಮನಿಗೆ ಪರದಾಟ ಶುರು. ಸೂಟ್ ಕೇಸುಗಳ ಜತೆ ವ್ಯಾನಿಟಿಬ್ಯಾಗಿನಲ್ಲಿ ಒಂದು ಬಂಡಲು ಪ್ಲಾಸ್ಟಿಕ್ ಚೀಲಗಳು, ಅವಾಮಿನ್ ಮಾತ್ರೆಗಳು. ಮೂವರು ಮಕ್ಕಳು. ಬಸ್ಸು ಹೊರಟು ಎರಡು ಕಿಲೋಮೀಟರು ಕಳೆದಿರಲಿಕ್ಕಿಲ್ಲ, ನನ್ನ ಹೊಟ್ಟೆತೊಳೆಸಲು ಶುರು. ಉದ್ಘಾಟನೆ ನನ್ನದಾದರೆ ವಂದನಾರ್ಪಣೆ ತಮ್ಮನದು. ‘ಯಾಕಾದರು ಪ್ರಯಾಣ ಹೊರಟೆವೊ’ ಎಂದು ಅಪ್ಪ, ಅಮ್ಮ ಪ್ರತಿಸಾರಿ ಶಪಿಸಿಕೊಳ್ಳುವ ಹಾಗೆ ನಮ್ಮ ಕಳಾಹೀನ ಮೂತಿಗಳು. ಅವರು ನಗುಮುಖದಲ್ಲಿ ಪ್ರಯಾಣಿಸಲು ನಾವು ಎಂದೂ ಬಿಡಲಿಲ್ಲ. ಬಸ್ಸಿನ ವಾಸನೆಯೆಂದರೆ ಎಷ್ಟೋ ವರುಷಗಳವರೆಗೆ ದೂರ ಓಡುತ್ತಿದ್ದೆ. ಕಿಟಕಿಸೀಟು ಸಿಗದೆಹೋದರೆ ಮುಂದಿನ ಬಸ್ಸಿಗೆ ಕಾಯಬೇಕಾಗಿ ಬಂದರು ಸರಿಯೆ, ಇಳಿದುಬಿಡುತ್ತಿದ್ದವಳು ನಾನು.

lykiardseasidevillagefromabove24-21.jpg

ಬಾಬಿ ಶಿನ್ ತನ್ನ ಚೈನಾದ ರೆಸ್ತುರಾ ಬಿಟ್ಟು ಭಾರತ, ಸಿಂಗಪೂರ್, ಮಲೇಶಿಯಾ ಮೊದಲಾದೆಡೆ ತುಂಟಹುಡುಗನ ಹಾಗೆ ತಿರುಗುತ್ತ ಪ್ರಾದೇಶಿಕ ತಿನಿಸುಗಳ ತಯಾರಿಕೆಯ ಬಗ್ಗೆ ಮಾಹಿತಿ ಪಡೆಯುತ್ತಾನೆ. ಡಿಸ್ಕವರಿ ‘ಟ್ರಾವೆಲ್ ಎಂಡ್ ಲಿವಿಂಗ್’ ನೋಡುವವರೆಲ್ಲರಿಗೂ ಈತ ‘ವರ್ಲ್ಡ್ ಕೆಫೆ ಏಶಿಯಾ’ ಕಾರ್ಯಕ್ರಮವನ್ನು ಪ್ರಸ್ತುತಪಡಿಸುವವ. ಆದರೆ ಆತನ ತುಂಟತನ, ಪ್ರಯಾಣವನ್ನು ಹಾಸ್ಯಮಿಶ್ರಿತ ಶೈಲಿಯಲ್ಲಿ ಸಾದರಪಡಿಸುವ ಬಗೆ ನಗೆಯುಕ್ಕಿಸುತ್ತದೆ. ಇದೇ ಚ್ಯಾನೆಲ್ಲಿನ ಇನ್ನೊಂದು ಕಾರ್ಯಕ್ರಮ ‘ಗ್ಲೋಬ್ ಟ್ರೆಕರ್’ನ ಇಯಾನ್ ರೈಟ್ ‘ಡಿಸ್ಕವರಿ’ಯ ಆರಂಭದ ದಿನಗಳಿಂದಲು ಪ್ರಪಂಚದ ಮೂಲೆಮೂಲೆಗಳಲ್ಲಿ ಅಲೆದಾಡುತ್ತಲೆ ಇದ್ದಾನೆ. ಈತ ನೋಡದ ಸ್ಥಳಗಳಿಲ್ಲ, ತಿನ್ನದ ತಿನಿಸುಗಳಿಲ್ಲ. ತನ್ನ ಹುಡುಗುಬುದ್ಧಿಗೆ ಪ್ರಖ್ಯಾತನಾಗಿರುವ ಇಯಾನ್ ಈಗಂತೂ ಥೇಟು ಯಾವುದೋ ಬುಡಕಟ್ಟಿನ ಅಲೆಮಾರಿಯ ಥರವೇ ಕಾಣುತ್ತಾನೆ!
***
ನಾನು ಮನೆಯ ಟಿ.ವಿ. ಪರದೆಯಲ್ಲಿ ಇವರನ್ನು ನೋಡುತ್ತ ನಾನು ಪ್ರಯಾಣವನ್ನು ಯಾವಾಗ ಎಂಜಾಯ್ ಮಾಡಲು ಆರಂಭಿಸಿದೆ ಎಂದು ಯೋಚನೆ ಮಾಡುತ್ತಿದ್ದೇನೆ. ಬಹುಶಃ ಡಿಗ್ರಿಯ ಕೊನೆ ವರುಷದಲ್ಲಿ. ಆಗೆಲ್ಲ ಶಿವಮೊಗ್ಗೆಯಿಂದ ಮನೆಗೆ ಒಬ್ಬಳೆ ಓಡಾಡತೊಡಗಿದೆ. ಜೊತೆಗೆ ಬೇಗ ಕಾಲೇಜು ತಲುಪಲು ಮಾಡಿದ ಸಿಟಿಬಸ್ಸಿನ ಸಹವಾಸ ಕೂಡ ನನ್ನ ತೊಂದರೆಯನ್ನು ಕಡಿಮೆ ಮಾಡಿತು. ನೂರೆಂಟು ತಿರುವುಗಳ ಹಾದಿ. ಖಾಲಿ ಬಸ್ಸುಗಳು. ಮಾತು ನಿಲ್ಲಿಸದ ಕಂಡಕ್ಟರುಗಳು. ಕಿಟಕಿಗಳಿಂದ ತೇಲಿಬರುತ್ತಿದ್ದ ಕಾಫಿತೋಟಗಳ ಪರಿಮಳ.. ಅರೆನಿದ್ದೆ, ಅರೆಎಚ್ಚರಗಳ ನಡುವಿನ ವಿಚಿತ್ರಸ್ಥಿತಿಯಲ್ಲಿ ತೇಲಾಡುವ ನಾನು.. ಆಗಿನಿಂದಲೆ ಇರಬೇಕು ನನಗೆ ಪ್ರಯಾಣ ಪ್ರಿಯವಾಗತೊಡಗಿದ್ದು. ಅನಾಮಿಕ ಪ್ರಯಾಣ ನೀಡುವ ಸಂತಸ, ಏಕಾಂತ, ಯೋಚಿಸಲು ಅವಕಾಶ, ಇನ್ನೆಲ್ಲು ದೊರಕದು. ಸುಮ್ಮನೊಂದು ಬಸ್ಸೋ, ಟ್ರೈನೋ ಹತ್ತಿದರಾಯಿತು.. ಎಲ್ಲ ಗದ್ದಲ ಗೌಜಿ ರಶ್ಶುಗಳ ನಡುವೆಯೂ ನನಗೆ ನನ್ನದೊಂದು ಪುಟ್ಟ ಗೂಡು ದೊರಕಿಬಿಡುತ್ತದೆ. ಕಿವಿಯಲ್ಲಿ ಶಾನ್ ಗುನುಗುನಿಸುತ್ತಾನೆ - ’’ಆವೋ, ಮೀಲೋಂ ಚಲೇಂ, ಜಾನಾ ಕಹಾಂ ನಾ ಹೋ ಪತಾ..”
**
ನಮ್ಮ ಪುರಾಣಗಳಲ್ಲಿ ಪ್ರಯಾಣಕ್ಕೆ ಬಹಳ ಅರ್ಥಗಳಿವೆ. ಹೆಚ್ಚಿನ ಅಜ್ಜೀಕಥೆಗಳಲ್ಲಿ ನಾಯಕ, ನಾಯಕಿಯರು ತಮಗೆ ಬೇಕಾದ್ದನ್ನು ಪಡೆದುಕೊಳ್ಳಲು ಏಳುಸಮುದ್ರ, ಏಳುದೇಶ ದಾಟುತ್ತಾರೆ. ಪಾಂಡವರ ಮಹಾಪ್ರಸ್ಥಾನದ ಕಥೆಯನ್ನು ಇಂದು ಕೇಳಿದರೂ ಹೊಸ ಅರ್ಥಗಳು ಹುಟ್ಟಿಕೊಳ್ಳುತ್ತವೆ. ಕಾಲಾನುಕಾಲದಿಂದಲು ಪ್ರವಾಸಿಗರು ತಮ್ಮ ಅನುಭವಗಳನ್ನು ಬರೆದಿಡುವುದರ ಮೂಲಕ ಮಾನವ ಇತಿಹಾಸದ ಬೆಳವಣಿಗೆಗೆ ನೀರೆರೆದು ಪೋಷಣೆ ಮಾಡಿದ್ದಾರೆ. ಶತಮಾನವೊಂದರ ಹಿಂದೆ ಒಂದೂರಿನಿಂದ ಇನ್ನೊಂದೂರಿಗೆ ಚಕ್ಕಡಿಯ ಮೇಲೆ ಪ್ರಯಾಣಿಸುವುದೇ ದೊಡ್ಡದಾಗಿದ್ದರೆ ಇಂದು ಭೂಮಿಯಿಂದ ಚಂದ್ರನೆಡೆಗೆ ಮಿಲಿಯನ್ನುಗಟ್ಟಲೆ ಹಣತೆತ್ತು ಪ್ರಯಾಣ ಮಾಡುವ ಜನರಿದ್ದಾರೆ. ಒಂದು ಆಯಾಮದಿಂದ ಇನ್ನೊಂದು ಆಯಾಮಕ್ಕೆ ಪ್ರಯಾಣದ ಬಗ್ಗೆ ಹಲವಾರು ಪ್ರಯೋಗಗಳು ನಡೆಯುತ್ತಿವೆ.
***
ಪ್ರಯಾಣಗಳು ನಮ್ಮ ಪಾಲಿಗೆ ವಿಶೇಷವಾಗುವುದು ಅವುಗಳು ನೀಡುವ ಹೊಸ ಅನುಭೂತಿಗಳ, ಹೊಸ ಬಣ್ಣಗಳ, ಹೊಸ ರುಚಿ, ವಿಚಾರಗಳ ಮೂಲಕ. ಒಂದೆಡೆ ನಿಂತ ನೀರಾಗುವುದರಿಂದ ಅವು ನಮ್ಮನ್ನು ತಡೆಯುತ್ತವೆ. ನಾವು ಪಯಣಿಸಿದ ದಾರಿಗಳ ಪರಿಮಳ ನಮ್ಮೊಂದಿಗೆ ಇರದು. ನಿಜ. ಆದರೆ ಆ ಪರಿಮಳವನ್ನು ಪುನಃ ಇನ್ನೊಂದೆಡೆ ಆಘ್ರಾಣಿಸುವ ತುಡಿತವನ್ನು ನೀಡುವುದು ಪ್ರಯಾಣದ ಕಲ್ಪನೆ. ಅವು ನಮ್ಮ ದಾರಿಗಳು. ನಾವೇ ಆಯ್ಕೆ ಮಾಡಿಕೊಂಡಂಥವು. ಕೆಲವೊಮ್ಮೆ ಜನಸಂದಣಿ, ಕೆಲವೊಮ್ಮೆ ನಿರ್ಜನ. ಅವುಗಳಿಂದ ನಾವು ನಮಗೇ ಅರಿವಿರದ ಹಾಗೆ ಬದಲಾಗುವುದಂತೂ ನಿಜ! ಕವಿ ರಾಬರ್ಟ್ ಫ್ರಾಸ್ಟ್ ತನ್ನ ಜನಪ್ರಿಯ ಕವಿತೆ ‘ದ ರೋಡ್ ನಾಟ್ ಟೇಕನ್’ ನಲ್ಲಿ ಹೇಳಿದ ಹಾಗೆ:

Two roads diverged in a wood, and I –
I took the one less traveled by,
And that has made all the difference.

ಚಿತ್ರ www.kingston.gov.in

Comments (8)