Archive for January, 2008

ಒಂದು ಆಟೋ ಪ್ರಸಂಗ.

rickshaw1.jpg

‘ಮೇಡಂ, ಇವತ್ತು ಯಾವ್ದಾರಾ ಸೇಠುಗಳ ಹಬ್ಬಾ ಐತಾ? ‘ ಯಾವುದೋ ಆಲೊಚನೆಯಲ್ಲಿ ಮುಳುಗಿದ್ದ ನಾನು ಗಡಸುದನಿಗೆ ಬೆಚ್ಚಿಬಿದ್ದೆ. ಸಿಗ್ನಲ್ಲಿನಲ್ಲಿ ಆಟೋ ನಿಂತಿತ್ತು. ಆಟೋಡ್ರೈವರು ನನ್ನ ಕಡೆಗೇ ನೋಡುತ್ತ ಇದ್ದರು. ‘ಪೇಪರಲ್ಲಿ ಅದೇನೋ ಜಯಂತಿ ಅಂತ ನೋಡಿದಹಾಗಿತ್ತು’ ಅಂದೆ. ‘ಅದೇ ನೋಡಿ, ಎಲ್ಲಾ ಮಾರವಾಡಿ ಅಂಗಡೀ ಮುಚ್ಚಿಬಿಟ್ಟಿದಾರಲ್ಲ!’ ಅಂದು ತನಗೆ ತಾನೇ ಸಂತಾಪ ಸೂಚಿಸುವವರ ಹಾಗೆ ‘ಹಿಂಸೆ ಕಣ್ರೀ ಮೇಡಮ್ಮಾರೇ’ ಎಂದರು. ನಾನು ‘ಅದ್ಯಾಕೆ? ಏನಾದ್ರೂ ಕೆಲ್ಸಾ ಇತ್ತ?’ ಕೇಳಿದೆ. ‘ಏನೇಳ್ಲಿ, ನೀವು ಮೂರ್ನೇ ಜನ. ಕಷ್ಟಾ ಸುಖಾ ಹೇಳಿಕೋಬೋದು. ನಮ್ಮ ಜನದ ಹತ್ರ ಇದ್ನೆಲ್ಲ ಹೇಳಕಾಗತ್ತ? ಆಡ್ಕಂಡು ನಗಾಡ್ತರೆ. ಕೈಲಾಗದೋನು ಅನ್ನುಸ್ಕೋಬೇಕಾಗತ್ತೆ ಅಲ್ವೆ?’ ಎಂದು ನಕ್ಕರು. ‘ನಂಗೆ ತಿಳೀಲಿಲ್ಲಪ್ಪ’ ಎಂದೆ. ‘ನಾನು ಈಗ ಸೊಲ್ಪ ಚಿನ್ನ ಅಡ ಇಡ್ಬೇಕಾಗಿತ್ತು ಮೇಡಂ. ಕೇಸು ನಡೀತಿದೆ. ಲಾಯರಿಗೆ ಫೀಸು ಕೊಡ್ಬೇಕಲ್ಲ.’ ಅಂದರು. ನನಗೆ ಸ್ವಲ್ಪ ದಿಗಿಲು. ಜತೆಗೇ ಕುತೂಹಲ. ‘ಕೇಸಾ? ಯಾಕೆ?’ ಅಂದೆ. ‘ನಂದಲ್ಲ ಮೇಡಂ. ನನ್ ಮಗಂದೂ ಅವುನ್ಹೆಂಡ್ರುದು. ಹೇಳ್ತೀನಿ ಕೇಳ್ರಿ.’ ಎಂದು ಒಂದು ರೀತಿಯಾಗಿ ನಕ್ಕು ತನ್ನ ಕಥೆ ಪ್ರಾರಂಭಿಸಿದರು.

‘ನನ್ಮಗಾ ಮೆಕ್ಯಾನಿಕ್ಕು. ವಯಸ್ಸಿಗೆ ಬಂದ. ಮದುವೆ ಮಾಡಿದ್ವಾ. ಹುಡುಗೀ ಕಡ್ಯೋರು ಸಿಕ್ಕಾಬಟ್ಟೆ ಗಲಾಟೆ ಪಾರ್ಟಿ. ನಮ್ಗೆ ಗೊತ್ತೇ ಇಲ್ಲ. ಮಾತಾಡಿದ್ರೆ ಜಗಳ. ಹುಡುಗೀ ಒಳ್ಯೋಳೇ. ಆದ್ರೆ ಏನ್ಮಾಡ್ತೀರಿ? ಅವುರ್ ಕಡೆಯೋರುದೇ ಕುತಂತ್ರ. ಪ್ರಗ್ನಂಟು ಅಂತ ತವುರ್ಮನೆಗೋದ್ಲು. ಗಂಡುಮಗೂ ಆಯ್ತು. ಬಾಣ್ತನಾನೂ ಆಯ್ತು. ವಾಪಾಸು ಬಾ ತಾಯಿ ಅಂತ ಕರಿಯೋಕೆ ಹೋದ್ರೆ ಅವ್ನಿಗೆ ನೀನು ನಮ್ಮೂರ್ಕಡೆ ಬಂದ್ಬುಟ್ಟು ಇರು ಇಲ್ಲೇ ಗ್ಯಾರೇಜು ಓಪನ್ ಮಾಡಿಸ್ಕೊಡ್ತೀವಿ ಅಂತಾರಂತೆ. ಇವ್ನು ಆಗಲ್ಲ ಅಂದು ಬಂದುಬಿಟ್ಟಿದಾನೆ. ಮತ್ತೊಂದು ದಿನಾ ಅಲ್ಲಿಗೋಗಿ ಅದು ನನ್ನೆಂಡ್ರು, ನನ್ಮಗು, ಕಳುಸ್ಕೊಡ್ತೀರೋ ಇಲ್ವೋ ಅಂತ ಅವಾಜು ಹಾಕಿದ್ದಕ್ಕೆ ಹಿಗ್ಗಾಮುಗ್ಗಾ ಹೊಡುದು ಕಳುಸಿದಾರೆ. ನಾವು ಸಲ್ಪ ದಿನ ಸುಮ್ನಿರು ಮಗ ಎಲ್ಲ ಸರಿ ಮಾಡನ ಅಂದ್ವು. ನೋಡಿದ್ರೆ ನೋಟೀಸು ಕಳುಸಿದಾರೆ. ನಾವು ಅವುಳಿಗೆ ಕಿರುಕುಳ ಕೊಟ್ವಂತೆ, ವರ್ದಕ್ಷಿಣೆ ಕೇಳಿದ್ವಂತೆ! ನೋಡ್ರಿ ಎಂಗಿದೆ. ನಾನಾರ ಮಾತು ಜಾಸ್ತಿ ಅಂತಿಟ್ಕಳಿ. ನಮ್ಮೆಂಗಸ್ರು ಆಕಳು ಆಕಳಿನಂತೋಳು. ಮಾತು ಭಾಳ ಕಮ್ಮಿ. ನಾನು ಆಗಿದ್ದಾಗ್ಲಿ ಅಂತ ನಮ್ಮ ಪೈಕಿಯೋನೇ ಒಬ್ಬ ಲಾಯರು ಹಿಡ್ದು ಎಲ್ಲ ನೋಡ್ಕೋತಿದೀನಿ. ಆಚೆ ಸೆಟ್ಲುಮೆಂಟು ಮಾಡಿ ಅಂತ ಮಾತು ಬಂತು. ಸರಿ ಅಂದೆ. ಸಿಕ್ಕಾಪಟ್ಟೆ ದುಡ್ಡು ಡಿಮ್ಯಾಂಡು ಮಾಡ್ತವ್ರೆ. ನಾವು ಎಲ್ಲಿಗೋಗನ? ಈಗ ನನ್ ಮಗನ್ನ ನೋಡುದ್ರೆ ಹೊಟ್ಟೆ ಉರಿಯತ್ತೆ. ದುಡುಕುಮುಂಡೇವು. ಮಾತಾಡಿದ್ರೆ ಉರ್ಕೊಂಡು ಬೀಳ್ತವೆ. ಈಗ ಏನ್ ತಿಳೀತದೆ? ಮುಂದಕ್ಕಿದೆ ಮುಸಲವಾರ್ರ ಹಬ್ಬ!’ ಎಂದು ಸುಮ್ಮನಾದರು. ಸಿಗ್ನಲ್ಲಿನಲ್ಲಿ ಹಸಿರುದೀಪ ಕಾಣಿಸಿತು. ವಾಹನಗಳ ಜಾತ್ರೆ ಮೆಲ್ಲನೆ ಮುಂದೆ ಹರಿಯಲು ತೊಡಗಿತು. ನನಗೇಕೋ ಆ ಮಾತು ಮುಂದುವರಿಸಲು ಮನಸ್ಸು ಬರಲಿಲ್ಲ. ಆದರೆ ಆತನಿಗೆ ಮಾತು ಬೇಕಿತ್ತು. ಯೋಚನೆ ಮಾಡಲು ಆತ ಬೆದರುತ್ತಿದ್ದ ಹಾಗೆ ಅನ್ನಿಸಿತು. ನಾನು ಮುಜುಗರದಿಂದ ಆಚೀಚೆ ನೋಡುವುದು, ಪೆಂಡಿಂಗ್ ಇದ್ದ ಎಸ್ಸೆಮ್ಮೆಸ್ಸುಗಳನ್ನು ಕಳಿಸುವುದು ಇತ್ಯಾದಿ ಮಾಡತೊಡಗಿದೆ.

ಆತ ಇದ್ದಕ್ಕಿದ್ದ ಹಾಗೆ ’ಮೇಡಂ, ನಾನೂ ಡಿಗ್ರಿ ಓದಿದೀನಿ. ನಂಗೂ ಇಂಗ್ಲೀಶು ಬರತ್ತೆ.’ ಅಂದರು. ನನಗೆ ನಗು.’ಅಲ್ರೀ ಸ್ವಾಮಿ, ಆಗಿನ ಕಾಲದಲ್ಲಿ ಡಿಗ್ರೀ ಓದಿ ನೀವ್ಯಾಕೆ ಈ ಲೈನಿಗ್ ಬಂದ್ರಿ?’ ಕೇಳಿದೆ. ’ಹಯ್ಯೋ ಡಿಗ್ರೀ ಬರೀ ಎರಡೊರ್ಷ ಓದಿದ್ದು. ಕನ್ನಡ. ಆಮೇಲೆ ಬಿಟ್ಟೆ. ಇಂಗ್ಲೀಷೆಲ್ಲ ನನ್ ಮಗಳಿಗೆ ಪಾಠ ಹೇಳ್ತ ಕಲ್ತಿದ್ದು. ಪ್ರಾಕ್ಟೀಸು ಮಾಡಣ ಅಂದ್ರೆ ಮಾತಾಡಕ್ಕೆ ಯಾರೂ ಸಿಗಲ್ಲ. ಏನ್ಮಾಡೋದು? ಅದೂ ಲಾಂಗ್ವೇಜು ಅಲ್ಲವ? ಬೆಂಗ್ಳೂರು ಪೇಟೇಲಿದೀವಿ. ಕಲ್ತುಕೋಬೇಕು ಅಂತ ಆಸೆ. ಓದಿಕೋತೀನಿ. ಆದ್ರೆ ಮಾತಾಡೋಕೆ ಭಯ. ತಪ್ಪಾದ್ರೆ?’ ಎಂದು ತಮ್ಮ ದುಗುಡ ವ್ಯಕ್ತಪಡಿಸಿದರು. ’ಯಾರಾದರು ನಂಥರ ಪ್ಯಾಸೆಂಜರುಗಳ ಹತ್ರ ಸ್ವಲ್ಪ ಸ್ವಲ್ಪ ಮಾತಾಡಿ. ಆಮೇಲೆ ಅದು ತಾನಾಗೇ ಬರತ್ತೆ. ಅಂದೆ.’ಅರೆ, ನೋಡಿ ನವರಂಗ್ ಬಂದೇಬಿಡ್ತು! ಇಲ್ಲಿಳ್ಕೊಂಡ್ರೆ ಕಾಫಿ ಡೇ ಕಡೆ ಒನ್ ವೇ. ಟೇಕ್ ರೈಟ್. ಯು ವಾಕ್ ಟೂ ಮಿನಿಟ್ಸ್. ಬೈಬೈ ಮೇಡಂ!’ ಅಂದು ನಕ್ಕರು. ದುಡ್ಡು ಕೊಟ್ಟು’ಥ್ಯಾಂಕ್ಯೂ ಸರ್! ಗುಡ್ ಡೇ!’ ಎಂದು ನಾನು ಕೈಬೀಸಿ ಕಾಫಿಹೌಸಿನ ಕಡೆಗೆ ನಡೆದೆ.

ಕಾಫಿ ಕುಡಿಯುತ್ತ ಕುಳಿತಿದ್ದೆ. ಲೇಖಕ ಸ್ನೇಹಿತರೊಬ್ಬರು ’ಅಲ್ರೀ, ರಾವಣನ ದೇಹ ಶ್ರೀಲಂಕದಲ್ಲಿ ಸಿಕ್ತಂತಲ್ರೀ!’ ಎಂದು ಫೋನಿನಲ್ಲಿ ಮಾತಾಡುತ್ತಿದ್ದರು. ನಾನು ’ಏ! ಅದ್ಹೆಂಗೆ?’ ಅಂದರೆ,’ಅಲ್ಲ, ನಾನು ಇವತ್ತು ಬೆಳಗ್ಗೆ ಬೆಂಗಳೂರಿಗೆ ಬಂದೆ. ಆಟೋನವನು ನ್ಯೂಸು ಗೊತ್ತ ಸಾರ್, ರಾವಣನ ತಲೆಯಿಲ್ಲದ ಬಾಡಿ ಯಾವುದೋ ಗುಹೇಲಿ ಸಿಕ್ಕಿದೆಯಂತೆ ಅಂದ. ನಿಮಗೆ ಹೇಳೋಣಾಂತ ಫೋನು ಮಾಡಿದೆ.’ ಎಂದು ಕುಚೇಷ್ಟೆ ಮಾಡಿ ನಕ್ಕರು. ಅವರಿಗೂ ಯಾರೊ ವಾಚಾಳಿ ಆಟೋರಾಜ ಸಿಕ್ಕಿರಬೇಕು ಅಂದುಕೊಂಡೆ.

Pic courtesy: www.counterjumper.com
 

Comments (6)

ನಗರದ ಗುಂಗು, ಅಕ್ಕರೆಯ ತಂಪು

bus-4001.jpg

ಪಕ್ಕದಮನೆಯ ಮಗು ಒಂದೆ ಸಮ ಹುಯಿಲಿಡುತ್ತಿದೆ. ಅದರ ತಾಯಿ ಎತ್ತಿಕೊಂಡು ಓಡಾಡಿ, ಲಾಲಿಹಾಡಿ ಸಮಾಧಾನಿಸಲು ಯತ್ನಿಸುತ್ತಿದ್ದಾಳೆ. ಅದರ ತಂದೆಯ ನಿದ್ದೆ ಭಂಗವಾಗಿ ಗೊಣಗಾಡುವುದು ಕೇಳುತ್ತಿದೆ. ನನ್ನ ಟೇಬಲ್ಲಿನ ಕಿಟಕಿಯ ಕೆಳಗೆ ಎರಡು ಬಿಸ್ಕತ್ತು ಬಣ್ಣದ ಬೆಕ್ಕಿನ ಮರಿಗಳು ತಮ್ಮ ತಾಯಿಯ ಹೊಟ್ಟೆಯಲ್ಲಿ ಮುಖ ಅವಿಸಿಟ್ಟುಕೊಂಡು ಮಲಗಿಕೊಂಡಿವೆ. ವಿಪರೀತ ಚಳಿ. ಓಡಾಡಲೂ ಮನಸ್ಸಾಗುತ್ತಿಲ್ಲ. ಕೈಗೆ ಸಿಕ್ಕ ಸಿಡಿಯೊಂದನ್ನು ಕಂಪ್ಯೂಟರಿನ ಬಾಯಿಗೆ ತುರುಕಿ, ಇಯರ್ ಫೋನ್ ಕಿವಿಗೆ ಸಿಕ್ಕಿಸಿ ಕುಳಿತೆ. ಜಗಜೀತ್ ಸಿಂಗರ ಕಂಠದಿಂದ ಹೊಮ್ಮಿದ ಗಜಲೊಂದು ಕಿವಿಯಲ್ಲಿ ನುಡಿಯಿತು:

‘ಪತ್ಥರ್ ಕೆ ಖುದಾ, ಪತ್ಥರ್ ಕೆ ಸನಂ
ಪತ್ಥರ್ ಕೆ ಹಿ ಇನ್ಸಾಂ ಪಾಯೇ ಹೈಂ
ತುಂ ಶೆಹರ್-ಎ-ಮೊಹಬ್ಬತ್ ಕೆಹತೇ ಹೋ
ಹಂ ಜಾನ್ ಬಚಾಕರ್ ಆಯೇ ಹೈಂ..’

(ಕಲ್ಲಿನ ದೇವರು, ಕಲ್ಲಿನ ಪ್ರೇಯಸಿ
ಕಲ್ಲಿನದೇ ಮನುಷ್ಯರ ಕಂಡಿರುವೆ
ನೀನೇನೋ ಅದು ಪ್ರೇಮನಗರಿಯೆನುವೆ
ನಾನಲ್ಲಿಂದ ಜೀವವುಳಿಸಿಕೊಂಡು ಬಂದಿರುವೆ)

ಪ್ರತೀ ಸಲ ಈ ಸಾಲುಗಳನ್ನು ಕೇಳಿದಾಗಲೆಲ್ಲ ಬೆಂಗಳೂರಿನ ಪೀಕ್ ಅವರಿನ ಗಿಜಿಗುಡುವ ರಸ್ತೆಗಳು ಮತ್ತು ಅದರ ಜತೆಗೇ ಟಿ.ಎಸ್.ಎಲಿಯಟನ ಪ್ರಸಿದ್ಧ ‘ದ ವೇಸ್ಟ್ ಲ್ಯಾಂಡ್’ನ ಆ ಸಾಲುಗಳು ನೆನಪಾಗತೊಡಗುತ್ತವೆ..

“Unreal city

Under the brown fog of a winter dawn

A crowd flowed over London bridge, so many

I had not thought death had undone so many”

ನಾನು ಕೇಳುತ್ತ ಇರುವ ಗಜಲು ಹಾಗೂ ಎಲಿಯಟನ ಈ ಕಾವ್ಯಭಾಗ - ಎರಡರಲ್ಲು ನಗರದ ಉಲ್ಲೇಖವಿದೆ. ಆದರೆ ಎರಡರಲ್ಲೂ ನಗರದ ಬಗ್ಗೆ ಕವಿಗಿರುವ ನೆಗಟಿವ್ ಭಾವ, ಅದು ಮನುಷ್ಯನ ಮೇಲೆ ಮಾಡಿರುವ ಹಲ್ಲೆಯ ಪರಿಣಾಮಗಳ ಬಗ್ಗೆ ಬೇಸರ, ದಟ್ಟ ವಿಷಾದಗಳು ತುಂಬಿಕೊಂಡಿರುವುದು ಗಮನಾರ್ಹ. ಪ್ರೇಮನಗರಿಯೆಂದು ಬಣ್ಣಿಸಲ್ಪಟ್ಟ ಶಹರದ ಕಲ್ಲಿನಂಥ ಕಠಿಣತೆಗೆ ತಲೆಗುದ್ದಿ ನೋಯಿಸಿಕೊಂಡು ಜೀವವುಳಿದರೆ ಸಾಕೆಂದು ತಿರುಗಿಬಂದ ಭಾವಜೀವಿ ತನ್ನ ಗಜಲಿನಲ್ಲಿ ನಿಟ್ಟುಸಿರು ಬಿಟ್ಟರೆ, ಎಲಿಯಟನ ಕಾವ್ಯದಲ್ಲಿ ಸಂಜೆ ಕೆಲಸಬಿಟ್ಟ ಮೇಲೆ ಲಂಡನ್ನಿನ ಪ್ರಸಿದ್ಧ ಸೇತುವೆಯ ರಸ್ತೆಯ ಮೇಲೆ ಗುಂಪಾಗಿ ಚಲಿಸುತ್ತಿರುವ ಸಾವಿರಗಟ್ಟಲೆ ಜನರ ಪ್ರೇತಕಳೆಯ, ನಿರ್ಭಾವುಕ ಮುಖಗಳನ್ನು ನೋಡಿದ ಕವಿ ಹೌಹಾರಿದ್ದಾನೆ.
**
ಇಲ್ಲಿ ಒಬ್ಬೊಬ್ಬಳೆ ಅಲೆದಾಡುತ್ತಿದ್ದರು ಹೇಳುಕೇಳುವವರಾರೂ ಇಲ್ಲ. ಆಗೆಲ್ಲ ಹಾಸ್ಟೆಲಿನಿಂದ ವಾಪಾಸು ಮನೆಗೆ ಹೋದಾಗ ಅಮ್ಮ ನನ್ನ ಸುತ್ತಲು ಕಾಳಜಿ ಮಾಡಿಕೊಂಡು ಓಡಾಡುತ್ತ ಇದ್ದುದು ನೆನಪಾಗಿ ಹಳಹಳಿಯೆನಿಸುತ್ತದೆ. ’ಹುಷಾರಿಲ್ವೇನೆ? ಮೂತಿಯೆಲ್ಲಾ ಒಣಗಿ ಕರ್ರಗಾಗಿದೆ. ಹೊರಗೆ ಹೋದಾಗ ಛತ್ರಿ ಹಿಡ್ಕೊಂಡೋಗು ಅಂತ ಎಷ್ಟು ಸಾರಿ ಹೇಳಬೇಕು ನಿಂಗೆ? ’- ಬೈಗುಳದ ಸರಮಾಲೆ. ಆವತ್ತಿನಿಂದ ಕಿತ್ತಲೆ ಸಿಪ್ಪೆಯ ಪೇಸ್ಟು, ಮುಲ್ತಾನೀ ಮಿಟ್ಟಿ, ಅರಿಶಿನ ಮೊಸರು, ಅಮ್ಮ ಕೊಟ್ಟದ್ದನ್ನೆಲ್ಲ ವಿಧೇಯವಾಗಿ ಮುಖಕ್ಕೆ ಹಚ್ಚಿಕೊಂಡುಬಿಡಬೇಕು. ಇಲ್ಲದಿದ್ದರೆ ಕೂಗಾಟ ಶುರು. ತಲೆಕೆಟ್ಟುಹೋಗಿ ’ನಾನೂ ನನ್ನ ಯಾರೂ ನೋಡ್ಬೇಕಾಗಿಲ್ಲ!’ ಎಂದು ಎಗರಾಡುತ್ತಿದ್ದೆ. ಅಮ್ಮನೂ ಸೋಲೊಪ್ಪದೆ, ’ನಾನೇನೂ ಹಾಗ್ಹೇಳಿಲ್ಲ. ನೀವು ಹುಡುಗ್ರು ಈ ವಯಸ್ನಲ್ಲಿ ಆರೋಗ್ಯವಾಗಿ ಕಾಣಿಸ್ಕೋಬಾರ್ದೇನೆ? ಈಗಲೆ ಸೋಂಬೇರಿತನ ಮಾಡಿದ್ರೆ ಇಪ್ಪತ್ತೈದಕ್ಕೇ ಮುದುಕೀ ಥರ ಆಗೋಗ್ತೀ. ನನ್ಮಕ್ಳು ಹಾಗಿರೋದು ಮಾತ್ರ ಇಷ್ಟವಾಗಲ್ಲ!’ ಎಂದು ವಾದಿಸುತ್ತಿದ್ದರು. ನಗು ಬಂದು ಸುಮ್ಮನಾಗಿಬಿಡುತ್ತಿದ್ದೆ.

**
ಸ್ವೆಟರು ತೊಟ್ಟುಕೊಂಡು ಹೊರಗೆ ಹೋಗಿ ನಿಂತೆ. ಪಾರ್ಕಿನ ಬಳಿ ಯಾವುದೊ ಮರ ಚಳಿಗಾಲದಲ್ಲು ಹೂವರಳಿಸಿ ನಿಂತದ್ದು ಬೀದಿ ದೀಪದ ಬೆಳಕಿನಲ್ಲಿ ಹೊಳೆದು ನಕ್ಕಿತು. ನೋಡಿದರೆ ಸಂಪಿಗೆ. ಘಮ್ಮೆಂದು ಪರಿಮಳ ಮೂಗಿಗಿಳಿಯಿತು. ’ಏನೋ ತರಲೆ ನಡೆಸಿದೀಯ ನೀನು! ಕಣ್ಣಲ್ಲಿ ಭಾಳ ತುಂಟ್ತನ ಕಾಣ್ತಿದೆ. ನಂಗೆ ಗುಮಾನಿ.’ ಎಂದು ಗೆಳೆಯನೊಬ್ಬ ಮೊನ್ನೆ ಹೇಳಿದ್ದು ನೆನಪಾಗಿ ನಕ್ಕುಬಿಟ್ಟೆ. ಎಲ್ಲೋ ಓದಿದ್ದ ನಾಲಕ್ಕು ಸಾಲುಗಳು ನೆನಪಾಗಿ ಬಾಯಿಯಲ್ಲಿ ಗುಣುಗುಣಿಸಿದೆ: There is someone who would miss you if you were gone. There is some work that will never be done if you don’t do it. There is a place that you alone can fill.”

ಚಿತ್ರ: www.daypainter.com ನಿಂದ.

Comments (7)

’ಗಾಳಿಪಟ’ಕ್ಕೊಂದು ದಾರ!

gaalipata-stills-21.jpg

ಹೆಲೋ! ಇಲ್ಕೇಳಿ ಸೊಲ್ಪ.

ಗಾಳಿಪಟದ ಹಾಡುಗಳನ್ನ ನೀವೆಲ್ಲ ಕೇಳಿರ್ಬೋದು. ಆದ್ರೆ ಇಷ್ಟು ಬೇಗ ಮೂವೀ ಟಿಕೆಟುಗಳು ಸಿಗೋದು ದುಸ್ತರವೇ. ಆಮೇಲೆ ನೂಕು ನುಗ್ಗಾಟದಲ್ಲಿ ಬಡಿದಾಡಿ ಮೂವೀ ನೊಡೋಕಿಂತ ಆರಾಮವಾಗಿ ನೋಡೋದೇ ಲೇಸು, ಅಲ್ವೆ? ಆದ್ರೆ, ಹೇಳಿ ಕೇಳಿ ಮೊದಲೆ ಚೂರು ಕಳ್ಳಿ ನಾನು. ಸುಮ್ನಿರೋಕೆ ಮನ್ಸೇ ಒಪ್ತಿಲ್ಲ. ನೀವೂ ನನ್ನಂಥೋರೇ ಆದ್ರೆ ನಿಮಗಾಗಿ ಗಾಳಿಪಟದ ಬಗ್ಗೆಯೇ ಇರೋ ಬ್ಲಾಗೊಂದರ ಲಿಂಕನ್ನ ಇಗೋ ನೀಡ್ತಿದೇನೆ. ಇಸ್ಕೊಳಿ. ಹೇಗನ್ನಿಸ್ತು ಹೇಳೋದು ಮರೀಬೇಡಿ! ನಾನಂತೂ ಹಾಡುಗಳ ಫುಲ್ಟೈಂ ಫ್ಯಾನ್ ಆಗ್ಬಿಟ್ಟಿದೀನಿ. ಮೂವೀ ಚೆನ್ನಾಗಿದೆಯಂತೆ. ನೋಡಿದ್ಮೇಲೆ ಮಾತನಾಡೋಣ ಅಲ್ವಾ?

ಟೀನಾ.

pic: www.bangalore365.com

Comments (3)

ಇವರ ವಿರಹಕ್ಕೇನಾದರು ಉಪಮೆ ಇದೆಯೆ?

222694501.jpg

ಕೆಲಸದಾಕೆ ಬಂದವಳೇ ನನ್ನನ್ನೀಚೆ ಕರೆದು ಕೇಳಿದಳು: ’ಪಕ್ಕದ ಮನೆ ಸುನಿತಕ್ಕ ಬಂದಿದಾರೆ, ನೋಡಿದ್ರಾ ಅಕ್ಕ?’ ನಾನು,’ಹೂಂ. ನೆಂಟರ ಮನೆಗೆ ಹೋಗಿದ್ರೇನೋ. ಮನೆ ಬೇರೆ ಕಟ್ಟಿಸ್ತಾ ಇದಾರೆ.’ ಅಂದೆ. ಅವಳು ಒಂದೇ ಉಸಿರಿನಲ್ಲಿ”ಇಲ್ಲಕ್ಕಾ, ಅವ್ರಿಗೆ ಟೀಬಿಯಂತೆ. ಚಿಕ್ಕಮಗಳೂರಲ್ಲಿ ಆಸ್ಪತ್ರೇಲಿದ್ರಂತೆ. ಮೊದ್ಲಿಂದಲೂನೂ ಕೆಮ್ಮಿತ್ತಲ್ಲ. ಆ ಉಪ್ಪಿನಕಾಯಿ ಫ್ಯಾಕ್ಟರೀಲಿ ಕೆಲಸ ಮಾಡೋಕೆ ಶುರುಮಾಡಿದ್ರಲ್ಲ? ಆಗಿಂದ ಜೋರಾಯ್ತಂತೆ. ತೋರಿಸ್ಕೊಳ್ಳೋಕೆ ಹೋದ್ರೆ ಟೀಬಿ ಅಂತ ಗೊತ್ತಾಯ್ತಂತೆ. ನಮ್ಮತ್ತಿಗೇ ಹೇಳಿದ್ರು!’ ಎಂದಳು. ನಾನು ಸುಮ್ಮನೆ ನಿಂತೆ.’ಮನೇಲಿ ಎಲ್ಲರಿಗೂ ಗೊತ್ತ?’ ಕೇಳಿದೆ. ’ಹೂಂ, ಸೌದಿಗೂ ಫೋನು ಮಾಡಿ ಹೇಳಿದ್ರಂತೆ. ಮಗಂಗೂ ಗೊತ್ತು.’ ಎಂದು ಆಕೆ ಕೆಟ್ಟಮುಖ ಮಾಡಿದಳು. ನಾನು ಒಳಗೆ ನಡೆದೆ. ಪಕ್ಕದ ಮನೆಯವಳ ಮಗ ಕೆಸೆಟ್ ಪ್ಲೇಯರಿನಲ್ಲಿ ಹಾಕಿದ್ದ ಹಾಡೊಂದನ್ನು ಗುನುಗುನಿಸುತ್ತ ಇದ್ದ. ಪಿ.ಯು.ಸಿ ಓದುವ ಹುಡುಗ. ತಂದೆ ಸೌದಿಯಲ್ಲಿ ಟೈಲರು.  ಮೂರು ವರ್ಷಕ್ಕೊಂದಾವರ್ತಿ ಮುಖ ತೋರಿಸಿ ಆಗಾಗ ಹಣ ಕಳಿಸಿ ತನ್ನ ಕರ್ತವ್ಯ ಮುಗಿಸುವವನು. ಈಗೊಂದಿಷ್ಟು ದಿನಗಳಿಂದ ದುಡ್ಡೂ ಇಲ್ಲ, ಪತ್ರಗಳೂ ಇಲ್ಲ. ಹೇಗೋ ಮನೆ ನಡೆಸುತ್ತ ಇದ್ದ ಈಕೆಗೆ ಫ್ಯಾಕ್ಟರಿ ಕೆಲಸಕ್ಕೆ ಹೊಗುವ ಪರಿಸ್ಥಿತಿ.

ಬಹರೇನಿನಲ್ಲಿರುವ ಪರ್ವೇಜ ಕಳೆದ ಸಾರಿ ಬಂದಾಗ ಅಣ್ಣಂದಿರೊಡನೆ ಜಗಳವಾಡಿ ಹೆಂಡತಿಯನ್ನು ಕರೆದುಕೊಂಡು ಬೇರೆ ಮನೆ ಮಾಡಿದ. ಮಕ್ಕಳಿಲ್ಲ. ಅವನು ಅಲ್ಲಿ, ಇವಳು ಇಲ್ಲಿ. ತಕ್ಕಮಟ್ಟಿಗೆ ಲಕ್ಷಣವಾಗಿರುವ ಈಕೆಯ ಮನೆಯ ಮೇಲೆ ರಾತ್ರಿಯಾಗುತ್ತಿದ್ದ ಹಾಗೆ ಕಲ್ಲು ಇಟ್ಟಿಗೆ ಬೀಳಲು ತೊಡಗಿದವು. ಆಕೆಗೆ ಈಗ ದಿನಾ ಸಂಜೆ ಬರುವ ತನ್ನ ಮೈದುನನ ಮಗ ಶಮೀರನೇ ಆಸರೆ. ತಿಂಗಳಿಗೊಮ್ಮೆ ಪ್ರೀತಿಯಿಂದ ಫೋನು ಮಾಡುವ ಮುಂಗೋಪಿ ಪರ್ವೇಜನ ಬಳಿ ಇದನ್ನೆಲ್ಲ ಹೇಳಲಾಗದೆ ಹೈರಾಣಾಗಿದ್ದಾಳೆ.

ತೆರೇಸಾಳ ತಾಯಿ ಕೆನಡಾದ ಮನೆಯೊಂದರಲ್ಲಿ ಹೌಸ್ ಮೆಯಿಡ್ ಆಗಿದ್ದಾಳೆ. ಗಂಡ ಅನ್ನಿಸಿಕೊಂಡವ ಇದ್ದಕ್ಕಿದ್ದ ಹಾಗೆ ನಾಪತ್ತೆಯಾದಾಗ ದೊರೆತ ಅವಕಾಶವನ್ನು ಈಕೆ ಅದೃಷ್ಟವೆಂದೇ ಭಾವಿಸಿ ದೇಶಾಂತರ ಹೊರಟಳು. ಪರಿಚಯದವರಿರುವ ವಠಾರದಲ್ಲಿ ಬಾಡಿಗೆಮನೆ ಮಾಡಿ ಮಕ್ಕಳನ್ನಿರಿಸಿ ವಿದೇಶದಲ್ಲಿ ದುಡಿಯಲು ಶುರುಮಾಡಿದಳು. ಒಗ್ಗದ ಹವಾಮಾನ, ಮುಗಿಯದ ದುಡಿತ ಧೃತಿಗೆಡಿಸಿದರು ಆಕೆ ಬಗ್ಗಿಲ್ಲ. ವಯಸ್ಸಿಗೆ ಬಂದ ಹೆಣ್ಣುಮಕ್ಕಳ ಮದುವೆ ಮಾಡಬೇಕು, ಮಗ ಜಾರ್ಜನನ್ನು ಚೆನ್ನಾಗಿ ಓದಿಸಬೇಕು. ಆಕೆ ದುಡಿಯುತ್ತಲೇ ಇದ್ದಾಳೆ. ವರ್ಷಕ್ಕೊಮ್ಮೆ ಬಂದು ವಿದೇಶೀ ಬಟ್ಟೆ, ಜ್ಯುವೆಲರಿ, ಆಕ್ಸೆಸರಿಗಳನ್ನು ಮಕ್ಕಳಿಗೆ ಕೊಟ್ಟು ವರ್ಷವಿಡೀ ಕಾಡುವ ತನ್ನ ಕೊರತೆಯನ್ನು ತುಂಬುವ ಪ್ರಯತ್ನ ಮಾಡುತ್ತಾಳೆ.

ಇಂಥ ಎಷ್ಟೋ ಮನೆಗಳನ್ನು ನೋಡುತ್ತಲೆ ಬಂದಿದೇನೆ. ಇವರದ್ದೆಲ್ಲ ಮುಗಿಯದ ಕತೆ. ಊರಿನಲ್ಲಿ ಹುಡುಗಿಯರನ್ನು ಚುಡಾಯಿಸಿಕೊಂಡು ಕ್ರಿಕೆಟ್ಟಾಡಿಕೊಂಡು ಇರುತ್ತಿದ್ದ ಎಸ್ಸೆಸ್ಸೆಲ್ಸಿ, ಪೀಯೂಸಿ ಫೇಲಾದ ಹುಡುಗರಿಗೆಲ್ಲ ಮೀಸೆ ಚಿಗುರುತ್ತಿದ್ದ ಹಾಗೇ ಮುಂಬಯಿಗೋ, ದುಬಾಯಿಗೋ ಬಹ್ರೈನಿಗೋ ಹಾರುವಾಸೆ. ಕೆಲವರು ಹಾರಿಯೂ ಬಿಡುತ್ತಾರೆ. ಅಲ್ಲಿ ಮೈಮೂಳೆ ಮುರಿಯುವ ಹಾಗೆ ದುಡಿದುಕೊಂಡು ಒಂದೆರಡು ವರ್ಷಗಲಾದ ಮೇಲೆ ವಾಪಾಸು ಬಂದು ಅಕ್ಕತಂಗಿಯಂದಿರ ಮದುವೆ ಮಾಡುತ್ತಾರೆ, ತಾವೂ ಮಾಡಿಕೊಳ್ಳುತ್ತಾರೆ. ತಂಪುಕನ್ನಡಕ ಏರಿಸಿಕೊಂಡು, ತಲೆತಿರುಗಿಸುವ ಸೆಂಟು ಬಳಿದುಕೊಂಡು ಬಂದಹಾಗೇ ಕೊಂಡುಕೊಂಡ ಬೈಕು ಕಾರುಗಳಲ್ಲಿ ರೋಷದಿಂದ ಅಡ್ಡಾಡುತ್ತಾರೆ. ಅದಕ್ಕೆ ತಕ್ಕ ಹಾಗೆ ಬಂಧುಗಳ ಓಲೈಸುವಿಕೆ ಕೂಡ ನಡೆಯುತ್ತದೆ. ವಿದೇಶೀ ಉಡುಗೊರೆಗಳ ಭರಾಟೆಗೇನೂ ಕಡಿಮೆಯಿಲ್ಲ. ಇವೆಲ್ಲ ಮುಗಿದ ತಿಂಗಳೊಪ್ಪತ್ತಿನಲ್ಲಿ ಕೈ ಖಾಲಿಯಾಗುತ್ತದೆ. ಕಾರು, ಬೈಕುಗಳು ಮಾರಲ್ಪಡುತ್ತವೆ. ವಾಪಾಸು ಹೋಗುವ ತಯಾರಿ ನಡೆಯುತ್ತದೆ. ಅದೃಷ್ಟವಿದ್ದ ಕೆಲವರು ಹೆಂಡತಿಯರು ಗಂಡಂದಿರೊಡನೆ ತಾವು ಹಾರುತ್ತಾರೆ. ಉಳಿದವರು ದಾರಿ ನೊಡುತ್ತ ಹಿಂದೆ ಉಳಿಯುತ್ತಾರೆ. ಮತ್ತೆ ಆರಂಭವಾಗುತ್ತದೆ ಮುಗಿಯದ ಪ್ರತೀಕ್ಷೆ ಗಂಡನ ಫೋನಿಗೋಸ್ಕರ, ಆತ ಕಳಿಸುವ ಹಣಕ್ಕೋಸ್ಕರ, ಆತನ ಪತ್ರಕ್ಕೋಸ್ಕರ, ಆತನನ್ನು ಪುನಃ ಕಾಣುವ ಘಳಿಗೆಗೋಸ್ಕರ..

ಇವರ ವಿರಹಕ್ಕೇನಾದರು ಉಪಮೆ ಇದೆಯೆ?
 

Pic. Courtesy: www.jupiterimages.com

Comments

ಕಥೆಗಾರರ ಕಥೆ - ಗ್ರಿಮ್ ಸಹೋದರರು

uewb_05_img03171.jpg

‘ಸ್ನೋ ವ್ಹೈಟ್ ಮತ್ತು ಏಳು ಕುಳ್ಳರು’, ‘ಸಿಂಡರೆಲ್ಲಾ’, ‘ಕಪ್ಪೆ ರಾಜಕುಮಾರ’ ಈ ಮುಂತಾದ ಕಥೆಗಳನ್ನು ಕೇಳದವರು ಬಹಳ ಕಡಿಮೆ. ಪ್ರಪಂಚದಾದ್ಯಂತ ಸುಪ್ರಸಿದ್ಧವಾಗಿರುವ ಈ ‘ಫೇರಿ ಟೇಲ್’ಗಳು ಭಾರತಕ್ಕೆ ಬಂದಿದ್ದು ಆಂಗ್ಲ ಶಿಕ್ಷಣ ಪದ್ಧತಿಯ ಮೂಲಕ. ಇಂದಿಗೂ ಬಹಳಷ್ಟು ಜನರು ಈ ಕಥೆಗಳ ಮೂಲ ಇಂಗ್ಲೆಂಡ್ ಎಂದೇ ಭಾವಿಸಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಈ ಕಥೆಗಳು ನಿಜವಾಗಿ ಎಲ್ಲಿಂದ ಬಂದವು? ಯಾರು ಇವಕ್ಕೆ ಇಷ್ಟೊಂದು ಪ್ರಚಾರ ಕೊಟ್ಟರು? ಈ ಕಥೆಗಳ ಹಿಂದಿನ ಕಥೆಯನ್ನು ಅರಸುತ್ತ ಹೋದರೆ ನಾವು ಜರ್ಮನಿಗೆ ಹೋಗಬೇಕಾಗುತ್ತದೆ. ಅಲ್ಲಿ ಪ್ರಮುಖವಾಗಿ ಕೇಳಿಬರುವ ಹೆಸರುಗಳೆಂದರೆ ‘ಗ್ರಿಮ್’ ಸಹೋದರರದು.

ಜರ್ಮನಿಯ ಫ್ರಾಂಕ್ಫರ್ಟ್ ಬಳಿಯ ‘ಹನೌ’ ಎಂಬಲ್ಲಿ ವಾಸವಾಗಿದ್ದ ಫಿಲಿಪ್ ಗ್ರಿಮ್ ಮತ್ತು ಡೊರೊಥಿ ಜಿಮ್ಮರ್ ಎಂಬ ದಂಪತಿಗಳಿಗೆ ಜನಿಸಿದ ಎರಡನೆ ಮತ್ತು ಮೂರನೆ ಮಕ್ಕಳು ಜೇಕಬ್(1785) ಹಾಗೂ ವಿಲ್ಹೆಲ್ಮ್ ಗ್ರಿಮ್(1786). ಒಟ್ಟು ಎಂಟು ಸಹೋದರರು ಹಾಗೂ ಒಬ್ಬ ಸಹೋದರಿಯೊಡನೆ ಬೆಳೆದ ಇವರ ಬಾಲ್ಯ ಬಹಳ ಸಂತಸದಿಂದ ಕಳೆಯಿತು. 1796ರ ಹೊತ್ತಿಗೆ ತನ್ನ ಒಂಬತ್ತು ಮಕ್ಕಳಲ್ಲಿ ಮೂವರು ಮರಣ ಹೊಂದಿದ್ದರ ನೋವು ತಾಳಲಾಗದೆ ತಂದೆ ಫಿಲಿಪ್ ಸಾವನ್ನಪ್ಪಿದ. ಉಳಿದ ಆರು ಮಕ್ಕಳು ಹಾಗೂ ತಾಯಿ ಡೊರೊಥಿ ಉಳಿದ ದಿನಗಳನ್ನು ಬಹಳ ತೊಂದರೆಯಲ್ಲಿ ಬಡತನದಲ್ಲಿ ಕಳೆಯಬೇಕಾಗಿ ಬಂದಿತು. ಆದರೆ ಜೇಕಬ್ ಮತ್ತು ವಿಲ್ಹೆಲ್ಮ್ ತಮ್ಮ ತಂದೆಯಂತೆಯೆ ವಕೀಲರಾಗಲು ವಿಶ್ವವಿದ್ಯಾನಿಲಯಕ್ಕೆ ದಾಖಲಾತಿ ಪಡೆದರು. ಈ ಸಮಯದಲ್ಲೆ ಡೊರೊಥಿ ಒಂದು ಚಳಿಗಾಲದ ಪ್ರಯಾಣದಲ್ಲಿ ಮರಣ ಹೊಂದಿದಳು. ಜೇಕಬ್ ಲೈಬ್ರೇರಿಯನ್ ಕೆಲಸ, ಬರಹ ಇತ್ಯಾದಿಗಳನ್ನು ಮಾಡುತ್ತ ತನ್ನ ತಮ್ಮಂದಿರು ಹಾಗೂ ತಂಗಿಯನ್ನು ನೋಡಿಕೊಳ್ಳಲು ಪ್ರಾರಂಭಿಸಿದ. ಅಲ್ಲಿಯೂ ಹಣದ ತೊಂದರೆ. ಆದರೆ ಇವಾವುದೂ ಜೇಕಬ್ ಮತ್ತು ವಿಲ್ಹೆಲ್ಮ್ರ ಓದನ್ನು ನಿಲ್ಲಿಸಲಿಲ್ಲ. ಹಾಗೂ ಹೀಗೂ ಜೇಕಬನಿಗೆ ಒಳ್ಳೆಯ ಸಂಬಳದ  ಸ್ಟೇಟ್ ಕೌನ್ಸಿಲ್ ಕೆಲಸ ಸಿಗುವ ವೇಳೆಗಾಗಲೆ ಅವರಿಬ್ಬರೂ ಜರ್ಮನಿಯ ಮಕ್ಕಳ ಜಾನಪದ ಕಥೆಗಳನ್ನು ಕಲೆಹಾಕುವ ಕೆಲಸವನ್ನು ಆರಂಭಿಸಿದ್ದರು! ಇದಕ್ಕಾಗಿ ಅವರು ಹಳ್ಳಿಯ ರೈತಾಪಿ ಜನಗಳು, ರಾಜಮನೆತನದವರು ಹಾಗೂ ಹಳೆಯ ಆಳುಕಾಳುಗಳಿದ್ದ ಮಧ್ಯಮವರ್ಗದ ಜನರನ್ನು ತಮ್ಮ ಮನೆಗೆ ಆಮಂತ್ರಿಸಿ ಅವರು ಹೇಳುವ ಕಥೆಗಳನ್ನು ದಾಖಲಿಸಿಕೊಳ್ಳುತ್ತಿದ್ದರು. ಇವರಲ್ಲಿ ಮೇರೀ ಮುಲ್ಲರ್ ಎಂಬ ಕಥೆ ಹೇಳುವ ರೈತ ಹೆಂಗಸು ಇವರಿಗೆ ಅಚ್ಚುಮೆಚ್ಚಾಗಿದ್ದಳು.

1812ರಲ್ಲಿ ಗ್ರಿಮ್ ಸಹೋದರರು ಸಂಪಾದಿಸಿದ ಎಂಭತ್ತಾರು ಕಥೆಗಳ ಮೊದಲ ಸಂಕಲನ ‘ಕಿಂಡರ್ ಉಂಡ್-ಹಾಸ್ಮಾರ್ಶೆನ್’ ಪ್ರಕಟವಾಯಿತು. 1814ರಲ್ಲಿ ಪ್ರಕಟವಾದ ಈ ಸಂಕಲನದ ಎರಡನೆ ಆವೃತ್ತಿಯಲ್ಲಿ ಈ ಎಂಭತ್ತಾರು ಕಥೆಗಳಿಗೆ ಇನ್ನೂ ಎಪ್ಪತ್ತು ಕಥೆಗಳು ಹಾಗೂ ಜಾನಪದ ಕಥೆಗಳನ್ನು ಸೇರಿಸಲಾಯಿತು. ಈ ಸಂಕಲನ ಜರ್ಮನಿಯಲ್ಲಿ ಬಹಳ ಪ್ರಸಿದ್ಧಿ ಪಡೆಯಿತು. ಒಂದು ಕಾಲದಲ್ಲಿ ಜರ್ಮನಿಯಲ್ಲಿ ಈ ಪುಸ್ತಕವಿರದ ಮನೆಗಳೇ ಇರಲಿಲ್ಲವಂತೆ! ‘ಕಿಂಡರ್ ಉಂಡ್-ಹಾಸ್ಮಾರ್ಶೆನ್’ನ ಎಂಟು ಆವೃತ್ತಿಗಳು ಮುದ್ರಣಗೊಂಡವು. ಕೊನೆಯ ಆವೃತ್ತಿಯಲ್ಲಿ ಒಟ್ಟು 200 ಕಥೆಗಳು, ಜಾನಪದ ಗಾಥೆಗಳು ಹಾಗೂ 10 ಮಕ್ಕಳ ಸುಪ್ರಸಿದ್ಧ ದಂತಕಥೆಗಳು ಲಭ್ಯವಿದ್ದವು. ಇದಲ್ಲದೆ 1816 ಹಾಗೂ 1818ರಲ್ಲಿ ಜೇಕಬ್ ಮತ್ತು ವಿಲ್ಹೆಲ್ಮ್ ಪ್ರಕಟಿಸಿದ ‘ಡ್ಯೂಶ್ ಸಾಗೆನ್’ ಬೃಹತ್ ಸಂಕಲನದಲ್ಲಿ 585 ಜರ್ಮನ್ ದಂತಕಥೆಗಳಿದ್ದವು. ಅಬ್ಬ!! ಇಷ್ಟೇ ಅಲ್ಲ, ಇನ್ನೂ ಇದೆ..

ತಮ್ಮ ಕೊನೆಗಾಲದಲ್ಲಿ ಬರ್ಲಿನ್ ವಿಶ್ವವಿದ್ಯಾನಿಲಯದ ಪ್ರೊಫೆಸರುಗಳಾಗಿ ಕೆಲಸ ಮಾಡುತ್ತ ಇದ್ದ ಜೇಕಬ್ ಮತ್ತು ವಿಲ್ಹೆಲ್ಮ್ 1838ರಲ್ಲಿ ಜರ್ಮನ್ ಡಿಕ್ಷನರಿಯ ಕೆಲಸವನ್ನು ಆರಂಭಿಸಿದರು. ಈ ಕೆಲಸ ಅವ್ಯಾಹತವಾಗಿ ಸಾಗಿತು. ಈ ಕೆಲಸದಲ್ಲಿ ಇಬ್ಬರೂ ಸಹೋದರರರು ಎಷ್ಟೊಂದು ಮುಳುಗಿಹೋದರೆಂದರೆ ಇಬ್ಬರೂ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ದಿನವಿಡೀ ಜರ್ಮನ್ ಪದಗಳೊಡನೆ ವಿಹರಿಸುವುದನ್ನೇ ತಮ್ಮ ‘ಫುಲ್-ಟೈಮ್’ ಕೆಲಸವನ್ನಾಗಿ ಮಾಡಿಕೊಂಡರು. ಜರ್ಮನ್ ಪದಗಳ ಉಚ್ಛಾರಣೆ ಕಾಲ ಸರಿದಂತೆ ಬದಲಾಗುವುದರ ಬಗ್ಗೆ ಜೇಕಬ್ ಗ್ರಿಮ್ ಪ್ರತಿಪಾದಿಸಿರುವ ‘ಗ್ರಿಮ್ಸ್ ಲಾ’ವನ್ನು ಜರ್ಮನಿಯ ಭಾಷಾಶಾಸ್ತ್ರಜ್ನರು ಇಂದಿಗೂ ಮಹತ್ವದ್ದೆಂದು ಪರಿಗಣಿಸುತ್ತಾರೆ. ಹೀಗೆ ಜರ್ಮನ್ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದ ‘ಫೇರಿಟೇಲ್ ಸಹೋದರರು’ 1859 (ವಿಲ್ಹೆಲ್ಮ್)ಹಾಗು 1863(ಜೇಕಬ್)ರಲ್ಲಿ ಮರಣ ಹೊಂದಿದರು. ಆಗ ಕೂಡ ಅವರ ಡಿಕ್ಷನರಿಯ ಕೆಲಸ ಅಪೂರ್ಣವಾಗಿತ್ತು!!

ತಮ್ಮ ಜರ್ಮನ್ ಸಂಸ್ಕೃತಿಯ ಸಾಮಾನ್ಯ, ದೈನಂದಿನ ಕಥೆಗಳನ್ನು ಅಸಾಮಾನ್ಯ, ರೋಚಕ ಕಥೆಗಳನ್ನಾಗಿ ಮಾರ್ಪಡಿಸಿದ ಖ್ಯಾತಿ ಗ್ರಿಮ್ ಸಹೋದರರಿಗೆ ಸಲ್ಲುತ್ತದೆ. ಅವರ ‘ಕಿಂಡರ್ ಉಂಡ್-ಹಾಸ್ಮಾರ್ಶೆನ್’ ಬೈಬಲ್ಲಿನ ನಂತರ ಜರ್ಮನಿಯಲ್ಲಿ ಅತಿ ಹೆಚ್ಚು ಮಾರಾಟವಾದ ಪುಸ್ತಕ. ಈ ಕಥೆಗಳು ಬರಬರುತ್ತ ಇತರ ದೇಶಗಳ ಸಾಹಿತ್ಯಗಳಲ್ಲೂ ತಕ್ಕಮಟ್ಟಿಗೆ ಮಾರ್ಪಾಟುಗೊಂಡು ಪ್ರಚಾರಪಡೆದು ಕೊನೆಗೆ ಪ್ರಪಂಚದೆಲ್ಲೆಡೆ ಹರಡಿದವು. ಆದರೆ ನಾವು ಇಂದು ಕೇಳುವ ಫೇರಿಟೇಲ್ ಕಥೆಗಳಿಗೂ ಗ್ರಿಮ್ ಸಹೋದರರ ಕಥೆಗಳಿಗೂ ಬಹಳ ವ್ಯತ್ಯಾಸಗಳಿವೆ. ಅದೆಲ್ಲ ಇರಲಿ, ಗ್ರಿಮ್ ಸಹೋದರರ ಜೀವನದ ಬಗೆಗೇ ರೋಚಕ ಕಥೆಗಳು ಹೇಳಲ್ಪಡುತ್ತವೆ! 2005ರಲ್ಲಿ ಟೆರಿ ಗಿಲಿಯಮ್ ನಿರ್ದೇಶನದ ‘ಬ್ರದರ್ಸ್ ಗ್ರಿಮ್’ ಎಂಬ ಫ್ಯಾಂಟಸಿ ಚಲನಚಿತ್ರ ಎಲ್ಲರ ಮನಸೂರೆಗೊಂಡಿತು.

ಚಿತ್ರಕೃಪೆ: www.notablebiographies.com  

Comments (1)

« Previous entries