Archive for February, 2008

ಪಡಖಾನೆಯ ಹುಡುಗಿ - ಬೇಸರದ ಬಿರುಮಾತುಗಳು

motika_200702_indian_woman_in_red_36x24_acrylic.jpg 

ಭೋರೆಂದು ಹುಯಿಲಿಡುವ ಬಿರುಸುಗಾಳಿ
ಒಂದಿಷ್ಟು ಸುರಿದು ಕಾಣದಾದ
ಮಳೆಹನಿಗಳು
ಬೋಳು ಸೆಟೆದು ನಿಂತ
ಹೆಸರಿಲ್ಲದ ಮರದಲ್ಲಿ
ನಾಲ್ಕು ಚಿಗುರೆಲೆ
ರಾತ್ರೆ ಒಂಬತ್ತೂವರೆಗೆ
ಬಿಡುವ ಟೆಂಟು ಸಿನೆಮಾ
‘ತಿರುಪತಿ ಗಿರಿವಾಸಾ..’ ನಂತರ
ಅವೇ ಹಳೆ ಕನ್ನಡ ಹಾಡುಗಳು…

ಹೌದೋ,
ನಿನ್ನ ನೆನೆದರೆ ವಿಚಿತ್ರ ರೊಚ್ಚೆದ್ದು
ಸುತ್ತಿಗೆಯಾಗಿ
ನನ್ನ ಕುಟ್ಟಿ ಪುಡಿ ಮಾಡಿ
‘ಉಫ್’ ಎಂದು ಗಾಳಿಯೊಡನೆ ಹಾರಿಸಿ
ಹೇಳಬೇಕೆಂದಿದ್ದು ಕಳೆದುಹೋಗಿ
ಇನ್ನೇನೇನೋ ಆಗಿ..
ನನ್ನ ಬೇಸರ
ನಿಗಿನಿಗಿ ಕೆಂಡದಂತೆ
ಕೆಂಪಗೆ ಹೊಳೆದು ಅಣಗಿಸುತ್ತಿದೆ.

ನೀನಲ್ಲಿ ಕುಳಿತು
ನನ್ನ ಗುಟುಕರಿಸುತ್ತ
ನಗುತಿರುವಷ್ಟು ಹೊತ್ತು
ಬೆಳಕು ನನಗೆ.
ಆಮೇಲೆ
ಅಪ್ಪಿಕೊಳಲಾಗದ ನೆನಪುಗಳು
ಕಳೆಯಲಾರದ ಘಳಿಗೆಗಳು
ಲೇಖನಿ, ಹಾಳೆ
ಬರೀ ಧಗೆ.

ಚಿತ್ರಕೃಪೆ: www.picasaweb.google.com
 

Comments (9)

ಕಾಫಿ ದಿನಗಳು.

fruit1.jpg(ಮೊನ್ನೆ ಸುಮಾರು ವರ್ಷದ ಮೇಲೆ ಚಂದ್ರಶೇಖರ್ ಅಂಕಲ್ ಸಿಕ್ಕಿದ್ರು. ಅವ್ರು ಯಾರಪ್ಪಾ ಅಂದ್ರೆ ನಮ್ಮಪ್ಪನ ದೋಸ್ತಿ. ನಾನೂ ಊರ್ಕಡೆ ಹೋಗೇ ಸುಮಾರು ಎಂಟು ವರ್ಷಾನೇ ಆಗೋಯ್ತು ಅಂತ ನೆನಪು ಬಂತು.. ಕಾಫಿನಾಡಿನ ಸ್ಟೈಲಿನಲ್ಲಿ  ’ಹೇಗಿದೆ ಅಂಕಲ್ ಕಾಫಿ ಈಸರ್ತಿ?’ ಅಂತ್ಕೇಳಿದೆ. ’ಕುಯ್ಸಿ ಒಣಗ್ಲಿಕ್ ಹಾಕಿದೆ. ಮಳೆ ಬಂದ್ರೆ ಎಲ್ಲ ತೋಯುತ್ತಲ್ಲ!’ ಅಂದ್ರು. ಆಗ ನೆನಪಾಗಿದ್ದು ಸಿಕ್ಕಿದ ಹಾಳೆಯಲ್ಲಿ ಮೂಡಿಸಿ ನಿಮಗೆ ಕೊಟ್ಟಿದೀನಿ. ಒಂದು ಕಪ್ ಕಾಫಿಯ ಜತೆ ಹೀರಿಕೊಳ್ಳಿ.)

 ಕಾಫಿ ಬಯಲು. ಅಂದರೆ ಹಿತ್ತಲು ಚಾಚುವಷ್ಟಕ್ಕೂನೂ, ಅಗೋ ಆ ಪಪ್ಪಾಯಿಮರದವರೆಗೂ ಉದ್ದೂಕೆ ಹರವಿದ ಕಾಫಿಹಣ್ಣುಗಳು. ಇನ್ನೂ ಮೂಗಿಗೆ ಅಡರುವ ಹಣ್ಣಿನ ಕಂದುಪರಿಮಳ. ಇನ್ನೊಂದುಚೂರು ಒಣಗಿದ ಮೇಲೆ ನಮಗೆ ಗಮ್ಮತ್ತು. ಅದರ ಮೇಲೆ ’ಕುವ್ವೋ!! ಕುಲಲಲಲಲೋ’ ಎಂದು ಗಂಟಲು ಹರಿವ ಹಾಗೆ ಕೂಗುತ್ತ ಓಡಿಹೋಗಬೇಕು, ಧಡಂ ಎಂದು ಜಾರಿಬೀಳಬೇಕು. ತರಚುಗಾಯ, ಮಂಡಿಪೆಟ್ಟು (ಮಂಡೆಪೆಟ್ಟು ಅಲ್ಲ!!) ಮಾಡಿಕೊಳ್ಳದಲೆ ಸಂಜೆ ಬಚ್ಚಲುಮನೆಗೆ ವಾಪಾಸು ಬಂದರೆ ಅವಮಾನ. ಕೆಪಿಜಿ ಮೇಷ್ಟ್ರ ಮಡದಿ ಹೂವಮ್ಮನವರು ’ಹಯ್ಯೊ ನಿಮ್ಮನ್ನ ನೋಡುದ್ರೆ ತಲ್ಕೆಟ್ಟು ಮೊಸರಾಗ್ತದೆ!!’ ಎಂದು ಆರ್ಭಟಿಸುತ್ತ ಇದ್ದರು ಅದನ್ನ ಜಮಾಖರ್ಚಿಗೆ ತೆಗೆದುಕೊಳ್ಳುವವರು ಯಾರು? ನಾವುಗಳಿಗೆ ಕಾಫಿಹಣ್ಣು ಕೊಯ್ಯುವ ಸೀಸನ್ನು ಬಂದರೆ ಬೇರೇನಾದರು ಕಣ್ಣಿಗೆ ಬಿದ್ದರೆ ತಾನೆ?

ಸುಮ್ಮನೆ ಬರುತ್ತ ಇರಲಿಲ್ಲ ಕಾಫಿ ಸೀಸನ್ನು. ಮೊದಲು ಕಾಫಿಹೂವಿನ ಪರಿಮಳದೊಂದಿಗೆ ಶುರುವಾದದ್ದು ಒರಳೊಳಗಿನ ‘ಕಾಪಿ’ ಕುಟ್ಟುವ ಪರಿಮಳದ ಜತೆಗೇ ಮುಗಿಯುವ ವಿಶೇಷ ಋತು ಅದು. ಒಂದು ಬೆಳಗ್ಗೆ ನಾವು ಎದ್ದಾಗ ಇದ್ದಕ್ಕಿದ್ದ ಹಾಗೆ ಕಾಫಿಗಿಡಗಳ ಕಡುಹಸಿರು, ತಿಳಿಹಸಿರುಗಳ ನಡುವೆ ಬೆಣ್ಣೆಮುದ್ದೆಗಳು ಕಾಣಿಸಿಕೊಂಡು ನಮಗೆ ವಿಸ್ಮಯ. ಮಾರನೆದಿನ ಕಳೆಯುವಷ್ಟರಲ್ಲಿ ಎಲ್ಲ ಹೂವುಗಳೂ ಅರಳಿಕೊಂಡು ತಲೆತಿರುಗುವ ಹಾಗೆ ಘಮ. ಹೂವುಗಳಿಗೆ ಸುತ್ತುಹಾಕುವ ಜೇನು ಹುಳ, ಕಣಜ, ಇರುವೆ, ಪುಟ್ಟ ಹಕ್ಕಿಗಳು ಇನ್ನೇನೇನೊ. ನಾವು ಅವನ್ನು ಮುಡಿದುಕೊಳ್ಳಲು ಯತ್ನಿಸಿದರೆ ಅಮ್ಮನ ಕೈಲಿ ಬೈಸಿಕೊಳ್ಳಬೇಕಾಗಿತ್ತು. ಯಾರಾದರು ನಾವು ಅವನ್ನು ಮೂಸುವುದನ್ನು ನೋಡಿದರು ’ಹುಳಪಳ ಇರ್ತವೆ, ನಿಂ ಮೂಗೋಳಗೆ ಹೊಕ್ಕು ಸೀದ ಮೆದುಳಿಗೆ ಹೋಗಿ ಅಲ್ಲಿ ಕೊರೆದು..’ ಎಂದೆಲ್ಲ ಅಸಹ್ಯ ಚಿತ್ರಣ ನೀಡಿ ನಮ್ಮನ್ನು ಜಾಗ ಬಿಟ್ಟೋಡುವ ಹಾಗೆ ಮಾಡುವಲ್ಲಿ ಯಶಸ್ವಿಯಾಗುತ್ತಿದ್ದರು. ಒಟ್ಟಿನಲ್ಲಿ ಕಾಫಿ ಹೂವುಗಳು ಕಾಣಿಸಿಕೊಂಡಾಗ ನಮಗೆ ಸಂಭ್ರಮ. ನಮ್ಮ ಕಾಯುವಿಕೆ ಆಗಲಿಂದಲೆ ಶುರು. ಕಾಫಿಕಾಯಿ ಹಸುರುಬಣ್ಣದಿಂದ ಕೆಂಪಗೆ ಆಗತೊಡಗಿದ ಹಾಗೆ ನಮ್ಮ ತಾಳ್ಮೆ ಕೂಡ ಕಡಿಮೆ ಆಗುತ್ತಿದ್ದುದು ಎಲ್ಲರ ಗಮನಕ್ಕೆ ಬರುತ್ತಿತ್ತು. ಅಮ್ಮ ಒಳಗೆ ಕಟ್ಟಿಟ್ಟ ಗೋಣಿಚೀಲಗಳನ್ನು ಬಿಸಿಲಿಗೆ ಹರವಿ, ಅಂಗಳಕ್ಕೆ ಸಗಣಿ ಬಳಿಸಿ ಒರಳನ್ನು ಅಂಗಳದ ಮಧ್ಯಕ್ಕೆ ಪ್ರತಿಷ್ಠಾಪನೆ ಮಾಡಿಸುತ್ತ ಇದ್ದರು.

ಕಾಫಿಹಣ್ಣು ಕೀಳುವ ಸೌಭಾಗ್ಯ ಎಲ್ಲರಿಗು ಲಭ್ಯವಾಗುತ್ತಿರಲಿಲ್ಲ. ನಾವು ಏನಿದ್ದರು ಪುಟ್ಟಪುಟ್ಟ ಚೀಲಗಳನ್ನು ಹಿಡಿದುಕೊಂಡು ಕೆಳಗೆ ಬಿದ್ದ ಹಣ್ಣುಗಳನ್ನು ಜಾಗ್ರತೆಯಾಗಿ ಆರಿಸಿಡಲು ರೆಡಿಯಾಗಿರಬೇಕಿತ್ತು. ಬೆಳಕೇ ಒಳನುಗ್ಗದ ಕಾಫಿತೋಟದ ಪುಟ್ಟಪುಟ್ಟ ಮರಗಳ ಗೆಲ್ಲುಗಳ ಮೇಲೆ ತಲೆಗೆ ಬಟ್ಟೆಸುತ್ತಿಕೊಂಡ ಅಮ್ಮನೂ ಇತರ ಆಳುಗಳೂ ಹತ್ತಿಕೂತು ಸರಸರನೆ ರಾಶಿರಾಶಿ ಹಣ್ಣುಕೀಳುವದನ್ನು ನೋಡುತ್ತ ನಾವು ಧನ್ಯರಾಗುತ್ತಿದ್ದೆವು. ಹಣ್ಣುಗಳನ್ನು ಹೆರಕುತ್ತ ನಮ್ಮ ಕೈಯಿಗಳೂ ಅಂಟಂಟಾಗಿಬಿಡುತ್ತಿದ್ದವು. ಮಧ್ಯಾಹ್ನ ಊಟಮುಗಿದ ಮೇಲೆ ಆಳುಗಳ ಕೈಗಳು ಸ್ವಲ್ಪ ನಿಧಾನವಾದರೂ ನಮಗೆ ಅದೇ ಉತ್ಸಾಹ. ನಾವೆಲ್ಲ ಮಕ್ಕಳು ಸೇರಿ ಒಂದು ಮರವನ್ನಾದರು ನಮ್ಮ ಸುಪರ್ದಿಗೆ ಒಪ್ಪಿಸಬೇಕೆಂದು ಹಠಮಾಡಲು ಆರಂಭಿಸಬೇಕೆಂದರೆ ಅದು ಸುಸಮಯ. ಅಮ್ಮ ಆಳುಗಳೊಡನೆ ಸಮಾಲೋಚನೆ ನಡೆಸಿ ದಪ್ಪಕಾಂಡದ ಅಷ್ಟೇನೂ ಹಣ್ಣುಗಳಿರದ ಪುಟ್ಟಮರವೊಂದನ್ನು ಆಯ್ಕೆಮಾಡುವರು. ‘ತಲೆ ಒಡಕೋಬೇಡಿ!’ ಎಂಬ ಎಚ್ಚರಿಕೆ ಬೇರೆ. ಆಮೇಲೆ ನಾವು ಹೆಮ್ಮೆಯಿಂದ ಮರಹತ್ತಿ ಆಕಾಶ ಕೆಂಪಾಗುವವರೆಗು ಆ ಮರವನ್ನೆ ತಬ್ಬಿಕೊಂಡು ಹಣ್ಣುಕೀಳುತ್ತ ಕುಳಿತಿರುವುದು.

ಒಣಗಿದ ಕಾಫಿಹಣ್ಣುಗಳನ್ನು ಕುಟ್ಟುವ ಕೆಲಸ ಲಕ್ಷ್ಮಿಯದು ಮತ್ತು ಸಗೀರಮ್ಮನದು. ಈರ್ವರೂ ಒಂದಿಷ್ಟು ಕಾಫಿಯನ್ನು ಒರಳಿಗೆ ಹಾಕಿ ಕೈಕೈ ಬದಲಾಯಿಸಿ ಒನಕೆ ಕುಟ್ಟುತ್ತ ಇದ್ದರೆ ನಮಗೆ ಅದೇನೊ ಒಂದು ನೃತ್ಯದಂತೆ ಕಾಣುತ್ತ ಇತ್ತು. ಅದರ ಜತೆಗೆ ಲಕ್ಷ್ಮಿಯ ನಗುವ ಮೂಗುನತ್ತು, ಎಲಡಿಕೆ, ಕಾಫಿಗಳ ಸಮಾರಾಧನೆ, ಗುಸುಗುಸು ಮಾತುಕತೆ, ಸಗೀರಮ್ಮನ ಒರಟು ರಟ್ಟೆಗಳು, ಕಾಫಿಬೀಜ ಕೇರುವ ಸದ್ದು, ಸಾರಿಸಿದ ಹಿತ್ತಲ ಅಂಗಳ - ಎಲ್ಲ ಸೇರಿಕೊಂಡು ಒಂದುರೀತಿ ಹಬ್ಬದ ವಾತಾವರಣ. ಎಲ್ಲ ಮುಗಿದು ಕಾಫಿಬೀಜಗಳು ರೆಡಿಯಾಗಿ ಗೋಣಿಚೀಲ ಸೇರುವಾಗ ನಮಗೆ ಏನೊ ಕಳಕೊಂಡಹಾಗೆ. ನಾನು ಹಿತ್ತಲಂಚಿನ ನನ್ನ ಕಾಫಿಗಿಡದ ಕೊಂಬೆಯ ಮೇಲೆ ವಿರಹಿಯ ಹಾಗೆ ಸುಮ್ಮನೆ ಪುಸ್ತಕ ಹಿಡಿದು ಜೀಕಾಡುತ್ತ ಕೂರುವದೋ, ತೋಟದ ಕಾಲುದಾರಿಯಲ್ಲಿ ಅಡ್ಡಾಡುವದೊ ಮಾಡಿಕೊಂಡಿರುತ್ತಿದ್ದೆ.

ನಾನು ಹೈಸ್ಕೂಲು ಓದುತ್ತಿದ್ದಾಗಲೆ ಕಾಫಿಗಿಡಗಳಿಗೆ ಏನೊ ರೋಗ ತಗುಲಿ ಎಲ್ಲವನ್ನೂ ಕಿತ್ತುಬಿಸಾಡಬೇಕಾಯಿತು. ಅಪ್ಪನಿಗೆ ಏಕೊ ಅವುಗಳ ಮೇಲೆ ಬರಬಾರದ ಬೇಸರ ಬಂತು. ಸರಿ. ಪೂರ್ತಿ ತೆಂಗಿನ ಸಸಿಗಳನ್ನು ನೆಡಿಸಿದರು.

ಚಿತ್ರಕೃಪೆ: www.yoppi.com  
 

Comments (7)

‘ಪದ - ಸಂಗೀತಗಳ ಸರದಾರರು’

griot1.jpg

 ’ಟಾಮ್ ಹೇಯ್ಲ್ ಎಂಬ ತರುಣ ತನ್ನ ಬಿ.ಎ.(ಫ್ರೆಂಚ್) ಮುಗಿಸಿದ ನಂತರ ಅಮೆರಿಕದ ಶಾಂತಿಪಡೆಯ ಜತೆಗೆ 1964 ರಿಂದ 1966ರ ವರೆಗೆ ಪಶ್ಚಿಮ ಆಫ್ರಿಕದ ನೈಜರ್ನಲ್ಲಿ ಫ್ರೆಂಚ್ ಭಾಷಾತಜ್ನನಾಗಿ ಕೆಲಸ ಮಾಡುತ್ತ ಇದ್ದ ಸಮಯ ಅದು. ಒಂದು ಕುತೂಹಲಕಾರೀ ಘಟನೆ ನಡೆಯಿತು. ಒಂದು ಬೆಳಜಾವ. ಗಾಢನಿದ್ದೆಯಲ್ಲಿದ್ದ ಟಾಮ್ ಪಕ್ಕದ ಮನೆಯಿಂದ ಕೇಳಿ ಬರುತ್ತಿದ್ದ ವಿಚಿತ್ರವಾದ ಸದ್ದುಗಳಿಂದ ಎಚ್ಚರಗೊಂಡ. ಏನೆಂದು ನೋಡಲು ಹೋದರೆ ಪಕ್ಕದ ಮನೆಯ ಅಂಗಳದಲ್ಲಿ ಒಬ್ಬ ಮನುಷ್ಯ ಮನೆಯೊಡೆಯನೆದುರು ನಿಂತುಕೊಂಡು ಏನೊ ಹಾಡುತ್ತಿದ್ದಾನೆ. ಟಾಮನಿಗೆ ಏನೂ ಅರ್ಥವಾಗಲಿಲ್ಲ. ಆತ ಆ ಮನುಷ್ಯ ಯಾರೊ ಭಿಕ್ಷುಕ ಎಂದುಕೊಂಡು ’ಏ! ಬಾಯಿ ಮುಚ್ಚಿಕೊ!’ ಎಂದು ಗದರಿದ. ಆ ಮನುಷ್ಯ ಈತ ಹೇಳಿದ್ದು ಏನೂ ಅಲ್ಲವೇನೊ ಎನ್ನುವ ಹಾಗೆ ತನ್ನ ಹಾಡನ್ನು ಮುಂದುವರಿಸಿದ. ಟಾಮ್ ಗೆ ಅಸಹನೆ ತಡೆಯಲಾಗದೆ ಪುನಃ ಬೈಯೋಣ ಎಂದು ಹೋಗಿ ನೋಡಿದರೆ ಪಕ್ಕದ ಮನೆಯಾತ ಹಾಡುಗಾರನಿಗೆ ಬೆಲೆಬಾಳುವ ಕೈಮಗ್ಗದ ಕಂಬಳಿಯೊಂದನ್ನ ಉಡುಗೊರೆಯಾಗಿ ನೀಡುತ್ತಿದಾನೆ! ಈ ಘಟನೆಯನ್ನು ಯಾಕೊ ಟಾಮ್ ಮರೆಯಲಿಲ್ಲ. ಇದು ಒಬ್ಬ ‘ಗ್ರಿಯ’(Griot)ನ ಜತೆ ಆತನ ಮೊತ್ತಮೊದಲ ಭೇಟಿಯಾಗಿತ್ತು. ನಂತರ ತಾನು ಬರೆದ ಪುಸ್ತಕ ‘ಗ್ರಿಯಸ್ ಎಂಡ್ ಗ್ರೀಯಾಸ್’ ನಲ್ಲಿ ಗ್ರಿಯರುಗಳನ್ನು ‘ಪದಗಳು ಹಾಗೂ ಸಂಗೀತದ ಸರದಾರರು’ ಎಂದು ಬಣ್ಣಿಸುತ್ತಾನೆ. ಈ ಬದಲಾವಣೆಗೆ ಕಾರಣವೇನು?

‘ಗ್ರಿಯ’ ಸಂಪ್ರದಾಯಕ್ಕೆ ಸುಮಾರು ಸಾವಿರ ವರುಷಗಳ ಹಿನ್ನೆಲೆಯಿದೆ. ಬರಹದ ಬಗ್ಗೆ ಯಾವ ರೀತಿಯ ಅಂದಾಜೂ ಇರದ ಪಶ್ಚಿಮ ಆಫ್ರಿಕದ ಸಹೆಲ್ ಮತ್ತು ಸವನ್ನಾ ಪ್ರಾಂತ್ಯಗಳ ಬುಡಕಟ್ಟುಗಳು ತಮ್ಮ ಚರಿತ್ರೆಯನ್ನು ತಮ್ಮತಮ್ಮ ಭಾಷೆಗಳಲ್ಲಿ ಜಾನಪದ ಸಂಪ್ರದಾಯವೊಂದರ ಮೂಲಕ ಮಹಾಕಾವ್ಯಗಳ ರೂಪದಲ್ಲಿ ಕಾಪಾಡಿಕೊಂಡು ಬಂದಿವೆ! ಗ್ರಿಯಗಳು ಚರಿತ್ರೆಯ ಪಾಲಕರು ಎನ್ನಬಹುದು. ಅಗಾಧವಾದ ನೆನಪಿನ ಶಕ್ತಿ ಹೊಂದಿರುವ ಇವರು ತಮ್ಮ ಬುಡಕಟ್ಟಿನ ಯಾವುದೇ ಮನೆತನದ ನೂರಾರು ವರುಷ ಹಿಂದಿನ ಚರಿತ್ರೆಯನ್ನು ಆರಾಮವಾಗಿ ಹಾಡಿ ಹೇಳಬಲ್ಲರು. ಗಂಡುಚರಿತ್ರಕಾರರನ್ನು ‘ಗ್ರಿಯ’ ಎಂದೂ ಹೆಣ್ಣು ಚರಿತ್ರಕಾರರನ್ನು ‘ಗ್ರೀಯಾ’(Griotte) ಎಂದೂ ಕರೆಯಲಾಗುತ್ತದೆ. ಕಾಲ ಬದಲಾಯಿಸುತ್ತಿದ್ದ ಹಾಗೇ ಇವರ ಸಂಪ್ರದಾಯವೂ ಬದಲಾಗುತ್ತ ಬಂದಿದೆ. ಮುಂಚೆ ಗ್ರೀಯ ಮತ್ತು ಗ್ರೀಯಾಗಳ ಕೆಲಸ ಚರಿತ್ರೆ, ಮನೆತನಗಳ ಚರಿತ್ರೆ, ರಾಜಮನೆತನದವರಿಗೆ ಸಲಹೆ, ಮನರಂಜನೆ, ಸುದ್ದಿಗಾರಿಕೆ, ಹೊಗಳಿಕೆ ಮುಂತಾದ ಕೆಲಸಗಳಿಗೆ ಸೀಮಿತವಾಗಿತ್ತು. ಇಂದು ಅವರು ಟಿ.ವಿ, ರೇಡಿಯೊ ಮಾಧ್ಯಮಗಳ ಮೂಲಕ, ಸಿಡಿಗಳನ್ನು ಹೊರತರುವುದರ ಮೂಲಕ ಎಲ್ಲರನ್ನು ತಲುಪುವಂತೆ ಆಗಿದೆ. ಎಷ್ಟೋ ಗ್ರಿಯ, ಗ್ರೀಯಾಗಳು ಹಳೆಯ ಮಹಾಕಾವ್ಯಗಳನ್ನು ಹೊಸ ರೀತಿಯಲ್ಲಿ ವ್ಯಾಖ್ಯೆ ಮಾಡುವ ಮೂಲಕ ಹೊಸ ಪ್ರಯೊಗಗಳಿಗೆ ಕಾರಣರಾಗಿದ್ದಾರೆ. ತಮ್ಮ ಈ ಸೇವೆಗೆ ಪ್ರತಿಯಾಗಿ ಅವರಿಗೆ ಉಡುಗೊರೆಗಳನ್ನು ನೀಡಲಾಗುತ್ತದೆ. ಗ್ರಿಯಗಳಿಗೆ ಇಂಥದೇ ಉಡುಗೊರೆ ಬೇಕೆಂಬುದಿಲ್ಲ. ಕೆಲವೊಮ್ಮೆ ನಾಣ್ಯಗಳು ದೊರಕಿದರೆ ಒಬ್ಬಾತ ತನ್ನ ಗ್ರೀಯಾಳಿಗೆ ಒಂದು ಪುಟ್ಟ ಏರೋಪ್ಲೇನನ್ನೆ ಉಡುಗೊರೆಯಾಗಿ ನೀಡಿದ ನಿದರ್ಶನವೂ ಇದೆ! ಗ್ರಿಯ ಅಥವಾ ಗ್ರೀಯಾ ಆಗಬೇಕೆಂದರೆ ತೀಕ್ಷ್ಣ ನೆನಪಿನ ಶಕ್ತಿಯ ಜತೆ ಸಂಗೀತಜ್ನಾನ ಕೂಡ ಇರಬೇಕಾದ್ದು ಅವಶ್ಯಕ. ಸಾಮಾನ್ಯವಾಗಿ ಇದು ತಂದೆತಾಯಂದಿರಿಂದ ಮಕ್ಕಳಿಗೆ ದಾಟಿಸಲ್ಪಡುವುದು. ಇಂದಿಗೂ ಅವರನ್ನು ಬುಡಕಟ್ಟುಗಳಲ್ಲಿ ಭಯಭಕ್ತಿಯಿಂದ ಕಾಣುತ್ತಾರೆ.

ಗ್ರೀಯಾಗಳು ಸಾಧಾರಣವಾಗಿ ವಿಶೇಷ ಸಂದರ್ಭಗಳಲ್ಲಿ, ಉತ್ಸವಗಳಲ್ಲಿ, ಸಭೆಸಮಾರಂಭಗಳಲ್ಲಿ ಹಾಡುತ್ತಾರೆ. ಸುಮಾರು ಕಾಲದವರೆಗು ಮಹಾಕಾವ್ಯಗಳನ್ನು ಗ್ರಿಯಗಳು ಮಾತ್ರ ಹಾಡುವುದಾಗಿತ್ತು. ಮಹಾಕಾವ್ಯವನ್ನು ಹಾಡಲು ದಿನಗಟ್ಟಲೆ, ಕೆಲವೊಮ್ಮೆ ವಾರಗಟ್ಟಲೆ ತಗುಲುವುದೆ ಇದಕ್ಕೆ ಕಾರಣ ಇರಬಹುದು. ಗ್ರೀಯಾಗಳು ಮಾಹಾಕಾವ್ಯಗಳ ಕೆಲವು ಭಾಗಗಳನ್ನಷ್ಟೆ ಹಾಡುತ್ತಿದ್ದರು. ಇತ್ತೀಚೆಗೆ ಹಲವಾರು ಗ್ರೀಯಾಗಳು ತಾವೇ ಹಲವಾರು ಮಹಾಕಾವ್ಯಗಳನ್ನು ರಚಿಸುತ್ತಿರುವುದು ಹೊಸ ಬೆಳವಣಿಗೆ. ಪಶ್ಚಿಮ ಆಫ್ರಿಕದಲ್ಲಿ ಪ್ರಚಲಿತವಿರುವ ಇನ್ನೊಂದು ಬಗೆಯ ಕಾವ್ಯಪಠಣವನ್ನು ‘ಸಾಬಿ’ ಎನ್ನಲಾಗುತ್ತದೆ. ಸಾಬೀಗಳು ಗಂಡುಹೆಣ್ಣಿನ ಸಂಬಂಧಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತವೆ. ಈ ಕಾವ್ಯಗಳಲ್ಲಿ ಹೆಣ್ಣು ಗಂಡಿನ ತಾರತಮ್ಯದ ಬಗ್ಗೆ ಹಲವಾರು ಪ್ರಶ್ನೆಗಳನ್ನೆತ್ತಲಾಗಿರುವುದು ಕಂಡುಬರುತ್ತದೆ. ಮದುವೆಯ ಸಮಯದಲ್ಲಿ ಗ್ರೀಯಾಗಳು ಮದುಮಗಳನ್ನು ಕುರಿತು ಹಾಡುವ ಹಾಡೊಂದರ ಅನುವಾದ ಇಂತಿದೆ:
ಅಳುವುದ ನಿಲ್ಲಿಸು, ಎಲೆ ಮದುಮಗಳೆ
ಅಳುವುದ ನಿಲ್ಲಿಸು, ನನಗೆ ಕಿವಿಗೊಡು
ನಿನ್ನ ಅತ್ತೆ ದೂಷಣೆ ಮಾಡಿದರೆ,
ಅತ್ತುಬಿಡು ಅಷ್ಟೆ, ಏನೂ ಹೇಳದಿರು
ನಿನ್ನ ಅತ್ತಿಗೆ ಮೈದುನಂದಿರು ನಿನ್ನ ದೂಷಿಸಿದರೆ,
ಅತ್ತುಬಿಡು ಅಷ್ಟೆ, ಏನೂ ಹೇಳದಿರು
ನಿನ್ನ ಗಂಡನ ತಾಯಿ ನಿನ್ನ ದೂಷಿಸಿದರೆ,
ಅತ್ತುಬಿಡು ಅಷ್ಟೆ, ಏನೂ ಹೇಳದಿರು
ಆದರೆ ನಿನ್ನ ಮನೆಬಿಟ್ಟು ಹೊರಬರುವುದು ಅಪರಾಧವಲ್ಲ.

ಇನ್ನೊಂದು ಸಾಬಿಯಲ್ಲಿ ಮದುಮಗಳಿಗೆ ತನ್ನ ಗಂಡ ತನಗೆ ಮೋಸಮಾಡಿರುವುದು ಹಾಗೂ ತನಗೆ ಸೋಡಚೀಟಿ ನೀಡಲು ಹವಣಿಸುತ್ತಿರುವುದು ತಿಳಿದುಬರುತ್ತದೆ. ಆಕೆ ಗಂಡನಿಗೆ ಸರಿಯದ ಪಾಠ ಕಲಿಸಲು ನಿರ್ಧರಿಸುತ್ತಾಳೆ. ಬಿತ್ತನೆಯ ಸೀಸನ್ನು ಗಂಡ ಉಳುತ್ತ ಹೋಗುತ್ತಿದ್ದಂತೆ ಆಕೆ ಬೀಜ ಬಿತ್ತಬೇಕು. ಆಕೆ ಬೀಜಗಳನ್ನೆಲ್ಲ ಬೇರೆಡೆ ಚೆಲ್ಲಿ ಬಿತ್ತನೆಯಾಯಿತೆಂದು ಸುಳ್ಳು ಹೇಳುತ್ತಾಳೆ. ಗಂಡ ಬಿತ್ತನೆಯ ನಂತರ ‘ಕೆಲಸ ಮುಗಿಯಿತಲ್ಲ! ಇನ್ನು ನನಗೆ ನಿನ್ನ ಅವಶ್ಯಕತೆಯಿಲ್ಲ’ ಎಂದು ಹೇಳಿ ನಾನು ನಿನಗೆ ಡೈವೋರ್ಸು ನೀಡಿದ್ದೇನೆ ಎಂದು ಹೇಳುತ್ತಾನೆ. ಆಕೆ ನಕ್ಕು ‘ನೀನು ನನಗೆ ಡೈವೋರ್ಸು ನೀಡುವ ಮೊದಲೆ ನಾನು ನಿಂಗೆ ಡೈವೋರ್ಸು ನೀಡಿದೇನೆ. ಹೋಗಿ ನಿನ್ನ ಹೊಲ ನೋಡು.’ ಎಂದು ಹೇಳಿ ಹೊರಟುಹೋಗುತ್ತಾಳೆ. ಅಕ್ಕಪಕ್ಕದ ಹೊಲಗಳು ಚಿಗುರಿ ಹಸಿರೊಡೆಯುತ್ತಿದ್ದರೆ ಈತನ ಹೊಲ ಬರಡಾಗಿ ಬಿಕೋ ಅನ್ನುತ್ತಿದೆ! ಆಕೆ ಹಾಗೆ ತನಗೆ ಡೈವೋರ್ಸು ನೀಡಿದಳು ಎಂದು ಗಂಡನಿಗೆ ಅರಿವಾಗುತ್ತದೆ. ಹೆಂಗಸರನ್ನು ಜಾಣ್ಮೆಯಲ್ಲಿ ಸೋಲಿಸಲಾಗದು ಎಂದು ಬಿಂಬಿಸಲು ಗ್ರೀಯಾಗಳು ಈ ಕಥೆ ಹಾಡುತ್ತಾರೆ. ಹೆಚ್ಚಿನ ಗ್ರೀಯಾ ಹಾಡುಗಳಲ್ಲಿ ಸ್ವಾತಂತ್ರ್ಯ, ಸ್ವಾಭಿಮಾನ, ಹೆಣ್ಣಿನ ಸಾಮಾಜಿಕ ಪರಿಸ್ಥಿತಿ ಹಾಗೂ ಗಂಡ ಹಾಗೂ ಆತನ ಕುಟುಂಬದೊಡನೆ ಹೆಣ್ಣಿನ ಸಂಬಂಧಗಳ ಚಿತ್ರಣಗಳು ಕಂಡುಬರುತ್ತವೆ.

ಚಿತ್ರ: www.blackstorytellers.com

Comments (6)

ನನ್ನೊಳಗಿನ ಝೆನ್ ಹಾಗು ವ್ಯಾಲೆಂಟೈನ್

mischtechn_011.jpg

’ಬುದ್ಧಿ ಕೊಡು, ಬಲ ಕೊಡು ಎಂದು ನಾನು ಕೇಳುವುದಿಲ್ಲ
ಚಳಿಯಾಗುತ್ತಿದೆ - ಮೈ ಕಾಯಿಸಿಕೊಳ್ಳಲು ಒಂದಿಷ್ಟು
ಬೆಂಕಿ ಕೊಡು, ಸಾಕು! ರೆಕ್ಕೆಯಿದ್ದದ್ದೊ ಇಲ್ಲದ್ದೊ
ಇಲ್ಲಿ ನಗೆಮೊಗದ ಯಾವ ದೇವರೂ ನನ್ನನ್ನರಸಿ ಬರುವುದಿಲ್ಲ.’
(ಮೂಲ: ಅನಾ ಅಹ್ಮತೋವಾ, ಅನುವಾದ: ಶಾ. ಬಾಲುರಾವ್.)

ಹೋದ ವಾರ ಸುಳಿವೂ ನೀಡದೆ ಮಳೆ ಬಿದ್ದು ಒಂದಿಷ್ಟು ತಂಪು ಸುರಿಯಿತು. ನಾನು ಗೆಳತಿ ಚೇತನಾ ಕೊಟ್ಟ ಝೆನ್ ಕಥೆಗಳ ಗುಂಗಿನಲ್ಲಿ ಓಡಾಡಿಕೊಂಡು ಆನಂದವಾಗಿದ್ದೆ. ಒಳ್ಳೆಯ ಕಥೆಗಳು ಓದಲು ಸಿಗುವುದೆ ಅಪರೂಪ ಆಗಿರುವಾಗ ಸರಳ, ತೀಕ್ಷ್ಣ ಕಥೆಗಳ ಖಜಾನೆಯೆ ದೊರಕಿದರೆ ಆನಂದ ಆಗದೆ ಇದ್ದೀತೆ? ಬೆಂಗಳೂರಿನಲ್ಲಿ ಎಲ್ಲ ಕಡೆ ವ್ಯಾಲೆಂಟೈನ್ಸ್ ಡೇ ಸಂಭ್ರಮ. ಎಲ್ಲದಕು ಒಂದು ದಿನ, ಸಮಯ ಇರುವ ಹಾಗೇ ಪ್ರೇಮಿಗಳಿಗೂ ಒಂದು ದಿನ. ಎಲ್ಲಾ ರೆಸ್ಟುರಾಗಳೂ ತುಂಬಿ ತುಳುಕುತ್ತ ಸಂತಸದ ನಾಚಿಕೆ ಸೂಸುತ್ತ ಇರುತ್ತವೆ. ಈ ದಿನದ ಬಗ್ಗೆ ಹಿಂದೆಲ್ಲೊ ಓದಿದ್ದ ಕಥೆಯೊಂದು ನೆನಪಾಗುತ್ತಿದೆ.

ಹೀಗೊಂದು ದೇಶ. ಅಲ್ಲೊಬ್ಬ ರಾಜ. ಅವನಿಗೋ ದಿನದ ಇಪ್ಪತ್ತನಾಲ್ಕು ಗಂಟೆಯೂ ಯುದ್ಧಗಳದ್ದೆ ಚಿಂತೆ. ಯುದ್ಧ ಮಾಡಲಿಕ್ಕೆ ಸೈನ್ಯ ಬೇಕಲ್ಲ! ಸೈನ್ಯಕ್ಕೆ ಜನ ಬೇಕಲ್ಲ! ಸರಿ, ಇದ್ದಬದ್ದ ಹುಡುಗರು, ಯುವಕರನ್ನೆಲ್ಲ ಸೈನ್ಯ ಸೇರುವಂತೆ ಕಾನೂನು ಹೇರಿದ. ಜತೆಗೇ ಇನ್ನೊಂದು ಕಾನೂನೂ ಜಾರಿಗೆ ಬಂತು. ಅದೇನಪ್ಪಾ ಅಂದರೆ ಈ ಸೈನಿಕರು ತಮ್ಮ ಪ್ರೇಯಸಿಯರ ಬಳಿ ಹೋಗುವ ಹಾಗಿಲ್ಲ, ಯಾವುದೆ ಹೊಸ ಮದುವೆ ನಡೆಯೋ ಹಾಗಿಲ್ಲ ಅಂತ. ಯಾಕೆ ಈ ವಿಚಿತ್ರ ಕಾನೂನು ಬಂತೂಂದರೆ ಸೈನಿಕರಿಗೆ ತಮ್ಮ ಕರ್ತವ್ಯ ಮರೆತುಹೋಗಿ ಬರಿ ಪ್ರೇಯಸಿಯರ ಗುಂಗಿನಲ್ಲಿ ಮೈ ಮರೆಯಬಾರದು ಅನ್ನುವುದಕ್ಕೆ. ಈ ಕಡೆ ಸೈನ್ಯ ಸೇರಿದ ಪ್ರೇಮಿಗಳ ಕಥೆಯೋ, ಕೇಳಲೆಬೇಡಿ. ಅದೇ ರಾಜ್ಯದಲ್ಲೊಂದು ಚರ್ಚು, ಅಲ್ಲೊಬ್ಬ ಪಾದ್ರಿ. ಆತನ ಹೆಸರು ವ್ಯಾಲೆಂಟೈನ್ ಅಂತ. ಈ ವ್ಯಾಲೆಂಟೈನ್ ಮಹಾಶಯನಿಗೆ ತನ್ನ ಸೈನಿಕ ಸ್ನೇಹಿತರ ಗೋಳು ನೋಡಲಿಕ್ಕಾಗಲಿಲ್ಲ. ಮೆತ್ತಗೆ ರಾಜನಿಗೆ ಅರಿವಾಗದ ಹಾಗೆ ಗುಟ್ಟಾಗಿ ಪ್ರೇಮಿಗಳ ಮದುವೆ ಮಾಡಿಸಿಬಿಟ್ಟ. ರಾಜನಿಗೆ ವಿಷಯ ತಲುಪಿದ್ದೇ ತಡ ಅವ ಕೆಂಡಾಮಂಡಲವಾದ. ಅವತ್ತೇ ಫಾದರ್ ವ್ಯಾಲೆಂಟೈನನನ್ನು ಕಾನೂನುಬಾಹಿರ ಕೆಲಸ ಮಾಡಿದ್ದಕ್ಕೆ ಗಲ್ಲಿಗೇರಿಸಲಾಯಿತು. ಇದಾದ ಎಷ್ಟೋ ವರುಷದ ನಂತರ ವ್ಯಾಲೆಂಟೈನನಿಗೆ ಸಂತಪದವಿ ಅಂದರೆ ‘ಸೆಯಿಂಟ್ ಹುಡ್’ ನೀಡಲಾಯಿತು. ಈವತ್ತು ನಾವು ಆತನ ಮರಣದ ದಿನವನ್ನ ವೈಭವದಿಂದ ಆಚರಿಸುವುದು ‘ಐರಾನಿಕ್’ ಅನ್ನಿಸ್ತದೆ.

ಅದೆಲ್ಲ ಇರಲಿ ಬಿಡಿ. ಏನಾಗತ್ತೆ ಪ್ರೇಮದ ಹಬ್ಬ ಮುಗಿದ ಮೇಲೆ? ಖಾಲಿ ಭಾವನೆ? ಗಿಫ್ಟ್ ಶಾಪುಗಳಲ್ಲಿ ಉಳಿದುಕೊಂಡ ಕಾರ್ಡುಗಳು ಗಿಫ್ಟುಗಳು ಮುಂದಿನ ವರುಷದವರೆಗು ಕೊಳೆಯುತ್ತವೆಯೆ? ಪ್ರೇಮಿಗಳು ತಮ್ಮ ಮನಸಿನ ಮಾತು ಹೇಳಿಕೊಳ್ಳಲು ಆ ಒಂದು ದಿನದ ದಾರಿ ಕಾಯುತ್ತಾರೆಯೆ? ಗೊತ್ತಿಲ್ಲ. ನಿನ್ನೆ ತುಮಕೂರಿನಿಂದ ಬೆಂಗಳೂರಿಗೆ ಬರುತ್ತ ಇರುವಾಗ ಪಕ್ಕದಲ್ಲಿ ಕೂತಿದ್ದ ಈರ್ವರು ಜೋರಾಗಿ ಮಾತುಕತೆ ನಡೆಸಿದ್ದರು. ಆಧ್ಯಾತ್ಮ, ಸತ್ಯ, ಮಿಥ್ಯೆಗಳ ಬಗ್ಗೆ ವಾದ ನಡೆಯುತ್ತ ಇತ್ತು. ಹೊರಗೆ ಅಪರೂಪಕ್ಕೆ ಧೂಳಿರದ ವಾತಾವರಣ. ರಾತ್ರಿ ಮಳೆಸುರಿದ ಥಂಡಿಗಾಳಿ. ಎಲ್ಲಿಂದಲೊ ಮಣ್ಣಿಂದ ಎದ್ದ ಅಕ್ಕಿ ತೊಳೆದಂಥ ಕಮ್ಮಗಿನ ಪರಿಮಳ ಮೂಗಿಗೆ ಅಡರುತ್ತ ಇತ್ತು. ಹೈವೇಯುದ್ದಕ್ಕು ಬೆಳೆಸಿದ ಬೋಗನ್ವಿಲ್ಲಾ ಪೊದೆಗಳು ತಮ್ಮ ಕಣ್ಣಿಗೆ ರಾಚುವ ಮೆಜೆಂಟಾ, ಹಳದಿ, ತಿಳಿಗೆಂಪು ಬಣ್ಣದ ಹೂವುಗಳನ್ನು ರಾಶಿ ಅರಳಿಸಿ ಒನೆದಾಡುತ್ತ ಇದ್ದವು. ಪಕ್ಕದಲ್ಲಿ ಈರ್ವರೂ ಮಾತಿನಲ್ಲಿ ಮುಳುಗಿಹೋಗಿದ್ದರು. ನನಗೆ ಮೊದಲೆ ಆಥರದ ಮಾತುಗಳಂದರೆ ಗಲಿಬಿಲಿ. ಈಚೆಗೆ ಜಿಡ್ಡು ಕೃಷ್ಣಮೂರ್ತಿಯವರ ಪುಸ್ತಕವೊಂದನ್ನ ಓದಲು ಯತ್ನಿಸಿ ತಲೆಕೆಡಿಸಿಕೊಂಡು ಸುಮ್ಮನಾಗಿದ್ದು ನೆನಪಾಯಿತು. ಬ್ಯಾಗಿನೊಳಗೆ ಕೈಹಾಕಿ ತಡಕಿದೆ. ಚೇತನಾಳ ಝೆನ್ ಕಥೆಗಳ ಪುಸ್ತಕವೇ ಕೈಗೆ ಬಂತು. ಪಕ್ಕದಲ್ಲಿದ್ದವರು ‘ಎಲ್ಲಿ ಮೇಡಂ ಪುಸ್ತಕ ಒಂದು ನಿಮಿಷ ಕೊಡಿ’ ಎಂದು ಇಸಿದುಕೊಂಡರು. ನಾನು ಅವರಿಗೆ ‘ದಾರಿ ಉದ್ದಕ್ಕು ಹೂವುಗಳು ಅಷ್ಟೊಂದು ಚನಾಗಿ ಕಾಣ್ತಿತ್ತಲ್ಲ ನೋಡಿದ್ರಾ?’ ಎಂದು ಕೇಳಿದೆ. ‘ಇಲ್ವಲ್ಲ!’ ಅಂದರು ಅವರು. ‘ಮಿಸ್ ಮಾಡ್ಕೊಂಡ್ರಲ್ಲ!’ ಅಂದು ಸುಮ್ಮನಾದೆ. ನನ್ನ ಝೆನ್ ಆಕ್ಷಣ ನನಗೆ ಹೊಳೆಯಿತು. ಅದು ಹೊಳೆಯಿತೊ ಇಲ್ಲವೊ, ಅದು ನನ್ನೊಳಗಿತ್ತೊ ಇಲ್ಲವೊ, ಅದು ಇತ್ತೊ ಇಲ್ಲವೊ. ಚೂಟಿ ಗೆಳೆಯ ಜೆ.ಬಿ. ಹೇಳುವ ಹಾಗೆ ’ಯಾವ ಹುತ್ತದೊಳಗೆ ಯಾವ ಡೆವಿಲೊ?’

ಜಾಸ್ತಿಯಾಯಿತು. ಕೆನ್ನೆಗೆರಡು ಏಟು ಕೊಟ್ಟುಕೊಳ್ಳುತ್ತಿದೇನೆ. ಚೇತನಾಳ ಪುಸ್ತಕ ನಾಳೆಯೆ ವಾಪಾಸು ಮಾಡಬೇಕು. ದೇಹ ದಣಿಯುವ ಹಾಗೆ, ಯೋಚನೆಗಳೂ ಬರದಷ್ಟು ಕೆಲಸ ಮಾಡಬೇಕು.

Pic Courtesy: www.zenmeditation.org
 

Comments (19)

ಲೈರಾ ಮತ್ತು ಚಿನ್ನದ ಕಾಂಪಾಸ್

golden_compass_ver21.jpg

’ನನ್ನ ಕವಚ ನನ್ನ ಆತ್ಮವಿದ್ದ ಹಾಗೆ.. ನಿನ್ನ ಆತ್ಮವಿದೆಯಲ್ಲ, ಅದನ್ನ ಬದಲಾಯಿಸೋಕೆ ಸಾಧ್ಯವೆ? ಹಾಗೇ ನನಗೂ ನನ್ನ ಕವಚವನ್ನ ಬದಲಾಯಿಸೋಕೆ ಆಗದು.’ ವಿಸ್ಕಿ ಕುಡಿಕುಡಿದು ತನ್ನ ನೋವು ಮರೆಯಲೆತ್ನಿಸುವ ‘ಲೊರೆಕ್ ಬರ್ನಿಸನ್’ ಎಂಬ ಹಿಮಕರಡಿ ಪುಟ್ಟ ಲೈರಾ ಬೆಲಾಕ್ವಾಳಿಗೆ ಹೇಳುತ್ತದೆ. ತನ್ನನ್ನು ದಿಟ್ಟಿಸುವ ಬಂದೂಕು ಹಿಡಿದ ಜಿಪ್ಸಿಯೊಬ್ಬನನ್ನು ’ಹಾಗ್ಯಾಕೆ ನೋಡ್ತೀಯ?’ ಎಂದು ಗುರುಗುಟ್ಟುವ ಲೈರಾ ಒಂದೇ ಕ್ಷಣದಲ್ಲಿ ನಮ್ಮ ಮನೆಯ ತುಂಟಹುಡುಗಿ ಹುಟ್ಟಿಸುವಷ್ಟೇ ಅಕ್ಕರೆ ಮೂಡಿಸುತ್ತಾಳೆ. ಆಕೆಯ ನಾಲಗೆಯೋ, ಚಾವಟಿ. ಅದರ ಮೇಲೆ ನಿಜವಲ್ಲದೆ ಇನ್ನೇನೂ ಬರದು. ಆಕೆಯ ಮೆದುಳು ಈಗಿನ ಕಾಲದ ಮಕ್ಕಳ ಹಾಗೆ - ಬಲು ಚಾಲಾಕು. ಹಾಗಾಗೇ ಲೊರೆಕ್ ಬರ್ನಿಸನ್ ತನಗೇ ಅರಿವಿಲ್ಲದ ಹಾಗೆ ಲೈರಾಳ ಜತೆ ಒಪ್ಪಂದ ಮಾಡಿಕೊಳ್ಳುತ್ತದೆ. ತಾನು ಲೈರಾಳ ಸಮಯಪ್ರಜ್ನೆಯಿಂದ ವಾಪಾಸು ಹಿಮಕರಡಿಗಳ ರಾಜನಾದ ಮೇಲೂ ’ನನ್ನ ಹೆಸರು ಇನ್ನುಮುಂದೆ ಲೊರೆಕ್ ಬೆಲಾಕ್ವಾ, ನಾನು ನನ್ನ ಕೈಲಾಗುವವರೆಗೂ ನೀನು ಹೇಳಿದಂತೆ ಕೇಳುವೆ!’ ಎಂದೆನ್ನುತ್ತದೆ. ಲೈರಾಳ ಪಾತ್ರವೇ ಅಂಥದು.  ಆಕೆ ಬರಿ ಪಾತ್ರವಾಗಿ ಉಳಿಯದೆ ನಮ್ಮ ಮನಸ್ಸುಗಳೊಳಗೆ ಅಚ್ಚೊತ್ತುವ ತುಂಟಹುಡುಗಿ.

ಫಿಲಿಪ್ ಪುಲ್ಮನ್ನನ ಮೂರು ಭಾಗಗಳ ಕಾದಂಬರಿ ‘ಹಿಸ್ ಡಾರ್ಕ್ ಮಟೀರಿಯಲ್ಸ್’ನ ಪ್ರಥಮ ಭಾಗ ‘ನಾರ್ದರ್ನ್ ಲೈಟ್ಸ್’ ಅನ್ನು ‘ದ ಗೋಲ್ಡನ್ ಕಾಂಪಾಸ್’ ಚಲನಚಿತ್ರವನ್ನಾಗಿ ಹೊರತಂದಿದ್ದಾರೆ. ‘ಹ್ಯಾರಿ ಪಾಟರ್’ ಹಾಗೂ ‘ದ ಲಾರ್ಡ್ ಆಫ್ ದ ರಿಂಗ್ಸ್’ ಚಲನಚಿತ್ರ ಸರಣಿಗಳ ಹಾಗೇ ಇದೂ ಮಕ್ಕಳಿಗಷ್ಟೇ ಅಲ್ಲ, ವಯಸ್ಕರಿಗೂ ಪ್ರಿಯವಾಗಬಲ್ಲ ಚಿತ್ರ. ಈ ರೀತಿಯ ಕಥೆಗಳನ್ನು ಸಾಹಿತ್ಯಪ್ರಪಂಚದಲ್ಲಿ ‘ಬಿಲ್ಡಂಗ್ಸ್ ರೊಮಾನ್’ ಎಂದು ಕರೆಯುವ ಸಂಪ್ರದಾಯವಿದೆ. ಇಲ್ಲಿ ನಾಯಕ ಅಥವಾ ನಾಯಕಿ ಬಾಲ್ಯದಿಂದ ಬೆಳೆಯುತ್ತ ಹಲವಾರು ಅನುಭವಗಳನ್ನು ಒಳಗೊಳುತ್ತ, ಪಾಠಗಳನ್ನು ಕಲಿಯುತ್ತ ಹೋಗುತ್ತಾರೆ. ಆದರೆ ಲೈರಾ ಮಾಮೂಲು ಹುಡುಗಿಯಲ್ಲ. ತನ್ನ ಅನುಭವಗಳನ್ನು, ತನ್ನ ಹಣೆಬರಹವನ್ನು ಅರಸಿ ಹೊರಡುವ ಹುಡುಗಿ ಅವಳು. ತನ್ನ ಕೆಲಸವಾಗಲು ಹೇಗೆ ಬೇಕಾದರು ಮಾತನಾಡುವ ಆಕೆಯನ್ನು ಲೊರೆಕ್ ‘ಲೈರಾ ಸಿಲ್ವರ್ ಟಂಗ್’ - ಬೆಳ್ಳಿನಾಲಗೆಯವಳು ಎಂದು ಕರೆಯುತ್ತದೆ. ಆಕೆ ಮುಗ್ಧಳಾದರು ತನ್ನ ಸುತ್ತಮುತ್ತಲ ಸನ್ನಿವೇಶವನ್ನು ಚೆನ್ನಾಗಿ ಅರಿತುಕೊಂಡು ಅದರಂತೆ ನಡೆಯುವವಳು. ಆಕೆಗೆ ಕೋಪ ಬಂದರೆ ಮಾತ್ರ ಆಕೆಯ ಎದುರಾಳಿಗೆ ಖೈರಿಲ್ಲದಿರುವುದು ಗ್ಯಾರಂಟಿ!

ಲೈರಾ ಅನಾಥೆ. ಆಕೆ ವಾಸವಿರುವುದು ಆಕ್ಸ್ ಫೋರ್ಡಿನ ಜೋರ್ಡಾನ್ ಕಾಲೇಜಿನಲ್ಲಿ, ಎಲ್ಲ ಮಹಾಪಂಡಿತರ ನಡುವೆ, ತನ್ನ ಚಿಕ್ಕಪ್ಪ ಲಾರ್ಡ್ ಏಸ್ರಿಯೆಲನ (ಡೇನಿಯೆಲ್ ಕ್ರೇಗ್) ಜತೆಗೆ. ಅವರ ಪ್ರಪಂಚವನ್ನು ‘ಮೆಜೆಸ್ಟೀರಿಯಂ’ ಎಂಬ ಅಧಿಕಾರಶಾಹೀ ಗುಂಪು ಆಳುತ್ತದೆ. ಅದರ ಗುಪ್ತಚರ ಸಂಸ್ಥೆಯಾದ ‘ಗಾಬ್ಲರ್’ಗಳು ನಿರ್ದಯಿಗಳು. ಇತ್ತೀಚೆಗೆ ಅವರು ಮಕ್ಕಳನ್ನು ಅಪಹರಿಸಿ ಅವರ ಮೇಲೆ ವಿಚಿತ್ರ ಪ್ರಯೋಗಗಳನ್ನು ನಡೆಸುತ್ತರುವರೆಂಬ ವದಂತಿ. ಲೈರಾಳ ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯನ ಜತೆಗೂ ಅವರ ಆತ್ಮವನ್ನು ಪ್ರತಿನಿಧಿಸುವ ಪ್ರಾಣಿಯೊಂದಿರುತ್ತದೆ. ಅದನ್ನು ‘ಡೀಮನ್’ ಎನ್ನುತ್ತಾರೆ. ಲೈರಾಳಿಗೆ ಆಕಾರ ಬದಲಾಯಿಸುವ ’ಪಾನ್’ ಹೆಸರಿನ ಡೀಮನ್ ಇದೆ.  ಲಾರ್ಡ್ ಏಸ್ರಿಯೆಲ್ ಹಲವಾರು ಗೋಪ್ಯತೆಗಳ ಸ್ವತಂತ್ರ ಮನಸ್ಸಿನ ಮನುಷ್ಯ. ಅವರ ಪ್ರಪಂಚಕ್ಕೆ ಸಮಾನಾಂತರವಾಗಿ ಇನ್ನೊಂದು ಪ್ರಪಂಚವಿದೆ. ಅಲ್ಲಿಗೆ ತೆರಳಲು ಬೇಕಾದ ಉತ್ತರಧ್ರುವದ ‘ಧೂಳು’ ಮತ್ತು ಅದರ ಸಾಧ್ಯತೆಗಳ ಬಗ್ಗೆ ಆತ ವಾದವೊಂದನ್ನು ಪಂಡಿತರೆದುರು ಮಂಡಿಸಿ ತನ್ನ ಯಾತ್ರೆಗೆ ಮೆಜೆಸ್ಟೀರಿಯಂನ ಅನುಮತಿ ಪಡೆದುಕೊಳ್ಳುತ್ತಾನೆ. ಈ ವೇಳೆಯಲ್ಲಿ ಆತನಿಗೆ ವಿಷವಿಕ್ಕುವ ಗಾಬ್ಲರ್ ಫ್ರಾ ಪಾವೆಲನಿಂದ ಏಸ್ರಿಯೆಲನನ್ನು ಪಾರುಮಾಡುವ ಲೈರಾಳಿಗೆ ‘ಧೂಳಿ’ನ ಬಗ್ಗೆ ತಿಳಿದು ತಾನೂ ಆತನ ಜತೆ ಹೊರಡುವೆನೆನುತ್ತಾಳೆ. ಏಸ್ರಿಯೆಲ್ ಖಡಾಖಂಡಿತವಾಗಿ ನಿರಾಕರಿಸಿಬಿಡುತ್ತಾನೆ. ಆದರೆ ಇದ್ದಕ್ಕಿದ್ದ ಹಾಗೆ ಕಾಲೇಜಿಗೆ ಭೇಟಿನೀಡುವ ಸುಂದರ ಶ್ರೀಮತಿ ಕೂಲ್ಟರ್ (ನಿಕೊಲ್ ಕಿಡ್ಮನ್) ತನ್ನ ಉತ್ತರಧ್ರುವದ ಪ್ರಯಾಣಕ್ಕೆ ಲೈರಾಳನ್ನೆ ಜತೆಗಾತಿಯಾಗಿ ಆಯ್ಕೆಮಾಡುತ್ತಾಳೆ. ಹೊರಡುವ ಮೊದಲು ಕಾಲೇಜಿನ ‘ಮಾಸ್ಟರ್’ ಒಬ್ಬಾತ ಆಕೆಯ ಕೈಯಲ್ಲಿ ಚಿನ್ನದ ಕಾಂಪಾಸನ್ನು ಕೊಟ್ಟು. ಅದು ನಿಜವನ್ನೇ ಹೇಳುವುದೆಂದೂ, ಅದನ್ನು ಗುಪ್ತವಾಗಿಟ್ಟುಕೊಳ್ಳಬೇಕೆಂದೂ ಸಲಹೆ ನೀಡುತ್ತಾನೆ. ಆ ಕಾಂಪಾಸನ್ನು ಓದಬಲ್ಲವಳು ಲೈರಾ ಮಾತ್ರ! ಲೈರಾಳ ಸಂತಸ ಶ್ರೀಮತಿ ಕೂಲ್ಟರಳ ವಿಚಿತ್ರ ಕ್ರೌರ್ಯದಿಂದಾಗಿ ನಲುಗಿಹೋಗುತ್ತದೆ. ಅಲ್ಲಿಂದ ಓಡಿಹೋಗುವ ಆಕೆಯನ್ನು ಜಿಪ್ಶಿಯನ್ನರು ರಕ್ಷಿಸಿ ತಮ್ಮ ಹಡಗಿನಲ್ಲಿ ಆಕೆಯನ್ನು ಕರೆದೊಯ್ಯುವುದಲ್ಲದೆ ಆಕೆಗೆ ಕಾಂಪಾಸನ್ನು ಉಪಯೋಗಿಸುವ ಬಗೆಯನ್ನು ತಿಳಿಸುತ್ತಾರೆ. ಮಾಟಗಾತಿಯರ ರಾಣಿ ಸೆರಾಫಿನಾ ಪೆಕಾಲಾ ಆಕೆಯನ್ನು ಸಂಧಿಸಿ ಮಾತನಾಡುತ್ತಾಳೆ. ಈ ವೇಳೆಯಲ್ಲೆ ಆಕೆಗೆ ಟೆಕ್ಸಾಸಿನ ‘ಹಾರಾಟಗಾರ’ ಲೀ ಸ್ಕಾರ್ಸ್ ಬೀ ಮತ್ತು ಲೊರೆಕ್ ಬರ್ನಿಸನ್ನನ ಪರಿಚಯವಾಗುತ್ತದೆ.

ಉತ್ತರ ಧ್ರುವದಲ್ಲಿ ಮಕ್ಕಳನ್ನು ಗುಪ್ತಜಾಗವೊಂದರಲ್ಲಿ ಬಚ್ಚಿಟ್ಟು ಮೆಜೆಸ್ಟೀರಿಯಂ ಅವರ ಮೇಲೆ ಹಲವಾರು ಕ್ರೂರ ಪ್ರಯೋಗಗಳನ್ನು ನಡೆಸುತ್ತಿದೆ. ಅಲ್ಲಿಗೆ ಬರುವ ಲೈರಾಳಿಗೆ ತನ್ನ ಸ್ನೇಹಿತರಾದ ರೋಜರ್ ಮತ್ತು ಬಿಲ್ಲೀ ಕೋಸ್ಟಾ ಅಲ್ಲಿ ಸೆರೆಯಾಗಿರುವುದು ಮತ್ತು ಬಿಲ್ಲೀಯ ಡೀಮನ್-ಆತ್ಮ ಇಂಥ ಪ್ರಯೋಗವೊಂದರಲ್ಲಿ ನಾಶವಾಗಿರುವುದು ತಿಳಿದುಬರುತ್ತದೆ. ಅಷ್ಟುಹೊತ್ತಿಗೆ ಪ್ರಯೋಗಶಾಲೆಯಲ್ಲಿ ಸೆರೆಯಾಗುವ ಲೈರಾಳಿಗೆ ಶ್ರೀಮತಿ ಕೂಲ್ಟರ್ ತಾನು ಆಕೆಯ ತಾಯಿಯೆಂದೂ ಏಸ್ರಿಯೆಲನೆ ಆಕೆಯ ತಂದೆಯೆಂದೂ ತಿಳಿಸುತ್ತಾಳೆ. ಏಸ್ರಿಯೆಲನ ಸಾವಿನ ಬಗ್ಗೆ ಮಾತನಾಡುತ್ತಿದ್ದ ಕೂಲ್ಟರ್ ತನ್ನ ತಾಯಿಯೆಂದು ನಂಬದ ಲೈರಾ ಆಕೆಗೆ ಜಖಮುಮಾಡಿ ಓಡಿಹೋಗುತ್ತಾಳೆ. ಇಡೀ ಪ್ರಯೋಗಶಾಲೆಯನ್ನೆ ನಾಶಮಾಡಿ ಇತರ ಮಕ್ಕಳೊಡನೆ ಪಲಾಯನಮಾಡುತ್ತಿರುವಾಗ ಮೆಜೆಸ್ಟೀರಿಯಂನ ಸೈನಿಕರು ಅಡ್ಡಬರುತ್ತಾರೆ…ಯುದ್ಧ ಆರಂಭವಾಗುತ್ತದೆ.. ಲೈರಾ ತನ್ನ ತಂದೆ ಲಾರ್ಡ್ ಏಸ್ರಿಯೆಲನನ್ನು ಉಳಿಸುವಲ್ಲಿ ಸಫಲಳಾಗುವಳೆ? ಚಿನ್ನದ ಕಾಂಪಾಸ್ ಆಕೆಯನ್ನು ಯಾವ ಪ್ರಪಂಚಗಳಿಗೆ ಕರೆದೊಯ್ಯಬಹುದು? ಮುಂದೆ ಏನಿದೆ? ತಿಳಿಯಬೇಕಿದ್ದರೆ ‘ದ ಗೋಲ್ಡನ್ ಕಾಂಪಾಸ್’ನ ಮುಂದಿನ ಭಾಗದವರೆಗೂ ಕಾಯಬೇಕು.

ಬಹಳ ಮುಗ್ಧವಾದ ಮಕ್ಕಳ ಪ್ರಪಂಚದಲ್ಲಿ ಆರಂಭವಾಗುವ ಚಿತ್ರಕಥೆ ಮುಗ್ಧವಾಗುಳಿಯುವುದಿಲ್ಲ. ಲೈರಾಳ ಪ್ರಪಂಚದಲ್ಲಿ ಭೋಳೆತನ ನಡೆಯದು. ಅಲ್ಲಿ ಹೆಜ್ಜೆಹೆಜ್ಜೆಗೂ ಅಪಾಯ. ಮೆಜೆಸ್ಟೀರಿಯಮ್ಮಿನ ಕೆಲಸಕಾರ್ಯಗಳು, ಐಡಿಯಾಲಜಿಗಳು ಜರ್ಮನಿಯ ನಾಜೀ ಆಳ್ವಿಕೆಯನ್ನು ಬಹಳವಾಗಿ ನೆನಪಿಸುತ್ತವೆ. ಏಸ್ರಿಯೆಲ್ ಮತ್ತು ಆತನ ಸ್ನೇಹಿತರ ಗುಂಪು ಸ್ವಾತಂತ್ರ್ಯ, ಹೊಸತನ ಹಾಗೂ ಮಾನವನ ಎಣೆಯಿರದ ಕುತೂಹಲವನ್ನು ಪ್ರತಿನಿಧಿಸಿದರೆ ಲೈರಾ ಮತ್ತವಳ ಸ್ನೇಹಿತರು ಯುವಜನಾಂಗ, ಅದರ ಆತಂಕಗಳು ಹಾಗೂ ಸಾಹಸೀ ಮನೋಭಾವವನ್ನು ಬಿಂಬಿಸುತ್ತಾರೆ. ಚಲನಚಿತ್ರದ ಸ್ಪೆಶಲ್ ಎಫೆಕ್ಟುಗಳು, ಅದರಲ್ಲೂ ಲೊರೆಕ್ ಬರ್ನಿಸನನ ಹಿಮಕರಡಿ ಕಾದಾಟ ಹಾಗೂ ಮೊಟ್ಟಮೊದಲ ಮೆಜೆಸ್ಟೀರಿಯಂ-ವಿರೋಧೀ ಯುದ್ಧ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿವೆ. ಲೈರಾಳ ಪಾತ್ರದ ಡಕೋಟಾ ಬ್ಲೂ ರಿಚರ್ಡ್ಸ್ ಭರವಸೆ ಮೂಡಿಸುತ್ತಾಳೆ.

Pic courtesy: www.impawards.com
 

Comments

« Previous entries