ಭೋರೆಂದು ಹುಯಿಲಿಡುವ ಬಿರುಸುಗಾಳಿ
ಒಂದಿಷ್ಟು ಸುರಿದು ಕಾಣದಾದ
ಮಳೆಹನಿಗಳು
ಬೋಳು ಸೆಟೆದು ನಿಂತ
ಹೆಸರಿಲ್ಲದ ಮರದಲ್ಲಿ
ನಾಲ್ಕು ಚಿಗುರೆಲೆ
ರಾತ್ರೆ ಒಂಬತ್ತೂವರೆಗೆ
ಬಿಡುವ ಟೆಂಟು ಸಿನೆಮಾ
‘ತಿರುಪತಿ ಗಿರಿವಾಸಾ..’ ನಂತರ
ಅವೇ ಹಳೆ ಕನ್ನಡ ಹಾಡುಗಳು…
ಹೌದೋ,
ನಿನ್ನ ನೆನೆದರೆ ವಿಚಿತ್ರ ರೊಚ್ಚೆದ್ದು
ಸುತ್ತಿಗೆಯಾಗಿ
ನನ್ನ ಕುಟ್ಟಿ ಪುಡಿ ಮಾಡಿ
‘ಉಫ್’ ಎಂದು ಗಾಳಿಯೊಡನೆ ಹಾರಿಸಿ
ಹೇಳಬೇಕೆಂದಿದ್ದು ಕಳೆದುಹೋಗಿ
ಇನ್ನೇನೇನೋ ಆಗಿ..
ನನ್ನ ಬೇಸರ
ನಿಗಿನಿಗಿ ಕೆಂಡದಂತೆ
ಕೆಂಪಗೆ ಹೊಳೆದು ಅಣಗಿಸುತ್ತಿದೆ.
ನೀನಲ್ಲಿ ಕುಳಿತು
ನನ್ನ ಗುಟುಕರಿಸುತ್ತ
ನಗುತಿರುವಷ್ಟು ಹೊತ್ತು
ಬೆಳಕು ನನಗೆ.
ಆಮೇಲೆ
ಅಪ್ಪಿಕೊಳಲಾಗದ ನೆನಪುಗಳು
ಕಳೆಯಲಾರದ ಘಳಿಗೆಗಳು
ಲೇಖನಿ, ಹಾಳೆ
ಬರೀ ಧಗೆ.
ಚಿತ್ರಕೃಪೆ: www.picasaweb.google.com
Prasad said
ಕವಿತೆ ಯ ಬಗ್ಗೆ ಮಾತನಾಡುವಷ್ಟ್ಟುಪ್ರಬುದ್ದತೆ ಇಲ್ಲ ನನಗೆ. ಅನೇಕ ಸಾರ್ತಿ ಈ ನವ್ಯ ಕವಿತೆಗಳು ನನ್ನ ತಲೆ ಮೇಲೆ ಹೋಗುತ್ತವೆ. ಆದ್ರೆ I must complement you for the `variety` on your blog.
Tina said
ಪ್ರಸಾದ್,
Thanks for the complement. ನನಗೆ ತಿಳಿದ ಮಟ್ಟಿಗೆ ಕವಿತೆ ಓದಲು, ಮಾತಾಡಲು ಯಾವ ಪ್ರಬುದ್ಧತೆಯ ಅವಶ್ಯಕತೆ ಇಲ್ಲ. ನಿಮಗೆ ಏನನ್ನಿಸುತ್ತೋ ಅದನ್ನೆ ಹೇಳಿ. ನನಗೆ ಅದು ಬಹಳ ಮುಖ್ಯ. ಕವಿತೆಯ ಬಗ್ಗೆಗೇನೆ ಹೆಚ್ಚಾಗಿ ಓದಿಕೊಂಡಿರೋರು ಅದಕ್ಕೆ ತಕ್ಕ ಹಾಗೆ ಹೇಳುತ್ತಾರೆ. ಹಾಗಂತ ನಿಮ್ಮ ಅಭಿಪ್ರಾಯ ವಿಮರ್ಶೆಯ ಕ್ಯಾಟಗರಿಗೆ ಸೇರೋದಿಲ್ಲ ಅನ್ನೋದು ತಪ್ಪಾಗತ್ತಲ್ಲ! ಆಮೇಲೆ ನನ್ನ ಕವಿತೆಗಳನ್ನ, ನವ್ಯ ಅದು ಇದು ಅಂತ ದಯವಿಟ್ಟು ಕ್ಯಾಟಗರೈಸ್ ಮಾಡದಿರಿ ಅಂತ ಕೋರಿಕೆ. ಓದಿದೀರ, ಹೇಳಿಕೊಂಡಿದೀರ, ನನಗೆ ಅದೆ ಸಂತಸದ ವಿಚಾರ!
-ಟೀನಾ.
ಶ್ರೀಕಾಂತ said
ಪದ್ಯ ಚೆನ್ನಾಗಿದೆ. ಕೊನೆಯ ಸಾಲುಗಳು ತುಂಬ ಹಿಡಿಸಿದವು…
zameer said
am not a poetry…. but i saw the poem it is so nice and beautiful…. really i enjoyed……
navada said
ನಿಮ್ಮ ಕವಿತೆ ಎಂದರೆ ಮಾತನಾಡುವಂತಿಲ್ಲ. ಏನು ಚೆಂದ ಬರೀತೀರಿ. ಇದು ಹೊಗಳಿಕೆಯೆಂದಲ್ಲ. ಭಾವಗಳ ಮೆರವಣಿಗೆಯೇ ನೋಡ್ಲಿಕ್ಕೆ ಚೆಂದ. ಶ್ರೀಕಾಂತ್ ರಂತೆಯೇ ಕೊನೆ ಸಾಲುಗಳು ಕಾಡಿದವು.
ನಾವಡ
ಮನಸ್ವಿನಿ said
ಎಲ್ಲ ಕವಿತೆಗಳು ಸುಂದರ. ತುಂಬಾ ತುಂಬಾ ಇಷ್ಟವಾಗ್ತಾಳೆ ನಿಮ್ಮ ‘ಪಡಖಾನೆಯ ಹುಡುಗಿ’
amara said
ಮನದಲ್ಲಿ ಬುಗಿಲೆದ್ದ ಪ್ರತಿ ಭಾವಗಳಿಗೆ ಅಕ್ಷರಗಳ ರೂಪಕೊಟ್ಟು ಸಾಗಿಹ ಮೇರವಣಿಗೆ ಈ ಕವಿತೆ.
-ಅಮರ
sudhesh said
ಅಬ್ಬಾ ಎಷ್ಟು ಚೆನ್ನಾಗಿ ಬರೀತೀರ!
Tina said
ಶ್ರೀಕಾಂತ, ಜಾಮೀರ್, ನಾವಡ, ಮನಸ್ವಿನಿ, ಅಮರ, ಸುದೇಶ್,
ನಿಮ್ಮೆಲ್ಲರಿಗೆ ಭಾಳ ಠ್ಯಾಂಕ್ಸು ಕಣ್ರಿ. ಕವಿತೆ ನಿಮಗಿಷ್ಟವಾಯಿತು, ನಂಗೆ ಖುಶಿ!
-ಆತ್ಮೀಯತೆಯೊಡನೆ,
ಟೀನಾ.