Archive for April, 2008

ನೋವಿಗೆ ಬಣ್ಣ ನೀಡಿದ ಫ್ರೀಡಾ

 

ಸಂಜೆ ಬಂದವನ ಮುಖದ ಮೇಲೆ ಒಂದು ಸಣ್ಣ ನಗು. ’ಯಾಕೆ?’ ಕೇಳಿದೆ. ’ನಿನ್ನೆ ನಂಜೊತೆ ಜಗಳ ಮಾಡಿದ್ದಕ್ಕೆ ಇದು ಉತ್ತರ!’ ಅಂದು ಒಂದು ಡಿವಿಡಿ ಕೈಗಿತ್ತ. ಹಿಂದಿನ ಸಂಜೆ ಪೆಯಿಂಟಿಂಗುಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾಗ ಸಾಲ್ವಡಾರ್ ಡಾಲಿಯ ಬಗ್ಗೆ ಮಾತು ಬಂತು. ಮಾಮೂಲು ಹೊಗಳಿಕೆ, ಉದ್ಗಾರಗಳು. ನನ್ನ ವುಮನಿಸ್ಟ್ ಪ್ರಜ್ನೆ ಇದ್ದಕ್ಕಿದ್ದಹಾಗೆ ಜಾಗೃತವಾಗಿಬಿಟ್ಟಿತು. ’ಈ ಪೆಯಿಂಟರುಗಳ ಬಗ್ಗೇ ಮಾತಾಡೋವಾಗ ಯಾವಾಗಲು ನಾವು ಮಾತಾಡೋದೇ ಪಿಕಾಸೋ, ವ್ಯಾನ್ಗಾಗ್, ಎಮೆಫ್ ಹುಸೇನ್, ಡಾಲಿ..ಬರೀ ಗಂಡಸ್ರು ಮಾತ್ರಾನೇ ಯಾಕೆ? ಇಂಡಿಯಾನಲ್ಲು ಫೀಮೇಲ್ ಪೆಯಿಂಟರ್ ಅಂದರೆ ಒಂಜೋಲಿ ಇಲಾ ಮೆನನ್ ಮಾತ್ರಾನೇ! ಯಾರೂ ಇಲ್ವಾ? ಅಥ್ವಾ ಈ ಫೀಲ್ಡಿನಲ್ಲಿ ಹೆಂಗಸ್ರು ಸಕ್ಸೆಸ್ಫುಲ್ ಆಗಕ್ಕೆ ಸಾಧ್ಯ ಇಲ್ವಾ?’ ಎಂದು ವಿಷಯವೆ ಇಲ್ಲದೆ ಕಿತ್ತಾಡಿದ್ದೆ. ಇವ ’ಯಾಕಿಲ್ಲ? ಇದಾರೆ. ಐ ವಿಲ್ ಗೆಟ್ ಯು ಪ್ರೂಫ್!’ ಅಂದಿದ್ದ. ಈಗ ನನ್ನ ಕೈಯಲ್ಲಿ ಸಲ್ಮಾ ಹಯೆಕ್ ನಟಿಸಿರುವ ‘ಫ್ರೀಡಾ’ ಚಲನಚಿತ್ರದ ಡಿವಿಡಿ.

1907ರಲ್ಲಿ ಮೆಕ್ಸಿಕೋ ನಗರದ ಹೊರವಲಯದಲ್ಲಿದ್ದ ಮನೆಯೊಂದರಲ್ಲಿ ಜನಿಸಿದ ಫ್ರೀಡಾ ಕಾಹ್ಲೋ ಆರನೆ ವಯಸ್ಸಿಗೇ ಪೋಲಿಯೋ ಖಾಯಿಲೆಗೆ ತುತ್ತಾದಳು. ಆಕೆಯ ಒಂದು ಕಾಲು ಇನ್ನೊಂದಕ್ಕಿಂತ ಸಣ್ಣ. ಇದನ್ನು ಮರೆಮಾಚಲು ಆಕೆ ಸದಾ ಉದ್ದನೆಯ ಸ್ಕರ್ಟುಗಳನ್ನೆ ಧರಿಸುತ್ತಿದ್ದಳು. ದೈಹಿಕ ನ್ಯೂನತೆಯಿದ್ದರು ಆಕೆ ತನ್ನ ಶಾಲಾ ದಿನಗಳಲ್ಲಿ ಒಳ್ಳೆಯ ಬಾಕ್ಸಿಂಗ್ ಪಟುವಾಗಿದ್ದಳು! ಮೆಕ್ಸಿಕೋನ ಬಹಳ ಒಳ್ಳೆಯ ಶಾಲೆಯೊಂದರಲ್ಲಿ ತನ್ನ ಪ್ರತಿಭೆಯಿಂದಾಗಿ ಪ್ರವೇಶ ಪಡೆದುಕೊಂಡಳು. ತಂದೆಯ ಮೂಲ ಜರ್ಮನಿ, ತಾಯಿ ಸ್ಪ್ಯಾನಿಶ್. 1925ರ ಒಂದು ಬಸ್ ಅಪಘಾತದಲ್ಲಿ ಸಿಕ್ಕಿಹಾಕಿಕೊಂಡ ಫ್ರೀಡಾಳ ದೇಹ ಜರ್ಝರಿತವಾಯಿತು. ಬೆನ್ನುಹುರಿ, ಸೊಂಟ, ಭುಜ, ಎದೆಗೂಡುಗಳಿಗೆ ತೀವ್ರ ಜಖಮು, ಬಲಗಾಲಿನಲ್ಲಿ ಹನ್ನೊಂದು ಫ್ರಾಕ್ಚರುಗಳು, ಜಜ್ಜಿಹೋದ ಬಲಪಾದ, ಇದನ್ನೆಲ್ಲ ಮೀರಿ ಆಕೆಯ ಹೊಟ್ಟೆ ಮತ್ತು ಯೋನಿಯನ್ನು ಭೇದಿಸಿದ ಒಂದು ಕಬ್ಬಿಣದ ಸರಳು!! ಈ ಅಪಘಾತದಿಂದ ಹೊರಬರಲು ಫ್ರೀಡಾಳ ಮೇಲೆ ಸುಮಾರು ಮೂವತ್ತೈದು ಆಪರೇಶನ್ನುಗಳು ನಡೆದವು. ಆಕೆ ಮಕ್ಕಳನ್ನು ಪಡೆಯುವಂತಿರಲಿಲ್ಲ. ಹೊರದೇಹ ಸರಿಹೋದಂತೆ ಕಂಡರು ಆಕೆ ಜೀವನವಿಡೀ ಅಪಾರ ಯಾತನೆ ಅನುಭವಿಸಿದಳು. ಒಮ್ಮೊಮ್ಮೆ ನೋವು ಶುರುವಾದರೆ ಆಕೆ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿಯೆ ಇರಬೇಕಾಗಿ ಬರುತ್ತಿತ್ತು. ಈ ಕಾಲಘಟ್ಟದಲ್ಲಿಯೆ ಆಕೆ ತನ್ನ ವೈದ್ಯಕೀಯ ಅಧ್ಯಯನಕ್ಕೆ ಮಂಗಳ ಹಾಡಿದಳು. ಆಸ್ಪತ್ರೆಯ ಬೇಸರ ಕಳೆಯಲು ಚಿತ್ರ ರಚಿಸಲು ತೊಡಗಿದ ಫ್ರೀಡಾ ಚಿತ್ರಕಲಾವಿದೆಯಾಗಲು ನಿಶ್ಚಯಿಸಿದ್ದು ಕೂಡ ಆಗಲೆ. ಹೆಚ್ಚಿನ ಚಿತ್ರಗಳಲ್ಲಿ ತಾನೆ ಮಾಡೆಲ್ ಆಗಿರುವ ಬಗ್ಗೆ ಆಕೆ ಹೇಳುತ್ತಿದ್ದಿದ್ದು, ’ನಾನು ಒಂಟಿ ಮತ್ತು ನನಗೆ ಚೆನ್ನಾಗಿ ಗೊತ್ತಿರುವ ವಿಷಯ ಅಂದರೆ ನಾನು. ಹಾಗಾಗಿ ನನ್ನ ಪೆಯಿಂಟಿಂಗುಗಳಲ್ಲಿ ಹೆಚ್ಚಾಗಿ ನಾನೆ ಕಾಣುವುದು”. ಸುಮಾರು 143 ಚಿತ್ರಗಳನ್ನು ರಚಿಸಿರುವ ಫ್ರೀಡಾಳ ಚಿತ್ರಗಳಲ್ಲಿ 55 ಆಕೆಯದೆ ಭಾವಚಿತ್ರಗಳು!

ಮೂಲತಃ ಜರ್ಮನ್ನಳಾದರೂ ಮೆಕ್ಸಿಕನ್ ಸಂಸ್ಕೃತಿಯಿಂದ ಪ್ರಭಾವಿತಳಾಗಿದ್ದ ಫ್ರೀಡಾಳ ವರ್ಣಚಿತ್ರಗಳಲ್ಲಿ ಗಾಢ ಬಣ್ಣಗಳು ಹಾಗೂ ಮೆಕ್ಸಿಕನ್ ಸಂಕೇತಗಳು ಕಾಣುತ್ತವೆ. ಮೆಕ್ಸಿಕನ್ ಸಂಸ್ಕೃತಿಯಲ್ಲಿ ಕಾಮುಕತೆಯ ಸಂಕೇತವಾದ ಮಂಗ ಆಕೆಯ ಹಲವಾರು ಚಿತ್ರಗಳಲ್ಲಿ ಕಂಡುಬರುತ್ತದೆ.. ಆಕೆಯ ಭಾವಚಿತ್ರಗಳಲ್ಲಿ ಆಕೆಯ ದೈಹಿಕ ಹಾಗೂ ಮಾನಸಿಕ ನೋವಿನ ಚಿತ್ರಣವಿದೆ. ಉದಾಹರಣೆಗೆ ಆಕೆಯ ಕತ್ತಿಗೆ ಹಾರದ ಬದಲು ಮುಳ್ಳುಕಂಟಿಗಳು ಸುತ್ತಿಕೊಂಡಿರುವುದು, ಇನ್ನೊಂದರಲ್ಲಿ ಆಕೆಯ ಎದೆ ಕತ್ತಿನ ಭಾಗಗಳು ತೆರೆದುಕೊಂಡು ರಕ್ತ ಸುರಿಯುತ್ತಿರುವುದು.. ಆಕೆಯ ಪ್ರಮುಖ ಭಾವಚಿತ್ರವಾದ ‘ರೂಟ್ಸ್’ ಆಕೆಯನ್ನು ಭೂಮಿಗೆ ಬೇರುಬಿಟ್ಟುಕೊಂಡು ಮಲಗಿರುವ ಹೆಣ್ಣಿನಂತೆ ಬಿಂಬಿಸುತ್ತದೆ. ಈ ಚಿತ್ರ ಹರಾಜಿನಲ್ಲಿ ಸುಮಾರು 5.6 ಬಿಲಿಯನ್ ಡಾಲರು ಗಳಿಸಿತು.

ವಿಖ್ಯಾತ ಮ್ಯೂರಲ್ ಕಲಾವಿದ ಡಿಯೆಗೋ ರಿವೆರಾನನ್ನು 1929ರಲ್ಲಿ ಮದುವೆಯಾದ ಫ್ರೀಡಾಳ ವೈವಾಹಿಕ ಜೀವನ ಸದಾ ಏಳುಬೀಳುಗಳಿಂದ ಕೂಡಿತ್ತು. ಇಬ್ಬರದೂ ಕೋಪಿಷ್ಠ ಸ್ವಭಾವ. ಮೇಲಾಗಿ ಫ್ರೀಡಾಳ ಹೆಂಗಸರ, ಗಂಡಸರ ಜೊತೆಗಿನ ಲೈಂಗಿಕಸಂಬಂಧಗಳು ಸುಮಾರು ಜಗಳಗಳಿಗೆ ಕಾರಣವಾದವು. ರಿವೇರಾ ತನ್ನ ತಂಗಿಯೊಡನೆ ಸಂಬಂಧ ಬೆಳೆಸಿದಾಗ ಆತನಿಂದ ವಿಚ್ಛೇದನ ಪಡೆದ ಫ್ರೀಡಾ ಕೆಲಕಾಲದ ನಂತರ ಪುನಃ ಆತನನ್ನೆ ಮದುವೆಯಾದಳು. ಆದರೂ ಇಬ್ಬರ ಸಂಬಂಧದಲ್ಲಿ ಯಾವುದೆ ವ್ಯತ್ಯಾಸವಾಗದೆ ಇಬ್ಬರೂ ಜಗಳವಾಡಿಕೊಂಡೆ ಇದ್ದರು. ಕೊನೆಕೊನೆಗೆ ಇಬ್ಬರೂ ಒಂದೇ ಸೂರಿನಡಿ ಇದ್ದರೂ ಬೇರೆಬೇರೆ ಕೊಠಡಿಗಳಲ್ಲಿ ವಾಸವಾಗಿದ್ದರು. ರಿವೆರೋನಿಂದ ಆಕೆಯ ಶೈಲಿ ಯಾವಾಗಲು ಪ್ರಭಾವಿತವಾಗಲಿಲ್ಲ. ಕಮ್ಯುನಿಸ್ಟರ ಬಗ್ಗೆ ಒಲವು ಹೊಂದಿದ್ದ ರಿವೆರಾ ಮತ್ತು ಫ್ರೀಡಾ ರಶಿಯಾದಿಂದ ರಾಜಕೀಯ ಶರಣು ಕೋರಿ ಬಂದಿದ್ದ ಟ್ರಾಟ್ಸ್ಕಿಗೆ ತಮ್ಮ ಮನೆಯಲ್ಲಿ ಆತಿಥ್ಯ ನೀಡಿದರು.

ಫ್ರೀಡಾಳ ಕೊನೆಯ ದಿನಗಳು ಬಹಳ ನೋವಿನಿಂದ ಕೂಡಿದ್ದವು. ಒಂಟಿತನ ಆಕೆಯ ಜೀವನದ ಅವಿಭಾಜ್ಯ ಅಂಗವಾಗಿತ್ತು. ಸಾಯುವ ಕೆಲದಿನಗಳ ಮುನ್ನ ತನ್ನ ದಿನಚರಿಯಲ್ಲಿ ’ಈ ತೆರಳುವಿಕೆ ಸಂತಸಮಯವಾಗಿರಲೆಂದು ಆಶಿಸುವೆ. ವಾಪಾಸು ಬರುವ ಇಚ್ಛೆ ನನಗಿಲ್ಲವೇ ಇಲ್ಲ - ಫ್ರೀಡಾ’ ಎಂದು ಬರೆದುಕೊಂಡಿದ್ದಳು. 1954ರ ಜುಲೈ 13ರಂದು ಪಲ್ಮನರಿ ಎಂಬೋಲಿಸಂ ಎಂಬ ತೊಂದರೆಯಿಂದ ಆಕೆ ಸಾವನ್ನಪ್ಪಿದಳು ಎಂದು ವರದಿಯಾದರು ಆಕೆ ಹೆಚ್ಚು ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಳೆಂದು ಹೇಳಲಾಗುತ್ತದೆ. ಆಕೆಯ ಸಾವಿನ ನಂತರ ರಿವೆರಾ ಆಕೆಯ ಬಗ್ಗೆ ತನಗಿದ್ದ ಪ್ರೇಮವನ್ನು ಕಂಡುಕೊಂಡ. ಆಕೆಯ ಕಲೆಯ ನಿಜವಾದ ಬೆಲೆಯನ್ನು ಅರಿತಿದ್ದ ರಿವೆರೊ ಅವರು ವಾಸವಾಗಿದ್ದ ಸುಂದರ ‘ಬ್ಲೂ ಹೌಸ್’ ಅನ್ನು ಫ್ರೀಡಾಳಿಗೋಸ್ಕರ ಮ್ಯೂಸಿಯಂ ಆಗಿ ದಾನ ಮಾಡಿದ.. ಅದೇ ಮನೆಯಲ್ಲಿ ಫ್ರೀಡಾಳ ಅಸ್ಥಿಗಳು ಒಂದು ಸುಂದರವಾದ ಮಣ್ಣಿನ ಜಾಡಿಯಲ್ಲಿ ಪ್ರದರ್ಶನಕ್ಕಿಡಲ್ಪಟ್ಟಿದೆ. ಎಂಭತ್ತರ ದಶಕದಲ್ಲಿ ಆಕೆಯ ಚಿತ್ರಗಳು ಮೆಕ್ಸಿಕೋ, ಅಮೆರಿಕಾಗಳಲ್ಲಿ ಹೆಚ್ಚು ಹೆಸರು ಮಾಡಿದವು. ಫ್ರೀಡಾಳ ಜೀವನ, ಕಲೆಗಳ ಬಗ್ಗೆ ಹಲವಾರು ಚಲನಚಿತ್ರ, ಪುಸ್ತಕಗಳು ಹೊರಬಂದಿವೆ. ತನ್ನ ನೋವನ್ನು ಸುಂದರ ಬಣ್ಣಗಳನ್ನಾಗಿ ಪರಿವರ್ತಿಸಿದ ಫ್ರೀಡಾ ತನ್ನ ಕ್ಯಾನ್ವಾಸುಗಳಲ್ಲಿ ಇಂದಿಗೂ ಜೀವಂತಳಾಗಿದ್ದಾಳೆ.
 

Comments

ಝಗಮಗವೆನ್ನುವ ಜಾಹೀರಾತು

‘ವಾಶಿಂಗ್ ಪೌಡರ್ ನಿರ್ಮಾ’ದ ಜಾಹೀರಾತು ಯಾರಿಗೆ ನೆನಪಿಲ್ಲ? ದೂರದರ್ಶನ ಆಗಷ್ಟೆ ಮನೆಮನೆಗಳಲ್ಲಿ ಇಣುಕುತ್ತಿದ್ದ ಕಾಲ. ತಲೆಗೆ ರಿಬ್ಬನ್ನು ಕಟ್ಟಿ ಕೂದಲು ಇಳಿಬಿಟ್ಟ ಹುಡುಗಿಯೊಬ್ಬಳು ಬೆಳ್ಳಗಿನ ಫ್ರಾಕು ಧರಿಸಿ ಗಿರಿಗಿರಿ ಬುಗುರಿಯಂತೆ ತಿರುಗುವ ಜಾಹೀರಾತು ನೋಡಿ ನಾವು ವಿಪರೀತ ಮೋಹಕ್ಕೊಳಗಾಗುತ್ತಿದ್ದೆವು. ನಮ್ಮ ಹಳೆಯ ಫ್ರಾಕುಗಳ ಅಂಚುಗಳನ್ನು ಹಿಡಿದು ‘ದೂಧ್ ಸಿ ಸಫೇದಿ..ರಂಗೀನ್ ಕಪಡಾ ಭೀ ಖಿಲ್ ಖಿಲ್ ಜಾಯೇ’ ಎಂದು ಅಪಸ್ವರದಲ್ಲಿ ಅರಚಿಕೊಳ್ಳುತ್ತ ಆ ಹುಡುಗಿಯಂತೆಯೆ ತಿರುಗಲು ಹೋಗಿ ತಲೆಸುತ್ತು ಬಂದು ಕುಕ್ಕರಿಸಿ ಮುಖಮುಖ ನೋಡಿಕೊಂಡು ನಗಾಡಿಕೊಳ್ಳುತ್ತಿದ್ದುದುಂಟು. ಆಗ ಟಿ.ವಿ.ಯಲ್ಲಿ ಯಾವ ಹೊಸ ಪ್ರಾಡಕ್ಟು ಬಂದರೂ ಕೊಳ್ಳೋಣವೆಂದು ಅಮ್ಮನ ಬಳಿ ಕಾಡುವುದಿತ್ತು-ಹೆಚ್ಚಾಗಿ ಶಾಂಪೂ, ಸೋಪು, ಕ್ರೀಮುಗಳಿಗಾಗಿ. ಶ್ರೀಮಂತರ ಮನೆಯ ಹುಡುಗಿಯರು ತಮ್ಮ ಅಪ್ಪ ಅಮ್ಮಂದಿರು ಕೊಡಿಸಿದ ಹೊಸವಸ್ತುಗಳನ್ನು ಬ್ಯಾಗಿನಲ್ಲಿ ಬಚ್ಚಿಟ್ಟುತಂದು ಕ್ಲಾಸಿನಲ್ಲಿ ಪ್ರದರ್ಶಿಸುವಾಗ ನಮ್ಮ ಬೇಡಿಕೆಗಳಿಗೆ ಸೊಪ್ಪುಹಾಕದ ನಮ್ಮ ಮಿಡಲ್ ಕ್ಲಾಸ್ ಪೇರೆಂಟುಗಳ ಮೇಲೆ ಒಮ್ಮೊಮ್ಮೆ ಕೋಪವುಕ್ಕಿದರೂ ಪ್ರಯೋಜನವಿಲ್ಲವೆಂದು ಸುಮ್ಮನಾಗುತ್ತ ಇದ್ದೆವು. ನಮ್ಮ ಟಿ.ವಿ. ಹುಚ್ಚಿಗೆ ನಮ್ಮ ಅಪ್ಪಮ್ಮಂದಿರು ಹಿಡಿಶಾಪ ಹಾಕಿಕೊಂಡು ಅವರೂ ಸುಮ್ಮನಾಗುತ್ತಿದ್ದರು. ಈ ಜಾಹೀರಾತುಗಳಲ್ಲಿ ಕಾಣಬರುತ್ತಿದ್ದ ಸುಂದರ ಮಹಿಳೆಯರು, ಹ್ಯಾಂಡ್ಸಂ ಪುರುಷರು, ಅವರ ಉಡುಗೆತೊಡುಗೆಗಳು, ನೀಟಾದ ಮನೆಗಳು, ಆ ಮನೆಗಳ ಆಧುನಿಕ ಸಲಕರಣೆಗಳು ಇವನ್ನೆಲ್ಲ ಅಕ್ಕಪಕ್ಕದ ಮನೆಯ ಹೆಂಗಸರು ನೋಡಿ ಕರುಬಿ ನಿಟ್ಟುಸಿರು ಬಿಡುತ್ತಿದ್ದರೆ ನಾವು ಮಕ್ಕಳು ಮಿಕಿಮಿಕಿ ನೋಡುವುದಾಗಿತ್ತು.

ನಾನು ಮೊದಲಬಾರಿಗೆ ಗೆಳತಿಯೊಬ್ಬಳ ಮನೆಯಲ್ಲಿ ‘ಫೆಮಿನಾ’ ನೋಡಿದ್ದು, ಅದರಲ್ಲಿನ ತರಹೇವಾರಿ ಗೃಹಾಲಂಕಾರದ ಚಿತ್ರಗಳು, ವಿವಿಧ ರಂಗಿನ ಜಾಹೀರಾತುಗಳನ್ನು ನೋಡಿ ಮರುಳಾಗಿದ್ದು, ನನಗೂ ಅವೆಲ್ಲ ದಕ್ಕಬೇಕೆಂಬ ಹಂಬಲ ಉಂಟಾಗಿದ್ದು - ಎಲ್ಲವನ್ನು ನೆನಪಿಸಿಕೊಂಡರೆ ಈಗ ನಗು ಬರುತ್ತದೆ. ‘ಇವೆಲ್ಲ ಪಡೆಯಲು ತುಂಬ ದುಡ್ಡು ಬೇಕು. ಅದು ನಮ್ಮ ಬಳಿ ಇಲ್ಲ’ ಎಂಬ ತರಹದ ಯೋಚನೆಗಳು ಬಂದದ್ದೂ ಆಗಲೆ. ಆಗೆಲ್ಲ ನಾವು ಒಟ್ಟಿಗೆ ಕೂತು ಪೇಪರುಗಳಲ್ಲಿ ರಾಶಿರಾಶಿ ದುಡ್ಡು ತುಂಬಿದ ಮನೆಗಳ ಚಿತ್ರ ಬರೆದುಕೊಂಡು ಸಮಾಧಾನಪಟ್ಟುಕೊಳ್ಳುತ್ತಿದ್ದೆವು. ಒಟ್ಟಿನಲ್ಲಿ ಈ ಜಾಹೀರಾತುಗಳು ಅಲ್ಲಿಯತನಕ ಕೆಲವು ಚಾಕಲೇಟು, ಸಿಹಿತಿಂಡಿಗಳನ್ನು ಮಾತ್ರ ಬಯಸುತ್ತಿದ್ದ ನಮ್ಮ ಮನಸ್ಸಿನಲ್ಲಿ ತರತರಹದ ಆಸೆಗಳನ್ನು ಹುಟ್ಟಿಸಿದ್ದಷ್ಟೇ ಅಲ್ಲ, ನಮ್ಮಲ್ಲಿ ಕ್ಲಾಸ್ ಕಾನ್ಶಿಯಸ್ನೆಸ್ ಅನ್ನು ಕೂಡ ಮೂಡಿಸಲಾರಂಭಿಸಿದವು. ನಾವು ಉಳ್ಳವರ ಮನೆಯ ಮಕ್ಕಳನ್ನು ಆದಷ್ಟು ನಮ್ಮ ಗುಂಪಿನಿಂದ ದೂರವಿಡಲಾರಂಭಿಸಿದೆವು. ಅವರ ಚರ್ಚೆಯ ಕಾಮನ್ ವಿಷಯಗಳಾದಂತಹ ಫಾರಿನ್ ವಸ್ತುಗಳು, ಹೊಸತಾಗಿ ರಿಲೀಸ್ ಆದ ಚಲನಚಿತ್ರಗಳ ವಿಡಿಯೊಕ್ಯಾಸೆಟ್ಟುಗಳು, ಹೊಸಬ್ರ್ಯಾಂಡಿನ ವಾಚು, ಶೂ, ಆಭರಣಗಳು ಇತ್ಯಾದಿಗಳ ಜತೆ ನಮ್ಮನ್ನು ರಿಲೇಟ್ ಮಾಡಿಕೊಳ್ಳಲು ಸಾಧ್ಯವಾಗದೆ ಪರದಾಡುತ್ತ ನಮಗೇ ಅರಿವಿಲ್ಲದ ಹಾಗೆ ನಾವು ಅಂತಹ ಮಕ್ಕಳಿಂದ ದೂರವಾಗತೊಡಗಿದೆವು. ಅವರಿಗಿಂತ ಸಾಮಾನ್ಯವಾಗಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದಾಗೆಲ್ಲ ನಮ್ಮ ’ಈಗೋ’ಗಳೆಂಬ ಬೆಂಕಿ ಸ್ವಲ್ಪವಾದರು ಆರುತ್ತಿತ್ತು. ಕಾಲೇಜು ಓದುವಾಗ ಗೆಳತಿಯರು ನನ್ನ ಹೊಸ ಬಟ್ಟೆ, ಚಪ್ಪಲಿಗಳ ನಿರ್ಮೋಹದ ಬಗ್ಗೆ ಛೇಡಿಸಿ ‘ನೀನು ಹುಡುಗಿಯಾಗಿರಲಿಕ್ಕೆ ನಾಲಾಯಕ್ಕು!’ ಅನ್ನುತ್ತಿದ್ದರು. ಅವರೆಲ್ಲ ಬೀದಿಯ ಬಿಲ್ಬೋರ್ಡುಗಳ ನೋಡಿ ಕನಸು ಕಟ್ಟುವಾಗ ನಾನು ಮೂರು ಮಕ್ಕಳನ್ನು ತನ್ನ ಸಂಬಳದಲ್ಲಿ ಓದಿಸಬೇಕಾಗಿದ್ದ ಅಮ್ಮನನ್ನು ನೆನೆದು ನಕ್ಕು ಸುಮ್ಮನಾಗುತ್ತಿದ್ದೆ. ಎಂ.ಎ ಓದುವಾಗ ನಮ್ಮ ಲೆಕ್ಚರರೊಬ್ಬರು ‘ಜಾಹೀರಾತು ಸಂಸ್ಕೃತಿಯ ಮೇಲೆ ಸೆಮಿನಾರು ಮಾಡಿ’ ಎಂದು ಹೇಳಿದಾಗ ತಮಾಷೆಯೆನಿಸಿತ್ತು. ಆದರೆ ಚರ್ಚೆ ಮಾಡುತ್ತ ಹೋದಹಾಗೆ ನಾವೆಲ್ಲ ಈ ಜಾಹೀರಾತು ಸಂಸ್ಕೃತಿಯ ಅದೃಶ್ಯ ಭಾಗಗಳೆ ಎಂದು ಅರಿವಾದಾಗ ಅಷ್ಟೇನೂ ತಮಾಷೆಯ ಭಾವನೆ ಉಂಟಾಗಲಿಲ್ಲ. 

ಪ್ರತಿಷ್ಠಿತ ಶಾಲೆಯೊಂದರಲ್ಲಿ ಓದುತ್ತಿದ್ದ ಹುಡುಗನೊಬ್ಬ ತನ್ನ ತಂದೆ ಮೊಬೈಲುಫೋನು ಕೊಡಿಸದಿದ್ದಕ್ಕೆ ಹತಾಶನಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಗ್ಗೆ ಗೆಳತಿ ಸುಪ್ರಿಯಾ ಹೇಳುತ್ತ ಈಗಿನ ಮಕ್ಕಳು ನಮ್ಮ ಹಾಗೆ ಅಡ್ಜಸ್ಟ್ ಮಾಡ್ಕೊಳೊಲ್ಲ ಕಣೆ. ನನ್ನ ಮಗನ ಹತ್ರ ಬೇಬ್ಲೇಡ್ (ಒಂದು ರೀತಿಯ ಆಟಿಕೆ) ಇರಲಿಲ್ಲ ಅಂತ ನಮ್ಮ ಅಪಾರ್ಟ್ಮೆಂಟಿನ ಮಕ್ಕಳು ಆಟಕ್ಕೇ ಸೇರಿಸ್ತಿರ್ಲಿಲ್ಲ. ಪಾಪ. ಡಿಪ್ರೆಸ್ ಆಗ್ಬಿಟ್ಟಿದ್ದ. ನಂಗೆ ತಡ್ಕೊಳೋಕಾಗದೆ ಅವನು ಹೇಳಿದಂಥದೆ ಕೊಡಿಸಿದೆ. ಭಯ ಆಗತ್ತೆ ಕಣೆ ಅನ್ನುತ್ತಿದ್ದಳು. ಜಾಹೀರಾತು ಸಂಸ್ಕೃತಿ ಇವತ್ತು ನಮ್ಮನ್ನು ಹಿಂದೆಂದೂ ಇಲ್ಲದಂತೆ ಆವರಿಸಿಕೊಂಡುಬಿಟ್ಟಿದೆ. ಕಂಪನಿಗಳು ಮಕ್ಕಳು, ಹೆಂಗಸರು, ಗಂಡಸರು, ಯುವಕಯುವತಿಯರು, ವಯಸ್ಸಾದವರು ಎಂದು ಮುಂತಾಗಿ ವರ್ಗೀಕರಿಸಿ, ಪ್ರತಿಯೊಂದು ವರ್ಗವನ್ನೂ ವಿಶೇಷ ಜಾಹೀರಾತುಗಳ ಮೂಲಕ ಓಲೈಸಲಾರಂಭಿಸಿವೆ. ಜಾಹೀರಾತುಗಳ ಮೇಲೆ ಕೋಟಿಗಟ್ಟಲೆ ಖರ್ಚು ಮಾಡುತ್ತವೆ. ‘ನಮ್ಮ ಕಂಪನಿಯ ವಸ್ತು ಕೊಂಡರೇ ನಿಮಗೆ ಮೋಕ್ಷ’ ಎಂದು ಸಾರುತ್ತವೆ. ನಮಗೆ ಇತ್ತೀಚೆಗೆಲ್ಲ ಬೀದಿಬದಿಯ ಸಣ್ಣ ಅಂಗಡಿಗಳಲ್ಲಿ ಮಾರಲ್ಪಡುವ ಲೋಕಲ್ ಕಂಪನಿಯ ಪದಾರ್ಥಗಳು ಒಗ್ಗುವದಿಲ್ಲ. ಮಕ್ಕಳು ಗಲಾಟೆ ಮಾಡದಿರಲು ಟಿ.ವಿ ತೋರಿಸುವವರೂ ನಾವೆ. ಮಕ್ಕಳನ್ನು ಸೂಪರ್ ಮಾರ್ಕೆಟ್ಟಿಗೆ ಕರೆದುಕೊಂಡು ಹೋಗುವವರೂ ನಾವೆ. ಅಲ್ಲಿ ಕಂಡ ವಸ್ತುಗಳು ಬೇಕೆಂದು ಅವರು ರಂಪಾಟ ಮಾಡಿದರೆ ಹುಸಿಕೋಪ ತೋರುತ್ತ ಮುಜುಗರದ ನಗೆ ನಗುತ್ತ ನಮ್ಮ ಕೈಗೆಟುಕದಿದ್ದರೂ ಕೊಡಿಸುವವರೂ ನಾವೆ. ಅವರಿಗೆ ನಮ್ಮ ತೊಂದರೆಗಳು ಎಂದೆಂದಿಗೂ ಅರಿವಿಗೆ ಬರದಂತೆ ಮಾಡುವವರೂ ನಾವೆ. ಅಲ್ಲವೆ?
 
ಸುಪ್ರಿಯಾಳ ತರಹ ನನಗೂ ಭಯವಾಗುತ್ತಿದೆ.

ಚಿತ್ರಕೃಪೆ: www.pagog.com

 

Comments (5)

ಹೀಗೆ ಪ್ರತಿಸಾರಿ ಕಾಡುವ ಅವಳು

‘ಹಯ್ಯೊ, ಅವಳು ಬಂದಳೆಂದು ಕಾಣುತ್ತೆ. ನೀನೆ ಹೋಗು ಮಗಳೆ!’
‘ಉಹುಂ. ನಾನು ಯಾಕೆ ಆ ಹೆಂಗಸಿನ ಹತ್ತಿರ ಮಾತಾಡಬೇಕು? ನೀವೆ ಹೋಗ್ರಮ್ಮ!!’
‘ನಂಗೆ ತಲೆನೋವು ಅಂದುಬಿಡು. ಪ್ಲೀಸ್ ಕಣೆ. ನಂಗಾಗಲ್ಲ ಮಾರಾಯ್ತಿ ಆ ಪುರಾಣ ಕೇಳೋಕೆ!’
‘ಪ್ರತಿ ಸಾರಿ ಹಬ್ಬಕ್ಕೆ ಮನೆಗೆ ಬರೋದು ಈ ಹಿಂಸೆಗಾ? ಸರಿ. ನೀವು ಒಳಗಿರಿ. ಮಿನಿಮಂ ಒಂದು ಗಂಟೆ ಅಂತೂ ಆಗತ್ತೆ.’

ನಾನು ಮುಸಿಮುಸಿ ನಗುತ್ತ ಹಿತ್ತಲ ಬಾಗಿಲು ತೆರೆಯುತ್ತಿದ್ದೆ. ಅಲ್ಲಿ ತಲೆಯ ಮೇಲೆ ಸೆರಗು ಹೊದ್ದುಕೊಂಡು ಆಕೆ ನಿಂತಿರುತ್ತ ಇದ್ದಳು - ಶೋಕದ ಪ್ರತೀಕವೆ ತಾನೆಂಬಂತೆ. ಅವಳು ಎಂದರೆ ಒಂದು ರೀತಿಯ ಸರಿಯಾಗಿ ಒಣಗಿರದ ಸೀರೆಗಳ ಚುಂಗು ವಾಸನೆಯೆ ಇವತ್ತಿಗು ನನ್ನ ಮನಸ್ಸಿಗೆ ಬರುವುದು. ಆಕೆ ಸದಾ ರವಿಕೆಯಂತೆ ಇರುವ ತಾನೆ ಕೈಯಾರ ಹೆಣೆದ ವುಲನಿನ ರವಿಕೆಯನ್ನೆ ಉಡುತ್ತಿದ್ದುದು. ತಲೆಯ ಸೆರಗೊಳಗಿಂದ ಅಸ್ತವ್ಯಸ್ತವಾಗಿ ಇಣುಕುತ್ತಿದ್ದ ಕೂದಲುಗಳು ವಾರದಿಂದ ಬಾಚಣಿಕೆಯ ಪ್ರಯೋಗಕ್ಕೆ ಒಳಪಡದಿರುವ ಎಲ್ಲ ಲಕ್ಷಣಗಳನ್ನೂ ತೋರುತ್ತಿದ್ದವು. ಇನ್ನು ಆಗೀಗ ಇಣುಕುತ್ತಿದ್ದ ಹೇನುಗಳ ವಿಚಾರವನ್ನು ನಾನು ಮಾತನಾಡದಿದ್ದರೇನೆ ಒಳಿತು. ಹಾಗೆ ಬೇಕಾದರೆ ಆಕೆಯ ಮಾಮೂಲು ಉಡುಗೆಯನ್ನು ಬದಲಾಯಿಸಿ ರೇಷ್ಮೆಸೀರೆ ಉಡಿಸಿ ತಲೆಗೂದಲನ್ನು ಒಪ್ಪವಾಗಿ ಬಾಚಿ ಒಂದೆರಡು ಆಭರಣಾದಿಗಳನ್ನು ತೊಡಿಸಿದರೆ ಆಕೆಗೆ ರಾಜಕುಮಾರಿ ಗಾಯತ್ರೀದೇವಿಯವರಿಗೆ ದೊರಕುವಷ್ಟೆ ಗೌರವ ಆರಾಮವಾಗಿ ದೊರಕಿಬಿಡುತ್ತಿತ್ತು. ಆಂಥಾ ಗತ್ತು ಆಕೆಯ ಮುಖದ ಮೇಲೆ ಲಾಸ್ಯವಾಡುತ್ತಿತ್ತು. ನನ್ನ ಮುಖದ ಮೇಲಿನ ಸ್ವಾಗತದ ನಗುವನ್ನೂ ಆಕೆ ಅಸಹ್ಯವೆಂಬಂತೆ ನೋಡಿ ಮನೆಯೊಳಗೆ ಠೀವಿಯಿಂದ ಕಾಲಿಡುತ್ತಿದ್ದಳು ಮತ್ತು ನಮ್ಮ ಅಡುಗೆ ಒಲೆಗೂ ರುಬ್ಬುಗಲ್ಲಿಗೂ ನಡುವೆ ಇರಿಸಲಾಗಿರುತ್ತಿದ್ದ ಕುಳ್ಳನೆಯ ಸ್ಟೂಲೊಂದರ ಮೇಲೆ ತಣ್ಣಗೆ ಆಸೀನಳಾಗುತ್ತಿದ್ದಳು.

ಆಮೇಲೆ ಆಕೆಯ ಸೊಂಟಕ್ಕೆ ಸಿಗಿಸಲಾಗಿದ್ದ ಅಡಿಕೆಪುಡಿಯ ಪಾಕೆಟು, ಸುಮಾರು ಮಲೆನಾಡಿನ ಹೆಂಗಸರು ಇಟ್ಟುಕೊಳ್ಳುವಂಥದು - ಈಚೆ ಬರುತ್ತಿತ್ತು. ಆಕೆ ಮೆಲ್ಲಗೆ ಸುಮಾರು ಹಳೆಯದಾಗಿ ಒಣಗಿಹೋಗಿದ್ದ ವೀಳೆಯದೆಲೆಯನ್ನೂ, ನಾಲಕ್ಕಯಿದು ಅಡಿಕೆಯ ತುಂಡುಗಳನ್ನೂ, ಸುಣ್ಣದ ಹೊಳೆಯುವ ಡಬ್ಬಿಯೊಂದನ್ನೂ ತನ್ನ ತೊಡೆಯ ಮೇಲೆ ಇಡುತ್ತಿದ್ದಳು. ಎಲೆಯ ತೊಟ್ಟು ಮುರಿವ ಶಾಸ್ತ್ರವಾದ ಮೇಲೆ ತನ್ನ ಬಲಗೈಯ ನಡುಬೆರಳಿಂದ ಸುಣ್ಣವನ್ನು ಎಲೆಗೆ ಬಳಿದು ಅಡಿಕೆಯ ತುಂಡುಗಳನ್ನು ಎಲೆಗೆ ಸುರಿದು ಹುಷಾರಾಗಿ ಕಟ್ಟಿ ಅದನ್ನು ತನ್ನ ಬಾಯಿಯ ಒಂದು ಮೂಲೆಗೆ ಭದ್ರವಾಗಿ ಸೇರಿಸುವ ಕ್ರಿಯೆ ನಡೆಯುವುದು. ಆ ಇಡೀ ಪ್ರಕ್ರಿಯೆ ನನ್ನಲ್ಲಿ ಒಂದು ಬಗೆಯ ಕಚಗುಳಿ ಹುಟ್ಟಿಸಿ ನನ್ನ ಬಾಯಲ್ಲಿಯೂ ಎಲಡಿಕೆ ತಿನ್ನಲೇಬೇಕೆಂಬ ತುರಿಕೆಯನ್ನು ಹುಟ್ಟಿಸುತ್ತಿತ್ತು. ಆಕೆಗೂ ಇದು ತಿಳಿದಿತ್ತು ಎಂದು ನನಗೆ ಗುಮಾನಿ. ಆಕೆ ನನ್ನನ್ನು ಹದ್ದಿನಂಥ ಕಣ್ಣುಗಳಿಂದ ನೋಡುತ್ತ ಇರುತ್ತಿದ್ದಿದ್ದು ಇದಕ್ಕೆ ಕಾರಣ. ನಾನು ಅಪ್ಪಿತಪ್ಪಿ ತಲೆಕೆಟ್ಟು ಆಕೆಯಿಂದ ಒಂದು ತುಂಡು ಅಡಿಕೆ ಕೇಳಿದ್ದಿದ್ದರೆ ನನಗೆ ಒದಗಬಹುದಾದ ಪರಿಸ್ಥಿತಿಯ ಬಗ್ಗೆ ನನಗೆ ಒಳ್ಳೆಯ ಅಂದಾಜು ಇದ್ದುದರಿಂದ ನಾನು ನನ್ನ ಆಸೆಯನ್ನು ಬಲವಾಗಿ ದವಡೆಗಳೆಡೆಯಲ್ಲಿ ಅದುಮಿ ಹಿಡಿದು ಆಕೆಗೆ ಕಾಫಿ ನೀಡಲು ಹೊರಡುತ್ತಿದ್ದೆ. ಅದೇ ಸಮಯಕ್ಕೆ ಸರಿಯಾಗಿ ಆಕೆ ನನ್ನ ತಾಯಿಯವರಿಗೆ ಪ್ರತೀ ಸಾರಿಯಂತೆ ಆಕೆ ಬಂದಾಗಲೆ ಬರುವ ತಲೆನೋವು ಹೊಟ್ಟೆಬೇನೆ ಏನಾದರು ಬಂದಿದೆಯೆ ಎಂದು ವಿಚಾರಿಸುವಳು. ನಾನು ಹೌದೆನ್ನುತ್ತ ಆಕೆಯ ಕೈಗೆ ಕಾಫಿಯ ದೊಡ್ಡ ಲೋಟವನ್ನು ಥಮಾಯಿಸಿ ಸುಮ್ಮನಾಗುವೆ. ಆಕೆ ಎಲ್ಲ ತಿಳಿದಿದ್ದರೂ ತಿಳಿದಿಲ್ಲವೆಂಬಂತೆ ಅಲೌಕಿಕ ಆನಂದದಿಂದ ಕಾಫಿ ಕುಡಿಯತೊಡಗುವಳು.

ಆಮೇಲೆ ಆಕೆಯ ಬಾಯಿ ತೆರೆಯುತ್ತಿತ್ತು. ಕೇವಲ ನಲವತ್ತೈದು ನಿಮಿಷಗಳ ಕಾಲ ಆಕೆಯ ಕೆಲಸಕ್ಕೆ ಬಾರದ ಗಂಡುಮಕ್ಕಳು, ಪಿತೂರಿ ಮಾಡುವ ಸೊಸೆಯಂದಿರು, ತನಗೆ ಬರಬೇಕಾದ ಆಸ್ತಿಪಾಲನ್ನು ಇಪ್ಪತ್ತೈದು ವರ್ಷಗಳಿಂದಲೂ ಕೊಡದಿರುವ ನಾದಿನಿ ಮೈದುನಂದಿರು, ತನ್ನ ಬಗ್ಗೆ ಹಿಂದಿನಿಂದ ಹೀಯಾಳಿಸುವ ಜನರು ತನಗೆ ಒಳ್ಳೆಯದು ಮಾಡದ ಜನರು ಯಾವರೀತಿ ನರಕದ ಬೆಂಕಿಯಲ್ಲಿ ಬೇಯುವರು ಎಂದು ಆಕೆ ಸಚಿತ್ರವಾಗಿ ವರ್ಣಿಸುತ್ತಿದ್ದಳು. ಕೇವಲ ಒಂದು ಬಡಪಾಯಿ ಕಾಲೇಜುಹುಡುಗಿಯಾಗಿದ್ದ ನಾನು ಭೀತಿಯನ್ನು ಪ್ರಕಟಿಸುತ್ತ ಗಡಗಡ ನಡುಗುತ್ತ ಕೂತಿರುತ್ತಿದ್ದೆ. ಆಮೇಲೆ ಆಕೆ ನಾನು ಕಾಲೇಜಿಗೆ ಹೋಗಿ ದೊಡ್ಡ ತಪ್ಪು ಮಾಡುತ್ತಿರುವೆನೆಂದೂ, ನನ್ನ ತಂದೆತಾಯಂದಿರಿಗೆ ತಲೆಕೆಟ್ಟಿದೆಯೆಂದೂ, ನನಗೆ ಮದುವೆಯಾಗಿದ್ದರೆ ಈಗಾಗಲೆ ಸುಮಾರು ಮಕ್ಕಳನ್ನು ಹಡೆದು ಫಾರಿನ್ನಿನಲ್ಲಿ ನನ್ನ ಗಂಡನೊಡನೆ ಹಾಯಾಗಿದ್ದಿರಬಹುದಿತ್ತೆಂದೂ ಹೇಳಿ ಏನಿದ್ದರು ಏನೆ ಓದಿದರು ನೀನು ನಾಳೆ ಒಲೆಯ ಬೂದಿ ಕೆದಕುವುದು ತಪ್ಪುತ್ತದೆಯೆ? ಯಾರಿಗಾದರು ತಪ್ಪಿದೆಯೆ? ಎಂದು ಹೇಳಿ ನನ್ನ ಮುಖವನ್ನೆ ದುರದುರನೆ ನೋಡುತ್ತಿದ್ದಳು. ನಾನು ಹೆಚ್ಚಿಗೆ ತಡೆದುಕೊಳ್ಳಲಾಗದೆ ಆಕೆಗೆಂದೆ ತೆಗೆದಿಡಿಟ್ಟಿದ್ದ ಕಾಟನ್ ಸೀರೆ ಹಾಗು ನೂರು ರೂಪಾಯಿಗಳನ್ನು ಹೆಚ್ಚೂಕಡಿಮೆ ಅವಳ ಕೈಯಿಗೆ ತುರುಕುತ್ತಿದ್ದೆ. ಆಕೆ ಆದನ್ನು ತೆಗೆದುಕೊಳ್ಳುವುದು ನಮಗೆ ಮಾಡುವ ಮಹದುಪಕಾರ ಎಂಬಂತೆ ನನ್ನೆಡೆಗೆ ನೋಡುತ್ತಿದ್ದಳು. ಏನಿದ್ದರು ನಿನ್ನ ಅಮ್ಮ ತಪ್ಪಿಸಿಕೊಂಡುಬಿಟ್ಟಳು ನೋಡು ಈ ಸಾರಿ. ಭಾರಿ ಹುಶಾರಿ ಅವಳು ಎಂದು ಸಟ್ಟನೆದ್ದು ಹೊರಗೆ ಹೋಗಿಬಿಡುತ್ತಿದ್ದಳು. ನಾನು ಒಳಗೆ ಹೋಗಿ ಅಮ್ಮನಿಗೆ ಸಿಗ್ನಲ್ಲು ಕೊಡುವೆ. ಇಬ್ಬರೂ ಬಿದ್ದೂ ಬಿದ್ದೂ ನಗುವುದು. ಪ್ರತಿ ವರುಷವೂ ಹೀಗೇ. ತಪ್ಪದೆ ನಡೆಯುವುದು.

ಆಗಾಗ ನಾನು ತಪ್ಪಿಸದೆ ಹೋಗಲೆಬೇಕಾಗುವ ಕೆಲವು ಮದುವೆಗಳಲ್ಲಿ ಈಕೆಯ ನೆರಳು ಕಂಡುಬರುತ್ತಿದ್ದುದುಂಟು. ಅಲ್ಲೆಲ್ಲ ಈಕೆ ಒಬ್ಬಳೆ ಯಾರನ್ನೂ ಅಂಟಿಸಿಕೊಳ್ಳದಂತೆ ತಿರುಗಾಡುತ್ತಿದ್ದಳು. ಆಕೆಯ ತಲೆ ಕೊಂಚ ಒಪ್ಪವಾಗಿ ಮೈಮೇಲೆ ಸುಮಾರುಮಟ್ಟಿಗಿನ ಸೀರೆ ರವಿಕೆಗಳು ಕಂಡುಬರುತ್ತಿದ್ದವು. ಆಕೆಯನ್ನು ಯಾರೂ ಏನು ಕೆಲಸಕ್ಕೂ ಕರೆಯರು. ಆಕೆ ಯಾರಿಗೂ ಬೇಡವಾದಾಕೆ. ಆದರೆ ಈ ಇಮೇಜನ್ನು ಆಕೆಯೆ ಕಟ್ಟಿಟ್ಟುಕೊಂಡಿದ್ದೆಂದು ನನಗೆ ಬಲವಾದ ನಂಬಿಕೆಯಿತ್ತು. ಸಾವಿನ ಮನೆಗಳಿಗೆ ಮಾತ್ರ ಆಕೆ ತಪ್ಪದೆ ಹಾಜರಾಗಿ ಎರಡು ನಿಮಿಷ ಸುಮ್ಮನೆ ಕುಳಿತು ಎದ್ದುಹೋಗುವಳು. ಆಕೆ ಹೋದಮೇಲೆ ಎಷ್ಟೊ ಹೊತ್ತಿನವರೆಗು ಆಕೆಯ ಕಮಟುವಾಸನೆ ಹೋಗಲೊಲ್ಲದೆ ಅಲ್ಲಿಯೆ ಸುಳಿದಾಡುತ್ತಿರುವುದು. ಆಕೆ ನಮ್ಮೆಲ್ಲರನ್ನೂ ಬೇಕಂತೆ ಮೂರ್ಖರನ್ನಾಗಿ ಮಾಡಿ ಸೀಕ್ರೆಟಾಗಿ ನಗುತ್ತಿರುವಳೆಂದೇ ನನಗೆ ಸದಾ ಅನ್ನಿಸುವುದು.

ಚಿತ್ರಕೃಪೆ: www.mattwrigley.com

 

Comments (15)

ಆಕೆ ಹಾಕಿದ ನಗರಿಯ ತಳಪಾಯ

ಕ್ರಿಸ್ಟೈನ್ ಹುಟ್ಟಿದ್ದು ವೆನಿಸಿನಲ್ಲಿ. ಬೆಳೆದಿದ್ದು ಫ್ರಾನ್ಸಿನಲ್ಲಿ ಆಕೆ ವಿಧವೆಯಾಗಿದ್ದು ಇಪ್ಪತ್ತೈದರ ಹರೆಯದಲ್ಲಿ. ತನ್ನ ಮಕ್ಕಳನ್ನು ಸಾಕಲು ಆಕೆ ಬರೆಯಲಾರಂಭಿಸಿದಳು. ಫ್ರೆಂಚ್ ಸಾಹಿತ್ಯದ ಅತ್ಯುತ್ತಮ ಪುಸ್ತಕವೆನಿಸಿಕೊಂಡ ‘ರೊಮ್ಯಾನ್ಸ್ ಆಫ್ ದ ರೋಸ್’ ನ ಬಗ್ಗೆ ಆಕೆ ನೀಡಿದ ಪ್ರತಿಕ್ರಿಯೆ ‘ದ ಬುಕ್ ಆಫ್ ದ ಸಿಟಿ ಆಫ್ ಲೇಡೀಸ್’ ಇಂದ ಮಹಿಳಾವಾದೀ ಸಾಹಿತ್ಯ ಪ್ರಭಾವಿತಗೊಂಡಿತು. ಆದರು ನಾವು ಈಗಿನ ಬರಹಗಳಲ್ಲಿ ಈಕೆಯ ಹೆಸರನ್ನೆ ಕಾಣುವದಿಲ್ಲವಲ್ಲ? ಯಾರಿದು ಕ್ರಿಸ್ಟೈನ್? ಎಲ್ಲಿ ಬರೆಯುತ್ತಾಳೀಕೆ?

ಆಕೆ ಕ್ರಿಸ್ಟೈನ್ ದೆ ಪಿಜಾನ್. ಆಕೆ ಹುಟ್ಟಿದ್ದು ಕ್ರಿ.ಶ. 1365ರಲ್ಲಿ!

ನಮಗೆ ಗೊತ್ತಿರುವ ಹಾಗೆ ಪಾಶ್ಚಾತ್ಯ ಮಹಿಳಾವಾದ ಆರಂಭವಾಗುವುದು ಸುಮಾರು ಹದಿನೆಂಟನೆಯ ಶತಮಾನದ ಕೊನೆಯ ಭಾಗದಲ್ಲಿ ಮೇರೀ ವೊಲ್ಸ್ಟೋನ್ಕ್ರಾಫ್ಟಳ ಬರಹಗಳ ಮೂಲಕ. ಆಮೇಲೆ ಹತ್ತೊಂಭತ್ತನೆಯ ಹಾಗೂ ಇಪ್ಪತ್ತನೇ ಶತಮಾನದ ವೇಳೆಗೆಲ್ಲ ಮಹಿಳಾವಾದದಲ್ಲಿ ಕ್ರಾಂತಿಯೇ ಆಯಿತೆನ್ನುವಷ್ಟರ ಮಟ್ಟಿಗೆ ಬೆಳವಣಿಗೆಗಳಾದವು. ಮಹಿಳಾವಾದೀ ಸಾಹಿತ್ಯ ಬೃಹತ್ತಾಗಿ ಬೆಳೆಯತೊಡಗಿತು. ಹಲವಾರು ಥಿಯರಿಗಳು ಬೆಳಕಿಗೆ ಬಂದವು. ಪುರುಷಕೇಂದ್ರೀಕೃತವಾಗಿದ್ದ ಸಾಹಿತ್ಯವನ್ನು ಸ್ತ್ರೀಯ ಕಣ್ಣಿಂದ ನೋಡುವ, ಪುನರ್ವ್ಯಾಖ್ಯಾನಿಸುವ, ನವೀನವಾಗಿ ಬರೆಯುವ ಪ್ರಕ್ರಿಯೆ ಪ್ರಚಲಿತವಾಗತೊಡಗಿತು. ಅನೇಕರಲ್ಲಿ ಇದು ಪಕ್ಕಾ ಇತ್ತೀಚಿಗೆ ನಡೆದ ಕ್ರಾಂತಿ ಎಂಬ ಭಾವನೆ ಹುಟ್ಟಿಸಿದುದರಲ್ಲಿ ಯಾವುದೇ ಅಚ್ಚರಿ ಕಾಣದು. ಆದರೆ ಚರಿತ್ರೆಯನ್ನು ತನ್ನ ಕಣ್ಣಿಂದ ಕಂಡು ಹೊಸ ರೀತಿಯಲ್ಲಿ ಅದನ್ನು ಹೇಳುವ ಕೆಲಸವನ್ನು ಏಳು ಶತಮಾನಗಳ ಹಿಂದೆಯೇ ಮಾಡಿದ ಮೊದಲ ಮಹಿಳೆ ಕ್ರಿಸ್ಟೈನ್ ದೆ ಪಿಜಾನ್.

ಆಕೆಯ ‘ದ ಬುಕ್ ಆಫ್ ದ ಸಿಟಿ ಆಫ್ ಲೇಡೀಸ್’ ಆರಂಭವಾಗುವುದು ಆಕೆಯ ಓದಿನಿಂದ. ಮ್ಯಾಥೋಲಿಯಸ್ ಎಂಬಾತ ಬರೆದ ಪುಸ್ತಕವೊಂದನ್ನು ಓದುತ್ತ ಕ್ರಿಸ್ಟೈನ್ ದೆ ಪಿಜಾನ್ ಬರೆದುಕೊಳ್ಳುತ್ತಾಳೆ: ’ಬರೆ ಈ ಪುಸ್ತಕವನ್ನು ನೋಡಿದರೆ ಸಾಕು, ನನಗನಿಸುವುದು, ಇಷ್ಟೊಂದು ಜನ ಗಂಡಸರು, ಅದರಲ್ಲಿಯೂ ವಿದ್ಯಾಪಾರಂಗತರು ತಮ್ಮ ಮಾತುಕತೆ, ಬರಹಗಳಲ್ಲಿ ಮಹಿಳೆಯರ ಬಗ್ಗೆ, ಅವರ ನಡವಳಿಕೆಯ ಬಗ್ಗೆ ಎಷ್ಟೊಂದು ಪೈಶಾಚಿಕವಾಗಿ, ಹೇಯವಾಗಿ ಬರೆಯುತ್ತ ಬಂದಿದ್ದಾರೆಂದು ಅಚ್ಚರಿಪಡುವಂತೆ ಆಗುವುದು. ಇದನ್ನು ಓದಿದ ನಂತರ ನನಗೆ ದೇವರು ಹೆಣ್ಣಿನ ರೂಪದಲ್ಲಿ ಒಂದು ವಿಕಾರ ಪ್ರಾಣಿಯನ್ನು ಸೃಷ್ಟಿಸಿರುವನೆಂದು ತಿಳುವಳಿಕೆ ಮೂಡಿತು. ಕುಶಲನಾದ ಆತ ಹೀಗೆ ಮಾಡಲು ಹೇಗೆ ಸಾಧ್ಯ ಎಂದು ಭಾವಿಸಿದೆ. ನನ್ನ ಬಗ್ಗೆ, ಇಡಿ ಹೆಂಗಸರ ಜಾತಿಯ ಬಗ್ಗೆಯೆ ಬೇಸರ ಮೂಡಿ ನನಗೆ ಹಳಹಳಿಯುಂಟಾಯಿತು - ನಾವು ರಾಕ್ಷಸರೆಂಬ ಭಾವನೆ ಮೂಡಿತು. ದೇವರು ನನ್ನನ್ನು ಹೆಣ್ಣೊಂದರ ದೇಹದಲ್ಲಿ ಬದುಕುವಂತೆ ಮಾಡಿದ್ದು ನನ್ನ ದುರ್ದೈವವೇ ಅಂದುಕೊಂಡೆ.’

ಹೀಗಿದ್ದ ಕ್ರಿಸ್ಟೈನಳ ಕನಸಿನಲ್ಲಿ ದೇವತೆಗಳು ಬಂದು ತೊಂದರೆಗೆ ಪರಿಹಾರ ಸೂಚಿಸುತ್ತಾರೆ. ಗೊಂದಲಕ್ಕೆ ಒಳಗಾಗಿದ್ದ ಆಕೆಗೆ ಮಹಿಳೆಯರಿಗೋಸ್ಕರ ಒಂದು ನಗರವನ್ನು ನಿರ್ಮಿಸಬೇಕೆಂದೂ, ಅಲ್ಲಿ ನೆಲೆಸುವ ಪ್ರತಿಯೊಬ್ಬ, ಮಹಿಳೆಗೂ ಆಕೆಯ ಮೇಲೆ ಪ್ರಹಾರ ನಡೆಸುವವರಿಂದ ರಕ್ಷಣೆ ದೊರಕುವದೆಂದೂ ಹೇಳುವರು. ಅಲ್ಲಿ ನೆಲೆಸುವ ಮಹಿಳೆಯರು ತಮ್ಮ ಮೆದುಳೊಳಗೆ ಭದ್ರವಾಗಿ ಕುಳಿತಿರುವ ‘ಮಹಾನ್ ಪುರುಷ’ನೊಡನೆ ವಾಗ್ವಾದ ನಡೆಸಬೇಕಾಗಿತ್ತು. ಕ್ರಿಸ್ಟೈನಳಿಗೆ ಇಲ್ಲಿನವರೆಗೆ ಪುರುಷರು ದಾಖಲಿಸಿರುವ ಚರಿತ್ರೆಯ ಬಗೆಗೇ ಸಂಶಯ ಹುಟ್ಟುತ್ತದೆ. ಮಹಿಳೆಯರ ಸಾಮಾನ್ಯ ನಡವಳಿಕೆ, ಗುಣಲಕ್ಷಣಗಳನ್ನು ಹೋಲಿಸಿದರೆ ಇವರು (ಪುರುಷರು) ಬರೆದುಕೊಂಡಿರುವುದು, ವಾದಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಸಂಶಯ ಹುಟ್ಟುತ್ತದೆ ಎಂದು ತನ್ನ ವಾದವನ್ನು ಮಂಡಿಸುವ ಕ್ರಿಸ್ಟೈನಳ ತರ್ಕ ಮೆಚ್ಚುವಂಥದು. ಇಲ್ಲಿ ಹೆಣ್ಣಿನ ಅನುಭವಗಳನ್ನು ಆಕೆ ಹೆಚ್ಚು ಸರಿಯಾಗಿ ಬಿಂಬಿಸಬಲ್ಲಳು ಎನ್ನುವ ವಾದವನ್ನು ಪುಷ್ಟಿಗೊಳಿಸಲು ಆಕೆ ಪೌರಾಣಿಕ, ಚಾರಿತ್ರಿಕ ಹಾಗು ಬೈಬಲ್ಲಿನ ಉದಾಹರಣೆಗಳನ್ನು ಬಳಸುತ್ತಾಳೆ. ಬೊಕೇಶಿಯೋನ ‘ಪ್ರಸಿದ್ಧ ಮಹಿಳೆಯರು’ ಪುಸ್ತಕದಿಂದ ಹಾಗೂ ಗ್ರೀಕ್ ನಾಟಕದ ಜೇಸನ್ ಮತ್ತು ಮೀಡಿಯಾರ ಉದಾಹರಣೆಗಳು ಕೂಡ ಉದ್ಧರಿಸಲ್ಪಟ್ಟಿವೆ. ಮಹಿಳೆಯರು ತಮ್ಮ ನಡುವೆಯೆ ಇರುವ ಇಂಥ ಉದಾಹರಣೆಗಳನ್ನು ನ್ಯಾಯ ದೊರಕಿಸಿಕೊಳ್ಳಲು ಬಳಸಿಕೊಳ್ಳಬೇಕೆನ್ನುವುದು ಆಕೆಯ ಇಚ್ಛೆ.

ಕ್ರಿಸ್ಟೈನಳ ಮಹಿಳಾನಗರಿಯ ಕಲ್ಪನೆ ಅಂದಿನ ಕಾಲಕ್ಕೆ ಅನೂಹ್ಯವಾದುದಾಗಿತ್ತು. ತಮ್ಮ ತೊಂದರೆಗಳು, ಕ್ರೈಸಿಸ್ಸುಗಳಿಗೆ ತಾವೆ ಒಂದೆಡೆ ಸೇರಿ ಪರಿಹಾರ ಕಂಡುಕೊಳ್ಳಬೇಕೆನ್ನುವ ನೂತನ ಪರಿಕಲ್ಪನೆಯನ್ನು ಆಕರ್ಷಕ ರೀತಿಯಲ್ಲಿ ತರ್ಕಬದ್ಧವಾಗಿ ಉದಾಹರಣೆಗಳ ಮೂಲಕ ಮಹಿಳೆಯರಿಗೆ ತೋರ್ಪಡಿಸಿದ ಕೀರ್ತಿ ಕ್ರಿಸ್ಟೈನಳಿಗೆ ಸೇರುತ್ತದೆ. ಆಧುನಿಕ ಮಹಿಳಾವಾದದ ಅನೇಕ ಆರಂಭಗಳು ಕ್ರಿಸ್ಟೈನಳ ಈ ಪುಸ್ತಕದಲ್ಲಿಯೆ ತೋರಿಬರುತ್ತವೆ. ಆಕೆ ಹಾಕಿದ ತಳಪಾಯದ ಮೇಲೆ ಇಂದಿನ ಮಹಿಳಾವಾದದ ಮಹಾನಗರಿ ಭದ್ರವಾಗಿ ನಿಂತಿದೆ.

ಚಿತ್ರ ಕೃಪೆ: www.staff.hum.ku.dk 

 

Comments (9)