
ಆಂಖೋನ್ ಕೆ ಸಾಗರ್
ಹೋಂಟೋನ್ ಕೆ ಸಾಗರ್
ಲೇ ಡೂಬೇ ಹಮೇ…
ಪಾಕಿಸ್ತಾನ ಮೂಲದ ‘ಫ್ಯೂಜೋನ್’ ಬ್ಯಾಂಡಿನ ಹಾಡು ಕೇಳುತ್ತ ಮೈಮರೆತಿದ್ದೇನೆ. ಮನೆಯವರೆಲ್ಲ ಬೇಸತ್ತುಹೋಗಿ ಈಗೀಗ ಊಟಕ್ಕೆ, ತಿಂಡಿಗೆ ಕರೆಯುವುದನ್ನು ಕೂಡ ಬಿಟ್ಟುಬಿಟ್ಟಿದ್ದಾರೆ. ನನಗೆ ಆಗಾಗ ತಗುಲಿಕೊಳ್ಳುವ ದರವೇಶಿತನದ ರೋಗ ಕಳೆದ ತಿಂಗಳಿನಿಂದ ಜಾಸ್ತಿಯಾಗಿರುವುದೇ ಇದಕ್ಕೆ ಕಾರಣ ಎಂದು ನನ್ನ ಭಾವನೆ. ಹೀಗಾದಾಗೆಲ್ಲ ವಟವಟ ಎಂದು ಸಾಮಾನ್ಯವಾಗಿ ತಿರುಗುತ್ತಿರುವ ನನ್ನ ಮಾತು ಕಡಿಮೆಯಾಗುತ್ತದೆ. ಊಟತಿಂಡಿಗಳ ಪರಿವೆ ಇರುವುದಿಲ್ಲ. ಇದ್ದಕ್ಕಿದ್ದಹಾಗೆ ಏನೋ ನೆನೆಸಿಕೊಂಡು ಎದ್ದುಹೋಗಿಬಿಡುತ್ತೇನೆ. ಮಧ್ಯರಾತ್ರಿಯಲ್ಲಿ ಎದ್ದುಕೂತು ಹಾಡು ಗುನುಗುವುದೋ, ಕೇಳುವುದೋ, ಇಲ್ಲವೇ ದೀಪ ಹಚ್ಚಿಕೊಂಡು ಬರೆಯುವುದೋ ಮಾಡುತ್ತ ಇರುತ್ತೇನೆ. ನನ್ನವ ಒಂದು ನಿಟ್ಟುಸಿರು ಬಿಟ್ಟು ನಕ್ಕು ಮಗ್ಗುಲು ಬದಲಾಯಿಸಿ ತನ್ನ ಮಗುವಿನಂತಹ ನಿದ್ದೆಗೆ ಜಾರುತ್ತಾನೆ. ಅವನೊಬ್ಬನಿಗೆ ಮಾತ್ರ ಇದೆಲ್ಲ ಚೆನ್ನಾಗಿ ಅರ್ಥವಾಗುತ್ತದೆ.
ಎಂಟು ವರ್ಷಗಳ ಹಿಂದೆ ಇದೇ ಸಮಯದಲ್ಲಿ ಮೈಸೂರಿನ ರೆಸ್ಟುರಾವೊಂದರ ಮೂಲೆಯಲ್ಲಿ ಕೂತು ನಾನು ಆತನಲ್ಲಿ ಇದುವರೆಗೆ ಏನು ಕಂಡೆ, ಇದರಿಂದ ನನಗೇನು ಫಾಯಿದೆ ಎಂದು ಮುಂತಾಗಿ ಒಂದು ಕ್ಷಣವೂ ತೂಕಹಾಕಲು ಹೋಗದೆ ಸುಮ್ಮನೆ ಒದರಿದ್ದೆ – ’ನನಗೆ ಇದೆಲ್ಲ ಸಾಕಾಗಿದೆ, ಯಾವಾಗ ಮದುವೆಯಾಗೋಣ?’ ಆತ ರೆಪ್ಪೆಯನ್ನೂ ಮಿಟುಕಿಸದೆ ಅದೇ ಪ್ರಶ್ನೆಗೋಸ್ಕರ ವರುಷಗಳಿಂದ ಕಾಯುತ್ತ ಇದ್ದವನಂತೆ ಸಣ್ಣಗೆ ನಕ್ಕಿದ್ದ. ಆತ ಧರಿಸಿದ್ದ ಕಪ್ಪು ಟೀಶರ್ಟಿನ ಮೇಲಿದ್ದ ‘ಸ್ಪೀಡ್ ಡೆಮನ್’ ಎಂಬ ಗಾಥಿಕ್ ಶೈಲಿಯ ಲೇಬಲ್ಲನ್ನೆ ದಿಟ್ಟಿಸುತ್ತ ಆತಂಕದಿಂದ ಅವನ ಉತ್ತರಕ್ಕೆ ಕಾಯುತ್ತಿದ್ದ ನನಗೆ ಲೈಫಿನಲ್ಲಿ ಮೊದಲ ಬಾರಿಗೆ ಗಲಿಬಿಲಿ ತುಂಬಿದ ನಾಚಿಕೆಯಂಥ ಭಾವನೆಯಾಗಿತ್ತು. ‘ಓ ಮೆರೇ ದಿಲ್ ಕೆ ಚೈನ್.. ಚೈನ್ ಆಯೆ ಮೆರೆ ದಿಲ್ ಕೊ ದುವಾ ಕೀಜಿಯೇ..’ ನೆನಪಾಗಿ ನಕ್ಕಿದ್ದೆ. ಆಗ ಧ್ವನ್ಯಾಲೋಕದಲ್ಲಿ ಪೇಯಿಂಗ್ ಗೆಸ್ಟ್ ಆಗಿದ್ದ ನನಗೆ ಪ್ರೊ.ಸಿಡಿಎನ್ ಒಂದು ಮುಂಜಾವ ಜತೆಕೂತು ಟೀ ಕುಡಿಯುತ್ತಿರುವಾಗ ಅ ಹುಡುಗ ಯಾರು ಎಂದು ಸೂಕ್ಷ್ಮವಾಗಿ ಕೇಳಿದರು. ಇತರರಿಂದ ಅವರ ಮೂಡುಗಳ ಬಗ್ಗೆ ತರತರಹದ ಕಥೆಗಳನ್ನು ಕೇಳಿ ಬೇಕಾದಷ್ಟು ವಾರ್ನಿಂಗುಗಳನ್ನು ಅದಾಗಲೇ ಪಡೆದಿದ್ದ ನಾನು ಬೆವೆತುಹೋಗಿದ್ದೆ. ಆದರೆ ಸುಳ್ಳುಹೇಳಲು ಧೈರ್ಯಬರದೆ ಉಗುಳುನುಂಗುತ್ತ ನಿಜ ಹೇಳಿಬಿಟ್ಟೆ. ಎಲ್ಲವನ್ನೂ ತಲೆಯಾಡಿಸುತ್ತ ಕೇಳಿದ ಅವರು ’ಮೈಸೂರಿನಲ್ಲಿ ಒಬ್ಬಳೆ ಇರುತ್ತಿದ್ದೀಯ, ಹುಷಾರಾಗಿರು’ ಎಂದಷ್ಟೆ ಹೇಳಿ ಯಾವುದೋ ಪತ್ರ ಬರೆಯಲು ಕುಳಿತರು. ಬದುಕಿದೆಯಾ ಬಡಜೀವವೆ ಎಂದು ಅಲ್ಲಿಂದ ಓಟಕಿತ್ತೆ. ನನ್ನ ತಂದೆತಾಯಂದಿರ ಒಪ್ಪಿಗೆಯಿಲ್ಲದೆಯೆ ಮದುವೆ ನಿಶ್ಚಯವಾದಾಗ ಪ್ರೊಫೆಸರರ ಆಶೀರ್ವಾದ ಪಡೆಯಲು ಹೋಗಿದ್ದೆವು. ಪ್ರೊ.ಸಿಡಿಎನ್ ಮತ್ತು ಅವರ ಪತ್ನಿಯವರು ಆಶೀರ್ವದಿಸಿ ನನ್ನ ತಂದೆತಾಯಂದಿರನ್ನು ಒಲಿಸಿಕೊಳ್ಳಬೇಕೆಂದು ಬುದ್ಧಿವಾದ ಹೇಳಿದರು. ನಾನೂ ಇವನೂ ಮುಖಮುಖ ನೋಡಿಕೊಂಡು ಸುಮ್ಮನಾಗಿದ್ದೆವು.
ಬೆಳಜಾವ ನಾಲ್ಕು ಗಂಟೆ. ಇದನ್ನೆಲ್ಲ ಥೇಟು ದರವೇಶಿಯ ಥರ ಧ್ಯಾನಿಸಿಕೊಂಡು ಕುಳಿತಿದ್ದೇನೆ. ಮಗಳು ಕನಸು ಕಾಣುತ್ತ ‘ಸುಂ ಸುಂ ಸಾ.. ಜೇನುನೊಣ ಬಾ..’ ಎಂಬ ಹಾಡೊಂದನ್ನು ಜೊಲ್ಲುಸುರಿಯುವ ಬಾಯಲ್ಲಿ ತೊದಲುತ್ತ ಇದ್ದಾಳೆ. ನನಗೆ ಇವಳು ನನ್ನ ತರಹವೇನೇ ಎನ್ನಿಸಿ ಸ್ಥಬ್ದಳಾಗಿದ್ದೇನೆ. ಇಲ್ಲಿಯವರೆಗಿನ ನನ್ನ ಕೋಪ, ತಟವಟ, ಹುಚ್ಚುತನಗಳನ್ನೆಲ್ಲ ಸಾವಿರಾರುಸಾರಿ ತಡೆದು, ಜ್ವರಗಳಲ್ಲಿ ಅಮ್ಮನಂತೆ ಸಂತಯಿಸಿ, ಮಲಗುವ ಮುನ್ನ ಮೂಗಿಗೆ ಟೈಗರ್ ಬಾಮು ಹಚ್ಚದಿದ್ದರೆ ಮಾರನೆ ದಿನ ಮಾತು ಬಿಡುವವನ ಪ್ರೀತಿ ಎಂದಿಗೂ ನನಗೆ ಅರ್ಥವಾಗದು ಅನ್ನಿಸುತ್ತದೆ. ಕೆಲಕಾಲದ ಹಿಂದೆ ಮೈಸೂರಿನಲ್ಲಿ ಸ್ನೇಹಿತನೊಬ್ಬನ ಮೇಲೆ ತೀರಾ ಇಂಪಲ್ಸಿವ್ ಆಗಿ ಕೋಪಮಾಡಿಕೊಂಡು ಜಗಳವಾಡಿ ಮೊಬೈಲು ಸ್ವಿಚ್ ಆಫ್ ಮಾಡಿಕೊಂಡು ದಿನವೆಲ್ಲ ಸುಮ್ಮನೆ ಬೀದಿಗಳಲ್ಲಿ ಅಲೆದಾಡಿ, ’ಯು ಆರ್ ಬಿಹೇವಿಂಗ್ ಲೈಕ್ ಅ ರೆಚೆಡ್ ವುಮನ್’ ಎಂದು ಮುಂತಾಗಿ ಬಲ್ಲವರೊಬ್ಬರ ಕೈಲಿ ಬೈಯಿಸಿಕೊಂಡ ಮೇಲೆ ಹಗುರವೆನ್ನಿಸಿ ಸುಮ್ಮನಾದ ಹೆಣ್ಣು ನಾನು. ನನ್ನ ಪುನಃ ಪುನಃ ತಪ್ಪುಗಳನ್ನ ಮಾಡಿ ಯಾರ ಕೈಲಾದರು ಬಾಯಿಗೆ ಬಂದಹಾಗೆ ಅನ್ನಿಸಿಕೊಳ್ಳುವ ಬುದ್ಧಿ.
ಕಿವಿಗಳಲ್ಲಿ ‘ಜಿ. ಲವ್’ ಎಂಬ ಗಾಜಿನಂಥ ಕಣ್ಣುಗಳ ಸ್ಫುರದ್ರೂಪಿ ಹಾಡುಗಾರ ಹಾಡಿರುವ ‘ಓ ಸಿನರ್ ಮ್ಯಾನ್, ವೇರ್ ಡು ಯು ರನ್ ಟು?’ ಎಂಬ ಹಾಡು ಸುಮ್ಮನೆ ಓಲಾಡುತ್ತಿದೆ.
ಚಿತ್ರಕೃಪೆ: www.thebiscuitfactory.com




