Archive for August, 2008

ಮಳೆ ಬಂತು ಗಿಳಿ ಪೋ ಪೋ ಪೋ..

 

picture-poem courtesy: www.theprophyria.blogspot.com

ಹೊರಗೆ ಮಳೆ ಸುರಿಯುತ್ತಿರೋವಾಗ ಸುಡುಸುಡು ಕಾಫಿ ಹೀರುತ್ತ ಕಿಟಕಿ ಬದಿಯಲ್ಲಿ ಕುಳಿತುಕೊಂಡು ಮಳೆಹನಿಗಳು ನೆಲಕ್ಕೆ ಬೀಳೋದನ್ನೇ ದಿಟ್ಟಿಸಿಕೊಂಡು ಕೂತಿರುತ್ತಿದ್ದೆ. ಅಮ್ಮ ಅದೇನು ತಂದ್ರಾವಸ್ಥೆಯಲ್ಲಿ ಅಲುಗಾಡದೆ ಕೂತ್ಕೊಂಡಿರ್ತೀಯೋ ಕಾಣೆ!! ಎಂದು ಗೊಣಗುವುದೂ ಕೇಳುತ್ತ ಇರಲಿಲ್ಲ. ಜೀರುಂಡೆಗಳ ಜಿರಿಜಿರಿ ಸದ್ದು, ಮನೆಯ ಉಣಗಲ್ಲಿನ ಮುಂದೆ ಇದ್ದ ಮಳೆನೀರಿನ ಚರಂಡಿಯಲ್ಲಿ ಹರಿಯುವ ನೀರಿನ ಬುಳುಬುಳು, ತೆಂಗಿನಗರಿಗಳ ಮೇಲೆ ಬೀಳುವ ಮಳೆಹನಿಗಳ ಟಪಟಪ ಗಲಾಟೆ, ಮಿಂಚು-ಗುಡುಗುಗಳ ‘ನೀನಾದಮೇಲೆ ನಾನು’ ಜಗಳ, ದೂರದಲ್ಲೆಲ್ಲೋ ಮನೆಯೊಂದರ ಚಿಮಣಿಯಿಂದ ಸುರುಳಿಯಾಗೇಳುವ ಹೊಗೆ, ಅಡಿಗೆಮನೆಯಿಂದ ತೇಲಿಬರುವ ಸಾರಿನ ಒಗ್ಗರಣೆಯ ಘಮಲು…ಎಲ್ಲವೂ ಸೇರಿಕೊಂಡು ನನ್ನನ್ನ ಒಂದುರೀತಿಯ ವಿಚಿತ್ರ ಅಸಹಾಯಕ ಸ್ಥಿತಿಗೆ ತಳ್ಳುತ್ತಿದ್ದವು. ಆ ಸ್ಥಿತಿಯಲ್ಲಿ ಸುಮ್ಮನೆ ಹೊರಗೆ ದಿಟ್ಟಿಸಿಕೊಂಡು ಕುಳಿತುಕೊಳ್ಳುವುದಲ್ಲದೆ ಇನ್ನೇನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಅಮ್ಮ ಫೋನು ಮಾಡಿದಾಗ ’ಈಗೆಲ್ಲ ಮೊದಲಿನ ಹಾಗೆ ಮಳೆ ಇಲ್ಲ ಕಣೆ’ ಅನ್ನುತ್ತಾರೆ. ಮಲೆನಾಡಿನಲ್ಲಿ ಹೆಚ್ಚೂಕಡಮೆ ವರ್ಷದ ಆರೇಳು ತಿಂಗಳೂ ಮಳೆ ಸುರಿಯುವುದನ್ನೆ ನೋಡುತ್ತ ಕಳೆಯುತ್ತಿದ್ದ ನನಗೆ ಹಳಹಳಿ. ಮಳೆ ಅಂದರೆ… ನಮ್ಮ ಪಾಲಿಗೆ ರೈನ್ ಕೋಟು, ರೈನ್ ಬೂಟು ತೊಟ್ಟು, ಪುಟ್ಟ ಕೊಡೆ ಹಿಡಿದು ಸ್ಲೇಟಿನಲ್ಲಿ ಬರೆದಿದ್ದ ಮನೆಪಾಠ ಅಳಿಸಿಹೋಗದಂತೆ ಎಚ್ಚರವಹಿಸುತ್ತ ಶಾಲೆಗೆ ಹೋಗುವುದು. ಸ್ಲೇಟು ಅಳಿಸಲು ದಾರಿಬದಿಯಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಕಾಂಡ ಚಿವುಟಿದರೆ ನೀರು ಒಸರುವ ‘ನೀರುಗಿಡ’ಗಳನ್ನು ಕಿತ್ತು ಚಿನ್ನದಷ್ಟು ಜೋಪಾನವಾಗಿಟ್ಟುಕೊಳ್ಳುವುದು. ನಮ್ಮ ಮುಂದೆ ನಡೆದುಹೋಗುವ ಗೆಳತಿಯರ ಯೂನಿಫಾರಂ ಲಂಗಗಳಿಗೆ ಕೆಸರು ಸಿಡಿಸಿ ಕೂಗಾಡುವುದು. ಶಾಲೆ ಬಿಡುವ ವೇಳೆಗೆ ಸರಿಯಾಗಿ ಹೇಳಿಕಳಿಸಿದಂತೆ ಬಂದು ಸುರಿಯುವ ಮಳೆಯನ್ನು ಶಪಿಸುತ್ತ ಇಷ್ಟವಿರದಿದ್ದರೂ ವಿಧಿಯಿಲ್ಲದೆ ರೈನ್ ಕೋಟು, ಬೂಟು ಹಾಕಿಕೊಂಡು ಜಾರಿಬೀಳದ ಹಾಗೆ ಮೆಲ್ಲನೆ ನಡೆಯುವುದು. ಆಗೀಗ ನಮ್ಮ ಅದೃಷ್ಟಕ್ಕೆ ದೊಡ್ಡ ಮಳೆ ಬಂದ ಕೂಡಲೆ ಸ್ಕೂಲಿನಲ್ಲಿ ‘ಮಳೆರಜ’ ಘೋಷಿಸಲಾಗುತ್ತಿತ್ತು. ಆಗಂತೂ ನಮ್ಮ ಸಂತೋಷಕ್ಕೆ ಸೀಮೆಯೇ ಇಲ್ಲ!!! ’ಹೋಓಓಓಓಓಓ’ ಎಂದು ಗಂಟಲು ಹರಿಯುವಂತೆ ಕೂಗುತ್ತ ದೊಡ್ಡಮೈದಾನದ ಕಡೆ ಓಟ. ಮಳೆ ಬಂದಾಗೆಲ್ಲ ಕೆರೆಯಂತೆ ಕೆಂಪುನೀರು ತುಂಬಿಸಿಕೊಳ್ಳುವ ಊರ ಮೈದಾನ ನಮಗೆ ದೊಡ್ಡ ಸಮುದ್ರದಂತೆ ಕಾಣುತ್ತಿತ್ತು. ಊರಮಧ್ಯ ಹರಿಯುವ ಭದ್ರಾನದಿಯಲ್ಲಿ ನೆರೆ ಬಂದರೆ ಕೇಳುವುದೇ ಬೇಡ! ಅಪ್ಪನ ಕೈಹಿಡಿದುಕೊಂಡು ಸೇತುವೆಗೆ ಹೋಗಿ ಭದ್ರೆಯ ರೌದ್ರಾವತಾರವನ್ನ ನೋಡಿಬರುವುದೇ ಒಂದು ದೊಡ್ಡ ಸಾಹಸಯಾನ.
ಮನೆಯೊಳಗೆ ನುಗ್ಗಿದರೆ ಕೆಸರುತುಂಬಿದ ಕೈಕಾಲುಮುಖಾದಿಗಳನ್ನು ಸೋಪು, ಪ್ಲಾಸ್ಟಿಕ್ ಗುಂಜು ಹಾಕಿ ಉಜ್ಜಿ ತೊಳೆದು, ಸ್ವೆಟರು-ಕಾಲುಚೀಲಗಳೊಳಗೆ ನಮ್ಮನ್ನು ತುಂಬಿಸುವ ಅಮ್ಮನ ‘ಪ್ರೀತಿ’ ಭಯಹುಟ್ಟಿಸುತ್ತಿತ್ತು. ’ಯೇನೂ ಬೇಡಾ!!!’ ಎಂದು ಕೂಗಾಡಲು ತೆಗೆಯುವ ನಮ್ಮ ಬಾಯಿಗಳನ್ನು ಅಮ್ಮ ದೊಡ್ಡ ಅಲ್ಯೂಮಿನಿಯಂ ಡಬ್ಬಗಳಲ್ಲಿ ತುಂಬಿಸಿಡುತ್ತಿದ್ದ ತಿಂಡಿಗಳನ್ನು ಉಪಯೋಗಿಸಿ ಭದ್ರವಾಗಿ ಮುಚ್ಚಿಬಿಡುತ್ತಿದ್ದರು. ರವೆಯುಂಡೆ, ಪುರಿಯುಂಡೆ, ನುಚ್ಚಿನುಂಡೆ, ಕರ್ಜಿಕಾಯಿ, ಬೇಸನ್ ಲಾಡು, ಕಾಯಿಬರ್ಫಿ, ಚಕ್ಕುಲಿ, ಕೋಡುಬಳೆ, ಶಂಕ್ರಪೊಳೆ – ಮುಂತಾದ ತಿಂಡಿಗಳು ಮನೆಯ ತುಂಟಪೋರರನ್ನು ಮಣಿಸಲು ಸದಾ ಸಿದ್ಧವಿರುತ್ತಿದ್ದವು. ಜತೆಗೆ ಹಪ್ಪಳ ಸಂಡಿಗೆಗಳ ಸಡಗರ ಬೇರೆ. ಮಳೆಯಲ್ಲಿ ನೆನೆದು ಶೀತವಾದರೆ ಕುಡಿಯಲು ಕೊಡುತ್ತಿದ್ದ ಕರಿಮೆಣಸಿನ ಸಾರು, ಕಷಾಯಗಳನ್ನು ನೆನೆಸಿದರೆ ಇವತ್ತಿಗೂ ಬೆವರುತ್ತೇನೆ. ನಿಲ್ಲದಲೆ ಲೀಕಾಗುವ ಆಕಾಶ ನೋಡುತ್ತ ಕಿಟಕಿಯ ಬಳಿ ಕೂತು ನಾವು ಮಕ್ಕಳು ಹಾಡುತ್ತಿದ್ದ ’ಮಳೆ ಬಂತು ಗಿಳಿ ಫೋ ಪೋ ಪೋ’ ಹಾಡು ಮಳೆಯ ಸದ್ದಿನ ಜತೆ ಪೈಪೋಟಿ ನಡೆಸುತ್ತಿತ್ತು.
ಹತ್ತಿರ ಹತ್ತಿರ ಎಪ್ಪತ್ತು-ಎಂಭತ್ತು ವರ್ಷದ ನಮ್ಮ ಮನೆಯ ಹೆಂಚುಗಳು ಮಳೆಯೊಡನೆ ಯುದ್ಧನಡೆಸಿ ಸುಸ್ತಾದಾಗ ಸಣ್ಣ ಬಿರುಕುಗಳೆಡೆಯಿಂದ ಮನೆಯೊಳಗೆ ಮಳೆ ತೊಟ್ಟಿಕ್ಕಲಾರಂಭಿಸುತ್ತಿತ್ತು. ಆಗೆಲ್ಲ ನಾನೇ ಇನ್ಚಾರ್ಝ್. ಕೈಗೆ ದೊರಕಿದ ಪಾತ್ರೆಗಳನ್ನು ಹಿಡಿದುಕೊಂಡು ಮಳೆನೀರು ಬೀಳುವಲ್ಲೆಲ್ಲ ಇಡಬೇಕಿತ್ತು. ಪಾತ್ರೆಗಳ ಸಂಖ್ಯೆ ಹೆಚ್ಚಾದಂತೆ ಅಪ್ಪನಿಗೆ ಸುದ್ದಿ ಹೋಗುತ್ತಿತ್ತು. ಅರ್ಥಾತ್ ಮುಂದಿನ ಚಳಿಗಾಲದಲ್ಲಿ ಮನೆಗೆ ಹೊಸ ಮಾಡು ಬರುತ್ತಿತ್ತು. ಇದೆಲ್ಲ ಮುಗಿಯಿತು ಅಂದರೆ ಮರ ಬೀಳುವ ಯೋಚನೆ. ನಮ್ಮ ಮನೆಯ ಮುಂದೆ ಒಂದು ಮಾವಿನ ತೋಪು. ಅದರಲ್ಲಿ ಮಾವಿನ ಮರಗಳ ಜೊತೆಗೇ ಹಲಸು, ಸಿಲ್ವರ್, ದೇವದಾರು, ಗೇರು ಮರಗಳೂ ಹೇರಳವಾಗಿದ್ದವು. ಮಳೆಯ ಪ್ರಕೋಪಕ್ಕೆ ಸಿಲುಕಿ ಪ್ರತಿ ವರುಷವೂ ಒಂದಲ್ಲ ಒಂದು ಮರ ಬೀಳುವುದು ನಡೆಯುತ್ತಿತ್ತು. ಮನೆಯ ಮೇಲೇ ಬೀಳುವಂತೆ ಬೆಳೆದು ನಿಂತಿದ್ದ ಆ ಬೃಹತ್ ಮರಗಳ ಬಗೆಗೆ ಅಮ್ಮನಿಗೆ ವಿಪರೀತ ಭಯ. ಜೋರು ಮಳೆಗಾಳಿಗೆ ಆ ಮರಗಳು ತಾರಾಮಾರಾ ತೂಗಾಡುವುದನ್ನು ನೋಡಿ ಭಯಬೀಳದವರು ನಿಜವಾಗಿ ಶೂರರೇ ಸರಿ! ಗುಡುಗು ಮಿಂಚು ಜೋರಾದ ಹಾಗೆ ಅಮ್ಮ ಕಿಟಕಿ-ಬಾಗಿಲು ಮುಚ್ಚಿ, ನಮ್ಮನ್ನೆಲ್ಲ ಮನೆಯ ಮಲಗುವ ಕೋಣೆಗೆ ಸೇರಿಸಿಬಿಡುತ್ತಿದ್ದರು. ಅಲ್ಲಿ ಮಂಚದ ಮೇಲೆ ಬೆಚ್ಚಗೆ ಕಂಬಳಿ ಹೊದ್ದುಕೊಂಡು ಮಂಕಿಕ್ಯಾಪ್ ಹಾಕಿಕೊಂಡು ಕೂತ ನಮಗೆ ‘ಮರ ಬಿದ್ದು ಮನೆ ಎರಡು ಪೀಸಾದರೆ’ ಎಂದು ಒಳೊಳಗೇ ಕಾಡುತ್ತಿದ್ದ ಆತಂಕ ಅಮ್ಮ ಹೇಳುತ್ತಿದ್ದ ರಸವತ್ತಾದ ಕತೆಗಳ ನಡುವೆಯೆಲ್ಲೋ ಕಳೆದುಹೋಗಿಬಿಡುತ್ತಿತ್ತು.
ಏಳನೆ ಕ್ಲಾಸು ಮುಗಿದ ನಂತರ ರೈನ್ ಕೋಟುಗಳು ಹೋಗಿ ಕೈಗೆ ಛತ್ರಿಗಳು ಎಟುಕಿದವು. ಆಹಹ.. ಅದೇನು ಸಂತಸ ನಮಗೆ!! ನಾವು ಇದ್ದಕ್ಕಿದ್ದಂತೆ ಆರಡಿ ಬೆಳೆದಷ್ಟು ಹೆಮ್ಮೆ. ನಡಿಗೆಯಲ್ಲಿ ಅದೇನೋ ಡೌಲು. ಮಳೆಯಲ್ಲಿ ಛತ್ರಿ ಗರಗರನೆ ತಿರುಗಿಸಿ ಪಕ್ಕದಲ್ಲಿ ನಡೆಯುವವರ ಮೇಲೆ ನೀರು ಹಾರಿಸುವುದೇನು, ಛತ್ರಿಯೊಳಗೆ ಗೆಳತಿಗೆ ಕೊಡಲು ತಿಂಡಿ ಬಚ್ಚಿಟ್ಟುಕೊಂಡು ಹೋಗುವುದೇನು, ‘ಛತ್ರಿಜಗಳ’ ಎಂಬ ವಿಶೇಷ ಕದನವನ್ನು ನಮಗಾಗದವರೊಂದಿಗೆ ನಡೆಸುವುದೇನು, ಮಳೆಯಲ್ಲಿ ನೆನೆದುಕೊಂಡು ಹೋಗುವ ಗೆಳತಿಯರಿಗೆ ‘ಛತ್ರಿಲಿಫ್ಟ್’ ನೀಡುವುದೇನು… ಛತ್ರಿ ಕಳೆದುಹಾಕಿಕೊಂಡು ಮನೆಯಲ್ಲಿ ಬೈಯಿಸಿಕೊಳ್ಳುವುದೇನು…ಹೀಗೆಲ್ಲ ತರಲೆ ನಡೆಸುತ್ತ ಯಾವಾಗ ಕಾಲೇಜಿಗೆ, ಹಾಸ್ಟಲ್ ಜೀವನಕ್ಕೆ ಬಡ್ತಿ ಪಡೆದೆನೋ ತಿಳಿಯಲೇ ಇಲ್ಲ.
ಹಾಸ್ಟೆಲ್ಲಿನ ಒಂಟಿತನ. ಜತೆಯಲ್ಲಿ ಇದ್ದಕ್ಕಿದ್ದಂತೆ ಧಾರಾಕಾರವಾಗಿ ಸುರಿದು ಮಂಗಮಾಯವಾಗುವ ದಕ್ಷಿಣ ಕನ್ನಡದ ಮಳೆ. ಅಂಥ ಮಳೆಯಲ್ಲೂ ತಡೆಯಲಾರದ ಸೆಖೆ. ಮಲೆನಾಡಿನ ಹಳ್ಳಿಯಿಂದ ಬಂದ ನನಗೆ ಅಯೋಮಯ. ಬೇಸರ ಕಳೆಯಲು ತರತರಹದ ತರಲೆ. ನಮ್ಮ ‘ಸೀಕ್ರೆಟ್ ಮಿಶನ್’ ಎಂದರೆ ವಾಚ್ಮನ್ ರಾಜಣ್ಣನ ಕಣ್ಣು ತಪ್ಪಿಸಿ ಬೆಳಜಾವ ಐದುಗಂಟೆಗೆಲ್ಲ ಎದ್ದು ಹಾಸ್ಟೆಲ್ಲಿನ ಕಾಂಪೌಂಡಿನಲ್ಲಿ ಮಳೆಯೇಟಿಗೆ ಬಿದ್ದ ಕಾಟುಮಾವಿನಹಣ್ಣುಗಳನ್ನು ಆಯಲು ಛತ್ರಿ, ಟಾರ್ಚಿ ಹಿಡಿದು ಹೋಗುವುದು. ವೀಕೆಂಡ್ ಶಾಪಿಂಗ್ ಸಮಯದಲ್ಲಿ ಹೊರಗೆ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ಹೋಟೆಲೊಂದಕ್ಕೆ ನುಗ್ಗಿ ಐಸ್ಕ್ರೀಂ ಆರ್ಡರ್ ಮಾಡಿದಾಗ ವೆಯಿಟರನ ಮುಖ ಹುಳ್ಳಗಾದದ್ದು ನೋಡಿ ಗೆಳತಿಯರೊಡನೆ ನಕ್ಕಿದ್ದುಂಟು. ಕಾಲೇಜಿನಲ್ಲಿ ಎಲ್ಲರೊಡನೆ ಲವಲವಿಕೆಯಿಂದ ಬೆರೆಯುತ್ತ ಚಟುವಟಿಕೆಯಿಂದಿದ್ದ ಹುಡುಗನೊಬ್ಬ ಅದೇ ವರ್ಷ ಸಿಡಿಲು ಬಡಿದು ಕರಕಾದಾಗ ಮಳೆಗಾಲದ ಮೊದಲ ಕಹಿ ಅನುಭವ.
ನನ್ನ ಆಪ್ತಸ್ನೇಹಿತೆ ನಿಶಾಳ ಪರಿಚಯವಾದದ್ದೂ ಮಳೆಯಿಂದಲೇ. ಶಿವಮೊಗ್ಗೆಯಲ್ಲಿ ಡಿಗ್ರಿ ಕಾಲೇಜು ಸೇರಿದ ಮೊದಲ ದಿನ. ಹಾಸ್ಟಲ್ಲಿಗೆ ಹೊರಡಲೆಂದು ಹೊರಹೋದರೆ ಜೋರಾಗಿ ಮಳೆ ಸುರಿಯಲು ಶುರುವಾಗಬೇಕೆ? ಸುಮ್ಮನೆ ನಿಂತಿದ್ದೆ. ಕ್ಲಾಸಿನಲ್ಲಿ ನನ್ನ ಮುಂದಿನ ಬೆಂಚಿನಲ್ಲಿ ಕುಳಿತಿದ್ದ ಹುಡುಗಿಯೊಬ್ಬಳು ಬಳಿಬಂದು, ’ಛತ್ರಿ ಇಲ್ವಾ? ಬಾ. ನಿನ್ ಹಾಸ್ಟೆಲ್ ಜಯನಗರದಲ್ಲಲ್ವಾ? ಬೆಳಿಗ್ಗೆ ಬರೋವಾಗ ನೋಡ್ದೆ. ನಾನೂ ಆಕಡೇನೇ ಹೋಗೋದು’ ಎಂದಳು. ಇಬ್ಬರೂ ಮಳೆಯಲ್ಲಿ ಅರ್ಧ ನೆನೆದುಕೊಂಡು ನಮ್ಮನಮ್ಮ ಗೂಡು ತಲುಪುವಷ್ಟರಲ್ಲಿ ಎಷ್ಟೋ ವರುಷಗಳ ಪರಿಚಯವೇನೋ ಎನಿಸುವಷ್ಟು ಆತ್ಮೀಯತೆ ಬೆಳೆದುಬಿಟ್ಟಿತ್ತು. ನಾವು ಹಾಸ್ಟೆಲ್ಲಿನ ಗೆಳತಿಯರು ಕೂಡಿ ಜೋಗಕ್ಕೆ ಹೋದಾಗ ಶರಾವತಿಯ ದಂಡೆಯಲ್ಲಿ ಸುರಿಯುವ ಮಳೆಯಲ್ಲಿ ಕುಣಿದು ಕುಪ್ಪಳಿಸಿದ್ದು ನೆನೆದು ನಗು ಉಕ್ಕುತ್ತದೆ.

…ಇಲ್ಲೀಗ ಕುಳಿತು ಇವತ್ತಿನ ಮಳೆ ಯಾವಾಗ ಬಂದೀತೋ ಎಂದು ಕಾಯುತ್ತಿದ್ದೇನೆ. ಮಗಳಿಗೆ ಈ ವೀಕೆಂಡು ಪೇಪರ್ ದೋಣಿ ಮಾಡಿಕೊಡಬೇಕು. ಮನೆಯೆದುರು ಹರಿವ ನೀರಲ್ಲಿ ತೇಲಿಸಿ ಅವಳು ಕುಣಿವುದ ಮನಸಾರೆ ನೋಡಬೇಕು.. 

ಅಷ್ಟು ವರ್ಷ ಮಳೆ ಸುಮ್ಮನೆ ನೆಲದ ಮೇಲಷ್ಟೆ ಸುರಿಯಲಿಲ್ಲ. ಮನದೊಳಗೂ ಸುರಿದಿರಬೇಕು.

Comments (29)

ಪಡಖಾನೆಯ ಹುಡುಗಿ – ಬೆನ್ನ ತಿರುಗಿಸುವ ಪಯಣಕೆ ಮುನ್ನ

ಮತ್ತೊಮ್ಮೆ ಸಿಲುಕಿಕೊಂಡಿರುವೆ
ಹಳೆಯ ಮೋಹವೊಂದರ ತೆಕ್ಕೆಯಲಿ..
ಹಾಡುಗಳ ಹುಡುಕಿಕೊಂಡು ಹೊರಟಿರುವೆ
ಅರಿಯದ ಜಾಡುಗಳೆಡೆಯಲ್ಲಿ
ಕೆರೆದಂಡೆಯ ಮುರುಕುಮಂಟಪ
ಕುಣಿವಭಂಗಿಯ ಕಲ್ಲದೇವತೆಗಳು
ನಡುನೀರ ಬೆತ್ತಲುಗಪ್ಪು ಮರಗಳು
ಹಾದಿಬದಿ ಗುಲ್ಮೊಹರ್ ಹೂವು
ಎಲ್ಲದಕು ಕಣ್ಣರಳಿಸಿ ನಿಂತ ನಾವು
ಮೊದಲ ಬಾರಿಗೆಂಬಂತೆ ಕಣ್ಣು ತಪ್ಪಿಸುತ್ತ
ಮಾತುಮಾತಿಗೂ ಬೆವೆತು
ಬಾಯಾರಿ ತಹತಹಿಸುತ್ತ
ನಮ್ಮೊಳಗಿನ ಹಾಡುಗಳ
ಒರಟುತನ ಹುಡುಕುತ್ತ ಕಾಯುತ್ತ
ನಮ್ಮ ಸೆಡವುಗಳಿಗೆ ಹೊಸದೊಂದು
ಹೆಸರಿಡಲು ಯತ್ನಿಸುತ್ತ..
..ಹೀಗೆ ಸಿಲುಕಿಕೊಂಡಿರುವೆ
ಹಳೆಯ ಮೋಹವೊಂದರ ತೆಕ್ಕೆಯಲಿ..

ನಿನ್ನ ಒರಟು ಬೆರಳುಗಳು
ಕಿಕ್ಕಿರಿದ ಬೀದಿಗಳ ನೆವಮಾಡಿ
ನನ್ನ ಕೊರಳ ನೇವರಿಸುವಾಗ
ಈ ಹಾದಿ ಮುಗಿವುದ
ನೆನೆಸಿ ವಿಹ್ವಲಳಾಗುವೆ
ಈ ಉತ್ಕಟ ಘಳಿಗೆಗಳು, ಮಾತುಗಳು..
ನಿನ್ನುಸಿರ ಏರಿಳಿತ..
ಸುಡದೆ ಒಳಗಿಳಿಯದ ಬಟ್ಟಲು..
ಮೋಡ ಮುಸುಕಿದ ಒದ್ದೆ ಸಂಜೆ..
ಗಡಿಯಾರದೊಡನೆ ನನ್ನ ಗುದ್ದಾಟ..
ಬೆನ್ನ ತಿರುಗಿಸುವ ಪಯಣಕೆ ಮುನ್ನ
ದಯಮಾಡಿ ಹೇಳು ಇವನೆ,
ಆ ಕೊನೆಯಿರದ ಬೇಸರಗಳ ನಗರಿಗೆ
ಆ ಬಯಕೆ ತೀರದ ಬದುಕಿಗೆ
ನಾವು ತಿರುಗಿ ಹೋಗಲೆಬೇಕೆ?

 

 ಚಿತ್ರ: ನಾನೇ ಬರ್ದದ್ದು!! (ಕಾಪಿರೈಟ್ ನನ್ನದು.)

Comments (21)

ಗ್ಯಾರಂಟಿ ಬರ್ಬೇಕು!!

18 ಆಗಸ್ಟ್ 2008.

ಸೋಮವಾರ ಸಂಜೆ ಆರು ಗಂಟೆ. ಬೆಂಗಳೂರಿನ ಸೆಂಟ್ರಲ್ ಕಾಲೇಜು. ಸೆನೇಟ್ ಹಾಲ್.

ಮೇಫ್ಲವರ್ ಮೀಡಿಯಾ ಹೌಸ್  ಮುದ್ರಣ ವಿಭಾಗ ’ಪ್ಯಾಪಿರಸ್’ ಹೊರತಂದಿರುವ ನನ್ನ ಆತ್ಮೀಯ ಗೆಳತಿ ಚೇತನಾಳ ಬರಹಗುಚ್ಛ ’ಭಾಮಿನಿ ಷಟ್ಪದಿ’ಯ ಬಿಡುಗಡೆ ಸಮಾರಂಭ.

ವಿವೇಕ ರೈ, ಜಿ.ಪಿ.ಬಸವರಾಜು, ಜಿ ಎನ್ ಮೋಹನ್

ಗಲಾಟೆ ಮಾಡಲಿಕ್ಕೆ ಚೇತನಾ, ನಾನು, ನೀವು…

ಅಪರೂಪಕ್ಕೆ ಒಂದು ಮಳೆಗಾಲದ ಸಂಜೆ ನಾವು ಸ್ನೇಹಿತ-ಸ್ನೇಹಿತೆಯರೆಲ್ಲ ಭೇಟಿಯಾಗುವ  ಅವಕಾಶ.

ಎಷ್ಟು ಚನ್ನಾಗಿರತ್ತಲ್ವ?

ಗ್ಯಾರಂಟಿ ಬರ್ಬೇಕು!!

ಎಲ್ಲರ್ದೂ ಲಿಸ್ಟು ಇಟ್ಕೊಂಡಿದೀನಿ. ಸಪ್ರೇಟಾಗಿ ಕರಿಯೋಕೆ ಹೋಗ್ತಿಲ್ಲ. ಬರ್ತೀರಿ ತಾನೆ?

Comments (5)

ಹೀಗಿದ್ದಿದ್ರೆ ಹೇಗಿರೋದು?

ನಮ್ಮದು ’ಎಸ್ಸೆಮ್ಮೆಸ್ ಜನರೇಶನ್ನು’ ಅಂತ ಮೊಬೈಲ್ ಫೋನ್ ಅಲರ್ಜಿ ಇರುವ ನಮ್ಮ ಹಿರಿಯರು ಸಾರಿಬಿಟ್ಟಿದ್ದಾರೆ. ನಾವೂ ಅದನ್ನ ಶಿರಬಾಗಿಸಿ ಒಪ್ಪಿಕೊಳ್ಳುತ್ತೇವೆ. ಆದರೆ ಅಕಸ್ಮಾತ್ತು ಪುರಾತನಕಾಲದಲ್ಲೆ ಈ ಮೊಬೈಲ್ ಟೆಕ್ನಾಲಜಿ ಇದ್ದಿದ್ರೆ ಹ್ಯಾಗಿರೋದು, ದೂಸ್ರಾ ಮಾತು ಯಾಕೆ, ಮಹಾಭಾರತ ಯುದ್ಧದ್ ಟೈಮ್ನಲ್ಲಿ ಸೆಲ್ಫೋನು ಇದ್ದಿದ್ರೆ ಎಸ್ಸೆಮ್ಮೆಸ್ಸುಗಳು ಹ್ಯಾಗಿರ್ತಿದ್ವೂ ಅಂತ ಚೇತನ್ ಊಹಿಸಿಕೊಂಡು ’ಸುಧಾ’ ಗೊಂದು ಡಯಲಾಗ್ ಎಸ್ಸೆಮ್ಮೆಸ್ ಮಾಡಿದ್ರಂತೆ. ಫನ್ನೀಮ್ಯಾನ್ ಗುಣ ಇದನ್ನ ಸ್ಕ್ಯಾನ್ ಮಾಡಿ ಮೆಯಿಲ್ ಮಾಡಿದ. ನಕ್ಕೂ ನಕ್ಕೂ ಸಾಕಾಯಿತು. ನಾನೊಬ್ಳೇ ನಗೋದ್ಯಾಕೆ, ನೀವೂ ನನ್ ನಗೂನ ಶೇರ್ ಮಾಡಿರಲ್ಲ!! ನೋ ಸೀರಿಯಸ್ ಥಾಟ್ಸ್ ಪ್ಲೀಸ್!! ಥ್ಯಾಂಕ್ಸ್ ಸುಧಾ!!

ಸಂದರ್ಭ: ದ್ರೋಣರ ನೇತೃತ್ವದಲ್ಲಿ ಕೌರವರ ಪಡೆ ಚಕ್ರವ್ಯೂಹ ರಚಿಸಿ ಪಾಂಡವ ಸೇನೆಯನ್ನು ಕಾಯುತ್ತಿದೆ. ಚಕ್ರವ್ಯೂಹ ಭೇದಿಸಲು ಯಾರು ಬರುತ್ತಾರೆಂಬ ಕುತೂಹಲದಲ್ಲಿದ್ದಾರೆ. ಇಲ್ಲಿ ವಿಶೇಷ ಏನೆಂದರೆ ಅತಿರಥ ಮಹಾರಥರೆಲ್ಲರ ಕೈಯಲ್ಲೂ ಮೊಬೈಲ್ ಇದೆ. (ಪಾಂಡವರಲ್ಲಿಯೂ ಸಹ) ಎಲ್ಲರೂ ಒಬ್ಬರಿಗೊಬ್ಬರು ಎಸ್ಸೆಮ್ಮೆಸ್ ಕಳುಹಿಸುತ್ತಿದ್ದಾರೆ.

ದುರ್ಯೋಧನ: ಸಂಶಪ್ತಕ – where are you?

ಸಂಶಪ್ತಕ: v r miles away from ಕುರುಕ್ಷೇತ್ರ. ಕೃಷ್ಣಾರ್ಜುನರು ನಮ್ಮೊಂದಿಗೆ ಯುದ್ಧ ಮಾಡುತ್ತಿದ್ದಾರೆ.

ದು: Good. ಸಂಜೆಯವರೆಗೆ ಅವರಿಲ್ಲಿಗೆ ಬರಕೂಡದು. ಇವತ್ತಿನ ಚಕ್ರವ್ಯೂಹದಲ್ಲಿ ಪಾಂಡವರಲ್ಲೊಬ್ಬನ ಬಲಿ ಖಚಿತ.

ಸಂ: Yes sir.

ದು: But ಕೃಷ್ಣನ ಮೇಲೊಂದು ಕಣ್ಣಿಡು. He can do anything. ಆತ ನಮ್ಮ ಶಕುನಿಮಾಮನ ತರಹದ ಆಸಾಮಿ.

ಸಂ: D’nt worry. V can handle him. But ನಿಮ್ಮ ಕೆಲಸ ಆದ ತಕ್ಷಣ ನನಗೊಂದು missed call ಕೊಡಿ.

ದು: Ok. ಅಲ್ಲಿ ಮುಂದಕ್ಕೆ ಹೋದಹಾಗೆ network ಸಿಗಬಹುದಾ?

ಸಂ: ya.

************************

ದುರ್ಯೋಧನ to ಜಯದ್ರಥ

ದು:R u there? ಪಾಂಡವ ಸೇನೆ ಬಂತಾ?

ಜ: ya

ದು: ಭೀಮನನ್ನ ಒಳಬಿಡಬೇಡ. ಹೇಳಿದ್ದು ನೆನಪಿದೆ ತಾನೆ?

ಜ: I have done my job. But ಅರ್ಜುನನ ಮಗ ಒಳನುಗ್ಗಿದ್ದಾನೆ.

ದು: Oh… poor boy!

ಸ್ವಲ್ಪ ಸಮಯದ ನಂತರ

ದು-ದ್ರೋಣ: Sir, this boy getting tough what to do?

ದ್ರೋಣ: ಏನಾದರೂ ಮಾಡಬೇಕು. Other wise very difficult. ನಾಲ್ಕೂ ಕಡೆಯಿಂದ ಸುತ್ತುವರೆಯಿರಿ. ಕರ್ಣ ಹಿಂದಿನಿಂದ attack ಮಾಡಲಿ. Forward this message to karna, Dushyasana and Shakuni.

***************************

ಅರ್ಜುನ to ಭೀಮ: Where are you? ಕುರುಕ್ಷೇತ್ರದಲ್ಲಿ ಏನಾಗುತ್ತಿದೆ? ಚಕ್ರವ್ಯೂಹದಲ್ಲಿ ಯಾರಿದ್ದಾರೆ?

ಭೀಮ: Ur son ಅಭಿಮನ್ಯು.

ಅ: What!! ನೀವ್ಯಾರೂ ಅವನ ಜತೆ ಹೋಗಲಿಲ್ಲವೆ?

ಭೀ: Sorry Arjuna. ಜಯದ್ರಥ ನಮ್ಮನ್ನು entranceನಲ್ಲಿ ತಡೆದು ನಿಲ್ಲಿಸಿದ.

ಅ: Oh shit!! ನನಗ್ಯಾಕೆ call ಮಾಡಲಿಲ್ಲ?

ಭೀ: ಪ್ರಯತ್ನಿಸಿದೆ. ಆದರೆ Not reachable ಬರುತ್ತಿತ್ತು.

ಅ: Oh god! Only ಅಭಿಮನ್ಯು. ಆ ದುಷ್ಟರ ನಡುವೆ!!

*********************

ಅರ್ಜುನ to ಅಭಿಮನ್ಯು: R u ok my son?

ಅಭಿಮನ್ಯು: No dad. ನನಗೆ ಮೋಸ ಮಾಡಿದರು.

ಅರ್ಜುನ: What hapnd?

ಅಭಿಮನ್ಯು: ಇದು ಧರ್ಮಯುದ್ಧ ಅಲ್ಲ dad. ನನಗೆ ಮೋಸದಿಂದ ಸ್ಕೆಚ್ ಹಾಕಿದ್ದಾರೆ.

ಅರ್ಜುನ: ಏನಾಯ್ತು ಮಗು? Where r u now?

ಅಭಿಮನ್ಯು: ಸ್ಪಾಟ್ ನಲ್ಲೆ ಇದ್ದೀನಿ dad. Goodbye dad. Goodbye to this cruel world.

- ಚೇತನ್ ಶೆಟ್ಟಿ ಮೂಡಬಿದಿರೆ (ಸುಧಾ ೫ ಏಪ್ರಿಲ್ ೨೦೦೭, ಪುಟ ೫೯) ಚಿತ್ರ: ಪ್ರಕಟವಾದ ಲೇಖನದೊಡನೆ ಇದ್ದದ್ದು.  

 

Comments (8)

ಹಿರೋಶಿಮಾ, ನಾಗಾಸಾಕಿ – ಈಗ ನಾವು?

ಅರವತ್ತಮೂರು ವರುಷಗಳ ಹಿಂದೆ, ಸರಿಸುಮಾರು ಇದೇ ವಾರ..

ಜಪಾನೀಯರಿಗೆ ಮನುಷ್ಯನ ಕರಾಳಹಸ್ತ ಹರಿಬಿಟ್ಟ ಕತ್ತಲೆಯ ಅರಿವಾಗಿದ್ದು ಆಗಲೆ.

ಹಿರೋಶಿಮಾದ ಮೇಲೆ ಮೊದಲ ಅಣುಬಾಂಬ್ ‘ಲಿಟ್ಲ್ ಬಾಯ್’ ಅನ್ನು ಅಮೆರಿಕಾದ ಯುದ್ಧವಿಮಾನವೊಂದು 1945ರ ಆಗಸ್ಟ್ 6ರಂದು ಹಾಕಿದಾಗ ಅಕಿರಾ ಒನೋಗಿಗೆ ಹದಿನಾರು ವಯಸ್ಸು. ಸ್ಫೋಟದ ಜಾಗದಿಂದ ಕೇವಲ 1.2 ಕಿಮೀ ದೂರವಿದ್ದ ಆತನ ಮನೆಗೆ ವೇರ್ ಹೌಸೊಂದು ಅಡ್ಡವಿದ್ದುದರಿಂದ ಆತನ ಕುಟುಂಬ ಪಾರಾದರೂ ಕಷ್ಟ ತಪ್ಪಲಿಲ್ಲ.  ಕೇವಲ ಎರಡೇ ದಿನಗಳ ನಂತರ ಆಗಸ್ಟ್ 9ರಂದು ನಾಗಾಸಾಕಿಯಲ್ಲಿ ‘ಫ್ಯಾಟ್ ಮ್ಯಾನ್’ ಹೆಸರಿನ ಇನ್ನೊಂದು ಅಣುಬಾಂಬು ಸ್ಫೋಟವಾಯಿತು. ಲೆಕ್ಕವಿಲ್ಲದಷ್ಟು ಅಮಾಯಕ ಜನ ದಾರುಣವಾಗಿ ಸಾವಿಗೀಡಾದರು. ಅಣುವಿಕಿರಣಕ್ಕೆ ಒಳಗಾಗಿ ಬದುಕುಳಿದ ಅಕಿರಾನಂತಹ ಜಪಾನೀ ನಾಗರೀಕರು ‘ಹಿಬಾಕುಷ’ರೆಂಬ ಹಣೆಪಟ್ಟಿ ಅಂಟಿಸಿಕೊಂಡು ಬಹಿಷ್ಕೃತರಂತೆ ಜೀವನ ಸಾಗಿಸಬೇಕಾಯಿತು. ಆತ ಸಂದರ್ಶನವೊಂದರಲ್ಲಿ ಹೇಳುತ್ತಾನೆ: ’ನಾನು ನೆಲದಲ್ಲಿ ಮಲಗಿಕೊಂಡು ಓದುತ್ತಿದ್ದೆ. ಮೊದಲು ನನಗೆ ಟ್ರೈನಿನ ಚಕ್ರಗಳು ಉಜ್ಜಿ ಉಂಟಾಗುವ ನೀಲಿ ಬೆಳಕು ಕಂಡಿತು. ಆಮೇಲೆ ಹಬೆಯಂತಹ ಅಲೆಯೊಂದು ಬಂದು ನನ್ನನ್ನು ಬಹಳದೂರ ಎತ್ತಿ ಅಪ್ಪಳಿಸಿತು. ಏನೂ ಕಾಣುತ್ತಿರಲಿಲ್ಲ. ಕಣ್ಣಿಗೆ ಮೆತ್ತಿದ್ದ ಮಣ್ಣು ಕಸ ಸರಿಸಿ ಹೊರಬಂದರೆ ಎದುರುಮನೆಯ ಮತ್ಸುಮೊಟೊ ಕುಟುಂಬದ ಯಜಮಾನ ಬೆತ್ತಲೆಯಾಗಿ ನಿಂತಿದ್ದರು. ಅವರ ಮೈಮೇಲಿನ ಬಟ್ಟೆ ಚಿಂದಿಯಾಗಿ ಚರ್ಮವೆಲ್ಲ ಸುಲಿದುಬರುತ್ತಿತ್ತು. ಆಗ ಹುಡುಗಿಯೊಬ್ಬಳು ಓಡಿಬಂದು ತನ್ನ ತಾಯಿಗೆ ಸಹಾಯ ನೀಡಲು ಬೇಡಿಕೊಂಡಳು. ಹೋದರೆ ಆಕೆಯ ತಾಯಿಯ ಮೇಲೆ ದೊಡ್ಡ ದಿಮ್ಮಿಯೊಂದು ಬಿದ್ದು ಆಕೆ ಅರೆಜೀವವಾಗಿದ್ದಳು. ಬೆಂಕಿ ಹರಡಲಾರಂಭಿಸಿದ್ದರಿಂದ ಬೇರೆ ದಾರಿಗಾಣದೆ ಆಕೆಗೆ ನಮ್ಮ ಗೌರವ ಅರ್ಪಿಸಿ ಅಲ್ಲಿಂದ ಹೊರಡಬೇಕಾಯಿತು. ಆಗ ಕಪ್ಪು ಮಳೆ ಸುರಿಯಿತು. ಬೆಂಕಿ ಈ ಮಳೆಗೆ ಆರಲೇ ಇಲ್ಲ! ನದಿಯ ತುಂಬ ಹೆಣಗಳು ತೇಲುತ್ತಿದ್ದವು. ಸೊಂಟದವರೆಗು ಕಾಲೊಂದು ಕತ್ತರಿಸಿಹೋಗಿದ್ದ ಪುಟ್ಟಹುಡುಗನೊಬ್ಬ ಕುಂಟುತ್ತ ಸೇತುವೆ ದಾಟಲು ಪ್ರಯತ್ನ ಮಾಡುತ್ತಿದ್ದ. ಇಂದಿಗು ನಾನು ಟ್ರೈನಿನ ಚಕ್ರದ ಬೆಂಕಿ ಕಂಡರೆ ಬೆದರುತ್ತೇನೆ. ನಾನು ಇಂದಿಗೂ ಕಿಟಕಿಯ ಬಳಿ ಕೂರುವುದಿಲ್ಲ, ಏಕೆಂದರೆ ಅಂದು ನಾನು ಕಂಡ ಬಹಳಷ್ಟು ಹೆಣಗಳಿಗೆ ಅವರ ಮನೆಗಳ ಕಿಟಕಿಬಾಗಿಲುಗಳ ಗಾಜಿನತುಂಡುಗಳು ಚುಚ್ಚಿಕೊಂಡಿದ್ದವು.’

ನಮ್ಮ ಪೀಳಿಗೆಯ ಯುವಜನರು ನಮಗೇ ಕೇಳಿಕೊಳ್ಳಬೇಕಾದ ಹಲವಾರು ಪ್ರಶ್ನೆಗಳಿವೆ. ಮೊದಲನೆಯದು ನಮ್ಮ ಅಳಿಯುತ್ತಿರುವ ಪರಿಸರದ ಬಗ್ಗೆ ನಾವೇನು ಮಾಡುತ್ತಿದ್ದೇವೆ ಎನ್ನುವುದು. ಅದಕ್ಕೆ ಸಂಬಂಧಿಸಿದಂತೆಯೆ ಎರಡನೆಯ ಪ್ರಶ್ನೆಯೆಂದರೆ ನಮಗೆ ಪರಮಾಣು ತಂತ್ರಜ್ನಾನದ ಅವಶ್ಯಕತೆ ಇದೆಯೆ ಎಂಬುದು. ಮೊತ್ತಮೊದಲ ಅಣುಬಾಂಬ್ ತಯಾರಿಸಿದ ಒಪೆನ್ಹೈಮರ್ ಜರ್ಮನಿಯ ಸರ್ವಾಧಿಕಾರಿ ಹಿಟ್ಲರನ ದಬ್ಬಾಳಿಕೆ ತಾಳಲಾಗದೆ ಅಮೆರಿಕಾಗೆ ಓಡಿಬಂದವ. ಇಂತಹ ಅನೇಕ ವಿಜ್ನಾನಿಗಳ ಭಯದ ಪರಿಣಾಮವಾಗಿ ಹುಟ್ಟಿಕೊಂಡ ತಂತ್ರಜ್ನಾನವೊಂದು ಇಂದು ನಮ್ಮ ಮನುಜಕುಲವನ್ನೆ ಸರ್ವನಾಶದ ಅಂಚಿಗೆ ತಂದು ನಿಲ್ಲಿಸಿದೆ. ಇದು ನಮ್ಮೊಳಗಿರುವ ಅಭದ್ರತೆಯ ಭಾವನೆಯ ಫಲವಾಗಿದೆ ಎಂದರೆ ಸುಳ್ಳಲ್ಲ.

ನಮಗೆ ಯುದ್ಧಗಳು ಬೇಕೆ? ಬೀದಿಯಲ್ಲಿ ಹೋಗುತ್ತಿರುವ ಮಗುವನ್ನು ಕೇಳಿದರೂ ಉತ್ತರ ‘ಬೇಡ’ ಎಂದೇ ಆಗಿರುತ್ತದೆ. ಹಾಗೆಂದ ಮೇಲೆ ನಾವು ಮಿಲಿಟರಿ ಬಜೆಟ್ ಎಂದು ಕೋಟಿಗಟ್ಟಲೆ ಹಣ, ಅದರಲ್ಲು ಪರಮಾಣುವಿಜ್ನಾನ ವಿಭಾಗಕ್ಕೆ ಲೆಕ್ಕವಿಲ್ಲದಷ್ಟು ದುಡ್ಡನ್ನು ಏಕೆ ವ್ಯಯ ಮಾಡುತ್ತಿದ್ದೇವೆ? ಯುದ್ಧಗಳೆಂದರೆ ಅಪಾರ ಸಾವುನೋವು, ಆಸ್ತಿಪಾಸ್ತಿ ಹಾನಿಯಷ್ಟೆ ಅಲ್ಲ, ಯುದ್ಧಗಳಿಂದ ಜೀವಸಂಕುಲದ ಮೇಲುಂಟಾಗುವ ದುಷ್ಪರಿಣಾಮಗಳು ಹಲವಾರು ದಶಕಗಳವರೆಗು ಉಳಿದುಕೊಳ್ಳುತ್ತವೆ. ನಮ್ಮ ಇನ್ಸೆಕ್ಯುರಿಟಿಯನ್ನೋ ಕಾರಣವಾಗಿಟ್ಟುಕೊಂಡು ಬರುವ ಪೀಳಿಗೆಗಳನ್ನು ಅಪಾಯಕ್ಕೊಡ್ಡುವ ಹಕ್ಕು ನಮಗೆ ಇದೆಯೆ? ಅಮೆರಿಕಾದ ಜನರು ಇಂದಿಗೂ ತನ್ನ ವಿಯೆಟ್ನಾಂ ಮತ್ತು ಹಿರೋಶಿಮಾ-ನಾಗಸಾಕಿ ಪ್ರಕರಣಗಳ ಹೆಸರೆತ್ತಿದರೆ ನಾಚಿಕೆಯಿಂದ ತಲೆತಗ್ಗಿಸುತ್ತಾರೆ.

ನಮ್ಮ ನಾಗರೀಕತೆ ತಂತ್ರಜ್ನಾನದಲ್ಲಿ ಹಿಂದೆಂದೂ ತಲುಪಿರದ ಉನ್ನತಮಟ್ಟವನ್ನು ಇಂದು ತಲುಪಿದೆ. ಕಳೆದ ಒಂದು ಶತಮಾನದಲ್ಲಿ ಮನುಜಕುಲವು ಸಂಪರ್ಕ ಮಾಧ್ಯಮ, ಯಾನ, ವೈದ್ಯಕೀಯ ಹೀಗೆ ಮುಂತಾಗಿ ಎಲ್ಲ ಕ್ಷೇತ್ರಗಳಲ್ಲಿ ಅಪಾರಸಾಧನೆ ಮಾಡುತ್ತಲೆ ಇನ್ನೊಂದೆಡೆ ಬೆಳವಣಿಗೆಯ ಹೆಸರಿನಲ್ಲಿ ತನ್ನ ಕಾಲ ಮೇಲೆ ಕೊಡಲಿ ಹಾಕಿಕೊಳ್ಳುತ್ತಿದೆ. ಪರಮಾಣು ಅಸ್ತ್ರಗಳ ಬಳಕೆಯ ವಿರುದ್ಧ ಪ್ರತಿಭಟನೆ ಕೇವಲ ‘ಗ್ರೀನ್ ಪೀಸ್’ನಂಥ ಸಂಸ್ಥೆಗಳ ಜವಾಬ್ದಾರಿಯಾಗುಳಿದಿದೆ. ಭಾರತ ಒಂದು ಅಸ್ತ್ರ ಪರೀಕ್ಷಿಸಿದರೆ ಪಾಕಿಸ್ತಾನ ಹಠತೊಟ್ಟು ಎರಡು ಅಸ್ತ್ರ ಪರೀಕ್ಷೆ ಮಾಡುತ್ತದೆ. ಇದಕ್ಕೆ ವ್ಯಯವಾಗುವ ಕೋಟಿಗಟ್ಟಲೆ ಹಣವನ್ನು ಶಿಕ್ಷಣಕ್ಕೊ, ಬಡಜನರ ಏಳಿಗೆಗೊ ಉಪಯೋಗಿಸಿದರೆ? ತಾನು ಅಧಿಕಾರಕ್ಕೆ ಬಂದ ಕೆಲವು ದಿನಗಳ ನಂತರ ಇರಾನಿನ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ನಮ್ಮ ದೇಶದಲ್ಲಿ ಪರಮಾಣು ತಂತ್ರಜ್ನಾನವನ್ನು ಶಾಂತಿಯುತವಾಗಿ ಬಳಕೆ ಮಾಡಲಾಗುವುದು ಎಂದು ಸಾರಿದರು. ಈಗ ಅಮೆರಿಕಾದ ಆರೋಪವೊಂದರ ಪ್ರಕಾರ ಇರಾನಿನ ಬಳಿ ಗೋಪ್ಯವಾಗಿ ತಯಾರಿಸಲಾದ ಪರಮಾಣು ಅಸ್ತ್ರಗಳಿವೆ. ಅಹ್ಮದಿನೆಜಾದ್ ಇದನ್ನು ಅಲ್ಲಗೆಳೆಯುತ್ತ ಇಲ್ಲ. ದೂರದ ಮಾತಿರಲಿ, ನಮ್ಮ ಹತ್ತಿರದ ರಶ್ಯಾದಲ್ಲಿ ಉಂಟಾದ ಚೆರ್ನೊಬಿಲ್ ರಿಯಾಕ್ಟರ್ ದುರಂತವನ್ನು ಮರೆಯಲು ಸಾಧ್ಯವೇ ಇಲ್ಲ.

ಯಾವುದೇ ತಂತ್ರಜ್ನಾನ ಒಳ್ಳೆಯದೆ ಅಥವಾ ಕೆಟ್ಟದೆ ಎಂದು ನಿರ್ಧರಿಸುವುದು ನಮ್ಮ ಕೆಲಸವಲ್ಲ. ಈ ಮೊದಲು ಪರಮಾಣು ವಿಜ್ನಾನವನ್ನು ಸಂಪೂರ್ಣ ವಿರೋಧಿಸುತ್ತಿದ್ದ ಬ್ರಿಟಿಶ್ ಪರಿಸರತಜ್ನ ಜೇಮ್ಸ್ ಲವ್ಲಾಕ್ ಇಂದು ಪರಿಸರವನ್ನು ಉಳಿಸುವಲ್ಲಿ ಪರಮಾಣು ವಿಜ್ನಾನ ಮಾತ್ರ ಪ್ರಮುಖ ಪಾತ್ರ ವಹಿಸಬಲ್ಲದು ಎಂದು ನಂಬುತ್ತಾರೆ. ಅಮೆರಿಕಾ ಒಂದರಲ್ಲೆ 130 ಅಣುವಿದ್ಯುಚ್ಛಕ್ತಿ ಸ್ಥಾವರಗಳು ತಣ್ಣಗೆ ಕಾರ್ಯನಿರ್ವಹಿಸುತ್ತಿವೆ. ಆದರೆ ನ್ಯೂಕ್ಲಿಯರ್ ತಂತ್ರಜ್ನಾನದ ವಿರುದ್ಧ ಇರುವ ಕೆಲವು ಅಂಶಗಳೆಂದರೆ:
1. ಇದು ಅತಿ ದುಬಾರಿಯಾದುದು
2. ಸ್ಥಾವರಗಳ ಸುತ್ತಮುತ್ತ ನೆಲೆಸುವುದು ಜೀವಕ್ಕೆ ಅಪಾಯಕಾರಿ
3. ಅಣುಸ್ಥಾವರಗಳ ತ್ಯಾಜ್ಯ ಸಾವಿರಾರು ವರ್ಷ ಅಳಿಯದು
4. ಅಣುಸ್ಥಾವರಗಳ ಮೇಲೆ ಆತಂಕವಾದಿಗಳ ದಾಳಿ ನಡೆದರೆ ಕಷ್ಟ
5. ಅಣು ಇಂಧನವನ್ನು ಅಣ್ವಸ್ತ್ರ ತಯಾರಿಸಲು ಬಳಸಬಹುದು

ಹೆಸರಾಂತ ‘ಗ್ರೀನ್ ಪೀಸ್’ನ ಪರಿಸರವಾದಿ ಪ್ಯಾಟ್ರಿಕ್ ಮೂರರ ಪ್ರಕಾರ ಪರಮಾಣು ತಂತ್ರಜ್ನಾನವನ್ನು ವಿದ್ಯುತ್ ಉತ್ಪಾದನೆಯಂಥ ಅಭಿವೃದ್ಧಿಯೋಜನೆಗಳಲ್ಲಿ ಮಾತ್ರ ಬಳಸಬೇಕು. ಪರಮಾಣು ಇಂಧನ ವಿಕೃತಮನಸ್ಸಿನ ಆತಂಕವಾದಿಗಳ ಕೈಗೆಟುಕದಂತೆ ಸುರಕ್ಷೆ ಒದಗಿಸುವುದಷ್ಟೇ ಅಲ್ಲ, ದುರ್ಬಳಕೆಯ ವಿರುದ್ಧ ಅಂತರ್ರಾಷ್ಟ್ರೀಯ ಒತ್ತಡವನ್ನು ಹೇರಬೇಕು. ಆಗ ಮಾತ್ರ ನಾವು ನಮ್ಮ ಹಾಗೂ ಮುಂದಿನ ಪೀಳಿಗೆಗಳ ಭವಿಷ್ಯದ ಬಗ್ಗೆ ನಿರಾತಂಕವಾಗಿ ಇರಬಹುದು.

ಚಿತ್ರಕೃಪೆ: www.vesmirweb.net

Comments (3)