Archive for September, 2008

ಒಬ್ಬ ಜಗಳಗಂಟನ ನೆನಪು..ಆಆಹ್.. ಕ್ಷೀ…!!

ಈವತ್ತು ನಾನೂ ಪಕ್ಕಾ ಬೆಂಗಳೂರಿಗಳಾಗಿಬಿಟ್ಟೆ. ಆಗಾಗ್ಗೆ ಮನೆ ಶಿಫ್ಟು ಮಾಡುವದು ನನ್ನ ಪ್ರಕಾರ ‘ಬೆಂಗಳೂರಿಗ’ ಅನ್ನಿಸಿಕೊಳ್ಳುವದಕ್ಕೆ ಬೇಕಾಗಿರುವ ಪ್ರಮುಖ ಕ್ವಾಲಿಟಿ. ಬಾಡಿಗೆಮನೆಯ ಧೂಳು, ಜಿರಲೆಮೊಟ್ಟೆಗಳು, ಕಸ, ಇತ್ಯಾದಿಯನ್ನೆಲ್ಲ ಹುಮ್ಮಸ್ಸಿನಿಂದ ಜಾಡಿಸಿ ಕ್ಲೀನು ಮಾಡಿ ಮುಗಿವ ವೇಳೆಗೆ ಅಲರ್ಜಿಯಾಗಿ ಫಜೀತಿ ಬೇಡ ಅನ್ನಿಸಿಬಿಟ್ಟಿತು. ಪದೇ ಪದೇ ವರ್ಗಾವಣೆ ಆಗುವವರ ಪಾಡು ಹೇಗೋ ಅಂದುಕೊಳ್ಳುತ್ತ ಇದ್ದೆ. ಪ್ರಸನ್ನ, ಅದೇ ನನ್ನ ಹಳೆಯ ದುಶ್ಮನ್, ಮರೆತೇಹೋಗಿದ್ದವ ಧುತ್ತನೆ ನೆನಪಾದ.

ನನ್ನನ್ನು ಐದನೇ ಕ್ಲಾಸಿಗೆ ನಮ್ಮೂರ ಸರ್ಕಾರೀ ಶಾಲೆಗೆ ಸೇರಿಸಿದರು. ಐದನೇ ಕ್ಲಾಸಿನಲ್ಲಿ ಮೂರು ವಿಭಾಗಗಳು. ಪ್ರತಿ ವಿಭಾಗದಲ್ಲಿ ಕಡಿಮೆ ಎಂದರೂ ಎಪ್ಪತ್ತೈದು ಮಕ್ಕಳು. ಟೀಚರುಗಳು ಯಾವಾಗಲೂ ಕಿರುಚಿಕೊಂಡೇ ಮಾತನಾಡಬೇಕಿತ್ತು. ಅಲ್ಲಿ ಹುಡುಗ ಹುಡುಗಿಯರು ಪ್ರತ್ಯೇಕವಾಗಿ ಕೂರುತ್ತಿರಲಿಲ್ಲ. ಮೊದಲನೆ ದಿನವೆ ಬೆಂಚಿನಲ್ಲಿ ನನ್ನ ಪಕ್ಕ ಕೂತಿದ್ದವರು ಬಿ.ಕೆ. ಪ್ರಸನ್ನ ಮತ್ತು ಸೆಲೆಸ್ತೀನ್ ಪಿರೇರಾ. ಆವತ್ತಿನಿಂದ ನಾನು ಸೆಲೆಸ್ತೀನಳ ಜತೆ ಎಷ್ಟು ಜಾಸ್ತಿ ಸ್ನೇಹ ಮಾಡಿಕೊಂಡೆನೋ ಪ್ರಸನ್ನನೊಡನೆ ಅಷ್ಟೇ ಜಗಳವಾಡುತ್ತ ಇದ್ದೆ. ಕ್ಲಾಸಿನೊಳಗೆ ನುಗ್ಗಿದೆವೋ ಇಲ್ಲವೋ, ನಮ್ಮ ಕಾದಾಟ ಶುರು. ಬೋರ್ಡು ಒರೆಸಿದ ಡಸ್ಟರನ್ನು ಅವ ನನ್ನ ಮೇಲೆ ಎಸೆದರೆ ನಾನು ಆಟದ ಮೈದಾನದಿಂದ ಮರಳು ತಂದು ಅವನ ತಲೆಯ ಮೇಲೆ ಸುರಿಯುತ್ತಿದ್ದೆ. ಪಿಲ್ಚೆಂಡಿನಾಟದಲ್ಲಿ ನನ್ನ ಫೇಮಸ್ ಪೆಟ್ಟು ಪ್ರಸನ್ನನಿಗೆ ಮಾತ್ರ ಮೀಸಲಾಗಿರುತ್ತ ಇತ್ತು. ಶನಿವಾರ ನಾನು ಧರಿಸುತ್ತಿದ್ದ ಬಿಳಿಯ ಯೂನಿಫಾರ್ಮಿನ ಮೇಲೆ ಇಂಕು ಸಿಡಿಸುವ ಯಾವ ಅವಕಾಶವನ್ನೂ ಪ್ರಸನ್ನ ಮಿಸ್ ಮಾಡಿಕೊಳ್ಳುತ್ತಲೇ ಇರಲಿಲ್ಲ. ಎಲ್ಲವೂ ಮುಗಿದುಹೋಗಿ ಇನ್ನೇನು ಕೂದಲು ಹಿಡಿದು ಜಗ್ಗಾಡುವ ಪರಿಸ್ಥಿತಿ ಬಂದಾಗ ಪಿ.ಟಿ. ಮೇಷ್ಟರಾಗಿದ್ದ ಲಿಂಗಮರಿಯಪ್ಪನವರು ಇಂಟರ್ಫಿಯರ್ ಮಾಡಿ ಸಂತಸದಿಂದ ನಮ್ಗಿಬ್ಬರಿಗೂ ಸರಿಸಮವಾಗಿ ತಪರಾಕಿಗಳನ್ನು ದಯಪಾಲಿಸುತ್ತಿದ್ದರು. ಪರೀಕ್ಷೆಗಳಲ್ಲಿ ನನಗಿಂತ ಆತನಿಗೆ ಅರ್ಧ ಅಂಕ ಜಾಸ್ತಿ ದೊರಕಿದರೂ ಟೀಚರೊಡನೆ ನನ್ನ ವಾಗ್ವಾದ ಆರಂಭವಾಗುತ್ತಿತ್ತು.

ಪ್ರಸನ್ನನ ತಂದೆ ಪೊಲೀಸು ಇಲಾಖೆಯಲ್ಲಿದ್ದವರು. ನಾವು ಆರನೇ ಕ್ಲಾಸಿನಲ್ಲಿರುವಾಗ ಅವರಿಗೆ ವರ್ಗಾವಣೆಯಾಯಿತು. ಡಿಸೆಂಬರಿನಲ್ಲಿ ಎಂದು ನೆನಪು. ಪ್ರಸನ್ನ ಇನ್ನು ಹೋಗುತ್ತಾನೆ ಎಂದು ಗೊತ್ತಾದಾಗಿಂದ ನಾವು ಜಗಳ ಆಡುವುದನ್ನೆ ಬಿಟ್ಟೆವು. ನನಗೆ ಒಂದೊಂದು ಸಾರಿ ಜಗಳ ಆಡಬೇಕು ಅನ್ನಿಸಿದರೂ ಪ್ರಸನ್ನನ ಸಪ್ಪೆಮುಖದಲ್ಲಿ ಆ ಹಳೆಯ ತುಂಟತನ ಕಾಣದೆ ಸುಮ್ಮನಾಗುತ್ತ ಇದ್ದೆ. ಶಾಲೆಗೆ ಟಿ.ಸಿ. ಇಸಿದುಕೊಳ್ಳಲು ಬಂದ ಪ್ರಸನ್ನನ ಅಪ್ಪ ಅವನನ್ನು ಕರೆದುಕೊಂಡು ಹೋಗುವ ಮುನ್ನ ನನ್ನನ್ನು ಹೊರಕರೆದು ಚೆನ್ನಾಗಿ ಓದಬೇಕೆಂದು ಹೇಳಿ ತಲೆಸವರಿ ಕಳಿಸಿದರು. ಅವರ ಪಕ್ಕದಲ್ಲಿ ಪ್ರಸನ್ನ ಹುಳ್ಳಗೆ ಕಣ್ಣುತುಂಬಿಕೊಂಡು ನಿಂತಿದ್ದ. ನಾನು ಆವರೆಗೆ ಹಿಂದಿ ಸಿನೆಮಾಗಳನ್ನು ಹಚ್ಚಿಕೊಂಡಿರಲಿಲ್ಲವಾದ್ದರಿಂದ ’ಹಾ ಪ್ರಸನ್ನಾ!!’ ಎಂದು ಮುಂತಾಗಿ ಕೂಗಿ ಅಳುವ ಅವಶ್ಯಕತೆಯೇನು ನನಗೆ ಕಾಣಲಿಲ್ಲ. 

ಆವತ್ತೇ ಕೊನೆ. ಆಮೇಲಿನಿಂದ ನಾನು ಪ್ರಸನ್ನನನ್ನು ನೋಡೇ ಇಲ್ಲ. ಅವರ ತಂದೆ ಆಗಾಗ ಊರಿಗೆ ಬರುತ್ತಿದ್ದವರು ಅಪ್ಪ ಅಮ್ಮನ ಬಳಿ ನನ್ನ ಓದಿನ ಬಗ್ಗೆ ವಿಚಾರಿಸುತ್ತಿದ್ದರಂತೆ. ಯಾವಾಗಲೋ ಪ್ರಸನ್ನ ಅಮ್ಮನಿಗೆ ಭೇಟಿಯಾಗಿದ್ದನಂತೆ. ’ಎಷ್ಟು ಎತ್ತರ ಆಗಿದಾನೆ!’ ಅಂದಿದ್ದರು ಅಮ್ಮ. ಪ್ರಸನ್ನನಿಗೆ ಇಂಜಿನಿಯರಿಂಗ್ ಸೀಟು ಸಿಕ್ಕಿದ್ದು ಗೊತ್ತಾಗಿ (ಪಿ.ಯು.ಸಿ.ಯಲ್ಲಿ ಧಿಮಾಕು ತೋರಿಸಿ ಸೈನ್ಸು ತೆಗೆದುಕೊಂಡು ಮ್ಯಾಥ್ಸಿನಲ್ಲಿ ಡುಮುಕಿ ಹೊಡೆಯುವುದರಿಂದ ಹೇಗೋ ಪಾರಾಗಿದ್ದ) ನನಗೆ ವಿಪರೀತ ಸಿಟ್ಟು ಬಂದಿತ್ತು. ದಾರಿಯಲ್ಲೆಲ್ಲೊ ಸಿಕ್ಕಿದ ಸೆಲೆಸ್ತೀನಳಿಗೆ ಹೇಳಿದರೆ “ಒಳ್ಳೇದಾಗಲಿ ಬಿಡು.” ಎಂದು ದೊಡ್ಡ ಹೆಂಗಸಿನ ಹಾಗೆ ಹೇಳಿ ಮನಸ್ಸಿಗೆ ಪಿರಿಪಿರಿ ಮಾಡಿದ್ದಳು.

ಒಂದರ ಹಿಂದೊಂದು ಸಾಲಾಗಿ ಬರುವ ಸೀನುಗಳ ನಡುವೆ ಇದೆಲ್ಲ ನೆನಪಾಯಿತು. ಅಲ್ಲ, ಪ್ರಸನ್ನ ಎಷ್ಟು ಸಾರೆ ಅವರಪ್ಪನ ಹಿಂದೆ ಊರುಬಿಟ್ಟು ಊರು ಸುತ್ತಿರಬಹುದು? ಆಗೆಲ್ಲ ಅವನಿಗೂ ಧೂಳು ಅಲರ್ಜಿ, ಜ್ವರಗಿರ ಆಗಿದ್ದಿರಬಹುದು. ಪ್ರತಿ ಸಾರಿ ಹೊಸ ಜಾಗ, ಹೊಸ ಶಾಲೆ, ಹೊಸ ಗೆಳೆಯರು, ಹೊಸ ಜಗಳ. ಹಿಂಸೆಯಾಗಿದ್ದಿರಬೇಕೊ ಏನೊ.

ಈಗ ಸೆಲೆಸ್ತೀನ್ ಪಿರೇರಾಳಿಗೆ ಮದುವೆಯಾಗಿ ಮಕ್ಕಳಾಗಿವೆ. ಬಿ.ಕೆ.ಪ್ರಸನ್ನ ಎಲ್ಲಿಯೋ ಎಂಜಿನಿಯರಾಗಿದ್ದಾನೆ. ನಾನು ಇಲ್ಲಿ ಬೆಂಗಳೂರಿನಲ್ಲಿ ಸಂಸಾರ ಹೂಡುವ ಹವಣಿಕೆಯಲ್ಲಿ ಸೀನು ಬರಿಸಿಕೊಂಡು ಇದನ್ನೆಲ್ಲ ಯೋಚಿಸಿಕೊಂಡು ಕೂತಿದ್ದೇನೆ.

ಚಿತ್ರಕೃಪೆ: www.copywriterscrucible.com

Comments (26)