Archive for November, 2008

ವಾರಿಸ್ ಶಾಹನಿಗೆ ಹೀಗೆ ಹೇಳುವೆ ನಾನು

ಕವಯಿತ್ರಿ ಅಮೃತಾ ಪ್ರೀತಮರ ಪ್ರಸಿದ್ಧ ಕವಿತೆ ‘ಆಜ್ ಆಖನ್ ವಾರಿಸ್ ಶಾಹ ನೂಂ’ ನ ಕನ್ನಡ ಅನುವಾದವಿದು. ಪಂಜಾಬದ ಒಂದು ಕಾಲದ ಅತಂತ್ರ, ಸಾವುನೋವುಗಳ ಬಗ್ಗೆ ಆಕೆ ಬರೆದ ಕವಿತೆಯಿದು. ಈಗ ಇದನ್ನು ನೋಡಿದರೆ ಇಲ್ಲಿರುವ ಪಂಜಾಬ್ ಬದಲು ಭಾರತ ಎಂದು ಹಾಕಿದರೂ ವ್ಯತ್ಯಾಸವೆ ಕಾಣದು. ಕಳೆದ ಮೂರು ದಿನಗಳ ಕದನದಲ್ಲಿ ಮಡಿದ ಜೀವಗಳಿಗೆ ಈ ಕವಿತೆಯ ಮೂಲಕ ನನ್ನ ಶ್ರದ್ಧಾಂಜಲಿ. ಅನುವಾದ: ಎನ್ ಎಸ್ ತಸ್ನೀಮ್ (I Say Unto Waris Shah)

indian_woman_praying021

ವಾರಿಸ್ ಶಾಹನಿಗೆ ಹೀಗೆ ಹೇಳುವೆ ನಾನು

ಇಂದು ಬೇಡುವೆ ವಾರಿಸ್ ಶಾಹನಿಗೆ ಸಮಾಧಿಯಿಂದೆದ್ದು ಮಾತನಾಡಲು
ಕೇಳುವೆ ಪ್ರೀತಿಯ ಪುಸ್ತಕದಿಂದ ಪುಟವೊಂದ ತಿರುವಲು
ಪ್ರಸಿದ್ಧ ಪಂಜಾಬದ ಮಗಳೊಬ್ಬಳು ಅತ್ತಾಗ ಅಕೆಯ ಮೂಕರೋದನಕ್ಕೆ ನುಡಿಕೊಟ್ಟವನೆ
ಇಂದು ಲಕ್ಷಾನುಲಕ್ಷ ಹೆಂಗೆಳೆಯರು ಕಂಬನಿಗರೆವರು. ಅವರ ಶೋಕಕೆ ದನಿ ನೀಡಲು
ಎಲ್ಲಿರುವನು ವಾರಿಸ್ ಶಾಹ? ಎದ್ದೇಳು, ಓ ವ್ಯಥಿತರ ಸ್ನೇಹಿತನೆ!!
ನಿನ್ನ ಪಂಜಾಬದ ದುಸ್ಥಿತಿ ನೋಡು. ಹುಲ್ಲುಗಾವಲುಗಳಲಿ ಹೆಣಗಳು ಚದುರಿವೆ
ಕೆಂಪಗೆ ಹರಿದಿದೆ ಚೀನಾಬ ನದಿ.
ಯಾರೋ ಸುರಿದಿರುವರು ವಿಷ ಪಂಚನದಿಗಳಿಗೆ
ಈಗ ನೀರು ನಡೆಸುತಿದೆ ಮಣ್ಣಲಿ ವಿಷದ ನೀರಾವರಿ.
ಫಲವತ್ತಾಗಿದ್ದ ಭೂಮಿಯಲಿ ಎಲ್ಲೆಡೆ ಹುಟ್ಟಿಕೊಂಡಿವೆ ಅಗಣಿತ ವಿಷಸಸ್ಯಗಳು
ಕೆಂಪಗಾಗಿದೆ ದಿಗಂತ, ಮುಗಿಲು ಮುಟ್ಟಿದೆ ಶಾಪ.
ಕಾಡುಗಳ ಮೇಲೆ ಹಾದುಬರುವ ವಿಷಗಾಳಿ
ಕಾರ್ಕೋಟಕಗಳಾಗಿ ಮಾರ್ಪಡಿಸಿದೆ ಬಿದಿರ ಎಳೆಚಿಗುರುಗಳನು.
ಮುಗ್ಧ ಜನರ ವಶೀಕರಣ ಮಾಡಿ ಅವರ ಪದೇ ಪದೇ ಕಚ್ಚುವವು ಸರ್ಪಗಳು
ಕೆಲವೇ ಸಮಯದಲಿ ನೀಲಿಯಾಗಿವೆ ಪಂಜಾಬದ ಅವಯವಗಳು.
ಬೀದಿಯ ಹಾಡುಗಳು ನಿಂತುಹೋದವು, ಮುರಿದವು ತಿರುಗುತಿದ್ದ ತಕಲಿಗಳ ಚಕ್ರ
ಹುಡುಗಿಯರು ಅರಚಾಡುತ್ತ ಬಿಟ್ಟೋಡಿದರು ಅಂಗಳವನು, ಮೊಳಗುತ್ತಿದ್ದ ತಕಲಿಯ
ಶಬ್ದ ನಿಂತುಹೋಯಿತು, ಮಾಯವಾದವು ಇದ್ದಕಿದ್ದಂತೆ
ಮಧುಮಂಚಗಳಿದ್ದ ದೋಣಿಗಳು. ಮುರಿದಿದೆ ಸಶಕ್ತ ರೆಂಬೆಯೊಂದು,
ರೆಕ್ಕೆಯ ಜತೆಗೇ. ಪ್ರೇಮದ ಉಸಿರನೂದುತಿದ್ದ ಕೊಳಲು
ಅಚ್ಚರಿಗೊಂಡು ಸುಮ್ಮನಾಗಿರುವುದು.
ರಾಂಝಾನ ಸೋದರರು ಅದ ನುಡಿಸುವ
ಕಲೆಯನೆ ಮರೆತಿರುವರು. ಭೂಮಿಯ ಮೇಲೆ ಸುರಿವ ನೆತ್ತರ ಮಳೆ
ಗೋರಿಗಳಿಗೆ ಸ್ರವಿಸಿರುವುದು. ಪ್ರೇಮಕಣಿವೆಯ ರಾಜಕುವರಿಯರು
ಮಸಣಗಳಲಿ ಬಿಕ್ಕುತಲಿರುವರು. ದುರಾತ್ಮರು ಪ್ರೀತಿ, ಸೌಂದರ್ಯಗಳ
ಲೂಟಿಖೋರರಾಗಿ ಅಡ್ಡಾಡುತಿರುವರು
ಎಲ್ಲಿ ಹುಡುಕಲಿ ಇನ್ನೋರ್ವ ವಾರಿಸ್ ಶಾಹನನು?
ಇಂದು ಬೇಡಿಕೊಳುವೆ ವಾರಿಸ್ ಶಾಹನಿಗೆ
ಸಮಾಧಿಯಿಂದೆದ್ದು ಮಾತನಾಡಲು
ಪ್ರೀತಿಯ ಪುಸ್ತಕದಿಂದ ಪುಟವೊಂದ ತಿರುವಲು.

(ವಾರಿಸ್ ಶಾಹ ಹದಿನೆಂಟನೆ ಶತಮಾನದ ಪಂಜಾಬೀ ಕವಿ. ಪ್ರಪಂಚದ ಸುಪ್ರಸಿದ್ಧ ಪ್ರೇಮಕಥೆಗಳಲ್ಲೊಂದಾದ ‘ಹೀರ್’ ನ ಕರ್ತೃ.)

ಚಿತ್ರಕೃಪೆ: www.i113.photobucket.com 

Comments (2)

ಧೃತಿಗೆಟ್ಟ ಪದಗಳ ಮೂಲಕ ಪ್ರತಿಭಟಿಸುತ್ತಿದ್ದೇನೆ.

26india4-6001

ಈ ಬುಧವಾರ, ಗುರುವಾರ ಮತ್ತು ಶುಕ್ರವಾರ ನಮ್ಮ ಭಾರತೀಯ ಇತಿಹಾಸದಲ್ಲೆ ಅತ್ಯಂತ ಕರಾಳ ದಿನಗಳು ಅನ್ನಿಸಿಕೊಂಡವು. ನಿನ್ನೆ ಗುರುವಾರದ ಸುದ್ದಿ ಚ್ಯಾನೆಲುಗಳಲ್ಲಿ ಮುಂಬಯಿಯ ಹೆಮ್ಮೆಗಳಲ್ಲೊಂದಾದ ತಾಜ್ ಹೊತ್ತಿ ಉರಿಯುವುದನ್ನು, ಛತ್ರಪತಿ ಶಿವಾಜಿ ಟರ್ಮಿನಸ್ಸಿನಲ್ಲಿ ನಮ್ಮ ಮಕ್ಕಳ ರಕ್ತ ನೀರಿನ ಹಾಗೆ ಹರಿದಿರುವುದನ್ನು, ಲಿಯೋಪಾಲ್ಡ್ ಕೆಫೆಯ ಗೋಡೆಗಳಲ್ಲಿ ತತ್ತರಬಿತ್ತರ ಹರಡಿದ ಗುಂಡಿನ ಗುರುತುಗಳನ್ನು, ನರಿಮನ್ ಹೌಸಿನ ಕಿಟಕಿಗಳ ಮುರಿದ ಗಾಜುಗಳ ಹಿಂದಿನ ಆತಂಕವನ್ನು, ಒಬೆರಾಯ್ ಟ್ರಿಡೆಂಟಿನ ಗಾಂಭೀರ್ಯ ಭೀತಿಗೆಡೆಮಾಡಿಕೊಟ್ಟಿರುವುದನ್ನು ನನ್ನ ಕರ್ಮವೆಂಬ ಹಾಗೆ ನೋಡುತ್ತ ಕುಳಿತಿದ್ದೆ. ಮಧ್ಯಕ್ಕೆ ಸಿಲ್ಲೀ ಪ್ರಶ್ನೆಗಳನ್ನು ಕೇಳುತ್ತ ಅಸಂಬದ್ಧ ಕಮೆಂಟರಿ ಉದುರಿಸುತ್ತಿದ್ದ ಟಿವಿ ವರದಿಗಾರರ ಮೇಲೂ ಸಿಟ್ಟು ಬರದಷ್ಟು ಮೆದುಳಿಗೆ ಗರಬಡಿದಂತಾಗಿತ್ತು. ಆದರೆ ಈವತ್ತು ಬೆಳಗ್ಗೆ..

ಜನರ ಮೇಲೆ ಬುಲೆಟು ಸಿಡಿಸುವಾಗ, ಗ್ರೆನೇಡು ಎಸೆಯುವಾಗ ನಗುತ್ತಿದ್ದ, ಬೈಗುಳ ಸುರಿಸುತ್ತಿದ್ದ, ಮಕ್ಕಳು, ಹೆಂಗಸರು, ಕೊನೆಗೆ ನಾಯಿಗಳನ್ನೂ ಬಿಡದ, ಯಾವುದಾದರು ಕಾಲೇಜಿಗೆ ಹೋಗುವ ಹುಡುಗನ ಥರದ ಈ ಕೋಲ್ಡ್ ಬ್ಲಡೆಡ್ ಆತಂಕವಾದದ ಹೊಸ ಚಹರೆ ನನ್ನಲ್ಲಿ ನಡುಕ, ಕೋಪ ಎರಡನ್ನೂ ಹುಟ್ಟಿಸಿತು. ಭೊರೆಂದು ಬಿಕ್ಕಿಬಿಕ್ಕಿಅ ಳುತ್ತಲೆ ಇಡ್ಡೇನೆ.. ಏನಾಗುತ್ತ ಇದೆ ಇದೆಲ್ಲ? ಇಷ್ಟು ಸುಲಭವಾಗಿ ಹೇಗೆ ನುಗ್ಗಿಬಂದರು ಅವರು? ಅನ್ಯಾಯವಾಗಿ ಬಲಿಯಾದ ಪೊಲೀಸು ಪಡೆಯ ಸಮರ್ಥ  ಆಫೀಸರುಗಳ ಕೊರತೆಯನ್ನು ದೇಶಕ್ಕೆ, ಅವರ ಕುಟುಂಬಗಳಿಗೆ ಯಾರು ತುಂಬಿಕೊಡುತ್ತಾರೆ? ಸತ್ತ ಕಂದಮ್ಮಗಳು, ಮಕ್ಕಳು  ಏನು ಅನ್ಯಾಯ ಮಾಡಿದ್ದವು? ಎಷ್ಟು ಮನೆಗಳ ದೀಪಗಳು ಆರಿದವೊ? ಏನು ಮಾಡಬೇಕು ನಾವು? ಯಾಕೆ ಹೀಗಾಯಿತು ಮಾರಣಹೋಮ? ಮತ್ತೆ ಇದನ್ನು ರಾಜಕಾರಣಿಗಳು ತಮ್ಮ ವೋಟುಬ್ಯಾಂಕ್ ತುಂಬಲು ಬಳಸುತ್ತಾರೆ. ಒಂದಿಷ್ಟು ಸೈಕೊಪಾತಿಕ್ ಕೊಲೆಗಾರರಿಂದ ಒಂದಿಡೀ ಕೋಮಿನ ಜನ ಪ್ರತಿದಿನವೂ ಭೀತಿಯಲ್ಲಿ ಜೀವನ ಸಾಗಿಸಬೇಕಾಗಿ ಬರುತ್ತದೆ. ಸುಮ್ಮನೆ ಹಿಂಸೆ ಬೆಳೆಯುತ್ತದೆ. ಭಯೋತ್ಪಾದನೆ ಅಟ್ಟಹಾಸದಲ್ಲಿ ಜೀವನಕ್ಕೆ ಬೆಲೆಯೇ ಇಲ್ಲದಾಗುತ್ತದೆ..

ನನ್ನ ಪದಗಳು ಧೃತಿಗೆಟ್ಟು ಕೂತಿವೆ. ಕೊಂಚಕೊಂಚವಾಗಿ ಎಲ್ಲವನ್ನೂ ಬಾಚಿ ಒಟ್ಟುಮಾಡಿಕೊಂಡು ಪ್ರತಿಭಟಿಸುತ್ತಿದ್ದೇನೆ. ಇದು ನಮಗೆ ಬೇಡ. ಇನ್ನು ಹೆಚ್ಚಿಗೆ ನೋಡಲಾಗದು. ಇದು ಕೂಡದು.

ಚಿತ್ರಕೃಪೆ: www.graphics8.nytimes.com

Comments (8)

ಒಂದು ಲಾಸ್ಟ್ ಮಿನಿಟ್ ಅನೌನ್ಸ್ ಮೆಂಟು!!

ಸಂವಾದ.ಕಾಂ ನ ಗೆಳೆಯರ ಬಗ್ಗೆ ನಾನು ನಿಮಗೆ ತಿಳಿಸಿಲ್ಲ ಅಲ್ವಾ? ಬ್ಲಾಗರ್ ಅರೇಹಳ್ಳಿರವಿಯವರ ಮುಖಾಂತರ ನನಗೆ ಪರಿಚಯವಾದ ಬಳಗ ಇದು. ಯಾವುದೇ ಆಡಂಬರವಿಲ್ಲದೆ, ಹೆಚ್ಚಿಗೆ ಗಲಾಟೆ ಮಾಡದೆ ಅಚ್ಚುಕಟ್ಟಾಗಿ ಕನ್ನಡಸಾಹಿತ್ಯ, ಸಂಸ್ಕೃತಿಯನ್ನ ತನ್ನದೇ ವಿಶಿಷ್ಟ ರೀತಿಯಲ್ಲಿ ಬದಲಾಗುತ್ತಿರುವ ಕಾಲದೊಂದಿಗೆ ಹೆಜ್ಜೆಹಾಕುತ್ತ ಕಾಣಲೆಳಸುತ್ತಿರುವ ಆಸಕ್ತರ ಗುಂಪು ಇದು. ಇಲ್ಲಿ ಹಿರಿಕಿರಿಯರನೇಕರಿದ್ದಾರೆ..ಕರ್ನಾಟಕದೆಲ್ಲೆಡೆಯಿಂದ. ಆಗಾಗ ಭೇಟಿಯಾಗಿ, ಕಾರ್ಯಕ್ರಮಗಳನ್ನು ಆಯೋಜಿಸಿ ಚೆಂದವಾಗಿ ನಡೆಸಿಯೂಬಿಡುತ್ತಾರೆ. ಈ ಶನಿವಾರ -ಭಾನುವಾರ ಅಂದರೆ ೨೨ ಹಾಗೂ ೨೩ ನವೆಂಬರ್ ತುಮಕೂರು ಬಳಿಯ ಐತಿಹಾಸಿಕ ತಾಣವಾದ ದೇವರಾಯನದುರ್ಗದಲ್ಲಿ ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಗೌರವಾರ್ಥ ಸಿನಿಮಾ ರಸಗ್ರಹಣ ಶಿಬಿರವೊಂದನ್ನು ಹಮ್ಮಿಕೊಳ್ಳಲಾಗಿದೆ. ದಯವಿಟ್ಟು ಬನ್ನಿ, ಭಾಗವಹಿಸಿ, ಪ್ರೋತ್ಸಾಹ ನೀಡಿ.

ಏನು? ಪ್ಲಾನ್ ಮಾಡಿಕೊಂಡಿಲ್ಲವಲ್ಲ ಅಂದುಕೊಳ್ಳುತ್ತ ಇದೀರ. ಪ್ಲಾನ್ ಮಾಡದೆ ಹೊರಟುನೋಡಿ, ಚನಾಗಿರತ್ತೆ. ದೇವರಾಯನದುರ್ಗ ಬೆಂಗಳೂರಿಂದ ಏನು ಮಹಾ ದೂರ ಏನಿಲ್ಲ. ನಾನು ಕೊಟ್ಟಿರುವ ಲಿಂಕಿನಲ್ಲಿ ನಿಮಗೆ ಬೇಕಾದ ಎಲ್ಲ ಮಾಹಿತಿ ಇದೆ. ಬಂದರೆ ಶನಿವಾರ ನಾನೂ ಇರ್ತೇನೆ.

Comments (5)

ಪಡಖಾನೆಯ ಹುಡುಗಿ – ಬೆಳಕು ಮತ್ತು ಪಾಪಗಳು

woman

ನೆನ್ನೆ ನನ್ನ ಹಳೆಯ ಹೆಸರ
ಕರೆದ ನಿನ್ನ ದನಿಯಲಿ
ಅದೇ ಹೊಳಪು ಸುರಿಯಿತು
ಕಿಟಕಿಯಾಚೆ ಮಕ್ಕಳು ಸಿಕ್ಕ
ಕಾಗೆ ಬಂಗಾರ ನುರಿನುರಿದು
ಮೈತುಂಬ ಸವರುತ್ತ ನಕ್ಕರು
ನಾನೂ ಈ ಖಾಲಿ ಬಟ್ಟಲಿಗೆ
ನಿನ್ನ ಬೆಳಕ ಮೊಗೆದುಕೊಳ್ಳಲೆ
ಯೋಚನೆ ಮಾಡಿದೆ.
 ನನ್ನ ಕಿಟಕಿತುಂಬ
ಸಾಲು ಪರದೆ
ನಿನ್ನ ಹಳೆಯ ಬೆಳಕ
ಕಳೆಯಲು ಧೈರ್ಯ ಸಾಲದೆ.

***

ನೀನು ಕಲ್ಲಾದ ದಿನದಿಂದ
ಹುಡುಕೀಯ ಒಮ್ಮೆಯಾದರು
ನನ್ನ ತಪ್ಪುಗಳನೊಂದನಾದರು
ಬೇಸರಿಸಿ ಹಳಿದೀಯ ಒಮ್ಮೆ
ಹುಬ್ಬುಗಂಟಿಕ್ಕಿ ಎಂದೆ
ಬೇಕಾಗಿ ಸಾವಿರ ಪಾಪಗಳ ಮಾಡಿ
ವಿರಾಮದಲಿ ನಿನ್ನ ದಿಟ್ಟಿಸುತ
ಒಳಗೊಳಗೆ ಉಸಿರುಗಟ್ಟಿ ಹೊರಗೆ
ಹುಸಿನಗುತ ಬಣ್ಣಿಸಿ ಹೇಳುವೆ
ನಿನ್ನೊಳಗೊಂದು ಸಣ್ಣ ನಡುಕ
ಕಂಡ  ಘಳಿಗೆ
ನನಗೆ ನನ್ನ ಬೆಳಕು.

***

ನನಗೇಕೆ ನಿನ್ನ ಕೆಣಕುವ ತೆವಲು?
ಕೇಳುವರು, ಹಂಗಿಸುವರು ಜನ
ಅವರಿಗೇನು ತಿಳಿದೀತು
ಪ್ರೇಮದ್ವೇಷಗಳ ಲೆಕ್ಕಾಚಾರ?
ನನ್ನ ಅವಸಾನದಕೆ ಕಾಯುವ ನಿನ್ನ ಉತ್ತುಂಗ
ನಿನ್ನ ನೋವಲೆ ಅರಳುವ ನನ್ನ ಆತ್ಮ 
ನಿನಗಾಗಿ ನಾ ಮಾಡುವ ಪಾಪಗಳು ಹಾಗೂ
ನನಗಾಗೆ ನೀ ಸೂಸುವ ಬೆಳಕು
ಇದಕೆಲ್ಲ ಅವರು ’ಮರುಳುತನ’ವೆನ್ನುವರು
ನಮ್ಮ ಪಾಪಗಳು ಮತ್ತು ಬೆಳಕು
ಕೂಡಲು ಕಾಯುತ್ತ ಇರುವವು.

ಚಿತ್ರಕೃಪೆ: www.toruiwaya.com

Comments (6)

ಗೂಡು

ny-image3etsycom

ಒಳಗಿಂದ ಒತ್ತರಿಸಿಕೊಂಡು ಬರುವ ನೋವು. ಸುತ್ತ ಅಪರಿಚಿತ ಮುಖಗಳು.
ಒಡಲು ಕಿತ್ತುಕೊಂಡು ಹೊರಗೆ ಬರಲೆಳಸುತ್ತಿದ್ದ ಮಗು.
’ಅವಳು ಈ ಮನೆ ಹೊಸಿಲು ತುಳೀಕೂಡದು!!’ ಅಪ್ಪನ ಅಬ್ಬರ.
‘ಅಮ್ಮಾಆಆಆ…’ ಅಂತ ಕೂಗಲಿಲ್ಲ ನಾನು. ಡಾಕ್ಟರಿಣಿ ‘ಅವಡುಗಚ್ಚಿ ಮುಕ್ಕಬೇಕು. ನೋವು ತಡಕೋಬೇಡ!! ಮಗೂಗೆ ಸರಿಹೋಗೊಲ್ಲ.’ ಎಂದು ಮುಂತಾಗಿ ರೇಗತೊಡಗಿದಳು. ಅವಳಿಗೇನು ತಿಳಿದೀತು? ನನಗೆ ಕೈಯೆತ್ತಿ ಬಾರಿಸಿಬಿಡೋಣೇನೊ ಅನ್ನುವಷ್ಟು ಕೋಪ. ಹೊರಗೆ ಯಾವದೊ ದೇವಸ್ಥಾನದಲ್ಲಿ ಕಾರ್ತೀಕದ ಮೊದಲದಿನವನ್ನ ಬರಮಾಡಿಕೊಳ್ಳುವ ಸಂಭ್ರಮದ ಜಾಗಟೆ.
ಡಾಕ್ಟರಿಣಿ ಮಗಳ ಕಾಲೆತ್ತಿ ನೇತಾಡಿಸಿದಳು. ಅದು ಚೆನ್ನಾಗಿ ಕಣ್ಣುಬಿಟ್ಟು ನೋಡಿತು. ತಿರುವುಮುರುವು ಪ್ರಪಂಚ. ಇವಳೂ ಇದೇ ನೋವು ತಿನ್ನಬೇಕೆ ಅಂದುಕೊಂಡೆ.
’ಅದೇನು ಹಠ ನಿಮ್ಮ ಮನೆಯವರಿಗೆ!! ಒಂದುಸಾರಿಯಾದ್ರು ಅಮ್ಮಾ ಅನ್ನಲಿಲ್ಲವಲ್ಲ!!’ ಡಾಕ್ಟರಿಣಿ ನನ್ನವನಿಗೆ ಹೇಳುತ್ತಿದ್ದಳು.
ಅದು ಹೇಗೆ ನಮ್ಮಂಥ ಮೂರು ಮಕ್ಕಳನ್ನು ಹಡೆದು ಸಾಕಿದಳೋ ಅಮ್ಮ? ನಾನು ಅಪ್ಪನ ಮೇಲಿನ ಕೋಪವನ್ನ ಅವಳ ಮೇಲೆ ಯಾಕೆ ತೀರಿಸಿಕೊಂಡೆ? ಅವಳು ಯಾವತ್ತೂ ನೀನು ಮನೆಗೆ ಬರಬೇಡ ಅನ್ನಲಿಲ್ಲ. ಅಷ್ಟಕ್ಕೂ ಅವಳಿಗೆ ನಾನು ಗರ್ಭಿಣಿ ಅಂತಲೇ ತಿಳಿಸಲಿಲ್ಲ.
ಆ ಮನೆಯನ್ನ ನಾನು ಪುನಹ ನೋಡಲಾರೆನೆನ್ನುವ ಹಳಹಳಿ ತಿನ್ನತೊಡಗಿದ್ದ ಸಮಯ. ಇವ ಕೇಳಿದ, ’ಹನಿ… ಯು ಹ್ಯಾವ್ ಟು ಡಿಸೈಡ್ ವ್ಹೇರ್ ಯು ಬಿಲಾಂಗ್.’ ನಾನು ನಿರ್ಧರಿಸಿಬಿಟ್ಟೆ. ನನ್ನದೊಂದು ಮನೆ ಸಿಕ್ಕಿತಲ್ಲ ಅನ್ನುವ ಸಡಗರ ಎಲ್ಲ ಮರೆಸಿತು. ಆಗಾಗ ರಾತ್ರಿ ಹೊತ್ತು ಚಿಕ್ಕಿಗಳನ್ನ ದಿಟ್ಟಿಸುತ್ತ ಯಾಕೆ ಬಿಕ್ಕಳಿಸುತ್ತಿದ್ದೆನೊ ತಿಳಿಯುತ್ತಿರಲಿಲ್ಲ. ಈಗ ನೋಡಿದರೆ ನಾನೆ ಅಮ್ಮನಾಗಿ ನನ್ನ ಅಮ್ಮ ಅಜ್ಜಿಯಾಗಿ ತುಂಬ ಏನೇನೋ ಆಗಿಹೋಗಿದೆ.
ವಿಪರೀತ ಹಸಿವು. ಅಮ್ಮನ ಕೈಯ ಅಡುಗೆ ನೆನಪಾಗತೊಡಗಿತು.
ಭೂತದೊಳಗೆ ಹೂತುಹೋಗಿದ್ದ ಅಜ್ಜಿಯ ಬೆಚ್ಚಗಿನ ಕೈ ಕೂಡ.

**********************

ಅಜ್ಜಿ ನನ್ನನ್ನು ಪ್ರೀತಿಯಿಂದ ‘ಶಮನ್’ ಅಂತ ಕರೀತಿದ್ದಳು. ಆ ಹೆಸರಿನ ಅರ್ಥ ಏನು, ನನ್ನನ್ನ ಯಾಕೆ ಹಾಗೆ ಕರೀತಿದ್ದಳು – ಗೊತ್ತಿಲ್ಲ. ನಾನು ನೋಡಿದಾಗೆಲ್ಲ ಆಕೆ ಮನೆಯ ಒಳಕೋಣೆಯ ಕಿಟಕೀಬದಿ ಹಾಸಿದ್ದ ಹಾಸಿಗೆಯಲ್ಲಿ ಮಲಗಿಕೊಂಡೆ ಇರುತ್ತಿದ್ದಳು. ಆಕೆಯನ್ನು ಕಂಡರೆ ’ಇವಳದ್ದೆ ಗಮ್ಮತ್ತು!’ ಅಂದುಕೊಳ್ಳುತ್ತಿದ್ದ ನನಗೆ ಸ್ವಲ್ಪ ಹೊಟ್ಟೆಯುರಿ ಕೂಡ ಆಗುತ್ತಿದ್ದುದುಂಟು. ಆಕೆಯನ್ನ ಸ್ನಾನ, ಶೌಚಾದಿಗಳಿಗೆ ಎತ್ತಿಕೊಂಡೆ ಹೋಗಬೇಕಾಗಿತ್ತು. ಅವಳಿಗೆ ಏನಾಗಿತ್ತು, ಆಕೆ ಅಮ್ಮನ ಥರ ಅಥವ ಬೇರೆ ಹೆಂಗಸರ ಥರ ಏಕಿರಲಿಲ್ಲ, ಇವೆಲ್ಲ ತಿಳಿವ ವಯಸ್ಸು ಆಗ ನನ್ನದಲ್ಲ. ನನ್ನ ಪ್ರಪಂಚ ಮನೆಯ ಹಿತ್ತಲು, ಅಂಗಳಗಳ ದಿಣ್ಣೆಗಳು ಹಾಗೂ ಮನೆಯೆದುರಿನ ಮಾವಿನತೋಪಿನ ಮರಗಳ ಸುತ್ತಮುತ್ತ ಸಿಲುಕಿಕೊಂಡು ಸಾಕಷ್ಟು ಪುಟ್ಟದಾಗಿಯೆ ಇತ್ತು.

ದಿನಕ್ಕೊಂದು ಸಾರಿಯಾದರೂ ಆಕೆಯ ಪಕ್ಕ ಹೋಗಿ ಸುಮ್ಮನೆ ಕುಳಿತುಕೊಳ್ಳುತ್ತ ಇದ್ದೆ. ಆಗೆಲ್ಲ ಆಕೆಯ ಕಣ್ಣು ಮಿನುಗುತ್ತಿದ್ದವು. ತನ್ನ ಮುರುಟಿದ ಕೈಯಲ್ಲಿ ನನ್ನ ಪುಟ್ಟ ಕೈಯನ್ನಿಟ್ಟುಕೊಂಡು ಆಕೆ ಕಥೆ ಹೇಳಲಿಕ್ಕೆ ಶುರುಮಾಡುವಳು. ನನಗೆ ಅವಳು ಯಾವಾಗಲು ಹೇಳುತ್ತಿದ್ದಿದ್ದು ಒಂದೇ ಕಥೆ. ಆ ಕಥೆಯಲ್ಲಿ ಒಂದು ಗುಬ್ಬಿ, ಒಂದು ಕಾಗೆ ಪಕ್ಕಪಕ್ಕ ಗೂಡು ಕಟ್ಟಿಕೊಂಡಿರುತ್ತಿದ್ದವು. ಕಾಗೆಯ ಗೂಡು ಉಪ್ಪಿನದು, ಗುಬ್ಬಿಯ ಗೂಡು ಕಲ್ಲಿನದಾಗಿರುತ್ತಿತ್ತು. ಇಷ್ಟರ ಸುತ್ತ ಆಕೆ ಕಥೆಯನ್ನು ಬೇರೆಬೇರೆ ಥರ ಹೆಣೆಯುತ್ತಿದ್ದಳು. ಒಂದು ಸಾರಿ ಗೂಡುಗಳಿದ್ದ ಜಾಗಕ್ಕೆ ಸುಂಟರಗಾಳಿ ಬಂದರೆ, ಇನ್ನೊಮ್ಮೆ ಮಳೆ ಸುರಿಯುತ್ತಿತ್ತು. ಒಮ್ಮೆ ಕಥೆ ಆಹಾರ ಒಟ್ಟುಹಾಕುವುದರ ಬಗ್ಗೆ ಇದ್ದರೆ ಇನ್ನೊಮ್ಮೆ ಮೈಬಗ್ಗಿಸಿ ಕೆಲಸಮಾಡುವುದರ ಬಗ್ಗೆ ಇರುತ್ತಿತ್ತು. ನಿಜ ಹೇಳಬೇಕೆಂದರೆ ನನಗೆ ಕಥೆಯಲ್ಲಿ ಆಸಕ್ತಿಯೇ ಇರುತ್ತಿರಲಿಲ್ಲ. ಅವಳ ಸುಕ್ಕುಬಿದ್ದಿದ್ದ ಕೆನ್ನೆ, ಕೈಗಳ ಚರ್ಮ, ಮಧ್ಯ ಬೈತಲೆ ತೆಗೆದ ಸಾಕಷ್ಟು ದಟ್ಟವಿದ್ದ ಬೆಳ್ಳಿಯಂಥ ಕೂದಲು, ಬೊಚ್ಚುಬಾಯಿ, ತುಟಿಯಂಚಿನಲ್ಲಿ ಸಂಗ್ರಹವಾಗುವ ಜೊಲ್ಲು – ಇವುಗಳ ಬಗೆಗೇನೆ ನನಗೆ ಹೇಳಲಾರದಷ್ಟು ಕುತೂಹಲ ಇದ್ದದ್ದು. ಕಥೆಗೆ ಅವಶ್ಯಕವಾಗಿದ್ದ ‘ಹೂಂ’ಗುಟ್ಟುವಿಕೆಯನ್ನೂ ಮರೆತು ಅವಳನ್ನೆ ದಿಟ್ಟಿಸುತ್ತ ಕುಳಿತುಬಿಡುತ್ತಿದ್ದೆ. ಆಕೆಗೂ ಅದು ಗೊತ್ತಾಗುತ್ತ ಇತ್ತೇನೊ. ಕಥೆಯನ್ನ ಅಲ್ಲಿಗೇ ನಿಲ್ಲಿಸಿ ನನ್ನ ತಲೆಯನ್ನ ಇನ್ನೊಂದು ಕೈಯಿಂದ ಮೆಲ್ಲಗೆ ನೇವರಿಸುತ್ತಿದ್ದಳು. ಆಕೆಯ ಕೈ ಯಾವಾಗಲು ಬೆಚ್ಚಗಿರುವುದು.

ಅವಳಿದ್ದಾಗ ಮನೆತುಂಬ ಹೆಂಗಸರು ಮಕ್ಕಳು, ಯಾರುಯಾರೊ. ಅವರಿಗೆಲ್ಲ ಊಟ ತಿಂಡಿ ಕಾಫಿ ಶರಬತ್ತುಗಳ ನಿರಂತರ ಪೂರೈಕೆ. ಎಲ್ಲರೂ ಅವಳಿಗೆ ಬೇಕು. ಒಂದು ಕಡೆ ಮನೆಯ ಆಥರ್ಿಕ ಪರಿಸ್ಥಿತಿ ಸರಿದೂಗಿಸಲು ಅಮ್ಮ ಹೆಣಗಾಡುತ್ತ ಇದ್ದರೆ ಇನ್ನೊಂದು ಕಡೆಯಿಂದ ಅದೆಲ್ಲ ಸೋರಿಕೊಂಡು ಹೋಗುತ್ತಲೆ ಇತ್ತು. ಹಿಂಡಿ ಬಳಿದು ಸಾರಿಸಿ ಹೋಗುವವರ ಸಂಖ್ಯೆಯೂ ಜಾಸ್ತಿ ಆಗುತ್ತಲೆ ಇತ್ತು. ಒಲೆ ಬೆಳಿಗ್ಯೆ ಹೊತ್ತಿದರೆ ಆರುತ್ತಿದ್ದಿದ್ದು ರಾತ್ರಿಯೆ. ಬಂದು ಹೋಗುವವರ ನಿರಂತರ ಮೆರವಣಿಗೆಯನ್ನು ನೋಡುತ್ತ ನಾನು ಅಜ್ಜಿಯ ಕರೀ ಮರದ ಪೆಟ್ಟಿಗೆಯ ಮೇಲೆ ಕೂತುಕೊಂಡಿರುವುದು. ಪಕ್ಕದಲ್ಲಿ ಒಂದಿಷ್ಟು ಗೊಂಬೆಗಳು. ನಾನು ಆ ವಯಸ್ಸಿನಲ್ಲಿ ಮಕ್ಕಳಿಗೆ ಸಹಜವಾಗಿರಬಹುದಾದ ಎಲ್ಲ ಕುಟಿಲತೆಯನ್ನು ಒಳಗೂಡಿಸಿಕೊಂಡು ಆಕೆ ನಿದ್ದೆಹೋಗುವುದನ್ನೆ ಕಾಯುವೆ. ಆಕೆ  ಕಣ್ಣು ಮುಚ್ಚಿಕೊಂಡ ಕೂಡಲೆ ಮೆಲ್ಲಗೆ ಪೆಟ್ಟಿಗೆಯಿಂದಿಳಿದು ಆಕೆಯ ಹಳೆಯ ಹಾಸಿಗೆಯ ಪಕ್ಕದ ಕೆಂಪು ನೆಲದ ಮೇಲೆ ಕುಳಿತು ಅವಳ ಮೂಗು, ನಿದ್ರೆಯಲ್ಲಿ ಅರೆತೆರೆದ ಬಾಯಿ, ಮುಖದ ಸುಕ್ಕಿನ ಗೆರೆಗಳು- ಎಲ್ಲವನ್ನು ಪರೀಕ್ಷಿಸುತ್ತಿದ್ದೆ. ಆಕೆ ಕಣ್ಣು ತೆರೆದ ಕೂಡಲೆ ಅಲ್ಲಿಂದೆದ್ದು ಓಟಕೀಳುತ್ತಿದ್ದೆ. ಅಜ್ಜಿಯ ಕಣ್ಣುಗಳಲ್ಲಿ ನನ್ನನ್ನು ಹೆದರಿಸುವಂತಹದೇನೊ ಇತ್ತು. ಆಕೆಯ ಕಣ್ಣುಗಳು ಗುಳಿಗಳಲ್ಲಿ ಹೂತುಹೋದ ಹಾಗೆ ಒಳಹೋಗಿಬಿಟ್ಟಿದ್ದವು.

ಹೀಗೇ ಒಂದು ಸಂಜೆ ನಾನು ಅಜ್ಜಿ ಎನ್ನುವ ಅಜ್ಜಿಯ ರೂಮಿನಿಂದ ಅಡಿಗೆ ಮನೆಗೆ ಹೋಗುತ್ತಿರುವಾಗ ’ಶಮನ್, ಇಲ್ಬಾ ಮಗಳೆ ನೋಡೋಣ!” ಎಂದು ಆಕೆ ಕರೆದಳು. ಆಕೆಯ ಬಳಿ ಕುಳಿತೆ. ಮುಂಚಿನ ಹಾಗೇ ನನ್ನ ಕೈ ಹಿಡಿದುಕೊಂಡಳು. ಅವತ್ತೂ ಅವಳ ಕೈ ಬೆಚ್ಚಗಿದ್ದರೂ ಕೊಂಚ ಜಾಸ್ತಿಯೇ ನಡುಗುತ್ತಿದ್ದ ಹಾಗೆನಿಸಿತು. ನಾನು ಕಥೆ ಹೇಳಲ? ಅಂದವಳು ನನ್ನ ಅನುಮತಿಗೂ ಕಾಯದೆ ಅದೇ ಹಳೆಯ ಕಾಗೆ ಗುಬ್ಬಿಯ ಕಥೆ ಶುರು ಹಚ್ಚಿದಳು. ಇನ್ನೂ ಕಥೆ ಮುಗಿದಿರಲಿಕ್ಕಿಲ್ಲ, ಇದ್ದಕ್ಕಿದ್ದ ಹಾಗೆ – ’ನನಗೆ ನಿದ್ದೆ ಬರ್ತದೆ ಮಗಳೆ. ಎಲ್ಲಿ, ಕಾಲ ಹತ್ತಿರ ಸರಿಯಾಗಿ ಹೊದಿಸು ನೋಡೋಣ?’ ಅಂತಂದಳು. ಅವತ್ತು ಆಕೆ ಬಹಳ ಬೇಗ ನಿದ್ದೆಹೋದಳು. ಅವತ್ತೂ ಎಂದಿನ ಹಾಗೇ ನಾನು ಅವಳನ್ನ ದೀರ್ಘವಾಗಿ ನೋಡಿದೆ. ಅವಳ ಹರವಿಕೊಂಡಿದ್ದ ಕೂದಲು ನಾವು ‘ಅಜ್ಜನಗಡ್ಡ’ ಎಂದು ಕರೆಯುತ್ತಿದ್ದ ಮಿಠಾಯಿಯ ತರಹ ಕಂಡಿತು.

ಮಾರನೆದಿನ ಬೆಳಗ್ಗೆದ್ದರೆ ಮನೆತುಂಬ ಜನ. ಅಮ್ಮ ಗೋಡೆಗೊರಗಿ ಅಳುತ್ತಿದ್ದಿದ್ದು ಕಾಣಿಸಿತು. ಯಾರೊ ನನ್ನನ್ನ ಪಕ್ಕದ ಮನೆಗೆ ಎತ್ತಿಕೊಂಡುಹೋದರು. ನನ್ನ ಮುಖ ತೊಳೆಸಿದ ಪಕ್ಕದ ಮನೆಯ ಸುಜಾತಮ್ಮ ಒಂದು ಕೋಣೆಯಲ್ಲಿ ಕೂರಿಸಿ ಬೆಲ್ಲ, ಸಿಹಿ ಹಾಲು ಕೊಟ್ಟರು. ನಾನು ಮಂಚ ಹತ್ತಿ ಕಿಟಕಿಯಿಂದ ಹೊರಗಿಣುಕಿದೆ. ಹಿತ್ತಲಿನಲ್ಲಿ ಭರ್ತಿ ಜನ. ’ಮನೆಗ್ಹೋಗ್ಬೇಕೂ!!’ ಕೂಗಾಡಲು ಶುರುಮಾಡಿದೆ. ಸುಜಾತಮ್ಮ ಹೊರಗಿನಿಂದ ಚಿಲಕ ಹಾಕಿಕೊಂಡರು. ಕೋಣೆಯ ಸಾಮಾನೆಲ್ಲ ನನ್ನ ಕೋಪಕ್ಕೆ ಸಿಕ್ಕಿ ಚೆಲ್ಲಾಡಿದವು. ನನ್ನ ರಂಪ ತಾಳಲಾಗದಲೆ ಸುಜಾತಮ್ಮನ ಮಗಳು ಚಿತ್ರಾ ಅಗುಳಿ ತೆರೆದಳು. ಮನೆಗೆ ಓಡಿಬಂದು ನೋಡುತ್ತೇನೆ. ಅಜ್ಜಿಯ ಹಾಸಿಗೆ ಕೌದಿ ಎಲ್ಲ ಸುತ್ತಿಟ್ಟಿದ್ದಾರೆ. ಆಮೇಲೆಬಹಳ ಕೂಗಾಡಿದೆನೆಂದು ಕಾಣುತ್ತದೆ. ನಿದ್ದೆ ಬಂದುಬಿಟ್ಟಿತು. ಎಚ್ಚರವಾದಾಗ ಕತ್ತಲು. ಅಮ್ಮನ ಬಳಿ ಹೋಗಿ ಕೇಳಿದೆ, ’ಅಜ್ಜಿ ಎಲ್ಲಿ?” ಅಮ್ಮ ಅಂಗಳಕ್ಕೆ ಕರೆದುಕೊಂಡುಹೋಗಿ ಆಕಾಶಕ್ಕೆ ಬೆಟ್ಟುಮಾಡಿ ತೋರಿದಳು. ರಾಶಿ ನಕ್ಷತ್ರಗಳ ನಡುವೆ ಜೋರಾಗಿ ಕಾಣುತ್ತಿದ್ದ ಚಿಕ್ಕಿಯೊಂದನ್ನು  ತೋರಿಸಿ, ’ಇನ್ಮುಂದೆ ನಿನ್ನಜ್ಜಿ ಅಲ್ಲಿರ್ತಾರೆ’ ಅಂದಳು. ನಾನು ನೋಡಿದೆ. ಆ ನಕ್ಷತ್ರಕ್ಕೆ ಅಜ್ಜನಗಡ್ಡದ ತರಹ ಕೂದಲಿಲ್ಲ, ಗುಳಿಬಿದ್ದ ಕಣ್ಣುಗಳಿಲ್ಲ, ಬೆಚ್ಚಗಿನ ಕೈಗಳಿಲ್ಲ, ಸುಕ್ಕುಬಿದ್ದ ಮುಖವಂತೂ ಇಲ್ಲವೇ ಇಲ್ಲ. ’ಇದು ಅವಳಲ್ಲವೇ ಅಲ್ಲ” ಅನ್ನಿಸಿಬಿಟ್ಟಿತು. ಆಕೆ ಸತ್ತುಹೋದ ಸುಮಾರುದಿನಗಳವರೆಗು ಮಲಗಿದಾಗೆಲ್ಲ ಆಕೆ ’ಮಗಳೇ!’ ಎಂದು ಕರೆದಹಾಗಾಗಿ ಎದ್ದು ಕೂತುಬಿಡುತ್ತಿದ್ದೆ. ’ಸತ್ತವರು ಏನಾದರು ಕೆಲಸ ಅರ್ಧಕ್ಕೆ ಬಿಟ್ಟುಹೋಗಿದ್ದರೆ ಕಾಗೆಯಾಗಿ ಹುಟ್ಟಿ ಮನೆಯ ಹತ್ತಿರವೆ ಇರ್ತಾರೆ” ಎಂದು ಮುದುಕಿ ಗುಲಾಬಿ ಹೇಳಿದ್ದು ಕೇಳಿಕೊಂಡು ಮನೆಯ ಹಿತ್ತಲಿಗೆ ಬರುವ ಕಾಗೆಗಳಲ್ಲಿ ಅಜ್ಜಿಯ ತರಹದ ಕಾಗೆಯನ್ನು ಹುಡುಕುತ್ತಿದ್ದೆ. ಇದ್ದುದರಲ್ಲಿ ನನ್ನನ್ನ ಜಾಸ್ತಿಹೊತ್ತು ದುರುಗುಟ್ಟುವ ಕಾಗೆಯೆ ಅಜ್ಜಿ ಎಂದು ನಿರ್ಧರಿಸಿ ಅದಕ್ಕೆ ಇದ್ದ ತಿಂಡಿಯನ್ನೆಲ್ಲ ತಂದುಹಾಕುತ್ತಿದ್ದೆ. ಆಕೆ ಕಾಗೆಯಾಗಿರುವುದು ನನಗೆ ಖಾತ್ರಿಯಾಗಿತ್ತು. ಅವಳು ನನಗೆ ಹೇಳುತ್ತಿದ್ದ ಕಥೆ ಪೂರ್ತಿಯಾಗಿರಲಿಲ್ಲವಲ್ಲ!!

**********************

’ಹೀಗೆ ಇವರು ಮಾಡಿದ್ರೆ ನಾಳೆ ನಮಗೆ ಚಿಪ್ಪೇ ಗತಿ! ಮನೆ ರಿಜಿಸ್ಟರ್ ಮಾಡ್ಕೊಳೋದರಲ್ಲಿ ಇಂಟರೆಸ್ಟೇ ಇಲ್ಲ. ಎಲ್ಲ ಕಾದಿದಾರೆ ಸಿಕ್ಕಿದ್ನ ಮುಕ್ಕೋಕೆ. ಈ ಮನುಷ್ಯಾನೋ, ಇರೋದನ್ನೂ ಕಳೀತೀನಿ ಅಂತ ಮನಸ್ಸು ಮಾಡ್ಬಿಟ್ಟಿದೆ!! ತಲೆಮೇಲೆ ಸೂರು ಅಂತ ಈಗೇನೋ ಇದೆ. ಅದೂ ನಾಳೆಗೆ ಇವ್ರ ಹೆಡ್ಡತನದಿಂದ ಹೊಂಟೋಗತ್ತೆ ಅಷ್ಟೆ!!’

ಕಾಲೇಜು ಮುಗಿಸಿ ಬಂದು ಕೂತು ಕಾಫಿಕುಡಿಯುತ್ತಿದ್ದವಳ ಬಳಿ ಅಮ್ಮ ಸಿಟ್ಟು ಕಾರುತ್ತಿದ್ದಳು. ಮರುದಿನ ಹಬ್ಬ. ಕಟ್ಟೆಯಲ್ಲಿ ಸಾಲಾಗಿ ಮಣ್ಣಿನ ದೀಪಗಳು ಎಣ್ಣೆಯ ದಾರಿ ಕಾದು ಕೂತಿದ್ದವು. ಅಪ್ಪ ತನ್ನ ಪಾಲಿನ ಜಗಳವಾಡಿ ಚಪ್ಪಲಿ ಮೆಟ್ಟಿಕೊಂಡು ಆಚೆ ಹೊರಟುಬಿಟ್ಟಿದ್ದ. ಅಮ್ಮನ ಒಡಲಲ್ಲಿ ಭದ್ರವಾಗಿ ಕೂತಿದ್ದ ವರುಷಗಳ ಬೆಂಕಿ ಹೊರಬರಲು ದಾರಿ ಹುಡುಕುತ್ತ ಇತ್ತು. ನಾನು ಕೊಂಚ ಸಾಂತ್ವನದ ತುಪ್ಪ ಹಾಕಿದೆ.

’ನಿನ್ನಜ್ಜಿ ಕಾಲದಿಂದಲೂ ಇದೇನೆ ಹಿಂಸೆ. ಈ ಮನೆಗೋಸ್ಕರ ಸತ್ತೆ ನಾನು. ನಾನು ಈ ಮನೆ ಹೊಸಿಲು ತುಳಿದಾಗ ಏನಿತ್ತು ನಿನ್ನಜ್ಜಿ ಹತ್ರ? ಬರೆ ನಾಲಕ್ಕು ಮಡಕೆ. ಯಾರೊ ಕೊಟ್ಟ ನಾಲಕ್ಕು ಪಿಂಗಾಣಿ ಪಾತ್ರೆ. ಒಂದೊಂದೆ ಕಾಳು ಸೇರಿಸೀ ಸೇರಿಸೀ ಇದೆಲ್ಲ ಮಾಡಿದೆ. ನಿನ್ನಜ್ಜಿ ಜಿದ್ದಿನಲ್ಲಿ ಎಲ್ಲಾರ್ನ ಮನೆಗೆ ಕರೆದೂ ಕರೆದೂ ಕೊಡೋರು. ಮನೇಲಿ ಕರೀತಿದ್ದ ಆಕಳು. ಒಂದು ತೊಟ್ಟು ಹಾಲು ಉಳಿಸ್ತ ಇರ್ಲಿಲ್ಲ ನಂಗೆ.. ದೊಡ್ಡಮಗನ ಮನೆಗೆ ಗುಟ್ಟಾಗಿ ಕಳಿಸಿಬಿಡೋರು. ನಾನು ನಿನ್ನ ಬಾಣಂತನದಲ್ಲಿ ಕುಡಿಯೋಕೆ ಹಾಲಿಲ್ಲದೆ ಕೊನೆಗೆ ವರ್ತನೆ ಹಾಕಿಸಿಕೊಳೋಕೆ ಶುರುಮಾಡಿದೆ. ಅದೇನು ಬಾಣಂತನಾ ಮಾಡಿಕೊಂಡ್ನೋ? ದುಡ್ಡು ಕೊಟ್ಟರೆ ಇಸ್ಕೋತಲೇ ಇರ್ಲಿಲ್ಲ. ದುಡಿಯೋ ಸೊಸೇ ಮೇಲೆ ಅದೇನೋ ದ್ವೇಷ. ದೇವರ ಮನೇಲಿ ಇಟ್ಟುಬಿಡ್ತಿದ್ದೆ ದುಡ್ನ. ಯಾರುಯಾರನ್ನೋ ಕೂರಿಸಿಕೊಂಡು ನನ್ನಮೇಲೆ ಗಂಟೆಗಟ್ಲೆ ಏನೇನೊ ಗುಸುಗುಸು ಅನ್ನೋರು. ನಾನು ಇವರ ಮನೆ, ಆಸ್ತಿ ಅಂತ ನೋಡಿಕೊಂಡು ಮದುವೆ ಆದೆನಂತೆ. ಅದನ್ನೆ ನೊಡೋದಾಗಿದ್ರೆ ನಿಮ್ಮಪ್ಪನೆ ಬೇಕಿತ್ತ ನನಗೆ? ಎಂಥ ಮನೆ ನನ್ನದು ಗೊತ್ತಾ? ಎಲ್ಲ ಬಿಟ್ಟು ಇಲ್ಲಿ ಬಂದರೆ ಕೊನೆಗೊಂದು ಗೂಡೂ ಇಲ್ಲದ ಹಾಗೆ ಮಾಡ್ತಿದೆ ನಿನ್ನಪ್ಪ…’

ಬತ್ತಿ ಹೊಸೆದುಕೊಂಡು ಸುಮ್ಮನೆ ಕೂತುಕೊಂಡಿದ್ದೆ. ಹೊರಗೆ ಮಕ್ಕಳು ಪಟಾಕಿ ಪಿಸ್ಟೂಲು ಹಿಡಿದುಕೊಂಡು ಪಟ್ ಪಟ್ಟೆನ್ನಿಸುತ್ತಿದ್ದವು. ಹಿಂಸೆ ಅನ್ನಿಸಿತು. ಅಲ್ಲಿಯತನಕ ಅಜ್ಜಿಯ ಸುತ್ತ ನಾನೆ ಕಟ್ಟಿಕೊಂಡಿದ್ದ ಸುಮಾರು ಕೋಟೆಕೊತ್ತಲಗಳು ಸಮಾಧಿ ಸೇರತೊಡಗಿದವು. ಮತ್ತೂ ಅಮ್ಮನ ಕೆದಕಿದೆ. ಅಜ್ಜಿ ಸತ್ತ ದಿನ ದೊಡ್ಡಪ್ಪನಿಗೂ ಅಪ್ಪನಿಗೂ ನಡೆದ ಜಗಳ, ಅದರಲ್ಲಿ ಮನೆಯ ಬಗ್ಗೆ ನಡೆದ ಮಾತುಗಳು, ಅಜ್ಜಿಗೆ ಅಮ್ಮ ಕೊಡುತ್ತಿದ್ದ ದುಡ್ಡಿನ ಬಗ್ಗೆ ಬಂದ ಹೀಯಾಳಿಕೆ, ಅಪ್ಪನ ಕೋಪ, ಅಮ್ಮನ ತಾಳ್ಮೆ…

ಸಾವಿನ ನಂತರ ಎಲ್ಲರೂ ಸೇರಿ ಅಮ್ಮನನ್ನು ದೂರವಿಟ್ಟು ಅಜ್ಜಿಯ ಪೆಟ್ಟಿಗೆ ಜಾಲಾಡಿಬಿಟ್ಟಿದ್ದರು. ಅಮ್ಮನಿಗೆ ಅಜ್ಜಿಯ ಬಟ್ಟೆಯ ತುಂಡೂ ದಕ್ಕಲಿಲ್ಲ. ಸತ್ತ ಅಜ್ಜಿ ತನ್ನ ಗೂಡು ಬಿಡಲು ಸಿದ್ಧಳಿರಲಿಲ್ಲ. ಹೋಗುವ ಮೊದಲು ಹಾಸಿಗೆಯಲ್ಲಿ ಮಲಗಿಕೊಂಡೆ ಎಲ್ಲರ ನಡುವೆ ಸುಮಾರು ಗೋಡೆಗಳನ್ನೆಬ್ಬಿಸಿಬಿಟ್ಟಿದ್ದಳು. ಎಲ್ಲರನ್ನೂ ಅವರವರ ಗೂಡುಗಳಿಗೆ ಸೇರಿಸಿ ವಾಪಾಸು ಒಂದೇ ಕಡೆ ಸೇರದ ಹಾಗೆ ನೋಡಿಕೊಂಡಿದ್ದಳು.

ಅಮ್ಮ ಗುಬ್ಬಿ, ಅಪ್ಪ ಕಾಗೆ ಅಂದುಕೊಂಡೆ. ಅಜ್ಜಿ ಇದ್ದಿದ್ದರೆ ಇವರಿಬ್ಬರನ್ನ ಪಾತ್ರಗಳನ್ನಾಗಿ ಮಾಡಿ ಯಾವ ಹೊಸ ಗೂಡಿನ ಕಥೆ ಹೇಳುತ್ತಿದ್ದಳೊ ಅಥವ ಅವಳು ಅಷ್ಟುಸಾರೆ ಹೇಳಿದ್ದು ಅವರದೆ ಕಥೆಯೊ, ಯೋಚಿಸತೊಡಗಿದೆ.

 

(ಕನ್ನಡಪ್ರಭ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾಗಿದೆ)                                    ಚಿತ್ರಕೃಪೆ: www.ny-image3.etsy.com

Comments (12)

Older Posts »