ನಾನು ಈಗಿನ ಬಹುಚರ್ಚಿತ ಚಲನಚಿತ್ರವಾದ ’ಕೋಟ್ಯಾಧಿಪತಿಯಾದ ಕೊಳೆಗೇರಿ ನಾಯಿ’ ಯನ್ನು ನೋಡಿ ಆನಂದಿಸಿ, ಅದರ ಬಗ್ಗೆ ಸಾಂಗತ್ಯದಲ್ಲಿ ಬರೆದು, ನನ್ನ ಬ್ಲಾಗೆಳೆಯರ ಬರಹಗಳನ್ನೂ ಓದಿ ಪುಳಕಿತಳಾಗಿರುವಾಗ ಒಂದು ಬರಹವು ಈ ಮೊದಲು ನನ್ನ ಗೃಧ್ರದೃಷ್ಟಿಯನ್ನು ಮೀರಿ ಅಡಗಿಕೊಂಡಿದ್ದುದು ನನ್ನ ವಿಶೇಷಪ್ರಝ್ನೆಗೆ ಅರಿವಾಯಿತು. ಮಾಯ್ಸನೆಂಬ ಈ ಮನುಷ್ಯಜೀವಿಯು ಇದನ್ನು ಊಂಕಿಸಿರುವನು. ಕೂಡಲೆ ಅದನ್ನು ಓದಿ ಗಹಗಹಿಸಿ ನಕ್ಕನಂತರ ಓದುಗಮಹಾರಥಿಗಳಾದ ತಮ್ಮ ಅವಗಾಹನೆಗೆಂದು ಇಲ್ಲಿ ನೀಡುತ್ತಿರುವೆನು. ಓದಿ ಅಟ್ಟಹಾಸಗೈದು ಪುನೀತರಾಗಬೇಕಾಗಿ (ಸ್ಪಷ್ಟನೆ: ಇಲ್ಲಿ ನಾನು ಯಾವ ಚಲನಚಿತ್ರ ನಟನ ಬಗ್ಗೆಗೂ ಮಾತನಾಡುತ್ತಿಲ್ಲ.) ನನ್ನ ಕಳಕಳಿಯ ವಿನಂತಿ.
Archive for January, 2009
ಯಾರು ಕೊಟ್ಟರು ಅವರಿಗೆ ಹಕ್ಕು?
ನೆನ್ನೆ ಗಣರಾಜ್ಯೋತ್ಸವದ ದಿನ ಮಂಗಳೂರಲ್ಲಿ ಕೆಲವು ಗಂಡಸರು(ಹೆಹ್!) ಒಂದು ರಾಜಕೀಯ ಸಂಘಟನೆಯ ಹೆಸರಿನಡಿ ನಡೆಸಿದ ‘ಸ್ಟಿಂಗ್ ಆಪರೇಷನ್’ನ ಫೂಟೇಜುಗಳನ್ನು ನೋಡುತ್ತ ಇದ್ದರೆ ಮೈ ಉರಿದುಹೋಗತೊಡಗಿತು. ಅಲ್ಲಿರುವವರು ಹೆಣ್ಣುಮಕ್ಕಳಿಗೆ ಸಹಾಯಹಸ್ತ ಚಾಚುವ ಬದಲು ತಮ್ಮಕ್ಯಾಮೆರಾಗಳ ಜತೆ ಬಿಜೀಯಾಗಿದ್ದಿದ್ದು ಇನ್ನೂ ರೇಜಿಗೆ ಹುಟ್ಟಿಸಿತು. ಹಲ್ಲೆ ನಡೆಸಿದವರ ಗಂಡಸುತನ ಕೇವಲ ಹೆಣ್ಣುಹುಡುಗಿಯರ ಮೇಲೆ ಮಾತ್ರ ಹೆಚ್ಚಾಗಿ ವಿಜೃಂಭಿಸಿದ್ದು. ಅವರ ತಲೆಗೂದಲಿಗೆ ಕೈಹಾಕಿ ಎಳೆಯುವಾಗ, ಅವರ ತಲೆಗಳಿಗೆ ಹೊಡೆದು ಓಡುವಾಗ, ಅವರನ್ನು ಕೆಳಗೆ ಹೊಡೆದು ಬೀಳಿಸುವಾಗ, ಅಶ್ಲೀಲ ಪದಗಳನ್ನುಪಯೋಗಿಸಿ ನಿಂದಿಸುವಾಗ ಇವರು ಸಂಸ್ಕೃತಿಯ ರಕ್ಷಣೆ ಮಾಡುತ್ತಿದ್ದರೊ, ಅಥವ ತಮ್ಮ ಮಾನಗೆಟ್ಟ ಸಂಸ್ಕೃತಿಹೀನತೆಯ ಪ್ರದರ್ಶನ ಮಾಡುತ್ತಿದ್ದರೊ ಅರ್ಥವಾಗಲೆ ಇಲ್ಲ ನನಗೆ. ಅಲ್ಲ, ಸಂಸ್ಕೃತಿಯ ರಕ್ಷಣೆಯ ಹೆಸರಿನಲ್ಲಿ ಪುಂಡಾಟ ನಡೆಸುವ ಇಂತಹ ಮುಖೇಡಿಗಳಿಗೆ ಹೆಣ್ಣುಮಕ್ಕಳೆ ಯಾವಾಗಲು ಸಿಗುವುದು ದುರಂತ. ಯಾವ ಸಂಸ್ಕೃತಿಯ ರಕ್ಷಣೆ ಮಾಡುತ್ತಿದ್ದಾರೆ ಇವರು? ನಮ್ಮ ಶಹರಗಳಲ್ಲಿ ಒಂದು ದೊಡ್ಡ ಮಾಫಿಯಾದಂತೆ ಹರಡಿರುವ ವೇಶ್ಯಾವಾಟಿಕೆ, ಮಾದಕವಸ್ತು ಹಾಗೂ ನೀಲಿಪರದೆಯ ಧಂಧೆಯವರನ್ನ ನೇರವಾಗಿ ಎದುರಿಸುವ ತಾಕತ್ತಿದೆಯೆ ಇವರಿಗೆ? ಇವರಿಗೂ ಅಫಘಾನಿಸ್ತಾನದಲ್ಲಿ ಬುರುಖಾ ಹಾಕದಿರುವ, ಶಾಲಾಕಾಲೇಜುಗಳಿಗೆ ಹೋಗುವ ಹೆಣ್ಣುಮಕ್ಕಳನ್ನು ಆಸಿಡ್ ಎರಚಿ ಶಿಕ್ಷಿಸುತ್ತೇವೆಂದು ಹೊರಟಿರುವ ತಾಲಿಬಾನ್ ಉಗ್ರರಿಗೂ ಏನು ವ್ಯತ್ಯಾಸ?
ಯಾರು ಕೊಟ್ಟರು ಹಕ್ಕು ಅವರಿಗೆ ಹೆಣ್ಣುಮಕ್ಕಳನ್ನು ಮುಟ್ಟಲು? ಹೇಗೆ ಹೇರಬಲ್ಲರು ಅವರು ನಮ್ಮ ಮೇಲೆ ಅವರ ಬಲವಂತದ ಸೋಕಾಲ್ಡ್ ‘ಸಂಸ್ಕೃತಿ’ಯ ಐಡಿಯಾವನ್ನ? ಹಾಗಿದ್ದರೆ ಯಾಕೆ ಧರಿಸುವುದಿಲ್ಲ ಅವರೆಲ್ಲ ಕೆಲಸಕ್ಕೆ ನಮ್ಮ ಸಂಸ್ಕೃತಿಯ ಪ್ರತೀಕವಾದ ಪಂಚೆ, ಶರಟು, ಟವೆಲುಗಳನ್ನ? ಅವರಿಗೆ ಮಾತ್ರ ಲೇಟೆಸ್ಟ್ ಫ್ಯಾಶನ್ನಿನ ಪ್ಯಾಂಟುಶರಟು, ಸೂಟುಬೂಟು. ಡ್ರೆಸ್ ಕೋಡ್ ಅಂತಿರೋದು ಬರೀ ಹೆಣ್ಮಕ್ಕಳಿಗೆ ಮಾತ್ರಾನೆ? ಇದನ್ನೆಲ್ಲ ಮಾಡುವುದು ಮಾತ್ರ ಸಂಸ್ಕೃತಿ ಅನ್ನೋದಾದರೆ ನನಗೆ ಆ ಸಂಸ್ಕೃತಿಗೆ ನಾನು ಸೇರಿದವಳಲ್ಲ ಅನ್ನುವುದಕ್ಕೆ ಹೆಮ್ಮೆಯಾಗುತ್ತದೆ. ನಾನು ಏನು ಉಟ್ಟುಕೊಳ್ಳಬೇಕು, ನಾನು ಎಲ್ಲಿ ಹೋಗಬೇಕು, ಹೇಗಿರಬೇಕು ಎಂದು ನಿರ್ಧರಿಸುವದು ಸಂಪೂರ್ಣವಾಗಿ ನನ್ನ ಹಕ್ಕು. ಅದನ್ನು ಯಾವನೋ ಮೂರನೆಯವ ಎಲ್ಲಿಯೋ ಕೂತು ನಿರ್ಧರಿಸಲು ಸಾಧ್ಯವಿಲ್ಲ. ನಮ್ಮದು ಇನ್ನೂ ಗಣತಂತ್ರ ಇರುವ ರಾಷ್ಟ್ರವಾಗಿರುವುದು ನಮ್ಮ ಪುಣ್ಯ. ಏಕೆಂದರೆ ಈ ಘಟನೆಯ ಹಿಂದಿರುವವರಿಗೆ ಯಾವುದೇ ರಾಜಕೀಯ ಆಕಾಂಕ್ಷೆಗಳು ಇದ್ದಿದ್ದಾದರೆ ಅದನ್ನು ಅವರು ಇನ್ನು ಮುಂದೆ ಮರೆಯುವುದೊಳ್ಳೆಯದು. ತಮ್ಮ ಕಾಲ ಮೇಲೆ ಕೊಡಲಿಯೇಟು ಹಾಕಿಕೊಳ್ಳುವ ಕೆಲಸವನ್ನೇ ಮಾಡಿರುವುದು ಅವರು.
ಸಂಸ್ಕೃತಿಯೆನ್ನುವುದು ನಿಂತು ನಾರುವ ಕೊಳಚೆಯಲ್ಲ, ಅದು ಹರಿವ ನದಿ. ಕೆಲವರು ಇನ್ನೂ ಅಪ್ಪ ಹಾಕಿದ ಆಲದ ಮರಕ್ಕೇ ನೇತುಹಾಕಿಕೊಳ್ಳುತ್ತೇನೆ ಎಂದು ಹೊರಡುವದನ್ನು ನೋಡಿದರೆ ಬೇಸರವಾಗುತ್ತದೆ. ಶತಮಾನಗಳಿಂದಲೂ ಅದೇ ದರಿದ್ರ ಬೆದರಿಕೆಗಳು, ಮೂಲೆಗುಂಪು ಮಾಡುವ ಸ್ಟೀರಿಯೋಟೈಪುಗಳು. ನೆನ್ನೆ ರಾತ್ರಿ ಉದಯ ಚ್ಯಾನೆಲ್ಲಿನಲ್ಲಿ ಈ ವಿಷಯವಾಗಿ ನಡೆದ ಚರ್ಚೆಯೊಂದರಲ್ಲಿ, ಹಲ್ಲೆಯನ್ನು ಡಿಫೆಂಡ್ ಮಾಡುವ ಭರದಲ್ಲಿ ಸೇನೆಯ ಪ್ರತಿನಿಧಿಯೊಬ್ಬರು ‘ನೀವು ಹೆಣ್ಮಕ್ಕಳು ಸೀತಾಮಾತೆಯ ಹಾಗಿರಿ, ನಾವು ನಿಮ್ಮ ಕಾಲು ತೊಳೆದು ಅದೇ ನೀರು ಕುಡೀತೇವೆ. ಸೀತೆಯನ್ನು ಪೂಜಿಸಿದ ಲಕ್ಷ್ಮಣ ಶೂರ್ಪನಖಿಯ ಮೂಗೂ ಕೊಯ್ದ ಅನ್ನೊದು ನೆನಪಿಡಿ!’ ಎಂದು ಸೂಕ್ಷ್ಮ ಬೆದರಿಕೆಯನ್ನು ಕೂಡ ಒಡ್ಡಿದರು. ಅದರ ಜತೆಗೇ ಸುಪ್ರೀಂ ಕೋರ್ಟು ಹೆಣ್ಣುಮಕ್ಕಳು ಬಾರು ಪಬ್ಬುಗಳಲ್ಲಿ ಕೆಲಸ ಮಾಡುವುದು ಅವರ ಹಕ್ಕು ಎಂದು ಹೊರಡಿಸಿರುವ ಸಂವಿಧಾನಾತ್ಮಕ ಆದೇಶದ ವಿರುದ್ಧ ಗಣರಾಜ್ಯ್ಯೋತ್ಸವದ ದಿವಸವೇ ಕೆಂಡಕಾರಿದರು! ಸೀತಾಮಾತೆಯ ಹಾಗೆ ಇರಬೇಕು ಅನ್ನುವ ಡಯಲಾಗು ಹಳೆಯದಾಯಿತು, ಅದನ್ನು ನಾವು ಮರೆತೂ ಬಿಟ್ಟಿದೇವೆ, ಯಾಕೆಂದರೆ ನಾವು ಹಾಗಿರಲು ಇಂದು ಸಾಧ್ಯವಿಲ್ಲ.
ಎಲ್ಲರೂ ಖಡಕ್ಕಾಗಿ ಈ ವಿಷಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬ ರಾಜಕೀಯ ನಾಯಕರು ಈ ವಿಷಯಕ್ಕೆ ಅನಗತ್ಯ ಪಬ್ಲಿಸಿಟಿ ನೀಡಲಾಗುತ್ತದೆ ಎಂದು ಬೇಸರಿಸಿಕೊಂಡಿದ್ದಾರೆ. ಒಬ್ಬ ರಾಜಕೀಯ ನಾಯಕನ ಮಗಳು ಅಥವಾ ಮಗನಿಗೆ ಎಷ್ಟು ಅಗತ್ಯ ಹಾಗೂ ಅನಗತ್ಯ ಪಬ್ಲಿಸಿಟಿ ನೀಡಲಾಗುತ್ತದೆ ಎಂದು ನಮಗೆ ಮಹಾನ್ ರಾಹುಲ್ ಮಹಾಜನನ ಕೇಸಿನಿಂದಲೆ ತಿಳಿದುಬಂದಾಗಿದೆ!! ಮತ್ತೆ ಕಾನೂನನ್ನು ಯಾರೊ ಗೂಂಡಾಗಳು ಕೈಗೆತ್ತಿಕೊಂಡ ಇಂತಹ ಘಟನೆಗಳಿಗೆ ಪಬ್ಲಿಸಿಟಿ ನೀಡದಿದ್ದರೆ ಇನ್ನಾವುದಕ್ಕೆ ನೀಡಬೇಕು? ಚುರುಕು ಮುಟ್ಟಲಿ ನಮ್ಮ ರಾಜಕೀಯ ನಾಯಕ, ನಾಯಕಿಯರಿಗೆ. ಮಂಗಳೂರು ಘಟನೆಯ ಪ್ರಚಾರಕ್ಕಾಗಿ ನಮ್ಮ ಮೀಡಿಯಾದವರಿಗೆ ಸಾವಿರ ಧನ್ಯವಾದ ಹೇಳಬೇಕು. ಈ ವಿಷಯವಾಗಿ ಹಲ್ಲೆ ಮಾಡಿದವರಿಗೆ ಏನು ಶಿಕ್ಷೆ ನೀಡಲಾಗುತ್ತದೆ ಎಂದು ನಾವೆಲ್ಲ ಕಾದುನೋಡುತ್ತಿದ್ದೇವೆ. ಪಬ್ಬಿನಲ್ಲಿ ಹೆಣ್ಣುಮಕ್ಕಳು ಕೂರುವದು ತಪ್ಪು ಅನ್ನುವವರು ಬೀದಿಬೀದಿಗಳಲ್ಲಿ ಕುಡಿದು ವಾಲಾಡುವ, ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಪ್ರತಿದಿನವೂ ನರಕ ತೋರಿಸುವ ಗಂಡಸರನ್ನು ಹಿಡಿದು ಏಕೆ ಬುದ್ಧಿ ಕಲಿಸಲು ಮುಂದಾಗಬಾರದು? ಸಂಸ್ಕೃತಿಯನ್ನು ಬೆಳೆಸಬಯಸುವವರು ಮಾಡಬಹುದಾದ ಕೆಲಸಗಳ ದೊಡ್ಡ ಪಟ್ಟಿಯೇ ಇದೆ. ಸಂಸ್ಕೃತಿ ಬಲವಂತದ ಹೇರುವಿಕೆಯಿಂದ ಉಳಿಯುವುದಿಲ್ಲ, ಬೆಳೆಯುವುದರಿಂದ, ಬದಲಾಗುವುದರಿಂದ ಉಳಿಯುತ್ತದೆ.
ಒಂದು ದನಿ.

ನನ್ನ ಗೆಳತಿಯೊಬ್ಬಳು ಸುಮ್ಮನೆ ಆತ್ಮಹತ್ಯೆ ಮಾಡಿಕೊಂಡುಬಿಟ್ಟಳು. ಅದಾದ ಎಂಟು ವಾರಕ್ಕೆ ಸರಿಯಾಗಿ ಇದು ಯಾರಿಂದಲೊ ನನಗೆ ತಿಳಿಯಿತು. ಕೆಲಕಾಲದ ಹಿಂದೆ ಸಂತಸದಿಂದ ಫೋನು ಮಾಡಿದ್ದ ಆಕೆಗೆ ಏನಾಯಿತೆಂದು ನನಗೆ ಅರ್ಥವೇ ಆಗಲಿಲ್ಲ. ಎಲ್ಲಕಿಂತ ಹೆಚ್ಚಾಗಿ ನನ್ನ ಕಾಡಿದ ವಿಷಯವೆಂದರೆ ಆಕೆ ಹುಟ್ಟಿನಲ್ಲಿ ನನಗಿಂತ ಕೇವಲ ಮೂರು ದಿನ ಸಣ್ಣವಳಾಗಿದ್ದಿದ್ದು. ನಮ್ಮ ಯೋಚನೆಗಳು, ಆಕಾಂಕ್ಷೆಗಳು, ಬೇಸರಗಳು, ಅಭ್ಯಾಸಗಳು, ಹವ್ಯಾಸಗಳು, ಎಲ್ಲವೂ ಒಂದೇ ರೀತಿ ಇದ್ದಿದ್ದು. ಬಾಕಿ ಗೆಳತಿಯರು ಮಲಗಿ ಗೊರಕೆ ಹೊಡೆಯುತ್ತಿದ್ದರೆ ನಾವು ರಾತ್ರಿಗಟ್ಟಲೆ ಹಾಸ್ಟೆಲಿನ ಬೆಂಚುಗಳನ್ನು ಸವೆಸುತ್ತ ನಾಳೆಯಿಲ್ಲವೆಂಬ ಹಾಗೆ ಹರಟುತ್ತಿದ್ದೆವು. ಆಕೆ ಚೆಂದವಾಗಿ ಹಾಡುತ್ತಿದ್ದಳು. ‘ಜಾನೆ ಕ್ಯೋಂ ಲೋಗ್ ಮುಹಬ್ಬತ್ ಕಿಯಾ ಕರ್ತೇ ಹೈಂ..’, ‘ಮನಸೆ ಓ ಮನಸೇ..’, ‘ಶೀಶಾ ಹೋ ಯಾ ದಿಲ್ ಹೋ’.. ಎಂದು ಮುಂತಾಗಿ ಆಕೆ ಹಾಡುತ್ತಿದ್ದರೆ ಹಾಸ್ಟೆಲು ಸ್ತಬ್ಧವಾಗಿಬಿಡುವುದು. ನಮ್ಮ ಕೆಟ್ಟ ಸೆನ್ಸ್ ಆಫ್ ಹ್ಯೂಮರ್ ಯಾರನ್ನೂ ಬಿಡುತ್ತ ಇರಲಿಲ್ಲ. ನಮ್ಮ ಬೇಸರಗಳು ಕೂಡ ನಮ್ಮ ನಗುವಿನೊಡನೆ ಸೇರಿ ಚೆಲ್ಲಾಪಿಲ್ಲಿಯಾಗಿಬಿಡುತ್ತಿದ್ದವು. ರಜೆಗಳಲ್ಲಿ ಆಕೆಯಷ್ಟೆ ಉರುಟಾದ ಅಕ್ಷರದ ಪತ್ರಗಳು ನನ್ನ ಕೈಸೇರುತ್ತ ಇದ್ದವು.
ಯಾರ ಸಾವೂ ನನ್ನನ್ನು ಇಷ್ಟು ಕಾಡಿರಲಿಲ್ಲ. ಭಯ ಹುಟ್ಟಿಸುವಷ್ಟು.. ಆಕೆಯೊಡನೆ ಆಕೆ ಇನ್ನೂ ಇದ್ದಾಳೆಂಬಂತೆ ಭಾವಿಸಿ ಮಾತಾಡುವಷ್ಟು… ಆಕೆಯ ಇಷ್ಟದ ಹಾಡುಗಳನ್ನು ಕೇಳಿದಾಕ್ಷಣ ಕಿವಿಮುಚ್ಚಿಕೊಳ್ಳುವಷ್ಟು… ಆಮೇಲಿಂದ ಬರೆಯಲೇ ಹಿಂಸೆ ಅನಿಸುವಷ್ಟು…ನನ್ನ ಫೋನಿನಲ್ಲಿ ಇನ್ನೂ ಅವಳ ಮೆಸೇಜಿದೆ. ಕಿವಿಯಲ್ಲಿ ಆಕೆ ಹೇಳಿದ ಕೊನೆಯ ಮಾತುಗಳು ಇನ್ನೂ ರಿಂಗಣಿಸುತ್ತಿವೆ – ’ನೀನು ಖುಶಿಯಾಗಿದೀಯ ತಾನೆ? ನಂಗಷ್ಟೆ ಸಾಕು. ಒಂದ್ಸಾರಿ ಸಿಗು. ಏನೇನೋ ಸಖತ್ ಹೇಳೋದಿದೆ..’. ಒಮ್ಮೆ ಬಂದು ಮಾತನಾಡಿಬಿಡೆ ಎಂದು ಆಕೆಯನ್ನು ಕರೆಯುತ್ತಲೆ ಇರುತ್ತೇನೆ. ಆಕೆ ಬರಲಾರಳು ಅನ್ನುವ ಹತಾಶೆ ಕೊರೆದು ತಿನ್ನುತ್ತದೆ. ನೋವಿಗೆ ಮಾತು ಬಂದರೆ ಕಡಿಮೆಯಾಗುವದಂತೆ. ನನ್ನ ಪಾಲಿಗೆ ಪದಗಳೇ ಮಾತು. ಕೆಳಗಿನ ಥಾಮಸ್ ಹಾರ್ಡಿಯ ಕವಿತೆ ‘ದ ವಾಯ್ಸ್’ ಅನ್ನು ಅವಳಿಗಾಗಿ ಈಗ ಕೂತು ಅನುವಾದಿಸಿದ್ದೇನೆ. ಗೀತಿ, ಇದು ನಿನಗೇನೆ.
ಒಂದು ದನಿ
ನೆನಪಾಗುವ ಹೆಣ್ಣೆ, ಹೇಗೆಲ್ಲ ನನ್ನ ಕರೆವೆ, ಕರೆವೆ ನನ್ನನೇ
ಹೇಳುವೆ, ಆಗಿನಂತೆ ನೀನಿಲ್ಲ ಇಂದು
ನನ್ನ ಸರ್ವಸ್ವವಾಗಿದ್ದಾಗ ಬದಲಾದ ಹಾಗಿರದೆ
ಮೊದಲು, ನಮ್ಮ ಹಗಲು ಚೆಲುವಿದ್ದಾಗ ಇದ್ದಂತಿರುವಿಯೆಂದು
ನನಗೆ ಕೇಳುವುದು ನಿನ್ನ ದನಿಯೆ? ಹಾಗಿದ್ದರೊಮ್ಮೆ ಕಾಣಿಸಿಕೊ
ನಾ ನಿನ್ನ ಕಾಣಲೆಂದು ಶಹರದ ಬಳಿ ಬಂದಾಗ
ನನಗಾಗಿ ಕಾಯುತ್ತಿದ್ದ ನಿನ್ನಂತೆ, ಹೌದು, ನನಗೆ ಗೊತ್ತಿದ್ದ ನಿನ್ನಂತೆ.
ಅದೇ ಅಸಲೀ ನೀಲಿಹವೆಯಂತಹ ದಿರಿಸಿನಲಿ!!
ಅಥವಾ ಇದು ನೀನು ಶಾಶ್ವತವಾಗಿ ಹತ್ತಿರವೋ ದೂರವೋ
ಕೇಳಬರದಂತೆ ಅಸ್ತಿತ್ವ ಕಳೆದುಕೊಂಡ ಬಳಿಕ
ಬರೆ ಒದ್ದೆ ಹುಲ್ಲುಗಾವಲುಗಳೆಡೆಯಿಂದ ನನ್ನೆಡೆ
ಆಲಸಿಯಂತೆ ಹಾದುಬರುವ ತಿಳಿಗಾಳಿ ಮಾತ್ರವೆ?
ಹಾಗಾಗಿ ನಾನಿಲ್ಲಿ ಸುತ್ತ ಬೀಳುವ ಎಲೆಗಳ
ನಡುವೆ ಸಂದೇಹಿಸುತ್ತ ಮುನ್ನಡೆಯುತಿರುವೆ,
ಉತ್ತರದಿಕ್ಕಿನ ಹವೆ ಮುಳ್ಳಿರಿದೆಡೆ ಕೊಂಚ ಒಸರುವುದು
ಮತ್ತು ಹೆಣ್ಣೊಬ್ಬಳೆನ್ನ ಕರೆಯುತಿರುವಳು
ಚಿತ್ರಕೃಪೆ: ’Apparition’ by www.streetmorrisart.com