Archive for March, 2009

ಶಿಕ್ಷಣದ ನಿಜವಾದ ಅರ್ಥ – ‘ಡೆಡ್ ಪೊಯೆಟ್ಸ್ ಸೊಸೈಟಿ’

deadpoetssociety5b15d1

Education is a progressive discovery of our own ignorance – Will Durant

’ನಾನು ಎಲ್ಲೇ ಸಿಕ್ಕಿದರು ವಂದಿಸುವುದು ಬೇಡ. ನನ್ನ ಕ್ಲಾಸಿನಲ್ಲಿ ನಿಮಗೆ ಇಷ್ಟ ಬಂದ ಕಡೆ ಕೂರಬಹುದು, ಕಾಫಿ, ಜ್ಯೂಸ್ ತರಬಹುದು, ಚ್ಯೂಯಿಂಗ್ ಗಂ ಅಗಿಯಬಹುದು. ನನ್ನ ಕ್ಲಾಸಿನಲ್ಲಿ ಹೇಗಾದರು ಇರಿ, ಆದರೆ ಪಾಠದ ಬಗ್ಗೆ ಮಾತನಾಡಲು ಆಗಲಿಲ್ಲವೆಂದರೆ ಆಚೆ ಹೊರಡಲು ತಯಾರಾಗಿರಿ.’ -ಎಂ.ಎ ಕ್ಲಾಸಿನ ಮೊದಲನೆ ದಿನ ಅಧ್ಯಾಪಕರೊಬ್ಬರು ನಮಗೆ ಹೀಗೆ ಹೇಳಿದಾಗ ನಾವು ಕಂಗಾಲಾಗಿದ್ದು ನಿಜ. ಅಲ್ಲಿಯತನಕ ‘ಗುರುವಿನ ಗುಲಾಮನಾಗುವತನಕ..’ ಅನ್ನುವ ಸಾಂಪ್ರದಾಯಿಕ ಶಿಕ್ಷಣಕ್ಕೆ ಒಗ್ಗಿಕೊಂಡಿದ್ದವರು ನಾವು. ಉತ್ತರಕ್ಕೆ ತಡವರಿಸಿದರೆ ಕೂಡಲೆ ಲೈಬ್ರರಿಗೆ ಓಡಿಹೋಗಿ ಉತ್ತರಕ್ಕೆ ರೆಫರೆನ್ಸು ಮಾಡಿಕೊಂಡು ವಾಪಾಸು ಬರಬೇಕಿತ್ತು. ಅಪ್ಪಿತಪ್ಪಿ ಅವರಿಗೆ ವಂದಿಸಿದರೆ ಮಾರನೆದಿನ ಟೀಕೆ ಕಾದಿರುತ್ತಿತ್ತು. ಅದರ ಜೊತೆಗೇ ಒಂದು ಕವಿತೆಯನ್ನು ಎಷ್ಟು ತರಹ ಓದಬಹುದು, ಒಂದು ಕಥೆ ಎಷ್ಟೆಲ್ಲ ಹೇಳದೆಯೆ ಏನೆಲ್ಲ ಹೇಳುತ್ತದೆ, ಕಾರ್ಟೂನುಗಳೂ ಉತ್ತಮ ಸಾಹಿತ್ಯವೇನೇ, ವಾಗ್ವಾದಗಳು ಜಗಳದ ರೂಪ ಪಡೆಯದೆಯೆ ಹೇಗೆ ಆರೋಗ್ಯಕರವಾಗಿರಬಹುದು, ವಿಮರ್ಶೆ ಹೇಗೆ ನಮ್ಮೆಲ್ಲರ ನಡುವಿಂದಲೆ ಹುಟ್ಟಿಬಂತು… ಹೀಗೆಲ್ಲ ಅವರ ತರಗತಿಯಲ್ಲಿ ದೊರೆತ ಶಿಕ್ಷಣ ಅಮೂಲ್ಯ. ಮೊದಮೊದಲು ಬದಲಾವಣೆಗೆ ಹೊಂದಿಕೊಳ್ಳಲು ಹಿಂಸೆಪಟ್ಟ ನಾವು ಎರಡು ವರುಷಗಳ ನಂತರ ಬೇರೆಯೆ ತರಹದ ಮನುಷ್ಯರಾಗಿ ಹೊಮ್ಮಿದ್ದು ಅಷ್ಟೇ ನಿಜ. ತನ್ನ ವಿದ್ಯಾರ್ಥಿಗಳ ಚಿಂತನೆ ಹಾಗೂ ಜೀವನವನ್ನೆ ಬದಲಿಸಿದ ಇಂತಹದೇ ಒಬ್ಬ ಅಪರೂಪದ ಅಧ್ಯಾಪಕನ ಕಥೆ ‘ಡೆಡ್ ಪೊಯೆಟ್ಸ್ ಸೊಸೈಟಿ’.

1959ರ ಕಾಲದ ಕಥೆ ಇದು. ವರ್ಮಾಂಟಿನ ವೆಲ್ಟ್ಟನ್ ಅಕ್ಯಾಡೆಮಿ ಒಂದು ಪ್ರತಿಷ್ಠಿತ ವಿದ್ಯಾಸಂಸ್ಥೆ. ಇಲ್ಲಿ ಕಲಿಯುವವರು ಅಮೆರಿಕದ ಸಿರಿವಂತ ಪರಿವಾರಗಳ ಹುಡುಗರು. ಸಂಪ್ರದಾಯ, ಘನತೆ, ಶಿಸ್ತು, ಉತ್ಕೃಷ್ಟತೆಗಳನ್ನೆ ಧ್ಯೇಯವಾಗಿರಿಸಿಕೊಂಡ ಶಾಲೆಯಲ್ಲಿ ಹೊಸದಾಗಿ ಸೇರಿಕೊಳ್ಳುವ ಹುಡುಗರು ನೀಲ್, ಟಾಡ್, ನಾಕ್ಸ್, ಚಾರ್ಲಿ, ರಿಚರ್ಡ್, ಸ್ಟೀವನ್ ಮತ್ತು ಜೆರಾರ್ಡ್. ಮೊದಲನೆ ದಿನ ಶಾಲೆಯ ಪ್ರಾಂಶುಪಾಲ ಗೇಲ್ ನೋಲನ್(ನಾರ್ಮನ್ ಲಾಯ್ಡ್) ಹುಡುಗರಿಗೆ ಅಕ್ಯಾಡೆಮಿಯ ಪಕ್ಕಾ ಸಾಂಪ್ರದಾಯಿಕ ಶಿಕ್ಷಣಕ್ರಮದ ಬಗ್ಗೆ ಪರಿಚಯ ನೀಡುತ್ತಾನೆ. ಆದರೆ ಹೊಸ ಆಂಗ್ಲ ಅಧ್ಯಾಪಕ ಜಾನ್ ಕೀಟಿಂಗ್(ರಾಬಿನ್ ವಿಲಿಯಮ್ಸ್) ಹುಡುಗರನ್ನು ತನ್ನ ವಿಚಾರಗಳಿಂದ ದಿಗ್ಮೂಢರನ್ನಾಗಿಸುತ್ತಾನೆ. ಕ್ಲಾಸಿನ ಮೊದಲನೆ ದಿನ ರಾಗವಾಗಿ ಶಿಳ್ಳೆಹಾಕುವ ಮೂಲಕ ಪಾಠವನ್ನು ಮನನ ಮಾಡಲಾಗುತ್ತದೆ. ಕವಿತೆಯ ಬಗ್ಗೆ ಆಂಗ್ಲಸಾಹಿತ್ಯ ಪರಿಣಿತನೊಬ್ಬ ಬರೆದಿರುವ ಪ್ರಬಂಧವೊಂದನ್ನು ಓದುವಂತೆ ನೀಲ್ ಗೆ ಹೇಳುವ ಜಾನ್ ಕೀಟಿಂಗ್, ಪ್ರಬಂಧದ ಗಣಿತಾತ್ಮಕ ಯಾಂತ್ರಿಕತೆಯನ್ನು ಎತ್ತಿತೋರಿಸಿ ಆ ಪ್ರಬಂಧವನ್ನು ಹರಿದುಹಾಕಲು ಹುಡುಗರಿಗೆ ತಿಳಿಸುತ್ತಾನೆ!! ವಿದ್ಯಾರ್ಥಿಗಳನ್ನು ಡೆಸ್ಕಿನ ಮೇಲೆ ಹತ್ತಿನಿಂತು ಪ್ರಪಂಚವನ್ನು ಬೇರೆಯೆ ರೀತಿಯಲ್ಲಿ ನೋಡಲು, ತಮ್ಮ ಪೂರ್ವಗ್ರಹಗಳಿಂದ ಹೊರಬರಲು ಉತ್ತೇಜಿಸುತ್ತಾನೆ. ಹುಡುಗರು ಮೊದಲು ಹಿಂಜರಿದರು ನಂತರ ಖುಶಿಯಾಗಿ ಮುಂದೆ ಬರುತ್ತಾರೆ. ಅಧಿಕಾರ ದೊರಕುವುದು ಅದನ್ನು ಚಲಾಯಿಸಲು ಮಾತ್ರವಲ್ಲ, ಅದರಿಂದ ಇತರರು ಬೆಳೆಯಲು ಮಾರ್ಗದರ್ಶನ, ಸಹಾಯ ನೀಡಬೇಕೆನ್ನುವುದು ಅವರು ಕೀಟಿಂಗನಿಂದ ಕಲಿಯುವ ಅತ್ಯಮೂಲ್ಯ ಪಾಠ.

ನಿಜವಾದ ಅರ್ಥದಲ್ಲಿ ಬೆಳೆಯತೊಡಗುತ್ತಾರೆ ವೆಲ್ಟನಿನ ಹುಡುಗರು. ಕೀಟಿಂಗನ ಶಿಕ್ಷಣ ಅವರನ್ನು ಹೊಸದೇನನ್ನಾದರು ಮಾಡುವಂತೆ ಪ್ರೇರೇಪಿಸುತ್ತದೆ. ಕೀಟಿಂಗ್ ವೆಲ್ಟನಿನ ವಿದ್ಯಾರ್ಥಿಯಾಗಿದ್ದಾಗ ಹುಟ್ಟುಹಾಕಿದ್ದ ‘ಡೆಡ್ ಪೊಯೆಟ್ಸ್ ಸೊಸೈಟಿ’ ಎಂಬ ರಹಸ್ಯ ಸಂಘವನ್ನು ಈ ಹುಡುಗರು ಪುನರ್ರಚಿಸುತ್ತಾರೆ. ವೆಲ್ಟನಿನಲ್ಲಿ ಒಂದು ಸಣ್ಣ ಕ್ರಾಂತಿಯೇ ನಡೆದುಹೋಗುತ್ತದೆ. ಟಾಡ್ ತನಗೆ ಸರಿತೋಚದ್ದನ್ನು ನಿರಾಕರಿಸುವ ಧೈರ್ಯ ತೊರುತ್ತಲೆ ತನ್ನೊಳಗೆ ಅಡಗಿದ್ದ ಲೇಖಕನನ್ನು ಹೊರಹಾಕುತ್ತಾನೆ. ತನ್ನ ಆಲಸೀಪ್ರವೃತ್ತಿಯನ್ನು ಬಿಡುವ ಚಾರ್ಲಿ ತನ್ನ ವ್ಯಕ್ತಿಸ್ವಾತಂತ್ರ್ಯವನ್ನು ತೋರುವ ಹಂಬಲದಲ್ಲಿ ಕಾಲೇಜಿನಲ್ಲಿ ಹುಡುಗಿಯರಿಗೂ ಪ್ರವೇಶ ನೀಡಬೇಕೆಂದು ಸಾರುತ್ತಾನೆ. ನೀಲ್ ತನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ಮೊದಲಸಾರಿ ಶೇಕ್ಸ್ ಪಿಯರನ ‘ಎ ಮಿಡ್ಸಮರ್ ನೈಟ್ಸ್ ಡ್ರೀಂ’ ನಾಟಕ ಸೇರಿ ಅಮೋಘವಾಗಿ ಅಭಿನಯಿಸುತ್ತಾನೆ. ನಾಕ್ಸ್ ರಮ್ಯತೆಯ ಬಗೆಗೆ ಅಡಗಿಸಿಟ್ಟಿದ್ದ ತನ್ನ ಒಲವನ್ನು ಪೋಷಿಸತೊಡಗುತ್ತಾನೆ, ಬುದ್ಧಿಜೀವಿಯಾಗಿದ್ದ ಸ್ಟೀವನ್ ತನ್ನ ಭಾವನೆಗಳನ್ನು ತೆರೆದಿಡಲು ಕಲಿಯುತ್ತಾನೆ. ಈ ಬದಲಾವಣೆಗಳು ಕಾಲೇಜಿನ ಅಧಿಕಾರದ ಚುಕ್ಕಾಣಿ ಹಿಡಿದಿರುವವರಿಗೆ ಸರಿಕಾಣುವದಿಲ್ಲ. ಚಾರ್ಲಿಯ ವಿಚಿತ್ರ ಅಪೇಕ್ಷೆಯ ಬಗ್ಗೆ ತನಿಖೆ ನಡೆಸುವ ಪಾಂಶುಪಾಲ ನೋಲನ್ ಚಾರ್ಲಿಯ ಹಿಂದೆ ಇರುವವರಾರು ಎಮದು ತಿಳಿದುಕೊಳ್ಳಲು ಯತ್ನಿಸಿ ವಿಫಲನಾಗುತ್ತಾನೆ. ನೀಲ್ ನ ತಂದೆ ಆತನನ್ನು ವೆಲ್ಟನ್ ಅಕ್ಯಾಡೆಮಿಯಿಂದ ತೆಗೆದು ಮಿಲಿಟರಿ ಕಾಲೇಜಿಗೆ ಕಳಿಸಲು ಯತ್ನಿಸಿದಾಗ ಸಹಿಸದ ನೀಲ್ ತಂದೆಯ ರಿವಾಲ್ವರ್ ಬಳಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ನೀಲ್ ನ ತಂದೆ ಆತನ ಸಾವಿನ ಬಗ್ಗೆ ಶಾಲೆಯಲ್ಲಿ ತನಿಖೆ ನಡೆಯಿಸುತ್ತಾನೆ. ನೋಲನ್ ನೀಲ್ ನ ಗೆಳೆಯ ರಿಚರ್ಡನಿಂದ ‘ಡೆಡ್ ಪೊಯೆಟ್ಸ್ ಸೊಸೈಟಿ’ಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳುತ್ತಾನೆ. ಕೀಟಿಂಗನನ್ನು ನೀಲ್ ನ ಸಾವಿಗೆ ಜವಾಬ್ದಾರನಾಗಿ ಮಾಡಿ ಹುದ್ದೆಯಿಂದ ಅಮಾನತುಗೊಳಿಸಲಾಗುತ್ತದೆ. ರಿಚರ್ಡನ ದ್ರೋಹದ ಬಗ್ಗೆ ತಿಳಿದು ಆತನ ಮೇಲೆ ಆಕ್ರಮಣ ಮಾಡುವ ಚಾರ್ಲಿಯನ್ನು ವೆಲ್ಟನಿನಿಂದ ಹೊರದೂಡಲಾಗುತ್ತದೆ. ಕೀಟಿಂಗನ ಪ್ರಯತ್ನ ವ್ಯರ್ಥವಾಗುವುದೆ? ವೆಲ್ಟನಿನ ಶಿಕ್ಷಣ ಸಂಪ್ರದಾಯದ ಮುಷ್ಟಿಯಲ್ಲಿ ಸಿಕ್ಕಿ ನಲುಗಿಹೋಯಿತೆ? ಮುಂತಾದ ಪ್ರಶ್ನೆಗಳು ನೋಡುಗರನ್ನು ಬಾಧಿಸುತ್ತವೆ.

ಚಲನಚಿತ್ರದ ಕೊನೆಯ ಭಾಗ. ನೋಲನ್ ಹುಡುಗರಿಗೆ ಆಂಗ್ಲ ಸಾಹಿತ್ಯ ಕಲಿಸುತ್ತಿದ್ದಾನೆ ಕೀಟಿಂಗ್ ಹರಿದುಹಾಕಲು ಉತ್ತೇಜಿಸಿದ ಪ್ರಬಂಧವನ್ನೆ ತರಗತಿಯಲ್ಲಿ ಓದಲಾಗುತ್ತಿದೆ. ಕೀಟಿಂಗ್ ತನ್ನ ವಸ್ತುಗಳನ್ನು ತೆಗೆದುಕೊಳ್ಳಲು ತರಗತಿ ಪ್ರವೇಶಿಸುತ್ತಾನೆ. ಇದ್ದಕ್ಕಿದ್ದಂತೆ ಟಾಡ್ ಎದ್ದುನಿಂತು ಕೀಟಿಂಗನಲ್ಲಿ ತಾವು ಆಡಳಿತಮಂಡಳಿಯ ಪಕ್ಷ ವಹಿಸಿದ್ದಕ್ಕಾಗಿ ಕ್ಷಮೆ ಯಾಚಿಸುತ್ತಾನೆ. ಕುಪಿತ ನೋಲನ್ ಟಾಡನಿಗೆ ಕಾಲೇಜಿನಿಂದ ಹೊರಹಾಕುವ ಬೆದರಿಕೆ ಒಡ್ಡುತ್ತಾನೆ. ಆದರೂ ಸುಮ್ಮನಾಗದ ಟಾಡನ ಜತೆಗೆ ತರಗತಿಯ ಹುಡುಗರೆಲ್ಲ ಸೇರಿಕೊಳ್ಳುತ್ತಾರೆ. ತಮ್ಮ ಡೆಸ್ಕುಗಳ ಮೇಲೆ ಹತ್ತಿನಿಂತು ಕೀಟಿಂಗನನ್ನು ‘ಓ ಕ್ಯಾಪ್ಟನ್! ಮೈ ಕ್ಯಾಪ್ಟನ್!’ (ವಾಲ್ಟ್ ವಿಟ್ಮನ್ ಲಿಂಕನನ ಬಗ್ಗೆ ಬರೆದ ಸುಪ್ರಸಿದ್ಧ ಕವಿತೆಯ ಸಾಲು) ಎಂದು ಸಂಬೋಧಿಸುತ್ತಾರೆ. ಎಲ್ಲರನ್ನೂ ಹೊರದೂಡಲು ಸಾಧ್ಯವಿಲ್ಲದಲೆ ನೋಲನ್ ಅಸಹಾಯಕನಾಗಿ ನಿಲ್ಲುತ್ತಾನೆ. ಕೀಟಿಂಗನ ಮುಖದ ಮೇಲೆ ತೆಳುನಗೆಯೊಂದು ಮೂಡುತ್ತದೆ.

ಚಿತ್ರಕೃಪೆ: www.ingebjorg.dk

Comments (7)

ಆಕ್ಟೇವಿಯೊ ಪಾಜ್ : ಕೊನೆಯ ಮುಂಜಾವ

(ಕವಿತೆ ಒಬ್ಬೊಬ್ಬರಿಗೆ ಒಂದು ತರಹ ಕಾಣುತ್ತದೆ. ಈ ಕವಿತೆಯನ್ನ ಪೋಸ್ಟು ಮಾಡುತ್ತ ಇರುವ ಹಾಗೆಯೆ ನನಗೆ ಹೊಳೆದದ್ದು ಇದು. ಬರೆ ಚೆನ್ನಾಗಿದೆ ಅಂದುಕೊಳ್ಳುವ ಬದಲು ನೀವು ಕವಿತೆ ಓದಿ ನಿಮಗೆ ಉಂಟಾದ ಅರಿವೊ ಭಾವನೆಯೊ, ಏನೋ ಒಂದು – ಅದನ್ನೆಲ್ಲ ನನಗೇಕೆ ವಿಶ್ಲೇಷಣೆಯ ರೂಪದಲ್ಲಿ ಏಕೆ ತಿಳಿಸಬಾರದು? ವಿಮರ್ಶೆ ಕಬ್ಬಿಣದ ಕಡಲೇಕಾಯೇನಲ್ಲ ಅಂತ ಬಲವಾಗಿ ನಂಬುವವಳು ನಾನು. ಒಂದು ವಾರ ಕಾಯುತ್ತೇನೆ. ಆಮೇಲೆ ನೀವು ಕಳಿಸಿರುತ್ತೀರಲ್ಲ, ಅವನ್ನೆಲ್ಲ ಕೂಡಿಸಿ ಮುಂದಿನ ವಾರ ಇಲ್ಲಿಯೆ ಹಾಕುವಾ. ಏನೂ ಸಂಕೋಚ ಬೇಡ. ನಿಮಗನಿಸಿದ್ದನ್ನ ನೇರವಾಗಿ ಎಲ್ಲರಿಗು ಅರ್ಥವಾಗುವ ಹಾಗೆ ಬರೆದರೆ ಸಾಕು. ಕವಿತೆ ಓದಿ. ಆರಾಮವಾಗಿ ನನ್ನ ಕಮೆಂಟ್ ಬಾಕ್ಸಿನಲ್ಲಿ ಬರೆಯಿರಿ. ಕೊನೆಗೆ ನಿಮಗೇ ಆಶ್ಚರ್ಯವಾದೀತು!)

restingwoman-copy1

ಕಗ್ಗಾಡಿನಲೆಲ್ಲೊ ಕಳೆದುಹೋಗಿರುವ ನಿನ್ನ ಕೂದಲು
ನನ್ನ ಕಾಲುಗಳ ಸ್ಪರ್ಶಿಸುವ ನಿನ್ನ ಕಾಲುಗಳು
ನಿದ್ದೆಯೊಳಗೆ ನೀನು ರಾತ್ರಿಯ ಮೀರಿ ಬೆಳೆದಿರುವೆ
ಆದರು ನಿನ್ನ ಕನಸು ಕೋಣೆಯ ಮೇರೆ ದಾಟದು
ಎಷ್ಟು ಸಣ್ಣಗಿದ್ದವರು ನಾವು, ಹೇಗಾಗಿ ಹೋದೆವು?
ಹೊರಗಡೆ ಟ್ಯಾಕ್ಸಿಯೊಂದು
ಭೂತಗಳ ಹೊರೆ ಹೊತ್ತು ಸಾಗುತ್ತದೆ
ಪಕ್ಕದಲ್ಲೆ ಹರಿವ ನದಿ
ತಿರುವುಮುರುವಾಗಿಯೆ ಪ್ರವಹಿಸುತ್ತದೆ
ನಾಳೆಯೆಂಬುದು ಬರೆ ಇನ್ನೊಂದು ದಿನವಾಗುವುದೆ?

(ಕವಿ: ಆಕ್ಟೇವಿಯೊ ಪಾಜ್, ‘ಸಲಮ್ಯಾಂದ್ರಾ’)
 ಚಿತ್ರಕೃಪೆ: www.graphicsoft.about.com ಕಲೆ: Merike

Comments (8)

ಮಾರ್ಚ್ ಎಂಟನ್ನು ಮೀರಿ ನಿಂತ ಹೆಂಗಸರು

1155-15372african-life-i-posters1

ಇವತ್ತು ಮಾರ್ಚ್ ಎಂಟು. ಬೆಳಗ್ಗಿನಿಂದ ಸುಮಾರು ಸ್ನೇಹಿತರು ಎಸ್ಸೆಮ್ಮೆಸ್, ಫೋನು, ಇ-ಮೇಲ್ ಮಾಡಿ ‘ಹ್ಯಾಪಿ ವಿಮೆನ್ಸ್ ಡೇ!!’ ವಿಶ್ ಮಾಡಿದ್ದಾರೆ. ಯುನಿವರ್ಸಿಟಿಯಲ್ಲಿರುವಾಗ ‘ಟಾಂಬಾಯ್’ ಇಮೇಜು ಇದ್ದ ನಾನು ಇದೇ ದಿನ ಸೀರೆಯುಟ್ಟುಕೊಂಡು ಹೋಗಿ ಎಲ್ಲರಿಗೆ ಶಾಕ್ ನೀಡಿದ್ದು ನೆನಪಾಗುತ್ತಿದೆ. ಅವತ್ತು ಡಿಪಾರ್ಟ್ಮೆಂಟಿನಲ್ಲಿ ಟೀನಾ, ಇವತ್ತು ನೀನೂ ‘ವುಮನ್’ ಅಂತ ತಿಳಿಯಿತು!’  ’ಲೇಡಿಬಾಂಡ್ ಇನ್ ಎ ಸ್ಯಾರಿ!’ ಎಂದೆಲ್ಲ ಗೆಳೆಯರು ತಮಾಷೆ ಮಾಡಿ ನಗಾಡಿದ್ದರು. ಗೆಳತಿ ಗೀತಾ ಮಾತ್ರ ನಾನು ವಿಶ್ ಮಾಡಿದಾಗ ಹೆಣ್ಣಾಗಿ ಹುಟ್ಟಿದ್ದನ್ನ ಪ್ರತೀದಿನ ರಿಗ್ರೆಟ್ ಮಾಡ್ತೀನಿ ಕಣೆ! ನೋ ಹ್ಯಾಪಿ ವಿಮೆನ್ಸ್ ಡೇ ಫಾರ್ ಮಿ ಅಂದಿದ್ದು ಮರೆಯಲಾಗುತ್ತಲೇ ಇಲ್ಲ. ಐರನಿ ಅಂದರೆ ಅವಳೂ ಇವತ್ತು ನಮ್ಮ ನಡುವೆ ಇಲ್ಲ. ಎಷ್ಟು ಹೆಣ್ಣುಮಕ್ಕಳು ಇವತ್ತು ತಾವು ಹೆಣ್ಣಾಗಿ ಹುಟ್ಟಿದ್ದನ್ನು ಹಳಿದುಕೊಂಡು ಬದುಕುತ್ತಿದ್ದಾರೋ? ನನ್ನ ಪ್ರೀತಿಯ ಮೂವರು ಹೆಂಗೆಳೆಯರು ಮಾತ್ರ ಸಾವಿರ ಅಡ್ಡಿತಡೆಗಳಿದ್ದರೂ ಸೆಲ್ಫ್ ಪಿಟಿಯಲ್ಲಿ ಮುಳುಗದೆ ತಮ್ಮದೇ ರೀತಿಯಲ್ಲಿ ಬದುಕುತ್ತ ಇದ್ದಾರೆ… * * * *

ತೆಹಮಿನಾ ಮದುವೆಯಾಗಿದ್ದು ಪಾಕಿಸ್ತಾನದ ರಾಜಕೀಯ ನಾಯಕನೊಬ್ಬನನ್ನು. ಮದುವೆಯಾದಂದಿನಿಂದ ಆಕೆ ಪ್ರತಿದಿನವೂ ತನ್ನ ಹೆಣ್ಣುಜನ್ಮದ ಅಸಹಾಯಕತೆಯನ್ನು ಹಳಿದುಕೊಂಡೇ ಕಳೆದಳು ಎನ್ನಬಹುದು. ಪ್ರಪಂಚದ ಕಣ್ಣಿಗೆ ಆಕೆಯ ಗಂಡ ಪ್ರಸಿದ್ಧ ಜನನಾಯಕ. ತೆಹಮಿನಾಳಿಗೆ ಮಾತ್ರ ಆತನ ನಿಜರೂಪ ತಿಳಿದಿತ್ತು. ಅತನೊಬ್ಬ ವಿಕೃತಕಾಮಿ. ತನ್ನ ಮಾತನ್ನು ಪಾಲಿಸದೆ ಹೋದರೆ ತೆಹಮಿನಾಳನ್ನು ಮೈಯೆಲ್ಲ ಬಾಸುಂಡೆ ಬರುವಂತೆ ಹೊಡೆಯುವ ರಾಕ್ಷಸ. ಆಕೆಯೆದುರೇ ಆಕೆಯ ತಂಗಿಯೊಡನೆ ಅಫೇರ್ ಇಟ್ಟುಕೊಂಡು ಈಕೆಯನ್ನು ಮೂಲೆಯಲ್ಲಿಟ್ಟವ. ಈಕೆ ಸುಮ್ಮನಿರಲಿಲ್ಲ. ತನಗಾದ ಪ್ರತಿಯೊಂದು ಅನ್ಯಾಯವನ್ನೂ ಎದುರಿಸಿ ನಿಂತಳು. ಕೊನೆಗೆ ತಾಳಲಾಗದಾಗ ಗಂಡನೆನಿಸಿಕೊಂಡವನನ್ನು ಬಿಟ್ಟು ಬಂದಳು. ತನ್ನ ಸ್ವಾತಂತ್ರ್ಯದ ಸಂಕೇತವನ್ನು ತೋರಲು ಆತನಿಗೆ ಬಹಳ ಪ್ರಿಯವಾಗಿದ್ದ ತನ್ನ ನೀಳಗೂದಲನ್ನು ಕತ್ತರಿಸಿ ಎಸೆದಳು. ಆತನ ಒಂದೊಂದು ದೌರ್ಜನ್ಯವನ್ನೂ ‘ಮೈ ಫ್ಯೂಡಲ್ ಲಾರ್ಡ್’ ಎಂಬ ಪುಸ್ತಕ ಬರೆದು ಜಗತ್ತಿಗೇ ಸಾರಿದಳು. ಎದುರಾದ ಯಾವ ಬೆದರಿಕೆಗಳಿಗೂ ಜಗ್ಗದ ತೆಹಮಿನಾ ದುರಾನಿ ಇಂದಿಗೂ ಪಾಕಿಸ್ತಾನದ ಹೆಣ್ಣುಮಕ್ಕಳ ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ ಶೋಷಣೆಯ ಬಗ್ಗೆ ‘ಬ್ಲಾಸ್ಫೆಮಿ’ಯಂತಹ ಅಪರೂಪದ ಪುಸ್ತಕಗಳನ್ನು ಬರೆಯುತ್ತ, ತನ್ನಂತೆ ದೌರ್ಜನ್ಯಕ್ಕೊಳಗಾದ ಅನೇಕ ಹೆಣ್ಣುಮಕ್ಕಳಿಗೆ ಸಹಾಯಹಸ್ತ ನೀಡುತ್ತಾ ಇದ್ದಾಳೆ.

* * * *

ವಾಂಗರಿ ಮಥಾಯಿ 2004ರಲ್ಲಿ ನೊಬೆಲ್ ಪ್ರಶಸ್ತಿ ಪಡೆದುಕೊಂಡಾಗ ಆಕೆಯನ್ನು ಬಲ್ಲವರಿಗೇನೂ ಅಚ್ಚರಿಯಾಗಲಿಲ್ಲ. ಅಮೆರಿಕ, ಜರ್ಮನಿಗಳಲ್ಲಿ ಓದು ಮುಗಿಸಿದ ಆಕೆ ಅಲ್ಲಿಯೇ ಆರಾಮವಾಗಿರಬಹುದಾಗಿತ್ತು. ತನ್ನ ನೆಲ ಕೀನ್ಯಾದ ಸೆಳೆತ ಬಲವಾಗಿತ್ತು. ತನ್ನ ದೇಶ ಮರಗಳ್ಳರ, ಪ್ರಾಣಿಹಂತಕರ ಹಾವಳಿಗೆ ತುತ್ತಾಗಿ ಬಡವಾಗುತ್ತಿರುವುದನ್ನು ನೋಡಿ ನೋವಾಯಿತು. ಆಕೆ ಆರಂಭಿಸಿದ ‘ಗ್ರೀನ್ ಬೆಲ್ಟ್ ಚಳುವಳಿ’ಯ ಮೂಲಕ ಕೀನ್ಯಾದಾದ್ಯಂತ ಮೂವತ್ತು ಮಿಲಿಯನ್ ಗಿಡಮರಗಳನ್ನು ನೆಡಲಾಯ್ತು. ಜನರು ಆಕೆಯನ್ನು ಪ್ರೀತಿಯಿಂದ ‘ಟ್ರೀ ವುಮನ್’ ಎಂದು ಕರೆದರು. ಗಂಡ ‘ಈಕೆಯಷ್ಟು ಗಟ್ಟಿ ಮನಸ್ಸಿನ ಹೆಂಗಸಿನ ಜತೆ ಬದುಕಲಾಗದು’ ಎಂಬ ಕಾರಣ ನೀಡಿ ಆಕೆಗೆ ಡೈವೋರ್ಸ್ ನೀಡಿದ. ತನ್ನ ನಿಲುವು, ಸಿದ್ಧಾಂತಗಳ ದೆಸೆಯಿಂದ ಹಲವಾರು ಬಾರಿ ಮಾರಣಾಂತಿಕ ಹಲ್ಲೆಗೊಳಗಾಗಿರುವ ವಾಂಗರಿ ಸುಮಾರು ಬಾರಿ ಜೈಲಿಗೂ ಹೋಗಿಬಂದದ್ದುಂಟು. ಕೀನ್ಯಾದ ರಾಜಕೀಯ ರಂಗದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ವಾಂಗರಿಯ ಪ್ರಕಾರ ಪ್ರಕೃತಿಯ ಬಗ್ಗೆ ಹೆಣ್ಣಿಗಿರುವ ಕಾಳಜಿ ಬೇರಾರಿಗೂ ಇಲ್ಲ.

* * * *

ಎಂಭತ್ತರ ಗೌರಜ್ಜಿಯ ಮನೆಗೆ ಮಧ್ಯರಾತ್ರಿ ಒಂದು ಗಂಟೆಗೆ ಹೋಗಿಳಿದರೂ ಬಿಸಿಬಿಸಿ ಊಟ ಬಡಿಸಿಯಾರು. ಬೇಡವೆಂದರೆ ಬಾಯಿಗೆ ಬಂದ ಬೈಗುಳ ತಿನ್ನಲು ತಯಾರಾಗಿರಬೇಕು. ಅವರ ಮನೆಯಲ್ಲಿ ಅನ್ನ ಬಡಿಸಲು ಸೌಟು ಉಪಯೋಗಿಸುವುದಿಲ್ಲ – ಕೈಯಲ್ಲಿ ಭರ್ತಿ ಅನ್ನ ಪಾತ್ರೆಯಿಂದ ತಟ್ಟೆಗೆ ತಳ್ಳುತ್ತಾರೆ!! ಕೋಳಿ ಕೆದಕಿದ ಹಾಗೆ ತಿನ್ನುವ ನನ್ನಂಥವರು ಅವರ ಮನೆಯ ಊಟಕ್ಕೆ ಡಿಸ್ಕ್ವಾಲಿಫೈಡ್!! ಯಾರದೇ ಮದುವೆ, ಮುಂಜಿ, ನಾಮಕರಣ ಏನೇ ಇರಲಿ, ಮೈಸೂರ ಒಕ್ಕಲಗೇರಿಯ ಆಕೆಯ ಪುಟ್ಟಮನೆಗೆ ಕರೆ ಹೋಗುತ್ತದೆ. ಗೌರಜ್ಜಿ ಗಲಾಟೆ ಮಾಡುತ್ತಲೆ ತಪ್ಪದೆ ಹಾಜರಾಗುತ್ತಾರೆ. ಕೇರಿಯ ತುಂಬಾ ಗೌರಜ್ಜಿ ಹೆರಿಗೆಮಾಡಿಸಿ, ನೀರುಹಾಕಿ, ತುತ್ತುಣಿಸಿ ಬೆಳೆಸಿಕೊಟ್ಟವರೇ ಇರುವುದು. ಪ್ರತಿ ಹಬ್ಬದಲ್ಲಿಯೂ ತಿಳಿದವರನ್ನೆಲ್ಲ ಕರೆದು ಊಟ ಹಾಕುತ್ತಾರೆ. ಯಾವುದೇ ಇನ್ಕಮ್ ಇಲ್ಲದ ಗೌರಜ್ಜಿ ಇದನ್ನೆಲ್ಲ ಹೇಗೆ ಮಾಡಬಹುದೆಂದು ಒಮ್ಮೊಮ್ಮೆ ಯೋಚನೆ ಬರುತ್ತದೆ. ಹೃದಯದ ಕಾಯಿಲೆಯಿಟ್ಟುಕೊಂಡೂ ಹೃದಯವಂತರಾಗಿರುವ ಗೌರಜ್ಜಿಯಂಥವರು ಎಷ್ಟಿದ್ದಾರು?

* * * *

ಹೀಗೆ ನನ್ನ ಪ್ರೀತಿಯ ಮಹಿಳೆಯರನ್ನೆಲ್ಲ ಧ್ಯಾನಿಸಿಕೊಂಡು ಕೂತಿದ್ದೇನೆ. ಮಗಳು ಗಂಧದಕಡ್ಡಿ ಹಿಡಿದುಕೊಂಡು ಅತ್ತಿಂದಿತ್ತ ಓಡಾಡುತ್ತಿದ್ದಾಳೆ. ಮನೆತುಂಬ ಸಿಹಿಸಿಹಿ ಪರಿಮಳ. ಅವಳಿಗೆ ಆಟ. ಅವಳನ್ನು ಕರೆದು ತಬ್ಬಿಕೊಂಡು ‘ಹ್ಯಾಪಿ ವಿಮೆನ್ಸ್ ಡೇ ಶೋನೂ!!’ ಅಂದೆ. ಅರ್ಥವಾಗದಿದ್ದರೂ ‘ಥ್ಯಾಂಕ್ಯೂ ಮಮ್ಮಿ!!’ ಅಂದು ಕೆನ್ನೆಗೊಂದು ಮುತ್ತು ಕೊಟ್ಟಳು.

ಸ್ಪೆಶಲ್ ನೋಟ್: ಅಂದಹಾಗೆ ಇದು ನನ್ನ ನೂರನೆ ಪೋಸ್ಟು. ನನಗೇ ಆಶ್ಚರ್ಯವಾಗುವ ಹಾಗೆ ಬರೆಸುತ್ತ ಹೋದ ನಿಮಗೆಲ್ಲ ಸಾವಿರ ಧನ್ಯವಾದ.

ಇವಾಗಷ್ಟೆ ಗೆಳತಿ ಶಮ ನಂದಿಬೆಟ್ಟ ಆಹ್ವಾನಿಸಿದ್ದ ಬಸವೇಶ್ವರನಗರದಲ್ಲೆ ನಡೆಯುತ್ತಿರುವ ‘ಮಾತೃ ಉತ್ಸವ’ಕ್ಕೆ ಹೋಗಿ ಬಂದೆ. ರಕ್ತದಾನ ಶಿಬಿರ, ಉಚಿತ ವೈದ್ಯಕೀಯ ಚೆಕಪ್, ಸಲಹೆ ಮತ್ತು ಔಷಧ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಯೋಗಾಸನ ಪ್ರದರ್ಶನ, ರಂಗೋಲಿ ಸ್ಪರ್ಧೆ.. ಒಂದೇ ಎರಡೆ? ಬಿಸಿಲು ಲೆಕ್ಕಿಸದೆ ಜನರೂ ಕಿಕ್ಕಿರಿದು ನೆರೆದಿದ್ದರು. ದಂಗಾಗುವಂತೆ ಆಯಿತು. ಪ್ರತಿ ವರುಷವೂ ಇಂತಹದೊಂದು ಅರ್ಥಪೂರ್ಣ ಕಾರ್ಯಕ್ರಮ ನಡೆಸುವ ‘ಪುನಂ’ ಪರಿವಾರಕ್ಕೆ ಶುಭಹಾರಯಿಕೆಗಳು. ಅವರಂಥವರ ಸಂತತಿ ಹೆಚ್ಚಲಿ.

ಚಿತ್ರಕೃಪೆ: ಒಂದು ಸೌಥ್ ಆಫ್ರಿಕನ್ ಗ್ರೀಟಿಂಗ್ ಕಾರ್ಡು.

Comments (15)