Archive for June, 2009

ಪಡಖಾನೆಯ ಹುಡುಗಿ- ಒಂದು ಪಶ್ಚಾತ್ತಾಪ.

1921.186[1]

ಸುಮ್ಮನೆ ಉಪಕರಿಸಲೆ ಎಂದು
ಕಾಣಲು ಬಂದರೆ
ನಿನ್ನ ಕಣ್ಣ ಬೆರಗು ಮಾತು ನುಂಗಿತು
ನಾನು ಅಡಗಲು ಜಾಗ ಹುಡುಕಿದೆ
ಬೆಳಗು ಸುಮ್ಮನೆ ಮತ್ತಿನಲ್ಲಿ
ಸುಖಿಸುತ್ತ ಕಳೆದುಹೋಯಿತು

ಅರೆಮಡಚಿದ ಹಾಸಿಗೆ
ಅವಸರದ ಉಪಚಾರ
ಬಿಕ್ಕುವಂತೆ ಹೊತ್ತಿ ಆರುವ ದೀಪ
ಮೂಲೆಯಲಿ ಮುಗುಮ್ಮಾಗಿ ಕುಳಿತ ನೀನು
ಈಗ ಮೇಣದಬತ್ತಿ ಕರಗುವಾಗ
ಅದೆಲ್ಲ ನೆನಪು, ಅರೆಸುಟ್ಟ ಹಾಗೆ.

ಕೊನೆಗೆ ನೀನು ತೆರಳಿದ ಬಳಿಕ
ಬೇಕಿತ್ತೆ ಈ ಇದೆಲ್ಲ ಎಂದು ಕೊರಗುತ್ತ
ಸುಕ್ಕಾದ ಕೌದಿಯೆತ್ತಿ ಕೊಡಹುವೆ
ಆ ಪುರಾತನ ಪ್ರೇಯಸಿ ಕಟ್ಟಿದ
ಮಂಟಪಕ್ಕಾತು ನೀ ದಿಟ್ಟಿಸಿದ ಪರಿಯ
ನೆನೆಯುತ್ತ

 ’The Brooding Woman’ by Paul Gauguin                                                                       ಕೃಪೆ: www.worcesterart.org
 

 

Comments (12)