ಆಕೆ ಹಾಕಿದ ನಗರಿಯ ತಳಪಾಯ

ಕ್ರಿಸ್ಟೈನ್ ಹುಟ್ಟಿದ್ದು ವೆನಿಸಿನಲ್ಲಿ. ಬೆಳೆದಿದ್ದು ಫ್ರಾನ್ಸಿನಲ್ಲಿ ಆಕೆ ವಿಧವೆಯಾಗಿದ್ದು ಇಪ್ಪತ್ತೈದರ ಹರೆಯದಲ್ಲಿ. ತನ್ನ ಮಕ್ಕಳನ್ನು ಸಾಕಲು ಆಕೆ ಬರೆಯಲಾರಂಭಿಸಿದಳು. ಫ್ರೆಂಚ್ ಸಾಹಿತ್ಯದ ಅತ್ಯುತ್ತಮ ಪುಸ್ತಕವೆನಿಸಿಕೊಂಡ ‘ರೊಮ್ಯಾನ್ಸ್ ಆಫ್ ದ ರೋಸ್’ ನ ಬಗ್ಗೆ ಆಕೆ ನೀಡಿದ ಪ್ರತಿಕ್ರಿಯೆ ‘ದ ಬುಕ್ ಆಫ್ ದ ಸಿಟಿ ಆಫ್ ಲೇಡೀಸ್’ ಇಂದ ಮಹಿಳಾವಾದೀ ಸಾಹಿತ್ಯ ಪ್ರಭಾವಿತಗೊಂಡಿತು. ಆದರು ನಾವು ಈಗಿನ ಬರಹಗಳಲ್ಲಿ ಈಕೆಯ ಹೆಸರನ್ನೆ ಕಾಣುವದಿಲ್ಲವಲ್ಲ? ಯಾರಿದು ಕ್ರಿಸ್ಟೈನ್? ಎಲ್ಲಿ ಬರೆಯುತ್ತಾಳೀಕೆ?

ಆಕೆ ಕ್ರಿಸ್ಟೈನ್ ದೆ ಪಿಜಾನ್. ಆಕೆ ಹುಟ್ಟಿದ್ದು ಕ್ರಿ.ಶ. 1365ರಲ್ಲಿ!

ನಮಗೆ ಗೊತ್ತಿರುವ ಹಾಗೆ ಪಾಶ್ಚಾತ್ಯ ಮಹಿಳಾವಾದ ಆರಂಭವಾಗುವುದು ಸುಮಾರು ಹದಿನೆಂಟನೆಯ ಶತಮಾನದ ಕೊನೆಯ ಭಾಗದಲ್ಲಿ ಮೇರೀ ವೊಲ್ಸ್ಟೋನ್ಕ್ರಾಫ್ಟಳ ಬರಹಗಳ ಮೂಲಕ. ಆಮೇಲೆ ಹತ್ತೊಂಭತ್ತನೆಯ ಹಾಗೂ ಇಪ್ಪತ್ತನೇ ಶತಮಾನದ ವೇಳೆಗೆಲ್ಲ ಮಹಿಳಾವಾದದಲ್ಲಿ ಕ್ರಾಂತಿಯೇ ಆಯಿತೆನ್ನುವಷ್ಟರ ಮಟ್ಟಿಗೆ ಬೆಳವಣಿಗೆಗಳಾದವು. ಮಹಿಳಾವಾದೀ ಸಾಹಿತ್ಯ ಬೃಹತ್ತಾಗಿ ಬೆಳೆಯತೊಡಗಿತು. ಹಲವಾರು ಥಿಯರಿಗಳು ಬೆಳಕಿಗೆ ಬಂದವು. ಪುರುಷಕೇಂದ್ರೀಕೃತವಾಗಿದ್ದ ಸಾಹಿತ್ಯವನ್ನು ಸ್ತ್ರೀಯ ಕಣ್ಣಿಂದ ನೋಡುವ, ಪುನರ್ವ್ಯಾಖ್ಯಾನಿಸುವ, ನವೀನವಾಗಿ ಬರೆಯುವ ಪ್ರಕ್ರಿಯೆ ಪ್ರಚಲಿತವಾಗತೊಡಗಿತು. ಅನೇಕರಲ್ಲಿ ಇದು ಪಕ್ಕಾ ಇತ್ತೀಚಿಗೆ ನಡೆದ ಕ್ರಾಂತಿ ಎಂಬ ಭಾವನೆ ಹುಟ್ಟಿಸಿದುದರಲ್ಲಿ ಯಾವುದೇ ಅಚ್ಚರಿ ಕಾಣದು. ಆದರೆ ಚರಿತ್ರೆಯನ್ನು ತನ್ನ ಕಣ್ಣಿಂದ ಕಂಡು ಹೊಸ ರೀತಿಯಲ್ಲಿ ಅದನ್ನು ಹೇಳುವ ಕೆಲಸವನ್ನು ಏಳು ಶತಮಾನಗಳ ಹಿಂದೆಯೇ ಮಾಡಿದ ಮೊದಲ ಮಹಿಳೆ ಕ್ರಿಸ್ಟೈನ್ ದೆ ಪಿಜಾನ್.

ಆಕೆಯ ‘ದ ಬುಕ್ ಆಫ್ ದ ಸಿಟಿ ಆಫ್ ಲೇಡೀಸ್’ ಆರಂಭವಾಗುವುದು ಆಕೆಯ ಓದಿನಿಂದ. ಮ್ಯಾಥೋಲಿಯಸ್ ಎಂಬಾತ ಬರೆದ ಪುಸ್ತಕವೊಂದನ್ನು ಓದುತ್ತ ಕ್ರಿಸ್ಟೈನ್ ದೆ ಪಿಜಾನ್ ಬರೆದುಕೊಳ್ಳುತ್ತಾಳೆ: ’ಬರೆ ಈ ಪುಸ್ತಕವನ್ನು ನೋಡಿದರೆ ಸಾಕು, ನನಗನಿಸುವುದು, ಇಷ್ಟೊಂದು ಜನ ಗಂಡಸರು, ಅದರಲ್ಲಿಯೂ ವಿದ್ಯಾಪಾರಂಗತರು ತಮ್ಮ ಮಾತುಕತೆ, ಬರಹಗಳಲ್ಲಿ ಮಹಿಳೆಯರ ಬಗ್ಗೆ, ಅವರ ನಡವಳಿಕೆಯ ಬಗ್ಗೆ ಎಷ್ಟೊಂದು ಪೈಶಾಚಿಕವಾಗಿ, ಹೇಯವಾಗಿ ಬರೆಯುತ್ತ ಬಂದಿದ್ದಾರೆಂದು ಅಚ್ಚರಿಪಡುವಂತೆ ಆಗುವುದು. ಇದನ್ನು ಓದಿದ ನಂತರ ನನಗೆ ದೇವರು ಹೆಣ್ಣಿನ ರೂಪದಲ್ಲಿ ಒಂದು ವಿಕಾರ ಪ್ರಾಣಿಯನ್ನು ಸೃಷ್ಟಿಸಿರುವನೆಂದು ತಿಳುವಳಿಕೆ ಮೂಡಿತು. ಕುಶಲನಾದ ಆತ ಹೀಗೆ ಮಾಡಲು ಹೇಗೆ ಸಾಧ್ಯ ಎಂದು ಭಾವಿಸಿದೆ. ನನ್ನ ಬಗ್ಗೆ, ಇಡಿ ಹೆಂಗಸರ ಜಾತಿಯ ಬಗ್ಗೆಯೆ ಬೇಸರ ಮೂಡಿ ನನಗೆ ಹಳಹಳಿಯುಂಟಾಯಿತು - ನಾವು ರಾಕ್ಷಸರೆಂಬ ಭಾವನೆ ಮೂಡಿತು. ದೇವರು ನನ್ನನ್ನು ಹೆಣ್ಣೊಂದರ ದೇಹದಲ್ಲಿ ಬದುಕುವಂತೆ ಮಾಡಿದ್ದು ನನ್ನ ದುರ್ದೈವವೇ ಅಂದುಕೊಂಡೆ.’

ಹೀಗಿದ್ದ ಕ್ರಿಸ್ಟೈನಳ ಕನಸಿನಲ್ಲಿ ದೇವತೆಗಳು ಬಂದು ತೊಂದರೆಗೆ ಪರಿಹಾರ ಸೂಚಿಸುತ್ತಾರೆ. ಗೊಂದಲಕ್ಕೆ ಒಳಗಾಗಿದ್ದ ಆಕೆಗೆ ಮಹಿಳೆಯರಿಗೋಸ್ಕರ ಒಂದು ನಗರವನ್ನು ನಿರ್ಮಿಸಬೇಕೆಂದೂ, ಅಲ್ಲಿ ನೆಲೆಸುವ ಪ್ರತಿಯೊಬ್ಬ, ಮಹಿಳೆಗೂ ಆಕೆಯ ಮೇಲೆ ಪ್ರಹಾರ ನಡೆಸುವವರಿಂದ ರಕ್ಷಣೆ ದೊರಕುವದೆಂದೂ ಹೇಳುವರು. ಅಲ್ಲಿ ನೆಲೆಸುವ ಮಹಿಳೆಯರು ತಮ್ಮ ಮೆದುಳೊಳಗೆ ಭದ್ರವಾಗಿ ಕುಳಿತಿರುವ ‘ಮಹಾನ್ ಪುರುಷ’ನೊಡನೆ ವಾಗ್ವಾದ ನಡೆಸಬೇಕಾಗಿತ್ತು. ಕ್ರಿಸ್ಟೈನಳಿಗೆ ಇಲ್ಲಿನವರೆಗೆ ಪುರುಷರು ದಾಖಲಿಸಿರುವ ಚರಿತ್ರೆಯ ಬಗೆಗೇ ಸಂಶಯ ಹುಟ್ಟುತ್ತದೆ. ಮಹಿಳೆಯರ ಸಾಮಾನ್ಯ ನಡವಳಿಕೆ, ಗುಣಲಕ್ಷಣಗಳನ್ನು ಹೋಲಿಸಿದರೆ ಇವರು (ಪುರುಷರು) ಬರೆದುಕೊಂಡಿರುವುದು, ವಾದಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಸಂಶಯ ಹುಟ್ಟುತ್ತದೆ ಎಂದು ತನ್ನ ವಾದವನ್ನು ಮಂಡಿಸುವ ಕ್ರಿಸ್ಟೈನಳ ತರ್ಕ ಮೆಚ್ಚುವಂಥದು. ಇಲ್ಲಿ ಹೆಣ್ಣಿನ ಅನುಭವಗಳನ್ನು ಆಕೆ ಹೆಚ್ಚು ಸರಿಯಾಗಿ ಬಿಂಬಿಸಬಲ್ಲಳು ಎನ್ನುವ ವಾದವನ್ನು ಪುಷ್ಟಿಗೊಳಿಸಲು ಆಕೆ ಪೌರಾಣಿಕ, ಚಾರಿತ್ರಿಕ ಹಾಗು ಬೈಬಲ್ಲಿನ ಉದಾಹರಣೆಗಳನ್ನು ಬಳಸುತ್ತಾಳೆ. ಬೊಕೇಶಿಯೋನ ‘ಪ್ರಸಿದ್ಧ ಮಹಿಳೆಯರು’ ಪುಸ್ತಕದಿಂದ ಹಾಗೂ ಗ್ರೀಕ್ ನಾಟಕದ ಜೇಸನ್ ಮತ್ತು ಮೀಡಿಯಾರ ಉದಾಹರಣೆಗಳು ಕೂಡ ಉದ್ಧರಿಸಲ್ಪಟ್ಟಿವೆ. ಮಹಿಳೆಯರು ತಮ್ಮ ನಡುವೆಯೆ ಇರುವ ಇಂಥ ಉದಾಹರಣೆಗಳನ್ನು ನ್ಯಾಯ ದೊರಕಿಸಿಕೊಳ್ಳಲು ಬಳಸಿಕೊಳ್ಳಬೇಕೆನ್ನುವುದು ಆಕೆಯ ಇಚ್ಛೆ.

ಕ್ರಿಸ್ಟೈನಳ ಮಹಿಳಾನಗರಿಯ ಕಲ್ಪನೆ ಅಂದಿನ ಕಾಲಕ್ಕೆ ಅನೂಹ್ಯವಾದುದಾಗಿತ್ತು. ತಮ್ಮ ತೊಂದರೆಗಳು, ಕ್ರೈಸಿಸ್ಸುಗಳಿಗೆ ತಾವೆ ಒಂದೆಡೆ ಸೇರಿ ಪರಿಹಾರ ಕಂಡುಕೊಳ್ಳಬೇಕೆನ್ನುವ ನೂತನ ಪರಿಕಲ್ಪನೆಯನ್ನು ಆಕರ್ಷಕ ರೀತಿಯಲ್ಲಿ ತರ್ಕಬದ್ಧವಾಗಿ ಉದಾಹರಣೆಗಳ ಮೂಲಕ ಮಹಿಳೆಯರಿಗೆ ತೋರ್ಪಡಿಸಿದ ಕೀರ್ತಿ ಕ್ರಿಸ್ಟೈನಳಿಗೆ ಸೇರುತ್ತದೆ. ಆಧುನಿಕ ಮಹಿಳಾವಾದದ ಅನೇಕ ಆರಂಭಗಳು ಕ್ರಿಸ್ಟೈನಳ ಈ ಪುಸ್ತಕದಲ್ಲಿಯೆ ತೋರಿಬರುತ್ತವೆ. ಆಕೆ ಹಾಕಿದ ತಳಪಾಯದ ಮೇಲೆ ಇಂದಿನ ಮಹಿಳಾವಾದದ ಮಹಾನಗರಿ ಭದ್ರವಾಗಿ ನಿಂತಿದೆ.

ಚಿತ್ರ ಕೃಪೆ: www.staff.hum.ku.dk 

 

Comments (9)

ಪಡಖಾನೆಯ ಹುಡುಗಿ ಕಳೆದ ಒಂದು ದಿನ

wwwchina-cartcom.jpg

ಹೊಸಿಲಲಿ ಮೂಡಿದ ಬಿಸಿಲ ಹೂ
ಮಾಡ ಮೂಲೆಯಲಿ
ಕಳೆದು ಹೋದ ಸಮಯ
ಸೆಖೆಯಾರಿಸದ ಪಂಖಾ
ಪಕ್ಕದ ಕೋಣೆಯ ಪರಿಚಿತ ಸಂಗೀತ
ಬಿಚ್ಚಿಟ್ಟ ಓಲೆಗಳು ಮತ್ತು
ಎಚ್ಚರದ ಅರಿವಿನೊಡನೆಯೆ
ಪಾಪದಂತೆ ಕಾಡುವ ನೀನು

ನನಗೆ ನಿನ್ನದೆ ಧ್ಯಾನ.
ಮುಡಿಬಿಚ್ಚಿ ಮೂಗಿಗಿಟ್ಟು
ನೇವರಿಸುತ್ತ ಹಠ ಮಾಡುವ
ನಿನ್ನ ಹಾಗೆ ಮೊಂಡು ಮಳೆ
ಅದಕೆ ಸಿಕ್ಕು ಚೆದುರುವ
ಮೊಗ್ಗಿನ ಹಾಗೆ ನನ್ನ ಬಿಗುಮಾನ
ಮಳೆಗೆ ಸಿಕ್ಕಿ ಮೊಗ್ಗು ಸುರಿದವು
ಇಂದು ಅಪರಾಹ್ನ

ಇನ್ನೂ ಆರಿಲ್ಲ ಒದ್ದೆ ಹೆರಳ ಪರಿಮಳ
ಕೊಂಚ ತಾಳು
ನಾನು ಹದವಾಗಲು
ಸ್ವಲ್ಪ ಸಮಯ ಬೇಕು
ಬರಿ ಮಾತೆ ಸಾಕೆ ನಿನಗೆ
ಸಂಜೆಯಾಳಕೆ ಮುಳುಗಲು?
ಬೀದಿದೀಪಗಳಿಗು ಹೇಳು
ನಮ್ಮ ಹೆಜ್ಜೆಗಳ ಸುತ್ತ
ಕೊಂಚ ಕತ್ತಲ ಹರಡಲು.

ಮಾತು ತೋಚದೆ
ದೇಶಾವರಿ ನಗುತ್ತ,
ಪಾಪಗಳ ಬಟ್ಟಲಲಿ ಸುರಿದು ಹೀರುತ್ತ
ಬಳಿ ಕೂರಲಾರೆ
ನಿನ್ನ ಚಡಪಡಿಕೆಯ ಪ್ರತಿಸಾರಿ
ಹೊಸದೆನ್ನುವಂತೆ ಸ್ವಾಗತಿಸಲಾರೆ
ನೀನು ಕೇಳುವ ಪ್ರೇಮ
ನನ್ನ ಹಳೆಯ ಪ್ರಿಯಕರ
ಕತ್ತಲಂತೆಯೆ ನಿಗೂಢವಾಗಿ
ಹುಟ್ಟಿ ದಾರಿಗಾಣದೆ
ಮರೆಯಾಗುವಂಥದು.

 

 

Comments (6)

ಸಾವಿಗೆ ತೆರೆದುಕೊಳ್ಳುವ ಹೃದಯ

picasso-casagemas1.jpg

(’Death of Casagemas’ by Pablo Picasso ) 

When I behold, upon the night’s starr’d face,
Huge cloudy symbols of a high romance,
And feel that I may never live to trace
Their shadows, with the magic hand of chance;

- John Keats, ‘When I have fears that I may cease to be’

ನನ್ನ ಕೋಣೆಯ ಬಾಲ್ಕನಿಯಿಂದ ಹೊರಗೆ ದಿಟ್ಟಿಸುತ್ತ ನಿಂತಿದ್ದೆ. ಹೊರಗೆ ಕಣ್ಣಳತೆಯುದ್ದಕ್ಕು ಕೊಡಚಾದ್ರಿ ಮೈ ಹರವಿಕೊಂಡಿತ್ತು. ಮೋಡಗಳು ಲಗುಬಗೆಯಿಂದ ಎಲ್ಲೆಲ್ಲೊ ಹೋಗಲಿಕ್ಕಿದೆ ಎನ್ನುವ ಹಾಗೆ ಶಿಖರಗಳ ಸುತ್ತ ಚಲಿಸುತ್ತಿದ್ದವು. ಮಳೆ ಬೆಳಜಾವದಿಂದಲು ಚಿರಿಪಿರಿ ಎಂದು ಸುರಿಯುತ್ತ ಮಾರ್ಚಿನಲ್ಲಿ ಸೆಖೆಗಾಲವನ್ನು ಮರೆಸುವ ಸಂತಸದಲ್ಲಿತ್ತು. ನಾನು ಸೌಪರ್ಣಿಕೆಯ ತಿಳಿನೀರಲ್ಲಾಡುವ ಅವಕಾಶ ತಪ್ಪಿಹೋಗಿದ್ದಕ್ಕೆ ಬೇಸರಿಸಿಕೊಂಡಿದ್ದೆ. ಇವ ಪಕ್ಕ ಬಂದು ನಿಂತು ಕೈಕೈ ಉಜ್ಜಿಕೊಳ್ಳುತ್ತ ’ಅಬ್ಬ! ಇಷ್ಟು ಹೊತ್ತಿಂದ ಇಲ್ಲಿ ನಿಂತ್ಕೊಂಡು ಏನು ಯೋಚನೆ ಮಾಡುತ್ತಿದೀಯ ಅಂದುಕೊಂಡಿದ್ದೆ. ಇಲ್ಲಿ ನಿಂತರೆ ಯೋಚನೆಗಳೇ ಬರೋದಿಲ್ಲ ಅಲ್ವ?’ ಎಂದ. ಸುಮ್ಮನೆ ನಕ್ಕೆ. ಇದ್ದಕ್ಕಿದ್ದ ಹಾಗೆ, ’ನಂಗೆ ನನ್ನ ಎಪಿಟಾಫ್ ಬರೀಬೇಕು ಅನ್ನಿಸ್ತಿದೆ’ ಎಂದೆ. ಇವ ’ನೀನು ಇಲ್ಲಿ ನಿಂತು ಯೋಚನೆ ಮಾಡ್ತಾ ಇರು. ನಾನು ಒಳಗೆ ಕೂತು ಸಿಗರೇಟು ಸುಡ್ತ ಖುಶಿಯಾಗಿ ನಿನ್ನ ಎಪಿಟಾಫ್ ಬರೀತೀನಿ!’ ಅಂದು ನನ್ನ ತಲೆಯ ಮೇಲೆ ಒಂದೇಟು ಹೊಡೆದು ನಗುತ್ತ ಒಳಹೋದ.

ಕೆಲವು ಹಳೆ ಚೈನೀ ಪೆಯಿಂಟಿಂಗುಗಳನ್ನ ಯಾವಾಗಲೊ ನೋಡಿದ್ದು ನೆನಪಾಯಿತು. ಬೃಹತ್ ಕ್ಯಾನ್ವಾಸುಗಳು. ಅದರಲ್ಲಿ ಇಂಚಿಂಚೂ ತುಂಬಿದ ಪ್ರಕೃತಿ. ಅದರಲ್ಲಿ ಒಬ್ಬ ಮನುಷ್ಯ. ಇಡೀ ಕ್ಯಾನ್ವಾಸಿನಲ್ಲಿ ಆತನಿಗೆ ಒಂದು ಇರುವೆಗೆ ನೀಡಬಹುದಾದಷ್ಟೆ ಸ್ಥಾನ. ಸೃಷ್ಟಿಯೆದುರಿಗೆ ಮನುಷ್ಯ ಎಷ್ಟು ಗೌಣ ಎಂದು ಅರಿವುಮಾಡಿಕೊಡಲು ಈ ಪೆಯಿಂಟಿಂಗುಗಳು ಎಂದು ನನಗೆ ಒಬ್ಬ ಜುಬ್ಬಧಾರಿ ಯುವಕಲಾಕಾರ ತಿಳಿಸಿದ್ದ. ಒಂದು ಥರ ‘ರೌದ್ರ’ ಅನ್ನಿಸಿ ಆ ಶಾಂತ ಕ್ಯಾನ್ವಾಸುಗಳನ್ನು ನಾನು ದಿಟ್ಟಿಸಿಕೊಂಡು ನೋಡಿದ್ದೆ. ಆಗ ಅರಿವಾಗದ್ದು ಈಗ ಬಾಲ್ಕನಿಯಲ್ಲಿ ಹೊಳೆಯತೊಡಗಿತು. ನನ್ನ ಅಚ್ಚುಮೆಚ್ಚಿನ ನಟರಾದ ಮೋರ್ಗನ್ ಫ್ರೀಮನ್ ಮತ್ತು ಜ್ಯಾಕ್ ನಿಕಲ್ಸನ್ ನಟಿಸಿರುವ ರಾಬ್ ರೀನರ್ ನಿರ್ದೇಶನದ ಚಲನಚಿತ್ರ ‘ದಿ ಬಕೆಟ್ ಲಿಸ್ಟ್’ನಲ್ಲಿ ಕ್ಯಾನ್ಸರಿನಿಂದ ಸಾಯುತ್ತಿರುವ ಇಬ್ಬರು ವೃದ್ಧರು ಸಾವನ್ನು ಜೀವನದಂತೆ ಅನುಭವಿಸುವುದನ್ನು ಅದ್ಭುತವಾಗಿ ಚಿತ್ರಿಸಿದೆ. ಸಾವು ಸಮೀಪಿಸುತ್ತಿದೆ ಎಂದು ತಿಳಿದಾಗ ಇಬ್ಬರೂ ತಮ್ಮ ಆಸೆಗಳನ್ನು ಪಟ್ಟಿಮಾಡಿ ಅವುಗಳನ್ನು ಪೂರಯಿಸಲು ಜತೆಯಾಗಿ ಪಯಣಿಸತೊಡಗುತ್ತಾರೆ. ಈ ಕೆಲತಿಂಗಳ ಸಾಂಗತ್ಯ ಅವರನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಅವರ ಸಾವುಗಳನ್ನು ಕೂಡಾ. ಸಾವಿನ ಬಗೆಗಿನ ನನ್ನ ಪರ್ಸೆಪ್ಷನ್ ಅನ್ನು ಮೇಲುಕೆಳಗು ಮಾಡಿದ ಮೂವೀ. ಚಿತ್ರದ ಮೊದಲಿಗೆ ಹಾಗೂ ಕೊನೆಗೆ ಕಾರ್ಟರ್(ಫ್ರೀಮನ್) ತನ್ನ ಗೆಳೆಯ ಕೋಲ್(ನಿಕಲ್ಸನ್)ನ ಸಾವಿನ ಬಗ್ಗೆ ಮಾತನಾಡುತ್ತ ಹೇಳುತ್ತಾನೆ,’ಅವ ಮರಣ ಹೊಂದಿದಾಗ ಅವನ ಕಣ್ಣುಗಳು ಮುಚ್ಚಿಕೊಂಡಿದ್ದವು, ಹೃದಯ ತೆರೆದುಕೊಂಡಿತ್ತು’.

ಕೆಳಗಿನ ಕಟ್ಟಡವೊಂದರ ಬಾಲ್ಕನಿಯಲ್ಲಿ ಒಂದು ವಯಸ್ಸಾದ ಮಹಿಳೆ ಮತ್ತು ಒಂದು ಮಗು, ಬಹುಶಃ ಆಕೆಯ ಮೊಮ್ಮಗು, ಆಡುತ್ತ ಇದ್ದರು. ಮಗು ಅಜ್ಜಿಯ ಬೆನ್ನ ಮೇಲೆ ಕೂತು ಸವಾರಿ ಮಾಡುತ್ತ ಇತ್ತು. ಅಜ್ಜಿಗೆ ಆಯಾಸವಾಗಿರಬೇಕು, ಸಾಕು ಎಂದೇನೊ ಹೇಳಿದರು. ಮಗುವಿಗೆ ಆಟದ ಸಂಭ್ರಮ. ಅದು ಇನ್ನಷ್ಟು ಸವಾರಿ ಮಾಡಬೇಕು ಎಂದು ಮುದ್ದುಮುದ್ದಾಗಿ ಹಠ ಮಾಡುತ್ತಿತ್ತು. ಅಜ್ಜಿಗೆ ಇನ್ನೇನೂ ತಿಳಿಯದೆ ಇದ್ದಕ್ಕಿದ್ದ ಹಾಗೆ ನಾಲಗೆ ಹೊರಹಾಕಿ ಸತ್ತುಹೋದಂತೆ ನಟನೆ ಮಾಡಿದರು. ಕಿಲಕಿಲನೆ ನಗುತ್ತ ಇದ್ದ ಮಗು ಎರಡು ಕ್ಷಣ ಮಿಕಿಮಿಕಿ ನೋಡಿತು. ಅದಕ್ಕೇನೆನ್ನಿಸಿತೋ ಅಜ್ಜಿಯ ಮೇಲೆ ಬಿದ್ದು ಭೋರಾಡಿ ಅಳತೊಡಗಿತು. ರೂಮಿನೊಳಗಿದ್ದವರೆಲ್ಲ ಮಗುವಿನ ಅಳು ಕೇಳಿ ಹೊರಗೋಡಿ ಬಂದರು. ಅಜ್ಜಿ ಕೂಡಲೆ ಎದ್ದು ಮಗುವನ್ನು ತಬ್ಬಿಕೊಂಡು ಸಂತೈಸತೊಡಗಿದರು. ಮುಖದಲ್ಲಿ ನಾಚಿಕೆಯ ಭಾವ ಸ್ಪಷ್ಟವಾಗಿತ್ತು.

ನಮ್ಮ ಪ್ರಿಯರಾದವರು ನಮ್ಮನ್ನು ಅಗಲುತ್ತಾರೆ, ಅಥವಾ ನಾವು ಅವರನ್ನು ಎಂದೆಂದೂ ಕಾಣದ ಹಾಗೆ ಅಗಲುತ್ತೇವೆ ಎನ್ನುವ ಭಾವ ಆವರಿಸಿಕೊಳ್ಳಲು ತೊಡಗುವುದು ಬಹುಶಃ ಇಂಥ ಸನ್ನಿವೇಶಗಳಿಂದಲೆ ಅನ್ನಿಸಿತು. ನನ್ನ ಮಗಳು ಒಂದು ದಿನ ’ಸಾಯೋದಂದ್ರೆ ಹೆಂಗೆ? ನಾನೂ ಮುದುಕಿ ಆಗ್ತೀನಾ ಮಮ್ಮ?’ ಎಂದು ಮುಂತಾಗಿ ಪ್ರಶ್ನೆಗಳನ್ನು ಕೇಳಿದಳು. ನಾನು ಆದಷ್ಟು ಸೌಮ್ಯವಾಗಿ ಸಾವಿನ ಬಗ್ಗೆ ಹೇಳುತ್ತಿದ್ದಂತೆ ಮುಖ ಬಾಡತೊಡಗಿತು.
“ಹಾಗಾದ್ರೆ ಅಜ್ಜೀ ತಾತಾನೂ ಸಾಯ್ತಾರಾ?”
“ಹೂಂ. ಎಲ್ಲಾರೂನೂ. ನಾನೂ, ನೀನೂ.”
ಇವಳು ಕಿರುಚಾಡಿಕೊಂಡು ಅವರ ಅಜ್ಜಿಯ ಬಳಿ ಓಡಿದಳು. ನಾನು ಗಾಬರಿಯಾಗಿ ಹಿಂದೆಯೆ ಓಡಿಹೋದೆ. ನಚಿಕೇತ, ಧ್ರುವ ಮುಂತಾದ ಕಥೆಗಳು ನೆನಪಾಗಿ ನನಗೆ ಏನೇನೊ ಆತಂಕ.ಅಡಿಗೆಮನೆಯಲ್ಲಿ ಅಜ್ಜಿ ಮೊಮ್ಮಗಳ ಮಾತುಕತೆ ನಡೆಯುತ್ತ ಇತ್ತು. “ಅಜ್ಜೀ ನೀನೂ ಸಾಯ್ತೀಯ?”
“ಹೂಂ ಚಿನ್ನು.”
“ನೀನು ಮುದುಕೀನಾ?”
“ಹೌದು ಮಾ ಕಣ್ಣಾ.”
“ಆಮೇಲೆ ನೀನು ಸಿಗಲ್ವಾ?”
“ಈ ಥರ ಇಲ್ಲ. ನಿನ್ ಕನಸಲ್ಲಿ ಬರ್ತೀನಿ.”
“ಹಾಗಾದ್ರೆ ನಿನ್ ಸೀರೇ, ಜ್ಯೂಯೆಲ್ಸ್ ಎಲ್ಲ ಈಗ್ಲೆ ನಂಗೆ ಕೊಟ್ಬಿಡು. ಸರೀನಾ?”

ಚಿತ್ರಕೃಪೆ: www.artquotes.net

Comments (13)

ಹೀಗೆ ಶುರು ಮಾಡೋಣವೆ?

ಕ್ಷಮಿಸ್ಬಿಡಿ, ಪ್ಲೀಸ್!

ನಿಮ್ಮನ್ನ ’ಏನು ಮಾಡಬಹುದು?’ ಅಂತ ಕೇಳಿ ಒಂದು ಮೂರು ದಿನ ನಾನೆ ಮಾಯವಾಗಿಹೋಗಿದ್ದೆ. ಒಂದು ಸಣ್ಣ ಜವಾಬ್ದಾರಿ ಬೆನ್ನಮೇಲಿತ್ತು. ನಿಭಾಯಿಸ್ಲೇಬೇಕಾಗಿತ್ತು. ಇಲ್ಲಿ ಬಂದುನೋಡಿದ್ರೆ ನಿಮ್ಮ ಕಮೆಂಟುಗಳು ನನ್ನ ಜವಾಬ್ದಾರೀನ ಚುಚ್ಚಿ ನೆನಪುಮಾಡಿದ್ವು. ಈ ವಿಷಯದ ಬಗ್ಗೆ ಸುಮಾರು ಜನ ಸ್ನೇಹಿತ, ಸ್ನೇಹಿತೆಯರು ಕಾಳಜಿಯಿಂದ ಪ್ರತಿಕ್ರಿಯಿಸಿದ್ದಾರೆ. ನಿಜ ಹೇಳಬೇಕೂ ಅಂದ್ರೆ ನಾನು ಈ ಥರದ ಚರ್ಚೇನೆ ಆಗುತ್ತೆ ಅನ್ಕೊಂಡಿರ್ಲಿಲ್ಲ. ಈಗ ಈ ಮಾತುಕತೆ ಇಲ್ಲಿಗೆ ನಿಲ್ಲಬಾರದು ಅನ್ನೋದು ನಿಮ್ಮೆಲ್ಲರ ಆಶಯವೂ ಕೂಡ ಅಂದುಕೊಂಡಿದೀನಿ. ನಾವು ಬ್ಲಾಗರುಗಳು ಬರಿ ಅಕ್ಷರ ಕುಟ್ಟಿ ಸುಮ್ನಾಗೋದಾದ್ರೆ ನಮ್ಗೂ, ಆಷಾಢಭೂತಿಗಳಿಗೂ ಏನೂ ವ್ಯತ್ಯಾಸ ಇರೊಲ್ಲ ಅಲ್ವ? ನಮ್ಮ ಕೈಲಿ ದೊಡ್ಡ ಮಟ್ಟದ ಬದಲಾವಣೆಗಳು ಸಾಧ್ಯವಾಗದೆ ಹೋಗಬಹುದು. ಆದರೆ ಶ್ರೀ ಮಾಡಿದ ತರಹ ನಮಗೆ, ನಮ್ಮ ಸುತ್ತಮುತ್ತ ಯಾರೊ ಹೆಣ್ಣುಮಕ್ಕಳಿಗೆ ತೊಂದರೆ ಆದಾಗ ದನಿಯೆತ್ತಿ ನಿಲ್ಲುವ ಧೈರ್ಯ ಬಂದರೆ ಸಾಕು. ನಮ್ಮಿಂದ ನಾಲಕ್ಕು ಹೆಣ್ಣುಮಕ್ಕಳು ಅರಿತು ಬೆದರದೆ ಓಡಾಡುವ ಹಾಗಾದರೆ ಸಾಕು. ನಮ್ಮಲ್ಲಿ ಅರ್ಧ ಜನ ಹೆಣ್ಣುಮಕ್ಕಳ ಮುಖದಮೇಲೆ ಕಂಡುಬರುವ ಹೆದರುಪುಕ್ಕಲುತನವೂ ಕಾಮಣ್ಣರುಗಳ ಅರಿವಿಗೆ ಬಂದು ಈವ್ ಟೀಸಿಂಗಿಗೆ ಕಾರಣವಾಗಿರೋದು ಸುಳ್ಳಲ್ಲ. ಆಫೀಸು, ಮಾರ್ಕೆಟು, ಬಸ್ಟಾಂಡು, ಫುಟ್ಪಾತು, ಮಾಲ್..ಎಲ್ಲ ಕಡೇನೂ ಇದೇ ಕತೆ. ಕೆಲವು ಕಡೆ ಖುಲ್ಲಂಖುಲ್ಲಾ ನಡೆದ್ರೆ ಕೆಲವುಕಡೆ ಈ ಹರಾಸ್ಮೆಂಟು ಪರೋಕ್ಷ ರೂಪ ತಾಳಿ ನಿದ್ದೆ ಕೆಡಿಸತ್ತೆ. ಆದರೆ We can make a difference by standing up against it. ಸಹಿಸ್ಕೊಳೋದು ತಪ್ಪು ಮಾಡಿದಷ್ಟೆ ತಪ್ಪು. ಮೊದಮೊದಲು ಕಷ್ಟವಾದೀತು. ಆಮೇಲೆ ಧೈರ್ಯ ಬಂದೇ ಬರತ್ತೆ. ಇದು ನಮ್ಮ ಜೀವನ. ಇದರ ಬಗ್ಗೆ ಒಳ್ಳೆಯದು, ಕೆಟ್ಟದು ಮಾತನಾಡುವ ಹಕ್ಕು ನಾವು ಕೊಟ್ಟವರಿಗೆ ಮಾತ್ರ ಇರೋದು. ಯಾವನೋ ಬೀದೀಲಿ ಹೋಗೋನಿಗೆ ನಮ್ಮ ಬಗ್ಗೆ ಅಸಹ್ಯ ಮಾತಾಡುವ, ನಮಗೆ ಅಸಹ್ಯವಾದ್ದನ್ನ ಮಾಡೋ ಹಕ್ಕು ಇಲ್ಲವೇ ಇಲ್ಲ. ಅದನ್ನ ಕಾನೂನು ಕೂಡ ಪುರಸ್ಕರಿಸೊಲ್ಲ ಅಂದಮೇಲೆ ಇನ್ನೇನು?

ಈ ಬಗ್ಗೆ ಮಾತಾಡುವಾ. ಯಾವಾಗ? ಎಲ್ಲಿ? ಸಜೆಸ್ಟ್ ಮಾಡ್ತೀರ?

-ಅಕ್ಕರೆಯೊಡನೆ, ಟೀನಾ.

Comments (36)

ಏನು ಮಾಡಬಹುದು?

225748561.jpg

“The possibility of being a victim of a crime is ever present on my mind; thinking about it as natural as breathing.” - ಮಿಖಾಯೆಲಾ, ಒಬ್ಬ 40 ವಯಸ್ಸಿನ ನ್ಯೂಯಾರ್ಕ್ ವಾಸಿ ಮಹಿಳೆ.

ಕೆಲತಿಂಗಳ ಹಿಂದೆ ಕೊಡಚಾದ್ರಿಗೆ ಹೊರಟುನಿಂತು ಜನಸಂದಣಿ ಇರುವ ಜಾಗವೊಂದರಲ್ಲಿ ಲಗೇಜು ಸಮೇತ ನಿಂತು ಗೆಳೆಯರಿಗಾಗಿ ಕಾಯುತ್ತಿದ್ದೆ. ಆಗ ನನ್ನೆಡೆ ಹೋಗಿಬರುವ ಗಂಡಸರು ಬೀರುತ್ತಿದ್ದ ನೋಟಗಳು ಎಷ್ಟು ಅಸಹ್ಯವಾಗಿದ್ದುವೆಂದರೆ ತಡೆಯಲಾರದೆ ಪುಸ್ತಕವೊಂದನ್ನ ಬಿಡಿಸಿ ನಿಂತುಕೊಂಡೆ. ಒಂದು ಅಧ್ಯಯನದ ಪ್ರಕಾರ ದೈಹಿಕ ಹಲ್ಲೆ, ಲೈಂಗಿಕ ಅಪರಾಧಗಳ ಬಗ್ಗೆ ಹೆಂಗಸರಲ್ಲಿ ಗಂಡಸರಿಗಿರುವುದಕ್ಕಿಂತ ಹೆಚ್ಚಿನ ಭಯ ಕಂಡುಬರುತ್ತದೆ. ಸಾಮಾಜಿಕವಾಗಿ ಮಹಿಳೆಯರಿಗಿರುವ ಸ್ಥಾನ, ಅವರೊಂದಿಗೆ ವ್ಯವಹರಿಸಲಾಗುವ ರೀತಿ ಮತ್ತು ಕಟ್ಟುಪಾಡುಗಳು ಅವರ ಈ ರೀತಿಯ ಅಭದ್ರತೆಗಳನ್ನು, ಅಸಹಾಯಕ ಮನೋಭಾವಗಳನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿವೆ. ಹೆಚ್ಚಿನ ಮಹಿಳೆಯರಿಗೆ ನಡೆಯುತ್ತಿರುವಾಗ ಪಕ್ಕದಲ್ಲಿ ಒಂದು ಕಾರು ಬಂದುನಿಂತರೂ ಏನೇನೋ ಊಹೆಮಾಡಿಕೊಂಡು ವಿಚಲಿತರಾಗುತ್ತಾರೆ. ಕತ್ತಲಾದ ಮೇಲೆ ಮನೆಯಿಂದ ಒಂಟಿಯಾಗಿ ಹೊರಹೋಗಲು ಬೆದರುತ್ತಾರೆ.

‘ಎಲ್ಲರಿಂದ ಒಳ್ಳೆಯ ಹುಡುಗಿ ಅನ್ನಿಸಿಕೊಳ್ಳಬೇಕು, ಡೀಸೆಂಟಾಗಿರಬೇಕು. ಕೆಟ್ಟ ಹುಡುಗಿಯರಿಗೆ ಕೆಟ್ಟ ಅನುಭವಗಳು ಆಗುತ್ತವೆ’ ಹೈಸ್ಕೂಲಿಗೆ ಕಾಲಿಡುವಾಗ ಸೀನಿಯರೊಬ್ಬಳಿಂದ ನಾನು ಕೇಳಿದ ಮೊದಲನೆ ಉಪದೇಶ ಇದು. ಅವಳು ತನ್ನ ಮಾತನ್ನು ಜಸ್ಟಿಫೈ ಮಾಡಲು ಹಲವಾರು ಉದಾಹರಣೆಗಳನ್ನು ಬಳಸಿದಳು. ಅವಳ ಕತೆಗಳಲ್ಲಿ ವಿಪರೀತ ವೈಯಾರವಾಗಿ ಅಲಂಕರಿಸಿಕೊಂಡು ಬರುವ ಹುಡುಗಿಯೊಬ್ಬಳನ್ನು ಕಾಲೇಜು ಹುಡುಗರು ಕ್ಲಾಸುರೂಮಿನಲ್ಲಿ ಕೂಡಿಹಾಕಿಕೊಂಡಿದ್ದರಿಂದ ಹಿಡಿದು ಮೇಷ್ಟರೊಬ್ಬರ ಬಳಿ ಅತೀ ಸಲುಗೆಯಿಂದ ಇದ್ದ ಹುಡುಗಿಯೊಬ್ಬಳು ಗರ್ಭಿಣಿಯಾಗಿದ್ದರವರೆಗೆ ಹಲವಾರು ನಿದರ್ಶನಗಳಿದ್ದವು. ನಾನು ಅವುಗಳನ್ನೆಲ್ಲ ಬಾಯಿಬಿಟ್ಟುಕೊಂಡು ಕೇಳಿಯಾದಮೇಲೆ ’ಅವರಿಗೆ ಯಾಕೆ ಹಾಗೆ ಆಗಿದ್ದು?” ಎಂದು ಕೇಳಿದ್ದೆ. ಅವಳು ’ಹಾಗೆಲ್ಲ ಚೆಲ್ಲುಚೆಲ್ಲಾಗಿ ಆಡಿದ್ರೆ? ಇನ್ನೇನಾಗತ್ತೆ? ಸುಮ್ನೆ ಇರೋ ಹುಡುಗ್ರಿಗೆ ಇನ್ವಿಟೇಶನ್ ಕೊಟ್ಟಹಾಗಾಗುತ್ತೆ ಅಷ್ಟೆ!’ ಅಂದಿದ್ದಳು. ಗಂಡಸರೆಲ್ಲ ನನ್ನ ಬಲಿಹಾಕಲು ಕಾದಿದಾರೇನೋ ಅನ್ನಿಸತೊಡಗಿತ್ತು. ಸುಮಾರು ದಿವಸ ನನ್ನ ಕ್ಲಾಸಿನ ಹುಡುಗರು ಹಾಗೂ ಮೇಷ್ಟರುಗಳನ್ನು ಮುಖನೋಡಿ ಮಾತನಾಡಲು ಹೆದರುತ್ತ ಇದ್ದೆ. ಗೆಳತಿ ಜಾಸ್ಮಿನ್ ತನ್ನ ಅನುಭವವೊಂದನ್ನು ಹೇಳಿಕೊಂಡಾಗ ಇದೆಲ್ಲ ನೆನಪಾಯಿತು.
 
ಜಾಸ್ಮಿನ್ ಭಾರತೀಯ ಮೂಲದ ಮಧ್ಯವಯಸ್ಸಿನ ಮಹಿಳೆ. ತನ್ನ ಬಹುಪಾಲು ಜೀವನವನ್ನು ದುಬಾಯಿ ಮತ್ತು ಇಂಗ್ಲೆಂಡಿನಲ್ಲಿ ಕಳೆದಿರುವವಳು. ಬೆಂಗಳೂರಿನಲ್ಲಿ ಜಾಸ್ಮಿನ್ನಳ ಎರಡನೆ ದಿನ. ಆಫೀಸಿಗೆ ಡ್ಯೂಟಿ ರಿಪೋರ್ಟ್ ಮಾಡಿಕೊಂಡು ಸಂಜೆ ಸುಮಾರು ಏಳುಗಂಟೆಯ ವೇಳೆಗೆ ತನ್ನ ಬಾಡಿಗೆ ಮನೆಯ ಬಾಗಿಲ ಬೀಗ ತೆಗೆಯುತ್ತ ಇದ್ದಾಗ ಇಬ್ಬರು ಗಂಡಸರು ಬೈಕಿನಲ್ಲಿ ಬಂದು ನಿಂತರಂತೆ. ಈಕೆ ’ಹೆಲೋ ಹೌ ಕ್ಯಾನ್ ಐ ಹೆಲ್ಪ್ ಯೂ?’ ಎಂದು ಕೇಳಿದಳಂತೆ. ಅಷ್ಟೆ. ಮುಂದೆ ಏನಾಯಿತೆಂದು ಆಕೆಗೆ ನೆನಪಿಲ್ಲ. ಪ್ರಜ್ನೆ ತಿಳಿಯುವ ವೇಳೆಗೆ ಆಕೆಯ ಪರ್ಸು, ಮನೆಯ ಕೆಲವು ಬೆಲೆಬಾಳುವ ವಸ್ತುಗಳು ಇರಲಿಲ್ಲ. ಕತ್ತಿನ ಹಿಂದೆ ವಿಪರೀತ ನೋವು, ಮೂಗಿನ ಮೇಲೆ ಹೊಡೆತದ ಗುರುತು ಹಾಗೂ ಹರಿದ ತುಟಿಯೊಡನೆ ಜಾಸ್ಮಿನ್ ಆಸ್ಪತ್ರೆಗೆ ದಾಖಲಾದಳು. ಕಲೀಗುಗಳು ಆಕೆಯ ಬಗ್ಗೆ ಕಳಕಳಿ ತೋರಿಸುವುದಿರಲಿ, ಒಂದೆರಡು ಒಳ್ಳೆಯ ಮಾತುಗಳನ್ನೂ ಆಡಲಿಲ್ಲ. ಬದಲು ಆಕೆ ಕೇಳಬೇಕಾಗಿ ಬಂದಿದ್ದು ಕಟಕಿಯ ಮಾತುಗಳು. ’ಸೀ ಜಾಸ್ಮಿನ್, ನೀನ್ಯಾಕೆ ಒಬ್ಳೆ ಮನೆ ಮಾಡಿಕೊಂಡಿದೀಯ? ಇಟೀಸ್ ಸೋ ರಿಸ್ಕಿ ಯು ನೋ! ಹಿಯರ್ ಇನ್ ಇಂಡಿಯಾ ಹೆಂಗಸು ಒಬ್ಬಳೆ ಇದ್ದರೆ ಗಂಡಸರು ಅದನ್ನ ಬೇರೆ ರೀತಿ ನೋಡ್ತಾರೆ. ಯಾರಾದ್ರು ಒಂದಿಬ್ರು ರೂಂಮೇಟ್ಗಳನ್ನಾದರು ಕರೆದುಕೊ. ಸೀ ವಾಟ್ ಹ್ಯಾಪನ್ಡ್?’ ಜಾಸ್ಮಿನ್ನಳಿಗೆ ಗಾಯಗಳ ನೋವಿಗಿಂತ ಅವರ ಮಾತುಗಳು ಚುಚ್ಚಿದುವಂತೆ. ’ಟೀನಾ, ರಿಕ್ಷಾವಾಲಾಗಳು ಕೂಡ ಎಲ್ಲೆಲ್ಲಿಯೋ ಸುತ್ತಿಸಿ ಕರೆದುಕೊಂಡು ಹೋಗ್ತಾರೆ. ವಾದ ಮಾಡಿದರೆ ವಯಲೆಂಟಾಗಿ ಬಿಹೇವ್ ಮಾಡ್ತಾರೆ. ಐ ಡೋಂಟ್ ನೋ..ನನ್ನ ಪೇರೆಂಟ್ಸ್ ನನಗೆ ಇಂಡಿಯನ್ ಕಲ್ಚರ್, ವ್ಯಾಲ್ಯೂಸ್ ಬಗ್ಗೆ ಏನೆಲ್ಲ ಹೇಳಿದ್ದರು. ನನಗೆ ಈಗ ಅವೆಲ್ಲ ಇಲ್ಯೂಶನ್ ಅನ್ನಿಸೋಕೆ ಶುರುವಾಗಿದೆ. ಆಫೀಸಲ್ಲಿ ಗಂಡಸ್ರು ಇಂಡೈರೆಕ್ಟಾಗಿ ಹೇಳ್ತಾರೆ, ಹೆಂಗಸರು ಪ್ರೊವೊಕೇಟಿವ್ ಆಗಿ ಡ್ರೆಸ್ ಮಾಡೋದರಿಂದ ಹಾಗೆಲ್ಲ ಆಗುತ್ತೆ ಅಂತ. ಡೂ ಐ ಲುಕ್ ಲೈಕ್ ಐ ಆಮ್ ಇನ್ವೈಟಿಂಗ್ ಟ್ರಬಲ್? ವಾಟ್ ಅಬೌಟ್ ದೋಸ್ ಟ್ರೈಬಲ್ ವಿಮೆನ್ ರೇಪ್ಡ್ ಇನ್ ಆಂಧ್ರ? ಅವರೇನು ಪ್ರೊವೊಕೇಟಿವ್ ಆಗಿ ಮೇಕಪ್, ಡ್ರೆಸ್ ಮಾಡಿಕೊಂಡಿದ್ದರಾ? ರೇಪ್, ಮೊಲೆಸ್ಟೇಶನ್ ಆಗೋ ಹೆಂಗಸ್ರೆಲ್ಲ ಪ್ರೊವೊಕೇಟಿವ್ ಆಗಿರ್ತಾರಾ? ’ ಜಾಸ್ಮಿನ್ ಮಾತನಾಡುತ್ತ ಇದ್ದಳು. ನನಗೆ ನಡುಕ. ಬೆಳಗಾಗೆದ್ದು ಪೇಪರು ಬಿಡಿಸಿದರೆ ಸ್ಕಾರ್ಲೆಟ್ ಕೀಲಿಂಗ್ ಕೊಲೆಯ ಖಬರು. ಅವರು ಇವರ ಮೇಲೆ ಇವರು ಅವರ ಮೇಲೆ ಸಗಣಿ ಎರಚುವ ಭರದಲ್ಲಿ ಕೊಲೆಯ ವಿಷಯ ಮೂಲೆಗುಂಪು. ಆ ಹುಡುಗಿ ಯಾವ ರೀತಿಯ ಯಾತನೆ ಅನುಭವಿಸಿ ಸತ್ತಿರಬೇಕು?

ಪ್ರತಿಭಾ ಕೊಲೆ ಪ್ರಕರಣ ಬೆಳಕಿಗೆ ಬಂದಮೇಲೆ ಬಹಳ ಬದಲಾವಣೆಗಳಾಗಿವೆ. ಈಗ ಜಾಸ್ಮಿನ್ ತನ್ನ ಹತ್ತಿರದ ಪೊಲೀಸ್ ಠಾಣೆಯಲ್ಲಿ ತನ್ನ ಮನೆಯ ವಿಳಾಸ, ತನ್ನ ಹೆಸರು ಎಲ್ಲವನ್ನು ದಾಖಲು ಮಾಡಿಸಿದ್ದಾಳೆ. ತನ್ನ ದೊಗಲೆಬ್ಯಾಗಿನಲ್ಲಿ ಸದಾ ಒಂದು ಮಾರುದ್ದದ ದೊಣ್ಣೆ ಹಾಗೂ ಪೆಪ್ಪರ್ ಸ್ಪ್ರೇ ಇಟ್ಟುಕೊಳ್ಳದೆ ಹೊರಗೆ ಬರುವುದಿಲ್ಲ. ಕತ್ತಲಾದ ಮೇಲೆ ಓಡಾಡುವದನ್ನು ಆದಷ್ಟು ತಪ್ಪಿಸುತ್ತಾಳೆ. ‘ಒಬ್ಬಳೆ ಸಂಜೆ ವಾಕಿಂಗ್ ಹೋಗ್ಬೇಡ’ ಎಂದು ನನಗೆ ಬುದ್ಧಿವಾದ ಹೇಳುತ್ತಾಳೆ. ನಾನು ಏನು ಮಾಡಬಹುದು? ಯೋಚನೆ ಮಾಡುತ್ತಿದ್ದೇನೆ.

ಚಿತ್ರಕೃಪೆ: www.jupiterimages.com

Comments (26)

« Previous entries · Next entries »