ಜಿ.ಓ.ಡಿ ಗಾಡ್, ಡಿ.ಓ.ಜಿ. ಡಾಗ್ ಅಲ್ಲವಾ?

JPEG“ನಂಬಿದ್ರೆ ನಂಬಿ, ಬಿಟ್ರೆ ಬಿಡಿ. ನಂ ಯಜಮಾನ್ರು ಸಾಯೋಕೆ ಐದು ವರ್ಷ ಮುಂಚೆ ಅಂದ್ರೆ 1995ರಲ್ಲಿ ನಂಗೆ ಒಂದು ಕನಸು ಬಿತ್ತು. ಈಗ ನೆನಪು ಮಾಡಿದ್ರೆ ಅದು ಕನಸೋ ನಿಜ್ವೋ ಗೊತ್ತಾಗಲ್ಲ. ಅದ್ರಲ್ಲಿ ದೇವ್ರು ಬಂದು ನನ್ಹತ್ರ ಮಾತಾಡಿದ್ರು. ಬಂದಿದ್ದು ಜ್ಯೋತಿ ರೂಪದಲ್ಲಿ, ಕಾಣಿಸ್ಕೊಂಡಿದ್ದು ಇನ್ಸ್ಪೆಕ್ಟರ ಹಾಗೆ. ಗುರುವಾರ ದಿಸ ಆ ಇನ್ಸ್ಪೆಕ್ಟರು ಬಂದು ನಂಗೆ ನೋಡಮ್ಮಾ, ನಿನ್ನೆಜಮಾನ್ರು ಇನ್ನೈದು ವರ್ಷದಲ್ಲಿ ಸತ್ತೋಗ್ತಾರೆ. ಆವಾಗ ನಿನ್ನ ಜನರೇ ನಿನ್ನನ್ನ ಕೊಲೆ ಮಾಡೋಕೆ ನೋಡ್ತಾರೆ. ಆವಾಗ ನಾವು ನಿನ್ನನ್ನ ಪರೀಕ್ಷೆ ಮಾಡಕ್ಕೆ ನಾಯಿ ಕಳಿಸ್ತೀವಿ. ಅದನ್ನ ಯಾವುದೇ ಭೇದಭಾವ ಮಾಡದೇ ಚೆನ್ನಾಗಿ ನೋಡ್ಕೋ. ಆ ಪರೀಕ್ಷೆಯಲ್ಲಿ ಗೆದ್ದರೆ ನಾವು ನಿನ್ನನ್ನ ನೋಡಿಕೋತೀವಿ. ಆ ನಾಯಿಯೇ ನಿನ್ನನ್ನ ಗಂಡಾಂತರಗಳಿಂದ ಪಾರುಮಾಡುತ್ತೆ ಅಂದ್ರು. ನಾನು ಇದೇನಪ್ಪಾ ನಾನ್ಯಾವಾಗ್ಲೂ ನಾಯಿ ಸಾಕೇ ಇಲ್ಲ ಅಂದೆ. ಆವ್ರು ಇಲ್ಲ ನೋಡ್ಕೋ ಒಳ್ಳೇದಾಗತ್ತೆ ಅಂದವರೇ ಪುನಃ ಜ್ಯೋತಿರೂಪದಲ್ಲಿ ಹೊರಟೋದ್ರು. ನಂಗೆ ಒಂಥರಾ ಆಯ್ತು…”- ಲಲಿತಮ್ಮ ಎಂಬ ಎಲ್ಲರೂ ಅರೆಮರುಳೆಂದು ಕರೆಯುವ ಹೆಂಗಸು ತುಮಕೂರಿನ ಪಾಂಡುರಂಗನಗರದ ತನ್ನ ಅಣ್ಣ ಕಟ್ಟುತ್ತಿರುವ ಮನೆಯ ಮುಂದಿನ ಮರದ ಪೆಟ್ಟಿಗೆಯ ಮೇಲೆ ಸ್ವಲ್ಪ ಗೂನಾಗಿ ಕುಳಿತುಕೊಂಡು ಎಡೆಬಿಡದೇ ಮಾತನಾಡುತ್ತಲೇ ಇದ್ದರು. ಅಲ್ಲಿಯೇ ಬದಿಯಲ್ಲಿ ಅಕ್ಕಿ ಕೇರಿಕೊಂಡು ಕುಳಿತಿದ್ದ ಆಕೆಯ ಪಕ್ಕದ ಮನೆಯ ಹಿರಿಯ ಹೆಂಗಸೋರ್ವರು ಸಿನಿಕರಂತೆ ಅಡ್ಡಬಾಯಿ ಹಾಕುತ್ತ ಇದ್ದರು. ನಾನು ಆಕೆಯನ್ನು ಸುಮ್ಮನಿರಿಸಲು ವ್ಯರ್ಥಪ್ರಯತ್ನ ನಡೆಸುತ್ತ ಲಲಿತಮ್ಮ ಹೇಳುತ್ತಿದ್ದ ಕಥೆಯ ಹರಿವು ಹಾಳಾಗದಂತೆ ಕಾಯಲು ನೋಡುತ್ತ ಇದ್ದೆ.

dscn1489.jpg

 (ಸಿದ್ದರಾಜು, ಆಂಜನೇಯರ ಜತೆ ಲಲಿತಮ್ಮ)

ಸ್ವಲ್ಪ ಸಮಯದ ಹಿಂದೆ ಲಲಿತಮ್ಮನ ಬಳಿ ಸುಮಾರು ಇಪ್ಪತ್ತೊಂದು ನಾಯಿ ಇದ್ದವಂತೆ. “ಎಲ್ಲ ಕಂತ್ರಿನಾಯಿಗಳಾ?” ಕೇಳಿದೆ. ಆಕೆ ಹುಬ್ಬುಗಂಟಿಕ್ಕಿ, “ನೋಡಿ ಇವರೇ, ನಂಗೆ ಹೀಗೆಲ್ಲ ಕಂತ್ರಿನಾಯಿ ಅಂದ್ರೆ ಇಷ್ಟ ಆಗಲ್ಲ, ಕೋಪ ಬರತ್ತೆ” ಎಂದಾಗ ನಾನು ಕಕ್ಕಾಬಿಕ್ಕಿಯಾಗಿ, “ಅಲ್ಲಮ್ಮ, ಕಂತ್ರಿನಾಯಿ ಅಂದ್ರೆ ‘ಕಂಟ್ರಿಡಾಗ್’ ಅಂತ ನಮ್ಮ ಲೋಕಲ್ ಬ್ರೆಡ್ ನಾಯಿಗಳನ್ನ ಬ್ರಿಟೀಷರು ಕರೀತಿದ್ದಿದ್ದು. ಈಗ ನಮ್ಮ ಬಾಯಲ್ಲಿ ‘ಕಂಟ್ರಿ’ ಹೋಗಿ ‘ಕಂತ್ರಿ’ ಆಗಿದೆ.” ಎಂದು ಆಕೆಗೆ ಅರ್ಥವಾಗುವಂತೆ ವಿವರಣೆ ನೀಡಲು ಒದ್ದಾಡಿದೆ. ಆಕೆ “ಓ, ಹಂಗಾ, ಬಿಡಿಹಾಗಾದ್ರೆ.” ಎಂದು ನಕ್ಕರು. ಈಗ ಮನೆಕಟ್ಟುತ್ತಿರುವುದರಿಂದ ರಾತ್ರಿ ಮಲಗುವುದೆಲ್ಲಿ ಎಂದು ಕೇಳಿದೆ. ಆಕೆ ಇಲ್ಲೇ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ತಾನೂ ತನ್ನ ನಾಯಿಗಳೂ ಮಲಗುವುದೆಂದೂ ಅಲ್ಲಿ ತನ್ನ ನಾಯಿಗಳ ಸೆಕ್ಯುರಿಟಿ ಇರುವುದರಿಂದ ಯಾವುದೇ ಅಪಾಯವಿಲ್ಲವೆಂದೂ ಹೇಳಿದರು. ಈಗ ಲಲಿತಮ್ಮನ ಬಳಿ ಕೇವಲ ನಾಲ್ಕು ನಾಯಿಗಳೂ ಅವುಗಳಲ್ಲೊಂದು ನಾಯಿ ಹಾಕಿರುವ ಆರು ಮರಿಗಳು ಮಾತ್ರ ಇವೆ. ಅವುಗಳನ್ನೆಲ್ಲ ಸುತ್ತಮುತ್ತಲಿರುವ ಕಿಡಿಗೇಡಿಗಳು ವಿಷಹಾಕಿ ಸಾಯಿಸುವುದೋ, ದೂರ ಒಯ್ದು ಬಿಟ್ಟುಬರುವುದೋ ಮಾಡಿದರಂತೆ. ಈಗ ಆಕೆ ಹುಷಾರಾಗಿಬಿಟ್ಟಿದ್ದಾರೆ. ಈಗ ಉಳಿದಿರುವ ನಾಯಿಗಳಾದ ಸಿದ್ಧರಾಜು, ಆಂಜನೇಯ, ವಾಸವಿಜ್ಯೋತಿ, ರಾಮಲಕ್ಷ್ಮಿಯರನ್ನು ಬಿಟ್ಟು ಈಕೆ ಆಚೀಚೆ ಅಲುಗುವುದಿಲ್ಲ. ದಿನಕ್ಕೆ ಅವುಗಳ ಹಾಲು, ಬನ್ನು ಇತ್ಯಾದಿಗಳಿಗೆ ಹದಿನೈದರಿಂದ ನಲವತ್ತು ರೂಪಾಯಿಗಳು ಖರ್ಚಾಗುತ್ತವೆ. ಕಷ್ಟವಿರುವ ದಿನಗಳಲ್ಲಿ ಲಲಿತಮ್ಮ ತನ್ನ ಊಟದಲ್ಲಿ ಅರ್ಧ ಮಿಗಿಸಿ ನಾಯಿಗಳಿಗೆ ಉಣ್ಣಿಸಿದ್ದೂ ಇದೆಯಂತೆ. “ವಾಸವಿಯ ಮರಿಗಳನ್ನು ನೋಡುತ್ತೀರ?” ಎಂದು ಲಲಿತಮ್ಮ ಕೇಳಿದಾಗ ತಲೆಯಾಡಿಸಿದೆ. ಸುತ್ತಮುತ್ತಲಿನವರೆಲ್ಲ ಆ ಜಾಗ ಕೊಳಕಾಗಿದೆಯೆಂದೂ, ಹೋಗಬೇಡಿರೆಂದು ಹೇಳಿದರೂ ನಾನು ಕಿಂದರಿಜೋಗಿಯನ್ನು ಹಿಂಬಾಲಿಸುವ ಇಲಿಯ ಹಾಗೆ ಕ್ಯಾಮರ ಹಿಡಿದು ಲಲಿತಮ್ಮನ ಹಿಂದೆಯೇ ಹೋದೆ. ಅದು ಲಲಿತಮ್ಮನ ಮನೆಯ ಪಕ್ಕದಲ್ಲಿಯೇ ಇದ್ದ ಒಂದು ಪಾಳುಬಿದ್ದ ಚಿಕ್ಕ ವಠಾರ. ಒಳತೂರಲೊಂದಿಷ್ಟು ಜಾಗ. ಒಳನುಗ್ಗಿದರೆ ಬೆಳೆದುಕೊಂಡ ಕುರುಚಲು ಪೊದೆಗಳು, ಮಳೆಬಂದು ತುಂಬಿಕೊಂಡ ಕೆಸರು, ಗವ್ವೆನ್ನುವ ಕತ್ತಲು, ಸ್ವಲ್ಪ ಆಯತಪ್ಪಿದರೆ ಬೀಳುವ ಭಯ. ಲಲಿತಮ್ಮ ಸರಸರನೆ ಒಳನುಗ್ಗಿದವರೇ ತನ್ನ ಕೀಚಲುಕಂಠದಲ್ಲಿ ‘ವಾಸವೀ’ ಎಂದು ಅಕ್ಕರೆಯಿಂದ ಕರೆಯುತ್ತ ಮುಂದೆಹೋದರು. ಹಾವು, ಚೇಳುಗಳನ್ನು ನೆನೆಯುತ್ತ ಹೋಗುತ್ತ ಇದ್ದ ನನಗೆ ಆಕೆ ಮಂಡಿಯೂರಿ ಆ ಮನೆಯ ಅಡಿಗೆಮನೆಯಾಗಿರಬಹುದಾಗಿದ್ದ ಕೋಣೆಯ ಗೂಡೊಂದರ ಬಳಿ ಕೂತದ್ದು ಕಂಡುಬಂತು. ಅರೆಗತ್ತಲಿಗೆ ಕಣ್ಣು ಹೊಂದಿಕೊಂಡಾಗ ಸುಸ್ತಾಗಿ ಮಲಗಿಕೊಂಡಿದ್ದ ಹೆಣ್ಣುನಾಯಿಯೊಂದರ ತಲೆ ಮಾತ್ರ ಕಾಣಿಸಿತು. ಲಲಿತಮ್ಮ ನಾನು ಬೇಡಬೇಡವೆಂದು ವಿರೋಧಿಸಿದರೂ ಗೂಡಿಗೆ ಕೈಹಾಕಿ ವಾಸವಿಯನ್ನೂ ಆಕೆಯ ಮರಿಗಳನ್ನೂ ಈಚೆಗೆ ತೆಗೆದು ತೋರಿಸಿದರು. ಮಗಳಿಗೆ ಬಾಣಂತನ ಮಾಡುವ ತಾಯಿಯ ಹಾಗೆ ವಾಸವಿಗೆ ಏನೇನೋ ಮುದ್ದಾಗಿ ಗದರಿ ವಾಪಾಸು ಗೂಡಿಗೆ ಬಿಟ್ಟರು.

dscn1482.jpg

 (ವಾಸವಿಜ್ಯೋತಿಯ ಮರಿಗಳ ಆರೈಕೆ)

ಬಿ.ವಿ. ಲಲಿತಮ್ಮನ ಗಂಡ ತುಮಕೂರಿನ ಸರಕಾರೀ ಆರೋಗ್ಯ ಇಲಾಖೆಯಲ್ಲಿ ಡ್ರೈವರಾಗಿದ್ದವ 2000ನೇ ಇಸವಿಯಲ್ಲಿ ಜಾಂಡೀಸಾಗಿ ಡ್ಯೂಟಿಯಲ್ಲಿರುವಾಗಲೆ ಸಾವನ್ನಪ್ಪಿದರಂತೆ. ಈಕೆಯೂ ಕೂಡ ತುಮಕೂರಿನ ವಾಸವಿ ವಿದ್ಯಾಪೀಠದಲ್ಲಿ ಆಯಾ ಆಗಿ ಸುಮಾರು ಇಪ್ಪತ್ತು ವರುಷ ಕೆಲಸ ಮಾಡಿದ್ದರಂತೆ. ಆಕೆಯ ಗಂಡ ತೀರಿಹೋದ ಮೇಲೆ ಈಕೆಗೆ ನಾಯಿ ಸಾಕುವ ಹುಚ್ಚು ಶುರುವಾಯಿತು ಎಂದು ಈಕೆಯ ಅತ್ತಿಗೆ ಅಶ್ವಥಮ್ಮ ಹೇಳಿದರೆ ಲಲಿತಮ್ಮ ಅದನ್ನು ಸಾರಾಸಗಟಾಗಿ ಅಲ್ಲಗೆಳೆಯುತ್ತಾ – “ನಾನೇನೂ ಸಾಕ್ಲಿಲ್ಲ. ಇವರು ಹೋದ ಆರು ತಿಂಗಳಿಗೆ ಒಂದು ನಾಯಿ ಅದಾಗೇ ಬಂತು. ದೇವರ ಆರ್ಡರಾಗಿದ್ದರಿಂದ ನಾನು ನೋಡಿಕೊಂಡೆ. ಅದರಿಂದ ನಂಗೆ ತುಂಬಾ ಒಳ್ಳೆದಾಗಿದೆ. ಮನಸ್ಸಿಗೆ ಧೈರ್ಯ ಬಂದಿದೆ.” ಎಂದು ಪದೇ ಪದೇ ಹೇಳುತ್ತ ಇದ್ದರು. ಲಲಿತಮ್ಮನ ತಂದೆ ವೆಂಕಟರಮಣಪ್ಪ ಮಾತ್ರ ನಾಯಿಗಳ ಮೇಲೆ ಬಹಳ ಆಕ್ರೋಶವಿಟ್ಟುಕೊಂಡು ಮಾತನಾಡಿದರು. ನಾಯಿಗಳು ಸೇರಿ ಬಹಳ ಧಾಂಧಲೆ ಎಬ್ಬಿಸುವುದು, ಮಕ್ಕಳನ್ನು ಅಟ್ಟಿಸಿಕೊಂಡು ಹೋಗುವುದು, ಕೋಳಿಗಳನ್ನು ತಿಂದುಹೋಗುವುದು ಇತ್ಯಾದಿ ಮಾಡುತ್ತವೆಂದೂ, ತಾನು ನಾಯಿಗಳನ್ನು ಸಾಕಬೇಡವೆಂದು ಹೇಳಿದರೆ ಆಕೆ ತನ್ನಮೇಲೆಯೇ ತನ್ನ ನಾಯಿಗಳನ್ನು ಛೂಬಿಡುತ್ತಾಳೆಂದು ಹೇಳಿ ಟವೆಲ್ಲು ಕೊಡವಿ ಬಿರಬಿರನೆ ಅಲ್ಲಿಂದ ಹೊರಟುಹೋದರು. ಲಲಿತಮ್ಮ ಮಾತ್ರ, “ಅದು ಹೇಗೆ ಸಾಕಬೇಡಾಂತ ಅಂತಾರೆ? ಅದು ದೇವರು. ನೀವೇ ಹೇಳಿ. ಜಿಓಡಿ ಗಾಡ್, ಡಿಓಜಿ ಡಾಗ್ ಅಲ್ಲವಾ? ಮತ್ತೆ ‘ತಾಯಿಯನ್ನ ಸಾಕದಿದ್ದರೂ ನಾಯಿಯನ್ನ ಸಾಕು’ ಅಂತ ಗಾದೇನೇ ಇದೆಯಲ್ಲ. ಒಂದೊಂದುಸಾರೆ ಇದೆಲ್ಲ ಬಿಡೋಣ ಅಂದುಕೊಂಡ್ರೂ ಆ ಇನ್ಸ್ಪೆಕ್ಟರ ರೂಪದಲ್ಲಿ ಬಂದ ದೇವರನ್ನ ನೆನೆಸಿ ಸುಮ್ಮನಾಗ್ತೀನಿ. ನನ್ನ ರಾಘವೇಂದ್ರ, ಪವಿತ್ರಲಕ್ಷ್ಮಿ, ಗೋಪಾಲಕೃಷ್ಣ, ಭೀಮ, ಧರ್ಮರಾಯ ಎಲ್ಲ ಸತ್ತೋದ್ರು. ಈಗ ಈ ನಾಯಿಗಳು ಸೊಲ್ಪ ಹೊತ್ತು ಕಾಣದೇ ಹೋದ್ರೂ ದುಃಖ ಉಕ್ಕುತ್ತೆ. ರಾತ್ರೆ ಮಲಗೋವಾಗ ಮಕ್ಕಳಹಾಗೆ ಅವು ಮಗ್ಗುಲಲ್ಲಿ ಇರದೇ ಹೋದ್ರೆ ನಿದ್ದೆ ಮಾಡೋಕಾಗಲ್ಲ. ಎಷ್ಟೋ ಸಾರಿ ಕೆಟ್ಟ ಗಂಡಸ್ರಿಂದ ಇವೇ ನನ್ನನ್ನ ಪಾರುಮಾಡಿದಾವೆ” ಎಂದವರೇ “ನಿಂಗೆ ಮದ್ವೆ ಆಗಿದ್ಯಾ?” ಎಂದು ಕೇಳಿದರು. ಹೌದೆಂದೆ. “ಹಾಗಿದ್ರೆ ಬಿಡು. ಸಾರಿ.” ಎಂದು ಗೊಣಗಿದವರೇ ಇದ್ದಕ್ಕಿದ್ದಂತೆ ಸುಮ್ಮನಾದರು. ನಾನು ಸಿದ್ಧ, ಆಂಜನೇಯರಿಗೆ ಲಲಿತಮ್ಮ ಬನ್ನು ತಿನ್ನಿಸುವ ಫೋಟೋ ತೆಗೆದೆ. ಬಹಳ ಖುಶಿಯಾದರು. ತನ್ನ ಒಂದು ಹಲ್ಲಿಲ್ಲದ ದಂತಪಂಕ್ತಿಯನ್ನು ಪ್ರದರ್ಶಿಸುತ್ತ ಇನ್ನಷ್ಟು ಪೋಸು ನೀಡಿದರು. ಬೀದಿಯ ಜನರೆಲ್ಲ ನನ್ನ ಆಕೆಯ ಹಾಗೂ ನಾಯಿಗಳ ಜೋಡಿ ನೋಡಿ ಮುಸಿಮುಸಿ ನಗುತ್ತಿದ್ದರು. ಹೋಗಿಬರುವೆನೆಂದು ಹೇಳಿ ಹೊರಟೆ. ಸ್ವಲ್ಪ ದೂರ ಹೋಗಿಲ್ಲ, ಲಲಿತಮ್ಮ ಹಿಂದೆಯೇ ಓಡಿಬರುವುದು ಕಾಣಿಸಿ ನಿಂತೆ. ಏದುಸಿರುಬಿಡುತ್ತ ಬಂದ ಆಕೆ “ನೀನು ಫೋಟೋ ತೆಗೆದ್ಯಲ್ಲ, ನಿಂಗೆ ಇಪ್ಪತ್ತು ರೂಪಾಯಿ ಕೊಡ್ಲಾ?” ಎಂದು ಕೇಳಿದರು. ಬೇಡವೆಂದೆ. ಲಲಿತಮ್ಮ ಖುಶಿಯಾದವರೇ ನನಗೆ, “ನೀನೆಷ್ಟು ಒಳ್ಳೆಯವಳು! ನಿಂಗೆ ತುಂಬ ದುಡ್ಡು ಸಿಗಲಿ, ಸಂಬಳ ಜಾಸ್ತಿಯಾಗಲಿ” ಎಂದೆಲ್ಲ ಹಾರೈಸಿದರು. ಸಿದ್ಧರಾಜು ಹಾಗೂ ಆಂಜನೇಯ ಎಂಬ ನಾಯಿಗಳು ಆಕೆಯ ಮೈಮೇಲೆ ಹಾರುತ್ತ ಹೆಗಲಿನ ಮೇಲೆ ಕಾಲೂರಲು ಪ್ರಯತ್ನಿಸುತ್ತಿದ್ದವು. ನನಗೆ ಅಲ್ಲಿಂದ ಹೊರಡಲು ಕಷ್ಟವೆನಿಸತೊಡಗಿತು.

Advertisements

One thought on “ಜಿ.ಓ.ಡಿ ಗಾಡ್, ಡಿ.ಓ.ಜಿ. ಡಾಗ್ ಅಲ್ಲವಾ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s