ಫರೀದಾ ಹೇಳಿದ ಕಥೆ

village_girl_at_jatoli1.jpg

ನನ್ನೂರಿನ ಗಲ್ಲಿಯೊಂದರಲ್ಲಿ ಫರೀದಾಳನ್ನು ಮೊದಲು ನೋಡಿದಾಗ ಹಿಂಸೆಯೆನಿಸಿತ್ತು. ನನ್ನ ಪರಿಚಯಸ್ಥರೊಬ್ಬರ ಮನೆಗೆ ಹೋದಾಗ ಸೊಂಟದ ಮೇಲೊಂದು ಮಗುವನ್ನು ಕೂರಿಸಿಕೊಂಡು ತಲೆಬಗ್ಗಿಸಿಕೊಂಡೇ ಓಡಾಡುತ್ತಿದ್ದ ಹದಿನಾರರ ಫರೀದಾ ಒಣಕಲು ಕಡ್ಡಿಯಂತಿದ್ದಳು. ಆಗ ಆಕೆಯ ಕೈತುಂಬ ಸೋಪು ಅಲರ್ಜಿಯಾಗಿ ಗುಳ್ಳೆಗಳಾಗಿದ್ದವು. ಕೂದಲಿಗೆ ಎಣ್ಣೆ ಕಂಡು ತಿಂಗಳುಗಳೇ ಕಳೆದಿತ್ತೇನೋ – ಕೆಂಚಗಿತ್ತು. ಆಕೆಯ ಅಮ್ಮ ಮನೆಯೊಡೆಯರಿಂದ ದೊಡ್ಡ ಮೊತ್ತದ ಸಾಲ ಇಸಿದುಕೊಂಡುಬಿಟ್ಟಿದ್ದಳು. ಮಗಳನ್ನು ದುಡಿದು ಸಾಲ ತೀರಿಸಲು ಬಿಟ್ಟು ಲಕ್ಕವಳ್ಳಿಯ ತನ್ನ ಮನೆಯಲ್ಲಿದ್ದ ಇನ್ನರ್ಧ ಡಜನ್ ಹೆಣ್ಣುಮಕ್ಕಳನ್ನು ಸಂಭಾಳಿಸಲು ಹೊರಟುಹೋಗಿದ್ದಳು. ಆಗೀಗ ಪೇಟೆಗೆ ಹೋಗುವಾಗ ನಾನವಳ ಕಡೆಗೆ ನಗೆ ಮಿಂಚಿಸುತ್ತಿದ್ದೆ. ಕೆಲವೆ ತಿಂಗಳುಗಳಲ್ಲಿ ಏನಾಯಿತೋ ಏನೋ, ಆಕೆಯ ತಾಯಿ ನನ್ನಮ್ಮನ ಬಳಿ ಬಂದು ಫರೀದಾಳನ್ನು ನಮ್ಮ ಮನೆಗೆ ಕೆಲಸಕ್ಕೆ ಸೇರಿಸಿಕೊಳ್ಳಲೇಬೇಕೆಂದು ಅಂಗಲಾಚಿದಳು. ಹಳೆಯ ಮನೆಯ ಸಾಲ ತೀರಿತ್ತು. ನನ್ನಮ್ಮನ ದೊಡ್ಡ ಕೈ ಓರಗೆಯಲ್ಲಿ ಮನೆಮಾತಾಗಿದ್ದಿದ್ದಕ್ಕೆ ಇರಬೇಕು. ಅಮ್ಮ ಆಕೆಯ ಹೆಸರಿನಲ್ಲಿ ಸಾಲ ಕೊಡಲೊಪ್ಪಲಿಲ್ಲ. ತಿಂಗಳ ಸಂಬಳ ಫಿಕ್ಸಾಯಿತು. ಫರೀದಾ ನಮ್ಮ ಮನೆಗೆ ಬರಲಾರಂಭಿಸಿದಳು.
 
ಕೆಲವಾರು ದಿನಗಳಲ್ಲಿ ಫರೀದಾ ಮೈತುಂಬಿಕೊಂಡಳು. ಅಚ್ಚುಕಟ್ಟು ಹುಡುಗಿ. ಬೆಳಗ್ಗೆ ಮನೆಗೆ ಬಂದು ನುಗ್ಗಿದಳೆಂದರೆ ರಾತ್ರಿ ಎಂಟರವರೆಗೂ ನಮ್ಮ ಮನೆ ಬಿಟ್ಟು ಅಲುಗುತ್ತಿರಲಿಲ್ಲ. ಹತ್ತಿರವೇ ಇದ್ದ ಆಕೆಯ ಅತ್ತೆಯ ಮನೆಗೆ ಹೋಗಿಬಾ ಎಂದರೂ ಹೋಗುತ್ತಿರಲಿಲ್ಲ. ಒತ್ತಾಯಿಸಿ ಕೇಳಿದಾಗ ಆಕೆಯ ಅತ್ತೆ ಫರೀದಾಳನ್ನು ನೆಲದ ಮೇಲೆ ಚಾಪೆಯನ್ನೂ ಕೊಡದೆ ಮಲಗಿಸುತ್ತಿದ್ದುದು, ಲೋಟ ನೀರು ಕೊಡಲೂ ಸಾವಿರ ಕೆಟ್ಟ ಮಾತಾಡುತ್ತಿದ್ದುದು ಗೊತ್ತಾಗಿ ನಾವೂ ಒತ್ತಾಯ ಮಾಡುವುದು ಬಿಟ್ಟೆವು. ಅಮ್ಮ ಫರೀದಾಳಿಗೊಂದು ಹಳೆಯ ಹಾಸಿಗೆಯನ್ನೂ, ಕಂಬಳಿಯನ್ನೂ ಕಳುಹಿಸಿಕೊಟ್ಟರು.

ಆಗಾಗ ನಾನು ಫರೀದಾಳ ವಿಚಿತ್ರ ಅಭ್ಯಾಸವೊಂದನ್ನು ಗಮನಿಸಿದ್ದೆ. ಆಕೆ ಮನೆ ಹಿತ್ತಲಿಗೆ ಆಗಾಗ ಹೋಗಿ ತೆಂಗಿನಮರದ ಬುಡದಲ್ಲಿ ಒಬ್ಬಳೇ ಕೂತು ಮಾತನಾಡಿಕೊಳ್ಳುವುದು, ನಗುವುದು, ಅಳುವುದು ನಡೆಯುತ್ತಿತ್ತು. ನನಗೆ ಅವಳನ್ನು ಕದ್ದು ಗಮನಿಸುವುದೊಂದು ಹಾಬಿಯಾಗಿಬಿಟ್ಟಿತ್ತು. ಒಮ್ಮೆ ಆಕೆ ಹೀಗೆಯೇ ಅಳುತ್ತಿದ್ದುದು ಕಂಡಾಗ ತಡೆಯಲಾರದೆ ಬಳಿಗೆ ಹೋಗಿ “ಏನಾಯಿತೆ?” ಎಂದು ಕೇಳಿದೆ. ಫರೀದಾ ಗಡಿಬಿಡಿಯಲ್ಲಿ ಕಣ್ಣೊರಸಿಕೊಂಡು, “ಏನಿಲ್ಲ ಆಪಾ, ನನ್ನ ತಂಗಿಯ ನೆನಪಾಯ್ತು. ನಾನು ಹೀಗೆ ಅಳುತ್ತಿದ್ದೇ ಅಂತ ಯಾರಿಗೂ ಹೇಳಬೇಡಿ” ಅಂದಳು. ನನಗೆ ಹುಡುಗುಬುದ್ಧಿ. “ಯಾಕೆ ಅಳುತ್ತಿದ್ದೆ ಅಂತ ಹೇಳಿದರೆ ಮಾತ್ರ ಹೇಳುವುದಿಲ್ಲ” ಎಂದು ಮೊಂಡಾಟ ತೋರಿಸಿದೆ. ಆಗ ಫರೀದಾ ಸಣ್ಣದನಿಯಲ್ಲಿ ಹೇಳಿದ್ದ ಕಥೆಯನ್ನು ಹೇಳಲು ನನ್ನೊಳಗಿನ ಧೈರ್ಯವನ್ನೆಲ್ಲ ಒಟ್ಟುಗೂಡಿಸಿಕೊಂಡು ಕೂತಿದ್ದೇನೆ.

ನನ್ನೂರಿನ ಇನ್ನೊಂದು ಮೂಲೆಯ ಎಸ್ಟೇಟೊಂದರಲ್ಲಿ ಫರೀದಾಳ ಅಕ್ಕ, ಭಾವ ಕೆಲಸ ಮಾಡುತ್ತ ಇದ್ದಿದ್ದು. ಫರೀದಾಳ ಅಮ್ಮ ತನ್ನ ಐದನೇ ಮಗಳನ್ನು ಎಂದರೆ ಫರೀದಾಳ ತಂಗಿಯನ್ನು ಅವರ ಬಳಿ ಬಿಟ್ಟಿದ್ದಳು. ಆ ಹುಡುಗಿಗಿದ್ದ ಶೋಕಿ, ತುಡುಗುಬುದ್ಧಿಗಳು ಇನ್ನಾರಿಗೂ ಇರಲಿಲ್ಲವೆಂದೂ, ಆಕೆಗೆ ವಿಪರೀತ ಸಿನಿಮಾ ಹುಚ್ಚಿತ್ತೆಂದೂ ಫರೀದಾ ನನಗೆ ತಿಳಿಸಿದಳು. ಇಂತಹ ಹುಡುಗಿಗೆ ಒಬ್ಬ ಕಟ್ಟುಮಸ್ತಾಗಿದ್ದ ಚಿಗುರುಮೀಸೆಯ ಕೂಲಿಯ ಹುಡುಗನೊಬ್ಬನ ಮೇಲೆ ಪ್ರೀತಿ ಉಂಟಾಯಿತು. ಕದ್ದು ಭೇಟಿಯಾಗಲಾರಂಭಿಸಿದರು. ಯಾರಿಂದಲೋ ವಿಷಯ ತಿಳಿದ ಅಕ್ಕ, ಭಾವ ಉರಿದುಬಿದ್ದರು. ಜಾತಿಭೇದದ ಮಾತಾಯಿತು. ಬೈದವರನ್ನು ಈ ಹುಡುಗಿ ಎದುರಿಸಿ ನಿಂತಳು. ಚೆಲ್ಲಾಗಿ ನಡೆದುಕೊಳ್ಳುತ್ತಿದ್ದ ತನ್ನ ಭಾವನ ಮೇಲೆ ಇದ್ದ ಅಲ್ಲಿನವರೆಗಿನ ಸಿಟ್ಟನ್ನೆಲ್ಲ ಕಾರಿದಳು. ಒಂದು ಸಂಜೆ ತನ್ನ ಹುಡುಗನನ್ನು ಭೇಟಿಯಾಗಿ ಬಂದವಳನ್ನು ಆಕೆಯ ಭಾವ ಬೆತ್ತದಲ್ಲಿ ತಾರಾಮಾರಾ ಹೊಡೆದದ್ದು ಅಕ್ಕಪಕ್ಕದವರಿಗೆಲ್ಲ ಕೇಳಿದೆ. ನಂತರ ಆ ಹುಡುಗಿಯ ಪತ್ತೆಯಿಲ್ಲ. ದೇಹವೂ ದೊರಕಿಲ್ಲ. ಆಕೆಯ ಹುಡುಗ ನಾಲಕ್ಕು ದಿನ ಹುಚ್ಚನ ಹಾಗೆ ಅಲೆದು ಬಾವಿಗೆ ಹಾರಿಕೊಂಡನಂತೆ. ಫರೀದಾಳ ಭಾವನೇ ಆಕೆಯನ್ನು ಹೊಡೆದು ಕೊಂದನೆಂದೂ ಆಕೆಯನ್ನು ಯಾರಿಗೂ ತಿಳಿಯದಂತೆ ಮಣ್ಣು ಮಾಡಲಾಯಿತೆಂದೂ ಯಾರೋ ಫರೀದಾಳ ಅಮ್ಮನಿಗೆ ಹೇಳಿದರಂತೆ. ಫರೀದಾಳ ಅಕ್ಕ, ಭಾವ ಮಾತ್ರ ಆಕೆ ಜಗಳವಾಡಿಕೊಂಡು ಲಕ್ಕವಳ್ಳಿಯ ಬಸ್ಸು ಹತ್ತಿದ್ದು ನಿಜವೆಂದು ಆಣೆ ಮಾಡಿ ಹೇಳಿದ್ದಾರೆ. ಫರೀದಾ  ಇವತ್ತಿಗು ಕಳೆದುಹೋದ ತನ್ನ ತಂಗಿಯ ಮಾಸಲು ಫೋಟೋವನ್ನು ಇಟ್ಟುಕೊಂಡು ದುಃಖಿಸುತ್ತಾಳೆ. ಅವಳ ಕಥೆ ಕೇಳಿ ನಡುಗಿಹೋಗಿದ್ದೆ.

ನಾನು ಯಾವಾಗಲೋ ಅನುವಾದಿಸಿದ್ದ ಪ್ರೀತಿಯ ಕವಯಿತ್ರಿ ಇಮ್ತಿಯಾಜ ಧಾರ್ಕರಳ ಕವನದ ನಾಲಕ್ಕು ಸಾಲುಗಳು ಫರೀದಾಳ ತಂಗಿಗೆಂದೆ ಬರೆದ ಹಾಗಿವೆ :

ನಿನ್ನನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.
ನಿನ್ನ ಕನಸುಗಳಲ್ಲಿ ಹಲವಾರು ದಿನಗಳವರೆಗೆ ಆತ ತುಂಬಿದ್ದ
ಆತನ ಕೆನ್ನೆಗಳವರೆಗೆ ತೀರ್ಥಯಾತ್ರೆ ನಡೆಸುತ್ತ
ನೀನು ಬೆಂದು ಕರಕಾಗಿ ಹೋದೆ,
ಕೊನೆಯ ತೀರ್ಪಿಗೂ ಬಹಳ ಮುನ್ನ
ಉರಿಗೆ ಸಿಲುಕಿ.
 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s