ಬೆಂಗಳೂರಲ್ಲಿ ಕಂಡ ಹ್ಯಾರಿ ಪಾಟರ್

ಬೀದಿಬದಿ ಪೈರೇಟೆಡ್ ಡಿವಿಡಿಗಳನ್ನು ಮಾರುವ ಮುದ್ದುಮುಖದ ಹುಡುಗ ನನ್ನ ನೋಡಿ ನಗುತ್ತಿರುತ್ತಾನೆ. ಪ್ರತಿದಿನವೂ ಆಫೀಸುಬಿಟ್ಟು ಮನೆಗೆ ಬರುವ ವೇಳೆಗೆ ಬೇಕರಿಯ ಮುಂದೆ, ತರಕಾರಿ ಅಂಗಡಿಯ ಬಳಿ, ಭೇಲಪುರಿ ಗಾಡಿಯ ಬದಿ – ಹೀಗೆ ಸಾಮಾನ್ಯವಾಗಿ ಜನಜಂಗುಳಿಯಿರುವ ಸ್ಥಳವೊಂದನ್ನಾಯ್ದುಕೊಂಡು ತನ್ನ ನೀಲಿ ಸ್ಕೂಲುಬ್ಯಾಗಿನ ಜತೆ ನಿಂತಿರುವ ಆತನ ಕಣ್ಣಲ್ಲಿ ಸದಾ ಪುಟ್ಟ ಆತಂಕವೊಂದು ಎದ್ದು ಕಾಣುತ್ತದೆ. ನನ್ನ ಕಂಡೊಡನೆ ಪ್ರತಿದಿನವೂ ಪರಿಚಯದ ನಗೆಬೀರಿ ಒಂದಷ್ಟು ಡಿವಿಡಿಗಳನ್ನು ಕಣ್ಣಮುಂದೆ ಹಾಯಿಸಿ “ಅಕ್ಕಾರೇ, ತಗಳಿ, ಒಳ್ಳೊಳ್ಳೆ ಫಿಲಮ್ಮು!” ಎಂದು ಆಸೆ ಹುಟ್ಟಿಸುತ್ತಾನೆ. ನಾನು ಪ್ರತಿಸಾರಿಯೂ ಒಲ್ಲೆನೆಂದು ಹೇಳಿ ಹಾದುಹೋಗುತ್ತೇನೆ. ಯಾರಾದರು ಗಿರಾಕಿ ಚೌಕಾಸಿ ಮಾಡುತ್ತಿದ್ದರೆ ‘ಇವತ್ತೊಬ್ಬ ಬಕರ ಸಿಕ್ಕಿದ’ ಎನ್ನುವ ತೆರದಲ್ಲಿ ನನ್ನಕಡೆ ಕಣ್ಣುಮಿಂಚಿಸುವ ಹುಡುಗ ವಾಪಾಸು ವ್ಯಾಪಾರಕ್ಕೆ ತೊಡಗುತ್ತಾನೆ.

ಬೇಕರಿಯಲ್ಲಿ ಬ್ರೆಡ್ ತೆಗೆದುಕೊಳ್ಳಲು ನಿಂತಿದ್ದಾಗ ಡಿವಿಡಿಹುಡುಗ ಅಲ್ಲಿಯೆ ಫುಟ್ಪಾತಿನ ಮೂಲೆಯಲ್ಲಿ ನಿಂತುಕೊಂಡಿದ್ದು ಕಾಣಿಸಿತು. ಅವನ ಆಸೆತುಂಬಿದ ಕಣ್ಣೆಲ್ಲ ಬೇಕರಿಯ ಗಾಜಿನ ಕಪಾಟುಗಳ ತಿಂಡಿಗಳ ಮೇಲೆ. ನನಗೆ ದೂರವಿರುವ ಮಗಳ ನೆನಪಾಗಿ ಹೊಟ್ಟೆಯಲ್ಲಿ ಸಂಕಟ. ಹೊರಗೆ ಸಣ್ಣಗೆ ಮಳೆ ಹನಿಯಲು ಶುರುವಾಯಿತು. ಹುಡುಗ ತನ್ನ ನೀಲಿಬ್ಯಾಗು ಗಟ್ಟಿಯಾಗಿ ಅವುಚಿಹಿಡಿದುಕೊಂಡ.

tsubi_boy_sm1.jpg

“ಬಾ ಇಲ್ಲಿ!” ಅವನ ಕೂಗಿ ಕರೆದೆ. ಅನುಮಾನಿಸುತ್ತ ಬಂದ. “ಏನು ತಿಂತೀಯ?” ಕೇಳಿದೆ. ಕಾದಿದ್ದವನ ಹಾಗೆ ಒಂದೇ ಉಸುರಿಗೆ “ಚಂಪಾಕಲಿ” ಎಂದ. ಕೊಡಿಸಿದೆ. “ಯಾವೂರು?” ಕೇಳಿದೆ. ಕ್ಲುಪ್ತವಾಗಿ “ದಾವಣಗೆರೆ ಹತ್ರ ಹಳ್ಳಿ ನಮ್ದು.” ಉತ್ತರ ಬಂತು. “ಕಾಫಿ ಕುಡೀತೀಯ?” ತಲೆಯಾಡಿತು. ಬೇಕರಿಯವ ನಮ್ಮನ್ನೆ ವಿಚಿತ್ರವಾಗಿ ನೋಡುತ್ತಿದ್ದ. “ಮನೆ ಬಿಟ್ಟು ಬಂದಿದೀಯ?” ತಲೆ ತಗ್ಗಿತು. “ಇನ್ನೇನ್ ಮಾಡ್ಲಿ? ಮನೇಲಿ ಅಪ್ಪ ಅಮ್ಮ ಇಬ್ರೂವೆ ಕುಡಿಯೋದು, ಗಲಾಟೆ ಮಾಡೋದು. ನಾಕು ಜನ ಅಕ್ಕತಂಗಿದೀರು. ಮದುವೆ ಮಾಡಬೇಕು. ದುಡ್ಡಿಲ್ಲ. ಯಾರೊ ಹೋಗ್ತೀನಿ ಅಂದ್ರು. ಬಂದೆ.” ಬಾಯಿಂದ ಮುತ್ತುಗಳುದುರಿದವು. ಇನ್ನೇನು ಅಳುವವನ ಹಾಗೆ ಕಂಡ. “ಸ್ಕೂಲಿಗೆ ಹೋಗಿಲ್ವ?” ಪ್ರಶ್ನೆ. “ಒಂದ್ನೇ ಕ್ಲಾಸಿಗೇ ಬಿಡುಸಾಕಿದ್ರು. ಗ್ಯಾರಾಜಿಗೆ ಹೋಗ್ತಿದ್ದೆ. ಈಗ ಏಳು ತಿಂಗಳಾಗಿದೆ ಇಲ್ಲಿ ಬಂದು. ಅದ್ರಲ್ಲಿ ಹೋದ ತಿಂಗ್ಳು ಜೈಲಲ್ಲಿದ್ದೆ” ಉತ್ತರ. ಅವಾಕ್ಕಾದೆ. “ಅಲ್ವೋ, ಬಂದು ನೆಟ್ಟಗೆ ವರ್ಷ ಕಳೆದಿಲ್ಲ, ಆಗ್ಲೇ ಜೈಲೂಟ ಮಾಡಿದೀಯ? ಯಾಕೆ ಹೋಗಿದ್ದು?” ಕೇಳಿದೆ. “ಅದೇ ಅಕ್ಕಾರೆ, ಅದ್ಯಾದೋ ಹುಡುಗುನ್ ಮ್ಯಾಜಿಕ್ಕಿಂದು ಬುಕ್ಕಂತೆ, ಆಚೆತಿಂಗಳು ಎಲ್ರೂ ತಗೋತಿದ್ರಲ್ಲ. ಅದೆ. ನಂಜೊತೆ ಇರೋರು ಅದ್ನ ಕೊಟ್ಟು ಮಾರು ಅಂದ್ರು. ಭಾಷ್ಯಂ ಸರ್ಕಲ್ ಹತ್ರ ಇದ್ದೆ. ಪೋಲಿಸೋರು ಬಂದು ಬುಕ್ಕೆಲ್ಲ ಎತ್ತಾಕ್ಕೊಂಡು ಒಳಗಾಕಿದ್ರು. ಸ್ವಲ್ಪ ದಿನ ಇದ್ದೆ. ಬಿಟ್ಟಮೇಲೆ ಬುಕ್ಕಿನ್ ದುಡ್ಡು ತೀರಿಸಾಕೆ ಸಾಲಮಾಡಿದೆ. ಆಮೇಲೆ ಸಾಲಮಾಡಿದೋರಹತ್ರ ಒಂದುತಿಂಗಳು ಇದ್ದೆ. ಹೇಳಿದ್ ಕೆಲ್ಸ ಎಲ್ಲ ಮಾಡ್ತಿದ್ದೆ.” ಹ್ಯಾರಿ ಪಾಟರನ ನಕಲುಪುಸ್ತಕ ಮಾರಲು ಹೋಗಿ ಹುಡುಗ ಫಜೀತಿಗೀಡಾಗಿದ್ದ. ಮುಖದಲ್ಲಿ ಯಾವುದೇ ಖೇದ ಕಾಣಲಿಲ್ಲ. ನಾನು, “ಅಲ್ಲ, ಪುನಃ ಇದ್ನೆಲ್ಲ ಮಾರ್ತಿದೀಯಲ್ಲ? ಮತ್ತೆ ಯಾರಾದ್ರು ಪೋಲೀಸೋರು ನೋಡಿದ್ರೆ?” ಕೇಳಿದೆ. ನಕ್ಕ. “ಇಲ್ರಿ ಸಿಕ್ಕಾಕೊಳ್ಳೋಲ್ಲ. ಹುಷಾರಾಗಿರ್ತಿನಿ. ಸಿಕ್ಕಾಕೊಂಡ್ರೆ… ಹೋಮಿಗಾಕ್ತಾರಂತೆ. ಅಲ್ಲಿ ದೊಡ್ಡೋರತ್ರ ತುಂಬ ಕಷ್ಟ…” ಎಂದು ಏನೋ ಹೇಳಲುಹೋದವ ಸುಮ್ಮನಾದ. ದಿನವೂ ಆತನ ಮುಖದಲ್ಲಿ ಕಾಣುತ್ತಿದ್ದ ಮುಗ್ದತೆ ಇವತ್ತು ಮುದುಡಿ ಯಾವುದೊ ಮೂಲೆಸೇರಿಕೊಂಡಿತ್ತು. ಹಣೆಯಮೇಲೆ ಹೇಗೆಂದಹಾಗೆ ಬಿದ್ದಿದ್ದ ಕೆಂಚುಗೂದಲನ್ನು ಒಪ್ಪವಾಗಿಡಲು ಅವನ ಕೈಗಳು ಪ್ರಯತ್ನ ನಡೆಸುತ್ತ ಇದ್ದವು. ಆಕ್ಷಣ ನನಗೆ ಅರೆ, ಇವ ಹ್ಯಾರಿಪಾಟರನ ಥರವೇ ಇದ್ದಾನಲ್ಲ ಎಂದು ಎಣಿಸುತ್ತ ನಗುಬಂದಿತು.

ಮಳೆ ಜೋರಾಯಿತು. ಅವ “ಬರ್ತೀನಿ. ಟ್ಯಾಂಕ್ಸ್ ತಿಂಡಿಕೊಡಿಸಿದ್ಕೆ” ಎಂದು ಬೇಕರಿಯ ಕಟ್ಟೆಯಿಳಿದು ದಾಪುಗಾಲು ಹಾಕುತ್ತ ಹೊರಟುಹೋದ. ನಾನು ಹ್ಯಾರಿಪಾಟರನ ಹೆಸರುಕೇಳುವುದೆ ಮರೆತೆನಲ್ಲ, ನಾಳೆ ಕಂಡರೆ ಕೇಳಬೇಕು ಅಂದುಕೊಳ್ಳುತ್ತ ಬ್ಯಾಗಿನಿಂದ ಛತ್ರಿ ಹೊರತೆಗೆಯುತ್ತ ಬೇಕರಿಯವನಿಗೆ ದುಡ್ಡುಕೊಟ್ಟೆ. ಅವನು “ಮೇಡಂ, ಇಂತೋರ್ನೆಲ್ಲ ಯಾಕೆ ಮಾತಾಡಿಸ್ತೀರಿ? ಇವ್ರೆ ಕಳ್ರು. ಎಲ್ಲ ಅಬ್ಸರ್ವ್ ಮಾಡ್ತಿರ್ತಾರೆ. ಆಮೇಲೆ ಒಂದಿನ ಕಳ್ತನ, ಅದು, ಇದು, ಏನೇನೋ ಕೇಳ್ತೀವಿ. ಹುಷಾರು.” ಅಂದ.

ಛತ್ರಿ ಬಿಡಿಸಿದೆ. ಬ್ಯಾಗು ನೆನೆಯದಂತೆ ಹಿಡಿದುಕೊಂಡು ಮಳೆಯ ವಾಸನೆ ಹೀರುತ್ತ ಕಾಲುಹಾಕಿದೆ. ಮರಗಳೆಡೆಯಿಂದ ಹನಿಗಳು ದಪದಪನೆ ಬೀಳಲಾರಂಭಿಸಿದವು.
 

Advertisements

14 thoughts on “ಬೆಂಗಳೂರಲ್ಲಿ ಕಂಡ ಹ್ಯಾರಿ ಪಾಟರ್

 1. ಆ ಹ್ಯಾರಿಪಾಟರನ ಹೆಸರು ಕೇಳಬೇಡವೇ…
  ಇರಲಿಬಿಡು ಹಾಗೇ.

  ಸ್ವೆಟರ್ರು ಹಾಕಿ, ಮಫ್ಲರ್ರು ಕಟ್ಟಿದರೂ “ಅಕ್ಷೀ” ಅನ್ನುವ ನಮ್ಮ ಮಕ್ಕಳೆದುರು, ದೊಗಳೆ ಅಂಗಿ- ಹರಕು ಪ್ಯಾಂಟಲ್ಲೇ ಸ್ವಸ್ಥರಾಗಿರುವ, ಜೀವನ ಜಾದೂ ಅರಿತ ಅವನಂಥ ಹುಡುಗರು ನಿಜಕ್ಕೂ ಹ್ಯಾರಿ ಪಾಟರ್ ಗಳೇ!

  ವೆಂಕ, ಸೂರಿ, ಸುಬ್ಬ…ಏನೋ ಅವನ ಹೆಸರು. ನಾವು ಕಷ್ಟ ಅಂದುಕೊಳ್ಳುವ ಅವನ ಸುಖದ ಬದುಕು ಹುಟ್ಟಿಸುವ ಬೆರಗಿದೆಯಲ್ಲ, ಅದು ’ಹ್ಯಾರಿ…..’ ಕಥೆಗಿಂತ ರೋಚಕ ಅಲ್ವಾ?

  ಅವನ ಹೆಸರು, ಹ್ಯಾರಿ ಪಾಟರ್ ಅಂತ್ಲೇ ಇರಲಿ ಬಿಡು!

 2. ಚೇತನಾ,

  ನಿನ್ನ ಸಜೆಶನ್ ನಿಜ್ವಾಗೂ ಸರಿ ಅನ್ನಿಸ್ತು. ನಿನ್ನೆ ಸಂಜೆ ಹ್ಯಾರಿಪಾಟ್ರು ಬೇಕರಿ ಹತ್ರನೆ ಮೂಗಿನಲ್ಲಿ ಬೆರಳುಹಾಕಿಕೊಂಡು ನಿಂತುಕೊಂಡಿತ್ತು. ಮಾಮೂಲಿನ್ ಹಾಗೆ ನಕ್ಕು ಸುಮ್ನಾದೆ.

  ತ್ಯಾಂಕೂ ಕಣೆ!!

 3. ಅಬ್ಬಾ – ಹುಡುಗನ ಕತೆ ಮಾರೋ ಹುಡುಗ. ವಿಸ್ಮಯ.
  ನಿಮ್ಮ ಕಾಮೆಂಟು ನೋಡಿ ಇಲ್ಲಿ ಬಂದೆ. ತುಂಬಾ ಒಳ್ಳೆ ಬರಹಾನೆ ಸಿಕ್ತು ಓದೋಕೆ.
  ಥ್ಯಾಂಕ್ಯೂ.

 4. ಪ್ರಿಯ ಟೀನಾ,
  ಓದುತ್ತಾ ಕಣ್ಣು ತುಂಬುತ್ತಾ ಹೋಯಿತು
  ಈಗ ಇಲ್ಲಿ ಆ ಡಿವಿಡಿ ಹುಡುಗನ ಹಾಗೇ ಓಡಾಡುತ್ತಿರುವೆ
  ರಶೀದ್

 5. tin,
  I really liked it because the narration is very touching while not being emotional (or poetic!). I’ll find many such potter boys from now on.

 6. ಅನಿವಾಸಿ,
  ನೀವು ಸೊಲ್ಸೆನಿತ್ಸಿನ್ ಓದುತ್ತಿರುವುದಕ್ಕೆ ಧನ್ಯವಾದಗಳು. ಎಲ್ಲರಿಗು ಅದು ಸುಲಭವಾಗಿ ಇಷ್ಟವಾಗದು. ನಿಮಗೇನೆನ್ನಿಸಿತು, ಅದು ಏನೆ ಆಗಿರಲಿ, ಮರೆಯದೆ ತಿಳಿಸಿ.

  ರಶೀದರೆ,
  ಧನ್ಯವಾದ. ನೀವು ಕಮೆಂಟು ಮಾಡುವುದನ್ನೆ ಬಿಟ್ಟುಬಿಟ್ಟಿದೀರಿ ಅಂದುಕೊಂಡಿದ್ದೆ. ಚೆನ್ನಾಗಿಲ್ಲ ಅನ್ನಿಸಿದರು ಹೇಳಲಿಕ್ಕೆ ಅಡ್ಡಿಯಿಲ್ಲ. ಅದಿರಲಿ, ಮೈಸೂರಿನಲ್ಲಿ ನೀವು ಹೀಗೆಲ್ಲ ಓಡಾಡಿಕೊಂಡಿದ್ದರೇನೆ ಸರಿ. We will be enriched. ಅಲ್ಲವೆ?

  Giri,
  Normally, whenever we speak, we both whole-heartedly go for each other’s character-assassination. Coming from YOU, appreciation sounds wonderful!!

 7. Hi Teen…
  Girish heliddu sari. nanagu ninna write up odida mele ibbaru ‘potter’galu sikkaru. adre, nanu swalpa abnormal (!)
  A hudugaru kattabahudada ( athava iruva) kathegalu enthadirabahudu anta yochislikke shuru madide.
  nan creativity teera kharab ide. elli suttidru, maneli madvege iruva akkandru, kuduka appa, beedi hoseyuva amma (idu matra hosa serpade) ivara suttale kathe beleetu!!

 8. Tina

  chetana nimmanna teen anta karedaddu yaaake
  tina short aagi TIN aagbekalva..

  anyway narration is good
  chatter box baravanigeyalli iruva samyama, maintaining dooora ashcharya
  huttisuttade

 9. ನಮಸ್ತೇ ಮೋಹನ್ ಅವರಿಗೆ,

  ಟೀನಾ ಯಾವತ್ತೂ ” ಟೀನ್” ಗರ್ಲ್ ಆಗೇ ಇರಲಿ ( ಹದಿ ವಯಸ್ಸಿನ ಹುಡುಗಿ) ಅನ್ನೋ ಹಾರೈಕೆ ನಂದು.
  ಅದಕ್ಕೇ, ನಾನು ಅವಳನ್ನ ಟೀನ್ ಅಂತ ಕರೆಯೋದು!
  – ಚೇತನಾ

 10. ನಮಸ್ಕಾರ ರೀ,,
  ಸೂಪರ್ ಆಗಿದೆ ನಿಮ್ಮ narration. ಶಾಂತಿ ನಿವಾಸದಲ್ಲಿ ಸುದೀಪ್ ಹೇಳೊ ಹಾಗೆ,, ಯಾವದೋ ಒಂದು ದೊಡ್ಡ ಗುರಿಯ ಬೆನ್ನತ್ತಿ ನಾವೆಲ್ಲ ನಮ್ಮ ಜೀವನದ ಚಿಕ್ಕ ಚಿಕ್ಕ ಖುಶಿಗಳನ್ನಾ ಕಳಕೋತಿವಿ ಅಂತ. ಹ್ಯಾರಿ ಪಾಟರ್ ಗೆ ಬೇಕರಿಲಿ ತಿಂಡಿ ಕೊಡಸಿದ್ದು ಒಂದು ಚಿಕ್ಕ ವಿಷಯಾ,, ಆದ್ರೆ ದೊಡ್ಡ ಖುಶಿ ಕೊಡೊ ಹೆಜ್ಜೆ.. ತುಂಬಾ ಚೆನ್ನಾಗಿತ್ತು ರೀ…

  ವಸಂತ
  http://enguru.blogspot.com

 11. ಚಿಕ್ಕ ವಯಸ್ಸಲ್ಲಿ, ಏನೂ ಕಷ್ಟಪಡದೇ ಬೆಳೆಯುತ್ತಿದ್ದಾಗ, ಈ ರೀತಿಯ ಮಕ್ಕಳ ಕಷ್ಟ ಅರ್ಥವಾಗುತ್ತಿರಲಿಲ್ಲ – ಆದರೆ ಈಗ ಓದಿದರೆ ಮನಸ್ಸು ಚುರ್ರೆನ್ನುತ್ತೆ.

  ನನ್ನ ಕ್ಲಾಸಿನಲ್ಲೂ ಒಬ್ಬ ಹುಡುಗ. ಅವನು ದಿನಾಲೂ ೫ ಮೈಲಿ ದೂರದಿಂದ ನಡ್ಕೊಂಡು ಬರೋನು ಸ್ಕೂಲ್ಗೆ. ಮನೆ ಬೆಳಗ್ಗೆ ೭ ಗಂಟೆಗೋ ಏನೋ ಬಿಟ್ಟರೆ ಮತ್ತೆ ಸಂಜೆ ಮನೆ ಸೇರೋದು ೭ ಗಂಟೆ ಆಗ್ತಿತ್ತೋ ಏನೋ. ಚಳಿ, ಮಳೆ ಎನ್ನದೇ ಬರ್ತಿದ್ದ ಅವನಿಗೆ ಒಂದು ಬೈಸಿಕಲ್ಲಾದ್ರೂ ಇದ್ದಿದ್ದ್ರೆ ಪಾಪ? ಅಂತಹದರಲ್ಲಿ ಹೋಮ್ ವರ್ಕ್ ಮಾಡಿಲ್ಲ ಅಂತಲೋ ಇನ್ನೇನೋ ಬೈಸಿಕೊಳ್ಳೇ ಕರ್ಮ ಅವನಿಗಿತ್ತು.

  ಅಂತಹವರ ಸಂಖ್ಯೆ ಇನ್ನಾದರೂ ಕಮ್ಮಿ ಆಗಲಿ.

 12. nimma e nija sangati kritima saili adbuta. swa anubavavnnu kateya oranadalli achukattagi katti kottiddiri. Swa anubava baravanige astenu kastavenisade iddaru, adannondu kateyagisuva saili matra klistakara. adare e ellavanna miri nimma anubava vedya kate nintide sir.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s