ನಮ್ಮೊಳಗಿನ ಸಿನಾರಾ…

 ಕೆಲವು ದಿನಗಳ ಹಿಂದೆ ಸ್ನೇಹಿತ ಪ್ರಶಾಂತ ನನ್ನ ಮನೆಗೆ ಬಂದಿದ್ದ. ಸ್ವಲ್ಪ ಡಿಸ್ಟರ್ಬ್ ಆಗಿದ್ದ ಥರ ಕಂಡಿತು. “ಏನಾಯ್ತು?” ಕೇಳಿದೆ. ಪ್ರಶಾಂತ, “ಗೆಸ್ ವಾಟ್ ಟೀನಾ? ನಿನ್ನೆ ಗಾಂಧಿನಗರದ ಹತ್ತಿರ ಬೈಕಲ್ಲಿ ಹೋಗ್ತಾ ಇದ್ದೆ. ಸಿಗ್ನಲ್ಲಿನಲ್ಲಿ ಐದು ನಿಮಿಷ ನಿಲ್ಲಬೇಕಾಯ್ತು. ಯಾರೋ ನನ್ನೇ ನೋಡ್ತಾ ಇರೋಹಾಗಾಯ್ತು. ಆಚೀಚೆ ನೋಡಿದೆ. ನನ್ನ ಮುಂದೆ ಇದ್ದ ಕೈನಿಯಲ್ಲಿ ಒಂದು ಜೋಡಿ. ಹೆಂಡತಿ ಎಲ್ಲಾ ಬಿಟ್ಟು ನನ್ನ ಕಡೆ ಕೆಟ್ಟದಾಗಿ ಸ್ಟೇರ್ ಮಾಡ್ತಾ ಇದಾಳೆ!! ನಂಗೆ ಏನೂ ಗೊತ್ತಾಗದೆ ಸುಮ್ಮನೆ ಆ ಹೆಂಗಸನ್ನೇ ನೋಡಿದೆ. ಅಷ್ಟರಲ್ಲಿ ಗ್ರೀನ್ ಸಿಗ್ನಲ್ ಬಂತು. ಆಕೆ ಮರೆಯಾಗೋವರೆಗೂ ನನ್ನನ್ನೇ ನೋಡ್ತಾ ಇದ್ಲು. ಸ್ವಲ್ಪ ಮುಂದೆ ಹೋದ ಮೇಲೆ ಫ್ಲ್ಯಾಶ್ ಆಯ್ತು – ಅರೆ! ಇವಳು ಸಪ್ನಾ ಅಲ್ವಾ? ಅನ್ನಿಸ್ತು. ಅಲ್ಲಾಡಿಹೋದೆ. ಸೀದಾ ಬೈಕನ್ನ ಜಾಗ ಸಿಕ್ಕಿದ ಕಡೆ ಪಾರ್ಕ್ ಮಾಡಿ ಸಿಗರೇಟು ಸೇದಿ ಸುಧಾರಿಸ್ಕೋಬೇಕಾಯ್ತು ಮಹರಾಯ್ತಿ!! ಅವ್ಳೇನಾದ್ರೂ ಬಂದು ಮಾತಾಡಿದ್ದಿದ್ರೆ ಅಂತ ಯೋಚ್ನೆ ಬಂದ್ರೂನೂ ಭಯ ಆಗತ್ತೆ!” ಎಂದು ಬಡಬಡನೆ ಒದರಿದ. ಅವನ ತಲೆಕೆಟ್ಟಿರುವ ಕಾರಣ ತಿಳಿದು ನಗುಬಂತು. ಪ್ರಶಾಂತ ಕಾಲೇಜು ಓದುವ ಸಮಯದಲ್ಲಿ ‘ಕ್ಯಾಸನೋವಾ’ ಪಟ್ಟ ಪಡೆದವ. ಎಲ್ಲಿ ಹೋದರೂ ಬಗಲಿಗೊಬ್ಬ ಗರ್ಲ್ ಫ್ರೆಂಡ್. ಇಂಥವನಿಗೆ ಟೈಫಾಯಿಡ್ ಆದಾಗ ಅವನ ತಾಯಿಯ ಜತೆಗೇ ಇದ್ದು ಅಕ್ಕರೆಯಿಂದ ನೋಡಿಕೊಂಡವಳು ಪಕ್ಕದ ಮನೆಯ ಬಾಲ್ಯದ ಗೆಳತಿ ಸಪ್ನಾ. ಪ್ರೀತಿ ಅಂಕುರವಾಗಲು ಇನ್ನೇನು ಬೇಕು? ಇಬ್ಬರ ಮನೆಯಲ್ಲೂ ವಿಷಯ ತಿಳಿದು ಸಾಕಷ್ಟು ಗಲಾಟೆಗಳಾದವು. ಪ್ರಶಾಂತನ ಅಮ್ಮ ಕಣ್ಣೀರು ಹಾಕಿ ಸಪ್ನಾಳನ್ನ ನೋಡಕೂಡದೆಂದು ಭಾಷೆ ಇಸಿದುಕೊಂಡು ದೂರದ ಬೆಳಗಾಂಗೆ ಮನೆ ಶಿಫ್ಟ್ ಮಾಡಿಬಿಟ್ಟರು. ಇವನು ಆಕೆಗೆ ವಿದಾಯ ಕೂಡ ಹೇಳದೆ ಹೊರಟುಬಂದ. ಮದುವೆಯಾಗಿ ಎರಡು ವರ್ಷ ಕಳೆದರೂ ಅಪರಾಧೀಭಾವ ಕಾಡುವುದು ಬಿಡಲಿಲ್ಲ. “ಪುನ: ಅವಳು ಸಿಕ್ಕಿದ್ರೆ ಮನಸಾರೆ ಕ್ಷಮೆ ಕೇಳು. ಹಗುರ ಅನ್ನಿಸಬಹುದು” ಎಂದು ನನಗೆ ತೋಚಿದ ಹಾಗೆ ಸಮಾಧಾನ ಹೇಳಿಕಳಿಸಿದೆ.

profilesofgod1.jpg

ಈ ನಾಸ್ಟಾಲ್ಜಿಯಾ ಅನ್ನುವುದು ಬಹಳ ಹಿಂಸೆ ಮಾಡುತ್ತೆ. ಪದೇಪದೇ ಬಂದು ಕಾಡಿ ಮುಂದೆ ಯೋಚನೆ ಬರಲು ಬಿಡದೆ ಕಳೆದುಹೋದ ಗಳಿಗೆಗಳ ಕಡೆಗೆ ಎಳೆದುಕೊಂಡು ಹೋಗುತ್ತದೆ. ಅರ್ನೆಸ್ಟ್ ಡೋಸನ್ನನ ಆಂಗ್ಲ ಕವನ ‘Non Sum Qualis Eram Bonae Sub Regno Cynarae’ (ಭಾಷಾಂತರ: ನಾನು ಒಳ್ಳೆಯ ಸಿನಾರಾಳ ಆಳ್ವಿಕೆಯಲ್ಲಿ ಇದ್ದ ಹಾಗೆ ಈಗಿಲ್ಲ) ನೆನಪಾಗುತ್ತದೆ. ಅರ್ನೆಸ್ಟ್ 19ನೇ ಶತಮಾನದ ಒಬ್ಬ ಕವಿ. ಹುಟ್ಟುರೋಗಿ. ಭಗ್ನಪ್ರೇಮಿ. ಕುಡುಕ. ಕವನದಲ್ಲಿ ಆತ ಹೆಸರಿಸಿರುವ ‘ಸಿನಾರಾ’ ಅರ್ನೆಸ್ಟ್ ಆಗಾಗ್ಗೆ ಭೇಟಿನೀಡುತ್ತಿದ್ದ ರೆಸ್ಟುರಾ ಒಂದರ ಮಾಲೀಕನ ಮಗಳು. ಈತನ ಪ್ರೇಮವನ್ನು ನಿರ್ದಾಕ್ಷಿಣ್ಯವಾಗಿ ಮೂಲೆಗೆ ಹಾಕಿ ವೆಯಿಟರನೊಬ್ಬನ ಜತೆ ಓಡಿಹೋದಾಕೆ. ಈ ಘಟನೆಯ ನಂತರ ಅರ್ನೆಸ್ಟ್ ಇನ್ನಷ್ಟು ಕುಗ್ಗಿಹೋದ. ಆಗ ಆತ ಬರೆದ ಕವನದ ಕೆಲವು ಸಾಲುಗಳಿವು :

Last night, ah, yesternight, betwixt her lips and mine
There fell thy shadow, Cynara! thy breath was shed
Upon my soul between the kisses and the wine;
And I was desolate and sick of an old passion,
Yea, I was desolate and bowed my head:
I have been faithful to thee, Cynara! in my fashion.

 ಎಂಥವರ ಮನವನ್ನೂ ಕರಗಿಸಬಲ್ಲ ಈ ಕವನಕ್ಕೆ ಇಂದಿಗೂ ಆಂಗ್ಲಸಾಹಿತ್ಯದಲ್ಲಿ ವಿಶೇಷ ಸ್ಥಾನವಿದೆ. ಭಗ್ನಪ್ರೇಮಿಯೊಬ್ಬ ಕಳೆದುಕೊಂಡಾಕೆಯನ್ನು ಮರೆಯಲು ವೇಶ್ಯೆಯ ಬಳಿ ಹೋಗಿದ್ದಾನೆ. ಮೈಮಾರುವಾಕೆ ಈತನನ್ನು ಚುಂಬಿಸಲೆತ್ನಿಸುತ್ತಿರುವಾಗ ಅವನಿಗೆ ಪ್ರೇಯಸಿಯ ನೆರಳು ಕಂಡಂತಾಗುತ್ತದೆ. ಮದ್ಯ, ಚುಂಬನಗಳ ಮತ್ತಿನ ನಡುವೆಯೂ ಪ್ರೇಯಸಿಯ ಬಿಸಿಯುಸಿರು ಆತ್ಮಕ್ಕೆ ತಾಕಿದಂತೆನಿಸುತ್ತದೆ. ಹಳೆಯ ಕಾಡುವಿಕೆ, ನೋವುಗಳು ಮರುಕಳಿಸಿ ಇನ್ನಷ್ಟು ಕುಗ್ಗಿಹೋಗಿದ್ದಾನೆ. ‘ನನ್ನದೇ ಆದ ರೀತಿಯಲ್ಲಿ ನಿನಗೆ ವಿಧೇಯನಾಗಿದ್ದೇನೆ ಸಿನಾರಾ!’ ಎನ್ನುತ್ತಾನೆ. 

ಇಲ್ಲಿನ ‘ಸಿನಾರಾ’ ಯಾರೂ ಆಗಬಹುದು. ಪ್ರತಿ ಸಾರಿ ಓದುವಾಗಲೂ ಈ ಕವನವನ್ನ ಬೇರೆ ಬೇರೆ ಆಯಾಮಗಳಲ್ಲಿ interpret ಮಾಡಿದ್ದೇನೆ. ನಾನು ಕಳೆದುಕೊಂಡ ಬಾಲ್ಯ, ಊರು, ಮನೆಗಳು ನನಗೆ ಪಾಲಿನ ‘ಸಿನಾರಾ’ಳಾಗಿ ಕಾಡಿದ್ದುಂಟು. ಕವನದಲ್ಲಿ ಕಾಣುವ ವೇಶ್ಯೆ ನಾನು ಆಯ್ಕೆ ಮಾಡಿಕೊಂಡ ನಗರದ ಕೋರೈಸುವ, ಯಾಂತ್ರಿಕ ಬದುಕಿನ symbol ಎನಿಸಿದ್ದಿದೆ. ನಮ್ಮೆಲ್ಲರಿಗೂ ಒಬ್ಬ ‘ಸಿನಾರಾ’ ಇದ್ದೇ ಇರುತ್ತಾಳೆ, ಅವಳು ಮನದೊಳಗಡೆ ಸುಳಿದಾಡಿಕೊಂಡು ಬಂದು ಹಿಂಸೆ ನೀಡುತ್ತಲೇ ಇರುತ್ತಾಳೆ. ಪ್ರಶಾಂತನೇನೋ ತನ್ನ ಸಿನಾರಾಳ ಬಗ್ಗೆ ಹೇಳುವ ಧೈರ್ಯ ತೋರಿಸಿದ. ಆದರೆ ನಾವು? ನಾವು ನಮ್ಮೊಳಗಿನ ಸಿನಾರಾಳ ಬಗ್ಗೆ ಅರ್ನೆಸ್ಟನಷ್ಟು ಮನಬಿಚ್ಚಿ ಮಾತನಾಡಲು ಹೆದರುತ್ತಲೇ ಕಾಲ ಕಳೆಯುತ್ತೇವೆ. ಅಪರೂಪಕ್ಕೆ ಆಕೆಯೇನಾದರೂ ನಮ್ಮೆದುರು ಬಂದರೆ ಉಡುಗಿಹೋಗುತ್ತೇವೆ. ಎದುರು ನಿಂತು ಮಾತನಾಡಲೂ ಆಗದಷ್ಟು ಹಿಪಾಕ್ರಸಿ ಬೆಳೆಸಿಕೊಂಡುಬಿಟ್ಟಿರುತ್ತೇವೆ. ಅವಳು ನಮ್ಮೊಂದಿಗೇ ದಫನಾಗುತ್ತಾಳೆ… 
 
 

Advertisements

One thought on “ನಮ್ಮೊಳಗಿನ ಸಿನಾರಾ…

  1. ಮರುಕೋರಿಕೆ (Pingback): Global Voices Online » Kannada: Bow to the Cynara within!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s