ಬಿಎನ್ನೆನ್ ಎಂಬ ಮೇಷ್ಟರೂ, ಹೆಗ್ಗಣಗಳೂ.

ಅವರ ಪೂರ್ತಿ ಹೆಸರು ಬಿ.ಎನ್. ನಂಜುಂಡಶೆಟ್ಟಿ. ನಮಗೆ ಬಿಎನ್ನೆನ್.

“ಹೆಗ್ಗಣಾ ತಿನ್ರೋ ಹೋಗ್ರೋ ದರವೇಶಿಗಳಾ!!” ಎಂದೇ ಬಿಯೆನ್ನೆನ್ ಮೇಷ್ಟರು ತಮ್ಮ ಇಂಗ್ಲೀಷ್ ಪಾಠದ ಪ್ರತಿ ಪೀರಿಯಡ್ ಅನ್ನು ಶುರು ಮಾಡುತ್ತಿದ್ದದ್ದು ಹಾಗೂ ಮುಗಿಸುತ್ತಿದ್ದದ್ದು. ನಾವು ಹೈಕಳಿಗೆ ಅವರ ಕೈಯಲ್ಲಿ ಬೈಸಿಕೊಳ್ಳುವುದೆಂದರೆ ಖುಶಿಯೋ ಖುಶಿ. ತಮ್ಮ ಪ್ಯಾಂಟನ್ನು ಸದಾಕಾಲ ತಮ್ಮ ಡೊಳ್ಳುಹೊಟ್ಟೆಯ ಮೇಲೇರಿಸಿಕೊಳ್ಳುವ ಪ್ರಯತ್ನ ಮಾಡುತ್ತ ವಿಫಲರಾಗುತ್ತ ಸೋಡಾಬುಡ್ಡಿ ಕನ್ನಡಕ ಹಾಗೂ ಹಿಟ್ಲರ್ ಮೀಸೆಯ ಸಮೇತ ವಾಲಾಡುತ್ತ ಅವರು ಕ್ಲ್ಲಾಸಿನೊಳಗೆ ಹಾಜರಾದರೆಂದರೆ ನಮಗೆ ಥ್ರಿಲ್ಲು. ಹೈಸ್ಕೂಲಿನ ಮೂರೂ ವರ್ಷಗಳು ನಾವು ಎಲ್ಲ ನಾರ್ಮಲ್ ಹುಡುಗರ ಹಾಗೆ ನಮ್ಮೊಳಗಿನ ತರಲೆಬುದ್ಧಿಯನ್ನು ಜೀವಂತವಾಗಿಟ್ಟುಕೊಳ್ಳಲು ಬಿಯೆನ್ನೆನ್ ಮೇಷ್ಟರೂ ಒಂದು ಪ್ರಮುಖ ಕಾರಣವಾಗಿದ್ದರು.

image0021.jpg

ದಿನದ ಮೊದಲನೇ ಪೀರಿಯಡ್ಡೇನಾದರೂ ಬಿಯೆನ್ನೆನ್ ಮೇಷ್ಟರದಾಗಿದ್ದರೆ ಹುಡುಗರಿಗೆ ಸುಗ್ಗಿ. ಬೇಕೆಂದೇ ಲೇಟಾಗಿ ಕ್ಲಾಸಿಗೆ ಎಂಟ್ರಿ ಕೊಡುವುದು, ಕ್ಲಾಸು ಮುಗಿದ ನಂತರ ಮೇಷ್ಟರ ಹಿಂದೆ ಅಟೆಂಡೆನ್ಸಿಗೆ ಗೋಗರೆಯುತ್ತ ಕಿಸಿಕಿಸಿ ನಗುತ್ತ ಓಡಿಹೋಗುವುದು ನಮ್ಮ ಸ್ಕೂಲಿನ ‘ಅನಫಿಷಿಯಲ್ ಟ್ರಾಡಿಷನ್’ ಆಗಿತ್ತು. ಈ ರೀತಿಯಾಗಿ ಸೈನ್ಸ್ ಅಥವ ಗಣಿತದ ಮೇಷ್ಟರುಗಳ ಹತ್ತಿರ ನಡೆದುಕೊಂಡು ಫ್ರೀಯಾಗಿ ದೊರಕುವ ತಪರಾಕಿ ತಿನ್ನುವ ಧೈರ್ಯ ನಮ್ಮ ಹೈಸ್ಕೂಲಿನ ಇತಿಹಾಸದಲ್ಲೇ ಯಾರಿಗೂ ಬಂದಿರಲಿಲ್ಲ ಅನ್ನುವುದು ಬೇರೆಯ ವಿಷಯ. ಬೇರೆ ಕ್ಲಾಸುಗಳಲ್ಲಿ ಅತಿಯೆನ್ನುವಷ್ಟು ಗಂಭೀರನಾಗಿ ಪಾಠ ಕೇಳುತ್ತಿದ್ದ ಪುಸ್ತಕದ ಹುಳು ಜಾವೇದ ಕೂಡ ಬಿಯೆನ್ನೆನ್ನರ ಕ್ಲಾಸಿನಲ್ಲಿ ಹಲ್ಲುಬಿಟ್ಟು ನಗಾಡುತ್ತಿದ್ದದ್ದು ನಾವು ಹುಡುಗಿಯರಿಗೆ ತಮಾಷೆಯ ವಿಷಯವಾಗಿತ್ತು.

ಬಿಯೆನ್ನೆನ್ ಮೇಷ್ಟರು ನಮಗೆ ಪಾಠಮಾಡಲು ಬಂದಾಗ ಅವರ ನಿವೃತ್ತಿಯ ಸಮಯ ಹತ್ತಿರವಾಗಿಬಿಟ್ಟಿತ್ತು. ಕಣ್ಣು ಮಂದವಾಗಿತ್ತು. ಸ್ಕೂಲಿನಲ್ಲಿ ಪಾಠ ಮಾಡುತ್ತಿದ್ದ ಮುಕ್ಕಾಲುಪಾಲು ಮೇಷ್ಟರುಗಳು ಅವರ ಶಿಷ್ಯರೇ ಆಗಿದ್ದಿದ್ದು ಇನ್ನೊಂದು ವಿಶೇಷ. ಸೈಗಲ್ಲನ ಕಂಠ ಹೊಂದಿದ ಬಿಯೆನ್ನೆನ್ ಮೇಷ್ಟರು ಪಾಠ ಮಾಡುವ ರೀತಿಗೆ ಒಂದು ಅಪೂರ್ವ ಕ್ವಾಲಿಟಿ ಇತ್ತು. ಅದನ್ನು ಕೇಳಿದವರೆಲ್ಲ ನಿದ್ದೆಗೆ ಶರಣಾಗದೆ ಇರುವುದು ಸಾಧ್ಯವೇ ಇರಲಿಲ್ಲ. ನಾವೆಲ್ಲ ನಿದ್ದೆ ಮರೆಸಲು ಅವರು ಎಷ್ಟು ಸಾರಿ ಹೆಗ್ಗಣ ತಿನ್ನಲು ನಮಗೆ ಹೇಳಿದರೆಂದು ಲೆಕ್ಕವಿಡುವುದು, ರಾಕೆಟ್ಟು ದೋಣಿ ಮುಂತಾದ ಡಿಸೈನುಗಳನ್ನು ಕಾಗದದಲ್ಲಿ ರಚಿಸುವುದು, ಚುಕ್ಕಿಯಾಟ ಆಡುವುದು, ಕಷ್ಟಪಟ್ಟು ಪಾಠ ಕೇಳುವುದು – ಏನೆಲ್ಲ ಮಾಡಿದರೂ ಒಂದು ತೂಕಡಿಕೆಯಾದರೂ ಬಂದುಬಿಡುತ್ತ ಇತ್ತು. ಆಗಾಗ ಅವರು ಸರ್ಪ್ರೈಸ್ ಟೆಸ್ಟುಗಳನ್ನು ಕೂಡ ಕೊಡುತ್ತಿದ್ದದ್ದುಂಟು. ಆಗೆಲ್ಲ ಬಿಎನ್ನೆನ್ ಎನೋ ಓದುವವರಂತೆ ನಟಿಸುತ್ತ ಹಾಗೇ ನಿದ್ದೆಗೆ ಶರಣಾಗುತ್ತಿದ್ದರು. ನಾವೋ, ಊರಿಗೆ ಮುಂಚೆ ಟೆಸ್ಟು ಬರೆದು ಮುಗಿಸಿ ತೂಕಡಿಸುತ್ತಿದ್ದ ಬಿಎನ್ನೆನ್ರನ್ನು ಗೋಳುಹುಯಿದುಕೊಳ್ಳುತ್ತಿದ್ದೆವು. ಬೋರ್ಡಿನ ಮೇಲೆ ಅವರು ಬರೆದದ್ದನ್ನು ಅಳಿಸಿಹಾಕುವುದು, ಡಸ್ಟರನ್ನು ಕೈಗೆ ಸಿಗದಂತೆ ದೂರ ಇಡುವುದು, ‘ಹೋ’ ಎಂದು ಅವರ ಕಿವಿಯ ಹತ್ತಿರ ಕೂಗಿ ಸುಮ್ಮನಾಗುವುದು ನಮಗೆ ಮಾಮೂಲಾಗಿದ್ದವು. ಒಮ್ಮೆ ಅವರು ಜೂನಿಯರ್ ಕ್ಲಾಸಿನಲ್ಲಿ ಮೂಗು ಒರೆಸಲು ಕರ್ಚೀಫು ಮರೆತು ಬಂದು ಅವಾಂತರವಾಗಿ ಬಟ್ಟೆಯ ಡಸ್ಟರಿನಲ್ಲಿಯೇ ಮೂಗು ಒರೆಸಿ ಇಟ್ಟದ್ದು, ಕ್ಲಾಸ್ ಮಾನಿಟರ್ ಪ್ರವೀಣ ಬೋರ್ಡು ಒರೆಸಲು ಕುಣಿದುಕೊಂಡು ಹೋಗಿ ಅದನ್ನು ಮುಟ್ಟಿಬಿಟ್ಟದ್ದು, ಮಾರನೆಯ ದಿನ ಹೊಸಾ ಡಸ್ಟರೊಂದನ್ನು ತಂದಿಟ್ಟದ್ದನ್ನು ನೆನೆಸಿಕೊಂಡು ಈಗಲೂ ಉರುಳಾಡಿ ನಗುತ್ತೇವೆ.

ಇಷ್ಟೆಲ್ಲ ಇದ್ದರೂ ಬಿಎನ್ನೆನ್ ಮೇಷ್ಟರು ರಜಾ ಹಾಕಿದ ದಿನ ನಾವೆಲ್ಲ ಹುಳ್ಳಗೆ ಮುಖ ಮಾಡಿಕೊಂಡಿರುತ್ತಿದ್ದೆವು. ದಿನವಿಡೀ ಕಾಟಕೊಡುವ ತಾತ ಒಂದುದಿನ ಕಾಣದ ಹೋದರೆ ಬೇಸರವಾಗುತ್ತದಲ್ಲ – ಥೇಟ್ ಹಾಗೇ. ಬಿಎನ್ನೆನ್ ಹೊಸ ಶರಟು, ಪ್ಯಾಂಟು ಧರಿಸಿ ಬಂದ ದಿನ ನಮ್ಮ ಕ್ಲಾಸಿಗೆ ಕಾಲಿಟ್ಟ ಕೂಡಲೆ ನಮಗೆಲ್ಲ ಏನೋ ಖುಶಿ. ‘ಹೇಏಏಏ’ ಎಂದು ಜೋರಾಗಿ ಕಿರುಚಿಕೊಂಡು ನಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದೆವು. ಆಗೆಲ್ಲ ಬಿಎನ್ನೆನ್ ನಗುತ್ತಲೆ ನಮಗೆ ಹೆಗ್ಗಣ ತಿನ್ನಲು ಸಜೆಸ್ಟ್ ಮಾಡುತ್ತಿದ್ದರು. ಅವರು ಹೇಳಿದಾಗಲೆಲ್ಲ ನಾವು ಹೆಗ್ಗಣಗಳನ್ನು ತಿಂದಿದ್ದರೆ ನಮ್ಮೂರಿನ ಹೆಗ್ಗಣಗಳ ಸಂತಾನವೆಲ್ಲ ನಿರ್ಮೂಲನಗೊಂಡಿರಬೇಕಾಗಿತ್ತು. ಬಿಎನ್ನೆನ್ ಮೇಷ್ಟರ ಹೆಗ್ಗಣಗಳ ಅಫಿನಿಟಿ ನಮಗೆ ಬಿಡಿಸಲಾರದ ಕಗ್ಗಂಟಾಗಿದ್ದಂತೂ ನಿಜ. ಇವತ್ತು ಬಿಎನ್ನೆನ್ ಇಲ್ಲ. ಯಾರಿಂದಲೋ ಅವರು ತೀರಿಕೊಂಡ ಸುದ್ದಿ ಕೇಳಿದೆ. ಇಂದಿಗೂ ಮೋರಿಗಳ ಬಳಿ ಹೆಗ್ಗಣಗಳು ಕಂಡಾಗಲೆಲ್ಲ ಬಿಎನ್ನೆನ್ ನೆನಪಾಗುತ್ತಾರೆ.

ಥಾಂಕ್ಯೂ ಬಿಎನ್ನೆನ್ ಸಾರ್. ನಮ್ಮನ್ನು ನಗಿಸಿದ್ದಕ್ಕೆ. ನಮ್ಮ ಅನಫಿಶಿಯಲ್ ತಾತನ ಪಾತ್ರ ವಹಿಸಿದ್ದಕ್ಕೆ.

(Picture courtesy:gmachnut.wordpress.com)
 

Advertisements

One thought on “ಬಿಎನ್ನೆನ್ ಎಂಬ ಮೇಷ್ಟರೂ, ಹೆಗ್ಗಣಗಳೂ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s