ಬೇರುಗಳು.

(ನನ್ನ ಹಿಂದಿನ ಬ್ಲಾಗ್ ಲೇಖನದಲ್ಲಿ ಕಾಣುವ ಅಲೆಕ್ಸ್ ಹ್ಯಾಲಿಯ ’ರೂಟ್ಸ್’ ಅನ್ನು ಮೊದಲ ಬಾರಿಗೆ ಶಿವಮೊಗ್ಗೆಯಿಂದ ದಸರಾ ರಜಕ್ಕೆಂದು ಮನೆಗೆ ಬಂದಾಗ ಓದಿದ್ದು. ಈ ಪುಸ್ತಕ ನನಗೆ ಅಚಾನಕ್ಕಾಗಿ ನನ್ನೂರಿನ ಪಬ್ಲಿಕ್ ಲೈಬ್ರರಿಯ ಕಪಾಟೊಂದರ ಮೂಲೆಯಲ್ಲಿ ಸಿಕ್ಕಿದ್ದು. ಹಾಗೆ ಓದಿದ ಪುಸ್ತಕ ನನ್ನನ್ನು ವಿಪರೀತ ಕಾಡಲು ತೊಡಗಿ ಬರೆದ ಕವಿತೆ ಇದು.) 

ಪ್ರೀತಿಯ ಅಲೆಕ್ಸ್,
ಹೇಗೆ ಹೋದೆಯೊ ನೀನು
ವಾಪಾಸು ಹಿಂದಕ್ಕೆ,
ಸ್ಲೋ ಮೋಶನ್ನಿನಲ್ಲಿ ನಿನ್ನ
ಬೇರುಗಳಿಗೆ…

ನಿನ್ನ ಅರೆ-ಆತ್ಮಕಥೆಯ
ಕೊನೆಯ ಪುಟವನ್ನ, ಅಮ್ಮನ
ಮಲಗೇ ಹುಚ್ಚುಮುಂಡೇದೆ.. ಇತ್ಯಾದಿ
ಸಿಡುಕುಗಳ, ತಮ್ಮನ ಕ್ರಿಕೆಟ್ ಕನವರಿಕೆಗಳ,
ಹಿಂದಿನ ಗಲ್ಲಿಯಾಚೆಗಿನ ಅಡಿಕೆಭಟ್ಟರ
ತೋಟದ ಗುಳ್ಳೆನರಿಗಳ ಊಳಿನ ಮಧ್ಯೆ
ಅಡಿಗೆಮನೆಯ ಮೆಟ್ಟಿಲ ಮೇಲೆ
ಬಲ್ಬಿನ ಮಂಕುಬೆಳಕಲ್ಲಿ ಓದಿ
ಮುಗಿಸಿದಾಗ ಬೆಳಿಗ್ಯೆ ಎರಡೂಮುಕ್ಕಾಲು.
ಮೂರರ ತನಕ, ಯಾಕೋ ಗೊತ್ತಿಲ್ಲ
ನೀರವವಾಗಿ ತೃಪ್ತಿಯಿಂದ ಚೆನ್ನಾಗಿ ಅತ್ತೆ.
ಮಲಗಿದ್ದ ಕಂದುಬಣ್ಣದ ಬೆಕ್ಕು ಒಮ್ಮೆ
ತಲೆಯೆತ್ತಿ ನೋಡಿ ಮತ್ತೆ ಮಲಗಿತು.
ನಾನೂ ಬೆಳಕಾರಿಸಿ ಬಂದು
ರಗ್ಗೆಳೆದುಕೊಂಡೆ.
*    *    *    *
ಅಂದಿನಿಂದ ಶುರುವಾದ ಒದ್ದಾಟ
ಇವತ್ತಿನವರೆಗೂ ಅಮರಿಕೊಂಡಿದೆ.
ಎಲ್ಲಿ ನನ್ನ ಬೇರುಗಳು?
ಹೇಗಿರಬಹುದು ನನ್ನ ವಂಶವೃಕ್ಷ?
ಅಮ್ಮನೆಡೆಗೆ ನೊಡಲೆ? ಅಪ್ಪನೆಡೆಯೆ?
ಅವರೆಡೆ ನೋಟ ಹಾಯಿಸಿದಾಗಲೆಲ್ಲ
ನಿಜವಾಗಿ ನನಗೆ ಆತ್ಮವೇ ಇಲ್ಲ
ಇದ್ದರೂ ಪೂರ್ಣವಿಲ್ಲ ಅನ್ನುವ
ವಿಚಿತ್ರ ಖಯಾಲು ಹೆದರಿಸುತ್ತದೆ.
ಮೊದಲಬಾರಿಗೆ ನೀನು ನಿನ್ನ
ಕತ್ತಲುಗಪ್ಪು ಬಣ್ಣದ ವಂಶಜರನ್ನು
ಸಂಧಿಸಿದಾಗ, ಅವರು ನಿನ್ನನ್ನು
‘ಮಿಸ್ಟರ್ ಕೀಂಟೆ!’ ಎಂದಾಗ
ಎಣ್ಣೆಗೆಂಪು ಬಣ್ಣದ ನಿನ್ನ ಸಂತಸಭರಿತ
ಮುಜುಗರದ ಪರಕೀಯಭಾವವನ್ನು
ಚೆನ್ನಾಗಿ ಅರಿತಿದ್ದೇನೆ;
ಅದು ನನ್ನದು ಕೂಡಾ…
ಆಶ್ಚರ್ಯವಿಲ್ಲ, ನಿನಗೆ ಆ ಕ್ಷಣ
ಆ ಬಾಂಧವರ ಮಧ್ಯೆ ನೀನು
‘ಶುದ್ಧ’ನಲ್ಲವೆನಿಸಿದರ ಬಗ್ಗೆ.
*    *    *    *
ನನ್ನ್ಯಾಕೆ ಬಿಡಲೊಲ್ಲರು ಅಲೆಕ್ಸ್
ನಿನ್ನೀ ವಂಶಜರು?
ಕುಂಟಾ ಕಿಂಟೆ, ಕಿಜಿ, ಚಿಕನ್ ಜ್ಯಾಕ್, ಎಲ್ಲರೂ
ಕೂಡಿ ನನ್ನ ಹಿಂಡಿಹಾಕುತ್ತಾರೆ ಮಾರಾಯಾ..
ಸಿಕ್ಕಾನೆ ಹುಡುಕಿದರೆ ನನ್ನ ಮೊದಲ ತಂದೆ?
ಇದ್ದಿರಬಹುದಾದರೂ ಹೇಗೆ ಅವನ ಚಹರೆ?
ಕಾಬೂಲು ದಾಟಿ ಖೈಬರ್ ನುಸುಳಿ ಬಂದ
ದಂಡಿನವನಿರಬಹುದೆ?
ಅಥವಾ ತನ್ನ ಬೇರ ಕಳಚಿ
ಇನ್ನೊಂದನ್ನಾಯ್ದ ಇಲ್ಲಿನವ ಇರಬಹುದೆ?
ಇಲ್ಲದಿದ್ದರೆ, ದಕ್ಷಿಣದ್ರಾವಿಡದೇಶದ
ಪುಟ್ಟಹಳ್ಳಿಯೊಂದರ ಗೃಹಸ್ಥನಿರಬಹುದೆ?
ಅವನೂರಿಗೆ ಬರಬಂದು ಅವನೀಕಡೆ
ವಲಸೆ ಬಂದಿರಬಹುದೆ?
ಮೊತ್ತಮೊದಲಿಗೆ, ಎಲ್ಲಕಿಂತಲೂ ಹಿಂದೆ?
ನನಗೆ ಗೊತ್ತು
ನಾನು ಹೆಣ್ಣು.
ನನ್ನ ಪೂರ್ವೀಕರಲ್ಲಿ ‘ಅವನನ್ನು’ ಹುಡುಕಬಹುದು,
‘ಅವಳ’ನ್ನಲ್ಲ.
‘ಅವಳು’ ಹೇಗಿದ್ದಳೊ?
‘ಅವಳ’ ಅರಿಕೆಯೆ ಉಸಿರುಕಟ್ಟಿಸುತ್ತದೆ,
ಬೇಡವಾಗುತ್ತದೆ,
‘ಅವಳು’ ಎಂದರೆ ಬರೀ ಹೊಗೆತುಂಬಿದ
ಕತ್ತಲುಕೋಣೆಗಳು, ಸಾಂಬ್ರಾಣಿ, ಮೂಗುನತ್ತು
ಕಾಲಂದುಗೆ, ಮುಖಮುಚ್ಚುವ ಮುಸುಕುಗಳೇ
ನೆನಪಾಗುತ್ತವೆ.
‘ಅವಳು’ ಜಿಗುಪ್ಸೆ ಹುಟ್ಟಿಸುತ್ತಾಳೆ
‘ಅವನು’ ಕೂಡ ದೂರ ಸಾಗುತ್ತಿದ್ದಾನೆ..
*    *    *    *
ಮನೆಯಂಗಳದ ಹುಣಿಸೆ, ದೇವದಾರು
ಹಿತ್ತಲ ತೆಂಗಿನಮರಗಳು
ಮತ್ತೂ ಸ್ಥಿರವಾಗಿ ನಿಲ್ಲಲು ಗೇಯುತ್ತಿವೆ
ಗೊಬ್ಬೆಸೀರೆಯ ಬಿಳಿತಲೆ ಮುದುಕಿಯೊಬ್ಬಳು
ಮರುಳುಮಾತೇನನ್ನೊ ಗೊಣಗುತ್ತ
ಬುತ್ತಿಹಿಡಿದು ಕಾಫಿತೋಟದೆಡೆ ನಡೆಯುತ್ತಾಳೆ
ಇಲ್ಲಿ ಆಕಾಶ ಇನ್ನೂ ಆಪ್ತವಾಗುತ್ತಿದೆ.

ತನ್ನದೆಂಬುದನ್ನು ಇಲ್ಲಿ ಯಾರೂ ಬಿಟ್ಟಿಲ್ಲ.
ನಾನೂ ಬಿಡುವುದಿಲ್ಲ.
ಅಲೆಕ್ಸ್, ನೀನೂ ತಿರುಗಿಹೋದೆ. ಅಲ್ಲವೆ?
ಅಮೆರಿಕಾದಿಂದ ಆಫ್ರಿಕಾಗೆ
ಆಫ್ರಿಕಾದಿಂದ ಅಮೆರಿಕಾಗೆ…
ಅದನ್ನು ಮರೆತಿದ್ದೆ.
ಥ್ಯಾಂಕ್ಯೂ ಎನ್ನಲೆ ಅಲೆಕ್ಸ್?
ಇವೆಲ್ಲದಕ್ಕೆ……
 

Advertisements

7 thoughts on “ಬೇರುಗಳು.

 1. ನಾನು ವಿನಾಕಾರಣ ಹುಚ್ಚುಚ್ಚಾಗಿ ಪ್ರೀತಿಸುವ ಬಂಗಾಳದ ಬಳಿಯೇ ಇರುವ ಒರಿಸ್ಸಾ ನಮ್ಮ ಪೂರ್ವಿಕರ ಊರು ಎಂದು ಎಲ್ಲೆಲ್ಲಿಂದಲೋ ಪತ್ತೆ ಹಚ್ಚಿದಾಗ ಹುಚ್ಚೆದ್ದು ಕುಣಿದಿದ್ದೆ. ಒರಿಸ್ಸಾ- ಬಂಗಾಳ ಎಲ್ಲವೂ ಒಟ್ಟಿಗೆ ಸೇರಿ ಅಂದು ಗೌಡ ದೇಶವಾಗಿತ್ತು ಅಂತ ಸಮಜಾಯಿಷಿ ಕೊಟ್ಟುಕೊಂಡಿದ್ದೆ.
  ಈಗ ಅದೆಲ್ಲ ಎಂಥ ಹುಡುಗಾಟ ಅನಿಸುತ್ತೆ.

  ಥ್ಯಾಂಕ್ಯೂ ಅನ್ನಲೇ ಟೀನಾ?
  ಅದನ್ನೆಲ್ಲ ಮತ್ತೆ
  ನೆನೆಸಿಕೊಟ್ಟಿದ್ದಕ್ಕೆ?

 2. ತುಂಬ poignant ಪದ್ಯ, ಭಾವ. ಸಮಂಜಸವಾದ್ದೇನೂ ಹೇಳಲು ತೋರುತ್ತಿಲ್ಲ. ಹೀಗಾಗಿ ನನ್ನ ಪೂರ್ವಜರ ಬಗ್ಗೆ ಹೇಳುತ್ತೇನೆ. ನನ್ನ ಪೂರ್ವಜರು ಮಹಾರಾಷ್ಟ್ರ ಮೂಲದ ಠಕ್ಕರಾಗಿದ್ದರಂತೆ. ಲೂಟಿ ಮಾಡುತ್ತ ನಮ್ಮೂರ ಹತ್ತಿರ ಬಂದಾಗ, ಆ ದೇಸಗತಿಯ ದೇಸಾಯಿ – ಅವನಿಗೆ ಏನನ್ನಿಸಿತ್ತೋ ಎನೋ – “ಈ ಉದ್ಯೋಗವನ್ನು ಬಿಟ್ಟು ಬಿಡಿ. ನಿಮಗೊಂದಷ್ಟು ಭೂಮಿ ಕೊಡುತ್ತೇನೆ. ವ್ಯವಸಾಯ ಮಾಡಿಕೊಂಡು ಇದ್ದು ಬಿಡಿ”, ಎಂದು ಹೇಳಿದನಂತೆ. ಇವರು ಒಪ್ಪಿ ನೆಲೆ ನಿಂತರಂತೆ. ಹೀಗೆಯೇ ಎನೇನೋ…

 3. ಪ್ರಿಯ ಚೇತನಾ ಮತ್ತು ’ಚಕೋರ’

  ಈ ಕವಿತೆಯಿಂದ ಇನ್ನೇನು ಆಗದಿದ್ದರು ನಿಮ್ಮ ಪೂರ್ವಿಕರ ಬಗ್ಗೆ ಕೊಂಚ ತಿಳಿಯಿತು!
  ನಿಮ್ಮ ಕೆಲವು ಆಪ್ತ ಮಾತುಗಳನ್ನ ಇಲ್ಲಿ ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್.

  ಟೀನಾ.

 4. ರಾಜೇಶ್,

  ಈ ಮಾಹಿತಿಗಾಗಿ ನಿಮಗೆ ಧನ್ಯವಾದಗಳು. ನನಗೆ ಈ ವಿಷಯ ಗೊತ್ತೇ ಇರಲಿಲ್ಲವಾಗಿತ್ತು!! ಇನ್ನು ಜಯಪ್ರಕಾಶರ ಅನುವಾದವನ್ನು ಹುಡುಕಿ ದಕ್ಕಿಸಿಕೊಳ್ಳುವ ತನಕ ಸಮಾಧಾನವಿಲ್ಲ!!
  -ಟೀನಾ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s