ಮಸಾಲೆ, ಐಸಿನ ಆಸೆ ಮತ್ತು ಒಬ್ಬ ಚೌಕೀದಾರ.

icecube21.jpg 

ನಮ್ಮ ಸರಕಾರಿ ಶಾಲೆಯ ಕಾಂಪೌಂಡಿನ ಹಿಂದೆ ಒಂದು ಚಲನಚಿತ್ರ ಮಂದಿರ. ಅದರ ಸುತ್ತ ಹುಟ್ಟಿಕೊಂಡಿದ್ದ ಪೆಟ್ಟಿಗೆ ಅಂಗಡಿಗಳು, ಕೂಲಿಕಾರರ ಮನೆಗಳು, ರಾತ್ರಿಯಾದರೆ ಗುಟ್ಟಾಗಿ ಶರಾಬು ಮಾರಲ್ಪಡುವ ಸಣ್ಣ ಜೋಪಡಿಗಳು. ಚೌಕೀದಾರ ಬರುವ ಮೊದಲು ನಮ್ಮ ಶಾಲೆ ಜನರು ಓಡಾಡಲು ಒಂದು ಶಾರ್ಟ್ ಕಟ್ ರಸ್ತೆಯಾಗಿ ಉಪಯೋಗಿಸಲ್ಪಡುತ್ತಿತ್ತು. ಇದಕ್ಕಾಗಿ ಶಾಲೆಯ ಕಾಂಪೌಂಡಿನ ಒಂದು ಭಾಗವನ್ನು ಒಡೆದುಹಾಕಲಾಗಿತ್ತು. ಬೆಳಗ್ಗೆ ಶಾಲೆಗೆ ಕಾಲಿಟ್ಟರೆ ಅಲ್ಲಿ ಮಲಗಿರುತ್ತಿದ್ದ ಕುಡುಕರು, ವೇಶ್ಯೆಯರು ಇಲ್ಲವೆ ಭಿಕ್ಷುಕರ ಸಂಸಾರಗಳ ಅಡಿಗೆಯನ್ನು ನೋಡುವುದು ನಮಗೆ ಮಾಮೂಲಾಗಿತ್ತು. ಭಿಕ್ಷುಕರ ‘ಸೀಸನ್’ ಚಾಲೂ ಇದ್ದಾಗ ಅವರು ತಿಂಗಳುಗಟ್ಟಲೆ ನಮ್ಮ ಶಾಲೆಯಲ್ಲಿ ಬಿಡಾರ ಹೂಡುತ್ತಿದ್ದುದುಂಟು. ಸಂಜೆಯ ಹೊತ್ತು ಅವರು ಸಿಗುವ ಶಾಲೆಯ ಮೆಟ್ಟಿಲ ಕಲ್ಲುಗಳನ್ನೆ ನೀರಿನಲ್ಲಿ ತೊಳೆದು ಸ್ವಚ್ಛಮಾಡಿ ಬೆಳ್ಳುಳ್ಳಿ, ಕೆಂಪುಮೆಣಸಿನಕಾಯಿ, ಹುಣಿಸೆಹಣ್ಣು ಹಾಕಿ ಅರೆಯುತ್ತಿದ್ದ ಮಸಾಲೆ ಎಂಥವರ ಬಾಯಲ್ಲೂ ನೀರೂರಿಸುವಂತೆ ಕಾಣುತ್ತಿತ್ತು. ಅವೇ ಮೆಟ್ಟಿಲುಗಳ ಮೇಲೆ ನಾವು ಇಡೀದಿನ ಓಡಾಡಿದ್ದೆವು ಎನ್ನುವುದು ನಮಗೆ ಮರೆತೇ ಹೋಗುತ್ತಿತ್ತು. ಆ ಮಸಾಲೆಯಿಂದ ಏನು ಅಡಿಗೆ ತಯಾರಾಗಬಹುದು ಎಂಬ ಚರ್ಚೆ ನಡೆಸುತ್ತ ಭಾರವಾದ ಹೃದಯಗಳೊಡನೆ ನಾವು ನಮ್ಮ ಮನೆಗಳಿಗೆ ವಾಪಾಸಾಗುತ್ತಿದ್ದೆವು.

ಆದರೆ ಈ ಭಿಕ್ಷುಕರ ಬಿಡಾರಗಳ ಸಂಖ್ಯೆ ಬರಬರುತ್ತ ಜಾಸ್ತಿಯಾಗತೊಡಗಿತು. ಜೊತೆಗೇ ಅವರ ಉಪದ್ರವೂ ಕೂಡ. ಯಾರೋ ಈ ಭಿಕ್ಷುಕರು ಮಕ್ಕಳನ್ನು ಕದ್ದುಕೊಂಡುಹೋಗಿ ಅವರ ಕಣ್ಣೋ, ಕೈಯೋ, ಕಾಲೋ ಏನೊ ಒಂದನ್ನು ತೆಗೆದು ಭಿಕ್ಷೆಗೆ ಹಾಕುತ್ತಾರೆಂದು ಹಬ್ಬಿಸಿದರು. ಇನ್ನಾರೋ ಇವರು ತಿನ್ನುವುದು ಬೆಕ್ಕು, ಹೆಗ್ಗಣ ಇತ್ಯಾದಿಯೆಂದು ಹೇಳಲು ತೊಡಗಿದರು. ನಾವುಗಳು ಭಿಕ್ಷುಕರ ಘಾಟುಮಸಾಲೆಗೂ, ಹೆಗ್ಗಣದ ಅಡಿಗೆಗೂ ಕನೆಕ್ಷನ್ ಕೊಟ್ಟುಕೊಂಡು ಸಂಭ್ರಮಿಸಿದೆವು. ಆದರೆ ಶಾಲೆಯ ತೆಂಗಿನಮರಗಳಿಂದ ಕಾಯಿಗಳು, ಕೊಠಡಿಗಳ ಬೀಗಗಳು ಇತ್ಯಾದಿ ಮಂಗಮಾಯವಾಗತೊಡಗಿದಾಗ ಶಾಲೆಗೆ ಒಬ್ಬ ಚೌಕೀದಾರ ಬೇಕೇಬೇಕೆಂದು ವಾದವಿವಾದಗಳ ನಂತರ ತೀರ್ಮಾನಿಸಲಾಯಿತು. ಶಾಲೆಯ ಕಾಂಪೌಡಿನ ಬದಿಯಲ್ಲೆ ವಾಸವಾಗಿದ್ದ ಓರ್ವನನ್ನು ನಿಯಮಿಸಿದರು.

ಆತನ ಹೆಸರು ‘ಬಾಷ’ ಎಂದೇನೊ ಇತ್ತೆಂದು ನೆನಪು. ಈ ಚೌಕೀದಾರ ಯಮನ ಇನ್ನೊಂದು ಅವತಾರದಂತೆ ಇದ್ದ. ದೊಗಲೆ ಪಯಿಜಾಮ, ಜುಬ್ಬಧರಿಸುತ್ತಿದ್ದ ಮೀಸೆಯಿಲ್ಲದ ಗಡ್ಡದ ಆತನ ಎಣ್ಣೆಗೆಂಪು ಮುಖ, ಯಾವಾಗಲು ಮಿಸುಕಾಡುತ್ತಲೆ ಇರುತ್ತಿದ್ದ ಕೆಂಪುಕಣ್ಣುಗಳು.. ವ್ಯತ್ಯಾಸವೆಂದರೆ ಈತ ಯಮನ ಗದೆಯ ಬದಲು ಮೋಟುದೊಣ್ಣೆಯೊಂದನ್ನು ಇಟ್ಟುಕೊಂಡಿರುತ್ತಿದ್ದುದು. ನಮಗೆ ಭಿಕ್ಷುಕರಿಗಿಂತ ಚೌಕೀದಾರನೇ ಭಯಾನಕವಾಗಿ ಕಾಣತೊಡಗಿದ. ಶಾಲೆಯ ಕಾಂಪೌಂಡಿಗೆ ಮನುಷ್ಯರಿರಲಿ, ಒಂದು ಕೋಳಿಪಿಳ್ಳೆಯನ್ನೂ ಆತ ಬಿಡುತ್ತಿದ್ದಿಲ್ಲ. ಬರೇ ಅತನಷ್ಟೇ ಅಲ್ಲ, ಆತನ ಮುಕ್ಕಾಲು ಡಜನ್ ಮಕ್ಕಳೂ ಸಂಜೆಯಾದರೆ ಶಿಫ್ಟು ವ್ಯವಸ್ಥೆ ಮಾಡಿಕೊಂಡು ಗಸ್ತು ತಿರುಗುವರು. ನಾವು ಮಕ್ಕಳು ಶಾಲೆ ನಡೆಯುವ ಸಮಯದಲ್ಲಿ ಆಚೆಯೇನಾದರು ಕಂಡರೆ ಆತ ಅಬ್ಬರಿಸುತ್ತಿದ್ದ ಸದ್ದಿಗೇ ಜಂಘಾಬಲ ಉಡುಗಿಹೋಗುತ್ತಿತ್ತು.

ಶಾಲೆಯ ಕಾಂಪೌಂಡಿನ ಬದಿಯಲ್ಲೆ ಒಂದು ಹ್ಯಾಂಡ್ ಪಂಪ್ ಬೋರ್ವೆಲ್ಲು. ಶಾಲೆಯ ಸಕಲ ನೀರಿನ ವ್ಯವಸ್ಥೆಗೂ ಅದೇ ಆಧಾರ. ಅದರ ಬಳಿಯಲ್ಲಿಯೆ ಒಂದು ಲೋಕಲ್ ಹಾಲು ಶೀತಲೀಕರಣ ಘಟಕದ ಕಟ್ಟಡ. ಬೋರ್ವೆಲ್ ಬಹಳ ಹಳೆಯದಾಗಿ ಅದರಿಂದ ಕಬ್ಬಿಣದ ವಾಸನೆಯ ನೀರು ಬರುತ್ತಿದ್ದರು ನಾವು ಆ ಜಾಗಕ್ಕೇ ನೀರು ಕುಡಿಯುವ ನೆಪಹೂಡಿ ಹೋಗಲು ಕಾರಣವಿತ್ತು. ಡೈರಿಯಲ್ಲಿ ನಮ್ಮ ಪರಿಚಯದವರೊಬ್ಬರು ಕೆಲಸ ಮಾಡುತ್ತಿದ್ದರು. ಅವರು ಶಾಲೆಯ ಮಕ್ಕಳು ಬಂದರೆ ಅಕ್ಕರೆಯಿಂದ ಹಾಲನ್ನು ತಂಪುಗೊಳಿಸಲು ಇಟ್ಟಿರುತ್ತಿದ್ದ ಐಸನ್ನು ತುಂಡುಮಾಡಿ ನಮಗೆ ಕೊಡುತ್ತಿದ್ದರು.

ಹೀಗೊಮ್ಮೆ ಸಂಜೆ ನಾನು ನೀರಿಗೆಂದು ಹೋಗಿ ಗೆಳತಿಯರೊಡನೆ ಐಸು ಹೀರುತ್ತ ತನ್ಮಯಳಾಗಿ ನಿಂತಿರುವಾಗ ಈ ಚೌಕೀದಾರ ಯೂನಿಫಾರ್ಮಿನಲ್ಲಿದ್ದ ನಮ್ಮನ್ನು ನೋಡಿಬಿಟ್ಟ. ಆತ ಅಬ್ಬರಿಸಿಕೊಂಡು ಓಡಿಬರುವುದನ್ನು ನೋಡಿದ ಗೆಳತಿಯರು ದಿಕ್ಕಾಪಾಲಾಗಿ ಓಡಿಹೋದರು. ಸ್ತಂಭೀಭೂತಳಾಗಿ ನಿಂತಿದ್ದ ನನ್ನನ್ನು ಮನೆಯವರೆಗೂ ಕರೆತಂದು ತಾಯಿಯವರ ಬಳಿ ವರದಿ ಒಪ್ಪಿಸಿದ. ಆತನ ಅಬ್ಬರದ ಫಲವೋ, ಅಂದು ನನಗೆ ಬಿದ್ದ ಏಟುಗಳ ರುಚಿಯೋ ನಾನು ಪುನಃ ಐಸು ತಿನ್ನುವ ಧೈರ್ಯ ಮಾಡಲೇ ಇಲ್ಲ. ಆದರೆ ನಾವು ಸ್ನೇಹಿತರು ಚೌಕೀದಾರನ ಬಗ್ಗೆ ಆತ ಯಾರಯಾರಿಂದಲೋ ಏಟು ತಿನ್ನುವಂತೆ ಊಹಿಸಿ ಕಥೆಕಟ್ಟಿ ಅದನ್ನು ಸಣ್ಣದನಿಯಲ್ಲಿ ಹೇಳಿಕೊಂಡು ನಗಾಡಿಕೊಂಡಿದ್ದುಂಟು.
 

Advertisements

10 thoughts on “ಮಸಾಲೆ, ಐಸಿನ ಆಸೆ ಮತ್ತು ಒಬ್ಬ ಚೌಕೀದಾರ.

 1. ಟೀನಾರವರಿಗೆ,

  ನಮಸ್ಕಾರ.
  ನನ್ನ ಒಂಬತ್ತು ವರ್ಷದ ಮಗಳಿಗೆ, ನನ್ನ ಪ್ರೈಮರಿ-ಮಿಡ್ಲ್ ಸ್ಕೂಲ್ ದಿನಗಳ ವಿಚಾರ ಕೇಳುವುದೆಂದರೆ ಎಲ್ಲಿಲ್ಲದ ಇಷ್ಟ. ಅವೆಲ್ಲಾ ಅವಳಿಗೆ ಎಕ್ಸಾಟಿಕ್.
  ಈಗಷ್ಟೇ ನಿಮ್ಮ ಈ ಬ್ಲಾಗ್ ಪೋಸ್ಟ್ ಅನ್ನು ಅವಳಿಗೆ ಓದಿ ಹೇಳಿದೆ. ನಿಮ್ಮ ಈ ಸ್ಕೂಲ್ ಕತೆ ಅವಳಿಗೂ-ನನಗೂ ಇಷ್ಟವಾಯಿತು.

  ವಂದನೆಗಳೊಂದಿಗೆ,
  ಶೇಷಾದ್ರಿ

 2. Hi!
  namma mane hattiravU schoolina hinde keMpu masAle arItiddaru kanE.
  eShTO sArti adanna tindu nODuvA anisidduntu.
  jotege, ice candy mAruva huDuganige, suLLu suLLE namma ShAleya chendada huDugiyobbaLu ninage line hoDItALe anta railu hattisi AgIga pukkaTe ice candy tindiddU nenapAytu!
  haLe nenapugaLige hIgE key kodtA iru. innU bareetA iru.

  Preetiyinda,
  Chetana

 3. ಶೇಷಾದ್ರಿಯವರೆ, ನಿಮ್ಮ ಮಗಳಿಗೆ ನನ್ನ ಬರಹ ಇಷ್ಟವಾಗಿದ್ದು ಎಲ್ಲಕಿಂತ ಖುಶಿ ಕೊಟ್ಟಿತು!
  ರಶೀದರೆ, ಈಗ ನಾನು ಹೇಗಾದರು ಮಾಡಿ ಒಂದು ಕಥೆ ಬರೆಯುವತನಕ ನಿದ್ದೆ ಬರಲಿಕ್ಕಿಲ್ಲ!
  ಚೇತೂ, ಹೀಗೇ ನಿನಗೆ ಏನೇನೋ ನೆನಪಾಗುತ್ತಿದ್ದರೆ ನಾನು ಧನ್ಯಳಾಗುವೆ, ಆಮೇಲೆ ನನ್ನ ಬೇತಾಳದ ಅವತಾರ ಸದ್ಯದಲ್ಲೆ ನೋಡಲಿರುವೆ.

  ಎಲ್ಲರಿಗು ಧನ್ಯವಾದ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s