ಈಸಿಯಾಗಿ ಸಾಯುವುದು ಹೇಗೆ?

(This one is for you Chethana and my dear sis Dimpu!!)

ಪಿ.ಯು.ಸಿ ಸೈನ್ಸ್ ಓದಲೇಬೇಕೆಂದು ಹಠಹಿಡಿದು ಬೆಚ್ಚಗಿನ ಮನೆಬಿಟ್ಟು ಕಾರ್ಕಳದ ಭುವನೇಂದ್ರ ಕಾಲೇಜು ಸೇರಿ ಹಾಸ್ಟೆಲ್ ವಾಸ ನಡೆಸುತ್ತಿದ್ದೆ. ಸೀನಿಯರುಗಳ ಕೈಲಿ ಒಂದಿಲ್ಲೊಂದು ರೀತಿ rag ಮಾಡಿಸಿಕೊಂಡು ಕಾಲೇಜಿನಲ್ಲಿ ತಲೆಯೆತ್ತಿ ನಡೆಯಲೂ ಭಯವಾಗುತ್ತಿತ್ತು. ಎಲ್ಲ ಹಾಳಾಗಲಿ ಎಂದು ಶನಿವಾರ ‘ಔಟಿಂಗ್’ ಹೋದರೆ ಅಲ್ಲಿಯೂ ಕಾರ್ಕಳದ ಆರ್ಥೋಡಾಕ್ಸ್ ಬೀದಿಗಳು ಚುಚ್ಚುವಂತೆ ಕಾಣುತ್ತಿದ್ದವು. ಎಲ್ಲ ಅಂಗಡಿಯವರಿಗೂ ನಾವು ಹಾಸ್ಟೆಲ್ಲಿನ ಹುಡುಗಿಯರು ಎಂದು ಅದು ಹೇಗೋ ತಿಳಿದುಹೋಗುತ್ತಿತ್ತು. ತರಲೆ ಸೀನಿಯರ್ಗಳು ಜೂನಿಯರುಗಳ ಕೈಲಿ ಶಾಪಿಂಗ್, ಹೋಟೆಲ್ ಬಿಲ್ಲುಗಳನ್ನು ತುರುಕಿ ಚೌರ ಮಾಡಿದ ನಿದರ್ಶನಗಳು ಬಹಳವಿದ್ದುದರಿಂದ ನಾವು ಪಿಯುಸಿ ಹುಡುಗಿಯರು ಆದಷ್ಟು ಸೀನಿಯರ್ ಹುಡುಗಿಯರು ಮತ್ತು ಬಾಯ್ಸ್ ಹಾಸ್ಟೆಲಿನ ಹುಡುಗರು ಹೋಗದಿರುವ ಜಾಗಗಳನ್ನೆ ಪ್ರಿಫರ್ ಮಾಡುತ್ತಿದ್ದೆವು. ಆದರೂ ಒಮ್ಮೊಮ್ಮೆ ಸಿಕ್ಕಿಹಾಕಿಕೊಂಡರೆ ಏನೂ ಅರಿಯದ ಮುಗ್ಧಮಕ್ಕಳಂತೆ ನಟಿಸಿ ಪಾರಾಗಬೇಕಿತ್ತು. ಇಂಥ ಸಮಯದಲ್ಲಿ ನನಗೆ ಪರಿಚಯವಾದವಳು ರೇಶ್ಮಾ ಶೆಟ್ಟಿಗಾರ್.

ರೆಫೆಕ್ಟರಿಯ ಮೂಲೆಯೊಂದರಲ್ಲಿ ಒಂದು ದಿನ ಬಿಸಿಬಿಸಿ ಕುಚಲಕ್ಕಿ ಅನ್ನ ಮತ್ತು ಅಡಿಗೆಭಟ್ಟರ ಸ್ಪೆಶಲ್ ‘ದಾಳಿದೋವೆ’ ಮತ್ತು ಬಟಾಣಿಸಾಂಬಾರನ್ನು ಸವಿಯುತ್ತ ಎಂಜಾಯ್ ಮಾಡುತ್ತ ಕುಳಿತಿದ್ದ ನನಗೆ ರೇಶ್ಮಾ ಪಕ್ಕ ಬಂದು ಕುಳಿತಾಗ ಗಂಟಲಲ್ಲಿ ಏನೋ ಸಿಕ್ಕಿಕೊಂಡಂತಾಗಿ ಪೇಚಾಡತೊಡಗಿದೆ. ಸೀನಿಯರ್ ಅಲ್ಲವೆ? ತುಳುವನ್ನೂ ಆಕ್ಸೆಂಟಿನೊಡನೆ ಮಾತನಾಡುತ್ತಿದ್ದ ಆಕೆಯನ್ನು ಊಟ ಬಡಿಸುವ ಪದ್ಮಕ್ಕ, ರಾಜಕ್ಕ ಲೇವಡಿ ಮಾಡಿ ನಗುತ್ತಿದ್ದರು. ಆಕೆಯೂ ಅವರ ಜತೆ ಸೇರಿ ತುಳುವಿನ ನಾನ್ವೆಜ್ ಲಿಮರಿಕ್ಕುಗಳನ್ನು ಹಾಡುತ್ತ ಅವುಗಳ ಅರ್ಥವನ್ನು ತುಳು ಬರದ ಸುತ್ತಮುತ್ತಲಿನವರಿಗೆ ಜೋರಾಗಿ ವಿವರಿಸುತ್ತ ನನ್ನ ಕೆನ್ನೆ ಕೆಂಪು ಮಾಡುವುದರ ಜತೆಗೇ ನನ್ನ ಮೊದಲ ‘ಸೀನಿಯರ್’ ಸ್ನೇಹಿತೆಯಾಗಿಬಿಟ್ಟಳು. ಆಕೆ ದುಬಾಯಿಯಿಂದ ನನ್ನ ಹಾಗೇ ಹಠಹಿಡಿದು ಕಾರ್ಕಳಕ್ಕೆ ಓದಲು ಬಂದವಳಾಗಿದ್ದಳು. ಸಂಬಂಧಿಗಳ ಜತೆ ಒಂದು ವರ್ಷವಿದ್ದು ಸರಿಹೋಗದೆ ಹಾಸ್ಟೆಲ್ ಸೇರಿದ್ದಳು. ನನ್ನ, ಆಕೆಯ ಸ್ನೇಹ ಬಹಳ ಜನರ ಹುಬ್ಬೇರಿಸಿತ್ತು. ಅದಕ್ಕೆ ಕಾರಣವೂ ಇತ್ತೆನ್ನಿ. ನಾನು ಒಂದು ಸದ್ದಾದರೂ ಬೆಚ್ಚಿಬೀಳುವ ಕಾಡುಪಾಪದ ಹಾಗೆ ಇದ್ದರೆ ರೇಶ್ಮಾ ಸಿಂಹಿಣಿಯ ಹಾಗಿದ್ದಳು. ಕೆಂಚನೆಯ ಬಣ್ಣ ಹಚ್ಚಿದ್ದ ಆಕೆಯ ಮಶ್ರೂಮ್ ಕಟ್ ಆಗ ‘ಟ್ರೆಂಡಿ’ಯಾಗಿತ್ತು. ಮೇಲಾಗಿ ಆಕೆಯ ಕಡಿಮೆಯೆಂದರೂ ಎರಡಿಂಚುದ್ದದ ರೆಪ್ಪೆಗಳ ಮೀನುಗಣ್ಣು, ಆರೋಗ್ಯಕರ ಫಿಗರ್ ಮತ್ತ್ತು ಆಕೆ ತೊಡುತ್ತ ಇದ್ದ ಪಾಶ್ಚಾತ್ಯಶೈಲಿಯ ಉಡುಗೆ-ಅಲಂಕಾರಗಳಿಗೆ ಮಾರುಹೋಗದ ಹುಡುಗನೇ ನಮ್ಮ ಕಾಲೇಜಿನಲ್ಲಿ ಇರಲಿಲ್ಲ. ಆಕೆಯ ರೂಮಿಗೆ ಕಾಲಿಟ್ಟರೆ ರಾಶಿ ಪೋಸ್ಟರು, ಡಿಸೈನರ್ ಬಟ್ಟೆಗಳು, ಪುಸ್ತಕಗಳು, ಭಯಹುಟ್ಟಿಸುವಷ್ಟು ಎತ್ತರದ ಹೀಲ್ ಉಳ್ಳ ಚಪ್ಪಲಿಗಳು ಹಾಗೂ ಕೇಳಲು ಒಂದಿಷ್ಟು ಕಥೆಗಳು. ರೇಶ್ಮಾ ವಾರಕ್ಕೆ ಒಂದು ದಿನ ಮೌನಾಚರಣೆ ಮಾಡುತ್ತಿದ್ದಳು. ತನ್ನ ಮೇಲೆ ‘ಫಿದಾ’ ಆಗಿದ್ದ ಪಾಕಿಸ್ತಾನದ ಹುಡುಗ ನಾಸಿರನನ್ನು ಕಿರುಬೆರಳಲ್ಲಿ ಆಟವಾಡಿಸುತ್ತಲೆ ತಾನು ದುಬಾಯಿ ಬಿಟ್ಟುಬರಲು ಪ್ರಮುಖ ಕಾರಣವಾಗಿದ್ದ ಹುಡುಗ ಮೈಕೆಲನನ್ನು ನೆನೆದು ಪರಿತಪಿಸುತ್ತಿದ್ದಳು. ನನ್ನ ನೋಡಿ “ಹೌ ಕೆನ್ ಯು ಬಿ ಸೋ ಅನವೇರ್ ಆಫ್ ಯುವರ್ ಸೆಕ್ಷುವಾಲಿಟಿ!” ಎಂದು ಅಚ್ಚರಿಪಡುತ್ತಿದ್ದಳು.

ಹೀಗೇ ಒಂದು ಶನಿವಾರ ಮಧ್ಯಾಹ್ನ ರೇಶ್ಮಾ ನನ್ನ ರೂಮಿಗೆ ನುಗ್ಗಿದವಳೇ “ಬಾ, ಇವತ್ತು ಒಂದು ಜಾಗಕ್ಕೆ ಕರೆದುಕೊಂಡು ಹೋಗ್ತೀನಿ. ಅರ್ಜೆಂಟ್. ಕ್ವೆಶ್ಚನ್ ಆಫ್ ಲೈಫ್ ಅಂಡ್ ಡೆತ್!” ಎಂದು ಅವಸವಸರವಾಗಿ ಏನೇನೋ ಉಸುರಲು ತೊಡಗಿದಳು. ನಾನು ಬೇಗಬೇಗ ತಯಾರಾಗಿ ಹೊರಟೆ. ಕಾರ್ಕಳದ ಯಾವುದೋ ಮೂಲೆಯ ಮನೆಯೊಂದಕ್ಕೆ ನನ್ನನ್ನು ರೇಶ್ಮಾ ಕರೆದುಕೊಂಡುಹೋದಳು. ಆ ಮನೆಯ ಮೊದಲನೆಯ ಮಹಡಿಯಲ್ಲಿಯೆ ನಾನು ಮೊದಲನೆ ಬಾರಿಗೆ ಹರೀಶನನ್ನು ಕಂಡಿದ್ದು. ಕುರುಚಲುಗಡ್ಡ, ಮಾಸಿದ ಜೀನ್ಸ್ ಹಾಗೂ ಕೊಳಕು ಟಿ-ಶರ್ಟು ಧರಿಸಿದ್ದ ಕಪ್ಪಗಿನ ಕಾಂಪ್ಲೆಕ್ಶನ್ನಿನ ಕುಳ್ಳ ಆಸಾಮಿ. ರೇಶ್ಮಾಳಿಗೆಂದೆ ಕಾಯುತ್ತ ಕುಳಿತಿದ್ದ. ನನ್ನ ಜತೆಕಂಡು ಸ್ವಲ್ಪ ಆಶ್ಚರ್ಯವೆನಿಸಿದರು ತನ್ನ ಮನೆಯ ಸರ್ವೆ ಮಾಡಿಸಿ ಕಂಪ್ಯೂಟರೊಂದನ್ನು ಆನ್ ಮಾಡಿ ಅದರ ಬಗ್ಗೆ ಕೆಲವು ಮಾತು ಹೇಳಿದ. ಅದೊಂದು ಸೈಬರ್ ಕೆಫೆಯೋ ಕಂಪ್ಯೂಟರ್ ಟ್ರೈನಿಂಗ್ ಸೆಂಟರೋ ನೆನಪಾಗುತ್ತಿಲ್ಲ. ಆದರೆ ಆ ಜಾಗದಲ್ಲಿ ಸುಮಾರು ಕಂಪ್ಯೂಟರುಗಳಿದ್ದವು ಮತ್ತು ನಾನು ಅದೇ ಮೊದಲ ಸಾರಿ ಕಂಪ್ಯೂಟರೊಂದನ್ನು ಮುಟ್ಟಿ ರೋಮಾಂಚನ ಅನುಭವಿಸಿದ್ದೆ. ಆದರೆ ಯಾವಾಗ ಹರೀಶ್ ತನ್ನ ಬಗ್ಗೆ ಮಾತನಾಡಲು ಶುರುಮಾಡಿದನೋ, ನನಗೆ ಅಲ್ಲಿ ಕೂರುವುದು ದೂರವಿರಲಿ, ಒಂದು ನಿಮಿಷ ನಿಲ್ಲುವುದೂ ದುಸ್ತರವೆನ್ನಿಸತೊಡಗಿತು. ನಾನು ಯಾಕೆ ಹೋಗಿಹೋಗಿ ಇವಳ ಮಾತು ಕೇಳಿ ಈ ಜಾಗಕ್ಕೆ ಬಂದೆನೋ ಎಂದು ನನಗೇ ಪರಿಪರಿಯಾಗಿ ಶಾಪಹಾಕಲು ತೊಡಗಿದೆ. ವಿಪರೀತ ಹಿಂಸೆಯೆನಿಸತೊಡಗಿತು.

ಏಕೆಂದರೆ ಆತ ಮಾತನಾಡುತ್ತಿದ್ದಿದ್ದು ತನ್ನ ಆತ್ಮಹತ್ಯೆಯ ಹಲವಾರು ಪ್ರಯತ್ನಗಳ ಬಗ್ಗೆ! ಯಾರಾದರು ಹೀಗೂ ಮಾತನಾಡಬಹುದು ಎಂಬ ಕಲ್ಪನೆಯೂ ಇಲ್ಲದ ನಾನು ಅವಾಕ್ಕಾಗಿದ್ದೆ. ಆತ ಇದ್ದಕ್ಕಿದ್ದ ಹಾಗೆ ನನ್ನೆಡೆ ತಿರುಗಿ, “ನಿನಗೆ ಎಲ್ಲದಕ್ಕಿಂತ ಈಸಿಯಾಗಿ ಸಾಯೋದು ಹೇಗೆ ಗೊತ್ತುಂಟ? ನಾನು ಹೇಳ್ತೇನೆ. ರಾತ್ರಿ ಒಂದು ಬಾಟಲು ವಿಸ್ಕಿ ತಗೊ, ಜೊತೆಗೆ ಸ್ವಲ್ಪ ನೇಂದ್ರಬಾಳೆಹಣ್ಣು ತಗೊ. ಸ್ವಲ್ಪ ವಿಸ್ಕಿ ಕುಡಿ, ಬಾಳೆಹಣ್ಣು ತಿನ್ನು ಹಾಗೇ ಮಾಡ್ತಾ ಹೋಗು. ಬೆಳಿಗ್ಗೆ ಆಗುದ್ರೊಳಗೆ ನಿಂಗೆ ಹಾರ್ಟ್ ಅಟ್ಯಾಕ್!! ಗೊತ್ತೇ ಆಗುದಿಲ್ಲ” ಎಂದ. ಮದ್ಯದ ಬಗ್ಗೆ ಆಗ ಬೇಸಿಕ್ ತಿಳುವಳಿಕೆಯೂ ಇರದ ನನಗೆ ಈತ ನನಗೇಕೆ ಇದನ್ನೆಲ್ಲ ಹೇಳುತ್ತಿದ್ದಾನೆ ಎಂದು ಭೀತಿಯಾಯಿತು. ಅಲ್ಲದೆ ನನಗೆ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಯಾವ ಆಸಕ್ತಿಯೂ ಇರಲಿಲ್ಲ. ಇದಲ್ಲದೆ ಅತ ತನಗೆ ಕೈಕೊಟ್ಟ ಹುಡುಗಿ, ಅಮೇಲಿನ ಹತಾಶೆ, ಡ್ರಗ್ಸ್ ಚಟ, ಕುಡಿತ, ಮೂರು ಆತ್ಮಹತ್ಯೆ ಪ್ರಯತ್ನಗಳು ಇತ್ಯಾದಿಗಳ ಬಗ್ಗೆ ಹೇಳುತ್ತಾ ಹೋಗುತ್ತಿದ್ದರೆ ನಾನು ’ದೇವರೇ, ಈತನ ಒಂದು ಆತ್ಮಹತ್ಯೆಯನ್ನಾದರೂ ಯಶಸ್ವಿಯನ್ನಾಗಿ ನಡೆಸಿಕೊಡಬಾರದಾಗಿತ್ತೆ? ನಾನಾದರು ಈ ಪ್ರಾರಬ್ಧದಿಂದ ಪಾರಾಗಬಹುದಿತ್ತು’ ಎಂದು ಪ್ರಾರ್ಥಿಸುತ್ತ ರೇಶ್ಮಾಳೆಡೆ ನೋಡಿದೆ. ಆಕೆ ಅತನ ತೊಂದರೆಗಳಿಗೆ ಸಂತಾಪಸೂಚಿಸುತ್ತ ಇನ್ನೇನು ಗೋಳೋ ಎಂದು ಅಳುವವಳ ಹಾಗೆ ಕಂಡಳು. ನಾನು ನನ್ನ ತಂದೆತಾಯಂದಿರನ್ನೂ. ಹಾಸ್ಟೆಲ್ಲಿನ ವಾರ್ಡನ್ ಪ್ರೊ. ತಂಕಮ್ಮ ನಾಯರರನ್ನೂ ನೆನಪಿಸಿಕೊಂಡು ಗಟ್ಟಿ ಮನಸ್ಸು ಮಾಡಿ “ರೇಶ್ಮಾ, ನಾನು ಹೊರಗಿರ್ತೇನೆ. ನೀನು ಮಾತನಾಡಿ ಬಾ” ಎಂದು ಒಂದೇ ಉಸಿರಿಗೆ ಒದರಿ ಹೊರಗೋಡಿದೆ. ಕೆಲವೇ ನಿಮಿಷಗಳಲ್ಲಿ ಹೊರಬಂದ ರೇಶ್ಮಾ -“ಪೂರ್ ಚ್ಯಾಪ್. ಐ ಹೋಪ್ ಹಿ ವಿಲ್ ನೆವರ್ ಟ್ರೈ ಟು ಕಮಿಟ್ ಸೂಯಿಸೈಡ್” ಎಂದಳು. ನಾನು “ನಡಿನಡಿ, ಇಫ್ ಹಿ ರಿಯಲಿ ವಾಂಟೆಡ್ ಟು, ನಿನಗೆ ಹೇಳುತ್ತಿರಲಿಲ್ಲ. ಪುನಃ ಹೀಗೆಲ್ಲ ಇಂಥವರ ಹತ್ತಿರ ಹೋಗಬೇಡ ಪ್ಲೀಸ್!” ಎಂದೆ. ಆಕೆ ಮುದ್ದಾಗಿ ’ಓಕೆ’ ಎಂದವಳೆ ಹೋಟೆಲೊಂದಕ್ಕೆ ಎಳೆದುಕೊಂಡುಹೋಗಿ ಗೋಭಿಮಂಚೂರಿ ತಿನ್ನಿಸಿದಳು.

15 thoughts on “ಈಸಿಯಾಗಿ ಸಾಯುವುದು ಹೇಗೆ?

  1. ಒಂದು ಆತ್ಮಹತ್ಯೆ ವಿಫಲ ಪ್ರಯತ್ನದ ನಂತರ ಹೊಸ ಹುಟ್ಟು ಸಾಧ್ಯವಾಗಬೇಕು ಮತ್ತು ಹಳೆಯ ಬದುಕನ್ನ ಯಾವುದೋ ಒಂದು ಕಥೆಯ ಹಾಗೆ, ಪಿಚ್ಚರಿನ ಹಾಗೆ ನೋಡುತ್ತ enjoy ಮಾಡಬೇಕು.
    don’t worry dear.
    ನಾನೀಗ ಚೇತನಾ!!

  2. ಚೇತನಾ ಮತ್ತು ವಿಕ್ರಂ,

    ಗೊಂದಲ ಉಂಟುಮಾಡಿದ್ದರೆ ದಯವಿಟ್ಟು ಕ್ಷಮಿಸಿ. ಇಲ್ಲಿ ನನಗೆ ಕಂಡದ್ದು ಸಾವಿಗಿಂತ ಹೆಚ್ಚಾದ ಜೀವನಪ್ರೀತಿ. ಇತರರನ್ನ inspire ಮಾಡುವಂತೆ ಬದುಕುತ್ತ ಇರುವ ನನ್ನ ಪ್ರೀತಿಯ ಎರಡು ಹೆಣ್ಣುಮಕ್ಕಳಿಗೆ ಈ ಬರಹವನ್ನು ಡೆಡಿಕೇಟ್ ಮಾಡಿದೆ.
    ಚೇತನಾ ಬೇಕಾದರೆ ಬಿಯರ್ ಈಕಡೆ ಕಳಿಸು. ನೇಂದ್ರಬಾಳೆಹಣ್ನು ಚಿಪ್ಸ್ ಮಾಡ್ತೀನಿ, ಒಳ್ಳೆ ಕಾಂಬಿನೇಷನ್. ಇವೆಲ್ಲ ಆಗಿಲ್ಲ ಅಂದರೆ ಕಾರ್ಕಳದಲ್ಲಿ ಹರೀಶ್ ಇನ್ನೂ ಇದಾನೆ, ಅಲ್ಲಿಗೇ ಪಾರ್ಸೆಲ್ ಮಾಡುವಾ!!

  3. ಟೀನಾ,
    ರೇಶ್ಮಾಳ ವ್ಯಕ್ತಿತ್ವ ಚಿತ್ರಣ ಚೆನ್ನಾಗಿದೆ. ಅಂಥ ಡೈನಾಮಿಕ್ ಹುಡುಗಿಯರು ಪ್ರತೀ ವರ್ಷವೂ ಒಬ್ಬಿಬ್ಬರಾದರೂ ಇದ್ದರು.

    ಹರೀಶನ ಆತ್ಮಹತ್ಯೆಯ ವ್ಯವಸ್ಥೆ ತುಂಬಾ ಆಸಕ್ತಿಪೂರ್ಣವಾಗಿದೆ. ತೀರಾ ಕುತೂಹಲ ಇದ್ದವರು ಪ್ರಯತ್ನಿಸಲು ಸುಲಭದ್ದೂ ಕೂಡಾ!

    ಕಾರ್ಕಳ, ಭುವನೆಂದ್ರ ಕಾಲೇಜು, ಹಾಸ್ಟೆಲ್, ತಂಕಮ್ಮ ನಾಯರ್… ಇವೆಲ್ಲ ನನ್ನ ನೆನಪಿನ ಚೂರುಗಳು. ಕಾಲೇಜು ಬಿಟ್ಟು ಇನ್ನೆರಡು ತಿಂಗಳಿಗೆ ಇಪ್ಪತ್ತೆರಡು ವರ್ಷವೇ ಆಗುತ್ತಿರುವಾಗ ಅಲ್ಲಿಯ ಜೂನಿಯರ್ ಒಬ್ಬರ ಪರಿಚಯ… ಖುಷಿಯಾಗುತ್ತಿದೆ. ಹೊಸದಾಗಿ ಒಂದು ಪೆಗ್ ಹಾಕಬಹುದಾ?

    • Dear Vani,
      This article was not written in a serious way. Whenever certain difficulties arise in our lives, we feel like running away from life itself at times. I would like to assure you, it is not the best solution. I really appreciate your attitude towards suicide. If you have something that you can share with a stranger like me, you can write to me on my E-mail: tinashashikanth@gmail.com. sometimes, talking to an unknown person can relieve you off your burden. Write to me. Hope you appreciate your life more. Cheers!!! Tina.

    • ನವೀನ್, ನೀವು ಅಂದುಕೊಂಡಿದ್ದಕ್ಕಿಂತ ಬದುಕುವ ದಾರಿಯೇ ಒಳ್ಳೆಯದು!! ಚೆನ್ನಾಗಿ ಎರಡು ಲೋಟ ತಣ್ಣೀರು ಕುಡಿದು ಸೊಂಪಾಗಿ ನಿದ್ರಿಸಿ. ಎಲ್ಲ ಬೇಸರವೂ ದೂರಾಗುತ್ತದೆ. ಈ ಮೊದಲು ವಾಣಿಯವರಿಗೆ ಹೇಳಿದ್ದನ್ನು ಓದಿಕೊಳ್ಳಿ…:)

      • ನಾನು ಅಂದುಕೊಂಡ ಹಾಗೆ ಕುಡಿದೆ ಆದರೆ ಸಾಯಲೇ ಇಲ್ಲ ಪಾಪಿ ನಾನು ದೊಡ್ಡ ಪಾಪಿ
        2 ದಿನ ವಾಂತಿ ಆಯಿತು ಅಷ್ಟೇ ಫ್ರೆಂಡ್ 2 ಮಾತ್ರೆ ಕೊಟ್ಟ ತನ್ನಿಂದ ತಾನೆ ಕಡಿಮೆ ಆಯಿತು’ ಇನ್ನು ಏನು ಮಾಡೋದು ಅಂತ ತಿಳಿತ ಇಲ್ಲ ಹುಚ್ಚು ಹಿಡಿದು ಊರು ಊರು ತಿರುಗೋ ಬದಲು ಆರಾಮಾಗಿ ಸಾಯೋದೆ ಮೇಲು …… PLZ help me

      • ನವೀನ್, ನೀವು ನಿಜ ಹೇಳುತ್ತಿದ್ದೀರೊ, ತಮಾಷೆಗೋಸ್ಕರ ಹೀಗೆಲ್ಲ ಬರೆಯುತ್ತಿದೀರೊ ಗೊತ್ತಿಲ್ಲ. ಆದರೆ ನಾನು ಈ ಲೇಖನವನ್ನ ಸೀರಿಯಸ್ ಆಗಿ ಬರೆದದ್ದಲ್ಲ. ದಯವಿಟ್ಟು ಹೀಗೆ ನಿಮ್ಮ ಜೀವನದ ಜೊತೆ ಆಟ ಆಡಬೇಡಿ. ನೀವು ಅಕ್ಷರಸ್ಥರು ಹೌದಲ್ಲವೊ? ನಾಲ್ಕು ಮಕ್ಕಳಿಗೆ ಅಕ್ಷರ ಹೇಳಿಕೊಡಿ. ಯಾರ ಪ್ರಯೋಜನಕ್ಕಾದರೂ ಆದರೆ ನಿಮ್ಮ ಮನಸ್ಸಿಗೆ ಸಮಾಧಾನವಾದೀತು. ಅಷ್ಟಕ್ಕು ನಿಮ್ಮ ಈ ವಿರಕ್ತಿಗೆ ಕಾರಣ ಏನು?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s