‘ಅಪೋಕ್ಯಾಲಿಪ್ಟೋ’ – ಒಂದು ಅಪೂರ್ವ ಅನುಭವ

bdiam.jpg

(Thank you Rajiv, for reminding me!! I have kept my promise!!)

ಮೊದಲ ಸಾರೆ ನಾವು ವಿಸ್ಮಯವೊಂದಕ್ಕೆ ಸಾಕ್ಷಿಗಳಾದೆವೆಂದಿಟ್ಟುಕೊಳ್ಳಿ,. ಆಗ ನಮಗೆ ಆಗಬಹುದಾದ ಆಘಾತ, ಆಶ್ಚರ್ಯ ಅಪಾರ. ಇದಾದ ಮೇಲೆ ಪುನಃ ಇನ್ನೊಂದು ವಿಸ್ಮಯ ನಮಗೆದುರಾದರೆ ಸ್ವಲ್ಪ ತಣ್ಣಗೆ ಆದರೆ ಅಷ್ಟೇ ಗೌರವದಿಂದ ಪ್ರತಿಕ್ರಿಯಿಸುತ್ತೇವೆ. ಅದೇ ರೀತಿ ಮೆಲ್ ಗಿಬ್ಸನ್ನನ ‘ದ ಪ್ಯಾಶನ್ ಆಫ್ ದ ಕ್ರೈಸ್ಟ್’ ‘ಬ್ರೇವ್ ಹಾರ್ಟ್’ ಚಲನಚಿತ್ರಗಳನ್ನು ನೋಡಿದವರಿಗೆ ಆತನದೇ ನಿರ್ದೇಶನದ ‘ಅಪೋಕ್ಯಾಲಿಪ್ಟೋ’ ನೋಡಿದಾಗ ಅಂತಹ ಆಶ್ಚರ್ಯವೆನಿಸುವುದಿಲ್ಲ. ಆದರೆ ಮೆಲ್ ಗಿಬ್ಸನ್ನನ ನಿರ್ದೇಶನದ ಬಗ್ಗೆ, ಆತನ ಚಿತ್ರಗಳ ‘ಅಥೆಂಟಿಕ್’ ಕ್ವಾಲಿಟಿಯ ಬಗ್ಗೆ ಗೌರವ ಇಮ್ಮಡಿಯಾಗದಿರದು. ಪ್ರೇಕ್ಷಕನ ಕುತೂಹಲ ಕೆಡದಂತೆ, ರಕ್ತಪಾತದ ದೃಶ್ಯಗಳನ್ನೂ ಕ್ಲಾಸಿಕ್ ರೀತಿಯಲ್ಲಿ ನೀಡುವ, ತನ್ನೆಲ್ಲ ಚಿತ್ರಗಳಲ್ಲೂ ವೈವಿಧ್ಯಮಯ ವಿಷಯಗಳನ್ನಾಯ್ದುಕೊಂಡು ಸಫಲರಾಗಿರುವ ಹಲವೇ ನಿರ್ದೇಶಕರಲ್ಲಿ ಮೆಲ್ ಗಿಬ್ಸನ್ ಒಬ್ಬ.’ಅಪೋಕ್ಯಾಲಿಪ್ಟೋ’ವನ್ನು ಕೇವಲ ಆಕ್ಷನ್ ಚಲನಚಿತ್ರವೆನ್ನಲಾಗದು. ಅನೇಕ ಚಾರಿತ್ರಿಕ ಘಟನೆಗಳು ವಿವರಗಳೂ ಕೂಡ ಇದರ ಕಥೆಯೊಡನೆ ಹೆಣೆದುಕೊಂಡಿವೆ. ಚಲನಚಿತ್ರದ ನಾಯಕ ‘ಜಗ್ವಾರ್ ಪಾ’ ತನ್ನ ಬುಡಕಟ್ಟಿನ ನಾಯಕನ ಪ್ರೀತಿಯ ಮಗ. ಬಲಶಾಲಿ. ಬೇಟೆಯಲ್ಲಿ ನಿಪುಣ. ತನ್ನ ಗರ್ಭಿಣಿ ಮಡದಿ ಸೆವೆನ್ ಹಾಗೂ ಪುಟ್ಟ ಮಗನ ಮೇಲೆ ಅಪಾರ ಪ್ರೀತಿ ಹೊಂದಿದವ. ಅರಣ್ಯದ ಬಗ್ಗೆ ತನ್ನ ಅನುಭವೀ ತಂದೆ ಹೇಳುವ, “ಈ ಅರಣ್ಯ ನನ್ನದು, ಇಲ್ಲಿ ನನ್ನ ಪೂರ್ವಜರು ಬೇಟೆಯಾಡಿದ್ದಾರೆ. ನಾಳೆ ನನ್ನ ಮಕ್ಕಳೂ ಬೇಟೆಯಾಡುತ್ತಾರೆ” ಎಂಬ ಮಾತಿನಲ್ಲಿ ನಂಬಿಕೆಯಿಟ್ಟವ. ಇಂಥವನ ನೆಮ್ಮದಿಯ ಜೀವನ ಒಂದು ಮುಂಜಾವ ಮಾಯನ್ ಬುಡಕಟ್ಟಿನ ಯೋಧರಿಂದ ಬುಡಮೇಲಾಗುತ್ತದೆ. ತಮ್ಮ ಸೂರ್ಯದೇವತೆಗೆ ನರಬಲಿ ನೀಡಲು ಮಾಯನ್ನರು ಸಣ್ಣಪುಟ್ಟ ಬುಡಕಟ್ಟುಗಳ ಮಧ್ಯವಯಸ್ಕರನ್ನು ಅಪಹರಿಸುತ್ತಾ ಜಗ್ವಾರನ ಗ್ರಾಮಕ್ಕೂ ದಾಳಿಯಿಡುತ್ತಾರೆ. ರಕ್ತಪಾತ ನಡೆಯುತ್ತದೆ. ತನ್ನ ಮಗ, ಹೆಂಡತಿಯನ್ನು ಜಗ್ವಾರ್ ಬಾವಿಯೊಂದರಲ್ಲಿ ಅವಿಸಿಡುತ್ತಾನೆ. ಆದರೆ ತಾನು ಕಾಳಗದಲ್ಲಿ ಸೆರೆಯಾಗುವುದಲ್ಲದೆ ತನ್ನ ಪ್ರೀತಿಯ ತಂದೆ ತನ್ನ ಕಣ್ಣೆದುರೇ ಕ್ರೂರವಾಗಿ ಕೊಲೆಯಾಗುವುದನ್ನು ನೋಡುತ್ತಾನೆ. ಉಕ್ಕಿಬಂದ ಕ್ರೋಧವನ್ನು ತನ್ನ ಜೊತೆ ಸೆರೆಯಾಗುವ ತಮ್ಮಂದಿರನ್ನು ನೋಡಿ ತಡೆದುಕೊಳ್ಳಬೇಕಾಗುತ್ತದೆ. ಸೆರೆಯಾದವರನ್ನು ಹಿಂಬಾಲಿಸುವ ಮಕ್ಕಳ ಅಸಹಾಯಕತೆ, ಕೊನೆಗೆ ಅವರು ತಮ್ಮ ತೊಂದರೆಗಳಲ್ಲಿ ಒಂದಾಗುವ ರೀತಿ ಮಾರ್ಮಿಕವಾಗಿದೆ.
 
ಮಾಯನ್ ನಗರದವರೆಗಿನ ಅವರ ಪ್ರಯಾಣದಲ್ಲಿ ಅಸಂಖ್ಯಾತ ತೊಂದರೆಗಳು ಒದಗುತ್ತವೆ. ಸಾವುನೋವುಗಳು, ಮಾಯನ್ ಸೈನಿಕರಿಂದ ಹೆಂಗಸರ ಮಾನಾಪಹರಣಗಳು ನಡೆಯುತ್ತವೆ. ದಾರಿಯಲ್ಲಿ ತನ್ನ ತಂದೆಯನ್ನು ಕಳೆದುಕೊಂಢು ಅನಾಥಳಾದ ಬುಡಕಟ್ಟು ಬಾಲಕಿಯೊಬ್ಬಳು ಮಾಯನ್ ನಾಗರೀಕತೆಗೆ ಸರ್ವನಾಶ ತರುವವನು ಅವರೊಡನೆಯೇ ಇದ್ದಾನೆಂದೂ, ಆತ ಹಗಲಿನಲ್ಲಿ ಇರುಳಾಗುವ ವೇಳೆ ಮಣ್ಣಿನಿಂದ ಪುನರ್ಜನ್ಮ ಪಡೆಯುತ್ತಾನೆಂದೂ ಹೇಳಿ ಸೈನಿಕರ ಎದೆ ನಡುಗಿಸುತ್ತಾಳೆ. ‘ಸರ್ವೈವಲ್ ಆಫ್ ದ ಫಿಟ್ಟೆಸ್ಟ್’ ಎಂಬ ಡಾರ್ವಿನ್ ವಾದಕ್ಕೆ ತಕ್ಕಹಾಗೆ ಗಟ್ಟಿಮುಟ್ಟಾಗಿರುವವರು ಮಾತ್ರ ಉಳಿದುಕೊಂಡು ಮಾಯನ್ ನಗರಪ್ರವೇಶ ಮಾಡುತ್ತಾರೆ. ಅಲ್ಲಿಯವರೆಗೂ ಜಗ್ವಾರ್ ಗೆ ಮುಂದೇನಾಗುವುದೆಂದು ತಿಳಿದಿರುವುದಿಲ್ಲ. ಮಾಯನ್ ಪದ್ಧತಿಯ ಪ್ರಕಾರ ಬಲಿಪೀಠಕ್ಕೆ ತೆರಳುವ ಮುನ್ನ ಅವರ ಮೈಗೆಲ್ಲ ನೀಲಿ ಬಣ್ಣ ಬಳಿಯಲಾಗುತ್ತದೆ. ಗೋಡೆಯ ಮೇಲೆ ಚಿತ್ರೀಕರಿಸಿರುವ ನರಬಲಿಯ ವಿವಿಧ ದೃಶ್ಯಗಳನ್ನು ನೋಡುತ್ತ ಜಗ್ವಾರ್ ವಿಚಲಿತನಾದರೂ ತಪ್ಪಿಸಿಕೊಳ್ಳುವ ಆಸೆ ಬಿಡುವುದಿಲ್ಲ. ಹೆಂಡತಿ ಮಕ್ಕಳ ಚಿತ್ರ ಕಣ್ಣೆದುರಿಗೆ ಕಾಡುತ್ತದೆ. ಬಾವಿಯಲ್ಲಿ ಸಿಲುಕಿಕೊಂಡ ಜಗ್ವಾರನ ಹೆಂಡತಿ ಮತ್ತು ಮಗ ಹಸಿವು, ಕಾಡುಪ್ರಾಣಿಯ ಆಕ್ರಮಣ ಮುಂತಾದ ತೊಂದರೆಗಳನ್ನು ಎದುರಿಸುತ್ತಾರೆ. ಆ ಸಮಯಕ್ಕೆ ಸರಿಯಾಗಿ ಸುರಿವ ಮಳೆಯ ನೀರು ಬಾವಿಯಲ್ಲಿ ತುಂಬಲು ಪ್ರಾರಂಭವಾಗುತ್ತದೆ.

ಇತ್ತಕಡೆಗೆ ನರಬಲಿ ಆರಂಭವಾಗುತ್ತದೆ. ಮೊದಲು ಬಲಿಗೊಳಗಾಗುವವನ ಹೃದಯ, ಕರುಳು ಮೊದಲಾದವನ್ನು ಆತ ಜೀವಂತವಿರುವಂತೆಯೇ ಬಗೆದು ಪ್ರದರ್ಶಿಸಲಾಗುತ್ತದೆ. ಆನಂತರ ಆತನ ಶಿರಚ್ಛೇದನ ಮಾಡಿ ಅದನ್ನು ದೇವಸ್ಥಾನದ ಮೆಟ್ಟಿಲುಗಳಿಂದ ಕೆಳಗುರುಳಿಸಲಾಗುತ್ತದೆ. ಆನಂತರ ದೇಹವನ್ನು ಕೆಳಕ್ಕೆಸೆಯಲಾಗುತ್ತದೆ. ಪ್ರತೀ ಬಲಿಯೊಡನೆ ಜನರ ಕೇಕೆ ಅಟ್ಟಹಾಸಗಳು ಮುಗಿಲುಮುಟ್ಟುತ್ತವೆ. ಜಗ್ವಾರನ ಸರದಿ ಬಂದಾಗ ಸರಿಯಾಗಿ ಒದಗುವ ಸೂರ್ಯಗ್ರಹಣವನ್ನು ಒಳ್ಳೆಯ ಶಕುನವೆಂದು ಭಾವಿಸಿ ಮಾಯನ್ನರು ಆತನನ್ನೂ, ಉಳಿದವರನ್ನೂ ನರಬಲಿಯಿಂದ ವಿಮುಕ್ತಗೊಳಿಸುತ್ತಾರೆ. ‘ಬೆಂಕಿಯಿಂದ ಬಾಣಲಿಗೆ’ ಎಂಬಂತೆ ಅವರನ್ನು ಅಪಹರಿಸಿದ ಸೈನಿಕರು ತಮ್ಮ ಬೇಟೆಯಾಟಕ್ಕೋಸ್ಕರ ಜಗ್ವಾರ್ ಮತ್ತು ಸಂಗಡಿಗರನ್ನು ಊರಮೇರೆಯ ಮೈದಾನವೊಂದಕ್ಕೆ ಕೊಂಡೊಯ್ದು ಮೈದಾನವನ್ನು ಓಡಿ ದಾಟುವಾತ ಸ್ವತಂತ್ರನೆಂದು ಆಮಿಷವೊಡ್ಡುತ್ತಾರೆ. ಓಡುವವರನ್ನು ಬಾಣಗಳಿಂದ ಇಲ್ಲವೇ ಗದೆಗಳಿಂದ ಹೊಡೆದು ಸಾಯಿಸುವ ಆಟ ಪ್ರಾರಂಭವಾಗುತ್ತದೆ. ಜಗ್ವಾರ್ ಒಬ್ಬ ಮಾತ್ರ ಗಾಯಗೊಂಡರೂ ಸೇನಾದಳದ ನಾಯಕನ ಮಗನನ್ನು ಸಾಯಿಸಿ ಮೈದಾನ ದಾಟಿ ಪಾರಾಗುತ್ತಾನೆ. ಸೇನಾದಳದ ಬಲಶಾಲಿ ನಾಯಕನ ದ್ವೇಷಕ್ಕೆ ತುತ್ತಾದ ಜಗ್ವಾರನನ್ನು ಮಾಯನ್ ಸೈನಿಕರು ಅಟ್ಟಿಸಿಕೊಂಡು ಬರುತ್ತಾರೆ. ಹೇಗೆ ಜಗ್ವಾರ್ ತನ್ನ ಚಾಣಾಕ್ಷತನದಿಂದ ತನಗೆ ಒದಗಿದ ವಿಪತ್ತಿನಿಂದ ಪಾರಾಗುತ್ತಾನೆ, ತನ್ನ ಹೆಂಡತಿ ಮಕ್ಕಳನ್ನು ಪುನಃ ಸೇರುತ್ತಾನೆ, ಹೇಗೆ ಮಾಯನ್ ನಾಗರೀಕತೆಯ ಅಳಿವಿನ ಹರಿಕಾರನಾಗುತ್ತಾನೆ ಎನ್ನುವುದನ್ನು ಚಲನಚಿತ್ರದಲ್ಲಿ ರಿಯಲಿಸ್ಟಿಕ್ ಆಗಿ ಚಿತ್ರೀಕರಿಸಲಾಗಿದೆ. ತಲೆಮಟ್ಟ ನೀರಿನಲ್ಲಿಯೇ ಮಗುವನ್ನು ಹೆರುವ ಜಗ್ವಾರನ ಹೆಂಡತಿ ಸೆವೆನ್ ತನ್ನ ಗಂಡನ ಶೂರತನಕ್ಕೆ ಸಾಟಿಯಾಗಿ ನಿಲ್ಲುತ್ತಾಳೆ.

ಚಿತ್ರದ ಸೆಟ್ಟು, ಕಾಸ್ಟ್ಯೂಮ್ ಮೊದಲಾದವುಗಳಲ್ಲಿ ಕಂಡುಬಂದಿರುವ ಅಧಿಕೃತತೆ ಚಿತ್ರಕಥೆ, ನಟನೆಗಳಲ್ಲಿ ಕೂಡ ಕಂಡುಬರುತ್ತದೆ. ನರಬಲಿಯ ದ್ರಶ್ಯಗಳು ಭಯಹುಟ್ಟಿಸಿದರೂ ಮಾಯನ್ ನಾಗರೀಕತೆಯಲ್ಲಿ ಪ್ರಚಲಿತವಿದ್ದ ನರಬಲಿಯ ವಿವರಗಳನ್ನೇ ಕಣ್ಣಿಗೆಕಟ್ಟುವಂತೆ ಸಹಜವಾಗಿ ಚಿತ್ರೀಕರಿಸಲಾಗಿದೆ. ಮಾಯನ್ನರ ಪದ್ಧತಿಗಳ ಬಗ್ಗೆ ಯಾವುದೇ ವಿಶೇಷ ಔದಾರ್ಯ ತೋರುವ ಅವಶ್ಯಕತೆ ಇಲ್ಲಿ ಕಾಣಬರದು. ಮಾಯನ್ ನಾಗರೀಕತೆಯನ್ನು ಆಳವಾಗಿ ಆಧ್ಯಯನ ಮಾಡಿರುವ ಪ್ರಖ್ಯಾತ ಇತಿಹಾಸಕಾರ ಡಾ. ರಿಚರ್ಡ್ ಡಿ. ಹ್ಯಾನ್ಸೆನ್ನರ ನೆರವನ್ನು ಮೆಲ್ ಗಿಬ್ಸನ್ ಪಡೆದುಕೊಂಡದ್ದು ಚಲನಚಿತ್ರಕ್ಕೆ ಸಹಜತೆಯ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಚಲನಚಿತ್ರ ಯಾವುದೇ ರಾಜಕೀಯ ಹೊಳಹನ್ನು ನೇರವಾಗಿ ನೀಡದಿದ್ದರೂ ಮಾಯನ್ ಪದ್ಧತಿಗಳು ಅಮೆರಿಕಾದ ಇರಾಕ್ ನರಮೇಧವನ್ನು ನೆನಪಿಸುತ್ತವೆ. ದೇವತೆಗಳನ್ನು ಸಂತೃಪ್ತಗೊಳಿಸಲು ನರಬಲಿ ನೀಡುವ ಮಾಯನ್ನರು, ವಿಶ್ವಶಾಂತಿಯ ಹೆಸರಿನಲ್ಲಿ ತಮ್ಮ ‘ಈಗೋ’ ಸಂತೃಪ್ತಗೊಳಿಸಲು ಯುದ್ಧಗಳನ್ನು ನಡೆಸುವ ಅಮೆರಿಕಾ ಇಂಗ್ಲೆಂಡುಗಳ ತರಹ ಕಾಣುತ್ತಾರೆ. ಹಾಗಾದರೆ ಅಂದಿಗೂ ಇಂದಿಗೂ ವ್ಯತ್ಯಾಸವೇನಿಲ್ಲವೆ? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಚಲನಚಿತ್ರದ ಕೊನೆಗೆ ಜಗ್ವಾರ್ನನ್ನು ಅಟ್ಟಿಸಿಕೊಂಡು ಬರುವ ಮಾಯನ್ನರಿಗೆ ಎದುರಾಗುವ ಬೃಹತ್ ಸ್ಪಾನಿಶ್ ಆರ್ಮಡಾ(ಸೈನ್ಯ) ಅವರ ನಾಗರೀಕತೆಯ ಅಳಿವಿಗೆ ನಾಂದಿಯಾಗುತ್ತದೆ.
 

8 thoughts on “‘ಅಪೋಕ್ಯಾಲಿಪ್ಟೋ’ – ಒಂದು ಅಪೂರ್ವ ಅನುಭವ

 1. ಪಿಚ್ಚರಿನ ಕ್ರೌರ್ಯದ ಕಥೆ ಅಲ್ಲಿಗೇ ಮುಗಿಯುತ್ತೆ. ಆಮೇಲೆ, ಅನಾಗರಿಕ (ಎನಿಸಿಕೊಂಡ) ಮಾಯನ್ನರ ಮೇಲೆ ಸ್ಪಾನಿಷ್ ಮಂದಿ ಇನ್ನೂ ಹೆಚ್ಚಿನ ಕ್ರೌರ್ಯ ನಡೆಸುತ್ತಾರೆ…
  ಇದು ತೀರಾ ಅಪ್ರಸ್ತುತ. ಆದರೂ ಮಾಯನ್ ಸಂಸ್ಕೃತಿ ಅಂತ್ಯವಾದ ಬಗೆ ಯಾವತ್ತೂ ಕಾಡುತ್ತಲೇ ಇರುತ್ತೆ.
  ಯಾವುದೇ ಕಥೆಯ ಒಂದೊಂದು ಮಗ್ಗುಲಿಗೆ ಒಬ್ಬೊಬ್ಬರು ನಾಯಕರು. ಅಲ್ವಾ?

 2. The end of the Mayans is a typical example of the end of a civilisation. Like so many other civilisations like the Romans, Persians……….the Mayans too had the inherent attributes of a civilisation that was in decline. It just needed a push from outside for the whole thing to ‘totally collapse’.

  There are historians who study the ‘fall of civlisations’ as a full fledged subject in itself. One of the foremost books on this topic is the ‘Rise and Fall of the Roman Empire’ which was hugely popular in its time.

  These historians keep saying that there are many elements in our own civilisation and time which both contribute to the ‘rise of the civilisation’ as also the ‘fall of our civlisation’. So we should focus on weeding out the ‘fall elements’ and promote the rise.

 3. Hi Tina,

  Good review of the movie. I do not know if you had the chance to see the movie on a DVD. If so, you might like to watch the extras section, which shows the effort that has gone make the mayan city and mayan civilization come to life in the movie. Inspite of the tribal langauge used, with english subtitling, the movie still makes a great impact on the audience.

  Regards,

  Mayura

 4. Mayura,
  It’s good to know there is someone who cares to watch the ‘extra’ sections in the DVDs like I do. I watch my movies only to devour them!! Yes, I have watched the section and have gone through some literature on the movie. As a youngster in college, I had a major crush on Mel Gibson. I have kept track of all his movies through these years, right from the ‘Mad Max’ movies to his directorial ventures.
  Thanks for reading me!!

 5. ನಮಸ್ಕಾರ,
  ಈ ಲೇಖನದಲ್ಲಿ ಬಳಸಿರುವ “ದೇವಸ್ಥಾನ” ಪದ ಬಳಕೆ ತಪ್ಪಾಗಿದೆ. ಅದು “ಬಲಿಪೀಠ” ಎಂದಿರಬೇಕಿತ್ತು. ನೀವು ಬೇರೆ ಉದ್ದಿಷ್ಯವಿಲ್ಲದೆ ಅದನ್ನು ಉಪಯೋಗಿಸಿದ್ದರೆ ದಯವಿಟ್ಟು ಬದಲಾಯಿಸಿ.
  …….ಅಭಿಮಾನಿ

 6. ನವೀನ್,
  ನಿಮ್ಮ ಅಭಿಮಾನಕ್ಕೆ ವಂದನೆಗಳು. ’ಅಪೋಕ್ಯಾಲಿಪ್ಟೋ’ದ ಬಲಿಯ ವಿಧಿವಿಧಾನಗಳು ಸೂರ್ಯದೇವಾಲಯದ ಶಿಖರದ ಮೇಲೇ ನೆರವೇರುತ್ತವೆ. ದೇವಸ್ಥಾನವೂ ಅದೇ, ಬಲಿನೀಡುವುದೂ ಅಲ್ಲಿಯೇ – ಸೂರ್ಯನ ಸಮ್ಮುಖದಲ್ಲಿ. ಹಾಗಾಗಿ ಆ ಪದಬಳಕೆ ನನಗೆ ಸರಿ ಅನ್ನಿಸುತ್ತ ಇದೆ. ಇದರಲ್ಲಿ ಯಾವ ಬೇರೆ ಉದ್ದೇಶವೂ ಇಲ್ಲ. ಆಗಿನ ಮಾಯನ್ ಸಂಪ್ರದಾಯವನ್ನೂ ರೆಫರ್ ಮಾಡಿಕೊಂಡೆ ಆ ಪದವನ್ನ ಬಳಸಿದ್ದೇನೆ.
  -ಟೀನಾ.

 7. ನಮಸ್ತೆ ಟೀನಾ
  ಅಪೊಕ್ಯಾಲಿಪ್ಟೋ ನಾನೂ ನೋಡಿದೆ. ದಟ್ಸ್ ಫೆಂಟಾಸ್ಟಿಕ್. ಅದರಲ್ಲಿನ ರೂಡ್ ಯಂಗ್ ಬ್ಲಡ್ ನ ಜಾಗರ್ ಪಾ ಪಾತ್ರ ನಿಜಕ್ಕೂ ಕಣ್ಣಿಗೆ ಕಟ್ಟುವಂತಿದೆ. ಮೆಲ್ ಗಿಬ್ಸನ್ ನ ಚಿತ್ರಕಥೆ ಎಲ್ಲೂ ಆಚೀಚೆ ಸರಿಯುವುದಿಲ್ಲ. ಆತ ಸೆರೆ ಹಿಡಿಯುವ ಪ್ರತಿಯೊಂದು ಫ್ರೇಮೂ ಒಂದೊಂದು ಅದ್ಭುತ ಅನುಭವ ನೀಡುತ್ತದೆ. ವಾರಕ್ಕೆ ಮೂರರಂತೆ ಸುರುಳಿ ಸುತ್ತಿ ಬಿಸಾಕುವ ನಮ್ಮ ಗಾಂಧಿನಗರಿಗರು ಇಂಥ ಫಿಲ್ಮ್ ಗಳನ್ನು ಒಮ್ಮೆ ನೋಡಬೇಕು. ಕಲಿಯಬೇಕು.ನಾನಂತೂ ಅದನ್ನ ಪಿಸಿಯಲ್ಲಿ ಸೇವ್ ಮಾಡಿಟ್ಟುಕೊಂಡು ಕ್ಲಾಸಿಕ್ಸ್ ಥರ ಅವಾಗವಾಗ ಜೋರಾಗಿ ಸೌಂಡ್ ಕೊಟ್ಟುಕೊಂಡು ನೋಡ್ತಿರ್ತೇನೆ. ಪ್ರತಿ ಸಲ ನೋಡಿದಾಗಲೂ ಬಲಿ ಪೀಠದ ಮೇಲಿಂದ ಉರುಳಿ ಬೀಳುವ ಆ ತಲೆಗಳನ್ನು ಕಂಡಾಗ ಮನಸ್ಸು ಯಾಕೋ ತಲ್ಲಣಗೊಳ್ಳುತ್ತದೆ. ಆ ತಾಯಿಯ ನೋವಿಗೆ ಆಸರೆಯಾಗಿ ಒಂದು ಬಳ್ಳಿಯಾದರೂ ಇಳಿಬಿಡಬೇಕಾಗಿತ್ತು ಅನಿಸುತ್ತದೆ. ಜಾಗರ್ ತಪ್ಪಿಸಿಕೊಂಡು ಮರದ ಮೇಲೆ ಕುಳಿತಿದ್ದಾಗ ಯಾಕಾದರೂ ಆ ಒಂದು ಹನಿ ರಕ್ತ ಬಿತ್ತೋ ಅನ್ನುವ ಆತಂಕವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಹಂದಿ ಬೇಟೆ ಇಷ್ಟವಾಗುತ್ತದೆ. ಆಗೆ ಎಲ್ಲಾ ಇಷ್ಟ ಅಂದುಕೊಳ್ಳುತ್ತಲೇ ಇಡೀ ಚಿತ್ರ ಮನಕ್ಕೆ ಹತ್ತಿರವಾಗಿಬಿಟ್ಟಿರುತ್ತದೆ.
  ಗಿಬ್ಸನ್ ಸಿಕ್ಕಿದರೆ ಅವನ ಹೆಗಲ ಮೇಲೆ ಕ್ಐ ಬಿಸಾಕಿ ಏನಯ್ಯಾ ನಿನ್ನ ಕಣ್ ಚಳಕ ಅನ್ನಬೇಕೆನಿಸುತ್ತದೆ.
  ನಿಮ್ಮ ಬರಹ ಚೆನ್ನಾಗಿದೆ.

  ಅದು ಮುಂದುವರೆಯಲಿ.

 8. ರವಿ,
  ನಿಮ್ಮ inputs ಖುಶಿ ಕೊಟ್ಟವು. ಗೆಳೆಯ ಮಹೇಶ್ ’ಅದು ಹೇಗೆ ಇಷ್ಟು ವಯಲೆಂಟ್ ಮೂವೀಗಳ್ನ ನೋಡ್ತೀರಿ? ನನಗೆ ಅವು ಜೀರ್ಣವೇ ಆಗದು’ ಅಂದಿದ್ದರು ಒಮ್ಮೆ. ನನ್ ಮಟ್ಟಿಗೆ ಹೇಳೋದಾದರೆ ನಮ್ಮ ‘so-called’ ನಾಗರೀಕತೆಯ ತುಣುಕುಗಳು ಇವು. ನಮಗೆ ಅರ್ಥವಾಗದಿದ್ದರು ಕಾಣುವ ಪ್ರಯತ್ನವನ್ನಂತೂ ಮಾಡಬಹುದಲ್ಲ – ಅದು ಒಂದು ಪುಸ್ತಕದ ಮೂಲಕಾನೋ, ಮೂವೀಯ ಮೂಲಕಾನೋ, ಮಾತುಕತೆಯ ಮೂಲಕಾನೋ – ಹೇಗಾದರೂ. ಆ ಚಲನಚಿತ್ರ ನಿಮ್ಮನ್ನ ಆವರಿಸಿಕೊಂಡಿರೋ ರೀತಿ ಚೆನ್ನಿದೆ. ಬರಹ ಮೆಚ್ಚಿದ್ದಕ್ಕೆ ಧನ್ಯವಾದ. ನಿಮ್ಮ ಬ್ಲಾಗ್ ನೋಡ್ತಾ ಇರ್ತೇನೆ.
  -ಟೀನಾ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s