‘ಹೋಟೆಲ್ ರುವಾಂಡಾ’

1-2004-hotelrwanda-usa-975611.jpg

“ಎಂದು ಉದಯಿಸುವ ಆ ಸೂರ್ಯ?
ಎಂದು ನಮಗೆ ‘ಅದರ’ ದರ್ಶನ ಮಾಡಿಸುವ?
ರುವಾಂಡಾ ರುವಾಂಡಾ

ಹೌದು, ರುವಾಂಡಾ ರುವಾಂಡಾ

… ಅವರು ಹೇಳುವರು, ‘ಮನುಷ್ಯನ ಬೆಲೆ ಅವನ ಕೆಲಸದಿಂದ.’
ಹಾಗಿದ್ದರೆ ಹೇಳು ಆಫ್ರಿಕಾ, ನಿನ್ನ ಬೆಲೆಯೇನು?…”

-ಮಿಲಿಯನ್ ವಾಯ್ಸಸ್. OST:’ಹೋಟೆಲ್ ರುವಾಂಡಾ’, ಗಾಯಕ: ವೈಕ್ಲೆಫ್ ಜೀನ್

***
ಪಾಲ್ ರಸೀಬಗಿನಾ ತನ್ನ ಹೋಟೆಲಿಗೆಂದು ಆಹಾರವಸ್ತುಗಳನ್ನು ಕೊಳ್ಳಲು ಸಹಾಯಕನೊಡನೆ ಜೀಪಿನಲ್ಲಿ  ಹೊರಟಿದ್ದಾನೆ. ದಂಗೆಯ ಭೀತಿಯಿರುವುದರಿಂದ ಕಾಡಿನಿಂದ ಆಗಿಹೋಗುವ ಮಾರ್ಗವೊಂದನ್ನು ಆಯ್ದುಕೊಂಡಿರುವ ಅವರು ಎಲ್ಲ ವಸ್ತುಗಳನ್ನು ಜೀಪಿನಲ್ಲಿ ಹೇರಿಕೊಂಡು ಬಂದ ಮಾರ್ಗದಿಂದಲೇ ವಾಪಾಸು ಹೋಗುತ್ತ ಇದ್ದಾರೆ. ಎಲ್ಲೆಡೆ ಮುಸುಕಿದ ಮಂಜು. ಅಷ್ಟರಲ್ಲಿ ಜೀಪಿನ ಚಕ್ರಕ್ಕೆ ಗಟ್ಟಿಯಾದದ್ದೇನೋ ತಗುಲತೊಡಗಿ ಡ್ರೈವ್ ಮಾಡಲು ತೊಂದರೆ. ಪಾಲ್ ತನ್ನ ಸಹಾಯಕನಿಗೆ ‘ನೀನು ಸರಿಯಾದ ದಾರಿಯಲ್ಲಿ ಹೋಗುತ್ತಿಲ್ಲ. ನಿಲ್ಲಿಸು!’ ಎಂದು ಗದರುತ್ತಾನೆ. ಜೀಪು ನಿಲ್ಲಿಸಿ ಕೆಳಗಿಳಿದರೆ ಕಾಲಡಿಗೆ ಮೆತ್ತಗಿನದೇನೋ ತಗುಲುತ್ತದೆ. ಬಗ್ಗಿ ನೋಡುತ್ತಾನೆ, ಕೆಲವು ಹೆಣಗಳು ಕಾಣುತ್ತವೆ. ಗಾಬರಿಯಾಗಿ ಮುಗ್ಗರಿಸಿ ಬೀಳುತ್ತಾನೆ, ಮುಟ್ಟಿದಲ್ಲೆಲ್ಲ ಹೆಣಗಳೇ ತಗುಲುತ್ತವೆ. ಅಷ್ಟರಲ್ಲಿ ಮುಸುಕಿದ ಮಂಜು ಎದ್ದೇಳುತ್ತದೆ. ಪಾಲ್ ಬಂದಾಗ ನಿರ್ಮಾನುಷ್ಯವಾಗಿದ್ದ ದಾರಿಯ ತುಂಬ ಈಗ ಹೆಣಗಳೇ ತುಂಬಿಕೊಂಡಿವೆ. ತಮ್ಮ ಜೀಪು ಇಲ್ಲಿಯವರೆವಿಗೂ ಚಲಿಸುತ್ತಿದ್ದುದು ಹೆಣಗಳ ಮೇಲೆ ಎಂದು ತಿಳಿದುಬಂದು ಪಾಲ್ ತತ್ತರಿಸಿಹೋಗುತ್ತಾನೆ.

ಇದು ಕೇವಲ ‘ಹೋಟೆಲ್ ರುವಾಂಡಾ’ ಎಂಬ ಚಲನಚಿತ್ರದ ದೃಶ್ಯವಾಗಿದ್ದರೆ ಪರವಾಗಿರಲಿಲ್ಲ. ಆದರೆ ಇದು ರುವಾಂಡಾ ದೇಶದ ಕಿಗಾಲಿ ಪಟ್ಟಣದ ಹಾದಿಯೊಂದರಲ್ಲಿ ನಿಜವಾಗಿ ನಡೆದ ಘಟನೆಯಾಗಿತ್ತು. 1994ರಲ್ಲಿ ಆಫ್ರಿಕಾ ಖಂಡದ ರುವಾಂಡಾ ದೇಶದಲ್ಲಿ ಹುಟು ಜನಾಂಗದವರು ಟೂಟ್ಸಿ ಜನಾಂಗದವರ ಮೇಲೆ ಬಂಡೆದ್ದು ನಡೆಸಿದ ಮಾರಣಹೋಮದಲ್ಲಿ ಕೇವಲ ಮೂರು ತಿಂಗಳಲ್ಲಿ ಒಂದು ಮಿಲಿಯನ್ ಜನ ಕೊಲೆಯಾದರು. ತಮ್ಮ ನ್ಯೂಯಾರ್ಕ್, ಲಂಡನ್ನುಗಳಲ್ಲಿ ಒಂದು ಬಾಂಬು ಸ್ಫೋಟವಾದರೆ ದೆವ್ವಬಂದವರಂತೆ ಆಡುವ ಅಮೆರಿಕಾ, ಯುನೈಟೆಡ್ ಕಿಂಗ್ಡಂಗಳು ಈ ಸಮಯದಲ್ಲಿ ರುವಾಂಡಾಗೂ ತಮಗೂ ಸಂಬಂಧವೇ ಇಲ್ಲವೇನೋ ಅನ್ನುವ ಹಾಗೆ ಮೂಕವಾಗಿದ್ದುಬಿಟ್ಟವು. ಈ ವಿಕೃತ ಜನಾಂಗೀಯ ಹತ್ಯೆಯ ಹಿನ್ನೆಲೆಯಲ್ಲಿ ನಿರ್ದೇಶಕ ಟೆರಿ ಜಾರ್ಜ್ ‘ಹೋಟೆಲ್ ರುವಾಂಡಾ’ವನ್ನು ಚಿತ್ರಿಸಿದ್ದಾನೆ.

ಪಾಲ್ ರಸೀಬಗಿನಾ ಕಿಗಾಲಿಯ ಯುರೋಪಿಯನ್ ಒಡೆತನದ ಹೋಟೆಲ್ ‘ಮಿಲ್ ಕಾಲಿನ್ಸ್’ನ ಮ್ಯಾನೇಜರ್. ಆತ ದಂಗೆ ಶುರುವಾದಾಗ ಎದೆಗೆಡುವುದಿಲ್ಲ. ಆತ ಹಾಲಿವುಡ್ ಫ್ಯಾಂಟಸಿ ಚಲನಚಿತ್ರಗಳ ಹೀರೋಗಳಂತೆ ಚಿತ್ರವಿಚಿತ್ರವಾಗಿ ಕಾದಾಡುವುದಿಲ್ಲ. ಆತ ತೊಂದರೆಯಲ್ಲಿ ದಿಕ್ಕೆಟ್ಟು ಓಡಾಡುವವನಲ್ಲ. ಪಾಲ್ ಒಬ್ಬ ನಾಜೂಕಯ್ಯ. ಆತನಿಗೆ ಯಾರ ಕೈಲಿ ಹೇಗೆ ಕೆಲಸ ತೆಗೆಯಬೇಕು, ಯಾರ ಕೈ ಬಿಸಿಮಾಡಿದರೆ ಕೆಲಸವಾಗುತ್ತದೆ, ಎಲ್ಲ ಗೊತ್ತು. ದಂಗೆಯ ವಿವಿಧ ಕ್ರೂರ ಮುಖಗಳನ್ನು ನೋಡುತ್ತ ಏಕಾಂತದಲ್ಲಿ ವಿಚಲಿತನಾದರು ತನ್ನ ಕುಟುಂಬ ಹಾಗೂ ಹೊಟೆಲಿನ ಕೆಲಸಗಾರರೆದುರು ಅದನ್ನು ತೋರ್ಪಡಿಸಿಕೊಳ್ಳುವುದಿಲ್ಲ. ತನ್ನ ಸುತ್ತಮುತ್ತಲ ಜನರನ್ನು ಆತ ಆಳವಾಗಿ ಅಭ್ಯಸಿಸಿದ್ದಾನೆ. ಹುಟು ಜನಾಂಗದವರ ಕ್ರೌರ್ಯ ಮಿತಿಮೀರಿದಾಗ ತನ್ನ ಹೊಟೆಲಿನಲ್ಲಿ ಸುಮಾರು 1200 ಟೂಟ್ಸಿಗಳನ್ನು ಅವಿಸಿಡುತ್ತಾನೆ. ತನ್ನ ಹೊಟೆಲಿನ ನಿರಾಶ್ರಿತರಿಗೋಸ್ಕರ ಆತ ಏನು ಮಾಡಲೂ ತಯಾರು. ಅವರು ಹೊರಹೋದರೆ ಹೆಂಗಸರು-ಮಕ್ಕಳೆನ್ನದೆ ಎಲ್ಲರೂ ಹುಟುಗಳ ಕೈಯಲ್ಲಿ ಕಗ್ಗೊಲೆಯಾಗುವುದು ಖಚಿತವಾಗಿ ಆತನಿಗೆ ತಿಳಿದಿದೆ. ಮಿಲಿಟರಿಯವರಿಗೆ ಲಂಚ ಕೊಡುವುದರಿಂದ ಹಿಡಿದು, ಅಮೆರಿಕದವರು ಸ್ಯಾಟೆಲೈಟ್ ಮೂಲಕ ಅವರನ್ನು ನೋಡುತ್ತಿದ್ದಾರೆಂದು ಬೆದರಿಸುವವರೆಗೂ, ತನ್ನ ಹೊಟೆಲಿನ ‘ಅತಿಥಿ’ಗಳಿಗಾಗಿ ಹುಟುಗಳ ನಾಯಕನಿಂದ ಆಹಾರವಸ್ತುಗಳನ್ನು ಇಸಿದುಕೊಂಡು ಬರುವವರೆಗೂ ಆತನ ವ್ಯವಹಾರಿಕಜ್ನಾನ ಬೇರೆಬೇರೆ ಮುಖಗಳನ್ನು ಪಡೆದುಕೊಳ್ಳುತ್ತ ಹೋಗುತ್ತದೆ. ನಾಳೆ ಸಾವು ಕಾದಿದೆ ಎಂದು ಖಚಿತವಾದಾಗ ಹೆಂಡತಿ ಟೆಸ್ಸಿಯಾನಾಳಿಗೆ ಕ್ಯಾಂಡಲ್ ಲೈಟ್ ಔತಣ ಏರ್ಪಡಿಸಿ ಆಕೆಯಿಂದ ಒಂದು ಭಾಷೆ ಇಸಿದುಕೊಳ್ಳುತ್ತಾನೆ – ‘ನಾಳೆ ಹುಟುಗಳು ಇಲ್ಲಿಗೆ ದಾಳಿಮಾಡಿದರೆ ನೀನು ಮಕ್ಕಳನ್ನು ಕರೆದುಕೊಂಡು ಟೆರೇಸಿನಿಂದ ಕೆಳಹಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕು. ನೀವು ಅವರ ಕೈಗೆ ಸಿಕ್ಕಿಹಾಕಿಕೊಂಡು ಸಾಯೋದಕ್ಕಿಂತ ಇದು ಮೇಲು.’ ತನ್ನ ಜನರನ್ನು ರಕ್ಷಿಸಲು ಆತ ವಿಶ್ವಸಂಸ್ಥೆಯ ಕರ್ನಲ್ ಒಬ್ಬನಿಂದ ಹಿಡಿದು, ತನ್ನ ವಿದೇಶೀ ಮಾಲೀಕ, ಲಂಚಕೋರ ಮಿಲಿಟರಿ ಅಧಿಕಾರಿ ಮತ್ತು  ತನಗೆ ತಿಳಿದ ಎಲ್ಲ ಪಾಶ್ಚಿಮಾತ್ಯ ಜನರನ್ನು ಸಂಪರ್ಕಿಸುವುದು ನಾಗರೀಕತೆಗೇ ನಾಚಿಕೆ ಬರಿಸುವಂತಿದೆ. ವಿಶ್ವಸಂಸ್ಥೆಯ ಕರ್ನಲನ ಅಸಹಾಯಕತೆ, ಕೋಪಗಳು, ಟೂಟ್ಸಿಗಳ ಹಾಡುಹಗಲ ಕೊಲೆಗಳನ್ನು ವಿಡಿಯೋಚಿತ್ರಣ ಮಾಡುವ ವಿದೇಶೀ ಪತ್ರಕರ್ತನ ನೋವು, ಇವೆಲ್ಲ ಮುಂದುವರಿದ ದೇಶಗಳ ಹಿಪಾಕ್ರಸಿಗೆ ಹಿಡಿದ ಕನ್ನಡಿ.

ಆ ಮಾರಣಹೋಮದ ಹೊತ್ತು ರುವಾಂಡಾದಲ್ಲಿ ತಾಂಡವವಾಡಿದ್ದು ರೌರವ ದ್ವೇಷ. ಮಾನವತೆಗೆ ಅಲ್ಲಿ ಸಾರಾಸಗಟಾಗಿ ಮಸಿ ಬಳಿಯಲಾಯಿತು. ಇವೆಲ್ಲದರ ವಿರುದ್ಧ ನಿಂತು ತನ್ನ ಹೊಟೆಲಿನ ನಿರಾಶ್ರಿತರನ್ನು ವಿಶ್ವಸಂಸ್ಥೆಯ ರೆಫ್ಯೂಜಿ ಕ್ಯಾಂಪಿಗೆ ತಲುಪಿಸುವಲ್ಲಿ ಯಶಪಡೆದ ಪಾಲ್ ರಸೀಬಗಿನಾನ ಕಥೆ ಸಾಮಾನ್ಯವಾದ್ದಲ್ಲ. ಇಂದಿಗೂ ಆತ ಬೆಲ್ಜಿಯಂ ದೇಶದಲ್ಲಿ ತನ್ನ ಹೆಂಡತಿ, ಮಕ್ಕಳು ಹಾಗೂ ತಾನು ಸಾಕುತ್ತಿರುವ ರುವಾಂಡಾದ ಇಬ್ಬರು ಅನಾಥ ಮಕ್ಕಳೊಡನೆ ವಾಸವಾಗಿದ್ದಾನೆ.’ಹೊಟೆಲ್ ರುವಾಂಡಾ’ ಆತನ ಕಥೆಯನ್ನು ತಣ್ಣಗೆ ಬಣ್ಣಿಸಿ ಹೇಳುತ್ತದೆ. ಪಾಲ್ ನ ಪಾತ್ರವನ್ನು ಅಭಿನಯಿಸಿರುವ ಡಾನ್ ಶೀಡ್ಲ್ ಇಂದಿನ ಅತ್ಯುತ್ತಮ ನಟರಲ್ಲೊಬ್ಬ. ಈ ಚಲನಚಿತ್ರಕ್ಕೋಸ್ಕರ ಗಾಯಕ ವೈಕ್ಲೆಫ್ ಜೀನ್ ಹಾಡಿರುವ ’ಮಿಲಿಯನ್ ವಾಯ್ಸಸ್’ ಬಹಳ ಸರಳ ಸುಂದರ ಸೌಂಡ್ ಟ್ರಾಕ್. ಈ ಹಾಡಿನ ಯು-ಟ್ಯೂಬ್ ಲಿಂಕ್ ಈ ಕೆಳಗಿದೆ:

***
ಚಿತ್ರ: www.allposters.com

Advertisements

5 thoughts on “‘ಹೋಟೆಲ್ ರುವಾಂಡಾ’

  1. ಇದು ಬಹಳ ಉತ್ತಮ ಚಲನಚಿತ್ರ. ಯುದ್ಧ ಕತೆ ಆಧಾರಿತ ಚಲನಚಿತ್ರಗಳಿಗೋಸ್ಕರ ಅಂತರ್ಜಾಲದಲ್ಲಿ ಹುಡುಕುತ್ತಿರುವಾಗ ಈ ಟೈಟಲ್ ಸಿಕ್ಕಿತು. ಕೂಡಲೇ ಖರೀದಿಸಿದೆ. ಚಿತ್ರ ನಿರಾಸೆ ಮಾಡಲಿಲ್ಲ. ಅಂದ ಹಾಗೆ ಉದಯವಾಣಿಯಲ್ಲಿ ಅಂಕಣ ಬರೆಯುವ ಟೀನಾ ನೀವೇನಾ…?

  2. ರಾಜೇಶ್,

    ತಡವಾಗಿ ಪ್ರತಿಕ್ರಿಯಿಸುತಿದೇನೆ, ಕ್ಷಮಿಸಿ. ಚಲನಚಿತ್ರ ನಿಮ್ಗಿಷ್ಟವಾಯಿತು ಎಂದು ತಿಳಿದು ಸಂತಸವಾಯಿತು. ಉದಯವಾಣಿಯಲ್ಲಿ ಅಂಕಣ ಬರೆವ ಟೀನಾ ನಾನೇ. ಸಿಂಧೂಳ ಬ್ಲಾಗ್ ರೋಲಿನ ರಾಜೇಶ್ ನಾಯ್ಕ ನೀವೇನಾ…?

  3. ಟೀನಾ,
    ಸಿಂಧೂಳ ಬ್ಲಾಗ್ ರೋಲಿನ ರಾಜೇಶ್ ನಾಯ್ಕ ಮತ್ತು ಈ ರಾಜೇಶ್ ನಾಯ್ಕ ಸೇಮ್.
    ಉದಯವಾಣಿಯ ನಿಮ್ಮ ಅಂಕಣ ತಪ್ಪದೇ ಓದುತ್ತೇನೆ. ನಿಮ್ಮ ಪರಿಚಯ ನಿಮ್ಮದೇ ಬ್ಲಾಗ್ ಮೂಲಕ ಆದದ್ದು ಸಂತೋಷ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s