ಕುರ್ಮಿಲ್ಲನ ದೀಪಾವಳಿ

kid_photo1.jpg

ದೀಪಾವಳಿಯ ಹೊತ್ತಿಗೆ ಬೇರೆಲ್ಲ ಕಡೆ ಮಳೆ ಬಿಟ್ಟಿದ್ದರು ಮಲೆನಾಡಿನಲ್ಲಿ ಇನ್ನೂ ಜಿಟಿಜಿಟಿ ಅನ್ನುತ್ತಿತ್ತು. ಆದರೂ ಮಳೆಗಾಲದ ಬೇಸರವೆಲ್ಲ ದೀಪಾವಳಿಯ ಜತೆಗೇ ತೊಳೆದುಹೋಗುತ್ತದೇನೊ ಅನ್ನುವಷ್ಟು ಸಡಗರ ಎಲ್ಲ ಕಡೆ ಆವರಿಸಿಕೊಳ್ಳುವುದು. ನಮ್ಮ ಮನೆಯಲ್ಲಿ ಹಬ್ಬದ ಆಚರಣೆಯಿಲ್ಲದಿದ್ದರು ದೀಪಾವಳಿಯ ಆಕರ್ಷಣೆಯಿಂದ ಹೊರತಾಗಿ ಉಳಿಯುವುದು ನಮಗೆ ಸಾಧ್ಯವಾಗುತ್ತಲೆ ಇರಲಿಲ್ಲ. ಲಕ್ಷ್ಮೀಪೂಜೆಯ ದಿನ ಪೇಟೆಯೆಲ್ಲ ಸುತ್ತುವ ಕೆಲಸ. ಅಂಗಡಿಗಳಲ್ಲಿ ಹಂಚಲ್ಪಡುವ ಬೂಂದಿ, ಲಾಡು, ಪೇಡಾ ಇತ್ಯಾದಿ ಸಿಹಿತಿಂಡಿಗಳನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಸೇರಿಸಿಕೊಳ್ಳುವುದು. ಎಲ್ಲ ತಿರುಗಾಟ ಮುಗಿದ ಮೇಲೆ ಒಂದೆಡೆ ಕೂತು ಅವನ್ನೆಲ್ಲ ತಿಂದುಮುಗಿಸಿ ಹೊಟ್ಟೆನೋವೆಂದು ಓಡಾಡುವುದು. ಬಲಿಪಾಡ್ಯಮಿಯ ಬೆಳಗ್ಗೆ ನಮ್ಮ ಸವಾರಿ ಮೇಲಿನ ಬೀದಿಯ ಕಡೆ ತಿರುಗುತ್ತಿತ್ತು. ಅಲ್ಲಿ ಮೇಷ್ಟರೊಬ್ಬರ ಮನೆ. ಅವರ ಮಕ್ಕಳಿಬ್ಬರು ನಮ್ಮಂತೆಯೆ ತಂಟೆಕೋರರಾಗಿ ನಮ್ಮ ದೋಸ್ತಿಗಳಾಗಿದ್ದರು. ಅವರ ಮನೆಯಲ್ಲಿ ದನ, ಎಮ್ಮೆಗಳ ಕೊಟ್ಟಿಗೆಯೊಂದಿದ್ದು ಸುತ್ತಮುತ್ತಲ ಮನೆಗಳಿಗೆಲ್ಲ ಅವರ ಮನೆಯಿಂದಲೆ ವರ್ತನೆ ಹಾಲು ಸರಬರಾಜಾಗುತ್ತಿತ್ತು. ಬಲಿಪಾಡ್ಯಮಿಯ ದಿನ ಹಸು, ಎಮ್ಮೆಗಳಿಗೆ ವಿಶೇಷ ಪೂಜೆ ನಡೆಯುವ ಸಮಯದಲ್ಲಿ ನಾವು ಅಲ್ಲಿ ಹಾಜರು. ದನಕರುಗಳ ಕತ್ತಿಗೆ ಹಾಕಿದ ಹಾರ, ಅವುಗಳ ಮೈಮೇಲೆ ಇಡಲಾಗುತ್ತಿದ್ದ ಬಣ್ಣಬಣ್ಣದ ಸೊನ್ನೆಯ ಆಕಾರದ ವಿನ್ಯಾಸ, ಪೂಜೆಯ ಸಮಯದಲ್ಲಿ ಆರತಿ ತಟ್ಟೆಯ ಬೆಂಕಿ ನೋಡಿ ಹಸು ಎಮ್ಮೆಗಳು ನಡೆಸುವ ಧಾಂಧಲೆ – ಇವನ್ನೆಲ್ಲ ನಾವು ಯಾವುದೆ ಕಾರಣಕ್ಕು ತಪ್ಪಿಸುತ್ತಿರಲಿಲ್ಲ. ಮುದ್ದಾಗಿ ಕಾಣುತ್ತಿದ್ದ ಹಸುಗಳನ್ನು ಮುಟ್ಟಿ ಮುಟ್ಟಿ ನೋಡುವುದೇ ಒಂದು ಸಂತಸ. ಇನ್ನು ಪಟಾಕಿಗಳ ಕತೆ ಹೇಳಬೇಕೆ? ದೀಪಾವಳಿಗೆ ಇನ್ನು ವಾರವಿದೆ ಎನ್ನುವಾಗಲೆ ಚಠಪಠ ಎನ್ನುವ ಸದ್ದುಗಳು ಊರ ಗಲ್ಲಿಗಲ್ಲಿಗಳಲ್ಲಿ ಮೊಳಗಲು ಶುರು.

ಹಬ್ಬದ ಮಧ್ಯಾಹ್ನ ನಮ್ಮ ಮನೆಗೆ ಸ್ನೇಹಿತರ ಮನೆಗಳಿಂದ ಹೋಳಿಗೆ, ಕರ್ಜಿಕಾಯಿ, ಕಜ್ಜಾಯ, ಶಂಕ್ರಪೊಳೆ ಇತ್ಯಾದಿ ತಿಂಡಿಗಳು ಕಳುಹಿಸಲ್ಪಡುತ್ತಿದ್ದವು. ಊಟ ಮುಗಿಸಿದ ನಂತರ ನಾವು ಮಕ್ಕಳಿಗೆ ಅವಿತುಕೊಳ್ಳುವ ಜಾಗ ಹುಡುಕುವ ಭರಾಟೆ ಪ್ರಾರಂಭವಾಗುತ್ತಿತ್ತು. ಏಕೆಂದರೆ ಹಬ್ಬದ ದಿನ ಮಧ್ಯಾಹ್ನ ಎಷ್ಟು ಹೊತ್ತಿಗಾದರು ‘ಕುರ್ಮಿಲ್ಲ’ ಎಂದು ಕರೆಯಲ್ಪಡುತ್ತಿದ್ದ ಒಬ್ಬ ಕರಿಯ ರಾಕ್ಷಸ ಊರ ಬೀದಿಗಳಲ್ಲಿ ಪ್ರತ್ಯಕ್ಷವಾಗಿಬಿಡುತ್ತಿದ್ದ!

ನಾವು ಮಕ್ಕಳು ಈ ದೀಪಾವಳಿಯ ಕುರ್ಮಿಲ್ಲನ ಸುತ್ತ ಹೆಣೆದಷ್ಟು ಕಲ್ಪನೆ, ಫ್ಯಾಂಟಸಿಗಳನ್ನು ಇನ್ಯಾರ ಬಗ್ಗೆಯೂ ಹೆಣೆದಿರಲಿಕ್ಕಿಲ್ಲ. ಪಕ್ಕದ ಮನೆಗೆ ಹೊಸತಾಗಿ ಬಂದಿದ್ದ ಟಿಂಬರ್ ವ್ಯಾಪಾರಿಯ ಮನೆಯ ಕಾಂಪೌಂಡಿನ ಹಿಂದೆ ಅವಿತುಕೂತು ಜೋರಾಗಿ ‘ಅರೆ ಓ ಟಿಂಬರ್ ವಾಲಾ.. ಗಡ್ಡಾವಾಲಾ..’ ಎಂದು ಕಿರುಚಿ ಓಡಿಬಂದು ಸಂತಸಪಡುತ್ತಿದ್ದುದನ್ನು ಬಿಟ್ಟರೆ ನಮ್ಮ ಪ್ರಪಂಚದಲ್ಲಿ ದೊಡ್ಡವರಿಗೆ ಮೂರುಕಾಸಿನ ಕಿಮ್ಮತ್ತೂ ಇರಲಿಲ್ಲ. ಆದರೆ ಈ ಕುರ್ಮಿಲ್ಲ ಮಾತ್ರ ನಮ್ಮ ಅಂಕೆಗೂ ಸಿಗದಷ್ಟು ಭಯಂಕರನಾಗಿದ್ದ. ಪ್ರತಿ ದೀಪಾವಳಿಯ ಮಧ್ಯಾಹ್ನ ಇವ ತಪ್ಪದೆ ಪ್ರತ್ಯಕ್ಷವಾಗಿಬಿಡಬೇಕು ಎಂದು ಯಾರೊ ನಿಯಮಿಸಿದ್ದರೆಂದು ತೋರುತ್ತದೆ. ನಮ್ಮ ಅಪರಾಹ್ನದ ಕುಟಿಲ ಯೋಜನೆಗಳೆಲ್ಲ ಈ ಕುರ್ಮಿಲ್ಲನಿಂದ ಮುಲಾಜಿಲ್ಲದೆ ಮಣ್ಣುಪಾಲಾಗಿಬಿಡುತ್ತಿದ್ದವು. ಅವನ ರೂಪವೇ ಅಂಥದು. ಅವನ ಕಣ್ಣುಗಳು ಕೆಂಪು ಗೋಳಗಳ ಹಾಗೆ ನಿಗಿನಿಗಿ ಹೊಳೆಯುತ್ತಿದ್ದವು. ಬಾಚದೇ ಉದ್ದ ಬೆಳೆದಿದ್ದ ಎಣ್ಣೆ, ಓರಣ ಅರಿಯದ ಕೂದಲು. ತಲೆಯ ಮೇಲೊಂದು ಅಡಿಕೆಹಾಳೆಯ ಟೊಪ್ಪಿ. ತುಟಿಗೆ ಢಾಳಾಗಿ ಬಳಿದ ಕಡುಗೆಂಪು. ಪಾಚಿಗಟ್ಟಿದ ಹಳದಿ ಹಲ್ಲುಗಳು. ತಲೆಯಿಂದ ಕಾಲವರೆಗೂ ಬಳಿದುಕೊಂಡ ಕಡುಗಪ್ಪು ಬಣ್ಣ. ಸೊಂಟಕ್ಕೆ ಕೆಂಪು ಬಣ್ಣದ ಪಂಚೆ ಸುತ್ತಿಕೊಂಡು ಈ ಕುರ್ಮಿಲ್ಲನೆಂಬ ಮಹಾಶಯ ಬೀದಿಗಿಳಿದರೆ ಸಾಕು, ಭರ್ತಿ ಆವೇಶ!

ಕಾಲಿಗೆ ಗೆಜ್ಜೆಕಟ್ಟಿ ಬಲಭುಜದ ಮೇಲೆ ಕೋಲೊಂದರ ತುದಿಗೆ ಬಿದಿರಿನ ಬುಟ್ಟಿಯೊಂದನ್ನು ಸಿಗಿಸಿಕೊಂಡು ಮೈ ಮಿರಿಮಿರಿ ಮಿಂಚಿಸಿಕೊಂಡು ಇವ ಕುಣಿಯುತ್ತಿದ್ದ ವೈಖರಿಯನ್ನು ಚಿಳ್ಳೆಪಿಳ್ಳೆಗಳಾದ ನಾವು ಅನುಕರಿಸಲು ಶತಪ್ರಯತ್ನ ಮಾಡಿದರು ಸಾಧ್ಯವಾಗುತ್ತ ಇರಲಿಲ್ಲ. ಕುರ್ಮಿಲ್ಲನ ಆವೇಶಕ್ಕೆ ಕಾರಣವನ್ನು ಹುಡುಕೀ ಹುಡುಕೀ ಕೊನೆಗೆ ಯಾವ ನಿರ್ಧಾರಕ್ಕೆ ಬರಲೂ ಸಾಧ್ಯವಾಗದೆ ನಾವು ಸೋಲುತ್ತಿದ್ದೆವು. ಅಷ್ಟೇ ಅಲ್ಲ, ‘ತಗ್ಗಡ್ ಧಿಮಿ ಥೈ, ತಗ್ಗಡ್ ಧಾ ಥೈ’ ಎನ್ನುವ ತಾಳಕ್ಕೆ ಕುಣಿಯುತ್ತಲೆ ಆಗಾಗ ಬಾಯಿಂದ ಊಳಿಟ್ಟುಕೊಳ್ಳುತ್ತ ಇರುವುದು ನಮಗೆಲ್ಲ ಸೋಜಿಗದ ವಿಷಯವಾಗಿತ್ತು.

ಕುರ್ಮಿಲ್ಲ ಬರುವುದು ದೀಪಾವಳಿಯಲ್ಲಾದರು ಅವನಿಗೆ ನುಗ್ಗಲಿಕ್ಕೆ ಇಂಥದೇ ಮನೆ ಎಂಬುದಿರಲಿಲ್ಲ. ಅಪ್ಪಿತಪ್ಪಿ ಕೂಡ ಅವ ಯಾವುದೇ ದೇವರ ಹೆಸರೆತ್ತಿದ್ದನ್ನು ನಾವು ಕೇಳಿದ್ದಿಲ್ಲ. ಕುರ್ಮಿಲ್ಲ ಬರುತ್ತಿದ್ದಾನೆಂದರೆ ಅರ್ಧ ಕಿಲೋಮೀಟರು ದೂರದಿಂದಲೆ ಎಲ್ಲ ಮಕ್ಕಳುಗಳಿಗೂ ನ್ಯೂಸು ತಿಳಿದುಹೋಗಿ ಅವು ಬಚ್ಚಿಟ್ಟುಕೊಂಡು ಅವನನ್ನು ವೀಕ್ಷಿಸಲು ಜಾಗ ಹುಡುಕಿಕೊಂಡು ತಾರಾಮಾರಾ ಓಡುತ್ತಿರುವುದು ಸಾಮಾನ್ಯವಾಗಿ ಕಂಡುಬರುವ ದೃಶ್ಯ. ನಾನು ಯಾವಾಗಲೂ ನನಗೇ ನೇತುಬೀಳುವ ನನ್ನ ತಂಗಿಯನ್ನು ಎಳೆದುಕೊಂಡು ಅಂಗಳ ಕಾಣುವ ಒಳಕೋಣೆಯ ಕಿಟಕಿಯ ಅಡಿಯಲ್ಲಿ ಅವಿತುಕೂರುತ್ತಿದ್ದೆ. ಸ್ವಲ್ಪ ಹೊತ್ತಿಗೆಲ್ಲ ‘ಕೂಊಊಊ..ಹುಲುಲುಲುಲುಲುಊಊಊ!!’ ಎಂದು ಕೂಗುತ್ತ ಕುರ್ಮಿಲ್ಲ ನಮ್ಮ ಮನೆಯ ಅಂಗಳಕ್ಕೆ ದಾಳಿಯಿಟ್ಟನೋ, ನಾನೂ ನನ್ನ ತಂಗಿಯೂ ಉಸಿರು ಬಿಗಿಹಿಡಿದುಕೊಂಡು ಗಪ್-ಚುಪ್ಪಾಗಿಬಿಡುತ್ತಿದ್ದೆವು. ಅವನ ಬುಟ್ಟಿಗೆ ಹಳೆ ಬಟ್ಟೆ ಬಿದ್ದ ಮೇಲೇ ಆತ ಹೊರಡುವುದು. ಆಗೆಲ್ಲ ಅವನಿಗೆ ಹೆದರಿಕೊಳ್ಳದೆ ಅಂಗಳಕ್ಕೇ ಹೋಗಿ ನಿಂತು ಅವನಿಗೆ ಹಳೆಬಟ್ಟೆ, ಪಾತ್ರೆ ಇತ್ಯಾದಿ ನೀಡುವ ಅಮ್ಮ ಮತ್ತು ಜೈನಾಬಿಯೆಂಬ ಮುದುಕಿ ಇಬ್ಬರೂ ಅತ್ಯಂತ ಸಾಹಸಿಗಳು ಎಂದು ನಮಗೆ ಅನ್ನಿಸುವುದು. ಕುರ್ಮಿಲ್ಲನೋ, ಉಣಗೋಲು ದಾಟಿ ಅಂಗಳಕ್ಕೆ ಕಾಲಿಟ್ಟಾಗಿಂದ ಹಿಡಿದು ಬೆನ್ನು ತೋರಿಸುವವರೆಗೂ ಊಳಿಡುತ್ತ ಕೀರಲು ಕಂಠದಲ್ಲಿ “ಎಲ್ಲೀಈಈಈ, ಮಕ್ಳೂಊಊ.. ಬರ್ಲೀಈಈ.. ತಿಂತೀನಿಈಈಈ!!!!” ಎಂದು ಬೊಬ್ಬೆಹಾಕುತ್ತಿದ್ದ. ಅವ ಪಕ್ಕದ ಮನೆಗೆ ಹೋದ ಮೇಲೆ ನಾವು ಮೆಲ್ಲನೆ ಹೊರಬಂದು ಅವನು ಇನ್ನೊಂದು ಮನೆಗೆ ಹೋಗುವುದನ್ನು, ಅಲ್ಲಿ ಕುಣಿಯುವುದನ್ನು ನೋಡುತ್ತ ಮಂತ್ರಮುಗ್ಧರಾಗಿ ನಿಂತುಬಿಡುತ್ತಿದ್ದೆವು. ಗ್ರಹಚಾರ ತಪ್ಪಿ ಯಾರಾದರು ಮಕ್ಕಳು ತನ್ನ ಹಿಂದೆ ಬರುವುದು ಗೊತ್ತಾಯಿತೊ.. ಮುಗಿದೇ ಹೋಯಿತು! ನಡೆಯುತ್ತಿದ್ದವ ಇದ್ದಕ್ಕಿದ್ದ ಹಾಗೇ ತಿರುಗಿ ಭಯಂಕರವಾಗಿ ಕಿರುಚಿಕೊಳ್ಳುತ್ತ ರಸ್ತೆಯಿಡೀ ಆ ಮಕ್ಕಳನ್ನೆಲ್ಲ ಅಟ್ಟಾಡಿಸಿ ಓಡಿಸಿಕೊಂಡು ಹೋಗುತ್ತಿದ್ದ. ಅವು ಎದ್ನೋ, ಬಿದ್ನೋ, ಕೆಟ್ನೋ ಎಂದು ದಿಕ್ಕೆಟ್ಟು ಚೆಲ್ಲಾಪಿಲ್ಲಿಯಾಗುತ್ತಿದ್ದವು.

ಮುಂದಿನ ದೀಪಾವಳಿಯ ಹೊತ್ತಿಗೆ ಈ ಕುರ್ಮಿಲ್ಲನಿಗೆ ಹೆದರಲೆಕೂಡದು ಎಂದು ನಾವು ಎಷ್ಡು ಮನಸ್ಸು ಗಟ್ಟಿಮಾಡಿಕೊಂಡರು ಪ್ರತಿಸಾರಿ ನಾವು ತಿರುಗಾ ಆ ಹಳೆಯ ‘ಹೆದರುಪುಕ್ಕ ಬಿದಿರುದೊಣ್ಣೆ’ಗಳೆ ಆಗಿಬಿಡುತ್ತಿದ್ದೆವು. ನಮಗೆ ಗೊತ್ತಿದ್ದ ಯಾವ ಭೂತ ಪ್ರೇತ ಪಿಶಾಚಾದಿಗಳೂ ಕುರ್ಮಿಲ್ಲನಿಗೆ ಸರಿಸಮನಾಗಿರಲಿಲ್ಲ. ಕೊನೆಗೆ ಯಮನೂ ಕೂಡ ಕುರ್ಮಿಲ್ಲನ ಕಾಲು ಪರ್ಸೆಂಟಿಗೂ ಸಮವಿಲ್ಲ ಎಂಬ ಸತ್ಯ ನಮಗೆ ಮಾತ್ರ ನಿಶ್ಚಯವಾಗಿ ತಿಳಿದಿದ್ದಂಥದು.

ಈಗ ದೀಪಾವಳಿಗಳಲ್ಲಿ ಕುರ್ಮಿಲ್ಲ ಬರುವುದಿಲ್ಲ. ಒರಿಜಿನಲ್ ಕುರ್ಮಿಲ್ಲನನ್ನು ನಾವು ಏಳೆಂಟು ದೀಪಾವಳಿಗಳಲ್ಲಿ ಮಾತ್ರ ನೋಡಿದ್ದು. ಅವನು ಬರುವುದನ್ನು ನಿಲ್ಲಿಸಿದ ನಂತರ ಉಮರ್ ಸಾಬರ ಮನೆಯಲ್ಲಿ ಕೆಲಸಕ್ಕಿದ್ದ ಕೆಂಪ ಬಣ್ಣ ಬಳಿದುಕೊಂಡು ದೀಪಾವಳಿಗೆ ಬರಲು ಶುರುಹಚ್ಚಿದ. ಅವನನ್ನೂ ನಾವು ‘ಕುರ್ಮಿಲ್ಲ’ ಎಂದೇ ಕರೆಯುತ್ತಿದ್ದರೂ ಅವನ ಬಗ್ಗೆ ಹೆದರಿಕೆಯೇ ಹುಟ್ಟುತ್ತಿರಲಿಲ್ಲ. ಕೆಂಪನ ಹೊಟ್ಟೆ ಸ್ವಲ್ಪ ಡುಮ್ಮಗಿದ್ದ ಕಾರಣ ಆತನಿಗೆ ಹಳೆಯ ಕುರ್ಮಿಲ್ಲನಂತೆ ಕುಣಿಯಲು ಅಥವ ಮಕ್ಕಳನ್ನು ಓಡಿಸಿಕೊಂಡು ಹೋಗಲು ಸಾಧ್ಯವಾಗುತ್ತಿರಲಿಲ್ಲ. ವರ್ಷಗಳು ಕಳೆಯುತ್ತ ಹೋದಹಾಗೆ ನಮ್ಮ ಓರಗೆಯ ಹುಡುಗ ಹುಡುಗಿಯರಿಗೆಲ್ಲ ಪಟಾಕಿ, ಸುರುಸುರುಬತ್ತಿ, ವಿಷ್ಣುಚಕ್ರಗಳ ಆಕರ್ಷಣೆಗಳು ಕಡಿಮೆಯಾಗಲು ತೊಡಗಿದವು. ಕುರ್ಮಿಲ್ಲನ ನೆನಪೂ ಕೂಡ ಮಾಸತೊಡಗಿತು. ನಾನು ಮತ್ತು ನನ್ನ ತಂಗಿ ಮಾತ್ರ ಒಂದು ಮಧ್ಯಾಹ್ನವಿಡೀ ನಮ್ಮನ್ನು ಒಂದೆಡೆ ಅಲ್ಲಾಡದಂತೆ ಹಿಡಿದಿಡುತ್ತ ಇದ್ದ ಈ ಕುರ್ಮಿಲ್ಲನೆಂಬ ಅತಿಮಾನವನನ್ನು ನಮ್ಮ ನೆನಪುಗಳಲ್ಲಿ ಹಚ್ಚಗೆ ಇರಿಸಿಕೊಂಡಿದ್ದೇವೆ.

‘ಕುರ್ಮಿಲ್ಲ’ ಎಂಬುದು ‘ಕುರುಂಬಿಲ’ ಎಂಬ ಹೆಸರಿನ ವಕ್ರರೂಪ. ಕುರುಂಬಿಲ ಕೇರಳದಿಂದ ವಲಸೆ ಬಂದ ಕಾಫಿ ಎಸ್ಟೇಟು ಕೂಲಿಗಳಲ್ಲಿ ಒಬ್ಬನಾಗಿದ್ದನಂತೆ. ಹಾಗೆಲ್ಲ ದೀಪಾವಳಿಯ ದಿನ ವೇಷಹಾಕಿಕೊಂಡು ಕುಣಿದು ಆತ ತನ್ನದೇ ರೀತಿಯಲ್ಲಿ ಮಕ್ಕಳನ್ನು ತಲುಪುವ ವಿಚಿತ್ರ ಹಾದಿಯೊಂದನ್ನು ಕಂಡುಕೊಂಡಿದ್ದ. ನನ್ನ ಹಿರಿಯರು ಹೇಳುತ್ತಿದ್ದ ಪ್ರಕಾರ ಆತ ದೀಪಾವಳಿಯ ದಿನ ಕಡಿಮೆಯೆಂದರೂ ಮೂರು ಕೊಟ್ಟೆ ಸಾರಾಯಿ ಏರಿಸಿಕೊಂಡೇ ಹೊರಡುತ್ತಿದ್ದುದು. ಅದಕ್ಕೇ ಅವನ ಬಾಯಲ್ಲಿ ಯಾವ ದೇವರ ಹೆಸರೂ ಬರುತ್ತಿರಲಿಲ್ಲ, ಅದಕ್ಕೇ ಆತನಿಗೆ ಆ ರೀತಿಯ ಆವೇಶ, ವೇಗ ಬರುತ್ತಿದ್ದುದು, ಅದಕ್ಕೇ ಅವನ ಕಣ್ಣುಗಳು ಕಾದ ಕೆಂಡದ ರೀತಿ ಕೆಂಪಗಿರುತ್ತಿದ್ದುದು. ಹಾಗೆಲ್ಲ ಇದ್ದ ಕುರುಂಬಿಲ ತನ್ನ ಎಸ್ಟೇಟು ಲೈನಿನ ಜೋಪಡಿಯಲ್ಲಿ ಖಾಲಿಹೊಟ್ಟೆಗೆ ಕುಡಿದು ಕುಡಿದೇ ಹೇಳಹೆಸರಿಲ್ಲದಂತೆ ಸತ್ತುಹೋದ. ತನ್ನ ಜತೆಗೇ ನಮ್ಮೆಲ್ಲ ಕಲ್ಪನೆ, ಫ್ಯಾಂಟಸಿಗಳನ್ನೆಲ್ಲ ತನ್ನ ಹಳೆಬಟ್ಟೆಗಳ ಬುಟ್ಟಿಯಲ್ಲಿ ಮೂಟೆಕಟ್ಟಿಕೊಂಡು ಹೊರಟುಹೋದ.

ಚಿತ್ರ: www.crisisreversal.com 

Advertisements

One thought on “ಕುರ್ಮಿಲ್ಲನ ದೀಪಾವಳಿ

  1. ಟೀನಾ,
    ನೆನಪಿನ ಕದ ತೆರೆದು, ದೀಪಾವಳಿಯ ಮಧ್ಯಾಹ್ನದಲ್ಲಿ ನನ್ನನ್ನ ಅಡಗಿಸಿಟ್ಟು ಕುರ್ಮಿಲ್ಲನ ಭಯಂಕರ ವೇಷ ತೋರಿಸಿಕೊಟ್ಟಿದ್ದಕ್ಕೆ ತುಂಬ ಧನ್ಯವಾದ. ಹೆಸರು ಗೊತ್ತಿರದೇ ಆದರೆ ನನಗೆ ತುಂಬಾ ಚೆನ್ನಾಗಿ ಗೊತ್ತಿದ್ದಂತೆ ಇರುವ ನಿಮ್ಮೂರಿನ ಬೀದಿಬೀದಿ ಅಲೆದುಬಿಟ್ಟೆ ಓದುತ್ತಾ..

    ಫ್ಯಾಂಟಸಿಯನ್ನ ಹಳೆಬಟ್ಟೆಯ ಬುಟ್ಟಿಯಲ್ಲಿ ಮೂಟೆಕಟ್ಟಿ ಕುರ್ಮಿಲ್ಲ ನಿಮ್ಮ ಕಣ್ಣಕೋಣೆಯ ಕಿಟಕಿಗೆ ಗುರೀಈಈಈ ಇಟ್ಟು ಎಸೆದ್ ಬಿಟ್ಟಿದಾನೆ.. 🙂

    ಪ್ರೀತಿಯಿಂದ
    ಸಿಂಧು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s