ಕ್ಷಮೆಗಳ ಭಾರ

( ಒಂಭತ್ತು ವರ್ಷಗಳ ಹಿಂದಿನ ಒಂದು ಸಂಜೆ. ನಾನೂ, ಕಿರಣ ಮೊದಲು ಮಾತನಾಡಿದ್ದು ನಮ್ಮ ಕವಿತೆಗಳ ಮೂಲಕ. ಕಿರಣನಿಗೆ ಅಂದಿನಿಂದ ಇಂದಿನವರೆಗೂ ನನ್ನ ಮೇಲೆ, ನನ್ನ ಲೇಖನಿಯ ಮೇಲೆ ಬಹಳ ಅಕ್ಕರೆ, ವಿಶ್ವಾಸ. ಕಂಪ್ಯೂಟರುಗಳ ಕೀಲಿಮಣೆಯ ನಡುವೆಲ್ಲೋ ಕಳೆದುಹೋದ ಆತನ ಲೇಖನಿಯ ಬಗ್ಗೆ ನನಗೆ ದುಗುಡ. ಹೀಗಿರುವಾಗ..ನವೆಂಬರಿನ ಛಳಿಯ ಸಂಜೆಯೊಂದರಲ್ಲಿ ಕಿರಣನಿಗೆ ಕವಿಸಮಯ. ಆತನ ಕಳೆದುಹೋಗಿದ್ದ ಪದಗಳ ಚುರುಕಿನ ಕಿಡಿ ಪುನಃ ಎಲ್ಲೋ ಹೊತ್ತಿದಂತಾಗಿ ನನಗೆ ಸಂತಸ. ಆತನ ಪುಟ್ಟ ಕವಿತೆ ’ಕ್ಷಮೆಗಳ ಭಾರ’ ಇದೋ ನಿಮಗಾಗಿ..)

ಕ್ಷಮೆಗಳ ಭಾರ

ಮಾತಾಡದೆ ಹಲವು ವರ್ಷಗಳೇ ಕಳೆದವು
ಮಾತು ಎಲ್ಲಿ ಮನೆ ಮುರಿವುದೋ
ಅಳುಕಿ ಸುಮ್ಮನಿದ್ದೆ.

ಈ ಮಳೆಗಾಲ ಧೋ ಎಂದು ಮಳೆಸುರಿದು
ಇದ್ದಕಿದ್ದಂತೆ ಬೆಂಗಳೂರಿನ ಮೋಡ ಕರಗಿ
ನವೆಂಬರಿನಲ್ಲೇ ಚಳಿ ಮೊಳೆ ಕೊರೆದಾಗ 
ಒಂದು ಸಂಜೆ
ಹೆಪ್ಪುಗಟ್ಟುತ್ತಿದ್ದ ರಕ್ತ ಮಾತಾಡಿತು.

ಪ್ರೀತಿಯ ಮೊದಲ ಪಟ್ಟು ಕಲಿಸಿದ ಗುರು ಅವಳು
ಶಬ್ದದ ಲಜ್ಜೆಯುಕ್ಕಿಸಬಲ್ಲ ಹುಡುಗಿ

ಈಗ
ಮೋಹದ ಮಾಯೆಯನ್ನೂ ಮೀರಿದಳೆ?

ನನ್ನ ಕ್ಷಮೆಗಳ ಭಾರ ಹೆಚ್ಚುತ್ತಿದೆ.

3 thoughts on “ಕ್ಷಮೆಗಳ ಭಾರ

  1. ಪ್ರಿಯರಾದ ಕವಯಿತ್ರಿ ಟೀನಾ ಅವರಿಗೆ,
    ನಾನೂ ಬಹಳ ಕಾಲದಿಂದ ಕ್ಷಮೆಗಳ ಒಂದು ದೊಡ್ಡ ಗಂಟನ್ನು ಹೊತ್ತುಕೊಂಡು ಭೂಮಿಯ ಉದ್ದಗಲ ಓಡಾಡುತ್ತಿರುವೆ.ಕವಿತೆ ಬರೆಯುವುದರಿಂದ ಅದು ಹಗರಾಗುತ್ತದೆ ಎಂದು ನನಗೆ ಗೊತ್ತಿರಲಿಲ್ಲ.ಅದೂ ಅಲ್ಲದೆ ನನಗೆ ಕವಿತೆ ಬರೆಯಲೂ ಗೊತ್ತಿಲ್ಲ. ಆದರೆ ನನ್ನ ಕವಿಗುರುಗಳ ಕವಿಗುರುಗಳಾದ ಬೋದಿಲೇರ್ ಬರೆದದ್ದು ನೆನಪಾಗುತ್ತಿದೆ
    `ನಿನ್ನ ಪಾಪಗಳು ಗಟ್ಟಿ…ಪಶ್ಚಾತಾಪ ಪುಕ್ಕಲು..
    ………………..

    ಪೂರ್ತಿ ನೆನಪಾಗುತ್ತಿಲ್ಲ ಕ್ಷಮಿಸಿ.

ನಿಮ್ಮ ಟಿಪ್ಪಣಿ ಬರೆಯಿರಿ