ಕಮೆಂಟು ಮಾಡುವ ಕಲೆ

comments1.jpg

ಆಗ ಹೈಸ್ಕೂಲಿನಲ್ಲಿದ್ದೆ. ಮನೆಯಿಂದ ಗಡಬಡಿಸಿ ಹೊರಟೆ ಅಂದರೆ ಸ್ಕೂಲಿಗೆ ತಲುಪಿದ ಮೇಲೇ ಉಸಿರು ಬಿಡುತ್ತ ಇದ್ದ ಪ್ರಾಣಿ ನಾನು. ತರಗತಿಯೊಳಗೆ ಹೈಸ್ಪೀಡಿನಲ್ಲಿ ಎಂಟರಾಗುತ್ತಿದ್ದ ಹಾಗೇ ಹುಡುಗರೆಲ್ಲ – ‘ಹೋ! ಕಾಳಿ, ದುರ್ಗಿ, ಚೌಡಿ ಬಂದ್ಲು ಕಣ್ರಪ್ಪೋ! ದಾರಿಬಿಡಿ!’ ಎಂದೆಲ್ಲ ಕೂಗಾಡಿಕೊಳ್ಳುತ್ತ ಸುಮ್ಮಸುಮ್ಮನೆ ಬೆಂಚು, ಡೆಸ್ಕು ಎಲ್ಲ ಕುಟ್ಟಿ ಧಡಧಡ ಸದ್ದು ಮಾಡಲು ಆರಂಭಿಸುತ್ತಿದ್ದರು. ನಾನು ಯಾವತ್ತೂ ಮನೆಯಲ್ಲಿ ‘ಹೋಂವರ್ಕ್’ ಮಾಡ್ತಲೇ ಇರ್ಲಿಲ್ಲ. ಮೇಷ್ಟ್ರು ಬರುವ ವೇಳೆ, ಬೈಸಿಕೊಳ್ಳಬೇಕಲ್ಲ ಎನ್ನುವ ಟೆನ್ಷನ್, ಇರುವ ಐದೇ ನಿಮಿಷದಲ್ಲಿ ಹೋಂವರ್ಕ್ ಬರೆದು ಮುಗಿಸುವ ಆತುರ, ಜೊತೆಗೆ ಈ ಹುಡುಗರ ಧಾಂಧಲೆ. ಕೋಪದಿಂದ ಅವರನ್ನ ದುರುದುರು ನೋಡಿದರೂ ಮರುನಿಮಿಷವೆ ನಗು ಉಕ್ಕಿ ಬರುತ್ತಿತ್ತು. ಆಗೆಲ್ಲ ನಮ್ಮ ಪಾಲಿಗೆ ಕಮೆಂಟ್ಸ್ ಅಂದರೆ ಇಷ್ಟೆ. ಕೋತಿಗಳಂತಾಡುವ ಹುಡುಗರು, ಜಗಳಗಂಟಿ ಹುಡುಗಿಯರು, ಸ್ಪೋರ್ಟ್ಸಿನಲ್ಲಿ ನಮ್ಮ ಸೆಕ್ಷನ್ನಿನ ಟೀಮಿಗೆ ಸವಾಲೊಡ್ಡುವ ಬೇರೆ ಕ್ಲಾಸುಗಳ ಹುಡುಗ ಹುಡುಗಿಯರು – ಇವರೆಲ್ಲ ನಮಗೆ ಬಲಿಪಶುಗಳಾಗುತ್ತಿದ್ದರು. ನಮ್ಮೆದುರಿಗೆ ಇವರು ಓಡಾಡಿದಾಗೆಲ್ಲ ಅವರನ್ನು ಚುಡಾಯಿಸುವುದು, ಇಲ್ಲವೇ ಅವರ ಕ್ಲಾಸಿನೆದುರಿಗೇ ಹೋಗಿ ಅವರನ್ನು ಅಣಗಿಸಿ ಓಡಿಬರುವುದು ನಮ್ಮ ಅಚ್ಚುಮೆಚ್ಚಿನ ಟೈಂಪಾಸ್.

ಕಾಲೇಜು ದಿನಗಳನ್ನ, ಕ್ಯಾಂಪಸ್ಸುಗಳನ್ನ ಕಮೆಂಟುಗಳಿಲ್ಲದೇ ಊಹಿಸಿಕೊಳ್ಳಲು ಸಾಧ್ಯವೇ ಇಲ್ಲ. ನನಗಂತೂ ಕಾಲೇಜು ಸೇರುವ ಮುನ್ನವೇ ಹಿರಿಯ ಗೆಳತಿ ಸಂಧ್ಯಾ, ’ನೋಡೇ ನೀನಂತೂ ಹುಶಾರಾಗಿರು. ಹಾಳು ಹುಡುಗ್ರು ನಿಂತಲ್ಲೂ ಕೂತಲ್ಲೂ ಕಮೆಂಟು ಮಾಡ್ತವೆ. ತಿರುಗೂ ನೋಡಬೇಡ, ಎದುರು ಬೈಬೇಡ. ಬೈದ್ರೆ ಜಾಸ್ತಿ ತಿಮಿರು ತೋರಿಸ್ತವೆ!’ ಎಂದು ಅಪ್ಪಣೆ ಕೊಡಿಸಿಬಿಟ್ಟಿದ್ದಳು ಕಾಲೇಜಿನ ಮೊದಲನೇ ದಿನವೇ ದಿಗಿಲು. ಭಯ. ಹೊಸ ಊರು, ಹೊಸ ವಾತಾವರಣ, ಹಾಸ್ಟೆಲ್ ವಾಸ ಬೇರೆ. ಮೊದಲ ದಿನ ಹೇಗೋ ಕಳೆಯಿತು. ’ಅಬ್ಬ, ಏನೂ ಇಲ್ಲ” ಎಂದು ಖುಶಿಪಟ್ಟುಕೊಳ್ಳುತ್ತ ನನ್ನ ರೂಂಮೇಟಿನ ಜೊತೆ ನೋಟುಬುಕ್ಕು ತೆಗೆದುಕೊಳ್ಳಲು ಸ್ಟೇಶನರಿ ಅಂಗಡಿಗೆ ಹೋಗಿ ನಿಂತೆನೋ ಇಲ್ಲವೋ..ಧಾಂಡಿಗರ ಥರ ಇದ್ದ ಏಳೆಂಟು ಹುಡುಗರು ಸುತ್ತ ಬಂದು ನಿಂತರು. ನನಗೆ ಯಾಕೊ ನಾನು ಒಂದು ರೆಫ್ರಿಜಿರೇಟರೊಳಗಿದ್ದೀನೇನೊ ಅನ್ನಿಸಲು ಶುರುವಾಯಿತು. ’ಫಸ್ಟ್ ಪೀಯೂಸೀನಾ?’ ಪ್ರಶ್ನೆ ಬಂತು. ಕುರಿಯ ಥರ ’ಹೂಂ’ ಅಂದೆ.’ಯಾವೂರು?’. ಹೇಳಿದೆ. ’ಏನ್ಹೆಸ್ರು” ಗಡಸುದನಿ. ’ಟೀನಾ’ ಅಂದಿದ್ದೇ ತಡ -’ಟೀನಾ ಅಂತೆ ಕಣ್ರೋ!’ ಒಬ್ಬ ಕಿರುಚಿದ. ’ಟೀನಾಮೀನಾಡಿಕಾ.’ ಅಂತ ನನ್ನ ಸುತ್ತ ಕೋರಸ್ಸಿನ ಗಾಯನ ಶುರುವಾಯ್ತು. ನಾನು ಅಳುವುದೊಂದು ಬಾಕಿ. ಕೊನೆಗೆ ಅವರ ಪೈಕಿ ಒಬ್ಬ ದಯಾಮಯಿ -’ಸಾಕು ಮಾರಾಯಾ, ಪಾಪ, ಹೆದರಿಕೊಂಡಿದೆ’ ಎಂದು ಹೇಳಿ ನನಗೆ ’ಹೋಗು ಮರಿ.’ ಎಂದ. ಕಾಲ್ಕಿತ್ತೆ. ಈಗ ನಗು ಬರುತ್ತೆ. ಮುಂದಿನ ಎರಡು ವರ್ಷಗಳಲ್ಲಿ ಕಮೆಂಟುಗಳಿಗೆ ತಿರುಗಿ ಕಮೆಂಟು ಕೊಡುವಷ್ಟು ಪ್ರವೀಣಳಾಗಿದ್ದು ಬೇರೆ ಮಾತು.

ಕಾಲೇಜು ಮುಗಿದ ನಂತರ ಟೀ, ಕಾಫಿ ಕುಡಿಯುತ್ತ ಹುಡುಗಿಯರು ಮಾತನಾಡುತ್ತ ಇದ್ದಿದ್ದು ಅಂದು ಅವರಿಗೆ ದೊರೆತ ಕಮೆಂಟುಗಳ ವೈಖರಿಯ ಬಗ್ಗೆ. ಹೆಣ್ಣುಮಕ್ಕಳದೊಂದು ಅಭ್ಯಾಸವಿದೆ. ಕಚಡಾ, ಅಶ್ಲೀಲ ಕಮೆಂಟುಗಳನ್ನು ನಾವು ನೆನಪಿಸಿಕೊಳ್ಳುವುದೇ ಇಲ್ಲ. ಅಂಥವನ್ನು ನಮ್ಮ ಕಿವಿ, ಮೆದುಳುಗಳು ರಿಸೀವ್ ಮಾಡಿದರೂ ನಿರ್ಲಿಪ್ತವಾಗಿಬಿಡುತ್ತವೆ. ಆದರೆ ಅವೇ ಕಮೆಂಟುಗಳು ಒಳ್ಳೆ ಹಾಸ್ಯಭರಿತವಾಗಿದ್ದರೆ ಹೊರನೋಟಕ್ಕೆ ಹುಸಿಕೋಪ ನಟಿಸಿದರೂ ಒಳೊಳಗೇ ನಕ್ಕಿರ್ತೇವೆ. ಕಾಫಿಯ ಮಗ್ನಿಂದ ಬಿಸಿಬಿಸಿ ಕಾಫಿ ಹೀರುತ್ತ ಅದನ್ನು ಗೆಳತಿಯರ ಜತೆಗೆ ಹಂಚಿಕೊಂಡಿರುತ್ತೇವೆ.

ಕಮೆಂಟುಗಳನ್ನು ಮಾಡೋದು ಒಂದು ಕಲೆ. ಕೆಲವರಿಗೆ ಮಾತ್ರ ಇದು ಸಿದ್ಧಿಸುವುದು.. ಕಮೆಂಟುಗಳೆದರೆ ಕೇವಲ ಟೀಕೆಯಲ್ಲ. ಕಮೆಂಟುಗಳು ಹೇಗಿರಬೇಕೆಂದು ನನ್ನ ಗೆಳತಿ ವಿದ್ಯಾ ಹೇಳಿದ ಮಾತುಗಳು ನೆನಪಾಗುತ್ತವೆ – ’ಕಮೆಂಟುಗಳು ಹಿತಮಿತವಾಗಿರಬೇಕು, ಒಗ್ಗರಣೇ ಹಾಗೆ. ಕಮೆಂಟು ಮಾಡಿದವರನ್ನ ನಾವು ಮಾರನೇ ದಿನ ಹುಡುಕೋ ಹಾಗಿರಬೇಕು.’ ಅಲ್ಲವೆ? ಗೆಳತಿ ಸ್ಮಿತಾ ಮಂಗಳೂರಿಂದ ಬೆಂಗಳೂರಿಗೆ ಪ್ರಯಾಣಿಸುತ್ತ ಇರುವಾಗ ನಡೆದ ಘಟನೆಯಿದು: ಬಸ್ಸಿನ ತುಂಬಾ ಕಾಲೇಜು ವಿದ್ಯಾರ್ಥಿಗಳೇ ತುಂಬಿಕೊಂಡಿದ್ದರು. ಬೆಂಗಳೂರು ತಲುಪಿ ಬಸ್ಸಿಳಿಯುತ್ತಿದ್ದಾಗ ಹುಡುಗನೊಬ್ಬ ಆಕೆಯ ಬಳಿ ಬಂದು -’ತಪ್ಪು ತಿಳಿಯದಿದ್ರೆ ಒಂದು ಮಾತು ಕೇಳಲೆ? ನೀವು ಬಹಳ ಸುಂದರವಾಗಿದೀರಿ ಅಂತ ನನಗಿಂತ ಮೊದಲು ನಿಮಗೆ ಎಷ್ಟು ಜನ ಹೇಳಿದಾರೆ?’ಎಂದು ನಗೆ ಮಿನುಗಿಸಿದ. ಆಕೆಗೆ ಆ ಮಾತಿನ ಅರ್ಥ ಹೊಳೆಯುವ ಮುನ್ನವೇ ಆತ ಬಸ್ಸಿಳಿದು ಮಾಯವಾಗಿದ್ದ.

ಕೆಲವೊಂದು ಸಾರೆ ಸುಮ್ಮನೆ ಆಡಿದ ಮಾತುಗಳೂ ಪೇಚಿಗೆ ಸಿಕ್ಕಿಸುವುದುಂಟು. ಒಮ್ಮೆ ನಾನೂ ನನ್ನ ಗೆಳತಿಯರಿಬ್ಬರೂ ಲಂಚ್ ಬ್ರೇಕಿನ ನಂತರ ಕ್ಲಾಸಿಗೆ ಹಿಂತಿರುತ್ತ ಇದ್ದಾಗ ಕ್ಯಾಂಟೀನಿನ ಬಳಿ ಹೊಸಮುಖವೊಂದು ಕಂಡಿತು. ಹೊಸ ವಿದ್ಯಾರ್ಥಿಯಿರಬಹುದೆಂದು ಭಾವಿಸಿದ ನನ್ನ ಗೆಳತಿ,’ಸಚ್ ಎ ಹ್ಯಾಂಡ್ಸಂ ಫೇಸ್! ಆದ್ರೆ ಫೇರ್ ಎಂಡ್ ಲವ್ಲಿ ಸ್ವಲ್ಪ ಕಡಿಮೆ ಮಾಡಿದ್ರೆ ಚೆನ್ನಾಗಿತ್ತು!’ ಎಂದು ಜೋರಾಗಿ ಹೇಳಿ ನಕ್ಕಳು. ನಾವೂ ಅತನನ್ನು ತಿರುಗಿನೋಡಿ ನಕ್ಕೆವು. ನಮ್ಮ ದುರಾದೃಷ್ಟಕ್ಕೆ ಆತ ನಮ್ಮ ಕಾಲೇಜಿನ ಹಳೆಯ ಕುಖ್ಯಾತ ವಿದ್ಯಾರ್ಥಿಯಾಗಿರಬೇಕೆ! ಆತನೋ, ಸಂತಸದಿಂದ, ’ಹೇಯ್! ಯೂ ಗರ್ಲ್ಸ್! ನಿಲ್ರೀ ಒಂದ್ನಿಮಿಷ!’ ಎಂದು ನಮ್ಮ ಬೆನ್ನಟ್ಟಿ ಬರಲಾರಂಭಿಸಿದ. ನಾವು ಗಾಬರಿಯಾಗಿ ಒಂದೇ ಉಸುರಿಗೆ ಓಟಕಿತ್ತು ಯಾವುದೋ ಲ್ಯಾಬಿನೊಳಗೆ ನುಗ್ಗಿ ಅವಿತುಕೊಂಡು ಬಚಾವಾದೆವು.

ಈ ಕೆಳಗಿನ ಎಚ್.ಎಸ್. ಬಿಳಿಗಿರಿಯವರ ನಾಲ್ಕು ಸಾಲುಗಳು ನಾನು ಕೇಳಿರುವ ‘ಕ್ಲಾಸಿಕ್’ ಕಮೆಂಟುಗಳ ಸಾಲಿಗೆ ಸೇರುತ್ತದೆ. ನಾಲಕ್ಕೈದು ಸಾರಿ ಓದಿದ ನಂತರವೂ ಹೊಸ ಹೊಸ ಅರ್ಥಗಳನ್ನು ಚಿಮ್ಮಿಸುವ ರಸವಂತಿಕೆ ಈ ಸಾಲುಗಳಿಗಿದೆ.
ಕರಿಯ ಹುಡುಗಿಯು ನಗಲು ಕಾಣುವ
ಬಿಳಿಯ ಹಲ್ಲಿನ ಮಿಂಚೊಲು
ಬೆಂಗಳೂರಿನ ಟಾರ ರೋಡೊಳು
ಬೆಣಚುಕಲ್ಲಿನ ಗೊಂಚಲು!

ಚಿತ್ರ: noisydecentgraphics.typepad.com

Advertisements

4 thoughts on “ಕಮೆಂಟು ಮಾಡುವ ಕಲೆ

 1. “ಕಮೆಂಟುಗಳು ಹಿತಮಿತವಾಗಿರಬೇಕು, ಒಗ್ಗರಣೇ ಹಾಗೆ. ಕಮೆಂಟು ಮಾಡಿದವರನ್ನ ನಾವು ಮಾರನೇ ದಿನ ಹುಡುಕೋ ಹಾಗಿರಬೇಕು”

  Thanks for the clue, ಇನ್ನು ಮುಂದೆ ನಾವೂ ಒಗ್ಗ್ರರಣೆ ಹಾಕೋಕೆ ಪ್ರಯತ್ನಿಸ್ತೀವಿ.. 🙂

 2. ’ತಪ್ಪು ತಿಳಿಯದಿದ್ರೆ ಒಂದು ಮಾತು ಕೇಳಲೆ? ನೀವು ಬಹಳ ಸುಂದರವಾಗಿದೀರಿ ಅಂತ ನನಗಿಂತ ಮೊದಲು ನಿಮಗೆ ಎಷ್ಟು ಜನ ಹೇಳಿದಾರೆ?

  ಚೆನ್ನಾಗಿದೆ 🙂 ಇನ್ನೂ ಈ ಥರದ್ದು ಇದ್ಯಾ? ಇದ್ರೆ ಕಳ್ಸಿ 🙂

 3. ಕಮೆಂಟಿನ ಒಗ್ಗರಣೆ ನಿಜಕ್ಕೂ ದಿನದ ಸ್ವಾದ ಹೆಚ್ಚಿಸುತ್ತೆ . ಒಳ್ಳೆಯ ಬರಹ.

  ’ತಪ್ಪು ತಿಳಿಯದಿದ್ರೆ ಒಂದು ಮಾತು ಕೇಳಲೆ? ನೀವು ಬಹಳ ಸುಂದರವಾಗಿದೀರಿ ಅಂತ ನನಗಿಂತ ಮೊದಲು ನಿಮಗೆ ಎಷ್ಟು ಜನ ಹೇಳಿದಾರೆ? – ಇದನ್ನ ಆಟೋ ಒಂದರ ಹಿಂದೆ ನೋಡಿದ್ದೆ ಕಣೇ! ನಂಗೆ ಆಟೋ ಬರಹಗಳನ್ನ ಓದೋದೊಂದು ಖಯಾಲಿ.
  ಅಂದಹಾಗೆ, ಮಲೆನಾಡಿನ ಆಟೋ ಹುಡುಗರ ಹಾಗೆ ಕಮೆಂಟು ಮಾಡೋರನ್ನ ನಾನೆಲ್ಲೂ ನೋಡೀಲ್ಲ!
  ಬ್ಲಾಗ್ ಗಳಲ್ಲಿ ಬರೋ ಕಮೆಂಟುಗಳ ಬಗ್ಗೆ ಯಾವಾಗಲಾದ್ರೂ ಬರಿಯೇ… ಕಾಯ್ತಿರ್ತೀನಿ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s