ಹೀಗೊಂದು ಬಾಲ್ಯಕಾಲದ ದಿನ…

f_06461.jpg

 ಮಸಳಿ ಡಾಕ್ಟರು ನನ್ನ ಗದ್ದಕ್ಕೆ ಹೊಲಿಗೆ ಹಾಕಿದ ಪ್ರಸಂಗವನ್ನ ಇನ್ನಾವಾಗಲಾದರು ಹೇಳುವೆ. ಆದರೆ ಆ ದಿನದಿಂದ ನನಗೆ ಶ್ರೀಮಾನ್ ಮಸಳಿಯವರು ಮಾರ್ಕೆಟಿನ ಕಟುಕನಂತೆಯೂ, ಸರ್ಕಾರೀ ಆಸ್ಪತ್ರೆ ನನ್ನಂಥ ಬಡಪಾಯಿ ಕುರಿಗಳನ್ನು ಬಲಿಕೊಡಲು ಕಟ್ಟಿರುವ ಕಸಾಯಿಖಾನೆಯಂತೆಯೂ ಕಾಣತೊಡಗಿದ್ದರಲ್ಲಿ ಯಾವ ವಿಶೇಷವೂ ಇಲ್ಲ. ಉತ್ತರ ಕರ್ನಾಟಕದವರಾದ ಅವರ ಹೆಸರನ್ನು ಸರಿಯಾಗಿ ಹೇಳಲು ಬರದ ನಮ್ಮೂರಿನವರು ಅವರನ್ನು ‘ಮೊಸಳೆ ಡಾಕ್ಟರು’ ಎಂದೇ ಕರೆಯುತ್ತಿದ್ದುದು. ಆಗ ಬಹಳಷ್ಟು ಮಕ್ಕಳು ಡಾಕ್ಟರಲ್ಲಿಗೆ ಹೋಗಬೇಕೆಂದರೆ ಬೆಚ್ಚಿಬೀಳುವ ಪರಿಸ್ಥಿತಿ. ಈಗ ಮಕ್ಕಳ ಪ್ರತಿಯೊಂದು ಕಾಯಿಲೆಗೂ ಸಪರೇಟು ತಜ್ನರಿದ್ದಾರೆ. ಅವರೆಲ್ಲ ಇಂದಿನ ನವೀನ ಮ್ಯಾನೇಜ್ಮೆಂಟ್ ವಿಧಾನಗಳನ್ನು ಬಳಸಿ ಮಕ್ಕಳಲ್ಲಿ ‘ತಾವು ಬಂದಿರುವುದು ಡಾಕ್ಟರ ಬಳಿಗಲ್ಲ, ಯಾರೊ ನೆಂಟರ ಮನೆಗೆ’ ಎಂಬ ಭ್ರಮೆ ಮೂಡಿಸಿ ಚಿಕಿತ್ಸೆ ನೀಡಿಬಿಡುತ್ತಾರೆ. ಆಗ ನಮಗೆ ಆ ಸೌಭಾಗ್ಯ ಲಭ್ಯವಿರಲಿಲ್ಲ. ಮಸಳಿಯವರು ಬಹಳ ಒಳ್ಳೆಯ ವೈದ್ಯರೆಂದು ಹೆಸರುವಾಸಿಯಾಗಿದ್ದರು. ಹಾಗಾಗಿ ನಮ್ಮ ತುಡುಗುಬುದ್ಧಿಯ ದುಷ್ಪರಿಣಾಮಗಳಾದ ಕಾಯಿಲೆಗಳು ತೋರಿದಾಗ ಮಸಳಿಯವರನ್ನು ಬಿಟ್ಟು ಬೇರಾವ ದಾರಿಯೂ ಇರಲಿಲ್ಲ. ಆಸ್ಪತ್ರೆಯ ಪರೀಕ್ಷಾ ಕೋಣೆಯಲ್ಲಿ ಕಾಣುತ್ತಿದ್ದ ಚಿತ್ರವಿಚಿತ್ರ ಪರಿಕರಗಳು, ಅಲ್ಲಿಯ ವಾತಾವರಣ, ಎಲ್ಲಕಿಂತ ಹೆಚ್ಚಾಗಿ ಸ್ಟೀಲು ಡಬ್ಬವೊಂದರಲ್ಲಿ ಕೊತಕೊತ ಕುದಿಯುತ್ತಿದ್ದ ಸಿರಿಂಜುಗಳು ನಮ್ಮಲ್ಲಿ ಎಲ್ಲಿಲ್ಲದ ಭಯ ಮೂಡಿಸುತ್ತ ಇದ್ದವು. ನಾನಂತು ಆಸ್ಪತ್ರೆಯ ಬಳಿಯ ದಾರಿಗಳನ್ನು ಆದಷ್ಟು ಕಡಿಮೆ ಬಳಸುತ್ತಿದ್ದೆ.

ಹೀಗೆಲ್ಲ ನಾವು ಆಸ್ಪತ್ರೆಯಿಂದ ದೂರವಿರಲು ಯತ್ನಿಸುತ್ತ ಇರುವಾಗ ಒಂದು ಸುಂದರ ಮುಂಜಾವ ನನಗೆ ‘ಕಣ್ಣಾಕುಟಿಗೆ’ ಎಂಬ ಪುಟ್ಟ ತೊಂದರೆ ಅಮರಿಕೊಂಡಿತು. ಇದು ‘ಮದ್ರಾಸ್ ಐ’ ಅಲ್ಲ. ಇದರಲ್ಲಿ ಕಣ್ಣಿನ ಯಾವುದಾದರು ಭಾಗ ಊದಿಕೊಂಡು ಹಿಂಸೆ ನೀಡಲು ಶುರುವಿಡುತ್ತದೆ. ಈ ಸಾರಿ ನನ್ನ ಕಣ್ಣೊಳಗೇ ಊತವಾಗಿ ಅಮ್ಮ ನನ್ನನ್ನು ‘ಡಾಕ್ಟರ ಹತ್ರ ಹೋಗಿಬಾ’ ಎಂದು ತಂಗಿಯನ್ನು ಜತೆಮಾಡಿ ಕಳಿಸಿದರು. ನಾನು ಆಸ್ಪತ್ರೆಗೇ ಹೋದೆನೆಂದು ಖಚಿತಪಡಿಸಬೇಕಲ್ಲ! ನಾವು ಒಬ್ಬರನ್ನೊಬ್ಬರು ದಾರಿಯುದ್ದಕ್ಕು ತಳ್ಳಾಡಿಕೊಂಡು ಬರುತ್ತ ಇರುವಾಗ ತಂಗಿಯ ಸ್ನೇಹಿತೆಯೊಬ್ಬಳು ಸಿಕ್ಕಿದಳು. ಎಷ್ಟಾದರು ವಯಸ್ಸಿನಲ್ಲಿ ಸಣ್ಣವು. ಅವುಗಳ ಹತ್ತಿರ ಏನು ಮಾತು? ಅವರನ್ನು ಮಾತನಾಡಲು ಬಿಟ್ಟು ನಾನು ಆಸ್ಪತ್ರೆಯ ಕಾಂಪೌಂಡಿನೊಳಗೆ ಓಡಿದೆ. ಸಣ್ಣಗೆ ಮಳೆ ಹನಿಯಲು ಆರಂಭವಾಗಿತ್ತು. ಆಲ್ಲಿಯೆ ಒಂದು ಚಕ್ಕಡಿಯ ಸುತ್ತ ಸುಮಾರು ಜನರು ಸೇರಿಕೊಂಡಿದ್ದರು. ನಾನೂ ಕುತೂಹಲದಿಂದ ಇಣುಕಿದೆ. ಅಷ್ಟೆ.

ನನ್ನ ಜೀವಮಾನದಲ್ಲಿಯೆ ಅಲ್ಲಿಯತನಕ ಕಂಡಿರದಾಗಿದ್ದ ಅತ್ಯಂತ ಭಯಾನಕ ದೃಶ್ಯ ಅದು. ಚಾಪೆಯ ಮೇಲೆ ಮಲಗಿಸಿದ್ದ ಹೆಂಗಸೊಬ್ಬಳನ್ನು ಜನರು ಚಕ್ಕಡಿಯಿಂದ ಕೆಳಗಿಳಿಸುತ್ತಿದ್ದರು. ಆ ಹೆಂಗಸಿನ ಮೈಯ ಪ್ರತಿಯೊಂದು ಇಂಚೂ ಸುಟ್ಟುಹೋಗಿತ್ತು. ಆಕೆಯ ಅರೆಪ್ರಜ್ನೆಯ ನರಳಾಟ ಕೇಳಲಾಗುತ್ತಿರಲಿಲ್ಲ. ಆಕೆಯ ಮೈಮೇಲೊಂದು ಹತ್ತಿಯ ಬಟ್ಟೆಯನ್ನು ಸುತ್ತಲಾಗಿತ್ತು. ಮೈಯಿಂದ ಏನೇನೋ ದ್ರವಗಳು ಒಸರುತ್ತಿದ್ದವು. ಕೂದಲೆಲ್ಲ ಸುಟ್ಟುಹೋಗಿ ವಿಕಾರವಾಗಿ ಕಾಣುತ್ತಿದ್ದ ಆಕೆಯ ಬಳಿ ಕೈಕಾಲು ಮಾತ್ರ ಸುಟ್ಟಿದ್ದ ವ್ಯಕ್ತಿಯೊಬ್ಬ ಕುಳಿತು ಏನೇನೋ ಬಡಬಡಿಸುತ್ತಿದ್ದ. ಜನರು ಆತನನ್ನು ಸಂತಯಿಸಲು ಪ್ರಯತ್ನಿಸುತ್ತಿದ್ದರೆ ಆತ ಪ್ರಪಂಚದ ಅರಿವೇ ಇಲ್ಲದಹಾಗೆ ಆಕೆಯನ್ನೆ ದಿಟ್ಟಿಸುತ್ತ ಕುಳಿತುಬಿಟ್ಟಿದ್ದ. ಆತನ ಮಾತುಗಳು ಆಕೆಯ ರೋದನದಷ್ಟೆ ಅಸ್ಪಷ್ಟವಾಗಿದ್ದವು. ಅವಕ್ಕೆ ಅರ್ಥವೇ ಇರಲಿಲ್ಲ. ಇದ್ದರೂ ಅದು ನಮ್ಮನ್ನೆಲ್ಲ ಮೀರಿದ್ದು ಅನ್ನಿಸುವ ಹಾಗಿತ್ತು. ಅಲ್ಲಿದ್ದ ಯಾರನ್ನೊ ಕೇಳಿದೆ -’ ಏನಾಯ್ತು? ’. ಅವರು ಸೊಟ್ಟಮುಖ ಮಾಡಿದರು.’ಚೆನ್ನಾಗೇ ಇದ್ರು. ಅದೇನಾಯ್ತೊ? ಇವುಳು ಸೀಮೆಣ್ಣೆ ಹಾಕ್ಕೊಂಡು ಸುಟ್ಕೊಂಡ್ಲು. ಇವ್ನು ಉಳ್ಸೋಕೋದ. ಇವ್ನೂವೆ ಸುಟ್ಕೊಂಡ. ಬೇಕಿತ್ತ ಇದು?’

ಸುಮ್ಮನೆ ಒಳಹೋದೆ. ಡಾಕ್ಟರು ಒಳಬರಲು ಸನ್ನೆ ಮಾಡಿದರು. ಕಣ್ಣು ತೋರಿಸಿ, ಇಂಜೆಕ್ಷನ್ ಕೊಡ್ತೀರ? ಕೇಳಿದೆ. ಡಾಕ್ಟರು ನಕ್ಕು ಆಯಿಂಟ್ಮೆಂಟು ಕೊಟ್ಟು ಕಳಿಸಿದರು. ಹೊರಬಂದರೆ ಮತ್ತದೇ ಸುಟ್ಟವಾಸನೆ. ನರಳಾಟ. ಡಾಕ್ಟರು ’ಇಲ್ಲಿ ಆಗಲ್ಲ. ಬರ್ನ್ಸ್ ಪರ್ಸೆಂಟೇಜು ಜಾಸ್ತಿಯಿದೆ. ಮಣಿಪಾಲಿಗೆ ಕರ್ಕೊಡೋಗಿ. ನಾನು ಲೆಟರ್ ಕೊಡ್ತೀನಿ’ ಎನ್ನುತ್ತ ಇದ್ದರು. ಸುಟ್ಟುಕೊಂಡವಳ ಗಂಡ ಅಂಗಲಾಚುತ್ತಿದ್ದ. ತನ್ನ ಕೈಕಾಲುಗಳ ಸುಟ್ಟಗಾಯ ತೋರಿಸಿ ಏನೇನೊ ಬಡಬಡಿಸುತ್ತಿದ್ದ. ಪ್ರಯೋಜನವಿಲ್ಲವೆಂದು ತಿಳಿದಿದ್ದರೂ…

’ಇಲ್ಯಾಕಮ್ಮ ನಿಂತಿದೀಯ? ಇದೆಲ್ಲ ಮಕ್ಕಳು ನೋಡ್ಬಾರ್ದು. ನಡಿನಡಿ’ ಗುರುತಿನ ನರ್ಸೊಬ್ಬರು ಬೈದರು. ಹೊರಬಂದು ತಂಗಿಯನ್ನೆಳೆದುಕೊಂಡು ಹೊರಟೆ. ಆಕೆಗೆ ಅದಾವುದೂ ಕಾಣಲಿಲ್ಲವೆಂಬ ವಿಚಿತ್ರ ಸಮಾಧಾನ.

ಈವತ್ತು ಬೆಳಜಾವ ಆಸ್ಪತ್ರೆಯ ಕನಸು. ಬಿಳಿಬಿಳಿ ಆಸ್ಪತ್ರೆ. ತಿಳಿಹಳದಿ ಬಣ್ಣದ ಕಾಂಪೌಂಡು. ಕಾಂಪೌಂಡಿನ ಕಪ್ಪುಮಣ್ಣಿನ ಮಳೆತೇವದ ಭೂಮಿ. ಭೂತಾಕಾರದ ಮರಗಳು. ಬಿಳಿಬಟ್ಟೆಯ ನರ್ಸುಗಳು. ಮಸಳಿ ಡಾಕ್ಟರು. ಉದ್ದುದ್ದ ಕಾರಿಡಾರುಗಳು. ಕಲ್ಲುಮೆಟ್ಟಿಲುಗಳು. ಕುಂಟುಗಾಲಿನ ಕಾಂಪೌಂಡರು. ಬಿಳಿಬಿಳಿ ಹಾಸಿಗೆಗಳು. ಕೆಂಪು ಕಂಬಳಿಗಳು. ಪಾಚಿಯ ವಾಸನೆ… ಎಲ್ಲವೂ ಆಗ ಇದ್ದಂತೆಯೆ. ನಾನು ಅಲ್ಲೆಲ್ಲ ಓಡಾಡುತ್ತಿರುವಂತೆ..

ಎಚ್ಚರವಾಯಿತು. ಎರಡು ನಿಮಿಷ ಸುಮ್ಮನೆ ಕೂತುಕೊಂಡೆ. ಯಾಕೊ, ಮಸಳಿ ಡಾಕ್ಟರು ನೆನಪಾಗಿ ನಕ್ಕೆ. ಅವರು ನನ್ನ ಗದ್ದಕ್ಕೆ ಹಾಕಿದ ಹೊಲಿಗೆಯ ಗುರುತನ್ನೊಮ್ಮೆ ಮುಟ್ಟಿಕೊಂಡೆ. ಬಾಯಾರಿದ ಹಾಗೆನಿಸಿತು. ಅಂದು ಸುಟ್ಟುಕೊಂಡಿದ್ದ ಹೆಂಗಸು ಏನಾದಳೊ ಎಂದುಕೊಳ್ಳುತ್ತ ನೀರು ಗುಟುಕರಿಸಿದೆ.
 

ಚಿತ್ರ: ‘Ward in the hospital in Arles’ from www.vggallery.com

Advertisements

7 thoughts on “ಹೀಗೊಂದು ಬಾಲ್ಯಕಾಲದ ದಿನ…

 1. Bhashe (niroopaNe)yalli hosatana ide. adarallU modala paragraphnalli adu eddu tOrutte.
  English write up ondanna Odtiruva anubhava Aytu!

  Preetiyinda,
  Chetana

 2. ಮಸಳಿಯವರನ್ನು ‘ಮೊಸಳೆ ಡಾಕ್ಟರು’ ಅಂತ ಕರೆದಿದ್ದೀರಲ್ಲಾ? ಅವರೇನಾದರೂ ನಿಮ್ಮ ಬ್ಲಾಗ್ ಓದಿದರೆ ಏನು ಮಾಡುತ್ತೀರಿ. ನಿಮ್ಮ ಬಾಲ್ಯಕಾಲದ ಹೀಗೊಂದು ದಿನ ಹಾಗೇ ಓದಿಸಿಕೊಂಡು ಹೋಯಿತು.

  ಧನ್ಯವಾದಗಳು,
  ಜೋಮನ್

 3. Dear Tina,

  Great article. This reminded me of a visit I had to the Mahabodhi Burns Ward at Victoria hospital,when I was a kid.

  Our elders have correctly said Arogyave Bhaagya..(Health is wealth).

  Regards,

  Mayura

 4. ಚೇತೂ,
  ಒಂದೇ ಥರ ಬರೆಯೋದರಲ್ಲಿ ಮಜ ಸಿಕ್ಕದಿಲ್ಲ ಕಣೆಮಾ. ಅದಕ್ಕೆ ಹೀಂಗೆ ಬರ್ದೆ.
  ಜೋಮನ್,
  ಮಸಳಿ ಡಾಕ್ಟರನ್ನ ಹಾಗೆ ನಾವೆಲ್ಲ ಕರೀತ ಇದ್ದದ್ದು ಅವ್ರಿಗೂ ಗೊತ್ತಿತ್ತು. ಮತ್ತೆ ಒಂದು ಸಾರಿ ನಾನು ಅವ್ರನ್ನ ಕೇಳಿಯೂ ಇದ್ದೆ ’ಡಾಕ್ಟ್ರಂಕಲ್, ನೀವು ನೋಡಕ್ಕೆ ಮೊಸಳೆಯ ಹಾಗೆ ಇಲ್ವಲ್ಲ!’ ಅಂತ. ಜೋರು ನಗಾಡಿಬಿಟ್ಟಿದ್ರು ಅವ್ರು. ಅಮ್ಮನ ಕೈಲಿ ಚೆನ್ನಾಗಿ ಮೊಟಕಿಸಿಕೊಂಡಿದ್ದೆ. ಈಗ ಯಾವುದೆ ಆಬ್ಜೆಕ್ಷನ್ ಮಾಡುವ ಪರಿಸ್ಥಿತಿಯಲ್ಲಿ ಅವರಿಲ್ಲ, ಇದ್ದಿದ್ದರೂ ಮಾಡ್ತಿರಲಿಲ್ಲ. ಥ್ಯಾಂಕ್ಯೂ!

  ಸಂತೋಷ್,
  ನಾನ್ ಎತ್ಲಾಗೂ ಹೋಗಿರ್ಲಿಲ್ಲ ಮಾರಾಯ್ರೆ! ಹೋದವಾರ ಸುಮ್ಮನೆ ಕೂತು ಮರೆತೇಹೋಗಿದ್ದ ಪ್ರೀತಿಯ ಹಾಡುಗಳ್ನ ಮನಸಾರ ಕೇಳಿದೆ. ಇನ್ನೂ ಕೇಳುವುದು ಬಾಕಿ ಇದೆ.

  ಮಯೂರ,
  ತಾಣಕ್ಕೆ ಭೇಟಿ ನೀಡಿದ್ದಕ್ಕೆ ಧನ್ಯವಾದ. After giving birth to my daughter, I was put up in a private ward of a hospital in Mysore. During that time, I visited the burns ward without permission. I saw a woman with burns all over her body whimpering with pain. Nobody was around her. She reminded me of the woman mentioned in this article. I was drawn to her and sat for a while and tried to talk, to soothe her. She was in great pain. My aunt saw me there and dragged me away. Some memories are very stubborn indeed. Thank you for visiting.
  ಆತ್ಮೀಯತೆಯೊಡನೆ,
  ಟೀನಾ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s