ಸ್ಪಿರಿಟ್ ಆಫ್ ಕ್ರಿಸ್ಮಸ್

royal-christmas-candleholder-twig-jpg1.jpg

‘ರೋಶನ್ ಹುಯೀ ರಾತ್
ವೋ ಆಸ್ಮಾ ಸೇ
ಉತರ್ ಕೇ ಜಮೀಂ ಪೆ ಆಯಾ..’

2004 ಡಿಸೆಂಬರ್ 24ರ ರಾತ್ರಿ. ಮೈಸೂರಿನ ಸೆಂಟ್ ಫಿಲೊಮಿನಾಸ್ ಚರ್ಚಿನಲ್ಲಿ ಮಧ್ಯರಾತ್ರಿಯ ಪ್ರಾರ್ಥನೆ ನಡೆಯುತ್ತ ಇತ್ತು. ನಾನು, ಅಪ್ಪ, ಹೇಮಂತ ಹೊರಗೆ ನಿಂತುಕೊಂಡು ಚಳಿಯನ್ನ, ಎಲ್ಲ ಕಡೆ ಆವರಿಸಿಕೊಂಡಿದ್ದ ಕ್ರಿಸ್ಮಸ್ ಹುಮ್ಮಸ್ಸನ್ನು ಮೆಲ್ಲುತ್ತ ಆನಂದಿಸುತ್ತ ನಿಂತುಕೊಂಡಿದ್ದೆವು. ಇದು ನಾವು ಪ್ರತಿ ವರುಷವೂ ತಪ್ಪದೆ ಮಾಡುವ ಕೆಲಸ. ಮಧ್ಯರಾತ್ರಿ ಸರಿಯಾಗಿ ಅಲ್ಲಿಗೆ ಧಾವಿಸಿ ಬರುವ ಸ್ನೇಹಿತರಿಗೆಲ್ಲ ‘ಹ್ಯಾಪಿ ಕ್ರಿಸ್ಮಸ್!’ ಹೇಳಬೇಕು. ಚರ್ಚಿನಲ್ಲಿ ಹಾಡುವ ಸುಮಧುರ ಕ್ಯಾರೊಲುಗಳನ್ನು ಕೇಳಬೇಕು. ನಾವು ಆ ಯಮಚಳಿಯಲ್ಲಿ ನಿದ್ದೆಗೆಟ್ಟುಕೊಂಡು ಚರ್ಚಿನಲ್ಲಿ ಆ ಹೊತ್ತು ಇರಬೇಕು ಎಂದು ಯಾರೂ ನಿಯಮಿಸಿಲ್ಲ. ಆದರೆ ಒಮ್ಮೆ ಆ ರಾತ್ರಿಯ ಗುಂಗು ಹತ್ತಿದರೆ ಬಿಡದು. ಪುನಃ ಮುಂದಿನ ವರ್ಷ ಆ ರಾತ್ರಿ ಯಾವಾಗ ಬರುತ್ತದೊ ಎಂದು ಕಾಯುವ ಹಾಗಾಗುತ್ತದೆ. ಆಗಷ್ಟೆ ವಿನಯ್, ನವೀನ್, ಸುನಿ, ಅರುಣ್ ಎಲ್ಲ ಬಂದು ಕೋತಿಗಳ ಥರ ಕುಣಿದಾಡಿ ‘ಒಂದ್ ರೌಂಡ್ ಬೀಟ್ಸ್ ಹೊಡ್ಕೊಂಡ್ ಬರ್ತೀವ್ ಮಾ!’ ಎಂದು ಓಡಿಹೋಗಿದ್ದರು. ನಾವು ಹೊರಗಿದ್ದ ಗೋದಲಿಯ ಬಳಿ ಸುಮ್ಮನೆ ಕುಳಿತುಕೊಂಡಿದ್ದೆವು. ಸ್ವೆಟರು ಟೋಪಿಗಳೊಳಗೆ ಮುಳುಗಿಹೋಗಿದ್ದ ನನ್ನ ಮಗಳು ಅಲ್ಲೆ ಸುತ್ತಮುತ್ತ ಕುಣಿದು ಕುಪ್ಪಳಿಸುತ್ತ ಇದ್ದಳು. ಆಕೆ ಕಂಡಕಂಡವರಿಗೆಲ್ಲ ಹ್ಯಾಪಿ ಕ್ರಿಸ್ಮಸ್ ಹೇಳುವುದನ್ನು ನೋಡುತ್ತ ಕುಳಿತಿದ್ದ ಒಬ್ಬಾತ ಇದ್ದಕ್ಕಿದ್ದ ಹಾಗೆ ಎದ್ದು ’ನೀನೇಮ್ಮಾ ಕರ್ನಾಟಕದ ಮುಂದಿನ ಮುಖ್ಯಮಂತ್ರಿ!’ ಎಂದು ಜೋರಾಗಿ ಘೋಷಿಸಿದ. ನಾವುಗಳು ಈ ಭವಿಷ್ಯವಾಣಿಯನ್ನು ಅರ್ಧ ಸಂತಸ, ಅರ್ಧ ಆತಂಕದಿಂದ ಸ್ವೀಕರಿಸಿ ಒಬ್ಬರೊಬ್ಬರ ಮುಖ ನೋಡುತ್ತ ಮುಸಿಮುಸಿ ನಗುತ್ತಿದ್ದೆವು.

ಹನ್ನೆರಡು ಗಂಟೆಗೆ ಐದು ನಿಮಿಷಗಳಿದ್ದುವೇನೊ. ಇದ್ದಕ್ಕಿದ್ದ ಹಾಗೆ ಗೋದಲಿಯ ಮೇಲೆ ಹೊದಿಸಿದ್ದ ಹುಲ್ಲಿನ ಮೇಲೆ ಬೆಳಕು ಕಂಡ ಹಾಗಾಯಿತು. ಅಪ್ಪ, ಹೇಮಂತರನ್ನು ಕರೆದು ತೋರಿಸಿದೆ. ಅಲಂಕಾರಿಕ ವಿದ್ಯುದ್ದೀಪಗಳಿಗಾಗಿ ಬಳಸಿದ್ದ ವೈರೊಂದು ಕಳಚಿಕೊಂಡು ನಿಧಾನವಾಗಿ ಬೆಂಕಿ ಹೊತ್ತಲು ಆರಂಭವಾಗಿತ್ತು. ಕೂಡಲೆ ಓಡಿಹೋಗಿ ವಾಚ್ಮನ್ನನನ್ನು ಕರೆತಂದೆ. ಜನ ಗುಂಪು ಸೇರಲಾರಂಭಿಸಿದರು. ಬೆಂಕಿ ಜೋರಾಗತೊಡಗಿತು. ಯಾರೊ ಒಬ್ಬ ಹುಡುಗ ಹುಲ್ಲು ತಾರಸಿಯ ಮೇಲೆ ಹತ್ತಿಯೇಬಿಟ್ಟ. ತೊಟ್ಟಿದ್ದ ಜರ್ಕಿನನ್ನೆ ಬಿಚ್ಚಿ ಹೊಡೆಹೊಡೆದು ಬೆಂಕಿ ನಂದಿಸಿದ. ವೈರು ಎಳೆದುಹಾಕಿದ ಮೇಲೆ ಕೆಲವು ಬಕೆಟ್ ನೀರು ಹಾಕಿ ಅಳಿದುಳಿದಿದ್ದ ಬೆಂಕಿಯನ್ನು ಆರಿಸಿದರು. ಚರ್ಚಿನೊಳಗಿರುವವರಿಗೆ ಇದಾವುದರ ಅರಿವೂ ಇಲ್ಲ. ದೇವರ ಮಗ ಧರೆಯಲ್ಲಿ ಅವತರಿಸಿದ ಸಮಯದ ಆನಂದ ಅವರೆಲ್ಲರಲ್ಲಿ ತುಂಬಿಕೊಂಡಿತ್ತು. ಹನ್ನೆರಡು ಗಂಟೆ ಕಳೆದುಹೋಗಿದ್ದು ನಮಗೆ ತಿಳಿದಿದ್ದು ಎಲ್ಲರು ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡುವದನ್ನು ನೋಡಿದಾಗಲೆ. ಅಪ್ಪ ‘ಯಾಕೊ ಒಳ್ಳೆಯ ಶಕುನ ಅಲ್ಲ’ ಎಂದು ಮೆಲ್ಲನೆ ಗೊಣಗಿದರು ನನಗೆ ಕೇಳಿಯೇ ಬಿಟ್ಟಿತ್ತು. ಹೇಮಂತ, ‘ನೀವ್ಯಾಕೆ ಮುಖ ಇಳಿಸ್ಕೊಂಡಿದೀರ? ಕಮಾನ್ ಟೀನಾ, ಇಟ್ ಈಸ್ ಕ್ರಿಸ್ಮಸ್!’ ಎಂದು ನಕ್ಕ. ಚರ್ಚನ್ನು ಅಲಂಕರಿಸಿದ್ದ ಸಹಸ್ರಾರು ದೀಪಗಳೂ ಮಿನುಗುತ್ತ ನಕ್ಕವು. ನಾನೂ ನಗಲು ಪ್ರಯತ್ನಿಸಿದೆ.

ಚರ್ಚಿನಿಂದ ಮನೆಗೆ ಬಂದ ಮೇಲೂ ವಿಚಿತ್ರ ಸಂಕಟ. ಚೆನ್ನೈನಲ್ಲಿದ್ದ ಇವನಿಗೆ ಅಷ್ಟು ಹೊತ್ತಿಗೇ ಫೋನಾಯಿಸಿದೆ. ’ಹ್ಯಾಪಿ ಕ್ರಿಸ್ಮಸ್! ಯಾಕೊ ನಿಮ್ಮನ್ನೆಲ್ಲ ನೋಡಬೇಕು ಅನ್ನಿಸ್ತಿದೆ. ಆಫೀಸಲ್ಲಿ ನಾಡಿದ್ದು ಬೀಚ್ ಔಟಿಂಗ್ ಇಟ್ಕೊಂಡಿದ್ರು. ನಾನು ಮೈಸೂರಿಗೆ ಹೊರಟಿದೀನಿ ಅಂತ ಎಲ್ಲ ಸಿಟ್ಟಾಗಿದಾರೆ!’ ಅತ್ತಕಡೆಯಿಂದ ಮಾತು ಕೇಳುತ್ತ ಇತ್ತು. ಅದೂ ಇದೂ ಮಾತನಾಡಿ ಫೋನು ಇಟ್ಟೆ. ಮತ್ತೆ ಎರಡು ದಿನ ಕಳೆದದ್ದೆ ತಿಳಿಯದು. ಇಪ್ಪತ್ತೇಳನೆಯ ತಾರೀಖು ಮುಂಜಾವ ಫೋನು ಅರಚಾಡಿತು. ಆಚೆಯಿಂದ ಗುಣ ಮಾತಾಡುತ್ತಿದ್ದ. ‘ಟೀವಿ ಹಾಕಿ ನೋಡಿ. ಚೆನ್ನೈ ಸೈಡೆಲ್ಲ ಸುನಾಮಿ ಬಂದಿದೆ. ಸಚ್ಚಿನೂ ಹೆಂಡ್ತಿ ಮಗು ಸಮೇತ ಅಂಡಮಾನಿಗೆ ಹೋಗಿದಾನೆ. ಕಾಂಟಾಕ್ಟ್ ಮಾಡೋಕೇ ಆಗ್ತಿಲ್ಲ!’ ನಿದ್ದೆಯೆಲ್ಲ ಹಾರಿಹೋಯಿತು. ಟಿವಿ ಆನ್ ಮಾಡಿದರೆ ನರಕ ಎಂದರೆ ಹೀಗಿರಬೇಕು ಅನ್ನಿಸುವ ಹಾಗಿನ ದೃಶ್ಯಗಳು. ಬೆಚ್ಚಿಬೀಳಿಸುವ ವಿಡಿಯೋಗಳು. ಎಲ್ಲಿ ನೋಡಿದರಲ್ಲಿ ಮೊಸರು ಕಡೆವ ಹಾಗೆ ಎಬ್ಬುತ್ತಿರುವ ಕಡಲು. ಎಲ್ಲೆಲ್ಲು ನೀರಿನ ಸಮಾಧಿ. ಹೊಟ್ಟೆ ತೊಳಸಿದ ಹಾಗಾಗಿ ಕುಕ್ಕರಿಸಿದೆ. ನಾನು ಯಾವಾಗಲು ಶಕುನಗಳಲ್ಲಿ ವಿಶ್ವಾಸವಿಡುವವಳಲ್ಲ. ಆದರು ಯಾಕೊ ಚರ್ಚಿನ ಘಟನೆ ನೆನಪಾಯಿತು. ಇಪ್ಪತ್ತಾರರ ಬೆಳಗ್ಗೆ ಅಂಡಮಾನಿನ ಬೀಚಿನಲ್ಲಿ ಅಡ್ಡಾಡಿಕೊಂಡು ಬರಲು ಹೋದ ಸಚ್ಚಿಯ ಹೆಂಡತಿ ಮೇಘಾಳ ಹೆಣವೂ ದೊರೆತಿರಲಿಲ್ಲ. ಇವನೂ ಅಂದು ಬೀಚಿಗೆ ಹೋಗಬೇಕಾಗಿತ್ತಲ್ಲ ಎಂದು ನೆನೆಸಿ ನಡುಕ ಬಂತು.

ಜನವರಿ 2005. ವಾಪಾಸು ಇವನ ಜತೆ ಚೆನ್ನೈಗೆ ಪಯಣ. ಅಲ್ಲಿ ಮುತ್ತುಕ್ಕಾಡಿನಲ್ಲಿ ಅಡ್ಡಾಡಲು ಹೋಗಿದ್ದಾಗ ಸುನಾಮಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಬೆಸ್ತನೊಬ್ಬ ನಮ್ಮನ್ನು ತನ್ನ ಗುಡಿಸಿಲಿಗೆ ಕರೆದುಕೊಂಡುಹೋಗಿ ಉಪ್ಪುಮೀನು ಕರಿದುಕೊಟ್ಟು ಒಂದು ರಾಶಿ ಸುನಾಮಿಕಥೆಗಳನ್ನು ಹೇಳಿದ. ಆವತ್ತು ಕಡಿಮೆಯೆಂದರು ಮೂವತ್ತೈದು ಜೀವಗಳನ್ನು ಉಳಿಸಿದ್ದ ಅವನ ಮಾತುಗಳನ್ನು ಕೇಳುತ್ತ ಇದ್ದರೆ ನಾವು ಹೇಡಿಗಳು ಅನ್ನಿಸುತ್ತ ನಾಚಿಕೆ ಆಗುತ್ತ ಇತ್ತು. ಅಂದು ಆತನ ಹತ್ತಾರು ಸ್ನೇಹಿತರು ನೀರಿನಲ್ಲಿ ತೊಳೆದುಹೋದರಂತೆ. ಆದರೆ ಆತ ಹೇಳಿದ್ದು ಒಂದೇ ಮಾತು.’ಅಮ್ಮ, ನಾನೂ ಓಡಿಹೋಗಬೋದಿತ್ತು. ಆದ್ರೆ ಹಿಂದಿನ ದಿನ ಚರ್ಚಿಗೆ ಹೋಗಿಬಂದಿದ್ದೆ ನಾನು. ಶಿಲುಬೇ ಮೇಲಿರೋನು ಬೇರೆಯೋರಿಗೋಸ್ಕರ ಅಲ್ಲಿಗೆ ಹೋದ. ಅಷ್ಟು ಗೊತ್ತು. ಆವತ್ತು ನಾನು ಹಿಂದೆ ತಿರುಗಿ ನೋಡದಿದ್ದರೆ ಆಮೇಲೆ ಯಾವತ್ತೂ ಚರ್ಚಿನಲ್ಲಿ ತಲೆಯೆತ್ತಿ ನಿಲ್ಲೋಕಾಗ್ತಿತ್ತೆ?’

ವಾಪಾಸು ದಾರಿಯುದ್ದಕ್ಕು ನೂರಾರು ಪುಟ್ಟಪುಟ್ಟ ಟೆಂಟುಗಳು. ಅವುಗಳ ಸುತ್ತ ಆಡುವ ಮಕ್ಕಳು. ಬಟ್ಟೆ, ಆಹಾರ ಹೊತ್ತು ತರುವ ವ್ಯಾನುಗಳು. ಸಕ್ಕರೆಯಂಥ ಮರಳು. ಕೆಂಪಗೆ ಹೊಳೆವ ಕಡಲು. ಆ ಹೊತ್ತು, ಆ ಸಂಜೆ ನಾನು ಸಂಪೂರ್ಣವಾಗಿ ನನ್ನನ್ನು ನಂಬಲು ತೊಡಗಿದೆ. ಎಲ್ಲದಕ್ಕು ಸರಿಯಾದ ಉತ್ತರಗಳಿರುವುದಿಲ್ಲ ಎಂಬುದನ್ನು ಕೂಡಾ.

Advertisements

4 thoughts on “ಸ್ಪಿರಿಟ್ ಆಫ್ ಕ್ರಿಸ್ಮಸ್

 1. ಆದರೆ ಆತ ಹೇಳಿದ್ದು ಒಂದೇ ಮಾತು.’ಅಮ್ಮ, ನಾನೂ ಓಡಿಹೋಗಬೋದಿತ್ತು. ಆದ್ರೆ ಹಿಂದಿನ ದಿನ ಚರ್ಚಿಗೆ ಹೋಗಿಬಂದಿದ್ದೆ ನಾನು. ಶಿಲುಬೇ ಮೇಲಿರೋನು ಬೇರೆಯೋರಿಗೋಸ್ಕರ ಅಲ್ಲಿಗೆ ಹೋದ. ಅಷ್ಟು ಗೊತ್ತು. ಆವತ್ತು ನಾನು ಹಿಂದೆ ತಿರುಗಿ ನೋಡದಿದ್ದರೆ ಆಮೇಲೆ ಯಾವತ್ತೂ ಚರ್ಚಿನಲ್ಲಿ ತಲೆಯೆತ್ತಿ ನಿಲ್ಲೋಕಾಗ್ತಿತ್ತೆ?’

  — ಮೈ ಜುಮ್ಮೆನಿಸಿತು . ಧನ್ಯವಾದಗಳು

 2. ನನಗೆ ಮೊಸಳೆ ಡಾಕ್ಟರ್ ಬರಹಕ್ಕಿಂತ್ಲೂ ಇದು ಬಹಳ ಚೆನ್ನೆಸಿತು. ಆ ಬೆಸ್ತ ಹೇಳಿದ ಹಾಗೆ ನಾವು ಇಡೀ ಜೀವನದಲ್ಲಿ ಬೇರೆಯವರಿಗಾಗಿ ತೊಡಗಿಸಿಕೊಳ್ಳಲು ದೇವರು ಕೊಡುವ ಅವಕಾಶ ಕೆಲವೇ ಕೆಲವು. ಅದೂ ನಮಗೆ ದಕ್ಕದಿದ್ದಾಗ,ನಮ್ಮಿಂದ ದಕ್ಕಿಸಿಕೊಳ್ಳದಿದ್ದಾಗ ಹೇಡಿ ಎನಿಸುತ್ತೆ.
  ಕೊನೆಯ ಸಾಲು ಹಾಗೂ ಬೆಸ್ತನ ಮಾತು ಮನ ತಟ್ಟಿತು ಜತೆಗೆ ಆರ್ದ್ರವೆನಿಸಿತು.
  ಶುಕ್ಲವರ್ಣಿ

 3. ಪ್ರತಿಮೆಗಳು ಒಳಗೆಲ್ಲೋ ಕೂತು ಹುರಿದುಂಬಿಸುವ ಸೋಜಿಗ ಮೈಮನ ಬೆಚ್ಚಗೆ ಮಾಡಿತು.
  ತ್ಸುನಾಮಿಯ ನೆನಪು ಮನಸ್ಸನ್ನು ಮತ್ತೆ ಕಲಕಿತು.
  ಇವೆಲ್ಲಾ ಮಾಡಿದಕ್ಕೆ ಥ್ಯಾಂಕ್ಸ್…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s