ಏಕಾಂತ ಮತ್ತು..

loneliness1.jpg

ಕಳೆದಾರೆಯೆ ಯಾರಾದರು ಹೀಗೂ ದಿನವನ್ನ?
ಯಾರದೋ ಋಣಭಾರ ಇಳಿಸುವ ತೆರದಿ..

ಕನ್ನಡಿ ನೋಡಿದ ಮೇಲೆ ನಿರಾಳವೆನ್ನಿಸಿತು
ಎನ್ನ ಬಲ್ಲವರೊಬ್ಬರು ಈ ಮನೆಯಲಿರುವರೆಂದು..

ಮರದ ಹಣ್ಣು ಪಕ್ವವಾಗಿರಬೇಕು ಬಹುಶಃ
ಯಾರೋ ಪುನಃ ಕಲ್ಲೆಸೆಯುತ್ತಿದ್ದಾರೆ..

ಬಹಳ ಹೊತ್ತಿನಿಂದ ನೀರವವಷ್ಟೆ ಪ್ರತಿಧ್ವನಿಸುತ್ತಿದೆ
ಯಾರೋ ಎನ್ನ ಕೂಗಿ ಕರೆವಂತೆ…

ನಾನು ಕೇಳಿದ ಗುಲ್ಜಾರರ ಗಜಲೊಂದರ ಕನ್ನಡ ಭಾವಾನುವಾದವಿದು. ಏಕಾಂತವನ್ನು ಬಹಳ ಸರಳವಾಗಿ, ಆಳದಿಂದ ವ್ಯಕ್ತಪಡಿಸುವ ಸಾಲುಗಳಿವು. ಈ ಸಾಲುಗಳನ್ನು ಕೇಳುತ್ತ ಇದ್ದರೆ ಎಂಥ ಏಕಾಂತವೂ ಸಹ್ಯವಾದೀತು ಅನ್ನಿಸಿತು.

***
ಏಳು ವರ್ಷಗಳ ಹಿಂದಿನ ಒಂದು ಸಂಜೆ. ಬಹಳ ಗೊಂದಲದಲ್ಲಿದ್ದೆ. ಅವ ಮೆಲುವಾಗಿ ನಕ್ಕಿದ್ದ್ಕ. ನಾನು ಆತನ ಅನಿಸಿಕೆಯನ್ನು ಹಿರಿಯನೆಂಬ ಕಾರಣದಿಂದ ಕೇಳಿದ್ದೆ. ಆದರೆ ನಿಜವಾಗಿ ನನಗೆ ಯಾವ ಅನಿಸಿಕೆಯ ಅವಶ್ಯಕತೆಯೂ ಇರಲಿಲ್ಲ ಎಂದು ಚೆನ್ನಾಗಿ ಅರಿತಿದ್ದವ ಸುಮ್ಮನೆ ಕುಳಿತು ಕೇಳುಗನ ಪಾತ್ರ ವಹಿಸಿಕೊಂಡು ಮೌನವಾಗಿದ್ದ. ನನ್ನೆಲ್ಲ ಮಾತುಗಳನ್ನು ಸಾವಧಾನವಾಗಿ ಕೇಳಿದ ನಂತರ ಆತ ಆರಂಭಿಸಿದ – ’ನನಗ್ಗೊತ್ತು, ಈ ಏಕತಾನತೆಯ ಮಧ್ಯೆ ಹ್ಯಾಗೆ ಹುಚ್ಚುಹಿಡಿದ ಹಾಗಾಗತ್ತೆ ಅಂತ. ನಾವೆಲ್ಲ ಒಂದಲ್ಲ ಒಂದು ದಿನ ಈ ಸ್ಥಿತಿಯನ್ನ ಎದುರಿಸಿದೇವೆ, ಬಿಲೀವ್ ಮಿ. ಏನು ಮಾಡಬೇಕು, ಯಾವ ಕಡೆ ಹೋಗಬೇಕು, ಏನನ್ನ ಆಯ್ದುಕೋಬೇಕು, ಏನೂ ಗೊತ್ತಾಗೋದಿಲ್ಲ. ನಿಂಗೊಂದು ಮಾತು ಹೇಳ್ತೇನೆ. ಲೈಫು ಪ್ರಯೋಜನಕ್ಕಿಲ್ಲ ಅನ್ನಿಸುತ್ತಿದ್ದ ಹಾಗೇ ಸುಮ್ಮನೆ ಕೂರದೆ ನಮ್ಮನ್ನ ಏನು stimulate ಮಾಡತ್ತೋ ಅದನ್ನ ಹುಡುಕ್ಕೊಂಡು ಹೊರಡಬೇಕು. ಏನೂ ಇಲ್ಲ ಅನ್ನಿಸಿದರೆ ಹೊಸತೇನನ್ನೋ ಹುಟ್ಟಿಸಿಕೊಳ್ಬೇಕು.’ ಹಗುರ ಅನ್ನಿಸಿತು. ’ಯಾಕೋ ಇತ್ತೀಚೆಗೆ ಈಥರ ಮಾತಾಡೋಕೆ ಶುರುಮಾಡಿದೀಯ. ನೀನೇ ಅಲ್ಲ ಅನ್ನಿಸಿಬಿಡ್ತು!’ ಎಂದು ನಕ್ಕ ಅವನ ಕಣ್ಣುಗಳಲ್ಲಿ ತುಂಟತನದ ಛಾಯೆ. ಮಾರನೆದಿನ ಖಾಲಿಬಸ್ಸೊಂದರಲ್ಲಿ ಪ್ರಯಾಣ. ಒಂದಿಷ್ಟು ಕಳೆದ ನೆನಪುಗಳು, ಹೊಸ ನಿರ್ಧಾರಗಳು.. ಏಕಾಂತ ಏನೇನು ಮಾಡಬಲ್ಲದು!

***

But when the days of golden dreams had perished

And even Despair was powerless to destroy,

Then did I learn how existence could be cherished,

Strengthened and fed without the aid of joy.

 

ಎಮಿಲಿ ಬ್ರಾಂಟೆಯ ಸಾಲುಗಳು. ಬೆಂಗಳೂರ ಸಂಜೆಗಳಿಗೆ ಚಳಿ ಏರುತ್ತಿದೆ. ಕತ್ತಲು ಬೇಗನೆ ಆವರಿಸಿಕೊಳ್ಳುತ್ತಿದ್ದ ಹಾಗೆ ಎಮಿಲಿಯ ಕವಿತೆಗಳಲ್ಲಿ ಮೈಮರೆತ ನಾನು ಅಕ್ಷರಗಳು ಮಸುಕಾಗತೊಡಗಿ ಗಡಬಡಿಸಿ ಎದ್ದು ದೀಪ ಹೊತ್ತಿಸುತ್ತೇನೆ. ಯಾರದೊ ಫೋನುಗಳು. ಯಾಂತ್ರಿಕ ಉತ್ತರಗಳು. ಚಪ್ಪಲಿ ಮೆಟ್ಟಿಕೊಂಡು ಪಾರ್ಕಿನಲ್ಲಿ ತಿರುಗಾಡಿ ಬೆಂಚಿನ ಮೇಲೆ ಕುಳಿತುಕೊಂಡರೆ ಅಷ್ಟುದೂರದಲ್ಲಿ ನನ್ನ ಹಾಗೇ ಒಂಟಿಯಾಗಿ ಕುಳಿತ ಹುಡುಗಿಯೊಬ್ಬಳು ಪರಿಚಯದ ನೋಟ ಬೀರಿ ನಗುತ್ತಾಳೆ. ಉಣ್ಣೆಟೋಪಿ ಹಾಕಿದ ಗುಂಡಗಿನ ಮಗುವೊಂದು ಸೈಕಲು ಕಲಿಯಲು ಹೆಣಗಾಡುತ್ತದೆ. ಹಿರಿಯ ಹೆಂಗಸರಿಬ್ಬರು ತಮ್ಮ ಸೊಸೆಯಂದಿರ ಅಡುಗೆಗಳ ಬಗ್ಗೆ ಚರ್ಚೆ ಮಾಡುತ್ತಿದ್ದರೆ ಹಿರಿಯ ಗಂಡಸರು ತಮ್ಮ ಹಾಗೂ ತಮ್ಮ ಹೆಂಡಂದಿರ ವ್ಯಾಧಿಗಳ ಬಗ್ಗೆ ವಿಚಾರ ವಿನಿಮಯ ಮಾಡುತ್ತ ಇದ್ದಾರೆ.. ನಾನು ಅಲ್ಲಿ ಆ ಕ್ಷಣ ಇರಬಾರದಿತ್ತೇನೊ ಅನ್ನಿಸಲು ತೊಡಗಿ ಎದ್ದು ಹೊರಡುತ್ತೇನೆ. ಟಿವಿಗಳಲ್ಲಿ ಧಾರಾವಾಹಿಗಳು, ಬ್ರೇಕಿಂಗ್ ನ್ಯೂಸುಗಳು ಕಾಯುತ್ತ ಇವೆ. ಏಕಾಂತವಾಗಿ ಇರುವುದು, ಯೋಚಿಸುವುದು ಅಂದರೇನು? ಹೀಗೆಲ್ಲ ನನ್ನ ಹಾಗೆ ಇರುವುದೆ? ಗುಲ್ಜಾರರ ಗಜಲಿನಲ್ಲಿ, ನನ್ನ ಸ್ನೇಹಿತನ ಏಳು ವರ್ಷಗಳ ಹಿಂದಿನ ಮಾತುಗಳಲ್ಲಿ, ಎಮಿಲಿ ಬ್ರಾಂಟೆಯ ಸಾಲುಗಳಲ್ಲಿ ಉತ್ತರ ಕಂಡುಕೊಂಡು ಅದನ್ನು ಅರ್ಥೈಸಿಕೊಳ್ಳಲು, ಅರಗಿಸಿಕೊಳ್ಳಲು ಯತ್ನಿಸುತ್ತೇನೆ. ದೂರ ಹೋಗಲು ಪ್ರಯತ್ನಿಸಿದಷ್ಟು ಮತ್ತೂ ಆಳವಾಗಿ ಹೂತುಹೋಗುವ ಭಾವ. ಬೇಸರ ಅನ್ನಿಸುತ್ತಿಲ್ಲ. ಗುಲ್ಜಾರ್ ತಮ್ಮ ಇನ್ನೊಂದು ಗಜಲಿನಲ್ಲಿ ಹೇಳುತ್ತಾರೆ:

’ಮತ್ತೆ ತಿರುಗಿ ಅಲ್ಲಿಗೇ ಹೋಗಬೇಕಿದೆ,
ಗೆಳೆಯ ನೀಡಿದ್ದಾದರೂ ಅದೆಂಥ ಬಿಡುಗಡೆ?’

ಬದುಕಿನ ವ್ಯಾಮೋಹ ಅಂದರೆ ಇಂಥದೇ ಏನೋ ಇರಬೇಕು.

ಚಿತ್ರ:  Fred R  

Advertisements

16 thoughts on “ಏಕಾಂತ ಮತ್ತು..

 1. ಜೋಗಿಯವರೆ,
  ಧನ್ಯವಾದ. ನಾನು ಆಂಗ್ಲ ಉಪನ್ಯಾಸಕಿ ಅಲ್ಲ. ಆರು ವರ್ಷಗಳ ಹಿಂದೆ ಮೈಸೂರು ವಿಶ್ವವಿದ್ಯಾನಿಲಯದ ಲಲಿತಕಲಾ ಕಾಲೇಜಿನಲ್ಲಿ ಕೆಲಕಾಲ ಉಪನ್ಯಾಸಕಿಯಾಗಿದ್ದೆ. ಪಾಠ ಮಾಡಬೇಕು ಅಂದುಕೊಂಡಿದ್ದವಳು ಯಾವದೋ ಬೇರೆಯೆ ದಾರಿ ಆರಿಸಿಕೊಂಡೆ. ಭೇಟಿಯಾದರೆ ರಾಶಿ ಮಾತನಾಡಿ ನೀವು ’ತೊಲಗು!’ ಅಂತ ಆಚೆಗಟ್ಟುವಂತೆ ಮಾಡುವ ಭರವಸೆ ನೀಡಬಲ್ಲೆ!
  -ಟೀನಾ.

  Dear Fred,
  Hope I have redone the link to your satisfaction. If not, let me know. This is not Sinhalese. This is an ancient and beautiful Indian language called ‘Kannada’. I didn’t get what you said in the end – it was a word starting with ‘B’. What does it mean?
  -Thank you.
  Tina.

 2. Hi Tina

  Thank you for your quick response. Please forgive my ignorance. I once worked in Sri Lanka and Kannada appears to resemble Sinhala to the untrained eye. It certainly looks beautiful, and I’m delighted that my browser and computer can render it, at least.

  Bohomastutiyi is a phonetic rendering of ‘thank you very much’ in Sinhala.

  Vandanegalu! (?)

 3. ಹಾಯ್ ಟೀನ್!

  ನಿಜ ಕಣೇ… ಏಕಾಂತದಲ್ಲಿರೋ ಮಜ, ಹಾಗಿರೋರಿಗೇ ಗೊತ್ತು. ಈ ಲೇಖನವನ್ನ ಅನುಭವಿಸಿಕೊಂಡು ಓದಿದೆ.
  ( ಏಕಾಂತ ನಿನ್ ಮೇಲೆ ಬಹಳ ಪ್ರಭಾವ ಬೀರಿದ ಹಾಗಿದೆ? ಫೋನಿಗೂ ಸಿಗ್ತಿಲ್ವಲ್ಲ!?)
  ಪ್ರೀತಿ,
  ಚೇತನಾ.

 4. ಚೇತೂ,
  ಆಗಾಗ ಎಲ್ಲ ಮರೆತು ನಿನ್ನಂಥ ಒಬ್ಬ ಗೆಳತಿಯ ಹತ್ತಿರ ಕೂತು ಮಾತನಾಡಬಹುದು ಅನ್ನೋ ಸಾಧ್ಯತೆ ಕೂಡ ಈಗಿನ ಏಕಾಂತವನ್ನ ಚೆಂದಗೊಳಿಸುತ್ತೆ! ಈ ಫೋನುಗೀನು ಎಲ್ಲ ಬಿಸಾಕಿ ಎಲ್ಲಾದರು ನಾಲಕ್ಕು ದಿನ ಆರಾಮವಾಗಿ ಕಳೆಯುವ ಅಂತಿದೇನೆ.
  -ಅಕ್ಕರೆ,
  ಟೀನಾ.

 5. ಒಳ್ಳೆ ಐಡಿಯಾ!
  ನನ್ನಿಂದ ಫೋನು ಬಿಸಾಕಿ ಒಡ್ಕೊಳೋಕೆ ಮಾತ್ರ ಸಾಧ್ಯ! ನಾಲ್ಕು ದಿನದ ಆರಾಮ ಮಾತ್ರ ಕನಸು.
  ನಂದೂ ಸೇರ್ಸಿ ಎಂಟು ದಿನ ಇದ್ ಬಾ ಮಾರಾಯ್ತಿ, ಒಳ್ಳೇದಾಗ್ಲಿ.

  – ಚೇತ್.

 6. ಮಲ್ನಾಡ್ ಹುಡ್ಗೀ,
  ನಿನಗೆಂತ ಹೇಳಿಕೊಡ್ಲಿ? ನೀನು ಅಷ್ಟ್ಒಂದು ಚೆನ್ನಾಗಿ ಬರೀತೀ. ಅಂದಹಾಗೆ ನಾನೂವೆ ಮಲ್ನಾಡ್ನೋಳೇಯ. ನಿನ್ನ ಕಮೆಂಟುಬಾಕ್ಸಿನಲ್ಲಿ ನನ್ ಮೆಯಿಲ್ ಅಡ್ರೆಸು ಇರ್ಬೇಕು ಹುಡುಕು. ಒಂದು ಗರ್ಮಾಗರಂ ’ಕಾಪಿ’ಸೆಶನ್ ಇಟ್ಟುಕೊಳ್ಳುವಾ. ಏನಂತೀ?

 7. ಮರದ ಹಣ್ಣು ಪಕ್ವವಾಗಿರಬೇಕು ಬಹುಶಃ
  ಯಾರೋ ಪುನಃ ಕಲ್ಲೆಸೆಯುತ್ತಿದ್ದಾರೆ..

  ’ಮತ್ತೆ ತಿರುಗಿ ಅಲ್ಲಿಗೇ ಹೋಗಬೇಕಿದೆ,
  ಗೆಳೆಯ ನೀಡಿದ್ದಾದರೂ ಅದೆಂಥ ಬಿಡುಗಡೆ?’

  Thanks a lot!!!

 8. ನಮಸ್ಕಾರ,
  ಏಕಾಂತ ಓದಿದೆ. ಗುಲ್ಜರ್ ರವರ ಸಾಲುಗಳನ್ನು ನೀಡಿದ್ದೀರಿ. ಚೆನ್ನಾಗಿವೆ. ಮತ್ತದೇ ಬೇಸರ, ಅದೇ ಸಂಜೆಯೆನ್ನುವ ಅಂಗಳದಲ್ಲಿ ಹೊಸ ಘಮ್ಮನೆಯ ಪರಿಮಳ ಹೊತ್ತ ಸಾಲುಗಳವು.
  ಏಕಾಂತವಿರಲಿ,ಕೊಂಚ ತಣ್ಣಗೆ
  ತಂಗಾಳಿಯ ಹಾಗೆ,
  ಕೊರೆದು ರಕ್ತ ಹೆಪ್ಪುಗಟ್ಟಿಸುವ
  ಚಳಿಯಂತಲ್ಲ !

  ಅಂದಹಾಗೆ ಉದಯವಾಣಿಗೆ ಆತುರಾತುರವಾಗಿ ಕಥೆ ಬರೆದು ಬೈಸಿಕೊಂಡಿರುವುದಾಗಿ ಹೇಳಿದ್ರಿ. ನಾನು ವಿಮರ್ಶಕನಲ್ಲ. ನಾನು ಅಂದುಕೊಂಡ ಕಥೆಗಳಿಗೆ ಸಿದ್ಡ ಮಾದರಿಗಳಿಲ್ಲ. ನನಗೆ ಅದರಲ್ಲಿ ಹಿಡಿಸಿದ್ದು ಸಹಜತೆ.

  ಒಳ್ಳೆ ಸಾಲುಗಳನ್ನು ಕೊಟ್ಟಿದ್ದಕ್ಕೆ ಧನ್ಯವಾದ
  ನಾವಡ

 9. ಪ್ರೀತಿಯ ಎಲ್ಲರಿಗೆ,
  ಎಲ್ಲೋ ಏನೋ ನೋಡಲು ಹೋಗಿ
  ನಿಮ್ಮ ವೆಬ್ಬಿನಲ್ಲಿ ಸಿಕ್ಕಿಕೊಂಡೆ.
  ಅಕಾರಣ ಹುಚ್ಚು ಪ್ರೀತಿಯ ಮಿತ್ರ ಚಿದಾನಂದ ಸಾಲಿಯ ಕಥೆಗೆ ಕನ್ನಡ ಪ್ರಭ ಸಂಕ್ರಾಂತಿ ಕಥಾಸ್ಪರ್ಧೆಯ ಮೊದಲ ಬಹುಮಾನ ಬಂದಿದೆ.
  http://www.kannadaprabha.com/NewsItems.asp?ID=KP420080119032342&Title=Sapthahikaprabha&lTitle=%D1%DB%AE%DB%A1%D5O%DA%AE%DA%C3%BA%DA&Topic=0&Dist=0
  ಈ ಲಿಂಕ್ ಆ ಕಥೆ ಸಿಕ್ಕಿಲ್ಲದವರಿಗಾಗಿ.
  ಮತ್ತೊಮ್ಮೆ ನಿಮ್ಮೆಲ್ಲರೊಡನೆ ಉದ್ದುದ್ದ ಮಾತನಾಡುತ್ತೇನೆ.
  ಸಧ್ಯಕ್ಕೆ ನಮಸ್ಕಾರ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s