ನಗರದ ಗುಂಗು, ಅಕ್ಕರೆಯ ತಂಪು

bus-4001.jpg

ಪಕ್ಕದಮನೆಯ ಮಗು ಒಂದೆ ಸಮ ಹುಯಿಲಿಡುತ್ತಿದೆ. ಅದರ ತಾಯಿ ಎತ್ತಿಕೊಂಡು ಓಡಾಡಿ, ಲಾಲಿಹಾಡಿ ಸಮಾಧಾನಿಸಲು ಯತ್ನಿಸುತ್ತಿದ್ದಾಳೆ. ಅದರ ತಂದೆಯ ನಿದ್ದೆ ಭಂಗವಾಗಿ ಗೊಣಗಾಡುವುದು ಕೇಳುತ್ತಿದೆ. ನನ್ನ ಟೇಬಲ್ಲಿನ ಕಿಟಕಿಯ ಕೆಳಗೆ ಎರಡು ಬಿಸ್ಕತ್ತು ಬಣ್ಣದ ಬೆಕ್ಕಿನ ಮರಿಗಳು ತಮ್ಮ ತಾಯಿಯ ಹೊಟ್ಟೆಯಲ್ಲಿ ಮುಖ ಅವಿಸಿಟ್ಟುಕೊಂಡು ಮಲಗಿಕೊಂಡಿವೆ. ವಿಪರೀತ ಚಳಿ. ಓಡಾಡಲೂ ಮನಸ್ಸಾಗುತ್ತಿಲ್ಲ. ಕೈಗೆ ಸಿಕ್ಕ ಸಿಡಿಯೊಂದನ್ನು ಕಂಪ್ಯೂಟರಿನ ಬಾಯಿಗೆ ತುರುಕಿ, ಇಯರ್ ಫೋನ್ ಕಿವಿಗೆ ಸಿಕ್ಕಿಸಿ ಕುಳಿತೆ. ಜಗಜೀತ್ ಸಿಂಗರ ಕಂಠದಿಂದ ಹೊಮ್ಮಿದ ಗಜಲೊಂದು ಕಿವಿಯಲ್ಲಿ ನುಡಿಯಿತು:

‘ಪತ್ಥರ್ ಕೆ ಖುದಾ, ಪತ್ಥರ್ ಕೆ ಸನಂ
ಪತ್ಥರ್ ಕೆ ಹಿ ಇನ್ಸಾಂ ಪಾಯೇ ಹೈಂ
ತುಂ ಶೆಹರ್-ಎ-ಮೊಹಬ್ಬತ್ ಕೆಹತೇ ಹೋ
ಹಂ ಜಾನ್ ಬಚಾಕರ್ ಆಯೇ ಹೈಂ..’

(ಕಲ್ಲಿನ ದೇವರು, ಕಲ್ಲಿನ ಪ್ರೇಯಸಿ
ಕಲ್ಲಿನದೇ ಮನುಷ್ಯರ ಕಂಡಿರುವೆ
ನೀನೇನೋ ಅದು ಪ್ರೇಮನಗರಿಯೆನುವೆ
ನಾನಲ್ಲಿಂದ ಜೀವವುಳಿಸಿಕೊಂಡು ಬಂದಿರುವೆ)

ಪ್ರತೀ ಸಲ ಈ ಸಾಲುಗಳನ್ನು ಕೇಳಿದಾಗಲೆಲ್ಲ ಬೆಂಗಳೂರಿನ ಪೀಕ್ ಅವರಿನ ಗಿಜಿಗುಡುವ ರಸ್ತೆಗಳು ಮತ್ತು ಅದರ ಜತೆಗೇ ಟಿ.ಎಸ್.ಎಲಿಯಟನ ಪ್ರಸಿದ್ಧ ‘ದ ವೇಸ್ಟ್ ಲ್ಯಾಂಡ್’ನ ಆ ಸಾಲುಗಳು ನೆನಪಾಗತೊಡಗುತ್ತವೆ..

“Unreal city

Under the brown fog of a winter dawn

A crowd flowed over London bridge, so many

I had not thought death had undone so many”

ನಾನು ಕೇಳುತ್ತ ಇರುವ ಗಜಲು ಹಾಗೂ ಎಲಿಯಟನ ಈ ಕಾವ್ಯಭಾಗ – ಎರಡರಲ್ಲು ನಗರದ ಉಲ್ಲೇಖವಿದೆ. ಆದರೆ ಎರಡರಲ್ಲೂ ನಗರದ ಬಗ್ಗೆ ಕವಿಗಿರುವ ನೆಗಟಿವ್ ಭಾವ, ಅದು ಮನುಷ್ಯನ ಮೇಲೆ ಮಾಡಿರುವ ಹಲ್ಲೆಯ ಪರಿಣಾಮಗಳ ಬಗ್ಗೆ ಬೇಸರ, ದಟ್ಟ ವಿಷಾದಗಳು ತುಂಬಿಕೊಂಡಿರುವುದು ಗಮನಾರ್ಹ. ಪ್ರೇಮನಗರಿಯೆಂದು ಬಣ್ಣಿಸಲ್ಪಟ್ಟ ಶಹರದ ಕಲ್ಲಿನಂಥ ಕಠಿಣತೆಗೆ ತಲೆಗುದ್ದಿ ನೋಯಿಸಿಕೊಂಡು ಜೀವವುಳಿದರೆ ಸಾಕೆಂದು ತಿರುಗಿಬಂದ ಭಾವಜೀವಿ ತನ್ನ ಗಜಲಿನಲ್ಲಿ ನಿಟ್ಟುಸಿರು ಬಿಟ್ಟರೆ, ಎಲಿಯಟನ ಕಾವ್ಯದಲ್ಲಿ ಸಂಜೆ ಕೆಲಸಬಿಟ್ಟ ಮೇಲೆ ಲಂಡನ್ನಿನ ಪ್ರಸಿದ್ಧ ಸೇತುವೆಯ ರಸ್ತೆಯ ಮೇಲೆ ಗುಂಪಾಗಿ ಚಲಿಸುತ್ತಿರುವ ಸಾವಿರಗಟ್ಟಲೆ ಜನರ ಪ್ರೇತಕಳೆಯ, ನಿರ್ಭಾವುಕ ಮುಖಗಳನ್ನು ನೋಡಿದ ಕವಿ ಹೌಹಾರಿದ್ದಾನೆ.
**
ಇಲ್ಲಿ ಒಬ್ಬೊಬ್ಬಳೆ ಅಲೆದಾಡುತ್ತಿದ್ದರು ಹೇಳುಕೇಳುವವರಾರೂ ಇಲ್ಲ. ಆಗೆಲ್ಲ ಹಾಸ್ಟೆಲಿನಿಂದ ವಾಪಾಸು ಮನೆಗೆ ಹೋದಾಗ ಅಮ್ಮ ನನ್ನ ಸುತ್ತಲು ಕಾಳಜಿ ಮಾಡಿಕೊಂಡು ಓಡಾಡುತ್ತ ಇದ್ದುದು ನೆನಪಾಗಿ ಹಳಹಳಿಯೆನಿಸುತ್ತದೆ. ’ಹುಷಾರಿಲ್ವೇನೆ? ಮೂತಿಯೆಲ್ಲಾ ಒಣಗಿ ಕರ್ರಗಾಗಿದೆ. ಹೊರಗೆ ಹೋದಾಗ ಛತ್ರಿ ಹಿಡ್ಕೊಂಡೋಗು ಅಂತ ಎಷ್ಟು ಸಾರಿ ಹೇಳಬೇಕು ನಿಂಗೆ? ’- ಬೈಗುಳದ ಸರಮಾಲೆ. ಆವತ್ತಿನಿಂದ ಕಿತ್ತಲೆ ಸಿಪ್ಪೆಯ ಪೇಸ್ಟು, ಮುಲ್ತಾನೀ ಮಿಟ್ಟಿ, ಅರಿಶಿನ ಮೊಸರು, ಅಮ್ಮ ಕೊಟ್ಟದ್ದನ್ನೆಲ್ಲ ವಿಧೇಯವಾಗಿ ಮುಖಕ್ಕೆ ಹಚ್ಚಿಕೊಂಡುಬಿಡಬೇಕು. ಇಲ್ಲದಿದ್ದರೆ ಕೂಗಾಟ ಶುರು. ತಲೆಕೆಟ್ಟುಹೋಗಿ ’ನಾನೂ ನನ್ನ ಯಾರೂ ನೋಡ್ಬೇಕಾಗಿಲ್ಲ!’ ಎಂದು ಎಗರಾಡುತ್ತಿದ್ದೆ. ಅಮ್ಮನೂ ಸೋಲೊಪ್ಪದೆ, ’ನಾನೇನೂ ಹಾಗ್ಹೇಳಿಲ್ಲ. ನೀವು ಹುಡುಗ್ರು ಈ ವಯಸ್ನಲ್ಲಿ ಆರೋಗ್ಯವಾಗಿ ಕಾಣಿಸ್ಕೋಬಾರ್ದೇನೆ? ಈಗಲೆ ಸೋಂಬೇರಿತನ ಮಾಡಿದ್ರೆ ಇಪ್ಪತ್ತೈದಕ್ಕೇ ಮುದುಕೀ ಥರ ಆಗೋಗ್ತೀ. ನನ್ಮಕ್ಳು ಹಾಗಿರೋದು ಮಾತ್ರ ಇಷ್ಟವಾಗಲ್ಲ!’ ಎಂದು ವಾದಿಸುತ್ತಿದ್ದರು. ನಗು ಬಂದು ಸುಮ್ಮನಾಗಿಬಿಡುತ್ತಿದ್ದೆ.

**
ಸ್ವೆಟರು ತೊಟ್ಟುಕೊಂಡು ಹೊರಗೆ ಹೋಗಿ ನಿಂತೆ. ಪಾರ್ಕಿನ ಬಳಿ ಯಾವುದೊ ಮರ ಚಳಿಗಾಲದಲ್ಲು ಹೂವರಳಿಸಿ ನಿಂತದ್ದು ಬೀದಿ ದೀಪದ ಬೆಳಕಿನಲ್ಲಿ ಹೊಳೆದು ನಕ್ಕಿತು. ನೋಡಿದರೆ ಸಂಪಿಗೆ. ಘಮ್ಮೆಂದು ಪರಿಮಳ ಮೂಗಿಗಿಳಿಯಿತು. ’ಏನೋ ತರಲೆ ನಡೆಸಿದೀಯ ನೀನು! ಕಣ್ಣಲ್ಲಿ ಭಾಳ ತುಂಟ್ತನ ಕಾಣ್ತಿದೆ. ನಂಗೆ ಗುಮಾನಿ.’ ಎಂದು ಗೆಳೆಯನೊಬ್ಬ ಮೊನ್ನೆ ಹೇಳಿದ್ದು ನೆನಪಾಗಿ ನಕ್ಕುಬಿಟ್ಟೆ. ಎಲ್ಲೋ ಓದಿದ್ದ ನಾಲಕ್ಕು ಸಾಲುಗಳು ನೆನಪಾಗಿ ಬಾಯಿಯಲ್ಲಿ ಗುಣುಗುಣಿಸಿದೆ: There is someone who would miss you if you were gone. There is some work that will never be done if you don’t do it. There is a place that you alone can fill.”

ಚಿತ್ರ: www.daypainter.com ನಿಂದ.

Advertisements

7 thoughts on “ನಗರದ ಗುಂಗು, ಅಕ್ಕರೆಯ ತಂಪು

 1. ಟೀನಾ ಅವರೇ,

  ಬದುಕಿನ ವ್ಯಾಸದೊಳಗೆ ಎಲ್ಲರಿಗೂ ಇಷ್ಟಿಷ್ಟೇ ಜಾಗವಿದೆ, ಅದಕ್ಕೆ ನಮ್ಮಂಥವರು ಒಪ್ಪುವುದಿಲ್ಲ, ನಾವೇ ಆಗಬೇಕು.
  ನಾಲ್ಕು ವಿಭಿನ್ನ ನೆಲೆಗಳನ್ನು ಇಟ್ಟ ಈ ಹರಟೆ ಚೆನ್ನಾಗಿದೆ. ಹಲವು ಬಗೆಯ ಹೂಗಳ “ಬೊಕೆ’ ಯಂತಿದೆ. ಅದರಲ್ಲೂ ಇಷ್ಟವಾಗಿದ್ದು ಗಝಲ್. ನನಗೆ ಗಝಲ್ ಎಂದರೆ ಇಷ್ಟ.
  ನಿಮಗೆ ಗಝಲ್ ಇಷ್ಟವೆಂಬಂತೆ ತೋರುತ್ತದೆ. ಆದರೆ ನಮ್ಮ ನಾಡಿನ ಪ್ರತಿಭೆ “ಗಝಲ್ ಗುಂಡಮ್ಮ’ ನವರ ಗಝಲ್ ಕೇಳಿ, ಚೆನ್ನಾಗಿದೆ.

  ನಾವಡ

 2. ನೀವು ಹೀಗೆ ಪದ್ಯಗಳನ್ನ ಕೋಟ್ ಮಾಡಿದಾಗಲೆಲ್ಲಾ ಹಾಸ್ಟಲ್ಗೆ ಹೊಗಿ ಆ ಪದ್ಯಗಳನ್ನ ಓದುತ್ತೇನೆ ಪದ್ಯಗಳ ಅರ್ಥ ಇನ್ನೂ ಸ್ಫುಟವಾಗತ್ತೆ…

 3. ನಗುವು ಸಹಜದ ಧರ್ಮ
  ನಗಿಸುವುದು ಪರ ಧರ್ಮ
  ನಗುವ ನಗಿಸುತ ನಗಿಸಿ
  ನಗುತ ಬಾಳುವ ವರವ
  ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ-
  ಎಂದವರು ಡಿ.ವಿ.ಜಿ. ಜೀವನವನ್ನು ನೋಡುವ ದೃಷ್ಟಿಯಲ್ಲಿ ನವಿರಾದ ಹಾಸ್ಯವನ್ನು ಬೆರೆಸಿಕೊಂಡು ಬಿಟ್ಟರೆ ಯಾವ ಕಷ್ಟಗಳೂ ನಮ್ಮನ್ನು ಕುಗ್ಗಿಸುವುದಿಲ್ಲ, ಅವಮಾನಗಳು ನಮ್ಮನ್ನು ನಿರ್ನಾಮ ಮಾಡುವುದಿಲ್ಲ. ಹಾಸ್ಯ ಶಾಕ್ ಅಬ್ಸಾರ್ವರ್‌ನಂತೆ ಆಘಾತಗಳನ್ನು ತಾಳಿಕೊಳ್ಳಬಲ್ಲ ಶಕ್ತಿಯನ್ನು ಕೊಡುತ್ತದೆ.
  ಕನ್ನಡದಲ್ಲಿ ವೈವಿಧ್ಯಮಯ ಹಾಸ್ಯಕ್ಕಾಗಿ ಮೀಸಲಾದ ಬ್ಲಾಗ್ ‘ನಗೆ ನಗಾರಿ ಡಾಟ್ ಕಾಮ್’.
  ವಿಳಾಸ: http://nagenagaaridotcom.wordpress.com/

  ದಯವಿಟ್ಟು ಒಮ್ಮೆ ಇಲ್ಲಿ ಭೇಟಿಕೊಡಿ. ನಿಮ್ಮ ಮುಖದ ಮೇಲೆ ತೆಳುನಗೆಯ ಗೆರೆ ಮೂಡದಿದ್ದರೆ ಕೇಳಿ. ಇಷ್ಟವಾದರೆ ನಿಮ್ಮ ಬ್ಲಾಗ್ ಫೀಡಿನಲ್ಲಿ ಇದನ್ನು ಸೇರಿಸಿಕೊಳ್ಳಿ, ಮೆಚ್ಚುಗೆಯಾದರೆ ನಿಮ್ಮ ಇತರೆ ಗೆಳೆಯ, ಗೆಳತಿಯರಿಗೆ ಇದರ ಬಗ್ಗೆ ತಿಳಿಸಿ.

  ನಗೆ ಸಾಮ್ರಾಟ್

 4. ನಾವಡರೆ,
  ಗಜಲ್ ಗುಂಡಮ್ಮನವರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದ. ಅವರ ಬಗ್ಗೆ ಮಾಹಿತಿ, ಅವರ ಗಜಲುಗಳು ಎಲ್ಲಿ ದೊರೆಯಬಹುದು ತಿಳಿಸುವಿರಾ?

  ಮಲ್ಲಿಕಾರ್ಜುನ,
  ಥ್ಯಾಂಕ್ಯೂ – ಓದಿದ್ದಕ್ಕೆ, ಮೆಚ್ಚಿದ್ದಕ್ಕೆ.

  ಮಲ್ನಾಡ್ ಹುಡ್ಗೀ,
  ನಾನು ಕವಿತೆಗಳ್ನ ಓದೋದು ರಾತ್ರಿ ಹೊತ್ತು. ಗಲಾಟೆ ಇಲ್ಲದಿದ್ದಾಗ. ತುಂಬ ಚೆನ್ನಾಗಿ ಅರ್ಥವಾಗೋದಷ್ಟೆ ಅಲ್ಲ ಹೊಸ ಹೊಸ ಇಂಟರ್ಪ್ರಿಟೇಶನ್ನುಗಳೂ ಹೊಳೀತವೆ!

  ಮಹೇಶ್,
  ಖಂಡಿತ ನೋಡ್ತೇನೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s