ಒಂದು ಆಟೋ ಪ್ರಸಂಗ.

rickshaw1.jpg

‘ಮೇಡಂ, ಇವತ್ತು ಯಾವ್ದಾರಾ ಸೇಠುಗಳ ಹಬ್ಬಾ ಐತಾ? ‘ ಯಾವುದೋ ಆಲೊಚನೆಯಲ್ಲಿ ಮುಳುಗಿದ್ದ ನಾನು ಗಡಸುದನಿಗೆ ಬೆಚ್ಚಿಬಿದ್ದೆ. ಸಿಗ್ನಲ್ಲಿನಲ್ಲಿ ಆಟೋ ನಿಂತಿತ್ತು. ಆಟೋಡ್ರೈವರು ನನ್ನ ಕಡೆಗೇ ನೋಡುತ್ತ ಇದ್ದರು. ‘ಪೇಪರಲ್ಲಿ ಅದೇನೋ ಜಯಂತಿ ಅಂತ ನೋಡಿದಹಾಗಿತ್ತು’ ಅಂದೆ. ‘ಅದೇ ನೋಡಿ, ಎಲ್ಲಾ ಮಾರವಾಡಿ ಅಂಗಡೀ ಮುಚ್ಚಿಬಿಟ್ಟಿದಾರಲ್ಲ!’ ಅಂದು ತನಗೆ ತಾನೇ ಸಂತಾಪ ಸೂಚಿಸುವವರ ಹಾಗೆ ‘ಹಿಂಸೆ ಕಣ್ರೀ ಮೇಡಮ್ಮಾರೇ’ ಎಂದರು. ನಾನು ‘ಅದ್ಯಾಕೆ? ಏನಾದ್ರೂ ಕೆಲ್ಸಾ ಇತ್ತ?’ ಕೇಳಿದೆ. ‘ಏನೇಳ್ಲಿ, ನೀವು ಮೂರ್ನೇ ಜನ. ಕಷ್ಟಾ ಸುಖಾ ಹೇಳಿಕೋಬೋದು. ನಮ್ಮ ಜನದ ಹತ್ರ ಇದ್ನೆಲ್ಲ ಹೇಳಕಾಗತ್ತ? ಆಡ್ಕಂಡು ನಗಾಡ್ತರೆ. ಕೈಲಾಗದೋನು ಅನ್ನುಸ್ಕೋಬೇಕಾಗತ್ತೆ ಅಲ್ವೆ?’ ಎಂದು ನಕ್ಕರು. ‘ನಂಗೆ ತಿಳೀಲಿಲ್ಲಪ್ಪ’ ಎಂದೆ. ‘ನಾನು ಈಗ ಸೊಲ್ಪ ಚಿನ್ನ ಅಡ ಇಡ್ಬೇಕಾಗಿತ್ತು ಮೇಡಂ. ಕೇಸು ನಡೀತಿದೆ. ಲಾಯರಿಗೆ ಫೀಸು ಕೊಡ್ಬೇಕಲ್ಲ.’ ಅಂದರು. ನನಗೆ ಸ್ವಲ್ಪ ದಿಗಿಲು. ಜತೆಗೇ ಕುತೂಹಲ. ‘ಕೇಸಾ? ಯಾಕೆ?’ ಅಂದೆ. ‘ನಂದಲ್ಲ ಮೇಡಂ. ನನ್ ಮಗಂದೂ ಅವುನ್ಹೆಂಡ್ರುದು. ಹೇಳ್ತೀನಿ ಕೇಳ್ರಿ.’ ಎಂದು ಒಂದು ರೀತಿಯಾಗಿ ನಕ್ಕು ತನ್ನ ಕಥೆ ಪ್ರಾರಂಭಿಸಿದರು.

‘ನನ್ಮಗಾ ಮೆಕ್ಯಾನಿಕ್ಕು. ವಯಸ್ಸಿಗೆ ಬಂದ. ಮದುವೆ ಮಾಡಿದ್ವಾ. ಹುಡುಗೀ ಕಡ್ಯೋರು ಸಿಕ್ಕಾಬಟ್ಟೆ ಗಲಾಟೆ ಪಾರ್ಟಿ. ನಮ್ಗೆ ಗೊತ್ತೇ ಇಲ್ಲ. ಮಾತಾಡಿದ್ರೆ ಜಗಳ. ಹುಡುಗೀ ಒಳ್ಯೋಳೇ. ಆದ್ರೆ ಏನ್ಮಾಡ್ತೀರಿ? ಅವುರ್ ಕಡೆಯೋರುದೇ ಕುತಂತ್ರ. ಪ್ರಗ್ನಂಟು ಅಂತ ತವುರ್ಮನೆಗೋದ್ಲು. ಗಂಡುಮಗೂ ಆಯ್ತು. ಬಾಣ್ತನಾನೂ ಆಯ್ತು. ವಾಪಾಸು ಬಾ ತಾಯಿ ಅಂತ ಕರಿಯೋಕೆ ಹೋದ್ರೆ ಅವ್ನಿಗೆ ನೀನು ನಮ್ಮೂರ್ಕಡೆ ಬಂದ್ಬುಟ್ಟು ಇರು ಇಲ್ಲೇ ಗ್ಯಾರೇಜು ಓಪನ್ ಮಾಡಿಸ್ಕೊಡ್ತೀವಿ ಅಂತಾರಂತೆ. ಇವ್ನು ಆಗಲ್ಲ ಅಂದು ಬಂದುಬಿಟ್ಟಿದಾನೆ. ಮತ್ತೊಂದು ದಿನಾ ಅಲ್ಲಿಗೋಗಿ ಅದು ನನ್ನೆಂಡ್ರು, ನನ್ಮಗು, ಕಳುಸ್ಕೊಡ್ತೀರೋ ಇಲ್ವೋ ಅಂತ ಅವಾಜು ಹಾಕಿದ್ದಕ್ಕೆ ಹಿಗ್ಗಾಮುಗ್ಗಾ ಹೊಡುದು ಕಳುಸಿದಾರೆ. ನಾವು ಸಲ್ಪ ದಿನ ಸುಮ್ನಿರು ಮಗ ಎಲ್ಲ ಸರಿ ಮಾಡನ ಅಂದ್ವು. ನೋಡಿದ್ರೆ ನೋಟೀಸು ಕಳುಸಿದಾರೆ. ನಾವು ಅವುಳಿಗೆ ಕಿರುಕುಳ ಕೊಟ್ವಂತೆ, ವರ್ದಕ್ಷಿಣೆ ಕೇಳಿದ್ವಂತೆ! ನೋಡ್ರಿ ಎಂಗಿದೆ. ನಾನಾರ ಮಾತು ಜಾಸ್ತಿ ಅಂತಿಟ್ಕಳಿ. ನಮ್ಮೆಂಗಸ್ರು ಆಕಳು ಆಕಳಿನಂತೋಳು. ಮಾತು ಭಾಳ ಕಮ್ಮಿ. ನಾನು ಆಗಿದ್ದಾಗ್ಲಿ ಅಂತ ನಮ್ಮ ಪೈಕಿಯೋನೇ ಒಬ್ಬ ಲಾಯರು ಹಿಡ್ದು ಎಲ್ಲ ನೋಡ್ಕೋತಿದೀನಿ. ಆಚೆ ಸೆಟ್ಲುಮೆಂಟು ಮಾಡಿ ಅಂತ ಮಾತು ಬಂತು. ಸರಿ ಅಂದೆ. ಸಿಕ್ಕಾಪಟ್ಟೆ ದುಡ್ಡು ಡಿಮ್ಯಾಂಡು ಮಾಡ್ತವ್ರೆ. ನಾವು ಎಲ್ಲಿಗೋಗನ? ಈಗ ನನ್ ಮಗನ್ನ ನೋಡುದ್ರೆ ಹೊಟ್ಟೆ ಉರಿಯತ್ತೆ. ದುಡುಕುಮುಂಡೇವು. ಮಾತಾಡಿದ್ರೆ ಉರ್ಕೊಂಡು ಬೀಳ್ತವೆ. ಈಗ ಏನ್ ತಿಳೀತದೆ? ಮುಂದಕ್ಕಿದೆ ಮುಸಲವಾರ್ರ ಹಬ್ಬ!’ ಎಂದು ಸುಮ್ಮನಾದರು. ಸಿಗ್ನಲ್ಲಿನಲ್ಲಿ ಹಸಿರುದೀಪ ಕಾಣಿಸಿತು. ವಾಹನಗಳ ಜಾತ್ರೆ ಮೆಲ್ಲನೆ ಮುಂದೆ ಹರಿಯಲು ತೊಡಗಿತು. ನನಗೇಕೋ ಆ ಮಾತು ಮುಂದುವರಿಸಲು ಮನಸ್ಸು ಬರಲಿಲ್ಲ. ಆದರೆ ಆತನಿಗೆ ಮಾತು ಬೇಕಿತ್ತು. ಯೋಚನೆ ಮಾಡಲು ಆತ ಬೆದರುತ್ತಿದ್ದ ಹಾಗೆ ಅನ್ನಿಸಿತು. ನಾನು ಮುಜುಗರದಿಂದ ಆಚೀಚೆ ನೋಡುವುದು, ಪೆಂಡಿಂಗ್ ಇದ್ದ ಎಸ್ಸೆಮ್ಮೆಸ್ಸುಗಳನ್ನು ಕಳಿಸುವುದು ಇತ್ಯಾದಿ ಮಾಡತೊಡಗಿದೆ.

ಆತ ಇದ್ದಕ್ಕಿದ್ದ ಹಾಗೆ ’ಮೇಡಂ, ನಾನೂ ಡಿಗ್ರಿ ಓದಿದೀನಿ. ನಂಗೂ ಇಂಗ್ಲೀಶು ಬರತ್ತೆ.’ ಅಂದರು. ನನಗೆ ನಗು.’ಅಲ್ರೀ ಸ್ವಾಮಿ, ಆಗಿನ ಕಾಲದಲ್ಲಿ ಡಿಗ್ರೀ ಓದಿ ನೀವ್ಯಾಕೆ ಈ ಲೈನಿಗ್ ಬಂದ್ರಿ?’ ಕೇಳಿದೆ. ’ಹಯ್ಯೋ ಡಿಗ್ರೀ ಬರೀ ಎರಡೊರ್ಷ ಓದಿದ್ದು. ಕನ್ನಡ. ಆಮೇಲೆ ಬಿಟ್ಟೆ. ಇಂಗ್ಲೀಷೆಲ್ಲ ನನ್ ಮಗಳಿಗೆ ಪಾಠ ಹೇಳ್ತ ಕಲ್ತಿದ್ದು. ಪ್ರಾಕ್ಟೀಸು ಮಾಡಣ ಅಂದ್ರೆ ಮಾತಾಡಕ್ಕೆ ಯಾರೂ ಸಿಗಲ್ಲ. ಏನ್ಮಾಡೋದು? ಅದೂ ಲಾಂಗ್ವೇಜು ಅಲ್ಲವ? ಬೆಂಗ್ಳೂರು ಪೇಟೇಲಿದೀವಿ. ಕಲ್ತುಕೋಬೇಕು ಅಂತ ಆಸೆ. ಓದಿಕೋತೀನಿ. ಆದ್ರೆ ಮಾತಾಡೋಕೆ ಭಯ. ತಪ್ಪಾದ್ರೆ?’ ಎಂದು ತಮ್ಮ ದುಗುಡ ವ್ಯಕ್ತಪಡಿಸಿದರು. ’ಯಾರಾದರು ನಂಥರ ಪ್ಯಾಸೆಂಜರುಗಳ ಹತ್ರ ಸ್ವಲ್ಪ ಸ್ವಲ್ಪ ಮಾತಾಡಿ. ಆಮೇಲೆ ಅದು ತಾನಾಗೇ ಬರತ್ತೆ. ಅಂದೆ.’ಅರೆ, ನೋಡಿ ನವರಂಗ್ ಬಂದೇಬಿಡ್ತು! ಇಲ್ಲಿಳ್ಕೊಂಡ್ರೆ ಕಾಫಿ ಡೇ ಕಡೆ ಒನ್ ವೇ. ಟೇಕ್ ರೈಟ್. ಯು ವಾಕ್ ಟೂ ಮಿನಿಟ್ಸ್. ಬೈಬೈ ಮೇಡಂ!’ ಅಂದು ನಕ್ಕರು. ದುಡ್ಡು ಕೊಟ್ಟು’ಥ್ಯಾಂಕ್ಯೂ ಸರ್! ಗುಡ್ ಡೇ!’ ಎಂದು ನಾನು ಕೈಬೀಸಿ ಕಾಫಿಹೌಸಿನ ಕಡೆಗೆ ನಡೆದೆ.

ಕಾಫಿ ಕುಡಿಯುತ್ತ ಕುಳಿತಿದ್ದೆ. ಲೇಖಕ ಸ್ನೇಹಿತರೊಬ್ಬರು ’ಅಲ್ರೀ, ರಾವಣನ ದೇಹ ಶ್ರೀಲಂಕದಲ್ಲಿ ಸಿಕ್ತಂತಲ್ರೀ!’ ಎಂದು ಫೋನಿನಲ್ಲಿ ಮಾತಾಡುತ್ತಿದ್ದರು. ನಾನು ’ಏ! ಅದ್ಹೆಂಗೆ?’ ಅಂದರೆ,’ಅಲ್ಲ, ನಾನು ಇವತ್ತು ಬೆಳಗ್ಗೆ ಬೆಂಗಳೂರಿಗೆ ಬಂದೆ. ಆಟೋನವನು ನ್ಯೂಸು ಗೊತ್ತ ಸಾರ್, ರಾವಣನ ತಲೆಯಿಲ್ಲದ ಬಾಡಿ ಯಾವುದೋ ಗುಹೇಲಿ ಸಿಕ್ಕಿದೆಯಂತೆ ಅಂದ. ನಿಮಗೆ ಹೇಳೋಣಾಂತ ಫೋನು ಮಾಡಿದೆ.’ ಎಂದು ಕುಚೇಷ್ಟೆ ಮಾಡಿ ನಕ್ಕರು. ಅವರಿಗೂ ಯಾರೊ ವಾಚಾಳಿ ಆಟೋರಾಜ ಸಿಕ್ಕಿರಬೇಕು ಅಂದುಕೊಂಡೆ.

Pic courtesy: www.counterjumper.com
 

Advertisements

6 thoughts on “ಒಂದು ಆಟೋ ಪ್ರಸಂಗ.

 1. ನನ್ನ ಅನುಭವದ ಪ್ರಕಾರ ಆಟೋದವರಷ್ಟು ಭಗ್ನಹೃದಯಿಗಳು ಬೇರೆ ಯಾರೂ ಇಲ್ಲ. ಇದನ್ನು ತಿಳಿಯಲು ಅವರ ಜೊತೆ ಮಾತನಾಡಬೇಕಾಗೂ ಇಲ್ಲ; ಆಟೋಗಳ ಬೆನ್ನುಡಿಗಳನ್ನು ಓದಿದರೆ ಸಾಕು. ಒಂದು sample: ವಿಷ ತುಂಬಿದ ಹಾವನ್ನಾದರೂ ನಂಬು, ಆದರೆ ಹೆಣ್ಣನ್ನು ನಂಬಬೇಡ!

 2. ಚಕೋರ, ಉಹುಂ, ಭಗ್ನರು ಎಲ್ಲ ಕಡೆಯೂ ಇದ್ದಾರೆ. ಆಟೋದವ್ರದ್ದು ಗೊತ್ತಾಗತ್ತೆ. ಬೇರೆಯವ್ರದ್ದು ಗೊತ್ತಾಗೊಲ್ಲ ಅಷ್ಟೆ.

  ಟೀನಾ ಮೇಡಂ ನಮಸ್ತೆ,
  ಅವತ್ತಿಂದ ಕೇಳ್ಬೇಕೂಂತ ಇದ್ದೆ .. ನೀವು ದಿನಾ ಕಾಫಿ ಕುಡಿಯೋದು ’ಕಾಫಿ ಡೇ’ನಲ್ಲೇನಾ? 😉 ಯಾಕಂದ್ರೆ ನಿಮ್ಮ ಸುಮಾರು ಬ್ಲಾಗ್ ಗಳು ಕಾಫಿಡೇ ನಲ್ಲೇ ಆರಂಭ, ಅಂತ್ಯ ಕಾಣುತ್ತವೆ !! 😉

 3. ಚಕೋರ,
  ಒಳ್ಳೆಯ ಅಬ್ಸರ್ವೇಶನ್

  ವಿಕಾಸ್
  ಇದೂ ಒಳ್ಳೇ ಅಬ್ಸರ್ವೇಶನ್!
  ಅಂದ ಹಾಗೆ, ನಾನು ದಿನಾ ಕಾಫಿಡೇನಲ್ಲೆ ಕಾಫಿ ಕುಡೀತೇನೆ ಅಂತ ನಾನು ಎಲ್ಲೂ ಹೇಳಿಧಾಗೆ ಕಾಣೆ! ಬರಿಯೋದು ನನ್ನ ಕೆಲಸ, ಅದನ್ನ ನಿಮಗೆ ಬೇಕಾದ ಹಾಗೆ ಅರ್ಥೈಸಿಕೊಳ್ಳೋದು ನಿಮಗ್ ಬಿಟ್ಟದ್ದು. ನನ್ನ ಕೆಲವು ಬರಹಗಳು ಕಾಫಿಡೇನಲ್ಲಿ ಹುಟ್ಟಿ ಅಲ್ಲಿಯೇ ಕೊನೆಗಂಡರೆ ತೊಂದರೆ ಏನಾದರು ಇದೆಯೆ?

 4. ನೀವು ಹೇಳಿಲ್ಲ, ನಿಮ್ಮ ಬರಹಗಳಿಂದ ಆ ರೀತಿ ಅನಿಸಿ ನಾನು ಸುಮ್ಮನೇ ಕುತೂಹಲದಿಂದ ಕೇಳಿದ್ದಷ್ಟೆ. dnt mind plz. ತೊಂದರೆಯಂತೂ ಏನೇನೂ ಇಲ್ಲ. ಎಲ್ಲಾದ್ರೂ ಹುಟ್ಲಿ, ಎಲ್ಲಾದ್ರೂ ಕೊನೆಯಾಗ್ಲಿ… ನಮಗೆ ಬರಹ ಮುಖ್ಯ 😉

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s