ನಾನು ನೋಡಲು ಯತ್ನಿಸಿದ ಒಂದು ದೆವ್ವ.

hosmerenight001-500x6911.jpg

Every one of us is a wonder. Every one of us has a story. – Kristin Hunter

’ಬೇರೆಯೋರದು ಹೇಗೊ ಏನೊ ಗೊತ್ತಿಲ್ಲ, ನಾನಂತು ಸಣ್ಣೋಳಿರೊವಾಗ ಕತೆ ಕೇಳಿದರೆ ಗಾಬರಿಬೀಳ್ತ ಇದ್ದೆ. ದೊಡ್ಡೋರು ದೆವ್ವ, ಪಿಶಾಚಿ, ರಾಕ್ಷಸರ ಕಥೆ ಹೇಳಿ ನಿದ್ದೆ ಮಾಡಿಬಿಡೋರು. ಹಾಳಾದ್ದು ನಮ್ಮ ನಿದ್ದೆ ಹಾರಿಹೋಗಿಬಿಡೋದು. ಮಂಚದಡೀಯಿಂದ ಯಾವಾಗ ಅವು ಎದ್ದುಬಂದು ನಮ್ಮನ್ನ ಮೂಟೇಕಟ್ಟಿಕೊಂಡು ಹೋಗಿಬಿಟ್ಟರೆ ಅನ್ನೊ ಭಯದಲ್ಲೆ ಕಾಲ ಕಳೀತಿದ್ವಿ. ದೊಡ್ಡೋರೇನೊ ಕತ್ತಲಾದಮೇಲೆ ಓಡಾಡಬಾರ್ದು, ದೆವ್ವ ಭೂತ ಅಂತ ಹೆದರಿಸಿಬಿಟ್ರು. ನಂಗೆ ಇವತ್ತಿಗೂ ಆ ಕತ್ತಲೂಂದರೆ ಭಯ. ಆ ಫೋಬಿಯಾದಿಂದ ಈಚೆ ಬರೋಕೇ ಆಗ್ತ ಇಲ್ಲ!’ ಸವಿತಾ ಮಾತಾಡುತ್ತಿದ್ದಳು. ಗೆಳೆಯನೊಬ್ಬ ತನ್ನ ಬಾಲ್ಯದ ‘ಬೆಡ್-ವೆಟಿಂಗ್’ (ನಿದ್ದೆಯಲ್ಲಿ ಹಾಸಿಗೆ ಒದ್ದೆ ಮಾಡುವುದು) ತೊಂದರೆ ಶುರುವಾಗಿದ್ದೆ ಇಂಥ ಭೂತಪ್ರೇತಗಳ ಕಥೆಗಳ ಭಯದಿಂದ ಎಂದು ಅನುಮೋದಿಸಿದ. ಮಕ್ಕಳ ಕತೆಗಳ ಮೇಲೆ ಚರ್ಚೆ ನಡೆಯುತ್ತ ಇತ್ತು. ಅಲ್ಲಿಯತನಕ ಮಕ್ಕಳಿಗೆ ಹೇಳುವ ಮಾಮೂಲು ಕತೆಗಳು ಆ ಥರದ ತಿರುವನ್ನೂ ಪಡೆಯಬಹುದು ಅಂದುಕೊಂಡಿರಲಿಲ್ಲ. ಅರೆರೇ, ಇನ್ನು ಮಕ್ಕಳಿಗೆ ಕಥೆ ಹೇಳುವದಕ್ಕೆ ಮುನ್ನ ಯೋಚನೆ ಮಾಡಬೇಕು ಅಂದುಕೊಂಡೆ. ನಾಳೆ ಅವು ‘ಅಮ್ಮ ಈ ಥರದ ಕಥೆ ಹೇಳಿ ನಾನು ಪರ್ಮನೆಂಟಾಗಿ ಗಾಬರಿ ಬಿದ್ದೆ,  ಸೈಕಾಲಜಿಕಲ್ ಫ್ಯಾಕ್ಟರು, ಅದು ಇದು ಬ್ಲಾಹ್ ಬ್ಲಾಹ್’ ಅಂತೆಲ್ಲ ನನ್ನ ಮೇಲೆ ಗೂಬೆ ಕೂರಿಸಿದರೆ!

ನನಗೆ ಕಥೆಗಳು ಯಾವಾಗಲು ಭಯಕ್ಕಿಂತ ಫ್ಯಾಂಟಸಿಗಳನ್ನ ಹುಟ್ಟುಹಾಕಿದ್ದೆ ಜಾಸ್ತಿ. ನಾವು ಒಂದಿಷ್ಠು ತರಲೆ ಮಕ್ಕಳ ಗುಂಪು. ಆಗ ನಮ್ಮ ಬೀದಿಯಲ್ಲಿ ಸುಮಾರು ಮೇಷ್ಟರುಗಳ ಕುಟುಂಬಗಳು ವಾಸವಾಗಿದ್ದವು. ಅವರುಗಳ ಮಕ್ಕಳಾದ ನಾವುಗಳು ಒಟ್ಟಿಗೆ ಕೂಡಿ ಆಡುವುದು ಪರಿಪಾಠ. ನಮ್ಮ ಮನೆಯ ಅಂಗಳ, ಹಿತ್ತಲು ವಿಶಾಲವಾಗಿದ್ದುದಲ್ಲದೆ ಸುಮಾರು ಕಾಫಿ, ಮಾವು, ಪೇರಲೆ, ಗೇರು, ಹಲಸಿನ ಹಳೆಯ ಮರಗಳಿದ್ದುದು ಮಕ್ಕಳಿಗೆ ಆಡಲು ಖುಶಿ. ಮನೆಯ ಮುಂದೊಂದು ಮಾವಿನ ತೋಪು. ಅಲ್ಲಿಯೂ ಬಹಳ ಹಳೆಯ ಹಣ್ಣಿನ ಮರಗಳು. ಅದು ಯಾರದೆಂದು ತಿಳಿದಿಲ್ಲವಾಗಿ ಅದು ಸಾರ್ವಜನಿಕ ಆಸ್ತಿಯಂತೆ ಉಪಯೋಗಿಸಲ್ಪಡುತ್ತ ಇತ್ತು. ಗಲ್ಲಿ ಕ್ರಿಕೆಟ್ ಮ್ಯಾಚುಗಳು, ಜೋಕಾಲಿಯಾಟ, ಕಣ್ಣಾಮುಚ್ಚಾಲೆ, ಮಾವಿನಮಿಡಿಗೆ ಕಲ್ಲುಬೀಸುವುದು, ಹಲಸಿನಕಾಯಿ, ಹಣ್ಣು ಕೀಳುವುದು – ಹೀಗೆ ಅಲ್ಲಿ ನಡೆಯುತ್ತಿದ್ದ ಚಟುವಟಿಕೆಗಳು ಒಂದೆರಡಲ್ಲ. ಅಲ್ಲಿ ಆಡಿಕೊಂಡು ಕಾಲ ಕಳೆಯುತ್ತಿದ್ದ ಮಕ್ಕಳು ಸೀನಿಯರುಗಳಾಗಿ, ಅವರ ಪುಟ್ಟ ತಂಗಿ ತಮ್ಮಂದಿರು ಅಲ್ಲಿ ಆಡಲು ಶುರುಮಾಡಿ ಕೊನೆಗೆ ಅವರ ಮಕ್ಕಳಾದ ಚಿಳ್ಳೆಪಿಳ್ಳೆಗಳು ತೋಪಿಗೆ ಆಡಲು ಬರುವುದು ಮಾಮೂಲಾಗಿಹೋಯಿತು. ಒಟ್ಟಿನಲ್ಲಿ ನಮ್ಮ ಮಂಗಾಟಗಳಿಗೆ ಹೇಳಿ ಮಾಡಿಸಿದ ಹಾಗಿದ್ದ ವಾತಾವರಣ. ಅದರಲ್ಲು ಬಿಸಿಲಿನಲ್ಲಿ ಆಡಿ ಬೇಸರವಾದಾಗ ಮರದ ನೆರಳಿಗೆ ಕೂತುಕೊಂಡು ರಾಶಿ ಮಾತನಾಡುವುದು ನಮ್ಮ ಮೆಚ್ಚಿನ ಟೈಂಪಾಸ್ ಕೆಲಸ. ಆ ಹೊತ್ತಿನಲ್ಲಿ ನಾನು ಕೇಳಿದ ಕಥೆಯೊಂದು ನನ್ನನ್ನು ಸುಮಾರು ದಿನಗಳತನಕ ಕಾಡಿದ್ದಂತು ನಿಜ.

’ಟೀನಾ, ನೀನಂತು ಹುಶಾರಾಗಿರು ಕಣೆ, ನಿಮ್ಮನೆ ಸರಿಯಾಗಿ ತೋಪಿನ ಮುಂದೇನೇ ಇದೆ!’ ಮಣಿ ತನ್ನ ಹೊಸ ಸಂದೇಶವನ್ನ ಸಾರಿದ. ’ಯಾಕೊ? ಏನಾಯ್ತು?’ ನಾನು ಕೇಳಿದೆ. ಮಣಿ ಇಂಥ ಮಾತುಗಳನ್ನು ಆಡುವದರಲ್ಲಿ ಭಾರಿ ಹುಶಾರು. ಆತನ ಇಮ್ಯಾಜಿನೇಶನ್ನಿಗೆ ಎಲ್ಲೆಯೆ ಇರಲಿಲ್ಲ. ನಾವು ಅವೇ ಆಟಗಳನ್ನ ಆಡೀ ಆಡೀ ಬೇಸತ್ತಾಗ ಮಣಿಯ ಮೊರೆಹೋಗುತ್ತಿದ್ದುದು. ಆತನ ಜೋಳಿಗೆಯಲ್ಲಿ ಯಾವುದಾದರೊಂದು ಹೊಸ ಆಟ ಇದ್ದೇ ಇರುವುದು. ಹೀಗೆ ತಾನು ಸಣಕಲಾಗಿದ್ದರು ನಮ್ಮೆಲ್ಲರ ‘ಅನಫಿಶಿಯಲ್ ಬಾಸ್’ ಆಗಿದ್ದ ಮಣಿಯ ಬಾಯಿಂದ ಬಂದ ಮಾತುಗಳು ಸಾಧಾರಣವೆಂದು ಪರಿಗಣಿಸುವ ಹಾಗೇ ಇರಲಿಲ್ಲ.’ಪ್ರತೀ ಹುಣ್ಣಿಮೇ ನಡೂರಾತ್ರಿ ತೋಪಿನ ಮಧ್ಯದಲ್ಲಿ ಆ ದೊಡ್ಡ ಹಲಸಿನ ಮರಾ ಇದೆಯಲ್ಲ, ಅಲ್ಲಿ ದೆವ್ವ ಬಂದು ಕುಣಿಯತ್ತಂತೆ. ಕುದುರೇ ಮೇಲೆ.’ ಮಣಿ ಮೂಗರಳಿಸಿಕೊಂಡು ಹೇಳಿದ. ಗೆಜ್ಜೇಕಟ್ಕೊಂಡು. ಡ್ಯಾನ್ಸು ಮಾಡುವ ದೆವ್ವ, ಅದೂ ನಮ್ಮ ಮನೆಯ ಮುಂದೆಯೇ! ವಾರೆವಾ! ನಮ್ಮ ಅರಳಿದ ಕಣ್ಣುಗಳು ಹಾಗೆಯೇ ಇರುತ್ತವೇನೋ ಅನ್ನಿಸಲು ಶುರುವಾಗಿತ್ತು. ’ಅದು ಯಾಕೆ ಡ್ಯಾನ್ಸು ಮಾಡುತ್ತೆ?’ ರಾಜು ಕೇಳಿದ. ಮಣಿ ಅವನನ್ನು ನಿಕೃಷ್ಟ ಪ್ರಾಣಿಯೆಂಬಂತೆ ನೋಡಿ, ’ಅದು ಒಬ್ಬ ಯಕ್ಷಗಾನದ ಹುಚ್ಚಿದ್ದವನ ದೆವ್ವ, ಸರಿಯಾಗಿ ಕ್ರಿಯಾಕರ್ಮ ನಡೀದಲೆ ಹೋಯ್ತಂತೆ, ಅದಕ್ಕೆ ಹೀಗೆಲ್ಲ ಆಡತ್ತೆ. ಸುಮಾರು ವರ್ಷವಾಯ್ತು ಅದಕ್ಕೆ ಶಾಂತಿ ಮಾಡಿಸಿ. ಅದಕ್ಕೇ ಹೀಗಾಡತ್ತೆ! ಅಷ್ಟೇ ಅಲ್ಲ, ಅದು ತನಗೆ ಇಷ್ಟ ಬಂದ ಹಾಗೆ ವೇಷಾನೂ ಚೇಂಜು ಮಾಡುತ್ತಂತೆ!’ ಎಂದು ಹೊಸ ಉಪಕಥೆಯೊಂದನ್ನು ಕೂಡ ಹೇಳಿದ. ಸೆಕೆಂಡು ಶೋ ಸಿನಿಮಾ ಮುಗಿಸಿಕೊಂಡು ತೋಪಿನ ಹಾದಿಯಾಗಿ ಬರುತ್ತಿದ್ದ ಬ್ಯಾರಿ ಹುಡುಗನೊಬ್ಬನಿಗೆ ಅದೇ ದೆವ್ವ, ಮೊದಲು ಬಿಳೀ ಕೋಳಿಪಿಳ್ಳೆಯಂತೆ, ಆಮೇಲೆ ಬಿಳೀ ನಾಯಿಯಂತೆ, ಆಮೇಲೆ ಬಿಳೀಸೀರೆಯುಟ್ಟ ಹೆಂಗಸಿನಂತೆ ಕಂಡು ಭ್ರಾಂತಿಯಾಗಿ ಜ್ವರಬಂದು ಆತ ಸಿನಿಮಾ ನೋಡುವದನ್ನೆ ಬಿಟ್ಟ ಭೀಕರ ಕಥೆ ಅದು. ಇನ್ನು ಆ ದೆವ್ವವನ್ನು ನೋಡಲೆಬೇಕು ಎಂದು ನಾನು ತೀರ್ಮಾನಿಸಿದೆ. ನನ್ನ ತಂಗಿ ‘ನೀನು ನೋಡಿ ನಂಗೆ ಎಬ್ಬಿಸು’ ಅಂದಳು.

ಮುಂದಿನವಾರ ಹುಣ್ಣಿಮೆ. ನಾನು ಮಲಗುವ ಕೋಣೆಯ ಕಿಟಕಿಯಿಂದ ತೋಪು ಕಾಣುತ್ತಿತ್ತು. ನಮ್ಮನ್ನು ಮಲಗಿಸಲು  ಶತಪ್ರಯತ್ನ ಮಾಡಿ ಬೇಸತ್ತು ಅಮ್ಮ ಎದ್ದುಹೋದರು. ನಾವು ಮಲಗಿದಂತೆ ನಾಟಕ ಮಾಡಿಕೊಂಡು ಕಿಟಕಿಯನ್ನು ಸ್ವಲ್ಪವೇ ವಾರೆಮಾಡಿಕೊಂಡು ಕಾಯತೊಡಗಿದೆವು. ಗಂಟೆ ಹನ್ನೆರಡಾಯಿತು. ತಂಗಿ ನಿದ್ದೆಹೋಗಿಬಿಟ್ಟಳು. ತೋಪಿನ ಮೇಲೆ ದಿವಿನಾದ ಅಚ್ಚಹುಣ್ಣಿಮೆ ಬೆಳಕು. ಜೀರುಂಡೆಗಳ ಗಾಯನ. ಜತೆಗೆ ದೆವ್ವದ ಕುಣಿತ ನೋಡಲು ನೀರವವಾಗಿ ಕಂಬಳಿ ಹೊದ್ದುಕೊಂಡು ಕಾಯುತ್ತಿದ್ದ ನಾನು. ದೆವ್ವವೇನೋ ಬರಲೆ ಇಲ್ಲ. ನಿದ್ರೆ ಮಾತ್ರ ಅದು ಯಾವಾಗ ಬಂತೊ ತಿಳಿಯದು. ’ಅದ್ಯಾಕೆ ಕಿಟಕಿಹತ್ರ ಕೂತು ನಿದ್ದೇ ಮಾಡ್ತಿದೀ?’ ಎಂದು ಯಾರೊ ತಿವಿದು ಎಬ್ಬಿಸಿದಾಗಲೆ ಎಚ್ಚರ. ವರ್ತನೆ ಹಾಲು ನೀಡಲು ಬಂದ ಮಣಿಗೆ ನಾನು ಕಾದ ವಿಚಾರ ಹೇಳಿದೆ. ’ಶೆ! ನೀನು ನಿದ್ರೆ ಮಾಡಬಾರದಾಗಿತ್ತು ಕಣೆ. ಅದು ಚರ್ಚಿನ ಹತ್ತಿರದ ಕಾಫಿತೋಟದ ಹತ್ತಿರ ನಿನ್ನೆ ರಾತ್ರಿ ಗಲಾಟೆ ಮಾಡ್ತಿತ್ತಂತೆ. ನಮ್ಮನೆಯ ಹತ್ತಿರ ದೊಡ್ಡ ಕಲ್ಲು ಎತ್ತಿಹಾಕಿತಂತೆ!’ ಅಂದ. ನಾನು ಇನ್ನು ಮುಂದಿನ ಹುಣ್ಣಿಮೆಯ ತನಕ ಕಾಯಬೇಕೆ ಎಂದು ಯೋಚನೆ ಮಾಡುತ್ತ ನಿರಾಶಳಾಗಿ ಕೂತೆ.

Pic courtesy: http://www.realcolorwheel.com 
 

Advertisements

12 thoughts on “ನಾನು ನೋಡಲು ಯತ್ನಿಸಿದ ಒಂದು ದೆವ್ವ.

 1. ದೆವ್ವಗಳಿವೆಯೋ ಇಲ್ಲವೋ ಚರ್ಚೆ ವಿಷಯ, ಆದ್ರೆ ಎಲ್ಲಾ ಮಕ್ಕಳ ಹಾಗೆ ನಾವೂ ಈ ವಿಷಯ ಬಗ್ಗೆ ಹೆದರಿದ್ದು, ಕಥೆ ಹೇಳಿಕೊಂಡದ್ದು, ಬೇಕಾದಷ್ಟಿದೆ. ಹಾಸ್ಟೆಲ್‌ನಲ್ಲಿದ್ದಾಗಲೂ ರಾತ್ರಿ ಚರ್ಚೆಗೆ ದೆವ್ವ ಒಳ್ಳೆಯ ವಿಷಯವೂ ಆಗಿತ್ತು:) ಅದೆಲ್ಲವನ್ನೂ ನಿಮ್ಮ ಲೇಖನ ಮೆಲುಕು ಹಾಕಲು ಸಹಾಯ ಮಾಡಿತು

 2. ಅಂತೂ ದೆವ್ವಕ್ಕೆ ನಿಮ್ಮ ದರ್ಶನ ಭಾಗ್ಯ ಸಿಗಲಿಲ್ಲ ಅಂತ ಆಯ್ತು. ತುಂಬ ಬೇಜಾರ್ ಮಾಡ್ಕೊಂಡಿರತ್ತೆ, ಬಿಡಿ. ಛೇ, ಪಾಪ…ನೀವು ಹೀಗೆ ಮಾಡ್ಬಾರ್ದಾಗಿತ್ತು:-)

 3. ನಿಮ್ಮ ಬರವಣಿಗೆಯ ಶೈಲಿ ಇಷ್ಟವಾಗುತ್ತದೆ. ತೋರಿಕೆ ಇಲ್ಲದ, ಕ್ರಿಸ್ಪ್‌ ಆದ ಸರಳ ಭಾಷೆಯಿಂದ ಓದುವ ಖುಷಿ ಇಮ್ಮಡಿಗೊಳ್ಳುತ್ತದೆ. ಹಾಗಿದ್ದೂ ಅತ್ಯಂತ ಚಿತ್ರವತ್ತಾಗಿರುವುದು ಅದರ ಹೆಗ್ಗಳಿಕೆ. ತೇಜಸ್ವಿಯ ಮೊದಲ ಸಂಕಲನದ ‘ಲಿಂಗ ಬಂದ’ ಕತೆಯ ಮೂಡ್‌ ನೆನಪಾಯ್ತು, ನಿಮ್ಮ ದೆವ್ವದ ಕತೆ ಓದಿ.ನಿಮ್ಮ ಬ್ಲಾಗಿನಲ್ಲಿ ಬಳಸುವ ಚಿತ್ರಗಳೂ ಚೆನ್ನಾಗಿರುತ್ತವೆ. ಥ್ಯಾಂಕ್ಸ್‌.
  ~ಅಪಾರ

 4. ನಿಮ್ಮ “ನಾನು ನೋಡಲು ಯತ್ನಿಸಿದ ಒಂದು ದೆವ್ವ” ಓದಿ, ನನಗೆ ನನ್ನ ಅಮ್ಮ ಅವಳು ಚಿಕ್ಕವಳಾಗಿದ್ದಾಗ, “ಭಯಂಕರ ಬೈರಾಗಿ ” ಎಂಬ ಪುಸ್ತಕ ಓದಿ ವಾರವೆಲ್ಲಾ ನಿದ್ದೆ ಇಲ್ಲದೇ ಕಳದಿದ್ದ ಘಟನೆ ನೆನಪಿಗೆ ಬಂತು. ಪಾಪ ನರಸಿಂಹರಾಜ ಪುರ ದ ದಟ್ಟವಾದ ಕಾಡಿನ ಮಧ್ಯ ದಲ್ಲಿದ್ದ Forest Department Quarters ನಲ್ಲಿ ಆಗ ಹತ್ತು ವರ್ಷದ ಹುಡುಗಿಯಾಗಿದ್ದ, ಅವಳು ಎಷ್ಟ್ಟು ಹೆದರಿರ ಬಹುದು ಎಂದು…..ಯೋಚಿಸುತ್ತಿದ್ದೇನೆ…

 5. Tina,
  Your writing style is convincing. If you are young (<25 years), stop writing now!. Start contemplating for a while. Try to have an altogether different and novel vision than what has been already written by many many writers in Karnataka.
  If you are more than 35, of course, there is no choice (for us as well)

  Goodluck
  Dr.D.M.Sagar

 6. ವೇಣು,
  ನಾನು ಈ ’ಹಾಸ್ಟೆಲ್ ದೆವ್ವ’ಗಳ ಬಗ್ಗೆ ಮರೆತೇಬಿಟ್ಟಿದ್ದೆ. ನಂಗೂ ಸುಮಾರು ಪ್ರಸಂಗಗಳು ನೆನಪಾದವು. ನಿಮಗು ಥ್ಯಾಂಕ್ಸ್!

  ಅಪಾರ,
  ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದ.

  ಪ್ರಸಾದ್,
  ಈಗ ನಾನು ಆ ’ಭಯಂಕರ ಬೈರಾಗಿ’ ಅನ್ನೋ ಪುಸ್ತಕವನ್ನ ಓದಬೇಕು ಅನ್ನಿಸುವ ಹಾಗೆ ಹೇಳಿದೀರಿ. ಈಗ ಆ ಪುಸ್ತಕ ಲಭ್ಯವಿಲ್ಲ ಅಂದುಕೋತೇನೆ. ಅಟ್ ಲೀಸ್ಟು ಅದರ ಕಥೇನಾದ್ರು ನಮಗೆ ಹೇಳಿ ಪ್ಲೀಸ್!

  Dr. D.M. Sagar,
  It’s not everyday that I get some serious advice like this regarding my writing in possible relation to my age!! What would you say If I am an octogenarian? For your information, I am niether influenced by any particular writer, nor do I wish to stop, brood and restart. I do not want to ‘try’ to be different, but to find if I have a distinctive style through my writings. This is the process of that discovery.

  Anyway, you have the ‘choice’ of not reading my writing if you choose to.
  Thank you. I liked your frank words.

  – ಟೀನಾ.

 7. ಮಧ್ಯಾನದ ಊಟ ಜಾಸ್ತಿಯಾಗಿ ಆಫಿಸ್ ಅಲ್ಲಿ ಕೆಲಸವಿಲ್ಲದೆ ತೂಕಡಿಕೆ ಶುರುವಾದಾಗ google ಅಲ್ಲಿ ದೆವ್ವ,ಭೂತ ಅಂತ ಹುಡುಕಿ
  ದೆವ್ವ ನೋಡೋಣ ಅಂತ ಇಲ್ಲಿ ಬಂದೆ,ಆದ್ರೆ ನೀವೂ ದೆವ್ವ ನೋಡಲಿಲ್ಲ ಅಂತ ಕೇಳಿ ಬೇಜಾರಾಯ್ತು 🙂
  ಬರಹದ ಶೈಲಿ ಹಿಡಿಸಿತು, ಓದಿಸಿಕೊಂಡು ಹೋಯಿತು.

  ರಾಕೇಶ್ ಶೆಟ್ಟಿ 🙂

  • ರಾಕೇಶ್,
   ನಾನು ದೆವ್ವ ನೋಡಿದೆ ಅಂತ ಎಲ್ಲಿ ಹೇಳಿದೆ?
   ನೋಡಲಿಕ್ಕೆ ಪ್ರಯತ್ನಿಸಿದೆ ಅಂತ ಮಾತ್ರ..
   ಇನ್ನೂ ಟ್ರೈ ಮಾಡ್ತಾನೇ ಇದೀನಿ!!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s