ಹೀಗೊಬ್ಬಳಿದ್ದಳು ‘ಗ್ಯಾಂಬಾ ಅಡೀಸಾ’

lorde1.gif

 ’ನನ್ನ ಲೈಂಗಿಕತೆ ನನ್ನ ಒಂದು ಅವಿಚ್ಛಿನ್ನ ಭಾಗ, ಹಾಗೂ ನನ್ನ ಕವಿತೆಗಳು ಹುಟ್ಟುವುದು ನನ್ನ ಹಾಗೂ ನನ್ನ ಪ್ರಪಂಚಗಳ ಮಿಲನದೆಡೆಯಿಂದ.. ಜೆಸ್ ಹೆಲ್ಮ್ಸನಿಗೆ ನನ್ನ ಬರೆಯುವಿಕೆಯ ಬಗೆಗಿರುವ ಆಕ್ಷೇಪ ಅಶ್ಲೀಲತೆ ಅಥವಾ ಸೆಕ್ಸಿನ ಕುರಿತಾದುದಲ್ಲ.. ಹೆಲ್ಮ್ಸ್ ಚೆನ್ನಾಗಿ ಬಲ್ಲ – ನನ್ನ ಬರವಣಿಗೆಯ ಗುರಿ ಆತನ ವಿನಾಶ, ಆತ ಬಿಂಬಿಸುವ ಪ್ರತಿಯೊಂದು ವಸ್ತುವಿನ ವಿನಾಶ.’

…1924ರಲ್ಲಿ ನ್ಯೂಯಾರ್ಕಿನ ಹಾರ್ಲೆಮ್ಮಿನಲ್ಲಿ ಹುಟ್ಟಿದ ಹೆಣ್ಣುಮಗಳೊಬ್ಬಳು ತನ್ನ ಬಗ್ಗೆ ವಿಪರೀತ ಕಟಕಿಯಾಡುತ್ತಿದ್ದ ವಿಮರ್ಶಕನೊಬ್ಬನಿಗೆ ಪ್ರತಿಕ್ರಿಯಿಸಿದ್ದು ಹೀಗೆ. ಆಕೆ ಆಡ್ರೆ ಲಾರ್ಡ್. ತನ್ನನ್ನು ತಾನೇ ಒಬ್ಬ ‘ಕಪ್ಪು, ಲೆಸ್ಬಿಯನ್, ತಾಯಿ, ಯೋಧ, ಕವಿ’ಯಾಗಿದ್ದ ಹೆಂಗಸೆಂದು ವರ್ಣಿಸಿಕೊಳ್ಳುತ್ತಿದ್ದ ಆಕೆ ತನಗೆ ಕೊಟ್ಟುಕೊಂಡಿದ್ದ ಇನ್ನೊಂದು ಹೆಸರು ‘ಗ್ಯಾಂಬಾ ಅಡೀಸಾ’ ಅಂದರೆ ‘ತನ್ನ ಅರ್ಥವನ್ನು ಎಲ್ಲರಿಗೂ ತಿಳಿಯಪಡಿಸುವ ಯೋಧಳು’ ಎಂದು ಅರ್ಥ. ಅಕೆಯ ಬರಹಗಳು ಹಾಗೂ ಕವಿತೆಗಳು ಹೆಣ್ಣಿನ ಒಳತಾಪವನ್ನು, ಕ್ರೋಧವನ್ನು ವ್ಯಕ್ತಪಡಿಸುತ್ತಲೇ ತಮ್ಮ ನವಿರಾದ ಸರಳ, ಸುಂದರ ಭಾಷೆ ಹಾಗೂ ಸಂಕೇತಗಳೊಡನೆ ಪ್ರೀತಿ ಮೂಡಿಸುತ್ತವೆ.

ಅಮೆರಿಕನ್ ಸಾಹಿತ್ಯದಲ್ಲಿ ಗೇ ಮತ್ತು ಲೆಸ್ಬಿಯನ್ ಸಾಹಿತ್ಯಕ್ಕೆ ಪ್ರಮುಖ ಸ್ಥಾನವಿದೆ. ಆದರೆ ಸಲಿಂಗಕಾಮಿಗಳ ವಿರುದ್ಧ ಹಿಂಸಾಚಾರ, ಹತ್ಯೆಗಳು ನಡೆಯುತ್ತಿದ್ದ ಎಪ್ಪತ್ತರ ದಶಕದಲ್ಲಿ ತನ್ನ ಲೈಂಗಿಕತೆಯನ್ನು ಬಹಿರಂಗವಾಗಿ ಸಾರಿ ಬದುಕುವ ಧೈರ್ಯ ತೋರಿದ ಮಹಿಳೆ ಆಡ್ರೆ ಲಾರ್ಡ್. ಆಫ್ರಿಕನ್ ಸಂಜಾತರನ್ನು ‘ನೀಗ್ರೋ’ಗಳೆಂದು ಕರೆಯುತ್ತಿದ್ದ ಕಾಲ ಅದು. ಆಕೆ ತನ್ನ ಆಫ್ರಿಕನ್ ವರ್ಣದ ಬಗ್ಗೆ ತನ್ನ ಕವಿತೆಗಳಲ್ಲೆಲ್ಲೂ ಡಂಗುರ ಹೊಡೆದು ಸಾರುವುದಿಲ್ಲ. ಆದರೆ ಆಕೆಯ ಕವಿತೆಗಳ ಮೂಳೆಮೂಳೆಯಲ್ಲೂ ಕಪ್ಪುವರ್ಣ ತುಂಬಿದೆ.

ಮೌಂಟ್ ವರ್ನಾನಿನ ಲೈಬ್ರೇರಿಯನ್ ಆಗಿ, ಮಿಸಿಸಿಪ್ಪಿಯ ಟೂಗಾಲೂ ಕಾಲೇಜಿನ ಲೇಖಕಿಯಾಗಿ, ಜಾನ್ ಜೇ ಕಾಲೇಜು ಮತ್ತು ಹಂಟರ್ ಕಾಲೇಜುಗಳ ಆಂಗ್ಲಸಾಹಿತ್ಯದ ಪ್ರೊಫೆಸರಳಾಗಿ ಕಾರ್ಯ ನಿರ್ವಹಿಸಿದ ಆಡ್ರೆ ಲಾರ್ಡ್ 1991ರಲ್ಲಿ ನ್ಯೂಯಾರ್ಕಿನ ‘ಪೊಯೆಟ್ ಲಾರಿಯೇಟ್’ ಸಮ್ಮಾನವನ್ನು ಪಡೆದುಕೊಂಡಳು. 1980ರಲ್ಲಿ ‘ಕಿಚನ್ ಟೇಬಲ್’ ಎಂಬ ಆಫ್ರೋ-ಅಮೆರಿಕನ್ ಮಹಿಳೆಯರ ಪ್ರೆಸ್ಸೊಂದನ್ನು ಸ್ಥಾಪಿಸಿದಳು. ತನ್ನ ಪ್ರೇಯಸಿ ಗ್ಲೋರಿಯಾ ಜೋಸೆಫಳೊಡನೆ ಕೊನೆಗಾಲದವರೆಗೂ ಬಾಳಿದ ಆಡ್ರೆ 1992ರಲ್ಲಿ ಕ್ಯಾನ್ಸರ್ ವ್ಯಾಧಿಯಿಂದ ಮರಣ ಹೊಂದಿದಳು. ಆಕೆ ಯಾವಾಗಲು ಮಹಿಳೆಯರಿಗೆ ಹೇಳುತ್ತ ಇದ್ದ ಮಾತು – ’ನಿಮ್ಮ ಮೌನ ನಿಮ್ಮನ್ನು ಎಂದಿಗೂ ಕಾಪಾಡದು’ (Your silence will not protect you.)

ಆಕೆ ಬರೆದ ನನ್ನ ಅತ್ಯಂತ ಪ್ರೀತಿಯ ಕವಿತೆ ‘ಫ್ರಂ ದ ಹೌಸ್ ಆಫ್ ಯೆಮಂಜಾ’ವನ್ನು ನಿಮಗೆ ಅನುವಾದಿಸಿ ನೀಡುತ್ತಿದ್ದೇನೆ.

ಯೆಮಂಜಾದ ಮನೆಯಿಂದ

ನನ್ನ ಅಮ್ಮನಿಗೆ ಇದ್ದದ್ದು ಎರಡು ಮುಖ ಮತ್ತು ಒಂದು ಬಾಣಲೆ
ಆಕೆಯ ಹೆಣ್ಣುಮಕ್ಕಳನ್ನು
ನಮ್ಮ ಊಟಕ್ಕೆ ಮುನ್ನ ಬೇಯಿಸಿ
ಹುಡುಗಿಯರನ್ನಾಗಿ ಮಾಡಲಿಕ್ಕೆ.
ನನ್ನ ಅಮ್ಮನಿಗೆ ಇದ್ದದ್ದು ಎರಡು ಮುಖ
ಮತ್ತು ಒಂದು ಮುರಿದ ಮಡಕೆ
ಆಕೆಯ ದೋಷರಹಿತ ಮಗಳನ್ನು ಮುಚ್ಚಿಟ್ಟುಕೊಳ್ಳಲು
ಅದು ನಾನಾಗಿರಲಿಲ್ಲ
ನಾನು ಆಕೆಯ ಕಣ್ಣಿಗೆ ಸೂರ್ಯ ಹಾಗೂ ಚಂದಿರ ಹಾಗೂ
ಕೊನೆಯಿರದ ಹಸಿವಿನವಳು.
ನನ್ನ ಬೆನ್ನ ಮೇಲೆ ಇಬ್ಬರು ಹೆಂಗಸರು
ಒಬ್ಬಳು ಕಪ್ಪಗೆ, ಪುಷ್ಟಿಯಾಗಿ ಇನ್ನೊಬ್ಬಳ
ದಂತದಂಥ ಬಿಳಿಹಸಿವುಗಳಲ್ಲಿ ಅಡಗಿರುವವಳು
ಅಮ್ಮ
ಮಾಟಗಾತಿಯಂತೆ ಬಿಳಿಚಿದ್ದಾಳೆ
ನೆಟ್ಟನಿಲುವು ಅವಳದು, ಆಪ್ತಳಿದ್ದಾಳೆ
ಆಕೆ ನನ್ನ ನಿದ್ದೆಯಲ್ಲಿ
ರೊಟ್ಟಿ ಹಾಗೂ ಆತಂಕವನ್ನು ತರುತ್ತಾಳೆ
ಆಕೆಯ ದೊಡ್ಡಮೊಲೆಗಳು ಮಧ್ಯರಾತ್ರಿಯ
ಬಿರುಗಾಳಿಗಳಲ್ಲಿ ತವಕವೇರಿಸುವ ಆಧಾರಸ್ತಂಭಗಳು.
ಇದೆಲ್ಲ ನಡೆದುಹೋಗಿದೆ
ಮೊದಲೇ
ನನ್ನ ತಾಯ ಹಾಸಿಗೆಯಲ್ಲಿ
ಸಮಯಕ್ಕೆ ಬುದ್ಧಿಯಿಲ್ಲ
ನನಗೆ ಸಹೋದರರಿಲ್ಲ
ನನ್ನ ಸಹೋದರಿಯರು ಕ್ರೂರಿಗಳು.
ಅಮ್ಮ ನನಗೆ ಬೇಕು
ಅಮ್ಮ ನನಗೆ ಬೇಕು
ಅಮ್ಮ ನನಗೆ ಬೇಕು ನಿನ್ನ ಕಪ್ಪುತನ ಈಗಲೆ
ಆಗಸ್ಟಿನ ಭೂಮಿಗೆ ಮಳೆ ಬೇಕಿರುವ ಹಾಗೆ.
ನಾನು
ಸೂರ್ಯ ಹಾಗೂ ಚಂದಿರ ಹಾಗೂ ಕೊನೆಯಿರದ ಹಸಿವಿನವಳು
ನಾನು ಒಂದು ಚೂಪಾದ ತುದಿ
ಅಲ್ಲಿ ಹಗಲು ಮತ್ತು ಇರುಳು ಕೂಡುವವು
ಆದರೆ ಎಂದಿಗೂ
ಒಂದಾಗವು.

pic courtesy: www.web.csustan.edu
 

8 thoughts on “ಹೀಗೊಬ್ಬಳಿದ್ದಳು ‘ಗ್ಯಾಂಬಾ ಅಡೀಸಾ’

  1. ’ನಿಮ್ಮ ಮೌನ ನಿಮ್ಮನ್ನು ಎಂದಿಗೂ ಕಾಪಾಡದು’

    ನಾನು
    ಸೂರ್ಯ ಹಾಗೂ ಚಂದಿರ ಹಾಗೂ ಕೊನೆಯಿರದ ಹಸಿವಿನವಳು

    ಹ್ಹ! ಈ ಅಕ್ಕಂದಿರನ್ನ ಅದೆಲ್ಲಿಂದ ಹಿಡ್ಕೊಂಡು ಬರ್ತೀಯೇ ತಾಯಿ!?

    – ಚೇತನಾ

  2. ಸುಧನ್ವ,
    Yeah, I was there! Were u? I was doing so much masti, I do not remember meeting you. Kindly refresh my memory. If we had met, I’d be only too glad to renew the acquaintance.

    ಚೇತ್,
    ಈ ಅಕ್ಕಂದಿರು ಅವರಾಗವರೆ ಮನೆಗೆ ಬಂದು ಕಿಟಕೀ ಹತ್ರದ ಜಗಲೀ ಮೇಲೆ ಕೂತು ಮಾತಾಡಿಸಿ ಹೋಗ್ತಿರ್ತಾರೆ!

  3. ಟೀನಾರೇ,

    ಭಾರೀ ಬರೀತೀರಿ. ಅನುವಾದ ಚೆನ್ನಾಗಿದೆ. ಗ್ಯಾಂಬಾ ಅಡೀಸಾ ಬಗ್ಗೆ ಓದಿರಲಿಲ್ಲ. ಪರಿಚಯಿಸಿದ್ದಕ್ಕೆ ಧನ್ಯವಾದ. ಹಲವರ ಅನುಮಾನ ಇನ್ನಷ್ಟು ಹೆಚ್ಚಾಗುತ್ತಿದೆ, ನನಗೂ ಸಹ. ನೀವು ಇಂಗ್ಲಿಷ್ ಟೀಚರ್ರಾ (ನಮ್ಮೂರಲ್ಲಿ ಶಾಲೆ ಎಂದರೆ ಅದರಲ್ಲಿ ಕಾಲೇಜು, ಡಿಗ್ರಿ ಎಲ್ಲವೂ, ಹಾಗೆಯೇ ಟೀಚರ್, ಮೇಸ್ಟ್ರು ಅಂದರೆ ಲೆಕ್ಚ್ರರರ್, ಪ್ರೊಫೆಸರ್ ಎಲ್ಲರೂ).
    ಏನೇ ಆಗಲಿ, ನಿಮ್ಮ ಅನುವಾದ ನನ್ನ ತಿಳಿವನ್ನು ಆಳವಾಗಿಸುತ್ತಿದೆ. ಧನ್ಯವಾದ.
    ನಾನು ಒಂದು ಚೂಪಾದ ತುದಿ
    ಅಲ್ಲಿ ಹಗಲು ಮತ್ತು ಇರುಳು ಕೂಡುವವು
    ಆದರೆ ಎಂದಿಗೂ
    ಒಂದಾಗವು.

    ಇಂಥ ಹಲವು ಸಾಲುಗಳು ಇಷ್ಟವಾದವು.
    ನಾವಡ

  4. ಟೀನಾ:
    ತುಂಬಾ ಸಹಜವಾದ ಅನುವಾದ. ನಾನು ನಿಮ್ಮ ಅನುವಾದವನ್ನು ಓದುತ್ತ, ಅದರ ‘reverse translation’ ಮಾಡುವ ಪ್ರಯತ್ನದಲ್ಲಿದೆ. ಗೊತ್ತಾಗಲಿಲ್ಲ; ಪ್ರಯತ್ನ ಕೈಬಿಟ್ಟು, ಮೂಲ ಪದ್ಯವನ್ನು ಹುಡುಕಿದೆ. ಅದನ್ನು ನೋಡುತ್ತಿದಂತೆ, “ಓ, ಇಷ್ಟೊಂದು ಸರಳವಾಗಿದೆಯಲ್ಲ!” ಅನ್ನಿಸಿತು. ಅಲ್ಲಿಂದ ಸಹಜವಾಗಿ ಇಲ್ಲಿಗೆ ಹರಿದು ಬಂದಿದೆ.

  5. ಆಡ್ರೆ ಲಾರ್ಡ್ ಬರೆದ ಮೂಲ ‘From the House of Yemanja’ ವನ್ನು ಓದಿದೆ. ಹಾಗೆ ಓದಲು ನಿಮ್ಮ ‘ಯೆಮಂಜಾದ ಮನೆಯಿಂದ’ ಕಾರಣವಾಯಿತು. ಧನ್ಯವಾದ. ಉತ್ತಮ ಭಾವಾನುವಾದ ನೀಡಿದ್ದಕ್ಕೆ..

  6. ಮಲ್ನಾಡ್ ಹುಡ್ಗೀ,
    You are welcome. The pleasure is mine!

    ನಾವಡರೆ,
    ಅದೇನು ಭಾರೀ ಬರೀತೇನೊ ಕಾಣೆ! ಬರೆದು ನಾನು ಹಗುರಾಗ್ತಿರೋದಂತೂ ನಿಜ! ನಿಮ್ಮ ಅನುಮಾನಾನ ಕ್ಲಿಯರ್ ಮಾಡಿಬಿಡ್ತೇನೆ. ನಾನು ಯಾವ ಸಬ್ಜೆಕ್ಟಿನ ಟೀಚರೂ ಅಲ್ಲ! ಸುಮ್ನೇ ಅಲೀತೇನೆ. ಬರೀತೇನೆ. ನಿಮ್ಮ ಕಮೆಂಟುಗಳು ಇನ್ನಷ್ಟು ಬರೆದು ಒಟ್ಟಲು ಸ್ಫೂರ್ತಿ ನೀಡ್ತಾ ಇರತ್ವೆ. ಥ್ಯಾಂಕ್ಸ್!

    ಚಕೋರ,
    ಈಗ ಮಾತನಾಡಲು ಶುರುಮಾಡಿದೇವೆ, ಅಲ್ಲವೆ! ನೀವು ಕೂಡ ಬಹಳ ಒಳ್ಳೆಯ ಅನುವಾದಕರು. I will expect some handpicked translations from you too! ಇದೇನು ಬೇತಾಳದ ಥರ ಬೆನ್ನು ಹತ್ತಿದಾಳೆ ಅಂದುಕೊಳೋವಷ್ಟು ಕಾಟ ಕೊಟ್ಟುಬಿಡ್ತೇನೆ ನಾನು.

    ತನ್ ಹಾಯೀ,
    ವಂದನೆ. ನಿಮ್ಮ ಬ್ಲಾಗ್ ಖುಶಿ ಕೊಟ್ಟಿತು.

    – ಟೀನಾ.

Leave a reply to Tina ಪ್ರತ್ಯುತ್ತರವನ್ನು ರದ್ದುಮಾಡಿ