ಲೈರಾ ಮತ್ತು ಚಿನ್ನದ ಕಾಂಪಾಸ್

golden_compass_ver21.jpg

’ನನ್ನ ಕವಚ ನನ್ನ ಆತ್ಮವಿದ್ದ ಹಾಗೆ.. ನಿನ್ನ ಆತ್ಮವಿದೆಯಲ್ಲ, ಅದನ್ನ ಬದಲಾಯಿಸೋಕೆ ಸಾಧ್ಯವೆ? ಹಾಗೇ ನನಗೂ ನನ್ನ ಕವಚವನ್ನ ಬದಲಾಯಿಸೋಕೆ ಆಗದು.’ ವಿಸ್ಕಿ ಕುಡಿಕುಡಿದು ತನ್ನ ನೋವು ಮರೆಯಲೆತ್ನಿಸುವ ‘ಲೊರೆಕ್ ಬರ್ನಿಸನ್’ ಎಂಬ ಹಿಮಕರಡಿ ಪುಟ್ಟ ಲೈರಾ ಬೆಲಾಕ್ವಾಳಿಗೆ ಹೇಳುತ್ತದೆ. ತನ್ನನ್ನು ದಿಟ್ಟಿಸುವ ಬಂದೂಕು ಹಿಡಿದ ಜಿಪ್ಸಿಯೊಬ್ಬನನ್ನು ’ಹಾಗ್ಯಾಕೆ ನೋಡ್ತೀಯ?’ ಎಂದು ಗುರುಗುಟ್ಟುವ ಲೈರಾ ಒಂದೇ ಕ್ಷಣದಲ್ಲಿ ನಮ್ಮ ಮನೆಯ ತುಂಟಹುಡುಗಿ ಹುಟ್ಟಿಸುವಷ್ಟೇ ಅಕ್ಕರೆ ಮೂಡಿಸುತ್ತಾಳೆ. ಆಕೆಯ ನಾಲಗೆಯೋ, ಚಾವಟಿ. ಅದರ ಮೇಲೆ ನಿಜವಲ್ಲದೆ ಇನ್ನೇನೂ ಬರದು. ಆಕೆಯ ಮೆದುಳು ಈಗಿನ ಕಾಲದ ಮಕ್ಕಳ ಹಾಗೆ – ಬಲು ಚಾಲಾಕು. ಹಾಗಾಗೇ ಲೊರೆಕ್ ಬರ್ನಿಸನ್ ತನಗೇ ಅರಿವಿಲ್ಲದ ಹಾಗೆ ಲೈರಾಳ ಜತೆ ಒಪ್ಪಂದ ಮಾಡಿಕೊಳ್ಳುತ್ತದೆ. ತಾನು ಲೈರಾಳ ಸಮಯಪ್ರಜ್ನೆಯಿಂದ ವಾಪಾಸು ಹಿಮಕರಡಿಗಳ ರಾಜನಾದ ಮೇಲೂ ’ನನ್ನ ಹೆಸರು ಇನ್ನುಮುಂದೆ ಲೊರೆಕ್ ಬೆಲಾಕ್ವಾ, ನಾನು ನನ್ನ ಕೈಲಾಗುವವರೆಗೂ ನೀನು ಹೇಳಿದಂತೆ ಕೇಳುವೆ!’ ಎಂದೆನ್ನುತ್ತದೆ. ಲೈರಾಳ ಪಾತ್ರವೇ ಅಂಥದು.  ಆಕೆ ಬರಿ ಪಾತ್ರವಾಗಿ ಉಳಿಯದೆ ನಮ್ಮ ಮನಸ್ಸುಗಳೊಳಗೆ ಅಚ್ಚೊತ್ತುವ ತುಂಟಹುಡುಗಿ.

ಫಿಲಿಪ್ ಪುಲ್ಮನ್ನನ ಮೂರು ಭಾಗಗಳ ಕಾದಂಬರಿ ‘ಹಿಸ್ ಡಾರ್ಕ್ ಮಟೀರಿಯಲ್ಸ್’ನ ಪ್ರಥಮ ಭಾಗ ‘ನಾರ್ದರ್ನ್ ಲೈಟ್ಸ್’ ಅನ್ನು ‘ದ ಗೋಲ್ಡನ್ ಕಾಂಪಾಸ್’ ಚಲನಚಿತ್ರವನ್ನಾಗಿ ಹೊರತಂದಿದ್ದಾರೆ. ‘ಹ್ಯಾರಿ ಪಾಟರ್’ ಹಾಗೂ ‘ದ ಲಾರ್ಡ್ ಆಫ್ ದ ರಿಂಗ್ಸ್’ ಚಲನಚಿತ್ರ ಸರಣಿಗಳ ಹಾಗೇ ಇದೂ ಮಕ್ಕಳಿಗಷ್ಟೇ ಅಲ್ಲ, ವಯಸ್ಕರಿಗೂ ಪ್ರಿಯವಾಗಬಲ್ಲ ಚಿತ್ರ. ಈ ರೀತಿಯ ಕಥೆಗಳನ್ನು ಸಾಹಿತ್ಯಪ್ರಪಂಚದಲ್ಲಿ ‘ಬಿಲ್ಡಂಗ್ಸ್ ರೊಮಾನ್’ ಎಂದು ಕರೆಯುವ ಸಂಪ್ರದಾಯವಿದೆ. ಇಲ್ಲಿ ನಾಯಕ ಅಥವಾ ನಾಯಕಿ ಬಾಲ್ಯದಿಂದ ಬೆಳೆಯುತ್ತ ಹಲವಾರು ಅನುಭವಗಳನ್ನು ಒಳಗೊಳುತ್ತ, ಪಾಠಗಳನ್ನು ಕಲಿಯುತ್ತ ಹೋಗುತ್ತಾರೆ. ಆದರೆ ಲೈರಾ ಮಾಮೂಲು ಹುಡುಗಿಯಲ್ಲ. ತನ್ನ ಅನುಭವಗಳನ್ನು, ತನ್ನ ಹಣೆಬರಹವನ್ನು ಅರಸಿ ಹೊರಡುವ ಹುಡುಗಿ ಅವಳು. ತನ್ನ ಕೆಲಸವಾಗಲು ಹೇಗೆ ಬೇಕಾದರು ಮಾತನಾಡುವ ಆಕೆಯನ್ನು ಲೊರೆಕ್ ‘ಲೈರಾ ಸಿಲ್ವರ್ ಟಂಗ್’ – ಬೆಳ್ಳಿನಾಲಗೆಯವಳು ಎಂದು ಕರೆಯುತ್ತದೆ. ಆಕೆ ಮುಗ್ಧಳಾದರು ತನ್ನ ಸುತ್ತಮುತ್ತಲ ಸನ್ನಿವೇಶವನ್ನು ಚೆನ್ನಾಗಿ ಅರಿತುಕೊಂಡು ಅದರಂತೆ ನಡೆಯುವವಳು. ಆಕೆಗೆ ಕೋಪ ಬಂದರೆ ಮಾತ್ರ ಆಕೆಯ ಎದುರಾಳಿಗೆ ಖೈರಿಲ್ಲದಿರುವುದು ಗ್ಯಾರಂಟಿ!

ಲೈರಾ ಅನಾಥೆ. ಆಕೆ ವಾಸವಿರುವುದು ಆಕ್ಸ್ ಫೋರ್ಡಿನ ಜೋರ್ಡಾನ್ ಕಾಲೇಜಿನಲ್ಲಿ, ಎಲ್ಲ ಮಹಾಪಂಡಿತರ ನಡುವೆ, ತನ್ನ ಚಿಕ್ಕಪ್ಪ ಲಾರ್ಡ್ ಏಸ್ರಿಯೆಲನ (ಡೇನಿಯೆಲ್ ಕ್ರೇಗ್) ಜತೆಗೆ. ಅವರ ಪ್ರಪಂಚವನ್ನು ‘ಮೆಜೆಸ್ಟೀರಿಯಂ’ ಎಂಬ ಅಧಿಕಾರಶಾಹೀ ಗುಂಪು ಆಳುತ್ತದೆ. ಅದರ ಗುಪ್ತಚರ ಸಂಸ್ಥೆಯಾದ ‘ಗಾಬ್ಲರ್’ಗಳು ನಿರ್ದಯಿಗಳು. ಇತ್ತೀಚೆಗೆ ಅವರು ಮಕ್ಕಳನ್ನು ಅಪಹರಿಸಿ ಅವರ ಮೇಲೆ ವಿಚಿತ್ರ ಪ್ರಯೋಗಗಳನ್ನು ನಡೆಸುತ್ತರುವರೆಂಬ ವದಂತಿ. ಲೈರಾಳ ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯನ ಜತೆಗೂ ಅವರ ಆತ್ಮವನ್ನು ಪ್ರತಿನಿಧಿಸುವ ಪ್ರಾಣಿಯೊಂದಿರುತ್ತದೆ. ಅದನ್ನು ‘ಡೀಮನ್’ ಎನ್ನುತ್ತಾರೆ. ಲೈರಾಳಿಗೆ ಆಕಾರ ಬದಲಾಯಿಸುವ ’ಪಾನ್’ ಹೆಸರಿನ ಡೀಮನ್ ಇದೆ.  ಲಾರ್ಡ್ ಏಸ್ರಿಯೆಲ್ ಹಲವಾರು ಗೋಪ್ಯತೆಗಳ ಸ್ವತಂತ್ರ ಮನಸ್ಸಿನ ಮನುಷ್ಯ. ಅವರ ಪ್ರಪಂಚಕ್ಕೆ ಸಮಾನಾಂತರವಾಗಿ ಇನ್ನೊಂದು ಪ್ರಪಂಚವಿದೆ. ಅಲ್ಲಿಗೆ ತೆರಳಲು ಬೇಕಾದ ಉತ್ತರಧ್ರುವದ ‘ಧೂಳು’ ಮತ್ತು ಅದರ ಸಾಧ್ಯತೆಗಳ ಬಗ್ಗೆ ಆತ ವಾದವೊಂದನ್ನು ಪಂಡಿತರೆದುರು ಮಂಡಿಸಿ ತನ್ನ ಯಾತ್ರೆಗೆ ಮೆಜೆಸ್ಟೀರಿಯಂನ ಅನುಮತಿ ಪಡೆದುಕೊಳ್ಳುತ್ತಾನೆ. ಈ ವೇಳೆಯಲ್ಲಿ ಆತನಿಗೆ ವಿಷವಿಕ್ಕುವ ಗಾಬ್ಲರ್ ಫ್ರಾ ಪಾವೆಲನಿಂದ ಏಸ್ರಿಯೆಲನನ್ನು ಪಾರುಮಾಡುವ ಲೈರಾಳಿಗೆ ‘ಧೂಳಿ’ನ ಬಗ್ಗೆ ತಿಳಿದು ತಾನೂ ಆತನ ಜತೆ ಹೊರಡುವೆನೆನುತ್ತಾಳೆ. ಏಸ್ರಿಯೆಲ್ ಖಡಾಖಂಡಿತವಾಗಿ ನಿರಾಕರಿಸಿಬಿಡುತ್ತಾನೆ. ಆದರೆ ಇದ್ದಕ್ಕಿದ್ದ ಹಾಗೆ ಕಾಲೇಜಿಗೆ ಭೇಟಿನೀಡುವ ಸುಂದರ ಶ್ರೀಮತಿ ಕೂಲ್ಟರ್ (ನಿಕೊಲ್ ಕಿಡ್ಮನ್) ತನ್ನ ಉತ್ತರಧ್ರುವದ ಪ್ರಯಾಣಕ್ಕೆ ಲೈರಾಳನ್ನೆ ಜತೆಗಾತಿಯಾಗಿ ಆಯ್ಕೆಮಾಡುತ್ತಾಳೆ. ಹೊರಡುವ ಮೊದಲು ಕಾಲೇಜಿನ ‘ಮಾಸ್ಟರ್’ ಒಬ್ಬಾತ ಆಕೆಯ ಕೈಯಲ್ಲಿ ಚಿನ್ನದ ಕಾಂಪಾಸನ್ನು ಕೊಟ್ಟು. ಅದು ನಿಜವನ್ನೇ ಹೇಳುವುದೆಂದೂ, ಅದನ್ನು ಗುಪ್ತವಾಗಿಟ್ಟುಕೊಳ್ಳಬೇಕೆಂದೂ ಸಲಹೆ ನೀಡುತ್ತಾನೆ. ಆ ಕಾಂಪಾಸನ್ನು ಓದಬಲ್ಲವಳು ಲೈರಾ ಮಾತ್ರ! ಲೈರಾಳ ಸಂತಸ ಶ್ರೀಮತಿ ಕೂಲ್ಟರಳ ವಿಚಿತ್ರ ಕ್ರೌರ್ಯದಿಂದಾಗಿ ನಲುಗಿಹೋಗುತ್ತದೆ. ಅಲ್ಲಿಂದ ಓಡಿಹೋಗುವ ಆಕೆಯನ್ನು ಜಿಪ್ಶಿಯನ್ನರು ರಕ್ಷಿಸಿ ತಮ್ಮ ಹಡಗಿನಲ್ಲಿ ಆಕೆಯನ್ನು ಕರೆದೊಯ್ಯುವುದಲ್ಲದೆ ಆಕೆಗೆ ಕಾಂಪಾಸನ್ನು ಉಪಯೋಗಿಸುವ ಬಗೆಯನ್ನು ತಿಳಿಸುತ್ತಾರೆ. ಮಾಟಗಾತಿಯರ ರಾಣಿ ಸೆರಾಫಿನಾ ಪೆಕಾಲಾ ಆಕೆಯನ್ನು ಸಂಧಿಸಿ ಮಾತನಾಡುತ್ತಾಳೆ. ಈ ವೇಳೆಯಲ್ಲೆ ಆಕೆಗೆ ಟೆಕ್ಸಾಸಿನ ‘ಹಾರಾಟಗಾರ’ ಲೀ ಸ್ಕಾರ್ಸ್ ಬೀ ಮತ್ತು ಲೊರೆಕ್ ಬರ್ನಿಸನ್ನನ ಪರಿಚಯವಾಗುತ್ತದೆ.

ಉತ್ತರ ಧ್ರುವದಲ್ಲಿ ಮಕ್ಕಳನ್ನು ಗುಪ್ತಜಾಗವೊಂದರಲ್ಲಿ ಬಚ್ಚಿಟ್ಟು ಮೆಜೆಸ್ಟೀರಿಯಂ ಅವರ ಮೇಲೆ ಹಲವಾರು ಕ್ರೂರ ಪ್ರಯೋಗಗಳನ್ನು ನಡೆಸುತ್ತಿದೆ. ಅಲ್ಲಿಗೆ ಬರುವ ಲೈರಾಳಿಗೆ ತನ್ನ ಸ್ನೇಹಿತರಾದ ರೋಜರ್ ಮತ್ತು ಬಿಲ್ಲೀ ಕೋಸ್ಟಾ ಅಲ್ಲಿ ಸೆರೆಯಾಗಿರುವುದು ಮತ್ತು ಬಿಲ್ಲೀಯ ಡೀಮನ್-ಆತ್ಮ ಇಂಥ ಪ್ರಯೋಗವೊಂದರಲ್ಲಿ ನಾಶವಾಗಿರುವುದು ತಿಳಿದುಬರುತ್ತದೆ. ಅಷ್ಟುಹೊತ್ತಿಗೆ ಪ್ರಯೋಗಶಾಲೆಯಲ್ಲಿ ಸೆರೆಯಾಗುವ ಲೈರಾಳಿಗೆ ಶ್ರೀಮತಿ ಕೂಲ್ಟರ್ ತಾನು ಆಕೆಯ ತಾಯಿಯೆಂದೂ ಏಸ್ರಿಯೆಲನೆ ಆಕೆಯ ತಂದೆಯೆಂದೂ ತಿಳಿಸುತ್ತಾಳೆ. ಏಸ್ರಿಯೆಲನ ಸಾವಿನ ಬಗ್ಗೆ ಮಾತನಾಡುತ್ತಿದ್ದ ಕೂಲ್ಟರ್ ತನ್ನ ತಾಯಿಯೆಂದು ನಂಬದ ಲೈರಾ ಆಕೆಗೆ ಜಖಮುಮಾಡಿ ಓಡಿಹೋಗುತ್ತಾಳೆ. ಇಡೀ ಪ್ರಯೋಗಶಾಲೆಯನ್ನೆ ನಾಶಮಾಡಿ ಇತರ ಮಕ್ಕಳೊಡನೆ ಪಲಾಯನಮಾಡುತ್ತಿರುವಾಗ ಮೆಜೆಸ್ಟೀರಿಯಂನ ಸೈನಿಕರು ಅಡ್ಡಬರುತ್ತಾರೆ…ಯುದ್ಧ ಆರಂಭವಾಗುತ್ತದೆ.. ಲೈರಾ ತನ್ನ ತಂದೆ ಲಾರ್ಡ್ ಏಸ್ರಿಯೆಲನನ್ನು ಉಳಿಸುವಲ್ಲಿ ಸಫಲಳಾಗುವಳೆ? ಚಿನ್ನದ ಕಾಂಪಾಸ್ ಆಕೆಯನ್ನು ಯಾವ ಪ್ರಪಂಚಗಳಿಗೆ ಕರೆದೊಯ್ಯಬಹುದು? ಮುಂದೆ ಏನಿದೆ? ತಿಳಿಯಬೇಕಿದ್ದರೆ ‘ದ ಗೋಲ್ಡನ್ ಕಾಂಪಾಸ್’ನ ಮುಂದಿನ ಭಾಗದವರೆಗೂ ಕಾಯಬೇಕು.

ಬಹಳ ಮುಗ್ಧವಾದ ಮಕ್ಕಳ ಪ್ರಪಂಚದಲ್ಲಿ ಆರಂಭವಾಗುವ ಚಿತ್ರಕಥೆ ಮುಗ್ಧವಾಗುಳಿಯುವುದಿಲ್ಲ. ಲೈರಾಳ ಪ್ರಪಂಚದಲ್ಲಿ ಭೋಳೆತನ ನಡೆಯದು. ಅಲ್ಲಿ ಹೆಜ್ಜೆಹೆಜ್ಜೆಗೂ ಅಪಾಯ. ಮೆಜೆಸ್ಟೀರಿಯಮ್ಮಿನ ಕೆಲಸಕಾರ್ಯಗಳು, ಐಡಿಯಾಲಜಿಗಳು ಜರ್ಮನಿಯ ನಾಜೀ ಆಳ್ವಿಕೆಯನ್ನು ಬಹಳವಾಗಿ ನೆನಪಿಸುತ್ತವೆ. ಏಸ್ರಿಯೆಲ್ ಮತ್ತು ಆತನ ಸ್ನೇಹಿತರ ಗುಂಪು ಸ್ವಾತಂತ್ರ್ಯ, ಹೊಸತನ ಹಾಗೂ ಮಾನವನ ಎಣೆಯಿರದ ಕುತೂಹಲವನ್ನು ಪ್ರತಿನಿಧಿಸಿದರೆ ಲೈರಾ ಮತ್ತವಳ ಸ್ನೇಹಿತರು ಯುವಜನಾಂಗ, ಅದರ ಆತಂಕಗಳು ಹಾಗೂ ಸಾಹಸೀ ಮನೋಭಾವವನ್ನು ಬಿಂಬಿಸುತ್ತಾರೆ. ಚಲನಚಿತ್ರದ ಸ್ಪೆಶಲ್ ಎಫೆಕ್ಟುಗಳು, ಅದರಲ್ಲೂ ಲೊರೆಕ್ ಬರ್ನಿಸನನ ಹಿಮಕರಡಿ ಕಾದಾಟ ಹಾಗೂ ಮೊಟ್ಟಮೊದಲ ಮೆಜೆಸ್ಟೀರಿಯಂ-ವಿರೋಧೀ ಯುದ್ಧ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿವೆ. ಲೈರಾಳ ಪಾತ್ರದ ಡಕೋಟಾ ಬ್ಲೂ ರಿಚರ್ಡ್ಸ್ ಭರವಸೆ ಮೂಡಿಸುತ್ತಾಳೆ.

Pic courtesy: www.impawards.com
 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s