ಕಾಫಿ ದಿನಗಳು.

fruit1.jpg(ಮೊನ್ನೆ ಸುಮಾರು ವರ್ಷದ ಮೇಲೆ ಚಂದ್ರಶೇಖರ್ ಅಂಕಲ್ ಸಿಕ್ಕಿದ್ರು. ಅವ್ರು ಯಾರಪ್ಪಾ ಅಂದ್ರೆ ನಮ್ಮಪ್ಪನ ದೋಸ್ತಿ. ನಾನೂ ಊರ್ಕಡೆ ಹೋಗೇ ಸುಮಾರು ಎಂಟು ವರ್ಷಾನೇ ಆಗೋಯ್ತು ಅಂತ ನೆನಪು ಬಂತು.. ಕಾಫಿನಾಡಿನ ಸ್ಟೈಲಿನಲ್ಲಿ  ’ಹೇಗಿದೆ ಅಂಕಲ್ ಕಾಫಿ ಈಸರ್ತಿ?’ ಅಂತ್ಕೇಳಿದೆ. ’ಕುಯ್ಸಿ ಒಣಗ್ಲಿಕ್ ಹಾಕಿದೆ. ಮಳೆ ಬಂದ್ರೆ ಎಲ್ಲ ತೋಯುತ್ತಲ್ಲ!’ ಅಂದ್ರು. ಆಗ ನೆನಪಾಗಿದ್ದು ಸಿಕ್ಕಿದ ಹಾಳೆಯಲ್ಲಿ ಮೂಡಿಸಿ ನಿಮಗೆ ಕೊಟ್ಟಿದೀನಿ. ಒಂದು ಕಪ್ ಕಾಫಿಯ ಜತೆ ಹೀರಿಕೊಳ್ಳಿ.)

 ಕಾಫಿ ಬಯಲು. ಅಂದರೆ ಹಿತ್ತಲು ಚಾಚುವಷ್ಟಕ್ಕೂನೂ, ಅಗೋ ಆ ಪಪ್ಪಾಯಿಮರದವರೆಗೂ ಉದ್ದೂಕೆ ಹರವಿದ ಕಾಫಿಹಣ್ಣುಗಳು. ಇನ್ನೂ ಮೂಗಿಗೆ ಅಡರುವ ಹಣ್ಣಿನ ಕಂದುಪರಿಮಳ. ಇನ್ನೊಂದುಚೂರು ಒಣಗಿದ ಮೇಲೆ ನಮಗೆ ಗಮ್ಮತ್ತು. ಅದರ ಮೇಲೆ ’ಕುವ್ವೋ!! ಕುಲಲಲಲಲೋ’ ಎಂದು ಗಂಟಲು ಹರಿವ ಹಾಗೆ ಕೂಗುತ್ತ ಓಡಿಹೋಗಬೇಕು, ಧಡಂ ಎಂದು ಜಾರಿಬೀಳಬೇಕು. ತರಚುಗಾಯ, ಮಂಡಿಪೆಟ್ಟು (ಮಂಡೆಪೆಟ್ಟು ಅಲ್ಲ!!) ಮಾಡಿಕೊಳ್ಳದಲೆ ಸಂಜೆ ಬಚ್ಚಲುಮನೆಗೆ ವಾಪಾಸು ಬಂದರೆ ಅವಮಾನ. ಕೆಪಿಜಿ ಮೇಷ್ಟ್ರ ಮಡದಿ ಹೂವಮ್ಮನವರು ’ಹಯ್ಯೊ ನಿಮ್ಮನ್ನ ನೋಡುದ್ರೆ ತಲ್ಕೆಟ್ಟು ಮೊಸರಾಗ್ತದೆ!!’ ಎಂದು ಆರ್ಭಟಿಸುತ್ತ ಇದ್ದರು ಅದನ್ನ ಜಮಾಖರ್ಚಿಗೆ ತೆಗೆದುಕೊಳ್ಳುವವರು ಯಾರು? ನಾವುಗಳಿಗೆ ಕಾಫಿಹಣ್ಣು ಕೊಯ್ಯುವ ಸೀಸನ್ನು ಬಂದರೆ ಬೇರೇನಾದರು ಕಣ್ಣಿಗೆ ಬಿದ್ದರೆ ತಾನೆ?

ಸುಮ್ಮನೆ ಬರುತ್ತ ಇರಲಿಲ್ಲ ಕಾಫಿ ಸೀಸನ್ನು. ಮೊದಲು ಕಾಫಿಹೂವಿನ ಪರಿಮಳದೊಂದಿಗೆ ಶುರುವಾದದ್ದು ಒರಳೊಳಗಿನ ‘ಕಾಪಿ’ ಕುಟ್ಟುವ ಪರಿಮಳದ ಜತೆಗೇ ಮುಗಿಯುವ ವಿಶೇಷ ಋತು ಅದು. ಒಂದು ಬೆಳಗ್ಗೆ ನಾವು ಎದ್ದಾಗ ಇದ್ದಕ್ಕಿದ್ದ ಹಾಗೆ ಕಾಫಿಗಿಡಗಳ ಕಡುಹಸಿರು, ತಿಳಿಹಸಿರುಗಳ ನಡುವೆ ಬೆಣ್ಣೆಮುದ್ದೆಗಳು ಕಾಣಿಸಿಕೊಂಡು ನಮಗೆ ವಿಸ್ಮಯ. ಮಾರನೆದಿನ ಕಳೆಯುವಷ್ಟರಲ್ಲಿ ಎಲ್ಲ ಹೂವುಗಳೂ ಅರಳಿಕೊಂಡು ತಲೆತಿರುಗುವ ಹಾಗೆ ಘಮ. ಹೂವುಗಳಿಗೆ ಸುತ್ತುಹಾಕುವ ಜೇನು ಹುಳ, ಕಣಜ, ಇರುವೆ, ಪುಟ್ಟ ಹಕ್ಕಿಗಳು ಇನ್ನೇನೇನೊ. ನಾವು ಅವನ್ನು ಮುಡಿದುಕೊಳ್ಳಲು ಯತ್ನಿಸಿದರೆ ಅಮ್ಮನ ಕೈಲಿ ಬೈಸಿಕೊಳ್ಳಬೇಕಾಗಿತ್ತು. ಯಾರಾದರು ನಾವು ಅವನ್ನು ಮೂಸುವುದನ್ನು ನೋಡಿದರು ’ಹುಳಪಳ ಇರ್ತವೆ, ನಿಂ ಮೂಗೋಳಗೆ ಹೊಕ್ಕು ಸೀದ ಮೆದುಳಿಗೆ ಹೋಗಿ ಅಲ್ಲಿ ಕೊರೆದು..’ ಎಂದೆಲ್ಲ ಅಸಹ್ಯ ಚಿತ್ರಣ ನೀಡಿ ನಮ್ಮನ್ನು ಜಾಗ ಬಿಟ್ಟೋಡುವ ಹಾಗೆ ಮಾಡುವಲ್ಲಿ ಯಶಸ್ವಿಯಾಗುತ್ತಿದ್ದರು. ಒಟ್ಟಿನಲ್ಲಿ ಕಾಫಿ ಹೂವುಗಳು ಕಾಣಿಸಿಕೊಂಡಾಗ ನಮಗೆ ಸಂಭ್ರಮ. ನಮ್ಮ ಕಾಯುವಿಕೆ ಆಗಲಿಂದಲೆ ಶುರು. ಕಾಫಿಕಾಯಿ ಹಸುರುಬಣ್ಣದಿಂದ ಕೆಂಪಗೆ ಆಗತೊಡಗಿದ ಹಾಗೆ ನಮ್ಮ ತಾಳ್ಮೆ ಕೂಡ ಕಡಿಮೆ ಆಗುತ್ತಿದ್ದುದು ಎಲ್ಲರ ಗಮನಕ್ಕೆ ಬರುತ್ತಿತ್ತು. ಅಮ್ಮ ಒಳಗೆ ಕಟ್ಟಿಟ್ಟ ಗೋಣಿಚೀಲಗಳನ್ನು ಬಿಸಿಲಿಗೆ ಹರವಿ, ಅಂಗಳಕ್ಕೆ ಸಗಣಿ ಬಳಿಸಿ ಒರಳನ್ನು ಅಂಗಳದ ಮಧ್ಯಕ್ಕೆ ಪ್ರತಿಷ್ಠಾಪನೆ ಮಾಡಿಸುತ್ತ ಇದ್ದರು.

ಕಾಫಿಹಣ್ಣು ಕೀಳುವ ಸೌಭಾಗ್ಯ ಎಲ್ಲರಿಗು ಲಭ್ಯವಾಗುತ್ತಿರಲಿಲ್ಲ. ನಾವು ಏನಿದ್ದರು ಪುಟ್ಟಪುಟ್ಟ ಚೀಲಗಳನ್ನು ಹಿಡಿದುಕೊಂಡು ಕೆಳಗೆ ಬಿದ್ದ ಹಣ್ಣುಗಳನ್ನು ಜಾಗ್ರತೆಯಾಗಿ ಆರಿಸಿಡಲು ರೆಡಿಯಾಗಿರಬೇಕಿತ್ತು. ಬೆಳಕೇ ಒಳನುಗ್ಗದ ಕಾಫಿತೋಟದ ಪುಟ್ಟಪುಟ್ಟ ಮರಗಳ ಗೆಲ್ಲುಗಳ ಮೇಲೆ ತಲೆಗೆ ಬಟ್ಟೆಸುತ್ತಿಕೊಂಡ ಅಮ್ಮನೂ ಇತರ ಆಳುಗಳೂ ಹತ್ತಿಕೂತು ಸರಸರನೆ ರಾಶಿರಾಶಿ ಹಣ್ಣುಕೀಳುವದನ್ನು ನೋಡುತ್ತ ನಾವು ಧನ್ಯರಾಗುತ್ತಿದ್ದೆವು. ಹಣ್ಣುಗಳನ್ನು ಹೆರಕುತ್ತ ನಮ್ಮ ಕೈಯಿಗಳೂ ಅಂಟಂಟಾಗಿಬಿಡುತ್ತಿದ್ದವು. ಮಧ್ಯಾಹ್ನ ಊಟಮುಗಿದ ಮೇಲೆ ಆಳುಗಳ ಕೈಗಳು ಸ್ವಲ್ಪ ನಿಧಾನವಾದರೂ ನಮಗೆ ಅದೇ ಉತ್ಸಾಹ. ನಾವೆಲ್ಲ ಮಕ್ಕಳು ಸೇರಿ ಒಂದು ಮರವನ್ನಾದರು ನಮ್ಮ ಸುಪರ್ದಿಗೆ ಒಪ್ಪಿಸಬೇಕೆಂದು ಹಠಮಾಡಲು ಆರಂಭಿಸಬೇಕೆಂದರೆ ಅದು ಸುಸಮಯ. ಅಮ್ಮ ಆಳುಗಳೊಡನೆ ಸಮಾಲೋಚನೆ ನಡೆಸಿ ದಪ್ಪಕಾಂಡದ ಅಷ್ಟೇನೂ ಹಣ್ಣುಗಳಿರದ ಪುಟ್ಟಮರವೊಂದನ್ನು ಆಯ್ಕೆಮಾಡುವರು. ‘ತಲೆ ಒಡಕೋಬೇಡಿ!’ ಎಂಬ ಎಚ್ಚರಿಕೆ ಬೇರೆ. ಆಮೇಲೆ ನಾವು ಹೆಮ್ಮೆಯಿಂದ ಮರಹತ್ತಿ ಆಕಾಶ ಕೆಂಪಾಗುವವರೆಗು ಆ ಮರವನ್ನೆ ತಬ್ಬಿಕೊಂಡು ಹಣ್ಣುಕೀಳುತ್ತ ಕುಳಿತಿರುವುದು.

ಒಣಗಿದ ಕಾಫಿಹಣ್ಣುಗಳನ್ನು ಕುಟ್ಟುವ ಕೆಲಸ ಲಕ್ಷ್ಮಿಯದು ಮತ್ತು ಸಗೀರಮ್ಮನದು. ಈರ್ವರೂ ಒಂದಿಷ್ಟು ಕಾಫಿಯನ್ನು ಒರಳಿಗೆ ಹಾಕಿ ಕೈಕೈ ಬದಲಾಯಿಸಿ ಒನಕೆ ಕುಟ್ಟುತ್ತ ಇದ್ದರೆ ನಮಗೆ ಅದೇನೊ ಒಂದು ನೃತ್ಯದಂತೆ ಕಾಣುತ್ತ ಇತ್ತು. ಅದರ ಜತೆಗೆ ಲಕ್ಷ್ಮಿಯ ನಗುವ ಮೂಗುನತ್ತು, ಎಲಡಿಕೆ, ಕಾಫಿಗಳ ಸಮಾರಾಧನೆ, ಗುಸುಗುಸು ಮಾತುಕತೆ, ಸಗೀರಮ್ಮನ ಒರಟು ರಟ್ಟೆಗಳು, ಕಾಫಿಬೀಜ ಕೇರುವ ಸದ್ದು, ಸಾರಿಸಿದ ಹಿತ್ತಲ ಅಂಗಳ – ಎಲ್ಲ ಸೇರಿಕೊಂಡು ಒಂದುರೀತಿ ಹಬ್ಬದ ವಾತಾವರಣ. ಎಲ್ಲ ಮುಗಿದು ಕಾಫಿಬೀಜಗಳು ರೆಡಿಯಾಗಿ ಗೋಣಿಚೀಲ ಸೇರುವಾಗ ನಮಗೆ ಏನೊ ಕಳಕೊಂಡಹಾಗೆ. ನಾನು ಹಿತ್ತಲಂಚಿನ ನನ್ನ ಕಾಫಿಗಿಡದ ಕೊಂಬೆಯ ಮೇಲೆ ವಿರಹಿಯ ಹಾಗೆ ಸುಮ್ಮನೆ ಪುಸ್ತಕ ಹಿಡಿದು ಜೀಕಾಡುತ್ತ ಕೂರುವದೋ, ತೋಟದ ಕಾಲುದಾರಿಯಲ್ಲಿ ಅಡ್ಡಾಡುವದೊ ಮಾಡಿಕೊಂಡಿರುತ್ತಿದ್ದೆ.

ನಾನು ಹೈಸ್ಕೂಲು ಓದುತ್ತಿದ್ದಾಗಲೆ ಕಾಫಿಗಿಡಗಳಿಗೆ ಏನೊ ರೋಗ ತಗುಲಿ ಎಲ್ಲವನ್ನೂ ಕಿತ್ತುಬಿಸಾಡಬೇಕಾಯಿತು. ಅಪ್ಪನಿಗೆ ಏಕೊ ಅವುಗಳ ಮೇಲೆ ಬರಬಾರದ ಬೇಸರ ಬಂತು. ಸರಿ. ಪೂರ್ತಿ ತೆಂಗಿನ ಸಸಿಗಳನ್ನು ನೆಡಿಸಿದರು.

ಚಿತ್ರಕೃಪೆ: www.yoppi.com  
 

Advertisements

7 thoughts on “ಕಾಫಿ ದಿನಗಳು.

  1. ಕಾಫಿ ಕುಯ್ಲಿನ ಸಮಯಕ್ಕೆ ಸರಿಯಾಗಿ ಬಂದಿದೆ, ನಿಮ್ಮ “ಕಾಫಿ ದಿನಗಳು”. ಅಡಿಕೆ, ಕಾಫಿ, ಅಥವಾ ಇನ್ನಾವುದೆ, ಬೆಳೆಯು ತೋಟ ಅಥವಾ ಗದ್ದೆ ಯಿಂದ ಮಾರುಕಟ್ಟೆ ಗೆ ಬರುವ, ಮೇಲ್ನೋಟಕ್ಕೆ ಯಾಂತ್ರಿಕ ವಾಗಿ ಕಂಡುಬರುವ, ಕ್ರಿಯೆಯೂ ಸಹ ಹತ್ತಿರದಿಂದ ನೋಡಿದವರಿಗೇ, ಅನುಭವಿಸಿದವರಿಗೆ ಎಷ್ಟ್ಟೆಲ್ಲಾ ನೆನಪು ಗಳನ್ನು ಮರುಕಳಿಸುವಂತೆ ಮಾಡಬಲ್ಲದು…….ಅನ್ನುವುದು, ಇದನೆಲ್ಲಾ ನೋಡಿದವರಿಗೇ, ಅನುಭವಿಸಿದವರಿಗೇ, ಮಾತ್ರ ಅರಿವಾಗಬಲ್ಲದು

  2. ಟೀನಾ ಅವರೆ…
    ಕೊನೆಯ ಎರಡು ಪ್ಯಾರಾ ಓದುವಾಗಲಂತೂ ಹಬ್ಬದ ವಾತಾವರಣದಿಂದ ಹೊರಬರುವಂತೆ ಮನ ಭಾರವಾಯಿತು. ಕೊನೆಯ ಸಾಲುಗಳನೋದುತ್ತ ಖಾಲಿ ಖಾಲಿ ಭಾವಗಳು. ಕಾಫಿ ಸುಗ್ಗಿಯ ದಿನಗಳನೋದುತ್ತಾ ಅಡಿಕೆ ಸುಗ್ಗಿಯತ್ತ ಮನ ಹೋಗಿ ಬಂತು. ನೀವು ಒಣಗಿದ ಕಾಫಿಯ ಮೇಲೆ ಓಡುತ್ತಿದ್ದಾಗ, ನಾ ನಮ್ಮನೆಯ ಹಿತ್ತಲಲ್ಲಿ ಒಣಹಾಕಿದ ಕೆಂಪಡಿಕೆಯ ಮೇಲೆ ಜಾರುತ್ತಿದ್ದೆ.
    ಸುಂದರ ನಿರೂಪಣೆ.

  3. ಆಫೀಸಿಗೆ ಬರುವಾಗ ಒಂಥರಾ ಮೂಡ್ ಇತ್ತು. ಬಂದು ಇದನ್ನು ಓದಿದವ್ನೇ ರೀಫ್ರೆಶ್ ಆದೆ. ನೆನಪಿನ ಮೆರವಣಿಗೆಯ ಸುಂದರ ಅನಾವರಣ. “ಚಿಕೋರಿ’ ಮಿಶ್ರಣ ಮಾಡದೇ ಬ್ರೀ “ಫಿಲ್ಟರ್’ ಕಾಫಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್.
    ನಾವಡ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s