ಎಲೆಮರೆಕಾಯಿಯಂಥ ಧೀರೆಯರು

“ಟೋಮೋ ಹಾಲುಬಿಳುಪು ಬಣ್ಣದ, ಉದ್ದನೆ ಕೇಶರಾಶಿಯುಳ್ಳ ಸುಲಕ್ಷಣೆ. ಆಕೆ ಒಬ್ಬ ಸದೃಢ ಬಿಲ್ಲುಗಾರ್ತಿಯಷ್ಟೇ ಅಲ್ಲ, ಕತ್ತಿವರಸೆಯಲ್ಲಿ ಆಕೆ ಸಾವಿರ ಯೋಧರೊಡನೆ ಒಮ್ಮೆಗೇ ಹೋರಾಡಬಲ್ಲವಳೂ, ಕುದುರೆ ಸವಾರಿ ಇಲ್ಲವೇ ಕಾಲ್ನಡಿಗೆಯ ಯಾವುದೇ ದೇವತೆ ಇಲ್ಲವೇ ರಾಕ್ಷಸನನ್ನು ಎದುರಿಸಬಲ್ಲವಳೂ ಆಗಿದ್ದಳು. ಆಕೆ ಕಾಡುಕುದುರೆಗಳನ್ನು ಚಾಣಾಕ್ಷತೆಯಿಂದ ಪಳಗಿಸುವವಳು ಹಾಗೂ ಎಂತಹ ಇಳಿಜಾರು ಕೊರಕಲುಗಳನ್ನು ಕೂಡ ಗಾಯಗಳಿಲ್ಲದೆ ಸುಗಮವಾಗಿ ಕುದುರೆಸವಾರಿ ಮಾಡುತ್ತ ಇಳಿಯಬಲ್ಲವಳು. ಯುದ್ಧದ ಸಂದರ್ಭ ಒದಗಿಬಂದಾಗ ಯೋಶಿನಾಕಾ ಆಕೆಯನ್ನು ತನ್ನ ಅಗ್ರ ಸೇನಾಪತಿಯನ್ನಾಗಿ ಕಳಿಸುವ. ದೊಡ್ಡ ಕತ್ತಿ, ಯುದ್ಧಕವಚ, ಸೊಗಸಾದ ಬಿಲ್ಲುಬಾಣಗಳೊಂದಿಗೆ ಸಜ್ಜಾಗಿ ಆಕೆ ಹೊರಡುತ್ತಿದ್ದಳು. ಯೋಶಿನಾಕಾನ ಇತರೆಲ್ಲ ಯೋಧರಿಗಿಂತ ಆಕೆಯ ಸಾಹಸಗಳ ಸರಣಿ ಉದ್ದವಾಗಿತ್ತು.”
                                             (ಟೇಲ್ ಆಫ್ ದ ಹೀಕೆ, ಮೆಕ್ಕಲ್ಲೋ, ಪು.291)

ಜಪಾನೀ ಸಮುರಾಯ್ ಯೋಧರ ಬಗ್ಗೆ ನಾವೆಲ್ಲರು ಕೇಳಿದ್ದೇವೆ, ಸಾಕಷ್ಟು ಚಲನಚಿತ್ರಗಳನ್ನು ನೋಡಿದ್ದೇವೆ ಕೂಡಾ. ಆದರೆ ಜಪಾನಿನಲ್ಲಿ ಹೆಣ್ಣುಮಕ್ಕಳು ಕೂಡ ಸಮುರಾಯ್ ದೀಕ್ಷೆ ಪಡೆಯುತ್ತಿದ್ದುದುಂಟು ಎಂದು ಹೆಚ್ಚಿನ ಜನಕ್ಕೆ ತಿಳಿದೇ ಇಲ್ಲ. ಇಂಥ ಧೀರೆಯರ ಬಗ್ಗೆ ಯಾವುದೇ ದಾಖಲೆ, ಮಾಹಿತಿಗಳು ಲಭ್ಯವಿಲ್ಲದಿರುವುದೂ ಕೂಡ ಈ ಬಗೆಗಿನ ಅವಜ್ಞೆಗೆ ಕಾರಣ ಇರಬಹುದು. ಜಪಾನೀ ಹೆಂಗಸು ಎಂದರೆ ನಮ್ಮ ಮನದಲ್ಲಿ ಮೂಡಿಬರುವುದು ರೇಷ್ಮೆ ಕಿಮೋನೋಗಳಲ್ಲಿ ಸುಂದರವಾಗಿ ಅಲಂಕರಿಸಿಕೊಂಡು, ಜಪಾನೀ ಛತ್ರಿ ಮತ್ತು ಬೀಸಣಿಕೆ ಹಿಡಿದುಕೊಂಡ ಚಿತ್ರಣಗಳೇ. ಆದರೆ ಕಳೆದ ಶತಮಾನದಿಂದ ಇತ್ತೀಚೆಗೆ ಜಪಾನೀ ಸಮರಕಲೆಯ ಬಗ್ಗೆ ಹೆಚ್ಚುತ್ತಿರುವ ಆದರ ಮತ್ತು ಅದನ್ನು ಕಲಿಯಲು ಮಹಿಳೆಯರು ತೋರುತ್ತಿರುವ ಆಸಕ್ತಿ ಈ ನಿಟ್ಟಿನಲ್ಲಿ ಲಭ್ಯವಿರುವ ಯಾವುದೇ ಕಥಾನಕಗಳ ಬಗೆಗೆ ಕುತೂಹಲ ಹುಟ್ಟಿಸಲು ಕಾರಣವಾಗಿದೆ. ಜಪಾನೀ ಚರಿತ್ರೆಯ ಯುದ್ಧಗಾಥೆಗಳಲ್ಲಿ (ಹೀಯನ್, ಕಾಮಾಕುರಾ, ಮುರೋಮಾಚಿ) ಕೂಡ ರಾಜಮನೆತನ ಹಾಗೂ ವೀರಯೋಧರ ಸಾಹಸಗಳಿಗೇ ಅಗ್ರಸ್ಥಾನ, ಈ ಕಥೆಗಳಲ್ಲಿ ಹೆಣ್ಣನ್ನು ಗಂಡನ ಸಾವಿನ ಸುದ್ದಿ ಕೇಳಿ ಪ್ರಾಣತ್ಯಾಗ ಮಾಡುವ ಸಾಧ್ವಿಯಾಗಿ, ಶತ್ರುವಿಗೆ ಸೆರೆಯಾಗುವ ಮಡದಿಯಾಗಿ, ತನ್ನ ಮಗನನ್ನು ಸೇಡುತೀರಿಸಲು ಬೆಳೆಸಲು ಬದ್ಧಳಾದ ವಿಧವೆಯಾಗಿ, ಇಲ್ಲವೇ ತನ್ನ ಚೆಲುವಿನಿಂದ ಶತ್ರುವಿನ ಮನಸೂರೆಗೊಂಡು ಮಗನ ಪ್ರಾಣಭಿಕ್ಷೆ ಪಡೆದು ಕೊನೆಗೆ ಶತ್ರುವಿಗೇ ಕುತ್ತಾಗುವ ಮಗನ ತಾಯಿಯಾಗಿ ಬಿಂಬಿಸಲಾಗಿದೆ. ಹೆಚ್ಚಾಗಿ ಸಂದರ್ಭಗಳಲ್ಲಿ ಹೆಣ್ಣನ್ನು ಸೆರೆಹಿಡಿಯುವುದೋ, ಅತ್ಯಾಚಾರ ಎಸಗುವುದೋ, ಕ್ರೂರವಾಗಿ ಬಲಿಹಾಕುವುದೋ ಎಷ್ಟು ಮಾಮೂಲು ವಿಷಯವಾಗಿತ್ತೆಂದರೆ ಕೆಲವೊಮ್ಮೆ ಕಥೆಯ ಹರಿವಿಗೆ ಅಡ್ಡಿಯಾಗುವುದೆಂದು ಅಂಥ ವಿಷಯಗಳನ್ನು ಕವಿಗಳು ಕಥನಕಾರರರು ಕಡೆಗಣಿಸಿಬಿಡುತ್ತಿದ್ದರು. ಇಂಥ ಸಂದರ್ಭದಲ್ಲಿ ಮಹಿಳಾಯೋಧರು ಬಹಳ ವಿಶೇಷವಾಗಿದ್ದರೂ ಅಪರೂಪವೇನಾಗಿರಲಿಲ್ಲ. ಬಹಳ ಕುಶಾಗ್ರಮತಿಗಳಾದ ಕೆಲವು ಮಹಿಳಾಯೋಧರ ಬಗೆಗೆ ಮಾತ್ರ ಜನಪದ ಕಥೆಗಳು ದೊರಕಿವೆ ಅವುಗಳಲ್ಲಿ ಟೋಮೋ ಗೋಜೆನ್ ಮತ್ತು ಹಂಗಾಕು ಗೋಜೆನ್ ಬಹಳ ಪ್ರಮುಖರಾದವರು.

naginata-woman.gif

ಹೆಚ್ಚಿನ ಜಪಾನೀ ಹೆಣ್ಣುಮಕ್ಕಳಿಗೆ ತಮ್ಮ ಮನೆಮಠ ಹಾಗೂ ಹೊಲಗದ್ದೆಗಳನ್ನು ಆಕ್ರಮಣಕಾರರಿಂದ ಕಾಪಾಡಿಕೊಳ್ಳಲು ‘ನಾಗಿನಾಟಾ’ ಎಂಬ ಆಯುಧ ಬಳಕೆಯ ತರಬೇತಿ ನೀಡಲಾಗುತ್ತಿತ್ತು. ನಾಗಿನಾಟಾ ಎಂದರೆ ಉದ್ದನೆಯ ಕೋಲೊಂದರ ತುದಿಗೆ ಮಚ್ಚುಗತ್ತಿ ಕಟ್ಟಿ ಬಿಗಿ ಮಾಡಿದ ಒಂದು ಆಯುಧ. ಇದನ್ನು ಹೆಚ್ಚಾಗಿ ‘ಬುಶಿ’ ಎಂಬ ಬಣದ ಹೆಂಗಸರು ಬಳಸುತ್ತಿದ್ದ ದಾಖಲೆಯಿದೆ. ಈ ಬಣದ ಹೆಂಗಸರು ಯುದ್ಧಕಲೆಯಲ್ಲಿ ಎಷ್ಟೊಂದು ಪಳಗಿದ್ದರೆಂದರೆ ಕೆಲವೊಂದು ಬುಶಿ ಹೆಂಗಸರು ತಮ್ಮ ಬಣಗಳಿಗೆ ನಾಯಕಿಯರಾದ ನಿದರ್ಶನಗಳಿವೆ! ನಾಗಿನಾಟಾ ಕುದುರೆಸವಾರರ ವಿರುದ್ಧ ಹೆಂಗಸರಿಗೆ ಬಹಳ ಉಪಯುಕ್ತವಾಗುತ್ತಿತ್ತು. ಆದರೆ ಟೋಮೋ ಮತ್ತು ಹಂಗಾಕು ಇದನ್ನು ಎಂದೂ ಬಳಸಲಿಲ್ಲ. ಟೋಮೋಳ ಕೊನೆಯ ಯುದ್ಧದ ಬಗ್ಗೆ ಹಲವಾರು ಕಥೆಗಳು ಹರಡಿವೆ. ತನ್ನ ದಳಪತಿ ಹಾಗೂ ಇನಿಯ ಯೋಶಿನಾಕಾ ಯುದ್ಧದಲ್ಲಿ ಸೋಲುವ ಪ್ರಸಂಗ ಒದಗಿದಾಗ ಟೋಮೊ ಆತನಿಗೆ ‘ಸೆಪ್ಪುಕು’ (ಹರಾಕಿರಿ – ಸಮುರಾಯ್ ಆತ್ಮಹತ್ಯೆ) ನಡೆಸಲು ಅವಕಾಶ ಮಾಡಲೋಸುಗ ಶತ್ರುಪಾಳೆಯಕ್ಕೆ ನುಗ್ಗಿ ಅಲ್ಲಿನ ಶಕ್ತಿಶಾಲಿ ಯೋಧನನ್ನು ಕುದುರೆಯಿಂದ ಎಳೆದು, ಕತ್ತಿ ಚುಚ್ಚಿ, ತಲೆ ತೆಗೆದಳಂತೆ. ಆದರೆ ಯೋಶಿನಾಕಾನಿಗೆ ಒಂದು ಬಾಣ ತಗುಲಿಬಿಟ್ಟಿತು. ಕೆಲವು ಕಥೆಗಳಲ್ಲಿ ಆಕೆ ಅದೇ ಯುದ್ಧದಲ್ಲಿ ವೀರಮರಣ ಹೊಂದಿದಳೆಂದು ಇದ್ದರೆ ಕೆಲವು ಕಥೆಗಳು ಆಕೆ ತಲೆ ಬೋಳಿಸಿಕೊಂಡು ಸನ್ಯಾಸಿನಿಯಾದಳೆಂದೂ, ಎಲ್ಲಿಯೋ ಕಣ್ಮರೆಯಾದಳೆಂದೂ ಹೇಳುತ್ತವೆ. ಇನ್ನೂ ಒಂದು ಕಥೆಯಲ್ಲಿ ಆಕೆ ತನ್ನ ಶತ್ರು ವಾಡಾ ಯೋಶಿಮೊರಿಗೆ ಸೆರೆಯಾಗಿ ಆತನಿಂದ ‘ಆಸಾಹಿನಾ’ ಎಂಬ ಮಗನನ್ನು ಪಡೆದಳೆಂದೂ, ಮುಂದೆ ಆತ ಜಪಾನಿನ ಪರಮೋಚ್ಛ ಯೋಧನಾಗಿ ಬೆಳೆದನೆಂದೂ ಹೇಳಲಾಗಿದೆ. ನಾಗಿನಾಟಾ ಸಂಪ್ರದಾಯ ಆಕೆಯನ್ನು ತಮ್ಮ ಮೂಲಯೋಧಳೆಂದು ಗೌರವಿಸುತ್ತ ಬಂದಿದ್ದರೂ ನಾಗಿನಾಟಾ ಚಾಲ್ತಿಗೆ ಬರುವ ಹಲವು ಶತಮಾನಗಳ ಮೊದಲು ಈಕೆ ಜೀವಿಸಿದ್ದಳೆನ್ನಲಾಗುತ್ತದೆ.

ಹಂಗಾಕು ಗೋಜೆನ್ ಇಚಿಗೋ ಪ್ರಾಂತ್ಯದ ‘ಜೋ’ ಮನೆತನದ ಮಗಳು. ಆಕೆಯ ಬಿಲ್ಲುಗಾರಿಕೆಯನ್ನು ಸರಿಗಟ್ಟುವವರು ಯಾರೂ ಇದ್ದಿಲ್ಲವೆನ್ನುತ್ತಾರೆ. ಕ್ರಿ.ಶ.1201 ರಲ್ಲಿ ಆಕೆಯ ಅಳಿಯನನ್ನು ಸರ್ಕಾರ ಮಟ್ಟಹಾಕಲು ಯತ್ನಿಸಿದಾಗ ಇಚಿಗೋ ಮತ್ತು ಶಿನಾನೋ ಪ್ರಾಂತ್ಯಗಳ ಯೋಧರು ಬಂಡೆದ್ದರು. ಆ ಸಮಯದಲ್ಲಿ ಇವರಿದ್ದ ಟೊಸಾಕಾ ದುರ್ಗವನ್ನು ಶತ್ರುಸೈನ್ಯ ಮುತ್ತಿತು. ಹಂಗಾಕು ಒಬ್ಬಳೇ ಉಗ್ರಾಣವೊಂದರ ಛಾವಣಿಯಿಂದ ಕಾದಾಡುತ್ತ ಶತ್ರುಗಳನ್ನು ಸುಮಾರುಕಾಲದವರೆಗೆ ಹಿಡಿದು ನಿಲ್ಲಿಸಿದ್ದಳಂತೆ! ಕೊನೆಗೆ ಎರಡೂ ಕಾಲುಗಳಿಗೆ ಬಾಣ ತಗುಲಿ ಗಾಯಾಳುವಾದ ಆಕೆಯನ್ನು ಸೆರೆಹಿಡಿದು ಶೋಗನ್ ಯೋರೀ ಎದುರು ಕರೆತರಲಾಯಿತು. ಆಗ ಆಕೆಯ ಅಪೂರ್ವ ಸೌಂದರ್ಯಕ್ಕೆ ಮರುಳಾದ ರಾಜಮನೆತನದ ಯೋಶಿಟೋ ಅಸಾರಿ ಆಕೆಯನ್ನು ಒಲಿಸಿ ಮದುವೆಯಾದನೆಂದು ಹೇಳಲಾಗುತ್ತದೆ. ಆಕೆ ಅದೇ ಕದನದಲ್ಲಿ ಶರಾಣಾಗಲೊಲ್ಲದೆ ವೀರಗತಿ ಹೊಂದಿದಳೆಂದೂ ಹೇಳುವ ಕಥೆಗಳಿವೆ.

ಇನ್ನೂ ನಮಗೆ ಹತ್ತಿರದ ಘಟನೆಗಳನ್ನು ಉದ್ಧರಿಸುವುದಾದರೆ 1877ರ ಸಾತ್ಸುಮಾ ದಂಗೆಯ ಬಗ್ಗೆ ಹೇಳಲೆಬೇಕಾಗುತ್ತದೆ. ಈ ದಂಗೆಯಲ್ಲಿ ಕಗೋಶಿಮಾದ ಹೆಂಗಸರು ರಾಜಮನೆತನದ ಸೈನ್ಯದ ವಿರುದ್ಧ ಹೋರಾಡಿದರು. ಅದಕ್ಕೂ ಮುನ್ನ 1868ರಲ್ಲಿ ಶೋಗನೇಟಿನ ಬೆಂಬಲಿಗರು ಹಾಗೂ ರಾಜಮನೆತನದ ಬೆಂಬಲಿಗರ ನಡುವೆ ಯುದ್ಧ ನಡೆಯಿತು. ಶೋಗನೇಟಿನ ಬೆಂಬಲಿಗರಾದ ಐಜು ಬಣದ ಸಮುರಾಯ್ಗಳು ತಮ್ಮ ‘ವಾಕಾಮತ್ಸು’ ದುರ್ಗವನ್ನು ಯಾವುದೇ ಹೊರಬೆಂಬಲ ಇಲ್ಲದೆ ರಕ್ಷಿಸಿಕೊಳ್ಳಬೇಕಾಯಿತು. ಶತ್ರುಸೈನ್ಯದಲ್ಲಿ 20.00 ಸೈನಿಕರು ಇದ್ದರೆ ಐಜುಗಳು ಕೇವಲ 3000 ಮಾತ್ರ! ಆಯುಧ ಬಳಸಬಲ್ಲ ಎಲ್ಲರೂ ಸೇನೆಗೆ ಸೇರಿಕೊಂಡರು. ಈ ಸಮಯದಲ್ಲಿ ನಿಷ್ಣಾತರಾಗಿದ್ದ ಇಪ್ಪತ್ತು ಮಹಿಳಾಯೋಧರು ಮುಂಚೂಣಿಯಲ್ಲಿದ್ದರಂತೆ. ಇವರ ಪೈಕಿ ನಾಗಿನಾಟಾ ಪರಿಣತಿ ಹೊಂದಿದ್ದ ‘ನಾಕಾನೊ ಟಕೆಕೊ’ ಎಂಬಾಕೆ ಶತ್ರುಗಳನ್ನು ತರಿತರಿದು ಹಾಕಿದಳಂತೆ! ಎದೆಗೆ ಬಾಣತಗುಲಿ ಗಾಯಾಳುವಾದಾಗ ಸೆರೆಸಿಕ್ಕಿ ಅವಮಾನವಾಗದಿರಲೆಂದು ತಂಗಿ ಯೂಕೋಗೆ ತನ್ನ ತಲೆಕಡಿದು ಮನೆಗೊಯ್ಯಲು ಹೇಳಿದಳಂತೆ. ಫುಕಿಶಿಮಾ ಪ್ರಾಂತ್ಯದ ಹೊಕಾಯ್ ಮಂದಿರದಲ್ಲಿ ಆಕೆಗಾಗಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಒಟ್ಟಿನಲ್ಲಿ ಈ ಅಪರೂಪದ ವೀರವನಿತೆಯರು ನಮ್ಮ ಝಾನ್ಸೀರಾಣಿ ಲಕ್ಷ್ಮೀಬಾಯಿ, ರಾಣಿ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ, ರಜಿಯಾ ಸುಲ್ತಾನ್, ರಾಣಿ ದುರ್ಗಾವತಿಯರಂತೆ ಜಪಾನಿನಲ್ಲಿ ಇಂದಿಗು ಸ್ಮರಿಸಲ್ಪಡುತ್ತಾರೆ.

ಚಿತ್ರ: ನಾಗಿನಾಟಾ ಹಿಡಿದ ಒಬ್ಬ ಹೆಂಗಸು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s