ಐಸ್ಕ್ಯಾಂಡಿಯ ಸುತ್ತಮುತ್ತಲ ಫಿಲಾಸಫಿ

ldh1.jpg

‘ಲೋ..ಲೋ..ಗಾಡಿ ನಿಲ್ಸೋ ಮಗಾ!’ ಅಂತ ಕಿರುಚಾಡಿದೆ. ತಮ್ಮ ಗಕ್ಕನೆ ಗಾಡಿ ನಿಲ್ಲಿಸಿ, ‘ಏನಾಯ್ತು?’ ಎಂದು ಗಾಬರಿಯಾದ. ಚಿಕ್ಕಮಗಳೂರ ಬೀದಿ. ‘ಅಲ್ನೋಡು ಐಸ್ಕ್ಯಾಂಡಿ ಮಾರೋನು!! ನಂಗೊಂದೇ ಒಂದು ಕೊಡ್ಸೋಲೇ! ಪ್ಲೀಸೋ!’ ಎಂದು ಗೋಗರೆದೆ. ಆಗಲೆ ಐಸ್ಕ್ಯಾಂಡಿಯವನ ಕಾಲಿಗೆ ಸುಮಾರು ಮಕ್ಕಳು ಅಮರಿಕೊಂಡಿದ್ದವು. ಅವನು ಅವನ್ನೆಲ್ಲ ಗದರುತ್ತ ಎಲ್ಲರ ಬಳಿಯೂ ತಪ್ಪದೆ ಚಿಲ್ಲರೆ ಕಾಸು ವಸೂಲಿ ಮಾಡುವ ಇಂಪಾಸಿಬಲ್ ಕೆಲಸದಲ್ಲಿ ಮಗ್ನನಾಗಿದ್ದ. ಎಲ್ಲ ಐಸ್ಕ್ಯಾಂಡಿ ಮಾರುವವರೂ ಹೀಗೇನೆ ಅನ್ನಿಸಿತು. ತಮ್ಮ ನನ್ನ ಅವಾಂತರಕ್ಕೆ ಕ್ಯಾಕರಿಸಿ ಉಗಿಯದೆ ನಕ್ಕ. ‘ಅದುಕ್ ನಿಲ್ಸು ಅಂದ್ಯಾ? ಮೆಂಟಲ್!’ ಎಂದು ಕ್ಯಾಂಡಿಯವನ ಕಡೆ ಗಾಡಿ ತಿರುಗಿಸಿದ. ನಾನು ಸುಮಾರು ಇಪ್ಪತ್ತು ವರುಷ ಹಿಂದೆ ಹೋದೆ.

ಶನಿವಾರ ಭಾನುವಾರಗಳು ಸಾಧಾರಣ ಎಲ್ಲ ತಂದೆತಾಯಂದಿರ ಪಾಲಿಗೆ ದುಃಸ್ವಪ್ನವಾಗಿದ್ದ ಕಾಲವದು. ಈಗಿನಂತೆ ರಜಾದಿನಗಳಲ್ಲಿ ಮಕ್ಕಳನ್ನು ಡ್ಯಾನ್ಸು, ಹಾಡು, ವಯೊಲಿನ್, ಗಿಟಾರ್ ಕ್ಲಾಸುಗಳಿಗೆ ದಬ್ಬುವಂತೆ ಇರಲಿಲ್ಲ. ಟೀವಿಯ ಹಾವಳಿ ಇನ್ನೂ ಊರಿಗೆ ಕಾಲಿಟ್ಟಿರಲಿಲ್ಲ. ಇಲ್ಲಾ ಮಕ್ಕಳನ್ನು ಮನೆಯಲ್ಲಿ ಇಟ್ಟುಕೊಂಡು ಅವುಗಳಿಂದ ನರಕಯಾತನೆ ಅನುಭವಿಸಬೇಕು, ಇಲ್ಲವೇ ಅವು ಸಿಕ್ಕಾಬಟ್ಟೆ ಆಟವಾಡಿ ಎಲ್ಲೆಲ್ಲೊ ಎದ್ದ್ದು ಬಿದ್ದು ತಮ್ಮ ಕಣ್ಣೆದುರೆ ಥೇಟು ಹಿಪ್ಪೀಗಳಾಗಿ  ಟ್ರಾನ್ಸ್ಫಾರ್ಮ್ ಆಗುವದನ್ನ ನೋಡಿ ಸಹಿಸಿಕೊಳ್ಳುವ ಕೆಪಾಸಿಟಿ ಬೆಳೆಸಿಕೊಳ್ಳಬೇಕು. ಅದರಲ್ಲು ಬೇಸಿಗೆರಜ ಬಂತೆಂದರೆ ನಮ್ಮ ಅಪ್ಪಮ್ಮಂದಿರ ಮನಸ್ಸುಗಳು ಅನುಭವಿಸುತ್ತಿದ್ದ ಆ ವೇದನೆಯನ್ನು ವರ್ಣಿಸಲು ಪದಗಳು ಸಾಲವು. ಬೇಸಿಗೆಯಲ್ಲಿ ನಾವು ಬಿಸಿಲೆನ್ನದೆ, ಹಗಲೆನ್ನದೆ, ಇರುಳೆನ್ನದೆ ಆಟವಾಡಿ ನಮ್ಮ ನಿಜವಾದ ಬಣ್ಣಗಳನ್ನು ಕಳೆದುಕೊಳ್ಳುವ ಸತತ ಶ್ರಮದಲ್ಲಿ ತೊಡಗಿಕೊಳ್ಳುತ್ತಿದ್ದೆವು. ನಮ್ಮ ತಾಯಂದಿರು ಸ್ನಾನದಮನೆಯಲ್ಲಿ ನಮ್ಮನ್ನು ಗುಂಜಿನಿಂದ ತಿಕ್ಕೀ ತಿಕ್ಕೀ ಆ ಬಣ್ಣವನ್ನು ವಾಪಾಸು ತರಿಸುವ ಸತತ ಪ್ರಯತ್ನ ಮಾಡುವರು. ನಮ್ಮ ಹಸಿವೆನ್ನುವುದಕ್ಕೆ ಕೊನೆಮೊದಲೇ ಇರಲಿಲ್ಲ. ಅಮ್ಮ ಬೇಸಿಗೆಯ ಎರಡು ತಿಂಗಳಿಗೆಂದು ಮಾಡಿಟ್ಟ ಡಬ್ಬಗಟ್ಟಲೆ ತಿಂಡಿ ವಾರ ಕಳೆವಷ್ಟರಲ್ಲಿ ಮಂಗಮಾಯ! ಹಿತ್ತಲಲ್ಲಿ ಬೆಳೆದ ದೊಡ್ಡ ಬಾಳೆಯ ಗೊನೆ ಮೂರೇ ದಿನದಲ್ಲಿ ಖಾಲಿ! ಅರ್ಧಗಂಟೆಗೊಮ್ಮೆ ಮರುಕಳಿಸುವ ನಮ್ಮ ಹಸಿವುಗಳು! ನಮ್ಮ ಹಾಹಾಕಾರಗಳು! ಯಾರಾದ್ರು ಕೇಳಿದ್ರೆ ’ಇವಕ್ಕೆ ಹೊಟ್ಟೆಗೇ ಹಾಕ್ತಿಲ್ಲ ಅನ್ಕೋಬೇಕು. ಎಲ್ರ ಮನೇಲಿ ನಮ್ಮಕ್ಕಳು ತಿನ್ನಲ್ಲಾ, ತಿನ್ನಲ್ಲಾ ಅಂದರೆ ನಾನು ನನ್ಮಕ್ಕಳು ತಿಂತಾರೇ, ತಿಂತಾರೇ ಅಂತ ಚಿಂತೆ ಮಾಡ್ತೀನಿ’ ಎಂದು ಅಮ್ಮ ಹುಸಿಕೋಪ ತೋರುತ್ತ ಹೇಳುವರು. ನಾವು ಎಷ್ಟೇ ಏನೇ ತಿಂದರು ಸೀಕಲಕಡ್ಡಿ ಸುಗುಟಿಯರಾಗೇ ಉಳಿದಿದ್ದುದು ಪ್ರಕೃತಿಯ ಒಂದು ವಿಸ್ಮಯ.

ಇಂಥಾ ಬೇಸಿಗೆಯ ಮಧ್ಯಾಹ್ನಗಳಲ್ಲಿ ಗಂಟೆಯ ಶಬ್ದ ಕೇಳಿದೊಡನೆ ನಮ್ಮ ಕಿವಿ ನಿಮಿರುತ್ತಿದ್ದವು. ’ಐಸ್ಕ್ಯಾಂಡೀಈಈ..ಐಸ್ ಐಸ್..’ ಎಂಬ ಆ ಕೂಗು ನಮ್ಮ ಕಿವಿಗಳಿಗೆ ಎಷ್ಟು ಅಪ್ಯಾಯಮಾನವಾಗಿತ್ತೊ, ಹಿರಿಯರ ಪಾಲಿಗೆ ಅಷ್ಟೇ ಕರ್ಣಕಠೋರವಾಗಿ ಪರಿಣಮಿಸುತ್ತಿತ್ತು. ನಮ್ಮ ಸ್ಟ್ರಾಟಜಿಗಳು ಆ ನಿಮಿಷದಿಂದ ಅತಿವೇಗವಾಗಿ ಕಾರ್ಯರೂಪಕ್ಕೆ ಬರುತ್ತಿದ್ದವು. ನಮ್ಮ ಮನೆಯಲ್ಲಿ ಮೂವರು ಐಸ್ಕ್ಯಾಂಡಿಪ್ರಿಯ ಮರಿಪಿಶಾಚಿಗಳಿರುವುದು ಐಸ್ಕ್ಯಾಂಡಿಯವನಿಗೂ ತಿಳಿದಿತ್ತು. ಎಂತಲೇ ಆತ ನಮ್ಮ ಮನೆಯ ಗೇಟಿನೆದುರು ಭದ್ರವಾಗಿ ಪ್ರತಿಷ್ಟಾಪಿತನಾಗಿಬಿಡುತ್ತಿದ್ದ. ಆತನ ಕಡೆಗೊಂದು ಭರವಸೆಯ ನೋಟವನ್ನೆಸೆದು ನಾವು ಅಡಿಗೆಮನೆಯಕಡೆಗೆ ಓಟಕೀಳುತ್ತಿದ್ದೆವು. ಅಲವತ್ತುಕೊಳ್ಳುವ ಪ್ರಶ್ನೆಯೇ ಇಲ್ಲ. ನಮ್ಮ ಕಿರುಚಾಟಗಳು ಎಷ್ಟು ಭಯಂಕರವಾಗಿರುತ್ತಿದ್ದವೆಂದರೆ ನಮ್ಮ ಕಾಟ ತಪ್ಪಿಸಿಕೊಳ್ಳಲು ದುಡ್ಡು ಬಿಚ್ಚದೆ ಬೇರೆ ದಾರಿಯೇ ಇರಲಿಲ್ಲ. ಆಮೇಲೆ ನಮ್ಮಮ್ಮನೂ ‘ಗುಪ್ತ ಐಸ್ಕ್ಯಾಂಡಿಪ್ರಿಯೆ’ಯಾದ್ದರಿಂದ ಆಗೀಗ ಅವರಿಗು ನಮ್ಮ ಮೇಲೆ ಕರುಣೆ ಉಕ್ಕುತ್ತ ಇತ್ತೆನ್ನಿ. ದುಡ್ಡಿಸಿದುಕೊಂಡು ಗಾಡಿಯ ಕಡೆಗೆ ಓಟ. ಗಾಡಿಯೆಂದರೆ ಒಂದು ಸೈಕಲ್ಲು. ಅದರ ಮೇಲೆ ಭದ್ರವಾಗಿ ಬಿಗಿದು ಕಟ್ಟಿದ ಐಸ್ಕ್ಯಾಂಡಿಯ ನೀಲಿಪೇಂಟು ಬಳಿದ ಡಬ್ಬ. ಅದಕ್ಕೆ ಒಂದು ಬಿಗಿ ಮುಚ್ಚಳ. ಆ ಮುಚ್ಚಳವನ್ನ ಅವ ತೆಗೆಯುತ್ತಲೆ ನಾವು ಹಾಗು ನಮ್ಮಂಥ ಕುಳ್ಳಕುಳ್ಳಗಿನ ಸುಮಾರು ಮಕ್ಕಳು ಜಿಗಿಜಿಗಿದು ಒಳನೋಡಲು ಪ್ರಯತ್ನ ಮಾಡಲು ಶುರು. ’ಅಂದರ್ ಝಾಂಕ್ ನಕೋರೇ, ಬಾಲಾಂ ಪಡ್ಜಾತೀಂ!’ (ಒಳಗೆ ಇಣುಕ್ಬೇಡ್ರೋ, ತಲೆಕೂದಲು ಬಿದ್ದೋಗ್ತವೆ!) ಎಂದು ಉರ್ದುವಿನಲ್ಲಿ ಕೂಗಾಡುತ್ತ ಅವ ಡಬ್ಬದೊಳಗೆ ಕೈಯಿಳಿಸುತ್ತಿದ್ದ. ನಾಕಾಣೆಗೆ ಬರುತ್ತಿದ್ದ ಪೀಂಕು, ಕೇಂಪು, ಹಸೂರು, ಹಳೂದಿ ಬಣ್ಣದ ಕ್ಯಾಂಡಿಗಳು ಒಂದೊಂದಾಗಿ ಈಚೆ ಬರುವವು. ’ನಂಗೆ ಕೇಂಪು! ನಂಗೆ ಹಳೂದಿ ಬೇಕು! ಲಾಸ್ಟೈಮೂ ಇದೇ ಕಲರು, ನಂಗೆ ಬೇರೆ ಕೊಡು! ಇದು ಸಣ್ಣದು ಚೆನಾಗಿಲ್ಲ!’ ಎಂದು ಮುಂತಾಗಿ ನಾವು ಕೂಗಾಡುವುದು. ಅವ ಗಂಟುಮುಖ ಹಾಕಿಕೊಂಡು ನಮ್ಮ ಕೈಗಳಿಗೆ ನಮ್ಮ ಬಣ್ಣದ ಕ್ಯಾಂಡಿಗಳನ್ನು ವರ್ಗಾಯಿಸುವ.

ಆಮೇಲೆ ನಾವೆಲ್ಲರು ಜಗಲಿಯ ಮೇಲೆ ಒತ್ತೊತ್ತಾಗಿ ಕುಳಿತುಕೊಂಡು ಐಸ್ಕ್ಯಾಂಡಿ ಮೆಲ್ಲುವ ಕೆಲಸ ಆರಂಭಿಸುತ್ತಿದ್ದೆವು. ಕೆಲವರಿಗೆ ಕ್ಯಾಂಡಿಯನ್ನು ತುಂಡರಿಸಿ ಕಚಕಚನೆ ಅಗಿಯುವುದು ಇಷ್ಟವಿದ್ದರೆ ಕೆಲವರಿಗೆ ಅದನ್ನು ಚೀಪಿ ತಿನ್ನುವುದೇ ಆಸೆ. ಅದರ ಸಿಹಿ, ಗಂಟಲೊಳಗಿಳಿವ ಆ ತಣ್ಣಗಿನ ಐಸು ನಮ್ಮನ್ನೂ ಕೆಲಸಮಯದವರೆಗೂ ತಣ್ಣಗೆ ಇಡುತ್ತಿತ್ತು. ಕ್ಯಾಂಡಿ ತಿಂದಾದ ಮೇಲೆ ನಾಲಗೆ ಮರಗಟ್ಟಿ ನಮಗೆ ಅದು ದಪ್ಪವಾಗಿದೆಯೇನೊ ಅನ್ನಿಸಲು ಶುರುವಾಗುತ್ತ ಇತ್ತು. ನಾಲಗೆ ವಾಪಾಸು ಮಾಮೂಲು ಸ್ಥಿತಿಗೆ ಮರಳುವವರೆಗು ನಾವು ‘ಲಲಲಲ’ ಅಂದುಕೊಂಡು ಓಡಾಡುತ್ತಿದ್ದುದುಂಟು. ಇದಲ್ಲದೆ ನಮ್ಮೂರ ಬಸ್ಟಾಂಡಿನಲ್ಲಿ ಒಂದು ಐಸ್ಕ್ಯಾಂಡಿ, ಐಸ್ಕ್ರೀಮು, ಶರಬತ್ತು ಇತ್ಯಾದಿ ಮಾರುವ ಅಂಗಡಿ. ಅದನ್ನ ನಡೆಸುತ್ತಿದ್ದ ದಂಪತಿಗಳಿಗೆ ಮಕ್ಕಳಿರಲಿಲ್ಲ. ನಾನು ಅಲ್ಲಿಗೆ ಹೋದಾಗೆಲ್ಲ ನನಗೆ ವಿಶೇಷ ಆತಿಥ್ಯ. ನನಗೆ ಮಾತ್ರ ಒಂದು ಸ್ಕೂಪು ಹೆಚ್ಚು ಐಸ್ಕ್ರೀಮು, ಒಂದು ಹೆಚ್ಚಿಗೆ ಐಸ್ಕ್ಯಾಂಡಿ ಇಲ್ಲವೇ ಮಾಮೂಲಿಗಿಂತ ದೊಡ್ಡಗ್ಲಾಸಿನಲ್ಲಿ ಶರಬತ್ತು. ನನಗೆ ಗಮ್ಮತ್ತು. ಆಗ ಅವರ ಮಮತೆ ಅರ್ಥವೇ ಆಗುತ್ತಿರಲಿಲ್ಲ. ಈಗ ನೆನೆದರೆ…

ತಮ್ಮ ’ಯಾವುದು ಬೇಕೆ ತಗೊಳೆ ಮಾರಾಯ್ತಿ! ಅದ್ಯಾಕೆ ಹಾಗೆ ದುರುಗುಟ್ತಿದೀಯ?’ ಎಂದು ತಿವಿದ. ಮಕ್ಕಳೆಲ್ಲ ನನ್ನನ್ನೆ ನೋಡುತ್ತ ಇದ್ದವು. ನಾನು ಕಿತ್ತಳೆ ಬಣ್ಣದ ಒಂದು ಕ್ಯಾಂಡಿ ಆಯ್ದುಕೊಂಡೆ. ಬಾಯಿಗಿಟ್ಟು ಚಪ್ಪರಿಸಿದೆ. ಅದೇ ಹಳೆಯ ಹುಳಿಸಿಹಿ ರುಚಿ ಬಾಯಲ್ಲಿ ನಲಿದಾಡಿತು. ಮೋಕ್ಷ ಅಂದರೆ ಇದೇನೆ ಅನ್ನಿಸಿಬಿಟ್ಟಿತು. ನನ್ನವ ಇದ್ದಿದ್ದರೆ ಹೈಜೀನಿನ ಬಗ್ಗೆ ಒಂದು ಉದ್ದದ ಭಾಷಣ ಕೇಳಬಹುದಿತ್ತು ಅಂದುಕೊಂಡೆ. ತಮ್ಮ ನನ್ನ ಮುಖವನ್ನೆ ನೋಡುತ್ತ ಇದ್ದವ ಇದ್ದಕ್ಕಿದ್ದ ಹಾಗೆ ಐಸ್ಕ್ಯಾಂಡಿಯವನ ಕಡೆ ತಿರುಗಿ ’ನಂಗೂ ಒಂದು ಕೊಡಿ. ಯೆಲ್ಲೋ ಕಲರು.’ ಅಂದ.
 

Advertisements

12 thoughts on “ಐಸ್ಕ್ಯಾಂಡಿಯ ಸುತ್ತಮುತ್ತಲ ಫಿಲಾಸಫಿ

 1. ಇತ್ತೀಚಿನ ದಿನಗಳಲ್ಲಿ, ಈ ತರಹದ ಐಸ್ ಕ್ಯಾಂಡಿ ಮಾರೋರುನ್ನ ನಾನು ನೋಡೇ ಇಲ್ಲ. ಇದಲ್ಲದೇ ಕೇವಲ ಒಂದೇ ಒಂದು ಸಣ್ಣ machine ಇಟ್ಟುಕೊಂಡು, ಅತೀ ಸಣ್ಣ ಜಾಗದಲ್ಲಿ ಇದನ್ನು ತಯಾರಿಸುತಿದ್ದ ಕಾರ್ಖಾನೆಗಳೂ ಸಹ ಮಾಯ ಆಗ್ತಾ ಇದೆ. ಇನ್ನು ಬೇಸಿಗೆ ದಿನಗಳ ಹಸಿವಿನ ಬಗ್ಗೆ ಹೇಳುವುದಾದರೆ, ನೀವು ಬರೆದ ಸಾಲುಗಳು, 200% ಸತ್ಯವಾದದ್ದು. ನನ್ನ ಅಜ್ಜಿ ಇದರ ಬಗ್ಗೆ ಏನು ಹೇಳುತಿದ್ದರು ಗೊತ್ತಾ? ” ನಿನ್ನದೇನು ಹೊಟ್ಟೆ ನೊ ಅಥವಾ ಕನ್ನಂಬಾಡಿ ಕಟ್ಟೆ ನೊ” ಅಂತ. Extremely nostalgic ಆಗಿತ್ತು, ಈ write up…..

 2. ಯೌವನವ ಕಳಚಿ ಬಾಲ್ಯದ ಬಣ್ಣ ಹಚ್ಚಿದ ಬರಹಕ್ಕೆ ಒಂದು ಬೆಚ್ಚನೆಯ ಧ್ಯಾಂಕ್ಸ್….. ಆ ಕೊಳಕು ಐಸ್ ಕ್ಯಾಂಡಿಯ ಡಬ್ಬದಿಂದ ಬೆಳ್ಳನೆಯ ಹಾಲ್ ಐಸ್ ಕ್ಯಾಂಡಿ ತಿನ್ನುತಿದ್ದದು ನೆನ್ನೆ ಮೊನ್ನೆಯೆಂದೆನ್ನಿಸಿತು……” ಎ ದೌಲತ್ ಭೀ ಲೆಲೋ ಎ ಶೋಹರತ್ ಭೀ ಲೆಲೋ ಬಲೇ ಚೀನಲೋ ಮುಜಸೇ ಯೇ ಜವಾನೀ, ಮಗರ್ ಮುಜಕೋ ಲೌಟಾದೋ ಓ ಬಚಪನ್ ಕೀ ಯಾದೇ”…….

  -ಅಮರ

 3. ಬೇಸಿಗೆ ಇನ್ನೇನು ಬಂದೇಬಿಡ್ತು ಅನ್ನೋವಗ ನಿನ್ನ ಐಸ್ ಕ್ಯಾಂಡಿ ನೆನಪು ಸೀದಾ ಊರಿಗೆ ಕರ್ಕೊಂಡ್ ಹೋಗಿ ನಿಲ್ಲಿಸ್ತು ಕಣೇ.
  ನಮ್ಮೂರಿನ ಕೆಂಪು ಕೆಂಪು ಕ್ಯಾಂಡಿಯ ರಸ ಜೋರಿಸ್ಕೊಳ್ತಾ ಸುರ್ ಅಂತ ಹೀರಿ ಸವಿಯುವ ಮಜಾ ಇಲ್ಲಿನ ಕಂಪೆನಿ ಕ್ಯಾಂಡಿ- ಬಾರ್ ಗಳಿಂದ ಸಿಗೋಲ್ಲ ( ನನ್ನ ಪಾಲಿಗೆ)
  – ಚೇತನಾ

 4. ಒಳ್ಳೆ ಬರಹ. ನಮಗೆ ಸ್ಕೂಲ್ ದಿನ ನೆನಪಾದವು. ಜತೆಗೆ ನಿಮ್ಮಲ್ಲಿ ಇದ್ದಬದ್ದ ಕಬ್ಬಿಣ ಸೇರಿಸಿ ಕೊಟ್ಟಿದ್ರೆ ಗುಜರಿ ಸಾಯಿಬರಿಗೆ ಕಡ್ಲೇಮಿಠಾಯಿ (ಈಗಿನ ಚಿಕ್ಕಿ) ಕೊಡ್ತಿರಲಿಲ್ವಾ? ನಾನು ಅದರ ಬಗ್ಗೆ ಬರೆಯುವಂತೆ ಪ್ರೇರೇಪಿಸಿದೆ ನಿಮ್ಮ ಬರಹ. ಒಳ್ಳೆ ನೆನಪು ಹರವಿಕೊಳ್ಳುವಂತೆ ಮಾಡಿದ್ದಕ್ಕೆ ಧನ್ಯವಾದ.
  ನಾವಡ

 5. ಬಾಲ್ಯದ ನೆನಪುಗಳ ಮೆರವಣಿಗೆ ಮಾಡಿಸಿದ ಟೀನಾರವರಿಗೆ ಧನ್ಯವಾದಗಳು. ಈ ಸುಡುಗಾಡು ಬೆಂಗಳೂರಲ್ಲಿ ಆ ಅನುಭವಗಳು ಸಿಗೋದು ಭಾಳಾ ಕಷ್ಟ. ನಮ್ಮ ಊರಲ್ಲಿ(ದಾವಣಗೆರೆ), ಬಹುಷಃ ಬೆಂಗಳೂರನ್ನುಳಿದು ಇನ್ನೆಲ್ಲ ಊರುಗಳಲ್ಲೂ ಈಗಲೂ ಈ ಥರ ಐಸ ಮಾರೋರು ಬರ್ತಾರೆ. ಆದರೆ, ಬಾಲ್ಯ ಬರೋದೇ ಇಲ್ವಲ್ಲಾ..!!
  ಗಣೇಶ್.ಕೆ. Davangere, Bengaluru

 6. Purrfect article to start the summer… 🙂

  Wish we could still get those icecreams sold in those mobile carts. The guy dips his head and hand and picks up the ice cream for you. Also reminded me of another type of ice cream we used to enjoy….the one which is made right in front of your by shaving a bar of ice and stuffing it in a cup and sprinkling different colored juices and sticking a small stick to it. I always wondered how the ice cream maker could hold the ice for such a long time without getting a frost bite.

  Warm regards,

  Mayura

 7. ಹೋದ ವರ್ಷ ಇದೇ march ತಿಂಗಳ ಬಿರು ಬಿಸಿಲ ಮಧ್ಯಾಹ್ನದಲ್ಲಿ ಕಳಸದಲ್ಲಿ, ಅಮ್ಮ, ನಾನು ಇಬ್ಬರೂ competition ಮೇಲೆ ತಲಾ 8 ice candy ತಿಂದ ನೆನಪಾಗ್ತಿದೆ.

  ಹೂತು ಹೋಗಿದ್ದ ನೆನಪನ್ನು ಉತ್ಖನನ ಮಾಡೋ ಬರಹ ಕೊಟ್ಟಿದ್ದಕ್ಕೆ,
  ಬಾಲ್ಯದ ice candyಯ ನೆನಪಿನಷ್ಟೇ ಬೆಚ್ಚಗಿನ thanks.

 8. ಮೊನ್ನೆ ತಾನೇ ನನ್ನ ತಮ್ಮ ಇತ್ತಿಚೆಗೆ ಅಮ್ಮ ನಂಗೆ ಐಸ್ ಕೊಡಿಸೊದನ್ನೆ ಬಿಟ್ಟಿದಾಳೆ ಅಂತ ಕಂಪ್ಲೆಂಟ್ ಹೆಳ್ತೀದ್ದ.. ಪ್ರತಿ ದಿನವೂ ಮಧ್ಯಾನ್ಹದ ಬಿಡುವಿನಲ್ಲಿ ಮನೆಗೆ ಬರುವಾಗ ನನ್ನ ತನಗೊಂದು, ನನ್ನ ತಮ್ಮನಿಗೊಂದು ಅಂತ ಹಿಡುದುಕೊಂಡು ಬಂದು ಕಟ್ಟೆಯ ಮೇಲೆ ಕೂತು ಸೀಪಿ ಸೀಪಿ ಅದನ್ನು ತಿನ್ನುವ ಪರಿಯೇ ಭಲು ಮಜ. ನಮ್ ಕಡೆ ಹಾಲಿನ ಐಸ್ ಅಂತಾ ಭಾಳ ಫೆಮಸ್ಸು.. ಕ್ಯಾಂಡಿಗೆ ಕಡ್ಡೀ ಐಸ್ ಕ್ರೀಮು ಅಂತಾ ಕರೀತಿದ್ವಿ.. ಎಲ್ಲಾ ನೆನಪಾಯ್ತು..

 9. ನಾನು ಕಮ್ಮಿ ಅಂದ್ರು ೧೫ ವರ್ಷ ಹಿಂದಕ್ಕೆ ಹೋದೇ..ಐಸ್ ಕ್ಯಾಂಡಿ ಮುಲ್ಲ ಸಾಭಿ ತನ್ನ ಹಳೆಯ ಡಕೋಟ ಸೈಕಲ್ ಏರಿ “ಐಸ್ ಗೆಂಡೆ ಐಸ್ ಗೆಂಡೇ”..ಅಂತ ಚೀರುತ್ತ ಬರುವ ಸದ್ದು ಕೇಳುತ್ತಲೇ..ಅವ್ವನ ಕೊಬ್ಬರಿ ಎಣ್ಣೆಯ ಕಾಲಿ ಸಿಸವನ್ನ ಕದ್ದು ಓಯ್ದು ಎರೆಡು ನೀರೈಸನ್ನ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿದ್ದ ದಿನಗಳೆಲ್ಲ ನನೆಪಿಗೆ ಬಂದವು…

  ಹಳೆಯ ದಿನಗಳನ್ನೆಲ್ಲ ಮತ್ತೆ ನಮ್ಮ ಮುಂದು ತಂದು ಹರಡಿದ್ದೀರಿ…ನಿಮಗೆ ನೂರ ಒಂದು ಥ್ಯಾಂಕ್ಸ್

 10. “ಲಾಸ್ಟೈಮೂ ಇದೇ ಕಲರು, ನಂಗೆ ಬೇರೆ ಕೊಡು! ಇದು ಸಣ್ಣದು ಚೆನಾಗಿಲ್ಲ!”

  ನಾವೆಲ್ರೂ ಎಷ್ಟೊಂದು ಒಂದೇ ತರಾ ಇದ್ವಿ, ಬೆಳಿತಾ ಬೆಳಿತಾ ಎಷ್ಟೊಂದು ಬದಲಾಗಿದ್ದಿವಲ್ವಾ?

  ಪ್ರೀತಿಯಿರಲಿ

  ಶೆಟ್ಟರು

 11. ಎಲ್ರಿಗೂನೂ,
  ಒಂದು ಐಸ್ಕ್ಯಾಂಡಿ ಎಷ್ಟೊಂದು ಸಿಹಿನೆನಪುಗಳನ್ನ ತರಿಸುತ್ತೆ ಅಲ್ವ? ನೀವೆಲ್ಲರೂ ನಿಂ ನಿಂ ನೆನಪುಗಳ್ನ ನನ್ ಜೊತೆ ಕೂತು ಹಂಚಿಕೊಂಡ ಹಾಗೆ ಅನ್ನಿಸ್ತು.. ಅದೆ ಎಲ್ರೂ ಒಂದ್ಕಡೆ ಕೂತ್ಕೊಂಡು ಹರಟಿದ ಹಾಗೆ..ಮತ್ತೆ ಹಾಲೈಸಿನ ಬಗ್ಗೆ ನೆನಪು ಮಾಡಿದ್ದಕ್ಕೆ ತ್ಯಾಂಕು! ನಾನು ಮಯೂರ ಹೇಳಿದ ’ಐಸ್ ಗೋಲಾ’ಗಳನ್ನ ಇನ್ನುವರೆಗು ತಿಂದಿಲ್ಲ ಆದರೆ ಅದನ್ನ ಇನ್ಮುಂದೆ ಸೀರಿಯಸ್ ಆಗಿ ಕನ್ಸಿಡರ್ ಮಾಡ್ತೀನಿ. ನೀವುಗಳು ಕಂಪನಿ ಕೊಡೋದಾದ್ರೆ ಇನ್ನೂ ಚನಾಗಿರತ್ತೆ. ಪ್ರಸಾದರ ಅಜ್ಜಿಯ ಮಾತುಗಳು, ಕೃತವರ್ಮರ ಕ್ಯಾಂಡಿ ಕಾಂಪಿಟಿಶನ್, ಸಂತೋಷರ ತಮ್ಮನ ಕಂಪ್ಲೇಂಟು, ಅಮರ, ಚೇತನಾ, ಗಣೇಶ್, ನಾವಡ, ಕಿರಣ್, ಶೆಟ್ಟರ ನಾಸ್ಟಾಲ್ಜಿಯಾ..ಅರೆ ಅರೆ..ನನ್ನ ಮನೆಯ ಜಗಲಿ ಇದ್ದಕ್ಕಿದ್ದ ಹಾಗೆ ದೊಡ್ಡದಾಗಿಬಿಟ್ಟಿದೆ!!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s