ಲಲ್ಲಾ ಎಂಬ ಸಂತಳ ಕಥೆ.

dedlal_sm1.jpg

ಕನ್ನಡಿಯ ಮೇಲಿನ ಧೂಳು ಸರಿಯುವ ಹಾಗೆ
ನನ್ನ ಮನದ ಕೊಳೆಯೆಲ್ಲ ಹರಿದುಹೋಯಿತು
ಅವ ನನ್ನೊಳಗಿರುವುದ ಕಂಡೆ
ನನ್ನೊಳಗಿನ ನನ್ನ ಗುರುತು ತಿಳಿಯಿತು
ಅರಿತೆ – ಆತನೇ ಸಕಲ
ನಾನು ಏನೂ ಅಲ್ಲ.

14ನೇ ಶತಮಾನ. ಧಾರ್ಮಿಕ ಕ್ರಾಂತಿ, ಬದಲಾವಣೆಗಳ ಕಾಲವದು. ಬೌದ್ಧಧರ್ಮ ಹೆಚ್ಚೂಕಡಮೆ ಇಲ್ಲವಾಗಿದ್ದರು ಹಿಂದೂಧರ್ಮದ ಮೇಲೆ ಅದರ ಛಾಪು ಬಲವಾಗಿ ಬಿದ್ದಿತ್ತು. ಇದೇ ಹೊತ್ತಿನಲ್ಲಿ ಕಾಶ್ಮೀರದಲ್ಲಿ ಇಸ್ಲಾಮಿನ ಆಗಮನವಾಯಿತು. ಆದರೆ ಇಲ್ಲಿ ಬುಲ್ಬುಲ್ ಶಾ ಎಂಬ ಸೂಫೀಸಂತನಿಂದ ಪ್ರಚಲಿತವಾದ ಇಸ್ಲಾಮಿನ ಮೇಲೆ ಬೌದ್ಧ ಮಹಾಯಾನ ಹಾಗೂ ಉಪನಿಷತ್ತುಗಳ ಪ್ರಭಾವ ಬಲವಾಗಿತ್ತು. ಇದಕ್ಕೆ ಕಾಶ್ಮೀರದಲ್ಲಿ ಒಳ್ಳೆಯ ಸ್ಪಂದನ ಕಂಡುಬಂತು. ಹೀಗೆ ರೂಪುಗೊಂಡ ಭಕ್ತಿಪಂಥದಲ್ಲಿ ‘ಲಲ್ಲಾ ಡೆಡ್’ ಒಂದು ಪ್ರಮುಖ ಹೆಸರು.

ಲಲಿತಾಳ ಮದುವೆ ನಿಕಾ ಭಟ್ ಎಂಬ ಕಾಶ್ಮೀರೀ ಪಂಡಿತನೊಡನೆ ಬಹಳ ಸಣ್ಣ ವಯಸ್ಸಿನಲ್ಲಿಯೆ ಆಗಿಹೋಯಿತು. ಆಕೆಯ ಅತ್ತೆಯೋ ಮಹಾರಾಕ್ಷಸಿ. ಹಲವಾರು ದಿನಗಳತನಕ ಲಲ್ಲಾಳಿಗೆ ಸರಿಯಾಗಿ ಊಟ ದೊರಕುತ್ತಿರಲಿಲ್ಲ. ಆದರೆ ಲಲ್ಲಾ ಎಂದೂ ತಾಳ್ಮೆ ತಪ್ಪಿ ನಡೆಯಲಿಲ್ಲ. ಈ ತೊಂದರೆಯಿಂದ ಆಕೆಯ ಆತ್ಮಬಲ ನೂರುಪಟ್ಟು ಹೆಚ್ಚಿತು. ಆಕೆ ಆಧ್ಯಾತ್ಮದೆಡೆಗೆ, ಏಕಾಂತದೆಡೆಗೆ ಹೊರಳತೊಡಗಿದಳು. ಶಿವನಲ್ಲದೆ ಆಕೆಗೆ ಬೇರೇನೂ ಕಾಣುತ್ತಿರಲಿಲ್ಲ. ಮದುವೆಯಲ್ಲಿ ಬಿರುಕು ಕಾಣತೊಡಗಿತು. ಕೊನೆಗೆ ಆಕೆ ತನ್ನ ಗುರು ಸಿದ್ಧ ಶ್ರೀಕಾಂತರನ್ನು ಭೇಟಿಯಾದಳು. ಆಧ್ಯಾತ್ಮಿಕ ಹೊಳಹುಗಳು ಆಕೆಯನ್ನು ಜ್ನಾನೋದಯದೆಡೆಗೆ ಕೊಂಡೊಯ್ದವು. ಇದನ್ನು ಆಕೆಯ ಮಾತಿನಲ್ಲೆ ಹೇಳುವುದಾದರೆ ‘ಅದು ಮಕರಂದದ ಭಂಡಾರ’. ಲಲ್ಲಾಳಿಗೆ ತಾನು ಪಡೆದುಕೊಂಡದ್ದನ್ನು ಇತರರಿಗೂ ನೀಡಬೇಕೆಂಬ ಇಚ್ಛೆ ಉಂಟಾಯಿತು. ಆಕೆ ದೇಶ ಸುತ್ತುತ್ತ ಯಾರಿಗೆ ಆಸಕ್ತಿ ಇದೆಯೊ ಅವರಿಗೆ ತನ್ನ ಅರಿವಿನ ಬಗ್ಗೆ ತಿಳಿಹೇಳಲಾರಂಭಿಸಿದಳು. ತನ್ನ ಶಿವಭಕ್ತಿಯ ಬಗ್ಗೆ ಆಕೆ ನೂರಾರು ಹಾಡುಗಳನ್ನು ರಚಿಸಿದಳು. ಆಕೆಯ ರಚನೆಗಳನ್ನು ‘ವಾಕ್’ ಎನ್ನಲಾಗುತ್ತದೆ. ಇಂದಿಗೂ ಈ ವಾಕ್ಕುಗಳು ಕಶ್ಮೀರೀ ಸಂಸ್ಕೃತಿಯ ಪ್ರಮುಖ ಭಾಗವಾಗಿದ್ದು ಎಲ್ಲೆಡೆ ಹಾಡಲ್ಪಡುತ್ತವೆ.

ನಾ ಅರಿತೆ – ನಾನಿರುವೆ ಎಲ್ಲೆಲ್ಲಿಯೂ
ನಾ ಕಂಡೆ ಆತನ ವಿಶ್ವರೂಪ
ಕೇಳಿ ಕಾತರಿಸಿ ನಿಂದು ಕಂಡೆ ಶಿವನ
ಈ ಮನೆ ಅವನದೆ – ನಾನಾರು ಲಲ್ಲಾ?

ಲಲ್ಲಾಳ ವಾಕ್ಕುಗಳಲ್ಲಿ ಆಕೆಯ ಜೀವನ ಹಾಗೂ ತೊಂದರೆಗಳ ಉಲ್ಲೇಖ ಆಗಾಗ ಕಂಡುಬರುತ್ತದೆ. ಭಗವದ್ಗೀತೆ ಹಾಗೂ ‘ತ್ರೈಕ ಶಾಸ್ತ್ರ’ ಎಂಬ ಕಾಶ್ಮೀರೀ ಶೈವಧರ್ಮದ ಭಾಗವಾಗಿದ್ದ ತಾಂತ್ರಿಕ ಆಚರಣೆಗಳಲ್ಲಿ ಲಲ್ಲಾ ಪರಿಣತಿ ಹೊಂದಿದ್ದಳು. ಲಯ ಯೋಗವನ್ನು ತನ್ನ ತವರುಮನೆಯಲ್ಲೆ ‘ಸಿದ್ಧ ಮೋಲ್’ ಎಂಬ ಗುರುಗಳಿಂದ ಕಲಿತಿದ್ದ ಲಲ್ಲಾ ಮದುವೆಯ ನಂತರವೂ ಸಾಧನೆಯನ್ನು ಮುದುವರಿಸಿದಳು. ಸೂಫೀ ಸಂತ ಶೇಖ್ ನೂರುದ್ದೀನ್ ನೂರಾನಿ ತನ್ನ ಭಕ್ತಿಪರವಶತೆಯಲ್ಲಿ ಹಲವಾರು ಬಾರಿ ಲಲ್ಲಾಳ ಹೆಸರೆತ್ತಿರುವ ಬಗ್ಗೆ ದಾಖಲೆಗಳಿವೆ. ಆತ ಹಸುಗೂಸಾಗಿದ್ದಾಗ ಲಲ್ಲಾ ನೂರುದ್ದೀನನಿಗೆ ಹಾಲುಣಿಸಿದ್ದಳಂತೆ. ಆತ ಮುಂದೆ ಲಲ್ಲಾಳ ಶಿಷ್ಯನಾದ. ಆಕೆಯ ಮೇಲೆ ಸಂದೇಹವಿದ್ದ ಆಕೆಯ ಗಂಡ ಒಮ್ಮೆ ಆಕೆ ನದಿಯಿಂದ ನೀರು ಹೊತ್ತುಕೊಂಡು ಬಂದಾಗ ಆಕೆಯ ತಲೆಯ ಮೇಲಿದ್ದ ಮಡಕೆಯನ್ನು ದೊಣ್ಣೆಯಿಂದ ಬೀಸಿ ಒಡೆದನಂತೆ. ಮಡಕೆ ಒಡೆದರು ಅದರೊಳಗಣ ನೀರು ಹಾಗೇ ಇದ್ದಿತಂತೆ. ಒಂದು ಹನಿ ನೀರೂ ಚೆಲ್ಲದಂತೆ ಲಲ್ಲಾ ನೀರು ತುಂಬಿಸಿದಳಂತೆ. ಆಗ ಅವರಿಗೆ ಆಕೆಯ ಭಕ್ತಿಯ ಅರಿವಾಯಿತು ಎಂದು ಒಂದು ಕಥೆಯಿದೆ.ಪುನರ್ಜನ್ಮದಲ್ಲಿ ಲಲ್ಲಾಳಿಗೆ ಬಲವಾದ ನಂಬಿಕೆ. ತಾನು ಹಿಂದಿನ ಜನ್ಮಗಳಲ್ಲಿ ಏನಾಗಿದ್ದೆನೆಂದು ಆಕೆ ಹೇಳುತ್ತಿದ್ದಳಂತೆ. ಇದನ್ನು ಆಕೆಯ ಗುರು ಶ್ರೀಕಾಂತರೂ ಅನುಮೋದಿಸಿದ್ದರು. ತನ್ನ ತಿರುಗಾಟದ ವೇಳೆಯಲ್ಲಿ ಆಧ್ಯಾತ್ಮದ ಉತ್ತುಂಗದಲ್ಲಿದ್ದ ಲಲ್ಲಾಳಿಗೆ ತನ್ನ ಬಟ್ಟೆಬರೆಯ ಮೇಲೆ ಗಮನವಿದ್ದಿಲ್ಲ. ನಗ್ನಳಾಗಿ ತಿರುಗಾಡುತ್ತಿದ್ದ ಆಕೆಯ ದೇಹವೇ ಬದಲಾಗಿ ತನ್ನ ನಗ್ನತೆಯನ್ನು ಮುಚ್ಚಿಕೊಳ್ಳುತ್ತಿತ್ತು ಎಂದು ದಂತಕಥೆಗಳಿವೆ.

ಅವರೆನ್ನ ತೆಗಳಲಿ ಇಲ್ಲವೆ ಹೊಗಳಲಿ;
ಯಾರಿಗೇನು ಬೇಕೊ ಹೇಳಲಿ;
ಒಳ್ಳೆಯ ಜನರು ನನ್ನ ಹೂವುಗಳಿಂದ ಪೂಜಿಸಲಿ
ನಾನು ಶುದ್ಧಳೆಂಬುದರಿಂದ ಅವರಿಗೇನು ಲಾಭವಾದೀತು?

ಈಗಲೂ ಲಲ್ಲಾ ಹಿಂದೂವೇ ಅಥವಾ ಮುಸ್ಲಿಮಳೆ ಎಂಬ ಬಗ್ಗೆ ವಾದವಿವಾದಗಳಿವೆ. ಆಕೆಯ ಭಕ್ತಿ ಇದನ್ನೆಲ್ಲ ಮೀರಿದ್ದಾಗಿತ್ತು. ಪ್ರಚಲಿತ ಧಾರ್ಮಿಕ ಆಚರಣೆಗಳು ಆಕೆಯ ಪಾಲಿಗೆ ಅರ್ಥರಹಿತವಾಗಿದ್ದವು. ಆಕೆಯ ಸಾವಿನ ನಂತರ ಲಲ್ಲಾಳ ದೇಹ ಎಲ್ಲರೂ ನೋಡುತ್ತಿರುವಂತೆಯೆ ಭಗ್ಗನೆ ಹೊತ್ತಿ ಉರಿದು ಮಾಯವಾಯಿತಂತೆ. ಶೂನ್ಯ ಶೂನ್ಯದಲ್ಲಿ ಲೀನವಾಯಿತು! ಆಕೆಯೆ ಹೇಳುವಂತೆ,

ವಿಗ್ರಹ ಕಲ್ಲಿನದು ಆಲಯ ಕಲ್ಲಿನದು
ಎರಡೂ ಒಂದೇ ಆಗಿರಲು
ಯಾವುದ ಪೂಜಿಸುವೆ ನೀನು ಮೂರ್ಖ ಭಕ್ತನೆ?
ಮನವು ಆತ್ಮದೊಡನೆ ಸೇರುವಂತೆ ಮಾಡು.

ಚಿತ್ರ: www.poetry-chaikhana.com

Advertisements

10 thoughts on “ಲಲ್ಲಾ ಎಂಬ ಸಂತಳ ಕಥೆ.

 1. Prati saarti comment maadabaaradu annuva svaghOShita niyama muriyuttiddEne. idarinda naShTa nanagE anta gottAgide!

  nijakkU idu oLLeya mAhiti. ninna ee reetiya barahagaLu nijjakkU nange hoTTekichchu tarisutte kaNE! (adu salugeya hotte kichchu).
  anuvaadagaLu sogasaagive. Lalla saahityada linku kottare naanu chira runi!

  -hotte kichchinda,
  Chet

 2. ಅಪರೂಪದ ಕವಯಿತ್ರಿ ಲಲ್ಲಾಳ ಸೊಗಸಾದ ಪರಿಚಯ… ನಮ್ಮ ನೆಲದ ಅಕ್ಕನ ನೆನಪಾಗುತ್ತಲ್ಲವಾ!! ಹಿಂದೀ ನಟಿ ಮೀತಾ ವಸಿಷ್ಠ್ ಲಲ್ಲಾಳ ಬಗೆಗೆಗೊಂದು preformance ಮಾಡಿದ್ದಾರೆಂದು ಕೇಳಿದ್ದೆ. ಅದು ಬೆಂಗಳೂರಿಗೆ ಇನ್ನೂ ಬಂದಿಲ್ಲ ಅನ್ನಿಸುತ್ತೆ …

 3. ಚೇತ್,
  ನಾವಿಬ್ರೂ ಹೀಗೆ ಒಬ್ಬೊಬ್ಬರ ಬಗ್ಗೆ ಹೊಟ್ಟೆ ಉರ್ಕೋತಿದ್ರೇನೆ ಸರಿ. ಬೆಳೀತೀವಿ. ಲಿಂಕು ಕಳಿಸ್ತೀನಿ. ಈ ವಾರ ಸೊಲ್ಪ ಬ್ಯುಸಿ. ನಿಂಗೊತ್ತಲ್ಲ. ತಡವಾದ್ರೆ ಬೇಸರ ಮಾಡ್ಕಬ್ಯಾಡ ಕಣೆ.

  ಪ್ರಸಾದ್,
  ನಿಮ್ಮ ಮಾತು ನಿಜ. ಆದರೆ ಆಗ ಈ ಭಕ್ತಿ ಚಳುವಳಿಯಿಂದ ಮಾಮೂಲಿ ಮಹಿಳೆಯ ಸಾಮಾಜಿಕ ಜೀವನದಲ್ಲಿ ಯಾವ ರೀತಿಯ ಬದಲಾವಣೆಗಳು ಆದವು ಅಂತ ನನಗೆ ಪೂರ್ಣವಾಗಿ ಗೊತ್ತಿಲ್ಲ. ಅದರ ಬಗ್ಗೆ ತಿಳಿಯುವ ಪ್ರಯತ್ನ ಮಾಡ್ತೇನೆ.

  ಸುಧನ್ವ,
  ನಿಮ್ಮ ಚಂಪಕಾವತಿಗೆ ನನ್ನದೂ ಸಲಾಂ!

  ಸುಧೇಶ್,
  ಹೆಣ್ಣುಮಕ್ಕಳಿಗೆ ಎಲೆಮರೆಕಾಯಿಯ ಹಾಗೆ ಬದುಕುವುದು ಅಭ್ಯಾಸವಾಗಿಹೋಗಿತ್ತು. ಹಾಗಾಗಿ ನನಗಂತೂ ಇವರ ಬಗ್ಗೆ ತಿಳಿದುಕೊಳ್ತಾ ಬೀಚಿನಲ್ಲಿ ಮರಳುಕಣ ಎಣಿಸುತ್ತಿರೋ ಹಾಗೆ ಅನ್ಸತ್ತೆ.

  ಶ್ರೀ,
  ಥ್ಯಾಂಕ್ಯೂ! ಅಕಸ್ಮಾತ್ತು ಆ ಶೋ ಬೆಂಗಳೂರಿಗೆ ಬಂದರೆ just let me know. ಮೀತಾ ವಸಿಷ್ಠ್ ನನಗೆ ಬಹಳ ಇಷ್ಟ (Except that saas-bahu crap!!) ಸಖತ್ ಅಂಡರ್ ರೇಟೆಡ್ ಅಭಿನೇತ್ರಿ ಆಕೆ. I would love to watch her.

  ಮಯೂರ,
  ನಂಗೂ ಹಾಗೇ ಅನ್ನಿಸ್ತು. 🙂

 4. ಶ್ರೀ,
  ಹೇಳಿದ್ದಕ್ಕೆ ಧನ್ಯವಾದ. ಅಲ್ಲಿ ಲಲ್ಲಾಗಿಂತ ಸುಫೀಪಂಥದ ಬಗ್ಗೆ ಜಾಸ್ತಿ ಮಾಹಿತಿ ಇದೆ. ಏನೆ ಆಗಲಿ ಹೊಸ ವಿಷಯಗಳು ತಿಳಿದವು!!
  -ಟೀನಾ.

 5. ಹೌದು, ನಾನು ಅದನ್ನೇ ಬರೆದು ನಿಮ್ಮ ಈ ಪೋಸ್ಟ್‌ನ ಲಿಂಕ್ ಕೊಟ್ಟು ಅಲ್ಲಿ ಕಾಮೆಂಟ್ ಹಾಕಿದೆ, ಅದ್ಯಾಕೋ accept ಆಗ್ಲಿಲ್ಲ, ಮತ್ತೆ ಟೈಪ್ ಮಾಡೋಕೆ patience ಇರ್ಲಿಲ್ಲ! ಸುಮ್ನೆ ಸೂಫಿಸಂ ಬಗ್ಗೆ ಲೇಖನ ಅಂತನೇ ಹಾಕಬಹುದಿತ್ತು ಅದನ್ನ ಅನ್ನಿಸ್ತು. ನಿಮ್ಮ ಬರಹದಲ್ಲಿರೋ ಕಾಲುಭಾಗ ವಿವರನೂ ಇಲ್ಲ ಅಲ್ಲಿ ಲಲ್ಲಾ ಬಗ್ಗೆ!:(

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s