ಸಂಬಂಧವಿಲ್ಲದ ಲಹರಿಗಳ ಜಾಡು

happy_friends_tog1.jpgರಾತ್ರೆ ಯಾವುದೊ ಹಕ್ಕಿ ಕಿರುಚಿಕೊಂಡ ಹಾಗಾಗಿ ಧಡಕ್ಕನೆದ್ದು ಕುಳಿತೆ. ನಿನ್ನೆ ಇವನ ಬಲವಂತಕ್ಕೆ ಆ ಹಾಳು ಹಾರರ್ ಮೂವೀ ಕೂತು ನೋಡಿದ ಪ್ರಭಾವ ಇರಬೇಕು. ಕೆಟ್ಟಕನಸು.. ನಾನು ಒಂದು ಮನೇಲಿ ಕೂತಿದೀನಿ. ಒಂದು ದಪ್ಪದ ಹೆಗ್ಗಣ ಬಂದು ಮನೇಗೇ ತೂತು ಕೊರೀತಿದೆ. ನಾನು ಒಂದು ಕ್ರಿಕೆಟ್ ಬ್ಯಾಟು ಹಿಡಿದು ಅದನ್ನ ಓಡಿಸ್ಕೊಂಡ್ಹೋಗ್ತಾ ಇದೀನಿ.. ಆಮೇಲೆ ಅದೇ ತಿರುಗಿ ನಿತ್ತುಬಿಟ್ಟು ನನ್ ಕೂದ್ಲನ್ನೆಲ್ಲ ಪರಚಿಹಾಕೋಕೆ ಶುರುಮಾಡತ್ತೆ… ಅಷ್ಟು ಹೊತ್ತಿಗೇ ಆ ಹಾಳು ಹಕ್ಕಿ ಕಿರುಚಿದ್ದು! ಕಿಟಕಿ ಪರದೆಯಿಂದ ಬೀದಿದೀಪದ ಬೆಳಕು ಮಂದವಾಗಿ ಒಳಬರುತ್ತ ಇತ್ತು. ಮೆಲ್ಲ ಹೊರಗಿಣುಕಿದೆ. ಪಕ್ಕದ ಖಾಲಿಸೈಟಿನಲ್ಲಿ ಪೊದೆಗಳ ಮಧ್ಯೆ ಪರಪರ ಸದ್ದು ಮಾಡುತ್ತ ಏನನ್ನೊ ತಿನ್ನುತ್ತಿದ್ದ ಕೆಂಬೂತವೊಂದು ಕಾಣಿಸಿತು. ಇಲೀನೋ ಹಾವೊ, ಭರ್ಜರಿ ಊಟ ಅಂದುಕೊಂಡೆ.

ಈ ಕೆಂಬೂತ ಇರತ್ತಲ್ಲ, ಅದನ್ನ ನೋಡ್ದಾಗೆಲ್ಲ ಒಂಥರ ‘ರಾಯಲ್ಲು’ ‘ಮೆಜೆಸ್ಟಿಕ್ಕು’ ಅನ್ನಿಸುವುದಕ್ಕೆ ಶುರುವಾಗತ್ತೆ. ನಾನು ಜೋಡಿ ಕೆಂಬೂತಗಳನ್ನ ಇವತ್ತಿನತನಕ ನೋಡೇ ಇಲ್ಲ. ಯಾವಾಗಲು ಒಂಟಿ ಅಲೀತಿರ್ತವೆ. ನಾನು ದುರುಗುಟ್ಟಿ ನೋಡಿದರೆ ಅವೂ ನನ್ನ ಮೀರಿಸೋ ಹಾಗೆ ದುರುಗುಟ್ಟುತ್ತವೆ. ನನ್ನ ಗೆಳತಿ ಸೆಲೆಸ್ತಿನ್ ಕೆಂಬೂತ ನೋಡಿದಾಗೆಲ್ಲ ಖುಷಿಯಿಂದ ಕಿರುಚಿಕೊಂಡುಬಿಡೋಳು. ಆಗ ಅಜೀಮಾ ಅವಳಿಗೆ ’ಲೇ ಪಿರ್ಕಿ, ಸುಮ್ನಿರೆ. ಅದನ್ನ ನೋಡಿದಾಗೆಲ್ಲ ಸುಮ್ನಿರಬೇಕಂತೆ! ಇಲ್ಲಾಂದ್ರೆ ಎಲ್ಲಾ ಲಕ್ ಹೊರ್ಟೋಗ್ಬಿಡತ್ತಂತೆ.’ ಅನ್ನೋಳು. ಲಕ್ ಬಂದ್ರೆ ಹೋಗೋದು ಹ್ಯಾಗೆ ಅಂತ ಮಾತ್ರ ಅರ್ಥವೇ ಆಗ್ತಿರ್ಲಿಲ್ಲ ನಂಗೆ.

ಕೆಂಬೂತ ನೋಡಿದಾಗಲೆಲ್ಲ ಗೆಳೆಯನೊಬ್ಬನ ನೆನಪು. ಅವನೂ ಹೀಗೇ ಯಾರ ಪಾಡೂ ಬೇಡ ಅನ್ನುವ ಹಾಗೆ ಒಬ್ಬನೆ ತಿರುಗಾಡಿಕೊಂಡಿರೋನು. ಅವನಿಗೆ ಯಾರ ಜತೇನೂ ಜಗಳ ಆಡೋಕೇ ಬರ್ತಾ ಇರ್ಲಿಲ್ಲ. ಅವ ಯಾರನ್ನೂ ಬೈದಿದ್ದೇ ನಾನು ನೋಡಿರಲಿಲ್ಲ. ಯಾರು ಏನೇ ಅಂದರು ಸುಮ್ಮಗೆ ನಗಾಡಿಬಿಡೋನು. ನನಗೋ ಮೈಪರಚಿಕೊಳ್ಳೋ ಹಾಗಾಗೋದು. ’ಲೋ, ಜಗಳಾಡೋದು, ಬೈಯೋದು ಇವೆಲ್ಲ ಜೆನ್ಯುಯಿನ್ ಸೋಶಿಯಲ್ ಟ್ಯಾಲೆಂಟ್ಸು ಕಣೊ. ನೀನೂ ಇದೆಲ್ಲ ಕಲಿ’ ಅಂತಿದ್ದೆ. ಅವ ತಣ್ಣಗೆ ನಗೂವ. ನಾನೋ ಜಗಳ ಆಡೋದು, ವಾದ ಮಾಡೋದು, ಎನಿಮಿಟಿ ಮೆಯಿಂಟೆಯಿನ್ ಮಾಡೋದು – ಇದ್ರಲ್ಲೆಲ್ಲ ಎಕ್ಸ್ಪರ್ಟ್! ಅವನು ಹಸುವಿನ ಥರ, ಯಾರನ್ನೂ ಬೈಯಲಿಕ್ಕೆ ಸಾಧ್ಯವೆ ಇಲ್ಲ ಅನ್ನೋ ತೀರ್ಮಾನಕ್ಕೆ ಬಂದುಬಿಟ್ಟಿದ್ದೆ. ಒಂದು ದಿನ ಹೀಗೇ ಕ್ಯಾಂಟೀನಲ್ಲಿ ಕೂತ್ಕೊಂಡಿದ್ವಿ. ಯಾವುದೋ ಸಣ್ಣ ವಿಷಯ – ನಾವು ನಮ್ಗೋಸ್ಕರ ಬದುಕ್ತೀವೊ, ಬೇರೆಯೋರಿಗೋಸ್ಕರ ಬದುಕ್ತೀವೊ – ಅಂತ ವಾದ ಶುರುವಾಯ್ತೋ. ನಾನೂ ಅವನೂ ಮೊದಮೊದಲು ಮೆಲ್ಲಗೇ ಮಾತಾಡ್ತಿದ್ದೋರು ಬರ್ಬರ್ತಾ ಯಾಕೊ ಸೀರಿಯಸ್ ಆದ್ವಿ. ಎಲ್ಲರೂ ಒಬ್ಬೊಬ್ಬರಾಗಿ ಕಳಚಿಕೊಂಡ್ರು. ನಮಗೆ ಗೊತ್ತಾಗೋದ್ರೊಳಗೇ ನಂಗೂ ಅವನಿಗೂ ನಿಜವಾಗಿ ಜೋರು ಜಗಳ ಹತ್ತಿಕೊಂಡಿತ್ತು. ಕೊನೆಗೆ ಅವನೆ ’ನೀನೆ ಕಣೆ ಮಹಾ ಬುದ್ವಂತೆ! ನಿಂಥರಾ ಮಾತಾಡೋಕೆ ನನ್ಕೈಲೆಲ್ಲಾಗತ್ತೆ?’ ಅಂತ ರೇಗಿ ಧಢಾರಂತ ಎದ್ದು ಹೊರಟೇ ಹೋದ. ನನಗೆ ಕೊನೇಗೂ ಇವ ಜಗಳ ಆಡಿದ್ನಲ್ಲ ಅಂತ ಕುಣಿದಾಡೋ ಹಾಗಾಗಿತ್ತು. ಈಗ ಅವ ಚೆನ್ನಾಗಿ ಜಗಳ ಆಡುತ್ತಾನೆ. ಕ್ಲಾಸಿಕ್ಕಾಗಿ ರೇಗುತ್ತಾನೆ. ಸಧ್ಯ ಇವ ನಾರ್ಮಲ್ಲಾಗಿದ್ದಾನಲ್ಲ ಎಂದು ನನಗೆ ಸಮಾಧಾನ. ’ಈವನ್ ಎ ಫಿಶ್ ವುಡ್ ನೆವರ್ ಗೆಟ್ ಇನ್ ಟು ಟ್ರಬಲ್ ಇಫ್ ಇಟ್ ಕೀಪ್ಸ್ ಇಟ್ಸ್ ಮೌಥ್ ಶಟ್!!’ ಅಂತ ಶಶಿ ರೇಗಿಸ್ತಾನೇ ಇದ್ರೂನೂ ನಾನು ವಟವಟ ಅಂತ ಚಾಟರ್ಬಾಕ್ಸಿನ ಹಾಗೆ ಮಾತಾಡ್ತಲೆ ಇರ್ತೀನಿ.

ಈ ಕೆಂಬೂತದ ಹಾಗೆ ಎಷ್ಟು ಹೊತ್ತು ನಾವು ‘ಮೆಜೆಸ್ಟಿಕ್’ ಆಗಿ ನಮ್ಮ ಊಟವನ್ನ ಒಬ್ಬಂಟಿಯಾಗಿ ತಿಂದುಕೊಂಡು ಇರಲಿಕ್ಕೆ ಸಾಧ್ಯವಾಗಬಹುದು? ಸ್ವಲ್ಪಮಟ್ಟಿಗಿನ ಹುಚ್ಚುಬುದ್ಧಿಗಳು ನಮ್ಮೆಲ್ಲರಲ್ಲೂ ಇವೆ. ಅವೆಲ್ಲ ಹೊರಬರಲಿಕ್ಕೆ ಸಮಯ ಕಾಯುತ್ತ ಬಿದ್ದಿರ್ತವೆ ಅಷ್ಟೆ. ಗಮ್ಮತ್ತಾಗಿ ನಡೀತಿರೋ ಪಾರ್ಟಿಯ ಮಧ್ಯದಲ್ಲಿ ಯಾಕೋ ಪಿರಿಪಿರಿ ಅನ್ನಿಸಿ ಎಲ್ಲವನ್ನೂ ಬಿಟ್ಟು ಓಡಿಹೋಗಬೇಕು ಅನ್ನಿಸುತ್ತದೆ. ಮನೆಯಲ್ಲಿ ಪಂಚಭಕ್ಷ್ಯ ಪರಮಾನ್ನಗಳಿದ್ದರೂ ರಸ್ತೆಬದಿಯ ಪಾನಿಪುರಿ ಗಾಡಿ ನೋಡಿದರೆ ಬಾಯಿ ನೀರೂರುತ್ತದೆ. ತಲೆಯೆತ್ತಿ ಯಾರನ್ನೂ ನೋಡದಿದ್ದ ಹುಡುಗನೊಬ್ಬ ಒಂದು ಸಂಜೆ ಕಾಲೇಜಿನ ಕಾಂಪೌಂಡಿನ ಮೇಲೇರಿ ಕೂತು ಹುಡುಗಿಯರಿರಲಿ, ಹುಡುಗರೆ ಬೆಚ್ಚಿಬೀಳುವ ಹಾಗೆ ಕಮೆಂಟಿಸಲಾರಂಭಿಸುತ್ತಾನೆ. ಸ್ಕರ್ಟು ಜೀನ್ಸುಗಳ ಜತೆಯೆ ಹುಟ್ಟಿದಂತಿದ್ದ ತರಲೆ ಹುಡುಗಿಯೊಬ್ಬಳು ಒಂದು ಸುಂದರ ಮುಂಜಾವ ಸೀರೆಯುಟ್ಟುಕೊಂಡು ನಸುನಾಚಿಕೆಯ ನಗುವೊಂದರೊಂದಿಗೆ ಎಲ್ಲರೆದುರು ಹಾಜರಾಗುತ್ತಾಳೆ.. ನಮ್ಮ ತಲೆಮಾರೇ ಹೀಗೆ. ಸಂಬಂಧವಿಲ್ಲದ ಲಹರಿಗಳ ಜಾಡು ಹಿಡಿದುಕೊಂಡು ಯಾವುದೋ ಗುಂಗಿನಲ್ಲಿ ನಡೆಯುತ್ತಲೆ ಇರುತ್ತದೆ. ಅಲ್ಲವೆ?…

ಚಿತ್ರ ಕೃಪೆ: www.lisaangeltherapy.com
 

Advertisements

6 thoughts on “ಸಂಬಂಧವಿಲ್ಲದ ಲಹರಿಗಳ ಜಾಡು

 1. “ನಮ್ಮ ತಲೆಮಾರೇ ಹೀಗೆ. ಸಂಬಂಧವಿಲ್ಲದ ಲಹರಿಗಳ ಜಾಡು ಹಿಡಿದುಕೊಂಡು ಯಾವುದೋ ಗುಂಗಿನಲ್ಲಿ ನಡೆಯುತ್ತಲೆ ಇರುತ್ತದೆ. ಅಲ್ಲವೆ?…”

  ಇದು ಕೇವಲ ನಮ್ಮ ತಲೆಮಾರಿಗೆ ಮಾತ್ರ ಸಂಬಧಪಟ್ಟಿದ್ದಲ್ಲ, ಹಿಂದಿನವರಿಗೂ ಹಾಗನ್ನಿಸುತಿತ್ತು, ಅದರೆ ಅನಿಸಿದ್ದನ್ನು ಮಾಡುವ, ಅಥವಾ ಅಭಿವ್ಯಕ್ತಗೊಳಿಸಲು ಬೇಕಾದ ಆರ್ಥಿಕ,ಸಾಮಾಜಿಕ ಸ್ವಾತಂತ್ರ್ಯ ಅವರಿಗೆ ಇರಲಿಲ್ಲ. ಇಂದೂ ಸಹ as a matter of fact ಆ ಭಾಗ್ಯ ಅನೇಕರಿಗಿಲ್ಲ.

 2. ಮರುಕೋರಿಕೆ (Pingback): ಸಂಬಂಧವಿಲ್ಲದ ಲಹರಿಗಳ ಜಾಡು ಹಿಡಿದು | DesiPundit

 3. ಪ್ರಸಾದ್,
  ಅನ್ನಿಸೋದಕ್ಕು ಅನ್ನಿಸಿದ್ದನ್ನ ಮಾಡೊದಕ್ಕು ವ್ಯತ್ಯಾಸ ಇದೆ ಅಂದುಕೊಂಡಿದೀನಿ. ಹಿಂದಿನವರಿಗೆ ಹೀಗೆ ಅನ್ನಿಸ್ತಿರ್ಲಿಲ್ಲ ಅಂತ ನಾನು ಹೇಳಿಲ್ಲ. ಆಮೇಲೆ ಇಲ್ಲಿ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳ ಮಾತು ಏಕೆ? ನಮ್ಮ ಸಣ್ಣ ಸಣ್ಣ ಖುಶಿಗಳಿಗೆ ಬಣ್ಣ ತುಂಬಿಸಿಕೊಳ್ಳೋಕೆ ಯಾವ ದುಡ್ಡಿನ, ಸಾಮಾಜಿಕ ಅಪ್ರೂವಲ್ಲಿನ ಅವಶ್ಯಕತೆ ಇಲ್ವೇ ಇಲ್ಲ. ನಮ್ಮ ಲಹರಿಗಳಿಗೆ ಬ್ರ್ಯಾಂಡಿಂಗಿನ ಮುಲಾಜು ಬೇಕಿಲ್ಲ. ನಾವು ಮೊದಲಿಗಿಂತಲೂ ಹೆಚ್ಚು expressive ಆಗಿದೀವಿ, ನಮ್ಮನ್ನ ನಮ್ಮ ಖುಶಿಗಳನ್ನ, negative ಭಾವಗಳನ್ನ ಹರಿಯಬಿಡ್ತಿದೀವಿ, ಒಳ್ಳೇದಕ್ಕೊ, ಕೆಟ್ಟದಕ್ಕೊ..
  ನಿಮ್ಮ ಕಮೆಂಟು ಇನ್ನೊಂದು ರೀತಿಯ ಆಲೋಚನೆ ಹುಟ್ಟುಹಾಕಿತು. ಥ್ಯಾಂಕ್ಯೂ ಪ್ರಸಾದ್!

  ಅಮರ,
  😦 ’ಯಾಕೊ ಹಿಡಿಸ್ಲಿಲ್ಲ’ ಅಂದಿದೀರ. ಬೇಸರ ನಿಮಗೆ ಬರಹ ಹಿಡಿಸಿಲ್ಲದ್ದಕ್ಕಲ್ಲ. ನೀವು ರೀಸನ್ನೆ ಇಲ್ದೆ ಹಿಡಿಸ್ಲಿಲ್ಲ ಅಂದ್ರೆ ನಂಗೆ ಸಖತ್ ಬೇಜಾರಾಗತ್ತೆ ಕಣ್ರಿ. ಯಾಕೆ ಅಂತ ಹೇಳ್ಬಿಡಿ. ಓಕೇನಾ? ಏನೇ ಆಗ್ಲಿ ನೀವು ಭಿಡೆಯಿಲ್ದಲೆ ಹೇಳಿದ್ದು ಖುಶ್ಯಾಯ್ತು.

  ದೇಸೀಪಂಡಿತ್,
  ತ್ಯಾಂಕೂ!

 4. ಬೆಳಿಗ್ಗೆ ಆಫೀಸಿನ ಘರಮ್ ಘರಮ್ ವಾತಾವರಣದಲ್ಲಿ ಓದಲಿಕ್ಕೆ ಶುಋಮಾಡಿದ್ದು… ಅದರಲ್ಲೂ ನಿಮ್ಮ ಬರಹದ ಮೊದಮೊದಲ ಜಗಳಗಳ ಮಾತುಗಳು ಇನ್ನು ಘರಮ್ ಮಾಡ್ಸಿರಬೇಕು…. ಯಾಕೋ ಹಿತ ಅನ್ನಿಸಲಿಲ್ಲ…. ಬರಿಬಾರ್ದು ಅದ್ಕೊಂಡೆನಾದರು ಬರದೆ ತಿರ್ದೆ …. ಹೊಟ್ಟೆ ತಣ್ಣಗಾದ ಮೇಲೆ ಮತ್ತೆ ಓದಿ …. ನನ್ನ ಕಮೆಂಟ್ ನೋಡಿ ಮುಸು ಮುಸು ನಕ್ಕೆ 🙂
  “ಒಮ್ಮೆ ಅನ್ನಿಸುತ್ತೆ ಪರಿಸ್ಥಿಗಳ ಒತ್ತಡಕ್ಕೆ ಮಣಿದ ನಿರ್ಧಾರಗಳ ಗತಿ ಇಷ್ಟೆನಾ ಅಂತ”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s