ಏನು ಮಾಡಬಹುದು?

225748561.jpg

“The possibility of being a victim of a crime is ever present on my mind; thinking about it as natural as breathing.” – ಮಿಖಾಯೆಲಾ, ಒಬ್ಬ 40 ವಯಸ್ಸಿನ ನ್ಯೂಯಾರ್ಕ್ ವಾಸಿ ಮಹಿಳೆ.

ಕೆಲತಿಂಗಳ ಹಿಂದೆ ಕೊಡಚಾದ್ರಿಗೆ ಹೊರಟುನಿಂತು ಜನಸಂದಣಿ ಇರುವ ಜಾಗವೊಂದರಲ್ಲಿ ಲಗೇಜು ಸಮೇತ ನಿಂತು ಗೆಳೆಯರಿಗಾಗಿ ಕಾಯುತ್ತಿದ್ದೆ. ಆಗ ನನ್ನೆಡೆ ಹೋಗಿಬರುವ ಗಂಡಸರು ಬೀರುತ್ತಿದ್ದ ನೋಟಗಳು ಎಷ್ಟು ಅಸಹ್ಯವಾಗಿದ್ದುವೆಂದರೆ ತಡೆಯಲಾರದೆ ಪುಸ್ತಕವೊಂದನ್ನ ಬಿಡಿಸಿ ನಿಂತುಕೊಂಡೆ. ಒಂದು ಅಧ್ಯಯನದ ಪ್ರಕಾರ ದೈಹಿಕ ಹಲ್ಲೆ, ಲೈಂಗಿಕ ಅಪರಾಧಗಳ ಬಗ್ಗೆ ಹೆಂಗಸರಲ್ಲಿ ಗಂಡಸರಿಗಿರುವುದಕ್ಕಿಂತ ಹೆಚ್ಚಿನ ಭಯ ಕಂಡುಬರುತ್ತದೆ. ಸಾಮಾಜಿಕವಾಗಿ ಮಹಿಳೆಯರಿಗಿರುವ ಸ್ಥಾನ, ಅವರೊಂದಿಗೆ ವ್ಯವಹರಿಸಲಾಗುವ ರೀತಿ ಮತ್ತು ಕಟ್ಟುಪಾಡುಗಳು ಅವರ ಈ ರೀತಿಯ ಅಭದ್ರತೆಗಳನ್ನು, ಅಸಹಾಯಕ ಮನೋಭಾವಗಳನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿವೆ. ಹೆಚ್ಚಿನ ಮಹಿಳೆಯರಿಗೆ ನಡೆಯುತ್ತಿರುವಾಗ ಪಕ್ಕದಲ್ಲಿ ಒಂದು ಕಾರು ಬಂದುನಿಂತರೂ ಏನೇನೋ ಊಹೆಮಾಡಿಕೊಂಡು ವಿಚಲಿತರಾಗುತ್ತಾರೆ. ಕತ್ತಲಾದ ಮೇಲೆ ಮನೆಯಿಂದ ಒಂಟಿಯಾಗಿ ಹೊರಹೋಗಲು ಬೆದರುತ್ತಾರೆ.

‘ಎಲ್ಲರಿಂದ ಒಳ್ಳೆಯ ಹುಡುಗಿ ಅನ್ನಿಸಿಕೊಳ್ಳಬೇಕು, ಡೀಸೆಂಟಾಗಿರಬೇಕು. ಕೆಟ್ಟ ಹುಡುಗಿಯರಿಗೆ ಕೆಟ್ಟ ಅನುಭವಗಳು ಆಗುತ್ತವೆ’ ಹೈಸ್ಕೂಲಿಗೆ ಕಾಲಿಡುವಾಗ ಸೀನಿಯರೊಬ್ಬಳಿಂದ ನಾನು ಕೇಳಿದ ಮೊದಲನೆ ಉಪದೇಶ ಇದು. ಅವಳು ತನ್ನ ಮಾತನ್ನು ಜಸ್ಟಿಫೈ ಮಾಡಲು ಹಲವಾರು ಉದಾಹರಣೆಗಳನ್ನು ಬಳಸಿದಳು. ಅವಳ ಕತೆಗಳಲ್ಲಿ ವಿಪರೀತ ವೈಯಾರವಾಗಿ ಅಲಂಕರಿಸಿಕೊಂಡು ಬರುವ ಹುಡುಗಿಯೊಬ್ಬಳನ್ನು ಕಾಲೇಜು ಹುಡುಗರು ಕ್ಲಾಸುರೂಮಿನಲ್ಲಿ ಕೂಡಿಹಾಕಿಕೊಂಡಿದ್ದರಿಂದ ಹಿಡಿದು ಮೇಷ್ಟರೊಬ್ಬರ ಬಳಿ ಅತೀ ಸಲುಗೆಯಿಂದ ಇದ್ದ ಹುಡುಗಿಯೊಬ್ಬಳು ಗರ್ಭಿಣಿಯಾಗಿದ್ದರವರೆಗೆ ಹಲವಾರು ನಿದರ್ಶನಗಳಿದ್ದವು. ನಾನು ಅವುಗಳನ್ನೆಲ್ಲ ಬಾಯಿಬಿಟ್ಟುಕೊಂಡು ಕೇಳಿಯಾದಮೇಲೆ ’ಅವರಿಗೆ ಯಾಕೆ ಹಾಗೆ ಆಗಿದ್ದು?” ಎಂದು ಕೇಳಿದ್ದೆ. ಅವಳು ’ಹಾಗೆಲ್ಲ ಚೆಲ್ಲುಚೆಲ್ಲಾಗಿ ಆಡಿದ್ರೆ? ಇನ್ನೇನಾಗತ್ತೆ? ಸುಮ್ನೆ ಇರೋ ಹುಡುಗ್ರಿಗೆ ಇನ್ವಿಟೇಶನ್ ಕೊಟ್ಟಹಾಗಾಗುತ್ತೆ ಅಷ್ಟೆ!’ ಅಂದಿದ್ದಳು. ಗಂಡಸರೆಲ್ಲ ನನ್ನ ಬಲಿಹಾಕಲು ಕಾದಿದಾರೇನೋ ಅನ್ನಿಸತೊಡಗಿತ್ತು. ಸುಮಾರು ದಿವಸ ನನ್ನ ಕ್ಲಾಸಿನ ಹುಡುಗರು ಹಾಗೂ ಮೇಷ್ಟರುಗಳನ್ನು ಮುಖನೋಡಿ ಮಾತನಾಡಲು ಹೆದರುತ್ತ ಇದ್ದೆ. ಗೆಳತಿ ಜಾಸ್ಮಿನ್ ತನ್ನ ಅನುಭವವೊಂದನ್ನು ಹೇಳಿಕೊಂಡಾಗ ಇದೆಲ್ಲ ನೆನಪಾಯಿತು.
 
ಜಾಸ್ಮಿನ್ ಭಾರತೀಯ ಮೂಲದ ಮಧ್ಯವಯಸ್ಸಿನ ಮಹಿಳೆ. ತನ್ನ ಬಹುಪಾಲು ಜೀವನವನ್ನು ದುಬಾಯಿ ಮತ್ತು ಇಂಗ್ಲೆಂಡಿನಲ್ಲಿ ಕಳೆದಿರುವವಳು. ಬೆಂಗಳೂರಿನಲ್ಲಿ ಜಾಸ್ಮಿನ್ನಳ ಎರಡನೆ ದಿನ. ಆಫೀಸಿಗೆ ಡ್ಯೂಟಿ ರಿಪೋರ್ಟ್ ಮಾಡಿಕೊಂಡು ಸಂಜೆ ಸುಮಾರು ಏಳುಗಂಟೆಯ ವೇಳೆಗೆ ತನ್ನ ಬಾಡಿಗೆ ಮನೆಯ ಬಾಗಿಲ ಬೀಗ ತೆಗೆಯುತ್ತ ಇದ್ದಾಗ ಇಬ್ಬರು ಗಂಡಸರು ಬೈಕಿನಲ್ಲಿ ಬಂದು ನಿಂತರಂತೆ. ಈಕೆ ’ಹೆಲೋ ಹೌ ಕ್ಯಾನ್ ಐ ಹೆಲ್ಪ್ ಯೂ?’ ಎಂದು ಕೇಳಿದಳಂತೆ. ಅಷ್ಟೆ. ಮುಂದೆ ಏನಾಯಿತೆಂದು ಆಕೆಗೆ ನೆನಪಿಲ್ಲ. ಪ್ರಜ್ನೆ ತಿಳಿಯುವ ವೇಳೆಗೆ ಆಕೆಯ ಪರ್ಸು, ಮನೆಯ ಕೆಲವು ಬೆಲೆಬಾಳುವ ವಸ್ತುಗಳು ಇರಲಿಲ್ಲ. ಕತ್ತಿನ ಹಿಂದೆ ವಿಪರೀತ ನೋವು, ಮೂಗಿನ ಮೇಲೆ ಹೊಡೆತದ ಗುರುತು ಹಾಗೂ ಹರಿದ ತುಟಿಯೊಡನೆ ಜಾಸ್ಮಿನ್ ಆಸ್ಪತ್ರೆಗೆ ದಾಖಲಾದಳು. ಕಲೀಗುಗಳು ಆಕೆಯ ಬಗ್ಗೆ ಕಳಕಳಿ ತೋರಿಸುವುದಿರಲಿ, ಒಂದೆರಡು ಒಳ್ಳೆಯ ಮಾತುಗಳನ್ನೂ ಆಡಲಿಲ್ಲ. ಬದಲು ಆಕೆ ಕೇಳಬೇಕಾಗಿ ಬಂದಿದ್ದು ಕಟಕಿಯ ಮಾತುಗಳು. ’ಸೀ ಜಾಸ್ಮಿನ್, ನೀನ್ಯಾಕೆ ಒಬ್ಳೆ ಮನೆ ಮಾಡಿಕೊಂಡಿದೀಯ? ಇಟೀಸ್ ಸೋ ರಿಸ್ಕಿ ಯು ನೋ! ಹಿಯರ್ ಇನ್ ಇಂಡಿಯಾ ಹೆಂಗಸು ಒಬ್ಬಳೆ ಇದ್ದರೆ ಗಂಡಸರು ಅದನ್ನ ಬೇರೆ ರೀತಿ ನೋಡ್ತಾರೆ. ಯಾರಾದ್ರು ಒಂದಿಬ್ರು ರೂಂಮೇಟ್ಗಳನ್ನಾದರು ಕರೆದುಕೊ. ಸೀ ವಾಟ್ ಹ್ಯಾಪನ್ಡ್?’ ಜಾಸ್ಮಿನ್ನಳಿಗೆ ಗಾಯಗಳ ನೋವಿಗಿಂತ ಅವರ ಮಾತುಗಳು ಚುಚ್ಚಿದುವಂತೆ. ’ಟೀನಾ, ರಿಕ್ಷಾವಾಲಾಗಳು ಕೂಡ ಎಲ್ಲೆಲ್ಲಿಯೋ ಸುತ್ತಿಸಿ ಕರೆದುಕೊಂಡು ಹೋಗ್ತಾರೆ. ವಾದ ಮಾಡಿದರೆ ವಯಲೆಂಟಾಗಿ ಬಿಹೇವ್ ಮಾಡ್ತಾರೆ. ಐ ಡೋಂಟ್ ನೋ..ನನ್ನ ಪೇರೆಂಟ್ಸ್ ನನಗೆ ಇಂಡಿಯನ್ ಕಲ್ಚರ್, ವ್ಯಾಲ್ಯೂಸ್ ಬಗ್ಗೆ ಏನೆಲ್ಲ ಹೇಳಿದ್ದರು. ನನಗೆ ಈಗ ಅವೆಲ್ಲ ಇಲ್ಯೂಶನ್ ಅನ್ನಿಸೋಕೆ ಶುರುವಾಗಿದೆ. ಆಫೀಸಲ್ಲಿ ಗಂಡಸ್ರು ಇಂಡೈರೆಕ್ಟಾಗಿ ಹೇಳ್ತಾರೆ, ಹೆಂಗಸರು ಪ್ರೊವೊಕೇಟಿವ್ ಆಗಿ ಡ್ರೆಸ್ ಮಾಡೋದರಿಂದ ಹಾಗೆಲ್ಲ ಆಗುತ್ತೆ ಅಂತ. ಡೂ ಐ ಲುಕ್ ಲೈಕ್ ಐ ಆಮ್ ಇನ್ವೈಟಿಂಗ್ ಟ್ರಬಲ್? ವಾಟ್ ಅಬೌಟ್ ದೋಸ್ ಟ್ರೈಬಲ್ ವಿಮೆನ್ ರೇಪ್ಡ್ ಇನ್ ಆಂಧ್ರ? ಅವರೇನು ಪ್ರೊವೊಕೇಟಿವ್ ಆಗಿ ಮೇಕಪ್, ಡ್ರೆಸ್ ಮಾಡಿಕೊಂಡಿದ್ದರಾ? ರೇಪ್, ಮೊಲೆಸ್ಟೇಶನ್ ಆಗೋ ಹೆಂಗಸ್ರೆಲ್ಲ ಪ್ರೊವೊಕೇಟಿವ್ ಆಗಿರ್ತಾರಾ? ’ ಜಾಸ್ಮಿನ್ ಮಾತನಾಡುತ್ತ ಇದ್ದಳು. ನನಗೆ ನಡುಕ. ಬೆಳಗಾಗೆದ್ದು ಪೇಪರು ಬಿಡಿಸಿದರೆ ಸ್ಕಾರ್ಲೆಟ್ ಕೀಲಿಂಗ್ ಕೊಲೆಯ ಖಬರು. ಅವರು ಇವರ ಮೇಲೆ ಇವರು ಅವರ ಮೇಲೆ ಸಗಣಿ ಎರಚುವ ಭರದಲ್ಲಿ ಕೊಲೆಯ ವಿಷಯ ಮೂಲೆಗುಂಪು. ಆ ಹುಡುಗಿ ಯಾವ ರೀತಿಯ ಯಾತನೆ ಅನುಭವಿಸಿ ಸತ್ತಿರಬೇಕು?

ಪ್ರತಿಭಾ ಕೊಲೆ ಪ್ರಕರಣ ಬೆಳಕಿಗೆ ಬಂದಮೇಲೆ ಬಹಳ ಬದಲಾವಣೆಗಳಾಗಿವೆ. ಈಗ ಜಾಸ್ಮಿನ್ ತನ್ನ ಹತ್ತಿರದ ಪೊಲೀಸ್ ಠಾಣೆಯಲ್ಲಿ ತನ್ನ ಮನೆಯ ವಿಳಾಸ, ತನ್ನ ಹೆಸರು ಎಲ್ಲವನ್ನು ದಾಖಲು ಮಾಡಿಸಿದ್ದಾಳೆ. ತನ್ನ ದೊಗಲೆಬ್ಯಾಗಿನಲ್ಲಿ ಸದಾ ಒಂದು ಮಾರುದ್ದದ ದೊಣ್ಣೆ ಹಾಗೂ ಪೆಪ್ಪರ್ ಸ್ಪ್ರೇ ಇಟ್ಟುಕೊಳ್ಳದೆ ಹೊರಗೆ ಬರುವುದಿಲ್ಲ. ಕತ್ತಲಾದ ಮೇಲೆ ಓಡಾಡುವದನ್ನು ಆದಷ್ಟು ತಪ್ಪಿಸುತ್ತಾಳೆ. ‘ಒಬ್ಬಳೆ ಸಂಜೆ ವಾಕಿಂಗ್ ಹೋಗ್ಬೇಡ’ ಎಂದು ನನಗೆ ಬುದ್ಧಿವಾದ ಹೇಳುತ್ತಾಳೆ. ನಾನು ಏನು ಮಾಡಬಹುದು? ಯೋಚನೆ ಮಾಡುತ್ತಿದ್ದೇನೆ.

ಚಿತ್ರಕೃಪೆ: www.jupiterimages.com

26 thoughts on “ಏನು ಮಾಡಬಹುದು?

 1. ಟೀನಾ,

  ತುಂಬ ವಿಚಲಿತಗೊಳಿಸುವ ವಿಷಯ. ನೀವು ಬರೆದಿರುವುದು ತುಂಬ ನಿಜ. ನಾವು ಒಳ್ಳೆಯತನವನ್ನ ಇನ್ ಕಲ್ಕೇಟ್ ಮಾಡುವಷ್ಟೇ ಮಕ್ಕಳಲ್ಲಿ ಧೈರ್ಯ ಮತ್ತು ಸಂಕಟದ ಸನ್ನಿವೇಶಗಳನ್ನ ಎದುರಿಸುವ ತಿಳುವಳಿಕೆ, ಕಲಿಕೆಯನ್ನೂ ಇನ್ ಕಲ್ಕೇಟ್ ಮಾಡಿದ್ದರೆ, ಈ ಬಗೆಯ ಹೆಚ್ಚಿನ ಘಟನೆಗಳನ್ನು ತಡೆಯಬಹುದು ಅನ್ನಿಸುತ್ತೆ. ಮೀಡಿಯಾ ಹೈಪ್ ಮತ್ತು ಇವತ್ತಿನ ಸಾಮಾಜಿಕ ಅಸಮಾನತೆ ಎರಡೂ ಸೇರಿ ನಮ್ಮ ಸಮಾಜದಲ್ಲಿ ಬಗ್ಗಡ ಎಬ್ಬಿಸುತ್ತಿದೆ.
  ನಿಮ್ಮ ವಿಷಯ ಮಂಡನೆ ಮತ್ತು ತಿಳುವಳಿಕೆಯನ್ನು ನಾನು ಗೌರವಿಸುತ್ತೇನೆ. ಈ ಬಗ್ಗೆ ಹೆಚ್ಚಿನ ಮಾತುಕತೆ, ಮತ್ತು ಯಾವುದಾದರೂ ಉಪಯುಕ್ತ ಇನಿಶಿಯೇಟಿವ್ ಮಾಡುವ ಬಗ್ಗೆ ಯೋಚನೆ ಮಾಡೋಣವಾ?

 2. ಸಿಂಧು,
  ಖಂಡಿತವಾಗ್ಲೂ! ಆತ್ಮರಕ್ಷಣೆಯ ಬಗ್ಗೆ ಪ್ರತಿಯೊಬ್ಬ ಮಹಿಳೆ ಅರಿತಿರಬೇಕಾದ್ದು ಬಹಳ ಅವಶ್ಯಕ. ಈ ವಿಷಯದಲ್ಲಿ ನನ್ನ ತಂಗಿ ನನಗೆ ಮಾದರಿ. ಕರಾಟೆ ಕಲಿತಿರುವ ಆಕೆ ತನ್ನ ಬ್ಯಾಗಿನಲ್ಲಿ ಆತ್ಮರಕ್ಷಣೆಯ ಸಲಕರಣೆಗಳು ಇಲ್ಲದೆ ಹೊರಗೆ ಕಾಲಿಡುವದಿಲ್ಲ. ಇದು ಎಲ್ಲರಿಗೆ ತಮಾಷೆಯಾಗಿ ಕಾಣಬಹುದಾದರು ಅನುಭವಿಸಿದವರಿಗೆ ಆ ಯಾತನೆ ಗೊತ್ತು. ಆಕೆಯಿದ್ದ ಹಾಸ್ಟೆಲ್ಲಿನ ಎದುರು ನಿಂತು ಅಸಭ್ಯವಾಗಿ ವರ್ತಿಸುತ್ತಿದ್ದ ಹುಡುಗರಿಗೆ ಛೀಮಾರಿ ಹಾಕುತ್ತಿದ್ದ ಆಕೆಯ ಹೆಗಲಿಗೆ ಒಬ್ಬ ಕೈ ಹಾಕಿದ. ಆಕೆ ಮರುಕ್ಷಣವೆ ತಿರುಗಿನಿಂತು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದೆ ಅಲ್ಲದೆ ಗೆಳತಿಯರಿಗೆ ಪೊಲೀಸರಿಗೆ ಕರೆ ಮಾಡಲು ತಿಳಿಸಿ ಆತನ ಮೇಲೆ ದೂರು ದಾಖಲಿಸಿದಳು. ಮೊನ್ನೆ ಬೆಂಗಳೂರಿನ ನೀಲೋಫರ್ ಎಂಬ ಗೃಹಿಣಿ ತನ್ನ ಮಗಳ ಸರವನ್ನು ಕಳ್ಳತನ ಮಾಡಲೆಳಸಿದ ವ್ಯಕ್ತಿಯನ್ನು ಬೆನ್ನಟ್ಟಿ ಹಿಡಿದ ಘಟನೆ ಕೂಡ ನಮಗೆ ಮಾದರಿ. ಸೂಕ್ತ ಮಾಹಿತಿ ದೊರಕಿದರೆ ಸುಮಾರು ಮಹಿಳೆಯರಿಗೆ ಉಪಯೋಗವಾದೀತು. ಈ ಬಗ್ಗೆ ಪೊಲೀಸ್ ಡಿಪಾರ್ಟ್ಮೆಂಟನ್ನು ಸಂಪರ್ಕಿಸಿ ಸೂಕ್ತ ಕಡೆಯಿಂದ ಮಾಹಿತಿ ದೊರಕುವ ಹಾಗೆ ಮಾಡುವ ಜವಾಬ್ದಾರಿ ನನ್ನದು. ಆದರೆ ಈ ಬಗ್ಗೆ ನೀವು ಹೇಳುವ ಹಾಗೆ ನಾವು ಏನು ಮಾಡಬಹುದು ಎಂದು ಕೊಂಚ ಮಾತುಕತೆ ನಡೆದರೆ ಒಳ್ಳೆಯದು.

 3. ಖಂಡಿತವಾಗ್ಲೂ! ಆತ್ಮರಕ್ಷಣೆಯ ಬಗ್ಗೆ ಪ್ರತಿಯೊಬ್ಬ ಮಹಿಳೆ ಅರಿತಿರಬೇಕಾದ್ದು ಬಹಳ ಅವಶ್ಯಕ. ಹೆಣ್ಣುಮಕ್ಕಳಿಗೆ ಅತ್ಮರಕ್ಶಣಾ ವಿಧಾನಗಳನ್ನು ತಿಳಿಸಬೇಕಾಗಿದೆ. ನಮ್ಮಲ್ಲಿ ಶಾಲೆಗಳಲ್ಲಿಯೇ ಇದಕ್ಕೆ ಮೂಲ ತರಬೇತಿ ನಿಡಬೇಕು ಹಾಗೆಯೇ ನಿಮ್ಮ ಗೆಳತಿ ಮಾಡಿದ ಹಾಗೆ ಬ್ಯಾಗಿನಲ್ಲಿ ದೊಣ್ಣೆ, ಪೆಪ್ಪರ ಪುಡಿ, ಮೆಣಸಿನಕಾಯಿ ಪುಡಿ ಇಟ್ಟುಕೊಳ್ಳಬಹುದು. ಮೊದ ಮೊದಲು ದಿನಾ ಬೇಕಾಗಬಹುದು, ಒಂದಿಬ್ಬರಿಗೆ ಪಾಠ ಕಲಿಸಿದರೆ ಸಾಕು ಉಳಿದವರು ಸುಧಾರಿಸಿಯಾರು.

  ಇನ್ನು ನಮ್ಮ ಹೆಣ್ಣುಮಕ್ಕಳು ಉಡುವ ಬಟ್ಟೆಗಳ ಆಯ್ಕೆಯಂತೂ ಅಯ್ಯೊ ಕೇಳ್ಲೆಬೇಡಿ, ಇದು ಕೂಡಾ ಕಾರಣ ಮರೆಯಬೇಡಿ.

  p.s: ನಾನು ಫ್ಯಾಷನ್ ವಿರೋಧಿಯಲ್ಲ, ಮಿತಿಮೀರಿದ ಅಮೃತವು ವಿಷವೇ…

  ಪ್ರೀತಿಯಿರಲಿ

  ಶೆಟ್ಟರು

 4. Tina,
  I fully agree with your views on the need to learn `self protection` techniques, and be prepared to face the situation. But my bigger concern is the attitude and apathy of the people at large, who remain mute spectators, to such kind of atrocities/crime, which most of the time are committed in broad daylight!!!!!

 5. ನಮಸ್ಕಾರ ಶೆಟ್ಟರೇ,
  ನಾನು ಹೆಣ್ಣುಮಕ್ಕಳು ಪ್ರೊವೋಕಿಂಗ್ ಉಡುಗೆ ಧರಿಸುವುದಕ್ಕೆ ಯಾವತ್ತೂ ವಿರೋಧಿಯೇ. ಆದರೆ, ಈ ವರೆಗಿನ ಬಹುಪಾಲು ಅತ್ಯಾಚಾರಗಳೆಲ್ಲ ಸೀರೆ ಉಡುವ, ಚೂಡಿದಾರದ ಹೆಣ್ಣು ಮಕ್ಕಳ ಮೇಲೇ ನಡೆದಿದೆ ಗೊತ್ತೇ? ಜೊತೆಗೆ, ಹಣ, ಒದವೆಗಾಗಿಯೂ ಹೆಣ್ಣೂಮಕ್ಕಳ ಮೇಲೆ ದಾಳಿಗಳಾಗ್ತವೆ.
  ಇದಕ್ಕೇನಂತೀರಿ?

 6. ನಾನು ಪ್ರೊವೋಕಿಂಗ್ ಉಡುಗೆಯೊಂದನ್ನೆ ಬೆಟ್ಟು ಮಾಡಿ ತೋರಿಸಿಲ್ಲ, ಅದು ಕೂಡ ಕಾರಣ ಅನ್ನುವುದು ಸುಳ್ಳಲ್ಲ.

  ಹಾಗೆಯೇ, ಹಣ, ಒದವೆಗಾಗಿಯೂ ಹೆಣ್ಣೂಮಕ್ಕಳ ಮೇಲೆ ದಾಳಿಗಳಾಗ್ತವೆ ಅನ್ನೊದು ಒಪ್ಪತಕ್ಕ ಮಾತೇ…ಹೀಗಾಗಿ ನಮ್ಮ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆ ಹೇಳಿಕೊಡಲೇ ಬೇಕಾಗಿದೆ, ಯಾಕೆಂದರೆ ಸರಕಾರ- ಪೋಲಿಸರಿಂದ ನಮ್ಮ ಸಂರಕ್ಷಣೆ ಬಯಸುವುದು ಮೂರ್ಖತನವೇ ಸರಿ.

  ಇತ್ತಿಚಿಗೆ “ಮನೆ”ಗಳಲ್ಲಿಯೇ ಅತ್ಯಾಚಾರಿಗಳು ಹುಟ್ಟಿಕೊಳ್ಳುತ್ತಿರುವುದು ಕೂಡಾ ಮತ್ತಷ್ಟು ಆತಂಕಕಾರಿ ಸಂಗತಿ.

  -ಶೆಟ್ಟರು

 7. ನಮಸ್ಕಾರ ಟೀನಾ,

  ನೀವು ಪ್ರಸ್ತಾಪಿಸಿರುವ ವಿಷಯ ನಿಜವಾಗಲೂ ಚಿಂತನಾರ್ಹ. ಅಟೋದವರ ಜೊತೆ ನಾನು ಜಗಳವಾದದ ದಿನವಿಲ್ಲ. ಎಷ್ಟೊ ಸಾರಿ ಪೋಲಿಸ್ ಸ್ಟೇಷನ್ನಿನ ಮೆಟ್ಟಿಲು ಹತ್ತಿ ಕಡೆಗೆ ಅಟೋದವನು ಸೋಲೊಪ್ಪಿದ ಪರಿಸ್ಥಿತಿಗಳೂ ಇವೆ.

  ಪುರುಷರ ಸಮಕ್ಕೆ ನಾವು ಬೆಳೆದು ನಿಂತಿದ್ದೇವಾದರೂ ಪ್ರಪಂಚ ಇನ್ನೂ ಸ್ತ್ರೀಕುಲವನ್ನು ಗೌರವಯುತವಾಗಿ ಕಾಣುವುದನ್ನು ರೂಢಿ ಮಾಡಿಕೊಂಡ ಹಾಗೆ ಕಾಣಿಸುವುದಿಲ್ಲ. ಇದರ ಬಗ್ಗೆ ನನಗೆ ಖೇದವಿದೆ. ಏನು ಮಾಡಬಹುದು ಎಂದು ನಾನು ಯೋಚನೆ ಮಾಡುತ್ತಲೇ , ಮೆಣಸಿನ ಪುಡಿ, ಸ್ವಿಸ್ ಚಾಕು ಮತ್ತು ಪೆಪ್ಪೆರ್ ಸ್ಪ್ರೇ ಇಟ್ಟುಕೊಂಡೇ ಕಾಲೇಜಿಗೆ ಹೋಗುತ್ತಿದ್ದೇನೆ.

 8. I have never read or heard what was the punishment awarded to these rapists or wrong doers targeting women. If at all they are convicted, the punishment would be simple imprisonment or fines. In fact, there was a case of serial rapist Umesh Reddy, who managed to elude the police for a long time and even escaped from the police custody after he was caught. His case took years to be heard.

  Will this deter the rapists from continuing what they do? Do we need fast track courts to handle such cases and hand out quick verdicts? How about following what Saudi Arabia does to such people…a quick public beheading or a slow painful stoning to death…that would very quickly restore order and safety on the streets.

  With warm regards,

  Mayura

 9. ಟೀನಾ ಅವರೆ ನೀವು ಹೇಳಿದ ಕಥೆ ಕೇಳಿ ತುಂಬಾ ಬೇಸರವಾಯಿತು. ಒಂದೆಡೆ ನಾವು ನಮ್ಮದು ಜಗತ್ತಿಗೆ ಬಟ್ಟೆ ತೊಡಲು ಕಲಿಸಿದ ನಾಡು ಅಂತೀವಿ. ಆದ್ರೆ ಇನ್ನೊಂದೆಡೆ ಬಟ್ಟೆಯನ್ನು ಎಳೆಯೋ ಕೆಲಸವನ್ನು ಮಾಡ್ತಿವಿ. ಬಹುಶಃ ದುಶ್ಯಾಸನ ದ್ರೌಪದಿ ಸೀರೆ ಎಳೆದಾಗಿನಿಂದಲೂ ಈ ಸಂಸ್ಕೃತಿ ನಮ್ಮ ನಾಡನ್ನು ಆವರಿಸಿರಬೇಕು!

 10. ಇದಕ್ಕೆ ಪೂರಕವಾಗಿ ನನ್ನ ಉದಾಹರಣೆಗಳು –
  1) ಹೆಚ್ಚಾಗಿ ಆಟೋದಲ್ಲಿ ರಹಮತ್ ನಗರದಿಂದ ಕಸ್ತೂರ್ಬಾ ರೋಡಿಗೆ ಆಟೋದಲ್ಲಿ ಹೋಗಿ ಹೋಗಿ ಎಲ್ಲಿದ್ದಾಗ ಮೀಟರ್ ಎಷ್ಟು ಓಡುತ್ತದೆ ಅಂತ ಕರೆಕ್ಟಾಗಿ ತಿಳ್ಕೊಂಡಿದೇನೆ. ಆಟೋ ಮೀಟರ್ ಜಾಸ್ತಿ ಓಡೋದು, ನಾನು ಜಾಸ್ತಿ ಕೊಡಲ್ಲ ಅಂತ ಹೇಳಿ ದಿನಾ ಎಷ್ಟಾಗತ್ತೋ ಅಷ್ಟೆ ಕೊಡೋದು, ಆಟೋದವ ಜಗಳಾಡೋದು, ಪ್ರೆಸ್ ಕಾರ್ಡು ತೋರಿಸಿದ ಮೇಲೆ ಸುಮ್ನಾಗೋದು ದಿನದ ಹಾಡು. ಒಂದಿನ ಎಷ್ಟು ಹೇಳಿದ್ರೂ ಆಟೋದವ ಬಗ್ಗಲೇ ಇಲ್ಲ. ಸರಿ, ನಡಿ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್-ಗೆ ಅಂದೆ. ಆತ ಅದಕ್ಕೂ ಬಗ್ಲೇ ಇಲ್ಲ, ಇದ್ದ ಟ್ರಾಫಿಕ್ ಇನ್ಸ್ಪೆಕ್ಟರುಗಳ ಹೆಸ್ರೆಲ್ಲ ಹೇಳಿ ಯಾರ್ಗಾದ್ರು ಕಂಪ್ಲೈಂಟ್ ಮಾಡಿ ನೋಡು, ಆಗ ನೋಡು ಏನಾಗುತ್ತೆ ಅಂದ. ಆತ ಇನ್ನೂ ಅರಚಾಡ್ತಲೇ ಇದ್ದ, ಆಫೀಸ್-ಗೆ ಸೆಕ್ಯೂರಿಟಿ ಇಲ್ಲಾಂದ್ರೆ ಬಹುಶ ನನ್ ಗತಿ ಏನಾಗಿರ್ತಿತ್ತೋ?
  2) ಇನ್ನೊಂದು ದಿನ ಹೀಗೆಯೇ, ಶುರುವಾಯ್ತು ಜಗಳ. ನಂಗೆ ದಿನಾ ಜಗಳಾಡಿ ಆಡಿ ಸಾಕಾಗಿತ್ತು. ಸರಿ, ನೆಟ್ಟಗೆ ಹೇಳಿದೆ, ಎಷ್ಟು ಆಗತ್ತೋ ಅಷ್ಟೇ ತಗೊಳ್ಳಿ ಅಂತ. ಆತ ಕೇಳಲಿಲ್ಲ. ನಾನು ಮೆಟ್ರಾಲಜಿ ಡಿಪಾರ್ಟ್ಮೆಂಟ್ ನಂಬರ್-ಗೆ ಫೋನ್ ಮಾಡಿ ಗಾಡಿ ನಂಬರು, ಕಂಪ್ಲೈಂಟು ಕೊಡಲು ಶುರು ಮಾಡಿದೆ (ಅವರು ಏನು ಮಾಡ್ತಾರೋ ನಿಜಕ್ಕೂ ಗೊತ್ತಿಲ್ಲ, ಆದ್ರೆ ಆಟೋ ಮೀಟರುಗಳು ಕೆಟ್ಟಿದರೆ ಕಂಪ್ಲೈಂಟು ಕೊಡಬಹುದಾದ ವ್ಯವಸ್ಥೆ ಇದೆ ಅಂತ ಗೊತ್ತು, ನಂಬರು 080-22253500)
  ಆಗ ದಾರಿಗೆ ಬಂದ ಆತ, ಚಿಲ್ಲರೆ ವಾಪಸ್ ನೀಡಿದ. ಮತ್ತು ಕಂಪ್ಲೈಂಟು ವಾಪಸ್ ತಗೊಳ್ಳಕ್ಕೆ ಹೇಳಿದ. ಸರಿ, ಮತ್ತೆ ಫೋನ್ ಮಾಡಿದೆ, ಮತ್ತೆ ಪರಿಸ್ಥಿತಿ ವಿವರಿಸಿ, ತತ್ಕಾಲಕ್ಕೆ ಸಮಸ್ಯೆ ಪರಿಹಾರ ಆಗಿದೆ ಮೇಡಂ ಅಂದೆ. ಆಕೆ ಸರಿ ಅಂದರು, ಫೋನ್ ಇಟ್ಟೆ. ಗಾಡಿ ಸ್ಟಾರ್ಟ್ ಮಾಡುತ್ತಿದ್ದ ಅವ ನನಗೇನಾದ್ರು ತೊಂದರೆ ಆಯ್ತು ಅಂದ್ರೆ ಆಗ ನೋಡು, ರಹಮತ್ ನಗರದಲ್ಲಿ ನಿನ್ನ ಮನೆ ಎಲ್ಲಿ ಅನ್ನೋದು ಕೂಡ ನಂಗೆ ಚೆನ್ನಾಗಿ ಗೊತ್ತು ಅಂತ ಗುರಾಯಿಸಿ ಹೊರಟುಹೋದ.
  ನಂಗೇನು ದೊಡ್ಡ ಮಟ್ಟದ ಕಹಿ ಅನುಭವ ಆಗಿಲ್ಲ, ಆದರೆ, ಮಾಧ್ಯಮದವರಿಗೇ ಬೆದರಿಕೆ ಹಾಕುವವರಿರುವಾಗ ಉಳಿದವರ ಪಾಡೇನೋ? ಏನಾದ್ರು ಮಾಡ್ಬೇಕು…

 11. ನಮಸ್ಕಾರ ಟೀನಾ ಅವರೇ,

  ನಿಮ್ಮ ಸ್ನೇಹಿತೆ ಜಾಸ್ಮಿನ್ ಹೇಳಿದಂತೆ ಒಂದು ಚೀಲದಲ್ಲಿ ದೊಣ್ಣೆ ಮತ್ತು ಪೆಪ್ಪರ್ ಸ್ಪ್ರೇ (ಮೆಣಸಿನ ಪುಡಿ ಅನ್ನೋಣ್ವಾ)
  ಇಟ್ಟುಕೊಂಡು ಹೊರಗೆ ಹೋದರೆ ಒಳಿತು. ಈಗೀಗ ಪೊಲೀಸರು ಪೋಲಿಗಳೊಂದಿಗೆ ಶಾಮೀಲಾಗಿರ್ತಾರೆ.
  ನಗರ ಪ್ರದೇಶಗಳಲ್ಲಿ ನಡೆಯುತ್ತಿರುವ ಆಸಿಡ್ ಅಟ್ಯಾಕ್ ಸನ್ನಿವೇಶಗಳಿಗೇನು ಬರವಿಲ್ಲ. ಗೋವಾದಲ್ಲಿ ನಡೆಯುತ್ತಿರುವ ಅತ್ಯಾಚಾರಗಳ
  ಸರಣಿ ನಿಲ್ಲುತ್ತಿಲ್ಲ. ಈಗೊಂದು ೧೦ ವರ್ಷಗಳ ಹಿಂದೆ ಮುಂಬಯಿ ನಿರ್ಭೀತಿಯ ನಗರ ಎಂದು ಹೆಸರು ಪಡೆದಿತ್ತು.
  ಈಗ ನೋಡಿ, ಎಲ್ಲೆಲ್ಲಿಯೂ ಭೀತಿ, ಭಯ, ಅತ್ಯಾಚಾರ, ಕೊಲೆ, ಸುಲಿಗೆ ನಿರಂತರವಾಗಿ ನಡೆಯುತ್ತಿದೆ.

  ಎಲ್ಲಿಯವರೆವಿಗೆ ಕೈಗೆ ಕೈ, ಕಣ್ಣಿಗೆ ಕಣ್ಣು ಎಂಬ ಶಿಕ್ಷಾ ವಿಧಿ ಶಾಸನವನ್ನು ದುಷ್ಟರ ಮೇಲೆ ಹೇರಲಾಗುವುದಿಲ್ಲವೋ ಅಲ್ಲಿಯವರೆವಿಗೂ
  ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕಾದೀತು.

  ಹುಂ! ಎಷ್ಟು ಬರೆದರೂ ಸಾಲುವುದಿಲ್ಲ. ಈ ದೇಶದಲ್ಲಿಯ ಜನಗಳಲ್ಲಿ ಸಾಮಾಜಿಕ ಪ್ರಜ್ಞೆ ಮೂಡುವವರೆವಿಗೆ ಇದೆಲ್ಲಾ ಮಾಮೂಲಿನಂತೆ
  ನಡೆಯುತ್ತಿರುತ್ತವೆ.

  ಒಳ್ಳೆಯದಾಗಲಿ

  ಗುರುದೇವ ದಯಾ ಕರೊ ದೀನ ಜನೆ

 12. ನೀ ಒಬ್ಬಳೇ ಇರೋದು, ಅಥ್ವಾ ನೀ ಹೀಗೆ ಬಟ್ಟೆ ಹಾಕೋದು ನಿನ್ನನ್ನ ’available’ ಅಂತ ಅನ್ನಿಸೋದಕ್ಕೆ ಕಾರಣ ಅನ್ನೋದು ಸಾಮಾಜಿಕ ಬೇಜವಾಬ್ದಾರಿಯ, ಸಂವೇದನಾರಾಹಿತ್ಯದ ನಿದರ್ಶನ ಅಂತ ನನಗನ್ನಿಸುತ್ತೆ. ಈ ವಸ್ತ್ರಪುರಾಣ ಬಹಳಷ್ಟು ಕಡೆ ಬಹಳಷ್ಟು ಜನ ಕೊಚ್ಚಿಹಾಕಿ ಆಗಿದೆ. ಪ್ರೊವೋಕಿಂಗ್ ಅನ್ನೋದೇ ಒಂದು ಸಾಪೇಕ್ಷ ಕಲ್ಪನೆ ಅಲ್ಲ್ವಾ? ಸೀರೆ ಪಾಶಿಮಾತ್ಯರಿಗೆ ಪ್ರೊವೊಕಿಂಗ್ ಅನ್ನಿಸಿದ್ರೆ ಸೀದಾ ಸಾದಾ ಜೀನ್ಸ್‍ನಲ್ಲಿ ಯಾವುದೋ ಕುಗ್ರಾಮಕ್ಕೆ ಕಾಲಿಟ್ಟ ಹುಡುಗಿ ಅಲ್ಲಿ ಪ್ರೊವೊಕಿಂಗ್ ಆಗಿ ಕಾಣಬಹುದು.
  ಮುಖ್ಯವಾಗಿ ಸಮಸ್ಯೆ ಇರೋದು ದೃಷ್ಟಿಕೋನದಲ್ಲಿ ಅನ್ನಿಸುತ್ತೆ. ಇಷ್ಟರ ಮೇಲೆ ಚೇತನಾ ಹೇಳೋ ಹಾಗೆ ಬಹುಪಾಲು ಅತ್ಯಾಚಾರಗಳು ನಡೆದಿರೋದು ಸೀರೆ-ಚುಡಿದಾರದ ಹೆಣ್ಣುಮಕ್ಕಳಿಗೇ. ಈ ವಿಷಯ ಮನದಟ್ಟು ಮಾಡ್ಸೋಕೆ ಬ್ಲ್ಯಾಂಕ್ ನಾಯ್ಸ್ ಅಂತ ಒಂದು ಗುಂಪು ಬೆಂಗಳೂರು, ಮುಂಬೈ- ಇನ್ನಿತರ ಕೆಲವು ಸ್ಥಳಗಳಲ್ಲೂ ಹಲವು ಹೆಣ್ಣುಮಕ್ಕಳು ಈವ್ ಟೀಸಿಂಗ್‍ಗೆ ಒಳಗಾದಾಗ ಧರಿಸಿದ್ದ ಬಟ್ಟೆಗಳನ್ನೇ ಧರಿಸಿ ಸಾರ್ವಜನಿಕ ಪ್ರದರ್ಶನ ನಡೆಸೋ ಕೆಲಸ ಮಾಡ್ತಿದೆ. ಬಹಳಷ್ಟು ಸಂದರ್ಭಗಳಲ್ಲಿ ಈವ್ ಟೀಸಿಂಗ್‍ಗೆ ಒಳಗಾದವರು ಮೌನಕ್ಕೆ ಮೊರೆಹೋಗಿರ್ತಾರೆ. ಅತ್ಯಾಚಾರದಂಥ ತೀವ್ರ ಅನುಭವಗಳಲ್ಲದಿದ್ರೂ ಸಣ್ಣ್ ಸಣ್ಣ ಘಟನೆಗಳು ಟೀನಾ ಇಲ್ಲಿ ಹೇಳಿದ್ ಹಾಗೆ ಭಯದ ನೆರಳಿನಲ್ಲಿ ಬೀಳೋಹಾಗೆ ಮಾಡಿರುತ್ವೆ – ನಮ್ಮೆಲ್ಲರ ಬದುಕಿನಲ್ಲಿ. ಇಂಥ ಮೌನಗಳಿಗೆ ಮಾತಾಗುವ ಪ್ರಯತ್ನವಾಗಿ ಎರಡು ವರ್ಷದ ಹಿಂದೆ (ಮಹಿಳಾ ದಿನದ ಪ್ರಯುಕ್ತ) ಬ್ಲಾಂಕ್ ನಾಯ್ಸ್ ಒಂದು ಬ್ಲಾಗಥಾನ್ ಅನ್ನು ಕೂಡ ಮಾಡಿತ್ತು. ಆ ಬಗ್ಗೆ ನನ್ನ ಬ್ಲಾಗ್ ನಲ್ಲಿ ಒಂದು ಚಿಕ್ಕ ಪೋಸ್ಟ್ ಹಾಕಿದ್ದೆ, ಅಲ್ಲೇ ಬ್ಲ್ಯಾಂಕ್ ನಾಯ್ಸ್ ಕುರಿತು ವಿವರಗಳಿಗೂ ಲಿಂಕ್ ಹಾಕಿದ್ದೆ…
  ಕರಾಟೆ ಕಲಿತು ನಮ್ಮ ರಕ್ಷಣೆ ಮಾಡಿಕೊಳ್ಳೋದು ಮೊದಲ ಹೆಜ್ಜೆಯಾದರೆ ಒಟ್ಟು ಒಂಟಿ ಹೆಣ್ಣು ಬೀದಿ ಸರಕಲ್ಲ ಅನ್ನೋ ಅರಿವು ಬರೋದಕ್ಕೆ, ದೃಷ್ಟಿಕೋನದ ಬದಲಾವಣೆಗೆ ಇಂಥದ್ದೇನಾದರೂ ಬೇಕೇನೋ ಅನ್ನಿಸುತ್ತೆ. ಈ ಬಗ್ಗೆ ಬರೆಯುವುದೂ, ಮಾತಾಡೋದೂ – ಈ ಥರ ಅವೇರ್‍ನೆಸ್ ಮೂಡಿಸೋ, ಸೆನ್ಸಿಟೈಸ್ ಮಾಡಿಸೋ ಅಗತ್ಯಗಳಿಗೂ ನಮ್ಮ ಗಮನ ಬೇಕು ಅಂತ ನನಗನ್ನಿಸುತ್ತೆ

 13. ಟೀನಾ, ಒಳ್ಳೇ ಟೈಮಲ್ಲಿ ಒಳ್ಳೆಯ ಬರಹ.
  ಶ್ರೀ (೧), ನಮ್ಗೂ ಅಷ್ಟೇ. ಆಟೋದವನು ನಿನ್ ಮನೆ ಇದೇನಾ, ತಡ್ಕೊ ತೋರಿಸ್ತೀನಿ ಅಂತೆಲ್ಲ ಅಸಭ್ಯವಾಗಿ ಅಂದ. ಅವತ್ತಿಂದ ಹೆದರಿ (ಹಾಗೆ ಹೆಳ್ಕೊಳೋಕೆ ನಾಚ್ಕೆ) ಮನೆ ಎದುರು ಇಳಿಯೋಲ್ಲ. ನನ್ನ ಜರ್ನಲಿಸ್ಟ್ ಐ ಡಿ ಕಾರ್ಡು ಕೂಡ ಎಷ್ಟೋ ಸಾರ್ತಿ ಉಪಯೋಗಕ್ಕೆ ಬರಲಿಲ್ಲ ಗೊತ್ತಾ?
  ಆಟೋ ಮಾತ್ರವಲ್ಲ, ಬಸ್ಸಲ್ಲಿ ಅಜೂಬಾಜು ಕೂರುವವರು, ಬಸ್ ಸ್ಟ್ಯಾಂಡಲ್ಲಿ ನಿಲ್ಲುವವರು ಇವರೆಲ್ಲ ನಮ್ಮೊಳಗೊಂದು ಸಣ್ಣ್ ರೇಜ್ ಹುಟ್ಟಿಸಿಬಿಡ್ತಾರೆ. ಎಷ್ಟೋ ಹೆಣ್ಣುಮಕ್ಕಳು ಈ ಥರದ ಅನುಭವಗಳಿಂದ ಗಂಡು- ಮದುವೆ ಇದಕ್ಕೆಲ್ಲ ಹೆದರಿ ಕೀಳರಿಮೆ, ಭಯಗಳಲ್ಲಿ ಮಂಕಾಗಿ ಕೂತಿದ್ದನ್ನ ನಾನು ನೋಡಿದ್ದೇನೆ.

  ಶ್ರೀ (೨),
  ಡ್ರೆಸ್ ಸೆನ್ಸಿನ ಬಗ್ಗೆ ನಾನು ಮಾತಾಡಿದರೂ, ಅತ್ಯಾಚಾರ, ಕಿರುಕುಳಕ್ಕೆಲ್ಲ ಅದೇ ಕಾರಣ ಅಂತ ನಮ್ಮತ್ತಲೇ ಬೆಟ್ಟು ಮಾಡಿದಾಗ ಕೋಪ ಉರಿದುಬರುತ್ತೆ. ಸಾದಾ ಸೀದಾ ಚೂಡಿದಾರ ತೊಡುವ ಹೆಣ್ಣುಮಕ್ಕಳು ಕೂಡ ಆಟೋ- ಟ್ಯಾಕ್ಸಿ ಸ್ಟ್ಯಾಂಡು, ವೈನ್ ಶಾಪ್ ಗಳೆದುರು ತಲೆತಗ್ಗಿಸಿ ಹೆದರಿಹೆದರಿ ಓಡೋ ಪರಿಸ್ಥಿತಿ ಎಲ್ಲೆಡೆ ಇದೆ.
  ನನ್ನ ಅಣ್ಣ ಬಹಳ ಹಿಂದೆ ಅಂಜಲಿ ಗುಪ್ತಾ ಕೇಸಿನ ಬಗ್ಗೆ ಒಂದ್ ಅರ್ಟಿಕಲ್ ಬರೆದಿದ್ದ. ಅದರ ಟೈಟಲ್ಲು- “ಗಂದಸರು ಮಾತ್ರ ಮಾಡಬಹುದಾದ ಕೆಲಸ ಅಂದ್ರೆ ಇದೇನಾ!?” ಅಂತ.
  ಅದೆಷ್ಟು ಸಮಂಜಸವಾಗಿಒದೆಯಲ್ವಾ. ಮತ್ತು ಹೌದು, ಗಂಡಸರು ಮಾತ್ರ ಮಾಡಬಹುದಾದ ಕೆಲಸ ಅಂದ್ರೆ ‘ಅದೊಂದೇ’. ನಮ್ಮ ಹುಷಾರಿ, ತಯಾರಿಗಳನ್ನ ನಾವೇ ನೋಡ್ಕೊಳ್ಬೇಕು. ನೀವು ಹೇಳಿದ ಹಾಗೆ ಈ ಬಗ್ಗೆ ಅವೇರ್ ನೆಸ್ ಮೂಡಿಸೋ, ಸೆನ್ಸಿಟೈಸ್ ಮಾಡಿಸೋ ಅಗತ್ಯಗಳ ಬಗ್ಗೆ ವ್ಯಾಪಕ ಚರ್ಚೆಯಾಗ್ಬೆಕು.
  – ಚೇತನಾ

 14. ಮರುಕೋರಿಕೆ (Pingback): ಹೀಗೆ ಶುರು ಮಾಡೋಣವೆ? « Tinazone-ಕಣ್ಣ ಕೋಣೆಯ ಕಿಟಕಿ…

 15. ಆದ್ರೆ, ಡ್ರೆಸ್ ಕೋಡ್ ಬಗ್ಗೆ ಮಾತ್ರ ನನ್ ತಕರಾರಿದೆ. ಸೀರೆಯೇ ಆದ್ರೂ ಅದನ್ನು ಮೋಸ್ಟ್ ಇಂಡೀಸೆಂಟ್ ಅನ್ನೋಥರವೂ ಉಡ್ಬಹುದು, ಚೆನ್ನಾಗಿಯೂ ಉಡ್ಬಹುದು. ಪ್ಯಾಂಟ್ – ಶರ್ಟ್ ಕೂಡ ಹಾಗೆಯೇ. ಡ್ರೆಸ್ ಸೆನ್ಸ್ ಅನ್ನುವುದು ಅವರವರ ವೈಯಕ್ತಿಕ ಆಯ್ಕೆ. ಆಯ್ಕೆ ನಿರ್ಧಾರವಾಗುವುದು ಸುತ್ತಲ ಜನ ಏನನ್ನು ಇಷ್ಟಪಡ್ತಾರೆ, ತಮ್ಮ ಐಡೆಂಟಿಟಿ ಕ್ರೈಸಿಸ್ ಹೇಗೆ ಸ್ಯಾಟಿಸ್ಫೈ ಆಗುತ್ತದೆ ಅನ್ನುವುದರ ಮೇಲೆ ಅಂತ ನನಗೆ ಅನಿಸುತ್ತದೆ. ಇದು ಬಿಟ್ಟರೆ, ೧ – ತಮ್ಮ ಹಿನ್ನೆಲೆಗೆ ಅಂಟಿಕೊಂಡು, ಅದಕ್ಕೆ ಹೊಂದುವಂತೆ ಉಡುಗೆ-ತೊಡುಗೆ ಆಯ್ದುಕೊಳ್ಳುವವರು ಹಲವರು. ೨ – ಅವರವರಿಗೆ ಯಾವುದು ಹಿತವೋ ಅದನ್ನೇ ತೊಟ್ಟುಕೊಳ್ಳುವವರೂ ಇಲ್ಲದೇ ಇಲ್ಲ. ಆದರೂ ಸುತ್ತಲವರ ಪ್ರತಿಕ್ರಿಯೆ ಹೆಚ್ಚಿನವರ ಡ್ರೆಸ್ಸಿಂಗ್ ಸೆನ್ಸ್ ಮೇಲೆ ಪರಿಣಾಮ ಬೀರುತ್ತದೆನ್ನುವುದು ನನ್ನ ಅಭಿಪ್ರಾಯ. ನಮ್ಮ ಸಮಾಜ ಹೊರಗಿನ appearance ದಾಟಿ ವ್ಯಕ್ತಿತ್ವದ ಸತ್ವವನ್ನು ಮೊದಲಿಗೇ ನೋಡುವಷ್ಟು ಮುಂದುವರಿದಿಲ್ಲವೇನೋ? ಅತ್ಯಾಚಾರ ಮಾಡಬೇಕೆಂದುಕೊಂಡವನಿಗೆ ಡ್ರೆಸ್ ಯಾವುದಿದೆ ಅನ್ನುವುದಕ್ಕಿಂತಲೂ ತನ್ನ ಗುರಿಸಾಧನೆಯೇ ಮುಖ್ಯವಾಗುತ್ತದೇನೋ?

 16. ಮರುಕೋರಿಕೆ (Pingback): ಇನ್ನಷ್ಟು ’ಏನು ಮಾಡಬಹುದು?’ « ಮನಕ್ಕೆ ನೆನಹಾಗಿ…

 17. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನ ಕೆಲವೇ ಆಯಾಮಗಳಿಂದ ನೋಡಿದರೆ ತಪ್ಪಾಗುತ್ತೆ ಅನ್ಸುತ್ತೆ. ದೌರ್ಜನ್ಯಗಳಾಗುತ್ತಿವೆ ಅಂತ ಹೇಳುತ್ತಿದ್ದೆವೆ ಹೊರತು ಅವುಗಳ ಯಾಕಾಗುತ್ತಿವೆ ಅನ್ನೊದರ ಬಗ್ಗೆ ಮೂಲಕ್ಕೆ ಇಳಿದು ಸಮಸ್ಯೆಯನ್ನ ವಿಶ್ಲೇಸಿಸ ಬೇಕಾದ ಅಗತ್ಯ ಎದ್ದು ಕಾಣುತ್ತಿರೊದು ಇಲ್ಲಿ ಗಮನಿಸಬೇಕು. ನಮ್ಮ ಸಾಮಾಜಿಕ ವ್ಯವಸ್ಥೆ ಕೂಡ ಈ ದೌರ್ಜನ್ಯಕ್ಕೆ ಸಾಕಷ್ಟು ನೆರವು ನೀಡಿದೆ ಅನ್ನೊದು ಮುಖ್ಯ. ನಾವು ಇಲ್ಲಿ ಪರಿವರ್ತನೆ ತರಬೇಕಿದ್ದರೆ ಮೊದಲು ಕುಟುಂಬದಿಂದ ಪ್ರಾರಂಭವಾಗ ಬೇಕು, ನಮ್ಮ ಮನೆಗಳಲ್ಲಿ ಹೆಣ್ಣು ಮಕ್ಕಳನ್ನ ಗೌರವಿಸುವುದನ್ನ ಕಲಿತರೆ ಖಂಡಿತ ಬಿದಿಯಲ್ಲಿ ನಡೆಯುವ ಅಪರಿಚಿತ ಹೆಣ್ಣು ಮಕ್ಕಳನ್ನ ಕೀಳಾಗಿ ನೋಡೊ ಮನಸ್ಸು ಬರೋಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯೂ ಕೂಡ ಇದಕ್ಕೆ ಪೂರಕವಾಗಿರಬೇಕು ಅನ್ನಿಸುತ್ತೆ. ಇಷ್ಟಾದರು ನಮ್ಮಲ್ಲಿ ಕಾನೂನು ಮತ್ತು ಈ ಸಂದರ್ಭಗಳಲ್ಲಿ ವಿಧಿಸುವ ಶಿಕ್ಷೆಯ ಬಗ್ಗೆ ಸಾಮಾನ್ಯ ತಿಳಿವಳಿಕೆ ಕೂಡ ಇಲ್ಲ, ನನಗೂ ಕೂಡ ಗೊತ್ತಿಲ್ಲ??? ದೌರ್ಜನ್ಯವೇಸಗಿದವನಿಗೇ ನೀಡುವ ಶಿಕ್ಷೆಯ ಬಗ್ಗೆ ತಿಳಿದಿದ್ದರೆ ದೌರ್ಜನ್ಯದ ಪ್ರಮಾಣ ಈ ಮಟ್ಟಿಗೆ ಇರುತ್ತಿರಲಿಲ್ಲವೇನೊ.

  ಶ್ರೀ ಅವರು ಹೇಳುವಂತೆ ಬರಿಯ ಧರಿಸುವ ಉಡುಪುಗಳು ಇಷ್ಟೆಲಕ್ಕೆ ಕಾರಣವಿಲ್ಲದಿದ್ದರೂ…. ಅವುಗಳ ಪಾತ್ರವು ಸ್ವಲ್ಪ ಇದೆ ಅನ್ನಿಸುತ್ತೆ. ನಮ್ಮ ದೃಷ್ಟಿಕೊನ ಸರಿ ಇದ್ದ ಪಕ್ಷದಲ್ಲಿ ಇದೆಲ್ಲವು ಗೌಣ ಅನ್ನೊ ಮಾತನ್ನ ನಾನು ಒಪ್ತೇನೆ.

  ಮತ್ತೊಂದು ವಿಷಯ ಟೀನಾ ಅವರು ಪ್ರಸ್ತಾಪಿಸಿದ್ದರು ಅವರ ಗೆಳತಿ ಪೆಪ್ಪರ್ ಸ್ಪ್ರೇ ಮತ್ತು ದೊಣ್ಣೆಯನ್ನ ಒಯ್ಯೂತ್ತಾರೆ ಹೊರಗೆ ಹೋಗುವಾಗ ಅಂತ. ನಿಮಗೆಲ್ಲ “ಸ್ಟನ್ ಗನ್” ಬಗ್ಗೆ ಮಾಹಿತಿ ಇದೆಯೋ ಇಲ್ಲವೊ ಗೊತ್ತಿಲ್ಲ, ಪಾಸ್ಚಿಮಾತ್ಯ ರಾಷ್ಟಗಳಲ್ಲಿ ಇದನ್ನ ಮಹಿಳೆಯರು ಬಳಸಲು ಅನುಮತಿ ಇದೆ, ಒಂದು ಟಾರ್ಚಿನ ಗಾತ್ರದ ಈ ಉಪಕರಣ ಬ್ಯಾಟರಿ ಚಾಲಿತ. ಇದರಿಂದ ಉತ್ಪತ್ತಿಯಾಗುವ ಎಲೆಕ್ಟ್ರಿಕ್ ಶಾಖ್ ನಿಂದ ಸುಧಾರಿಸಿ ಕೊಳ್ಳಲು ಸಾಮಾನ್ಯ ಮಸುಷ್ಯನಿಗೆ ಅರ್ಧ ಗಂಟೆಯಿಂದ ಒಂದು ಗಂಟೆ ಹಿಡಿಯುತ್ತದೆ. ಅತಿ ಹೆಚ್ಚು ವೊಲ್ಟೇಜ್ (೧೦ ರಿಂದ ೨೦ ಕಿಲೋ ವ್ಯಾಟ್) ಮತ್ತು ಅತಿ ಕಡಿಮೆ ಕರಂಟ್(ಮೈಕ್ರೊ ವೊಲ್ಟ್) ಎಲೆಕ್ಟ್ರಿಕ್ ಶಾಖ್ ನಿಂದ ಪ್ರಾಣಾಪಾಯವೇನು ಆಗೋದಿಲ್ಲ. ಮಹಿಳೆಯರು ತಮ್ಮ ರಕ್ಷಣೆಗೆ ಉಪಯೋಗಿಸ ಬಹುದು. ಈ ಉಪಕರಣದ ನಿರ್ಮಾಣದಲ್ಲಿ ನಾನು ಕೆಲಸ ಮಾಡಿದ ಕಂಪನಿಯಲ್ಲಿ ನಾನು ಭಾಗಿಯಾಗಿದ್ದೆ. ಅದು ಇಲ್ಲಿ ಎಲ್ಲಿ ಸಿಗಬಹುದು ಅನ್ನುವ ಬಗ್ಗೆ ನನಗೆ ಅಷ್ಟಾಗಿ ಗೊತ್ತಿಲ್ಲ, ವಿಚಾರಿಸಿದರೆ ತಿಳಿಯಬಹುದು.

  http://www.safetygearhq.com/

  –ಅಮರ

 18. ಹೆಣ್ಣಿನ ಬಗ್ಗೆ ಕೆಟ್ಟದಾಗಿ ಬಿಹೇವ್ ಮಾಡುವವರಲ್ಲಿ ವಿದ್ಯಾವ೦ತರು. ನನ್ನ ಕ೦ಪೆನಿಯಲ್ಲಿ ನನ್ನ ಎಷ್ಟೋ ಸಹೋದ್ಯೋಗಿಗಳು ಲೇಡಿ ಕಲೀಗ್ಸ್ ಎ೦ದರೆ ಜೊಲ್ಲು ಸುರಿಸುವವರಿದ್ದಾರೆ. ಅಲ್ಲದೆ ಅವರ ಬಗ್ಗೆ ಕೆಟ್ಟದಾಗಿ ಕಮೆ೦ಟ್ ಮಾಡುತ್ತಾರೆ. ಅಸಹ್ಯ ಅನಿಸುತ್ತೆ.

 19. ಹುಹ್ ಏನ್ರಿ ಇದು ರೂಲು ದೊಣ್ಣೆ, ಖಾರದ ಪುಡಿ, ಕರಾಟೆ ಎಲ್ಲಾ ಕಲಿಯುವುದು… ಆತ್ಮ ರಕ್ಷಣೆಗಾಗಿ ಇದೆಲ್ಲಾ ಆಗೊ ಹೋಗೊ ಮಾತಾ? ನಮ್ಮದು ಏನು ದರಿದ್ರ ಸಂಸ್ಕ್ರತಿನೋ, ದೇಶಾನೋ? ಇದನ್ನೆಲ್ಲಾ ವ್ಯಾನಿಟಿ ಬ್ಯಾಗಿನಲ್ಲಿಟ್ಟುಕೊಂಡವರ ಮನಸ್ಸು ಆರೋಗ್ಯದಿಂದ ಸಮಾಜದ ಕಡೆ ನೋಡುವಂತಾಗಬೇಕಲ್ಲಾ, ಕಣ್ಣಿಗೆ ಕಾಣುವ ಹುಡುಗರೆಲ್ಲಾ , ಗಂಡಸರೆಲ್ಲಾ ಮನುಷ್ಯರಂತೆ ಕಾಣದೆ ರೂಲು ದೊಣ್ಣೆ, ಖಾರದ ಪುಡಿಯಂತೆ ಕಂಡರೆ ಸ್ವಸ್ಥ ಸಮಾಜ ನಿರ್ಮಾಣ ಆಗಲು ಸಾಧ್ಯವೇ? ಇಲ್ಲಿ ಸಿಂಧುರವರು ಇದನ್ನೆಲ್ಲಾ ತಿಳಿದು ಓದಿಯೂ ಏನಾದರೂ ಉಪಯುಕ್ತ ಇನಿಶಿಯೇಟಿವ್ ಮಾಡೋಣ ಅಂದಿದ್ದಾರೆ ಹೌದು ಹಾಗೆ ಮಾಡುವುದರ ಮೂಲಕವೇ ಸ್ವಾಸ್ಥ್ಯ ಸಾಧ್ಯ. ಕರಾಟೆಯನ್ನು ಒಂದು ವಿದ್ಯೆ, ಕಲೆ, ಫಿಟ್ ನೆಸ್ ಗಾಗಿ ಕಲಿಯೋದು ಆರೋಗ್ಯಕರವಾದದ್ದು, ಸಣ್ಣ ಹೆಣ್ಣುಮಕ್ಕಳಿಗೆ ನೀನು ಗಂಡು ಪ್ರಾಣಿಗಳಿಗೆ ಚಚ್ಚಲು ಕಲಿತುಕೊ ಅಂತ ಕಳಿಸಿದರೆ ಆ ಹುಡುಗಿ ತನ್ನ ಮುಂದಿರುವ ಸಮಾಜದ ಬಗ್ಗೆ ಏನು ಯೋಚಿಸಬೇಕು.
  ಒಮ್ಮೆ ತೇಜಸ್ವಿಯವರಿಗೆ ಅವರ ಆರೋಗ್ಯಕರ ಚೇತೋಹಾರಿ ಬರಹದ ಬಗ್ಗೆ ಕೇಳುತ್ತಿದ್ದಾಗ ಅಥವಾ ಅಂಥ ಒಂದು ಸಂಧರ್ಬದಲ್ಲಿ ತೇಜಸ್ವಿಯವರೆಂದರು ಅವರು ವಯಸ್ಕರ ಶಿಕ್ಷಣದ ಪುಸ್ತಕಗಳನ್ನು ನೋಡಿದರಂತೆ ಅದರಲ್ಲಿ ಇದ್ದ ವಿಷಯಗಳು, “ರೇಪ್ ಗೆ ಓಳಗಾದಾಗ ಹೆಣ್ಣು ಏನು ಮಾಡಬೇಕು?” “ಪೋಲಿಸ್ ಕಂಪ್ಲೇಂಟ್, ಕೋರ್ಟ್ ಮೂಲಕ ರಕ್ಷಣೆ, ಇಂತಹ ವಿಷಯಗಳಿದ್ದವಂತೆ, ಸೋ ಅಕ್ಷರಲೋಕಕ್ಕೆ ಕಾಲಿಡುವವರಿಗೆ ಮೊದಲಿಗೆ ಇಂತಹ ಭೀಕರ ಲೋಕದ ಪರಿಚಯದ ಮೂಲಕ ಸ್ವಾಗತ ಮಾಡಹೋದರೆ ಅವರ ಕಲಿಯುವಾಸೆ ಇಂಗಿ ಹೋಗುತ್ತದೆ. ನನಗೆ ತೇಜಸ್ವಿಯವರ ಈ ಹೇಳಿಕೆ ನನಗೆ ಬಹಳ ಮಹತ್ವದೆನಿಸಿತು. ನಾನು ಹಲವು ವರ್ಷಗಳ ಮೊದಲು ನನಗಿರುವಂತೆ ಪುಸ್ತಕ ಓದುವ ಅಭ್ಯಾಸ ನನ್ನ ಅಕ್ಕ, ತಮ್ಮ, ತಂಗಿಯರಿಗೂ ಹತ್ತಿಸಲು ಪ್ರಯತ್ನ ಮಾಡುತ್ತಿದ್ದೆ ಅವರು ಓದಲು ಹಿಂಜರಿಯುತ್ತಿದ್ದರು ಬಹುಶ: ಕಥೆ ಕಾದಂಬರಿಗಳಲ್ಲಿ ಬರುವ ಚಿತ್ರ ವಿಚಿತ್ರ ಸನ್ನಿವೇಶಗಳನ್ನು ಅರಗಿಸಿಕೊಳ್ಳಲು ಒಳಗೆ ಶಕ್ತಿ, ಧೈರ್ಯ, ಬೇಕಾಗುತ್ತದೆ ಅದು ಸುಪ್ತವಾಗಿ ಅವರನ್ನು ತಡೆಯುತ್ತದೆ ಎನಿಸುತ್ತದೆ.
  ಅಂತೆಯೇ ಈ ಬ್ಲಾಗ್ [ಅತ್ಯಚಾರದ] ಓದುವಾಗಲು ತಥ್ ಎನಿಸುತ್ತದೆ.

 20. ಶ್ರೀಯುತ ವೆಂಕಟೇಶ ಅವರೆ,
  ನಿಮ್ಮ ಬಗ್ಗೆ ನನಗೆ ಅಯ್ಯೊ ಪಾಪ ಎಂತಲೂ ಅನಿಸುವದಿಲ್ಲ. ಯಾವ ಪ್ರಪಂಚದಲ್ಲಿ ಬದುಕುತ್ತಿದೀರಿ ನೀವು? ರೇಪು, ವಯಸ್ಕರ ಶಿಕ್ಷಣ, ಪೋಲೀಸು ಕಂಪ್ಲೇಂಟು, ಕೋರ್ಟು ಮೂಲಕ ರಕ್ಷಣೆ ಇತ್ಯಾದಿಗಳ ಬಗ್ಗೆ ಓದಿದರೆ ಅಕ್ಷರಲೋಕಕ್ಕೆ ಕಾಲಿಡುವವರು ಹಿಂಜರಿಯುತ್ತಾರೆಯೆ? ಹಾಗಿದ್ದರೆ ಇವತ್ತಿನ ನ್ಯೂಸ್ ಪೇಪರುಗಳು, ಟೀವಿ ಚ್ಯಾನೆಲ್ಲುಗಳು ನಿಮ್ಮ ಸ್ಟಾಂಡರ್ಡಿನ ಪ್ರಕಾರ ತಮ್ಮ ಕಚೇರಿಗಳಿಗೆ ಬೀಗ ಜಡಿದುಕೊಂಡು ಮನೆಗೆ ಹೋಗಬೇಕು. ಯಾಕೆಂದರೆ ನಿಮ್ಮ ಅನಕ್ಷರಕುಕ್ಷಿ ಅಥವ ಹೊಸತಾಗಿ ಅಕ್ಷರಸ್ಥರಾಗಿರುವ ನಿಮ್ಮಂತೆ ಪುಸ್ತಕ ಓದಲು ಹಿಂಜರಿಯುವ ಅಕ್ಕತಂಗಿಯರು ಟೀವಿ ನೋಡಿದರೆ, ನ್ಯೂಸು ಓದಿದರೆ ಮಾನಸಿಕವಾಗಿ ಬಹಳ ತೊಂದರೆ ಪಟ್ಟುಕೊಂಡಾರು ಅಲ್ಲವೆ? ಛೇ ಛೇ! ಅವ್ರಿಗೆ ಏನೂ ನೋಡದೆ ಅಡುಗೆಮನೆಯಲ್ಲಿ ತೆಪ್ಪಗೆ ಬೇಯಿಸಿ ಬಡಿಸಲು ತಾಕೀತುಮಾಡಿ. ನಿಮ್ಮ ಮನೆಯ ಹೆಣ್ಣುಮಕ್ಕಳು ಪ್ರಪಂಚದ ಯಾವ ತೊಂದರೆಯೂ ಇಲ್ಲದ ಹಾಗೆ ಅಲ್ಲಿ ಸೇಫಾಗಿರುತ್ತಾರೆ. ಇನ್ನು ನಮ್ಮ ಸಂಸ್ಕೃತಿಯ ಬಗ್ಗೆ, ದೇಶದ ಬಗ್ಗೆ ನಿಮಗಿರೋ ಐಡಿಯದ ಬಗ್ಗೆ ನನಗೆ ಚೆನ್ನಾಗಿ ಅರಿವಾಗಿದೆ. ಕರಾಟೆ ಆರೋಗ್ಯವರ್ಧನೆಗಾಗಿ ಫಿಟ್ನೆಸ್ಸಿಗಾಗಿ ಕಲಿಯುವ ವಿದ್ಯೆಯಲ್ಲ ಮಹಾಸ್ವಾಮೀ, ಅದು ಆತ್ಮರಕ್ಷಣೆಗಾಗಿಯೇ ಇರುವ ವಿದ್ಯೆ. ನಿಮ್ಮ ಜನರಲ್ ನಾಲೆಡ್ಜಿಗೆ ನನ್ನ ನಮಃಸ್ಕಾರ! ರೂಲುದೊಣ್ಣೆ ಖಾರದಪುಡಿಗಳೆಲ್ಲ ಗಂಡಸರಾಗಿ ಕಾಣುವದಿಲ್ಲ ಸ್ವಾಮೀ, ಅದು ಕೇವಲ ಹೆಂಗಸರನ್ನು ಹೆಂಗಸರಂತೆ ಕಾಣದೆ ತಮ್ಮ ಖಯಾಲಿ ಪೂರಯಿಸಿಕೊಳ್ಳಲು ಮಾಧ್ಯಮದಂತೆ ಕಾಣುವ ನರಾಧಮರ ಮೇಲೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಉಪಯೋಗಿಸಲು ಮಾತ್ರ. ಹೌದು, ನಿಮಗೇಕೆ ಇಷ್ಟೊಂದು ಹಿಂಸೆ ಅನ್ನಿಸುತ್ತಿದೆ? ನಾವು ನಿಮ್ಮ ವಿಷಯಾನ ಇಲ್ಲಿ ಚರ್ಚಿಸ್ತಾ ಇಲ್ಲ! ಕಣ್ಣುಬಿಟ್ಟು ಈ ಬರಹವನ್ನ ಮೊದಲು ಓದಿ. ಸಣ್ಣ ಹೆಣ್ಣುಮಕ್ಕಳಿಗೆ ಗಂಡುಪ್ರಾಣಿಗಳಿಗೆ ಚಚ್ಚಲು ಕಲಿತುಕೊ ಎಂದು ಕಲಿಸಲಾಗುವುದಿಲ್ಲ, ತಮ್ಮನ್ನು ಸಾವಿರಾರು ವರುಷಗಳಿಂದ ’ನೀನು ಅಬಲೆ’ ಅಂತ ತಲೆಗೆ ತುಂಬಿಸುತ್ತ ಬಂದಿದೆಯಲ್ಲ ನಮ್ಮ ಪ್ರಜ್ನೆ? ಅದನ್ನ ತೆಗೆದುಹಾಕಿ ’ನೀನು ಸಬಲೆ, ಯಾರಿಗೂ ಕಡಿಮೆಯಿಲ್ಲ’ ಅನ್ನುವ ಧೈರ್ಯವನ್ನ ತುಂಬುವ ಕೆಲಸ ಇದು. ನಿಮ್ಮ ಯೋಚನೆಗೆ ಬಹುಶಃ ನಿಲುಕಲಿಕ್ಕಿಲ್ಲ ಬಿಡಿ ಸಾರ್. ಮತ್ತೆ ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಕೂಡ ಇದು ಅನ್ವಯಿಸುತ್ತದೆ. ಅವ್ರ ಸುಪ್ತಪ್ರಜ್ನೆಯ ಬಗ್ಗೆ ಕೂಡ ನೀವು ಆಳ ಅಧ್ಯಯನ ನಡೆಸಿ ಅವ್ರು ಪುಕ್ಕಲುಗಳು ಅಂತ ಡಿಸೈಡು ಮಾಡಿಯಾಗಿದೆ. ಇನ್ನೇನು ಹೇಳಲಿ? ಪಾಪ ಟೀವಿ ಸೀರಿಯಲ್ಲುಗಳನ್ನು ನೋಡಿಯೂ ಗಡಗಡ ನಡುಗುತ್ತಿರುತ್ತಾರೇನೊ ಅವರು?
  ನಮ್ಮಲ್ಲಿ ಪುರುಷದ್ವೇಷವಿಲ್ಲ ಎಂದು ನಾವು ನಿಮಗೇಕೆ ಸಮಜಾಯಿಶಿ ಕೊಡಲಿ?

  ನನಗೆ ನಿಮ್ಮ ಥರದವರ ಬಗ್ಗೆ, ನೀವುಗಳು ಹೀಗೆಲ್ಲ ತೇಜಸ್ವಿ, ಸಂಸ್ಕೃತಿ ಅಂತೆಲ್ಲ ಮಾತನಾಡುತ್ತ ನಡೆಸುವ ಮಾನಸಿಕ ಅತ್ಯಾಚಾರದ ಬಗ್ಗೆ ’ಅಸಹ್ಯ’ ಅನ್ನಿಸತ್ತೆ.

 21. ನಮಸ್ತೇ ವೆಂಕಟೇಶ್,

  ನಾಚಿಕೆಯಾಗ್ಬೇಕು ನಿಮಗೆ. ದಿನದಿನವೂ ಹೆಣ್ಣುಮಕ್ಕಳ ಮೇಲೆ ನಡೀತಿರೋ ಲೈಂಗಿಕ ಅತ್ಯಾಚಾರಗಳ ಬಗ್ಗೆ ತಿಳಿದಿದ್ದೂ ( ತಿಳಿಯದಿದ್ದರೆ ಅಯ್ಯೋ ಪಾಪ!) ಹೀಗೆಲ್ಲ ಕಮೆಂಟು ಮಾಡಿರುವುದು ನಿಮ್ಮ ‘ಲೆವೆಲ್’ ಅನ್ನು ಸೂಚಿಸುತ್ತದೆ. ನಮ್ಮದು ಏನು ದರಿದ್ರ ಸಂಸ್ಕೃತೀನೋ, ದೇಶಾನೋ ಅಂತ ಹೇಳಿರುವ ನಿಮ್ಮ ದರಿದ್ರ ಮನಸ್ಥಿತಿಗೆ ನನ್ನ ಧಿಕ್ಕಾರ. ನಿಮ್ಮಂಥವರು ಮಾಡೋದೆಲ್ಲವನ್ನೂ ಸಹಿಸ್ಕೊಳ್ಳುತ್ತ ಬಿದ್ದಿರಬೇಕು,
  ಸಣ್ನದೊಂದು ಪ್ರತಿಭಟನೆಯನ್ನೂ ತೋರಬಾರದು ಅನ್ನುವ ನಿಮ್ಮ ದಬ್ಬಾಳಿಕೆಯ ಮನೋಭಾವ ನಿಜಕ್ಕೂ ಅನುಕಂಪ ತರಿಸ್ತಿದೆ.
  ಅಥವಾ ನೀವ್ಯಾಕೆ ಹೆಗಲು ಮುಟ್ಟಿ ನೋಡ್ಕೊಳ್ತಿದೀರಿ? ಅನ್ನೋ ಅನುಮಾನವೂ ಮೂಡ್ತಿದೆ.
  ಬಿಟ್ಬಿಡಿ. ಅದೆಲ್ಲ ಆರೋಗ್ಯಕ್ಕೆ ಒಳ್ಳೆಯದಲ್ಲ.
  ನಾವು ಪುರುಷ ದ್ವೇಷಿಗಳಲ್ಲ. ಇದೇ ಬರಹಕ್ಕೆ ಪ್ರತಿಕ್ರಿಯಿಸಿರುವ ಸಹೃದಯೀ ಗಂಡಸರನ್ನು ನೋಡಿ ನಾಚಿಕೊಳ್ಳಿ.
  ನಮ್ಮೆಲ್ಲ ಪ್ರಯತ್ನಕ್ಕೂ ಜೊತೆಯಾಗಬಲ್ಲ ಅಂಥವರು ‘ಅಪ್ಪಟ ಗಂಡಸರು’
  ನಿಮ್ಮ ಬಗ್ಗೆ ಏನನ್ನಬೆಕೋ ತಿಳೀತಿಲ್ಲ.
  ಸಧ್ಯಕ್ಕೆ, ‘ಅಸಹ್ಯ’ ಅನ್ನಿಸುತ್ತಿದೆ ಅಷ್ಟೇ.

  ವಂದೇ,
  ಚೇತನಾ ತೀರ್ಥಹಳ್ಳಿ

 22. ಟೀನಾ ಜಿ,
  ಅಕ್ಷರ ಕಲಿಯುವುದು ಬೇರೆ, ಪುಸ್ತಕ ಓದುವ ಹವ್ಯಾಸ ಬೇರೆ ಕೆಲವರಿಗೆ ಒಗ್ಗುತ್ತದೆ, ಕೆಲವರಿಗೆ ಒಗ್ಗುವುದಿಲ್ಲ.
  ಇದನ್ನು ಈ ಸಂದರ್ಭದಲ್ಲಿ ಹೆಳಿದೆನೆ ಹೊರತು ಜೆನೆರಲೈಸ್ ಮಾಡಿಲ್ಲ. ಆದರೆ ನೀವು ಜನರಲೈಸ್ ಮಾಡಿಕೊಂಡಿದ್ದೀರ.
  ಮಹಿಳೆಯರು ಆತ್ಮರಕ್ಷಣೆಗಾಗಿಯೇ ಕೈಗೊಳ್ಳಬೇಕಾದ ದುರದ್ರಷ್ಟಕರ ಅನಿವಾರ್ಯತೆ ಬಗ್ಗೆ ಹೇಳಿದ್ದೇನೆ ಆಷ್ಟೆ.
  ನಿಮ್ಮ ಬರಹವೇನು ಅಪ್ರಸ್ತುತ ಎಂದೇನೂ ನಾನು ಹೇಳಿಲ್ಲ.
  ಮಹಿಳೆಯರ ಪ್ರಚೋದಕ ರೀತಿ, ನೀತಿ,ಉಡುಗೆಗಳೇ ಕಾರಣ ಎಂದೇನಾದರೂ ಹೇಳಿದ್ದರೆ ನೀವು ಹೀಗೆ ಹಾರಾಡಬಹುದಿತ್ತು, ಆದ್ದರಿಂದ ಮಾನಸಿಕ ಪ್ರಬುದ್ದತೆಯ ಸರ್ಟಿಫಿಕೇಟನ್ನು ಯಾರಿಗೆ ಅನ್ವಯಿಸುತ್ತದೋ ನೋಡಿಕೊಳ್ಳೀ.

 23. ವೆಂಕಟೇಶ್,
  ಯಾಕೊ ನಿಮ್ಮ ಮೂಡೇ ಬದಲಾದಹಾಗಿದೆ ಈ ಸಾರಿ! ನಾನು ಜನರಲೈಸ್ ಮಾಡುವ ಪೇಟೆಂಟನ್ನ ನೀವು ತೆಗೆದುಕೊಂಡುಬಿಟ್ಟಿದೀರಿ ಅಂದುಕೊಂಡಿದ್ದೆ, ಸದ್ಯ ಇನ್ನೂ ಆ ವಿಭಾಗ ಫ್ರೀಯಾಗಿ ಉಳಿದುಕೊಂಡಿದೆ ಎಂದು ತಿಳಿದು ಸಮಾಧಾನವಾಗಿದೆ. ನಿಮ್ಮ ಪದಗಳಿಗೆ ನನ್ನ ಪ್ರತಿಕ್ರಿಯೆಯನ್ನ ಓದಿದೀರಿ ತಾನೆ? ಅದರ ಹಿಂದೆಯೆ ನಿಮ್ಮ ಕಮೆಂಟು ಕೂಡ ಇತ್ತಲ್ಲ, ಅದನ್ನ ಇನ್ನೊಂದು ಸಲ ನೀವೇ ಸರಿಯಾಗಿ ಓದಿದ್ದರೆ ಚೆನ್ನಾಗಿತ್ತು. ಬರೆಯೋದು ಬರೆದುಬಿಟ್ಟು ’ನೀವು ಜನರಲೈಸ್ ಮಾಡಿದೀರ’ ಅಂತ ನುಣುಚಿಕೊಳ್ಳೋ ಹಿಪಾಕ್ರಸಿ ನನಗೆ ಹೊಸತೇನಲ್ಲ. ಸ್ವಾಮಿ, ನನ್ನ ಮಾನಸಿಕ ಪ್ರಬುದ್ಢತೆಯ ಬಗ್ಗೆ ನನಗೆ ಖಾತ್ರಿ ಇದೆ, ಅದ್ರ ಬಗ್ಗೆ ತಾವು ಬರೆದು ಬೆರಳು ನೋಯಿಸಿಕೊಳ್ಳುವ ತೊಂದರೆ ತೆಗೆದುಕೊಳ್ಳದಿದ್ದರೇನೆ ಒಳಿತು. “ಮಹಿಳೆಯರು ಆತ್ಮರಕ್ಷಣೆಗಾಗಿಯೇ ಕೈಗೊಳ್ಳಬೇಕಾದ ದುರದ್ರಷ್ಟಕರ ಅನಿವಾರ್ಯತೆ ಬಗ್ಗೆ ಹೇಳಿದ್ದೇನೆ ಆಷ್ಟೆ.” ಅಂದಿದೀರಿ, ಅಂಥಾ ಕಾಳಜಿ ನಿಮ್ಮ ಹಿಂದಿನ ಕಮೆಂಟಿನಲ್ಲಿ ನನಗೆ ಎಲ್ಲಿಯೂ ಕಾಣಲಿಲ್ಲವಲ್ಲ!! ನಾನು ಯಾವ ವಿಷಯದ ಬಗ್ಗೆ ಹಾರಾಡಬಹುದು ಎಂದು ಕೂಡ ನೀವು ಊಹಿಸಿಬಿಟ್ಟಿದೀರ. ವಾಹವಾ! ನಾನು ಈ ರೀತಿ ತಮ್ಮ ಸಮಯ ವ್ಯಯ ಮಾಡಿದ್ದಕ್ಕೆ ವಿಪ್ರೀತ ಗಿಲ್ಟೀ ಫೀಲಿಂಗು ಸಾರ್! ಪುನಃ ತಮ್ಮ ಕೈ ಬಾಯಿ ನೋಯಿಸಿಕೊಳ್ಳುವ ಗೋಜಿಗೆ ಹೋಗಬೇಡಿರಿ. ಧನ್ಯವಾದ.

 24. ವೆಂಕಟೇಶ್ ಅವರ ಕಾಮೆಂಟ್ ಈಗ ನೋಡ್ದೆ, ಟೀನಾ, ಚೇತನಾ ಹೇಳ್ಬೇಕಾದ್ದೆಲ್ಲ ಹೇಳಿದ್ದೀರಿ, ನನ್ನ ಸಹಮತ ವ್ಯಕ್ತಪಡಿಸ್ತಿದೀನಷ್ಟೆ…ಸಮಸ್ಯೆಗಳಿಂದ ಓಡಿಹೋಗೋಕೆ ಸಂಸ್ಕೃತಿಯ ಹಿರಿಮೆಯ ಮುಖವಾಡದ ಮೊರೆಹೋಗೋದು ಯಾವಾಗ ನಿಲ್ಲುತ್ತೋ!
  ಇರ್ಲಿ! ನಾವು ಭೇಟಿಯಾಗೋದ್ ಯಾವಾಗ?

 25. ಸೀರೆ ಉಟ್ಟುಕೊಂಡವರ ಮೇಲೆ ಅತ್ಯಾಚಾರಗಳಾಗುವುದಿಲ್ಲ. ಸೆಕ್ಸಿಯಾದ figure hugging, skimpy ಬಟ್ಟೆ ಹಾಕಿಕೊಂಡವರ, ಜೀನ್ಸ್, ಟೀ ಶರ್ಟ್ ಹಾಕಿಕೊಂಡವರ ಮೇಲೆ ರೇಪ್ ಆಗೋ ಚಾನ್ಸ್ ಇರ್ತವೆ ಅನ್ನೋ ಮಾತು ಕೇವಲ ವಿವೇಚನಾರಹಿತವಾದದ್ದು, ಬಾಲಿಶವಾದದ್ದು ಹಾಗೂ ಪಜ್ಞಾ ಶೂನ್ಯವಾದದ್ದು ಅನ್ನಿಸುತ್ತದೆ. ಆದರೆ ಡ್ರೆಸ್ ಕೋಡ್ ಅಂದರೆ ಬೇರೆಯವರಿಗೆ ಮುಜುಗರ ಆಗದ ರೀತಿಯಲ್ಲಿ, ಪ್ರಚೋದಕ ಅನ್ನಿಸದ ರೀತಿಯಲ್ಲಿ ಇರಬೇಕೆಂಬ ಸದಾಶಯ ತಪ್ಪಲ್ಲವೆಂದು ಭಾವಿಸುವೆ. ವೆಂಕಟೇಶರ ಮೊದಲ ಪ್ರತಿಕ್ರಿಯೆಯೇ ಒಂದು ದಿಕ್ಕಿನಲ್ಲಿದ್ದರೆ ನಂತರದ್ದು ಇನ್ನೊಂದು ದಿಕ್ಕಿನಲ್ಲಿದೆ. ಎರಡರ ನಡುವೆ ಸಾಮ್ಯತೆ ಇಲ್ಲ. ಅವರು ಸಮರ್ಥನೆಯ ಆಸೆ ಕೈಬಿಡುವುದು ಉತ್ತಮ.

  ಬೆಂಗಳೂರಿನಲ್ಲಿ ಐ.ಟಿ. ಸಾಫ್ಟ್ವ್ ವೇರ್ ಎಂಜಿನಿಯರುಗಳ ಮೇಲೆ ದಿನವೂ ನೆಡೆಯುವ ಹಲ್ಲೆಗಳನ್ನ ನೋಡಿದರೆ(ನಾನಿಲ್ಲಿ ಹೇಳುತ್ತಿರುವುದು ಪುರುಷರ ಬಗ್ಗೆ) ಸ್ತ್ರೀಯರು ತಮ್ಮ ಆತ್ಮರಕ್ಷಣೆಗೆ ತಕ್ಕುದಾದ ತಯ್ಯಾರಿ ಮಾಡಿಕೊಳ್ಳುವುದು ಉತ್ತಮ. ವೆಂಕಟೇಶರಿಗೆ ಉತ್ತರಿಸುವಾಗ, ಸ್ತ್ರೀಯರು ಮಾಡಿಕೊಳ್ಳಬೇಕಾದ ತಯ್ಯಾರಿಗಳ ಬಗ್ಗೆ ಸ್ತ್ರೀಯರು ಚರ್ಚಿಸಿದರೆ, ಪುರುಷರೇಕೆ ಪುರುಸೊತ್ತು ಮಾಡಿಕೊಂಡು ಬಂದು ಅಡಸಾ ಬಡಸಾ ಕಾಮೆಂಟ್ ಹಾಕೋದು ಅನ್ನೋದನ್ನ ನೇರವಾಗೇ, ಖಡಕ್ಕಾಗಿ ಹೇಳಿದ್ದರೆ ಚೆನ್ನಾಗಿರ್ತಿತ್ತು ಟೀನಾ.

  ಟೀನಾ ಒಂದು ಉತ್ತಮ ಚರ್ಚೆಯನ್ನ ಹುಟ್ಟುಹಾಕಿದ್ದಾರೆ. ಅವರಿಗೆ ಧನ್ಯವಾದಗಳು.
  ಗಣೇಶ್.ಕೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s