ಸಾವಿಗೆ ತೆರೆದುಕೊಳ್ಳುವ ಹೃದಯ

picasso-casagemas1.jpg

(‘Death of Casagemas’ by Pablo Picasso ) 

When I behold, upon the night’s starr’d face,
Huge cloudy symbols of a high romance,
And feel that I may never live to trace
Their shadows, with the magic hand of chance;

– John Keats, ‘When I have fears that I may cease to be’

ನನ್ನ ಕೋಣೆಯ ಬಾಲ್ಕನಿಯಿಂದ ಹೊರಗೆ ದಿಟ್ಟಿಸುತ್ತ ನಿಂತಿದ್ದೆ. ಹೊರಗೆ ಕಣ್ಣಳತೆಯುದ್ದಕ್ಕು ಕೊಡಚಾದ್ರಿ ಮೈ ಹರವಿಕೊಂಡಿತ್ತು. ಮೋಡಗಳು ಲಗುಬಗೆಯಿಂದ ಎಲ್ಲೆಲ್ಲೊ ಹೋಗಲಿಕ್ಕಿದೆ ಎನ್ನುವ ಹಾಗೆ ಶಿಖರಗಳ ಸುತ್ತ ಚಲಿಸುತ್ತಿದ್ದವು. ಮಳೆ ಬೆಳಜಾವದಿಂದಲು ಚಿರಿಪಿರಿ ಎಂದು ಸುರಿಯುತ್ತ ಮಾರ್ಚಿನಲ್ಲಿ ಸೆಖೆಗಾಲವನ್ನು ಮರೆಸುವ ಸಂತಸದಲ್ಲಿತ್ತು. ನಾನು ಸೌಪರ್ಣಿಕೆಯ ತಿಳಿನೀರಲ್ಲಾಡುವ ಅವಕಾಶ ತಪ್ಪಿಹೋಗಿದ್ದಕ್ಕೆ ಬೇಸರಿಸಿಕೊಂಡಿದ್ದೆ. ಇವ ಪಕ್ಕ ಬಂದು ನಿಂತು ಕೈಕೈ ಉಜ್ಜಿಕೊಳ್ಳುತ್ತ ’ಅಬ್ಬ! ಇಷ್ಟು ಹೊತ್ತಿಂದ ಇಲ್ಲಿ ನಿಂತ್ಕೊಂಡು ಏನು ಯೋಚನೆ ಮಾಡುತ್ತಿದೀಯ ಅಂದುಕೊಂಡಿದ್ದೆ. ಇಲ್ಲಿ ನಿಂತರೆ ಯೋಚನೆಗಳೇ ಬರೋದಿಲ್ಲ ಅಲ್ವ?’ ಎಂದ. ಸುಮ್ಮನೆ ನಕ್ಕೆ. ಇದ್ದಕ್ಕಿದ್ದ ಹಾಗೆ, ’ನಂಗೆ ನನ್ನ ಎಪಿಟಾಫ್ ಬರೀಬೇಕು ಅನ್ನಿಸ್ತಿದೆ’ ಎಂದೆ. ಇವ ’ನೀನು ಇಲ್ಲಿ ನಿಂತು ಯೋಚನೆ ಮಾಡ್ತಾ ಇರು. ನಾನು ಒಳಗೆ ಕೂತು ಸಿಗರೇಟು ಸುಡ್ತ ಖುಶಿಯಾಗಿ ನಿನ್ನ ಎಪಿಟಾಫ್ ಬರೀತೀನಿ!’ ಅಂದು ನನ್ನ ತಲೆಯ ಮೇಲೆ ಒಂದೇಟು ಹೊಡೆದು ನಗುತ್ತ ಒಳಹೋದ.

ಕೆಲವು ಹಳೆ ಚೈನೀ ಪೆಯಿಂಟಿಂಗುಗಳನ್ನ ಯಾವಾಗಲೊ ನೋಡಿದ್ದು ನೆನಪಾಯಿತು. ಬೃಹತ್ ಕ್ಯಾನ್ವಾಸುಗಳು. ಅದರಲ್ಲಿ ಇಂಚಿಂಚೂ ತುಂಬಿದ ಪ್ರಕೃತಿ. ಅದರಲ್ಲಿ ಒಬ್ಬ ಮನುಷ್ಯ. ಇಡೀ ಕ್ಯಾನ್ವಾಸಿನಲ್ಲಿ ಆತನಿಗೆ ಒಂದು ಇರುವೆಗೆ ನೀಡಬಹುದಾದಷ್ಟೆ ಸ್ಥಾನ. ಸೃಷ್ಟಿಯೆದುರಿಗೆ ಮನುಷ್ಯ ಎಷ್ಟು ಗೌಣ ಎಂದು ಅರಿವುಮಾಡಿಕೊಡಲು ಈ ಪೆಯಿಂಟಿಂಗುಗಳು ಎಂದು ನನಗೆ ಒಬ್ಬ ಜುಬ್ಬಧಾರಿ ಯುವಕಲಾಕಾರ ತಿಳಿಸಿದ್ದ. ಒಂದು ಥರ ‘ರೌದ್ರ’ ಅನ್ನಿಸಿ ಆ ಶಾಂತ ಕ್ಯಾನ್ವಾಸುಗಳನ್ನು ನಾನು ದಿಟ್ಟಿಸಿಕೊಂಡು ನೋಡಿದ್ದೆ. ಆಗ ಅರಿವಾಗದ್ದು ಈಗ ಬಾಲ್ಕನಿಯಲ್ಲಿ ಹೊಳೆಯತೊಡಗಿತು. ನನ್ನ ಅಚ್ಚುಮೆಚ್ಚಿನ ನಟರಾದ ಮೋರ್ಗನ್ ಫ್ರೀಮನ್ ಮತ್ತು ಜ್ಯಾಕ್ ನಿಕಲ್ಸನ್ ನಟಿಸಿರುವ ರಾಬ್ ರೀನರ್ ನಿರ್ದೇಶನದ ಚಲನಚಿತ್ರ ‘ದಿ ಬಕೆಟ್ ಲಿಸ್ಟ್’ನಲ್ಲಿ ಕ್ಯಾನ್ಸರಿನಿಂದ ಸಾಯುತ್ತಿರುವ ಇಬ್ಬರು ವೃದ್ಧರು ಸಾವನ್ನು ಜೀವನದಂತೆ ಅನುಭವಿಸುವುದನ್ನು ಅದ್ಭುತವಾಗಿ ಚಿತ್ರಿಸಿದೆ. ಸಾವು ಸಮೀಪಿಸುತ್ತಿದೆ ಎಂದು ತಿಳಿದಾಗ ಇಬ್ಬರೂ ತಮ್ಮ ಆಸೆಗಳನ್ನು ಪಟ್ಟಿಮಾಡಿ ಅವುಗಳನ್ನು ಪೂರಯಿಸಲು ಜತೆಯಾಗಿ ಪಯಣಿಸತೊಡಗುತ್ತಾರೆ. ಈ ಕೆಲತಿಂಗಳ ಸಾಂಗತ್ಯ ಅವರನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಅವರ ಸಾವುಗಳನ್ನು ಕೂಡಾ. ಸಾವಿನ ಬಗೆಗಿನ ನನ್ನ ಪರ್ಸೆಪ್ಷನ್ ಅನ್ನು ಮೇಲುಕೆಳಗು ಮಾಡಿದ ಮೂವೀ. ಚಿತ್ರದ ಮೊದಲಿಗೆ ಹಾಗೂ ಕೊನೆಗೆ ಕಾರ್ಟರ್(ಫ್ರೀಮನ್) ತನ್ನ ಗೆಳೆಯ ಕೋಲ್(ನಿಕಲ್ಸನ್)ನ ಸಾವಿನ ಬಗ್ಗೆ ಮಾತನಾಡುತ್ತ ಹೇಳುತ್ತಾನೆ,’ಅವ ಮರಣ ಹೊಂದಿದಾಗ ಅವನ ಕಣ್ಣುಗಳು ಮುಚ್ಚಿಕೊಂಡಿದ್ದವು, ಹೃದಯ ತೆರೆದುಕೊಂಡಿತ್ತು’.

ಕೆಳಗಿನ ಕಟ್ಟಡವೊಂದರ ಬಾಲ್ಕನಿಯಲ್ಲಿ ಒಂದು ವಯಸ್ಸಾದ ಮಹಿಳೆ ಮತ್ತು ಒಂದು ಮಗು, ಬಹುಶಃ ಆಕೆಯ ಮೊಮ್ಮಗು, ಆಡುತ್ತ ಇದ್ದರು. ಮಗು ಅಜ್ಜಿಯ ಬೆನ್ನ ಮೇಲೆ ಕೂತು ಸವಾರಿ ಮಾಡುತ್ತ ಇತ್ತು. ಅಜ್ಜಿಗೆ ಆಯಾಸವಾಗಿರಬೇಕು, ಸಾಕು ಎಂದೇನೊ ಹೇಳಿದರು. ಮಗುವಿಗೆ ಆಟದ ಸಂಭ್ರಮ. ಅದು ಇನ್ನಷ್ಟು ಸವಾರಿ ಮಾಡಬೇಕು ಎಂದು ಮುದ್ದುಮುದ್ದಾಗಿ ಹಠ ಮಾಡುತ್ತಿತ್ತು. ಅಜ್ಜಿಗೆ ಇನ್ನೇನೂ ತಿಳಿಯದೆ ಇದ್ದಕ್ಕಿದ್ದ ಹಾಗೆ ನಾಲಗೆ ಹೊರಹಾಕಿ ಸತ್ತುಹೋದಂತೆ ನಟನೆ ಮಾಡಿದರು. ಕಿಲಕಿಲನೆ ನಗುತ್ತ ಇದ್ದ ಮಗು ಎರಡು ಕ್ಷಣ ಮಿಕಿಮಿಕಿ ನೋಡಿತು. ಅದಕ್ಕೇನೆನ್ನಿಸಿತೋ ಅಜ್ಜಿಯ ಮೇಲೆ ಬಿದ್ದು ಭೋರಾಡಿ ಅಳತೊಡಗಿತು. ರೂಮಿನೊಳಗಿದ್ದವರೆಲ್ಲ ಮಗುವಿನ ಅಳು ಕೇಳಿ ಹೊರಗೋಡಿ ಬಂದರು. ಅಜ್ಜಿ ಕೂಡಲೆ ಎದ್ದು ಮಗುವನ್ನು ತಬ್ಬಿಕೊಂಡು ಸಂತೈಸತೊಡಗಿದರು. ಮುಖದಲ್ಲಿ ನಾಚಿಕೆಯ ಭಾವ ಸ್ಪಷ್ಟವಾಗಿತ್ತು.

ನಮ್ಮ ಪ್ರಿಯರಾದವರು ನಮ್ಮನ್ನು ಅಗಲುತ್ತಾರೆ, ಅಥವಾ ನಾವು ಅವರನ್ನು ಎಂದೆಂದೂ ಕಾಣದ ಹಾಗೆ ಅಗಲುತ್ತೇವೆ ಎನ್ನುವ ಭಾವ ಆವರಿಸಿಕೊಳ್ಳಲು ತೊಡಗುವುದು ಬಹುಶಃ ಇಂಥ ಸನ್ನಿವೇಶಗಳಿಂದಲೆ ಅನ್ನಿಸಿತು. ನನ್ನ ಮಗಳು ಒಂದು ದಿನ ’ಸಾಯೋದಂದ್ರೆ ಹೆಂಗೆ? ನಾನೂ ಮುದುಕಿ ಆಗ್ತೀನಾ ಮಮ್ಮ?’ ಎಂದು ಮುಂತಾಗಿ ಪ್ರಶ್ನೆಗಳನ್ನು ಕೇಳಿದಳು. ನಾನು ಆದಷ್ಟು ಸೌಮ್ಯವಾಗಿ ಸಾವಿನ ಬಗ್ಗೆ ಹೇಳುತ್ತಿದ್ದಂತೆ ಮುಖ ಬಾಡತೊಡಗಿತು.
“ಹಾಗಾದ್ರೆ ಅಜ್ಜೀ ತಾತಾನೂ ಸಾಯ್ತಾರಾ?”
“ಹೂಂ. ಎಲ್ಲಾರೂನೂ. ನಾನೂ, ನೀನೂ.”
ಇವಳು ಕಿರುಚಾಡಿಕೊಂಡು ಅವರ ಅಜ್ಜಿಯ ಬಳಿ ಓಡಿದಳು. ನಾನು ಗಾಬರಿಯಾಗಿ ಹಿಂದೆಯೆ ಓಡಿಹೋದೆ. ನಚಿಕೇತ, ಧ್ರುವ ಮುಂತಾದ ಕಥೆಗಳು ನೆನಪಾಗಿ ನನಗೆ ಏನೇನೊ ಆತಂಕ.ಅಡಿಗೆಮನೆಯಲ್ಲಿ ಅಜ್ಜಿ ಮೊಮ್ಮಗಳ ಮಾತುಕತೆ ನಡೆಯುತ್ತ ಇತ್ತು. “ಅಜ್ಜೀ ನೀನೂ ಸಾಯ್ತೀಯ?”
“ಹೂಂ ಚಿನ್ನು.”
“ನೀನು ಮುದುಕೀನಾ?”
“ಹೌದು ಮಾ ಕಣ್ಣಾ.”
“ಆಮೇಲೆ ನೀನು ಸಿಗಲ್ವಾ?”
“ಈ ಥರ ಇಲ್ಲ. ನಿನ್ ಕನಸಲ್ಲಿ ಬರ್ತೀನಿ.”
“ಹಾಗಾದ್ರೆ ನಿನ್ ಸೀರೇ, ಜ್ಯೂಯೆಲ್ಸ್ ಎಲ್ಲ ಈಗ್ಲೆ ನಂಗೆ ಕೊಟ್ಬಿಡು. ಸರೀನಾ?”

ಚಿತ್ರಕೃಪೆ: www.artquotes.net

Advertisements

13 thoughts on “ಸಾವಿಗೆ ತೆರೆದುಕೊಳ್ಳುವ ಹೃದಯ

 1. ನಿಂಗೆ ಸುಮ್ನಿರೋಕಾಗಲ್ವ? ಚಿರಿಪಿರಿ ಮಳೆ ಸುರ್ಕೊಂಡು ಹವೆ ರೊಮ್ಯಾಂಟಿಕ್ ಆಗಿರೋ ಹೊತ್ಗೆ ಕೊಡಚಾದ್ರಿ ನೆನಪಾ ಮಾಡೋದು?
  ಅಲ್ಲಿಂದ ನೇರಾ ನೇರ ನೆಗೆದಿದ್ದು ಸಾವಿಗೆ!
  ಅದರಲ್ಲೂ ನಿಂಗೆ ಧ್ರುವ, ನಚಿಕೇತ ಇತ್ಯಾದಿ ನೆನಪಾಗಿದ್ದು ಮಜಾ ಅನಿಸಿತು. ಬಿಡು. ತಪ್ಅಸ್ಸಿಗೆ ಹೋಗಿ ಕೂರಲಿಕ್ಕೆ ತುಮಕೂರಿನ ಹತ್ತಿರ ಘನಘೋರ ಕಾಡೇ ಇಲ್ಲ!
  ನನ್ನ ಮಗ “ಅಮ್ಮಾ, ಪ್ಲೀಸ್ ನೀ ಮುದುಕಿ ಆಗ್ಬೇಡ” ಅಂದಿದ್ದು, ” ಅಜ್ಜಿ, ನೀವೀಗ್ಲೇ ಆಸ್ತಿ ನಮ್ಮಿಬ್ರ ಹೆಸರಿಗೆ ಬರೆದ್ಕೊಟ್ಬಿಡಿ ನೀವು ಸಾಯೋದಾದ್ರೆ” ಅಂತ ತನ್ನ ಕಸಿನ್ ಹೆಗಲ ಮೇಲೆ ಕೈ ಹಾಕ್ಕೊಂಡು ಹೇಳಿದಾಗ ನನ್ನತ್ತೆ ಬಿದ್ದುಬಿದ್ದು ನಕ್ಕು, ಸಿಕ್ಕಸಿಕ್ಕವರಿಗೆಲ್ಲ ಫೋನು ಮಾಡಿ ಹೇಳಿ ಅವರನ್ನೂ ನಗಾಡಿಸಿದ್ದು- ಎಲ್ಲ ನೆನಪಾಯ್ತು ಕಣೇ.
  ಒಳ್ಳೆ ಮೂಡ್ ಕ್ರಿಯೇಟ್ ಮಾಡ್ತು ಈ ಬರಹ. ಅದನ್ನ ಹೇಳೋಕೆ ಬರ್ತಾ ಇಲ್ಲ ನಂಗೆ.

 2. ಚೇತ್,
  ನಂಗೆ ನನ್ನ ಪಿಳ್ಳೆಯೂ ಧ್ರುವ, ನಚಿಕೇತರ ಥರ ಸಣ್ವಯಸ್ನಲ್ಲೆ ವೈರಾಗ್ಯ ಬೆಳೆಸ್ಕಂಬಿಟ್ರೆ ಅಂತ ಭಯ ಆಯ್ತು ಕಣೆ. ನನ್ಮಗಳಾಗಿ ಅದು ಆಥರ ಏನಾದ್ರು ಇಂಡಿಕೇಶನ್ನು ತೋರ್ಸಿದ್ರೆ ಮೊದ್ಲು ಮನೆ ಬಿಟ್ಟಾಚೇಗ್ನಡೀ ಯಾದಾರ ಆಸ್ರಮಕ್ಕೆ ಅಂತಂದೇನು!
  ಆಮೇಲೆ ’ಬಕೆಟ್ ಲಿಸ್ಟ್’ ನೋಡು. ಪಿವಿಆರ್ ಗೆ ಬಂದಿದೆ.

 3. ಹಾಗೇನಾದ್ರೂ ನಿನ್ ಪಿಳ್ಳೆ ಆ ಹಾದಿ ಹಿಡಿಯೋಹಾಗಿದ್ರೆ ನನ್ ಅಡ್ರೆಸ್ ಕೊಡು! ಟ್ರೇನಿಂಗ್ ಕೊಡ್ತೀನಿ 😉
  ಬಕೆಟ್ ಲಿಸ್ಟಾ? ಪ್ರಣವ ಬಂದಿದಾನೆ ಕಣೇ. ಅವಂಗೆ ಒಂದಷ್ಟು ಗಣೇಶನ್ ಫಿಲಮ್ಮು ತೋರಿಸ್ಬೇಕಂತೆ! ಯಾರಿಗೆ ತಗಲಿ ಹಾಕ್ಲಿ ಅಂತ ಕಾಯ್ತಿದೀನಿ…

 4. ಬರ್ಬಾರ್ದ ಟೈಮ್ ಲೆಲ್ಲ ಮಳೆ ಬಂದು ಹಾಳುಮಾಡಿದ ಸುದ್ದಿ ಕೇಳೊದೆ ಆಗಿತ್ತು. ಪರವಾಗಿಲ್ಲ ಜೋರು ಬರ್ದಿದ್ದಾರೆ ಅಂತ ಓದಲಿಕ್ಕೆ ಕೂತರೆ ಕೊಡಚಾದ್ರಿಯಿಂದ ಇಳಿಸಿ ಡೈರೆಕ್ಟಾಗಿ ಪೆಯಿಂಟಿಂಗೂಗಳನ್ನ ಅಸ್ಪಷ್ಟವಾಗಿ ತೋರಿಸಿ ಸೀದ ‘ದಿ ಬಕೇಟ್ ಲಿಸ್ಟ್’ ಸಿನಿಮಾ ಹತ್ತಿರಕ್ಕೆ ತಂದು ನಿಲ್ಲಿಸಿದ್ರಲ್ಲ …… ಹೋಗಲಿ ಒಂದು ಒಳ್ಳೆ ಸಿನಿಮಾ ಬಗ್ಗೆ ತಿಳೀತಲ್ಲ ಅಂತ ಖುಷಿ ಅಷ್ಟೆ.

  -ಅಮರ

 5. hmmmm ಎಲ್ಲೋ ಇದ್ದೆ, ಎಲ್ಲಿಗೋ ಕಳ್ಸಿಬಿಟ್ರಿ!:(( ಇನ್ನು ಮುಂಗಾರುಮಳೆ ಹಾಡ್ ನಾಕ್ ದಿನ ಕೇಳ್ಬೇಕು ಮಳೆ ಮತ್ತೆ ಎಂಜಾಯ್ ಮಾಡೋಕೆ!!;)) ಚೆನ್ನಾಗ್ ಬರ್ದಿದೀರ, ಬಕೆಟ್ ಲಿಸ್ಟ್, ಚೈನೀಸ್ ಪೇಯಿಂಟಿಂಗ್, ಅಜ್ಜಿ-ಮೊಮ್ಮಕ್ಕಳ ಮಾತು…ಎಲ್ಲ ಬೆರೆತ ಭಾವಕ್ಕೆ ಸಲಾಮ್! ಹಾಂ ಕೀಟ್ಸ್‌ನ ಸಾಲುಗಳೂ ಕೂಡ!

 6. ಹೋದ ತಿಂಗಳಿನ್ನೂ ಕೊಡಚಾದ್ರಿಯಲ್ಲಿ ಮಾಡಿದ ಸಾಹಿತ್ಯ ಜಾಗರಣೆಯ ನೆನಪು ಹಸಿ ಹಸಿಯಾಗಿರುವಾಗಲೇ ನಿಮ್ಮ ಈ ಬರಹ ನನ್ನ ಮತ್ತೆ ಅಲ್ಲಿಗೆ ಕರೆದುಕೊಂಡು ಹೋಯಿತು. ಕೊಡಚಾದ್ರಿಯ ತುತ್ತತುದಿಯಲ್ಲಿ ನಿಲ್ಲಿಸಿ ಜೀವನದ ತುತ್ತ ತುದಿಯ ಬಗ್ಗೆ ಹೇಳಿದ್ದು ಚೆನ್ನಾಗ್ ಅನ್ನುಸ್ತು….

 7. ಬರಹ ಚೆನ್ನಾಗಿದೆ. ಯೋಚನೆಗಳು ಹಿಡಿಯುವ ಹಾದಿಯ ನಿಗೂಢತೆಯೊಡನೆ ಅಜ್ಜಿ-ಮೊಮ್ಮಗುವಿನ ಸ್ನಿಗ್ಧತೆ, ಆತ್ಮೀಯವೆನಿಸಿತು.

  ಆದರೂ… ನಮ್ಮ ಆಪ್ತರ ಸಾವಿನೊಂದಿಗೆ ಮುಖಾಮುಖಿಯಾದಾಗಿನ ಅನುಭವವೇ ಬೇರೆ, ಬರವಣಿಗೆಯೇ ಬೇರೆ! ಅದನ್ನು ಹಿಡಿದಿಡುವುದು ಕಷ್ಟ.

 8. ಟೀನಾ ಅವರೆ,

  ಲೇಖನ ಇಷ್ಟವಾಯಿತು. ತುಂಬಾ ಜೀವನಪ್ರೀತಿ ತುಂಬಿರುವ ಬರಹ. ಮರಣ ಹೊಂದಿದಾಗ ಅವನ ಕಣ್ಣುಗಳು ಮುಚ್ಚಿಕೊಂಡಿದ್ದವು, ಹೃದಯ ತೆರೆದುಕೊಂಡಿತ್ತು’- ಸಾಲು ತುಂಬಾ ಇಷ್ಟವಾಯಿತು.

  ಧನ್ಯವಾದಗಳು.
  ಜೋಮನ್.

 9. ಅಮರ, ಶ್ರೀ, ಚಕೋರ, ಮಲ್ನಾಡ್ ಹುಡ್ಗಿ, ಸುಪ್ತದೀಪ್ತಿ,
  Nothing feels better than knowing that you enjoyed reading me!!

  ರವಿ,
  ಫೋಟೋಗಳಿಗಿಂತ ನಿಮ್ಮ ಸಬ್ ಟೈಟಲ್ಲುಗಳು ಗಮ್ಮತ್ತಾಗಿವೆ! ಎಸ್ಪೆಶಲಿ ’ತಲ್ವಾರು ಶ್ರೀ’ಗಳು ನೋಟೀಸು ಮಾಡಿದ್ದಾರೆ ಅಂದುಕೊಂಡಿದ್ದೀನಿ. ಧನ್ಯವಾದಗಳು!

  ಹರೀಶ್,
  ಅಷ್ಟು ಹೇಳೋಕಾದ್ರು ಇಲ್ಲಿ ಬಂದಿರಲ್ಲ! I will take this one as a complement. ಧನ್ಯವಾದ. 🙂
  -ಟೀನಾ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s