ಆಕೆ ಹಾಕಿದ ನಗರಿಯ ತಳಪಾಯ

ಕ್ರಿಸ್ಟೈನ್ ಹುಟ್ಟಿದ್ದು ವೆನಿಸಿನಲ್ಲಿ. ಬೆಳೆದಿದ್ದು ಫ್ರಾನ್ಸಿನಲ್ಲಿ ಆಕೆ ವಿಧವೆಯಾಗಿದ್ದು ಇಪ್ಪತ್ತೈದರ ಹರೆಯದಲ್ಲಿ. ತನ್ನ ಮಕ್ಕಳನ್ನು ಸಾಕಲು ಆಕೆ ಬರೆಯಲಾರಂಭಿಸಿದಳು. ಫ್ರೆಂಚ್ ಸಾಹಿತ್ಯದ ಅತ್ಯುತ್ತಮ ಪುಸ್ತಕವೆನಿಸಿಕೊಂಡ ‘ರೊಮ್ಯಾನ್ಸ್ ಆಫ್ ದ ರೋಸ್’ ನ ಬಗ್ಗೆ ಆಕೆ ನೀಡಿದ ಪ್ರತಿಕ್ರಿಯೆ ‘ದ ಬುಕ್ ಆಫ್ ದ ಸಿಟಿ ಆಫ್ ಲೇಡೀಸ್’ ಇಂದ ಮಹಿಳಾವಾದೀ ಸಾಹಿತ್ಯ ಪ್ರಭಾವಿತಗೊಂಡಿತು. ಆದರು ನಾವು ಈಗಿನ ಬರಹಗಳಲ್ಲಿ ಈಕೆಯ ಹೆಸರನ್ನೆ ಕಾಣುವದಿಲ್ಲವಲ್ಲ? ಯಾರಿದು ಕ್ರಿಸ್ಟೈನ್? ಎಲ್ಲಿ ಬರೆಯುತ್ತಾಳೀಕೆ?

ಆಕೆ ಕ್ರಿಸ್ಟೈನ್ ದೆ ಪಿಜಾನ್. ಆಕೆ ಹುಟ್ಟಿದ್ದು ಕ್ರಿ.ಶ. 1365ರಲ್ಲಿ!

ನಮಗೆ ಗೊತ್ತಿರುವ ಹಾಗೆ ಪಾಶ್ಚಾತ್ಯ ಮಹಿಳಾವಾದ ಆರಂಭವಾಗುವುದು ಸುಮಾರು ಹದಿನೆಂಟನೆಯ ಶತಮಾನದ ಕೊನೆಯ ಭಾಗದಲ್ಲಿ ಮೇರೀ ವೊಲ್ಸ್ಟೋನ್ಕ್ರಾಫ್ಟಳ ಬರಹಗಳ ಮೂಲಕ. ಆಮೇಲೆ ಹತ್ತೊಂಭತ್ತನೆಯ ಹಾಗೂ ಇಪ್ಪತ್ತನೇ ಶತಮಾನದ ವೇಳೆಗೆಲ್ಲ ಮಹಿಳಾವಾದದಲ್ಲಿ ಕ್ರಾಂತಿಯೇ ಆಯಿತೆನ್ನುವಷ್ಟರ ಮಟ್ಟಿಗೆ ಬೆಳವಣಿಗೆಗಳಾದವು. ಮಹಿಳಾವಾದೀ ಸಾಹಿತ್ಯ ಬೃಹತ್ತಾಗಿ ಬೆಳೆಯತೊಡಗಿತು. ಹಲವಾರು ಥಿಯರಿಗಳು ಬೆಳಕಿಗೆ ಬಂದವು. ಪುರುಷಕೇಂದ್ರೀಕೃತವಾಗಿದ್ದ ಸಾಹಿತ್ಯವನ್ನು ಸ್ತ್ರೀಯ ಕಣ್ಣಿಂದ ನೋಡುವ, ಪುನರ್ವ್ಯಾಖ್ಯಾನಿಸುವ, ನವೀನವಾಗಿ ಬರೆಯುವ ಪ್ರಕ್ರಿಯೆ ಪ್ರಚಲಿತವಾಗತೊಡಗಿತು. ಅನೇಕರಲ್ಲಿ ಇದು ಪಕ್ಕಾ ಇತ್ತೀಚಿಗೆ ನಡೆದ ಕ್ರಾಂತಿ ಎಂಬ ಭಾವನೆ ಹುಟ್ಟಿಸಿದುದರಲ್ಲಿ ಯಾವುದೇ ಅಚ್ಚರಿ ಕಾಣದು. ಆದರೆ ಚರಿತ್ರೆಯನ್ನು ತನ್ನ ಕಣ್ಣಿಂದ ಕಂಡು ಹೊಸ ರೀತಿಯಲ್ಲಿ ಅದನ್ನು ಹೇಳುವ ಕೆಲಸವನ್ನು ಏಳು ಶತಮಾನಗಳ ಹಿಂದೆಯೇ ಮಾಡಿದ ಮೊದಲ ಮಹಿಳೆ ಕ್ರಿಸ್ಟೈನ್ ದೆ ಪಿಜಾನ್.

ಆಕೆಯ ‘ದ ಬುಕ್ ಆಫ್ ದ ಸಿಟಿ ಆಫ್ ಲೇಡೀಸ್’ ಆರಂಭವಾಗುವುದು ಆಕೆಯ ಓದಿನಿಂದ. ಮ್ಯಾಥೋಲಿಯಸ್ ಎಂಬಾತ ಬರೆದ ಪುಸ್ತಕವೊಂದನ್ನು ಓದುತ್ತ ಕ್ರಿಸ್ಟೈನ್ ದೆ ಪಿಜಾನ್ ಬರೆದುಕೊಳ್ಳುತ್ತಾಳೆ: ’ಬರೆ ಈ ಪುಸ್ತಕವನ್ನು ನೋಡಿದರೆ ಸಾಕು, ನನಗನಿಸುವುದು, ಇಷ್ಟೊಂದು ಜನ ಗಂಡಸರು, ಅದರಲ್ಲಿಯೂ ವಿದ್ಯಾಪಾರಂಗತರು ತಮ್ಮ ಮಾತುಕತೆ, ಬರಹಗಳಲ್ಲಿ ಮಹಿಳೆಯರ ಬಗ್ಗೆ, ಅವರ ನಡವಳಿಕೆಯ ಬಗ್ಗೆ ಎಷ್ಟೊಂದು ಪೈಶಾಚಿಕವಾಗಿ, ಹೇಯವಾಗಿ ಬರೆಯುತ್ತ ಬಂದಿದ್ದಾರೆಂದು ಅಚ್ಚರಿಪಡುವಂತೆ ಆಗುವುದು. ಇದನ್ನು ಓದಿದ ನಂತರ ನನಗೆ ದೇವರು ಹೆಣ್ಣಿನ ರೂಪದಲ್ಲಿ ಒಂದು ವಿಕಾರ ಪ್ರಾಣಿಯನ್ನು ಸೃಷ್ಟಿಸಿರುವನೆಂದು ತಿಳುವಳಿಕೆ ಮೂಡಿತು. ಕುಶಲನಾದ ಆತ ಹೀಗೆ ಮಾಡಲು ಹೇಗೆ ಸಾಧ್ಯ ಎಂದು ಭಾವಿಸಿದೆ. ನನ್ನ ಬಗ್ಗೆ, ಇಡಿ ಹೆಂಗಸರ ಜಾತಿಯ ಬಗ್ಗೆಯೆ ಬೇಸರ ಮೂಡಿ ನನಗೆ ಹಳಹಳಿಯುಂಟಾಯಿತು – ನಾವು ರಾಕ್ಷಸರೆಂಬ ಭಾವನೆ ಮೂಡಿತು. ದೇವರು ನನ್ನನ್ನು ಹೆಣ್ಣೊಂದರ ದೇಹದಲ್ಲಿ ಬದುಕುವಂತೆ ಮಾಡಿದ್ದು ನನ್ನ ದುರ್ದೈವವೇ ಅಂದುಕೊಂಡೆ.’

ಹೀಗಿದ್ದ ಕ್ರಿಸ್ಟೈನಳ ಕನಸಿನಲ್ಲಿ ದೇವತೆಗಳು ಬಂದು ತೊಂದರೆಗೆ ಪರಿಹಾರ ಸೂಚಿಸುತ್ತಾರೆ. ಗೊಂದಲಕ್ಕೆ ಒಳಗಾಗಿದ್ದ ಆಕೆಗೆ ಮಹಿಳೆಯರಿಗೋಸ್ಕರ ಒಂದು ನಗರವನ್ನು ನಿರ್ಮಿಸಬೇಕೆಂದೂ, ಅಲ್ಲಿ ನೆಲೆಸುವ ಪ್ರತಿಯೊಬ್ಬ, ಮಹಿಳೆಗೂ ಆಕೆಯ ಮೇಲೆ ಪ್ರಹಾರ ನಡೆಸುವವರಿಂದ ರಕ್ಷಣೆ ದೊರಕುವದೆಂದೂ ಹೇಳುವರು. ಅಲ್ಲಿ ನೆಲೆಸುವ ಮಹಿಳೆಯರು ತಮ್ಮ ಮೆದುಳೊಳಗೆ ಭದ್ರವಾಗಿ ಕುಳಿತಿರುವ ‘ಮಹಾನ್ ಪುರುಷ’ನೊಡನೆ ವಾಗ್ವಾದ ನಡೆಸಬೇಕಾಗಿತ್ತು. ಕ್ರಿಸ್ಟೈನಳಿಗೆ ಇಲ್ಲಿನವರೆಗೆ ಪುರುಷರು ದಾಖಲಿಸಿರುವ ಚರಿತ್ರೆಯ ಬಗೆಗೇ ಸಂಶಯ ಹುಟ್ಟುತ್ತದೆ. ಮಹಿಳೆಯರ ಸಾಮಾನ್ಯ ನಡವಳಿಕೆ, ಗುಣಲಕ್ಷಣಗಳನ್ನು ಹೋಲಿಸಿದರೆ ಇವರು (ಪುರುಷರು) ಬರೆದುಕೊಂಡಿರುವುದು, ವಾದಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಸಂಶಯ ಹುಟ್ಟುತ್ತದೆ ಎಂದು ತನ್ನ ವಾದವನ್ನು ಮಂಡಿಸುವ ಕ್ರಿಸ್ಟೈನಳ ತರ್ಕ ಮೆಚ್ಚುವಂಥದು. ಇಲ್ಲಿ ಹೆಣ್ಣಿನ ಅನುಭವಗಳನ್ನು ಆಕೆ ಹೆಚ್ಚು ಸರಿಯಾಗಿ ಬಿಂಬಿಸಬಲ್ಲಳು ಎನ್ನುವ ವಾದವನ್ನು ಪುಷ್ಟಿಗೊಳಿಸಲು ಆಕೆ ಪೌರಾಣಿಕ, ಚಾರಿತ್ರಿಕ ಹಾಗು ಬೈಬಲ್ಲಿನ ಉದಾಹರಣೆಗಳನ್ನು ಬಳಸುತ್ತಾಳೆ. ಬೊಕೇಶಿಯೋನ ‘ಪ್ರಸಿದ್ಧ ಮಹಿಳೆಯರು’ ಪುಸ್ತಕದಿಂದ ಹಾಗೂ ಗ್ರೀಕ್ ನಾಟಕದ ಜೇಸನ್ ಮತ್ತು ಮೀಡಿಯಾರ ಉದಾಹರಣೆಗಳು ಕೂಡ ಉದ್ಧರಿಸಲ್ಪಟ್ಟಿವೆ. ಮಹಿಳೆಯರು ತಮ್ಮ ನಡುವೆಯೆ ಇರುವ ಇಂಥ ಉದಾಹರಣೆಗಳನ್ನು ನ್ಯಾಯ ದೊರಕಿಸಿಕೊಳ್ಳಲು ಬಳಸಿಕೊಳ್ಳಬೇಕೆನ್ನುವುದು ಆಕೆಯ ಇಚ್ಛೆ.

ಕ್ರಿಸ್ಟೈನಳ ಮಹಿಳಾನಗರಿಯ ಕಲ್ಪನೆ ಅಂದಿನ ಕಾಲಕ್ಕೆ ಅನೂಹ್ಯವಾದುದಾಗಿತ್ತು. ತಮ್ಮ ತೊಂದರೆಗಳು, ಕ್ರೈಸಿಸ್ಸುಗಳಿಗೆ ತಾವೆ ಒಂದೆಡೆ ಸೇರಿ ಪರಿಹಾರ ಕಂಡುಕೊಳ್ಳಬೇಕೆನ್ನುವ ನೂತನ ಪರಿಕಲ್ಪನೆಯನ್ನು ಆಕರ್ಷಕ ರೀತಿಯಲ್ಲಿ ತರ್ಕಬದ್ಧವಾಗಿ ಉದಾಹರಣೆಗಳ ಮೂಲಕ ಮಹಿಳೆಯರಿಗೆ ತೋರ್ಪಡಿಸಿದ ಕೀರ್ತಿ ಕ್ರಿಸ್ಟೈನಳಿಗೆ ಸೇರುತ್ತದೆ. ಆಧುನಿಕ ಮಹಿಳಾವಾದದ ಅನೇಕ ಆರಂಭಗಳು ಕ್ರಿಸ್ಟೈನಳ ಈ ಪುಸ್ತಕದಲ್ಲಿಯೆ ತೋರಿಬರುತ್ತವೆ. ಆಕೆ ಹಾಕಿದ ತಳಪಾಯದ ಮೇಲೆ ಇಂದಿನ ಮಹಿಳಾವಾದದ ಮಹಾನಗರಿ ಭದ್ರವಾಗಿ ನಿಂತಿದೆ.

ಚಿತ್ರ ಕೃಪೆ: www.staff.hum.ku.dk 

 

Advertisements

9 thoughts on “ಆಕೆ ಹಾಕಿದ ನಗರಿಯ ತಳಪಾಯ

 1. “ಮಹಿಳೆಯರು ತಮ್ಮ ಮೆದುಳೊಳಗೆ ಭದ್ರವಾಗಿ ಕುಳಿತಿರುವ ‘ಮಹಾನ್ ಪುರುಷ’ನೊಡನೆ ವಾಗ್ವಾದ ನಡೆಸಬೇಕಾಗಿತ್ತು”– ಮನೋವಿಜ್ಞಾನದ ಪ್ರಕಾರ, ಇದು ಸುಪ್ರಸಿದ್ಧ “ಗೆಸ್ಟಾಲ್ಟ್ ಥೆರಪಿ” ವಿಧಾನ. ಚಿಕಿತ್ಸಾ ವಿಧಾನ ಈಗಲೂ ಪ್ರಚಲಿತವಿದೆ, ಪರಿಣಾಮಕಾರಿಯೂ ಆಗಿದೆ.

  ಇದರ ಕೆಲವು ತುಣುಕುಗಳನ್ನು ನಮ್ಮ “ಅಕ್ಕನ ವಚನ”ಗಳಲ್ಲೂ ಕಾಣಬಹುದು.

  (ಹನ್ನೆರಡನೆಯ ಶತಮಾನದಲ್ಲಿ ಮಹಾದೇವಿಯಕ್ಕ, ಹದಿಮೂರನೆಯ ಶತಮಾನದಲ್ಲಿ ಕಾಶ್ಮೀರದ ಲಲ್ಲೇಶ್ವರಿ, ಹದಿನಾರನೇ ಶತಮಾನದಲ್ಲಿ ಮೀರಾಬಾಯಿ… ಇವರೆಲ್ಲ ಭಕ್ತಿಪಂಥದಲ್ಲೂ ಮಹಿಳಾವಾದಿಗಳಾಗಿ ಎದ್ದುನಿಲ್ಲುವ ವ್ಯಕ್ತಿತ್ವದವರು.)

 2. ಓಹ್ ಗೊತ್ತೇ ಇರ್ಲಿಲ್ಲ ಕ್ರಿಸ್ಟೀನ್ ವಿಷ್ಯ! ನಾನೂ ವುಲ್ಸ್ಟನ್ಸ್ಕಾಪ್ಟಳಿಂದಲೇ ಷುರು ಮಾಡಿದ್ದು ಪಾಶ್ಚಾತ್ಯ ಮಹಿಳಾವಾದದ ಓದು… ಕ್ರಿಸ್ಟೀನ್ ಪುಸ್ತಕ ಹುಡುಕಿ ಓದ್ಬೇಕು! ಥ್ಯಾಂಕ್ಸ್ ಟೀನಾ:)

 3. ನಾನೂ ಸಂತೋಷ್ ಕುಮಾರ್ ಹೇಳೋದನ್ನೇ ಹೇಳೋದು ? ನಿಜವಾಗಲೂ ಈ ಸಾರಿ ಹೇಳಿ ಬಿಡಿ, ನೀವು ಇಂಗ್ಲಿಷ್ ಲೆಕ್ಚರರ್ರಾ? ನೀವು ಏನು? (ಕುತೂಹಲದಿಂದ) ನೀವು ಹೀಂಗ ಹುಡುಕಿ ತಂದು ನಮ್ಮ ಗುಂಗು ಹಿಡಿಸಿ ಬಿಡ್ತೀರಿ. ಒಂದು ದಿನವಾದರೂ ಈ ಝೋನ್ ಕಡೆ ಬರಬಾರದೂ ಅಂದ್ರೂ ಇಂಥದೊಂದು ಏನಾದ್ರೂ “ಹೊಳೆತೀರುತ್ತೆ’ ಅನ್ನಿಸಿ ಬಂದು ಬಿಡ್ತೀವಿ. ಮೇಡಂ, ಹೀಗೆ ಹುಡುಕೋ ಕೆಲಸ ಮುಂದುವರಿಸಿ, ಬರೆಯುವುದನ್ನೂ ಸಹ !
  ನಾವಡ

 4. ನಾವಡರೆ,
  ನೀವು ಟೀನಾರವರನ್ನು ಇಂಗ್ಲೀಷ್ ಲೆಕ್ಚರರ್ರಾ ಅಂತ ಕೇಳಿದ್ದು ಯೋಚನೆಗೆ ಹಚ್ಚಿತು. ಒಂದು ಕಾಲಕ್ಕ ಜಗತ್ತನ್ನು ಪತ್ರಿಕೆಗಳ ಮೂಲಕ ಮಾತ್ರ ನೋಡಬಹುದಾಗಿದ್ದ ಕಾಲಕ್ಕೆ, ಪಾಶ್ಚಿಮಾತ್ಯ ಸಾಹಿತ್ಯವನ್ನು ಓದಿಕೊಂಡು ಅದನ್ನು ಶ್ರೇಷ್ಠವೆಂದೂ ಭಾವಿಸಿಕೊಂಡ ಇಂಗ್ಲೀಷ್ ಲೆಕ್ಚರರು ನಮಗೆ ವಿಸ್ಮಯದ ವ್ಯಕ್ತಿಯಾಗ್ತಿದ್ದರು.
  ಅವರು ಸ್ಥಳೀಯ ಸಾಹಿತ್ಯವನ್ನು ಜಾಗತಿಕ ಸಾಹಿತ್ಯಕ್ಕೆ ಹೋಲಿಸಿ ಮಾತನಾಡ್ತಿದ್ದಾಗ ಈ ಮನುಷ್ಯ ಎಷ್ಟೆಲ್ಲಾ ತಿಳ್ಕೊಂಡಿದ್ದಾರೆ ಅನಿಸುತ್ತಿತ್ತು. ಆದರೆ ಈಗ ಏನಾಗಿದೆ ನೋಡಿ…ಜಗತ್ತು ಒಂದು ಮೌಸ್ ಕ್ಲಿಕ್‌ನಲ್ಲಿ ತೆರೆದುಕೊಳ್ಲುತ್ತೆ. ಮಾಧ್ಯಮ-ಅಂತರ್ಜಾಲ ಕ್ರಾಂತಿ ನಮ್ಮನ್ನು ಜಗತ್ತಿನ ವಿಚಾರಧಾರೆಗಳಿಗೆ ಮುಖಾಮುಖಿಯಾಗಿಸಿವೆ. ತೆರೆದ ಮನ ಇಲ್ಲಿ ಮುಖ್ಯವಾಗುತ್ತೆ. ಜೊತೆಗೆ ತಿಳಿದುಕೊಳ್ಳುವ-ವಿಶ್ಲೇಷಿಸುವ ತಾಳ್ಮೆಯೂ.

  ರವೀ…
  ಒಂದು ಹೊಸ ಲೇಖನ::ಹಣವೂ, ಹಸಿದ ಹೊಟ್ಟೆಗಳೂ, ಹಿಟ್ಲರನೂ ನೆನಪಾದಾಗ…

 5. ಎಲ್ರಿಗೂನೂ,
  🙂

  ನಾವಡರೆ, ನನಗೆ ಸುಮಾರು ಜನ ಈ ಪ್ರಶ್ನೆ ಕೇಳಿದಾರೆ. ನಾನು ಆಂಗ್ಲಸಾಹಿತ್ಯದ ವಿದ್ಯಾರ್ಥಿನಿ ಅಷ್ಟೇ.

  ರವೀ,
  ’ಪಾಶ್ಚಿಮಾತ್ಯ ಸಾಹಿತ್ಯವನ್ನು ಓದಿಕೊಂಡು ಅದನ್ನು ಶ್ರೇಷ್ಠವೆಂದೂ ಭಾವಿಸಿಕೊಂಡ ಇಂಗ್ಲೀಷ್ ಲೆಕ್ಚರರು ನಮಗೆ ವಿಸ್ಮಯದ ವ್ಯಕ್ತಿಯಾಗ್ತಿದ್ದರು.’
  ಇದು ಖಂಡಿತವಾಗ್ಲೂ ನಿಮ್ಮ ಮಿಸ್ ಗಿವಿಂಗು ಅನ್ಸತ್ತೆ ನನಗೆ. ಯಾವ ಸಾಹಿತ್ಯದ ವಿದ್ಯಾರ್ಥಿ ಕೂಡ ಒಂದು ಪ್ರಾದೇಶಿಕ ಸಾಹಿತ್ಯಕ್ಕಿಂತ ಇನ್ನೊಂದು ಶ್ರೇಷ್ಠ ಅಂತ ಭಾವಿಸುವುದು ಸಾಧ್ಯವೇ ಇಲ್ಲ. ಹಾಗೆ ಭಾವಿಸುವವರು ಮೇಷ್ಟರಾಗುವದು ಹಾಗಿರಲಿ, ಸಾಹಿತ್ಯದ ವಿದ್ಯಾರ್ಥಿಗಳು ಅಂತ ಅನಿಸಿಕೊಳ್ಳಲೂ ಲಾಯಕ್ಕಲ್ಲ!! ಕಂಪಾರಿಟಿವ್ ಅನಾಲಿಸಿಸ್ ಯಾವಾಗಲು ಆರೋಗ್ಯಕರ. ಅದು ನಮ್ಮನ್ನ ಬೆಳೆಸುತ್ತೆ. ಹಾಗೆಂದು ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಾಗಿಯೂ ವಿಶ್ವಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಅನೇಕ ಸ್ನೇಹಿತರು ನನಗೆ ಗೊತ್ತು. ನಾವು ನಮ್ಮನ್ನ ಸ್ಲಾಟುಗಳಲ್ಲಿ ಕೂರಿಸಿಕೊಳ್ಳುವುದ ಬಿಟ್ಟು ಸೊಲ್ಪ ಆಚೆ ಬಂದರೆ ಚೆನ್ನಾಗಿರತ್ತೆ ಅಲ್ವಾ?
  ಇನ್ನು ನೀವು ಹೇಳುವ ಹಾಗೆ ಒಂದು ಮೌಸ್ ಕ್ಲಿಕ್ಕಿನಲ್ಲಿ ಮಾಹಿತಿಯ ಭಂಡಾರವೆ ತೆರೆದುಕೊಳ್ಳುವದು ನಿಜ. ಯಾವ ರೀತಿಯ ಮಾಹಿತಿ? ಅದನ್ನು ಹೇಗೆ ಬಳಸಿಕೊಳ್ಳಬೇಕು? ಈಗ ಆಗುತ್ತಿರುವ ಮಾಹಿತಿ ಬಳಕೆ ಯಾವರೀತಿಯದು? ’ತೆರೆದ ಮನ’ವನ್ನ ಹಲವಾರು ರೀತಿ ವಿಶ್ಲೇಷಿಸಬಹುದು. ಇರಲಿ ಇದರ ಬಗ್ಗೆ ಇನ್ನೊಮ್ಮೆ ಮಾತಾಡುವ. ಅಲ್ಲಲ್ಲ ಗಲಾಟೆ ಮಾಡುವ!!: )

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s