ಹೀಗೆ ಪ್ರತಿಸಾರಿ ಕಾಡುವ ಅವಳು

‘ಹಯ್ಯೊ, ಅವಳು ಬಂದಳೆಂದು ಕಾಣುತ್ತೆ. ನೀನೆ ಹೋಗು ಮಗಳೆ!’
‘ಉಹುಂ. ನಾನು ಯಾಕೆ ಆ ಹೆಂಗಸಿನ ಹತ್ತಿರ ಮಾತಾಡಬೇಕು? ನೀವೆ ಹೋಗ್ರಮ್ಮ!!’
‘ನಂಗೆ ತಲೆನೋವು ಅಂದುಬಿಡು. ಪ್ಲೀಸ್ ಕಣೆ. ನಂಗಾಗಲ್ಲ ಮಾರಾಯ್ತಿ ಆ ಪುರಾಣ ಕೇಳೋಕೆ!’
‘ಪ್ರತಿ ಸಾರಿ ಹಬ್ಬಕ್ಕೆ ಮನೆಗೆ ಬರೋದು ಈ ಹಿಂಸೆಗಾ? ಸರಿ. ನೀವು ಒಳಗಿರಿ. ಮಿನಿಮಂ ಒಂದು ಗಂಟೆ ಅಂತೂ ಆಗತ್ತೆ.’

ನಾನು ಮುಸಿಮುಸಿ ನಗುತ್ತ ಹಿತ್ತಲ ಬಾಗಿಲು ತೆರೆಯುತ್ತಿದ್ದೆ. ಅಲ್ಲಿ ತಲೆಯ ಮೇಲೆ ಸೆರಗು ಹೊದ್ದುಕೊಂಡು ಆಕೆ ನಿಂತಿರುತ್ತ ಇದ್ದಳು – ಶೋಕದ ಪ್ರತೀಕವೆ ತಾನೆಂಬಂತೆ. ಅವಳು ಎಂದರೆ ಒಂದು ರೀತಿಯ ಸರಿಯಾಗಿ ಒಣಗಿರದ ಸೀರೆಗಳ ಚುಂಗು ವಾಸನೆಯೆ ಇವತ್ತಿಗು ನನ್ನ ಮನಸ್ಸಿಗೆ ಬರುವುದು. ಆಕೆ ಸದಾ ರವಿಕೆಯಂತೆ ಇರುವ ತಾನೆ ಕೈಯಾರ ಹೆಣೆದ ವುಲನಿನ ರವಿಕೆಯನ್ನೆ ಉಡುತ್ತಿದ್ದುದು. ತಲೆಯ ಸೆರಗೊಳಗಿಂದ ಅಸ್ತವ್ಯಸ್ತವಾಗಿ ಇಣುಕುತ್ತಿದ್ದ ಕೂದಲುಗಳು ವಾರದಿಂದ ಬಾಚಣಿಕೆಯ ಪ್ರಯೋಗಕ್ಕೆ ಒಳಪಡದಿರುವ ಎಲ್ಲ ಲಕ್ಷಣಗಳನ್ನೂ ತೋರುತ್ತಿದ್ದವು. ಇನ್ನು ಆಗೀಗ ಇಣುಕುತ್ತಿದ್ದ ಹೇನುಗಳ ವಿಚಾರವನ್ನು ನಾನು ಮಾತನಾಡದಿದ್ದರೇನೆ ಒಳಿತು. ಹಾಗೆ ಬೇಕಾದರೆ ಆಕೆಯ ಮಾಮೂಲು ಉಡುಗೆಯನ್ನು ಬದಲಾಯಿಸಿ ರೇಷ್ಮೆಸೀರೆ ಉಡಿಸಿ ತಲೆಗೂದಲನ್ನು ಒಪ್ಪವಾಗಿ ಬಾಚಿ ಒಂದೆರಡು ಆಭರಣಾದಿಗಳನ್ನು ತೊಡಿಸಿದರೆ ಆಕೆಗೆ ರಾಜಕುಮಾರಿ ಗಾಯತ್ರೀದೇವಿಯವರಿಗೆ ದೊರಕುವಷ್ಟೆ ಗೌರವ ಆರಾಮವಾಗಿ ದೊರಕಿಬಿಡುತ್ತಿತ್ತು. ಆಂಥಾ ಗತ್ತು ಆಕೆಯ ಮುಖದ ಮೇಲೆ ಲಾಸ್ಯವಾಡುತ್ತಿತ್ತು. ನನ್ನ ಮುಖದ ಮೇಲಿನ ಸ್ವಾಗತದ ನಗುವನ್ನೂ ಆಕೆ ಅಸಹ್ಯವೆಂಬಂತೆ ನೋಡಿ ಮನೆಯೊಳಗೆ ಠೀವಿಯಿಂದ ಕಾಲಿಡುತ್ತಿದ್ದಳು ಮತ್ತು ನಮ್ಮ ಅಡುಗೆ ಒಲೆಗೂ ರುಬ್ಬುಗಲ್ಲಿಗೂ ನಡುವೆ ಇರಿಸಲಾಗಿರುತ್ತಿದ್ದ ಕುಳ್ಳನೆಯ ಸ್ಟೂಲೊಂದರ ಮೇಲೆ ತಣ್ಣಗೆ ಆಸೀನಳಾಗುತ್ತಿದ್ದಳು.

ಆಮೇಲೆ ಆಕೆಯ ಸೊಂಟಕ್ಕೆ ಸಿಗಿಸಲಾಗಿದ್ದ ಅಡಿಕೆಪುಡಿಯ ಪಾಕೆಟು, ಸುಮಾರು ಮಲೆನಾಡಿನ ಹೆಂಗಸರು ಇಟ್ಟುಕೊಳ್ಳುವಂಥದು – ಈಚೆ ಬರುತ್ತಿತ್ತು. ಆಕೆ ಮೆಲ್ಲಗೆ ಸುಮಾರು ಹಳೆಯದಾಗಿ ಒಣಗಿಹೋಗಿದ್ದ ವೀಳೆಯದೆಲೆಯನ್ನೂ, ನಾಲಕ್ಕಯಿದು ಅಡಿಕೆಯ ತುಂಡುಗಳನ್ನೂ, ಸುಣ್ಣದ ಹೊಳೆಯುವ ಡಬ್ಬಿಯೊಂದನ್ನೂ ತನ್ನ ತೊಡೆಯ ಮೇಲೆ ಇಡುತ್ತಿದ್ದಳು. ಎಲೆಯ ತೊಟ್ಟು ಮುರಿವ ಶಾಸ್ತ್ರವಾದ ಮೇಲೆ ತನ್ನ ಬಲಗೈಯ ನಡುಬೆರಳಿಂದ ಸುಣ್ಣವನ್ನು ಎಲೆಗೆ ಬಳಿದು ಅಡಿಕೆಯ ತುಂಡುಗಳನ್ನು ಎಲೆಗೆ ಸುರಿದು ಹುಷಾರಾಗಿ ಕಟ್ಟಿ ಅದನ್ನು ತನ್ನ ಬಾಯಿಯ ಒಂದು ಮೂಲೆಗೆ ಭದ್ರವಾಗಿ ಸೇರಿಸುವ ಕ್ರಿಯೆ ನಡೆಯುವುದು. ಆ ಇಡೀ ಪ್ರಕ್ರಿಯೆ ನನ್ನಲ್ಲಿ ಒಂದು ಬಗೆಯ ಕಚಗುಳಿ ಹುಟ್ಟಿಸಿ ನನ್ನ ಬಾಯಲ್ಲಿಯೂ ಎಲಡಿಕೆ ತಿನ್ನಲೇಬೇಕೆಂಬ ತುರಿಕೆಯನ್ನು ಹುಟ್ಟಿಸುತ್ತಿತ್ತು. ಆಕೆಗೂ ಇದು ತಿಳಿದಿತ್ತು ಎಂದು ನನಗೆ ಗುಮಾನಿ. ಆಕೆ ನನ್ನನ್ನು ಹದ್ದಿನಂಥ ಕಣ್ಣುಗಳಿಂದ ನೋಡುತ್ತ ಇರುತ್ತಿದ್ದಿದ್ದು ಇದಕ್ಕೆ ಕಾರಣ. ನಾನು ಅಪ್ಪಿತಪ್ಪಿ ತಲೆಕೆಟ್ಟು ಆಕೆಯಿಂದ ಒಂದು ತುಂಡು ಅಡಿಕೆ ಕೇಳಿದ್ದಿದ್ದರೆ ನನಗೆ ಒದಗಬಹುದಾದ ಪರಿಸ್ಥಿತಿಯ ಬಗ್ಗೆ ನನಗೆ ಒಳ್ಳೆಯ ಅಂದಾಜು ಇದ್ದುದರಿಂದ ನಾನು ನನ್ನ ಆಸೆಯನ್ನು ಬಲವಾಗಿ ದವಡೆಗಳೆಡೆಯಲ್ಲಿ ಅದುಮಿ ಹಿಡಿದು ಆಕೆಗೆ ಕಾಫಿ ನೀಡಲು ಹೊರಡುತ್ತಿದ್ದೆ. ಅದೇ ಸಮಯಕ್ಕೆ ಸರಿಯಾಗಿ ಆಕೆ ನನ್ನ ತಾಯಿಯವರಿಗೆ ಪ್ರತೀ ಸಾರಿಯಂತೆ ಆಕೆ ಬಂದಾಗಲೆ ಬರುವ ತಲೆನೋವು ಹೊಟ್ಟೆಬೇನೆ ಏನಾದರು ಬಂದಿದೆಯೆ ಎಂದು ವಿಚಾರಿಸುವಳು. ನಾನು ಹೌದೆನ್ನುತ್ತ ಆಕೆಯ ಕೈಗೆ ಕಾಫಿಯ ದೊಡ್ಡ ಲೋಟವನ್ನು ಥಮಾಯಿಸಿ ಸುಮ್ಮನಾಗುವೆ. ಆಕೆ ಎಲ್ಲ ತಿಳಿದಿದ್ದರೂ ತಿಳಿದಿಲ್ಲವೆಂಬಂತೆ ಅಲೌಕಿಕ ಆನಂದದಿಂದ ಕಾಫಿ ಕುಡಿಯತೊಡಗುವಳು.

ಆಮೇಲೆ ಆಕೆಯ ಬಾಯಿ ತೆರೆಯುತ್ತಿತ್ತು. ಕೇವಲ ನಲವತ್ತೈದು ನಿಮಿಷಗಳ ಕಾಲ ಆಕೆಯ ಕೆಲಸಕ್ಕೆ ಬಾರದ ಗಂಡುಮಕ್ಕಳು, ಪಿತೂರಿ ಮಾಡುವ ಸೊಸೆಯಂದಿರು, ತನಗೆ ಬರಬೇಕಾದ ಆಸ್ತಿಪಾಲನ್ನು ಇಪ್ಪತ್ತೈದು ವರ್ಷಗಳಿಂದಲೂ ಕೊಡದಿರುವ ನಾದಿನಿ ಮೈದುನಂದಿರು, ತನ್ನ ಬಗ್ಗೆ ಹಿಂದಿನಿಂದ ಹೀಯಾಳಿಸುವ ಜನರು ತನಗೆ ಒಳ್ಳೆಯದು ಮಾಡದ ಜನರು ಯಾವರೀತಿ ನರಕದ ಬೆಂಕಿಯಲ್ಲಿ ಬೇಯುವರು ಎಂದು ಆಕೆ ಸಚಿತ್ರವಾಗಿ ವರ್ಣಿಸುತ್ತಿದ್ದಳು. ಕೇವಲ ಒಂದು ಬಡಪಾಯಿ ಕಾಲೇಜುಹುಡುಗಿಯಾಗಿದ್ದ ನಾನು ಭೀತಿಯನ್ನು ಪ್ರಕಟಿಸುತ್ತ ಗಡಗಡ ನಡುಗುತ್ತ ಕೂತಿರುತ್ತಿದ್ದೆ. ಆಮೇಲೆ ಆಕೆ ನಾನು ಕಾಲೇಜಿಗೆ ಹೋಗಿ ದೊಡ್ಡ ತಪ್ಪು ಮಾಡುತ್ತಿರುವೆನೆಂದೂ, ನನ್ನ ತಂದೆತಾಯಂದಿರಿಗೆ ತಲೆಕೆಟ್ಟಿದೆಯೆಂದೂ, ನನಗೆ ಮದುವೆಯಾಗಿದ್ದರೆ ಈಗಾಗಲೆ ಸುಮಾರು ಮಕ್ಕಳನ್ನು ಹಡೆದು ಫಾರಿನ್ನಿನಲ್ಲಿ ನನ್ನ ಗಂಡನೊಡನೆ ಹಾಯಾಗಿದ್ದಿರಬಹುದಿತ್ತೆಂದೂ ಹೇಳಿ ಏನಿದ್ದರು ಏನೆ ಓದಿದರು ನೀನು ನಾಳೆ ಒಲೆಯ ಬೂದಿ ಕೆದಕುವುದು ತಪ್ಪುತ್ತದೆಯೆ? ಯಾರಿಗಾದರು ತಪ್ಪಿದೆಯೆ? ಎಂದು ಹೇಳಿ ನನ್ನ ಮುಖವನ್ನೆ ದುರದುರನೆ ನೋಡುತ್ತಿದ್ದಳು. ನಾನು ಹೆಚ್ಚಿಗೆ ತಡೆದುಕೊಳ್ಳಲಾಗದೆ ಆಕೆಗೆಂದೆ ತೆಗೆದಿಡಿಟ್ಟಿದ್ದ ಕಾಟನ್ ಸೀರೆ ಹಾಗು ನೂರು ರೂಪಾಯಿಗಳನ್ನು ಹೆಚ್ಚೂಕಡಿಮೆ ಅವಳ ಕೈಯಿಗೆ ತುರುಕುತ್ತಿದ್ದೆ. ಆಕೆ ಆದನ್ನು ತೆಗೆದುಕೊಳ್ಳುವುದು ನಮಗೆ ಮಾಡುವ ಮಹದುಪಕಾರ ಎಂಬಂತೆ ನನ್ನೆಡೆಗೆ ನೋಡುತ್ತಿದ್ದಳು. ಏನಿದ್ದರು ನಿನ್ನ ಅಮ್ಮ ತಪ್ಪಿಸಿಕೊಂಡುಬಿಟ್ಟಳು ನೋಡು ಈ ಸಾರಿ. ಭಾರಿ ಹುಶಾರಿ ಅವಳು ಎಂದು ಸಟ್ಟನೆದ್ದು ಹೊರಗೆ ಹೋಗಿಬಿಡುತ್ತಿದ್ದಳು. ನಾನು ಒಳಗೆ ಹೋಗಿ ಅಮ್ಮನಿಗೆ ಸಿಗ್ನಲ್ಲು ಕೊಡುವೆ. ಇಬ್ಬರೂ ಬಿದ್ದೂ ಬಿದ್ದೂ ನಗುವುದು. ಪ್ರತಿ ವರುಷವೂ ಹೀಗೇ. ತಪ್ಪದೆ ನಡೆಯುವುದು.

ಆಗಾಗ ನಾನು ತಪ್ಪಿಸದೆ ಹೋಗಲೆಬೇಕಾಗುವ ಕೆಲವು ಮದುವೆಗಳಲ್ಲಿ ಈಕೆಯ ನೆರಳು ಕಂಡುಬರುತ್ತಿದ್ದುದುಂಟು. ಅಲ್ಲೆಲ್ಲ ಈಕೆ ಒಬ್ಬಳೆ ಯಾರನ್ನೂ ಅಂಟಿಸಿಕೊಳ್ಳದಂತೆ ತಿರುಗಾಡುತ್ತಿದ್ದಳು. ಆಕೆಯ ತಲೆ ಕೊಂಚ ಒಪ್ಪವಾಗಿ ಮೈಮೇಲೆ ಸುಮಾರುಮಟ್ಟಿಗಿನ ಸೀರೆ ರವಿಕೆಗಳು ಕಂಡುಬರುತ್ತಿದ್ದವು. ಆಕೆಯನ್ನು ಯಾರೂ ಏನು ಕೆಲಸಕ್ಕೂ ಕರೆಯರು. ಆಕೆ ಯಾರಿಗೂ ಬೇಡವಾದಾಕೆ. ಆದರೆ ಈ ಇಮೇಜನ್ನು ಆಕೆಯೆ ಕಟ್ಟಿಟ್ಟುಕೊಂಡಿದ್ದೆಂದು ನನಗೆ ಬಲವಾದ ನಂಬಿಕೆಯಿತ್ತು. ಸಾವಿನ ಮನೆಗಳಿಗೆ ಮಾತ್ರ ಆಕೆ ತಪ್ಪದೆ ಹಾಜರಾಗಿ ಎರಡು ನಿಮಿಷ ಸುಮ್ಮನೆ ಕುಳಿತು ಎದ್ದುಹೋಗುವಳು. ಆಕೆ ಹೋದಮೇಲೆ ಎಷ್ಟೊ ಹೊತ್ತಿನವರೆಗು ಆಕೆಯ ಕಮಟುವಾಸನೆ ಹೋಗಲೊಲ್ಲದೆ ಅಲ್ಲಿಯೆ ಸುಳಿದಾಡುತ್ತಿರುವುದು. ಆಕೆ ನಮ್ಮೆಲ್ಲರನ್ನೂ ಬೇಕಂತೆ ಮೂರ್ಖರನ್ನಾಗಿ ಮಾಡಿ ಸೀಕ್ರೆಟಾಗಿ ನಗುತ್ತಿರುವಳೆಂದೇ ನನಗೆ ಸದಾ ಅನ್ನಿಸುವುದು.

ಚಿತ್ರಕೃಪೆ: http://www.mattwrigley.com

 

Advertisements

15 thoughts on “ಹೀಗೆ ಪ್ರತಿಸಾರಿ ಕಾಡುವ ಅವಳು

 1. ಟೀನಾ,
  ಇದನ್ನು ಓದಿ, ನಿಜ್ವಾಗ್ಲೂ ನನಗೆ ಏನು ಹೇಳಬೇಕಂತ ಗೊತ್ತಾಗುತ್ತಿಲ್ಲ. ಇದೇ ತರಹದ ಒಬ್ಬರನ್ನ ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ನಮ್ಮ ತಂದೆ ಕಡೆಯ ದೂರದ ನೆಂಟರಂತೆ. ಸುಮಾರು ಇವತ್ತರ ಆಸುಪಾಸಿನಲ್ಲಿದ್ದವರು, ಮದುವೆಆಗಿರಲಿಲ್ಲ, ನೋಡಿಕೊಳ್ಳುವವರು ಯಾರು ಇರಲಿಲ್ಲ. ಪ್ರತಿವರ್ಷ ಎಲ್ಲ ನೆಂಟರ ಮನೆಗೆ ಒಂದು ಸಾರ್ತಿ ಭೇಟಿ ಕೊಡುತಿದ್ದರು. ಸಂಬಂದಿಕರಲ್ಲಿ ಯಾವುದೇ ಸಮಾರಂಭ ನಡೆದರೂ ಅಲ್ಲಿ ಅವರು ಇರುತ್ತಿದ್ದರು. ಅವರು ಎಲ್ಲಿ ಇರುತ್ತಿದ್ದರು, ಹೇಗೆ ಜೀವನ ಸಾಗಿಸುತ್ತಿದ್ದರು ಅಂತ ಸಹಿತ ಯಾರಿಗೂ ಗೊತ್ತಿರಲಿಲ್ಲ. ಹೆಚ್ಚು ಮಾತನಾಡುತ್ತಿರಲಿಲ್ಲ, ಎಲ್ಲರಿಗೂ ಅವರೊಂದು puzzle ಆಗಿದ್ದರು. ಇವೆಲ್ಲ ಸುಮಾರು ಹತ್ತು , ಹದಿನೈದು ವರ್ಷದ ಹಿಂದಿನ ಮಾತು. ಈಗ ಅವರು ಬದುಕಿದ್ದರೋ ಅಥವಾ?? ಒಂದೂ ಗೊತ್ತಿಲ್ಲ….
  -ಪ್ರಸಾದ್.

 2. ಟೀನಾ ಮೇಡಂ,

  ನಿಮ್ಮ ಈ ಲೇಖನ ಓದಿಬಿಟ್ಟು, ಆಮೇಲೆ ಹಳೇ ಲೇಖನಗಳನ್ನೂ ಎಲ್ಲ ಇವತ್ತು ಕೂತ್ಕೊಂಡು ಓದ್ದೆ. ತುಂಬ ಚೆನ್ನಾಗಿದೆ ಎಲ್ಲಾನೂ. ಆಮೇಲೆ, ಮಹಿಳೆಯರಲ್ಲಿ ಜಾಗೃತಿ ಮೂಡಿಸೋವಂಥ ಆ ಮೀಟಿಂಗ್ ಕಥೆ ಏನಾಯ್ತು? ಆಗೋಯ್ತಾ? ಅಲ್ಲಿ ಏನ್ ನಿರ್ಣಯ ಮಾಡಿದ್ರಿ? ನಾನು ಮಿಸ್ ಮಾಡ್ಕೊಂಬಿಟ್ಟೆ ಎಲ್ಲ. ಇನ್ನೂ ಆ ಮೀಟಿಂಗ್ ಆಗಿಲ್ಲಾಂದ್ರೆ, ಯಾವಾಗ ಮಾಡ್ತೀರೋ, ನನ್ನೂ ಕರೀರಿ ಪ್ಲೀಸ್. 🙂

 3. @Shubhada –
  ಮಹಿಳೆಯರಲ್ಲಿ ಜಾಗೃತಿ ಮೂಡಿಸೋವಂಥ ಮೀಟಿಂಗ್ innu aagilla Shubhada… Elru Jaagrutha mahiLeyare iro kaaraNa adra bagge innu Tina maDam mansu maDidangilla.. 🙂 oLLede, if it takes time, better things n ideas can come out 🙂

  @ Tina

  Namma manege nanu chikkavliddAga bartidda kelsad hengsu ‘Lachimi’ kuDa heegeye idlu 🙂 Nammamman bagge ajji kaili, ajji bagge amman kaili chaaDi heLi thamaashe noDtaa idlu, Ajji theerkonDa mele pakkad mane atte mattu nammamman naDuve benki hachtaa idlu… idu odi avLa nenpaaytu..:)

 4. ಶ್ರೀ ಮತ್ತು ಶ್ರೀಯ ಥರದ ಪ್ರಶ್ನೆ ಇರುವ ಎಲ್ರಿಗೂ,

  ನೀವು ಆಂಟನ್ ಚೆಕಾಫನ ನಾಟಕ ’ದ ಚೆರ್ರಿ ಆರ್ಚರ್ಡ್’ ಓದಿದ್ದರೆ ಅದರಲ್ಲಿ ಒಂದು ಪಾತ್ರ ಬರುತ್ತೆ -ಯೆಪಿಹೊದೊವ್ ಎಂಬ ಹೆಸರಿನ ಕ್ಲರ್ಕೊಬ್ಬನದು. ಆತ ಏನು ಮಾಡಿದರು ಅದು ಉಲ್ಟಾ ಬಿದ್ದು ಆತನಿಗೆ ’twenty-two misfortunes’ ಎಂಬ ಅಡ್ಡಹೆಸರು ತಗುಲಿರುತ್ತದೆ. ಕಳೆದ ಕೆಲವು ವಾರಗಳಿಂದ ನಾನೂ ಒಂದು ಯೆಪಿಹೊದೊವ್ ಅನ್ನಿಸಲು ಆರಂಭವಾಯಿತು – ಆ ಥರ ತಾಪತ್ರಯಗಳು.
  ಅದರೆ ಈ ಭೇಟಿಯ ವಿಚಾರ ಮನಸ್ಸಿಂದ ಇಳಿದಿಲ್ಲ, ಗುಂಗೀಹುಳದಹಾಗೆ ಕೊರೀತಲೇ ಇದೆ. ನಾವಡರು ಮೈಸೂರಿಗೆ ಇನ್ವೈಟ್ ಮಾಡಿದಾರೆ. ಏನಂತೀರಿ? ಬೆಂಗಳೂರಾ ಮೈಸೂರಾ? ಒಟ್ಟಿನಲ್ಲಿ ಈ ತಿಂಗಳ ಇಪ್ಪತ್ತೇಳನೆ ತಾರೀಖು ಹೇಗಿರತ್ತೆ? ಆಗಬಹುದಾ?

  – ಟೀನಾ

 5. ನನ್ನ ಊರಿನಲ್ಲಿ ಇಬ್ಬರು ಅಕ್ಕ ತ೦ಗಿಯರಿದ್ದರು. ಅವರನ್ನು ಎಲ್ಲರೂ “ಅನಿಷ್ಟಗಳು” ಎನ್ನುತ್ತಿದ್ದರು. ಅವರೆ೦ದರೆ ಊರವರೆಲ್ಲರಿಗೂ ವರ್ಜ್ಯವಾಗಿತ್ತು. ಅ೦ತಹ ಮುಖ್ಯ ಕಾರಣಗಳೇನು ಇರಲಿಲ್ಲ. ನಿಮ್ಮ ಬರಹ ಅವರನ್ನು ನೆನಪಿಸಿತು ಮತ್ತು ಅವರ ಬಗ್ಗೆ ಊರಿನವರು ಇಟ್ಟುಕೊ೦ಡ ಧೋರಣೆಯ ಬಗ್ಗೆ ಚಿ೦ತಿಸುವ೦ತೆ ಮಾಡಿತು.
  ಪ್ರತಿಯೊಬ್ಬನಲ್ಲೂ ಎನಾದರೂ ವಿಶಿಷ್ಟತೆ ಇದ್ದೇ ಇರುತ್ತದೆ ಅಲ್ವಾ?

 6. ಇಂಥವಳೊಬ್ಬಳು ನಮ್ಮ ಮನೆ ಪರಿಸರದಲ್ಲೂ ಇದ್ದಾಳೆ, ಮನೆಗೆ ಬಂದು ಮಾತನಾಡಲು ತೊಡಗಿದರೆ ಬೇಸರ ಹಿಡಿಸುವಷ್ಟು ಮಾತು..ನಮ್ಮಮ್ಮ ಅಷ್ಟಿಷ್ಟು ಮಾತಾಡಿ ನನ್ನನ್ನೇ ಮಾತಿಗೆ ಸಿಲುಕಿಸಿ ಹೋಗಿಬಿಡುತ್ತಾರೆ

 7. ನಾನು ನನ್ನ ಆಸೆಯನ್ನು ಬಲವಾಗಿ ದವಡೆಗಳೆಡೆಯಲ್ಲಿ ಅದುಮಿ ಹಿಡಿದು ಆಕೆಗೆ ಕಾಫಿ ನೀಡಲು ಹೊರಡುತ್ತಿದ್ದೆ.
  ಕೇವಲ ಒಂದು ಬಡಪಾಯಿ ಕಾಲೇಜುಹುಡುಗಿಯಾಗಿದ್ದ ನಾನು ಭೀತಿಯನ್ನು ಪ್ರಕಟಿಸುತ್ತ ಗಡಗಡ ನಡುಗುತ್ತ ಕೂತಿರುತ್ತಿದ್ದೆ. ಆಕೆ ನಮ್ಮೆಲ್ಲರನ್ನೂ ಬೇಕಂತೆ ಮೂರ್ಖರನ್ನಾಗಿ ಮಾಡಿ ಸೀಕ್ರೆಟಾಗಿ ನಗುತ್ತಿರುವಳೆಂದೇ ನನಗೆ ಸದಾ ಅನ್ನಿಸುವುದು.
  ವಿಮರ್ಶೆ ಬರೆಯೋಕಿಂತ ಇಷ್ಟದ ಸಾಲುಗಳನ್ನು ಸೂಚಿಸುವುದೇ ಸುಲಭ ಅನ್ನಿಸಿ ಹೀಗೆ…
  ~ಅಪಾರ

 8. ಟೀನಾ,
  ಮೇ ೧ ಕ್ಕೆ ಮಾಡಿದರೆ ಚೆಂದ ಅಲ್ವಾ..? ಕಾರ್ಮಿಕರ, ಕಮ್ಯುನಿಷ್ಟರ ದಿನ. ಕ್ರಾಂತಿ ಮಾಡಬಹುದು ನಾವೂ..!
  ಇರಲಿ.
  ಮೇ ೧ ಗುರುವಾರ. ಹೇಗೆ..? ಮಾಡಬಹುದಲ್ವಾ..? ೨೭ಕ್ಕೆ ನನ್ನ ಎಕ್ಸಾಮ್ ಇದೆ. ಅಂದು ಬರಲಾಗುವುದಿಲ್ಲ. ನನ್ನ ಶುಭ ಹಾರೈಕೆಗಳು. ನನಗಾಗಿ ಅಂತಾ ಹೇಳ್ತಿಲ್ಲ. ಇನ್ನೂ ಪ್ರಚಾರ ನೀಡಿಲ್ಲವಲ್ಲ ಅಂತಾ ಅದಕ್ಕೆ ಹೇಳಿದೆ. ಒಂದಿಷ್ಟ್ ಜನ ಸೇರಿದ್ರೆ ಚೆಂದ ಅಂತಾ ನನ್ನ ಅಭಿಮತ.
  ಗಣೇಶ್

 9. ಟೀನಾ ಮೇಡಂ,
  ಈ ತಿಂಗಳ ಇಪ್ಪತ್ತೇಳಕ್ಕೆ ನಾನಂತೂ ರೆಡಿ. ಆದರೆ ಮೈಸೂರಿನಲ್ಲೇ ಆಗ್ಬೇಕು. ಕಾರಣವಿಷ್ಟೇ. ನಾವೂ ಒಂದು ಮಾದರಿಯಲ್ಲಿ ಚುನಾವಣೆ ಅಬ್ಸರ್ವರ್ ರೀತಿಯಲ್ಲಿ ಇರೋದ್ರಿಂದ “ಕೇಂದ್ರ ಸ್ಥಾನ’ ದಿಂದ ಹೊರಗೆ ಹೋಗುವಂತಿಲ್ಲ. ಅಂದರೆ ಮೈಸೂರಿನಲ್ಲೇ..ಬನ್ನಿ ಆಹ್ವಾನ ನೀಡಿದ್ದೇನೆ.
  ನಾವಡ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s