ಝಗಮಗವೆನ್ನುವ ಜಾಹೀರಾತು

‘ವಾಶಿಂಗ್ ಪೌಡರ್ ನಿರ್ಮಾ’ದ ಜಾಹೀರಾತು ಯಾರಿಗೆ ನೆನಪಿಲ್ಲ? ದೂರದರ್ಶನ ಆಗಷ್ಟೆ ಮನೆಮನೆಗಳಲ್ಲಿ ಇಣುಕುತ್ತಿದ್ದ ಕಾಲ. ತಲೆಗೆ ರಿಬ್ಬನ್ನು ಕಟ್ಟಿ ಕೂದಲು ಇಳಿಬಿಟ್ಟ ಹುಡುಗಿಯೊಬ್ಬಳು ಬೆಳ್ಳಗಿನ ಫ್ರಾಕು ಧರಿಸಿ ಗಿರಿಗಿರಿ ಬುಗುರಿಯಂತೆ ತಿರುಗುವ ಜಾಹೀರಾತು ನೋಡಿ ನಾವು ವಿಪರೀತ ಮೋಹಕ್ಕೊಳಗಾಗುತ್ತಿದ್ದೆವು. ನಮ್ಮ ಹಳೆಯ ಫ್ರಾಕುಗಳ ಅಂಚುಗಳನ್ನು ಹಿಡಿದು ‘ದೂಧ್ ಸಿ ಸಫೇದಿ..ರಂಗೀನ್ ಕಪಡಾ ಭೀ ಖಿಲ್ ಖಿಲ್ ಜಾಯೇ’ ಎಂದು ಅಪಸ್ವರದಲ್ಲಿ ಅರಚಿಕೊಳ್ಳುತ್ತ ಆ ಹುಡುಗಿಯಂತೆಯೆ ತಿರುಗಲು ಹೋಗಿ ತಲೆಸುತ್ತು ಬಂದು ಕುಕ್ಕರಿಸಿ ಮುಖಮುಖ ನೋಡಿಕೊಂಡು ನಗಾಡಿಕೊಳ್ಳುತ್ತಿದ್ದುದುಂಟು. ಆಗ ಟಿ.ವಿ.ಯಲ್ಲಿ ಯಾವ ಹೊಸ ಪ್ರಾಡಕ್ಟು ಬಂದರೂ ಕೊಳ್ಳೋಣವೆಂದು ಅಮ್ಮನ ಬಳಿ ಕಾಡುವುದಿತ್ತು-ಹೆಚ್ಚಾಗಿ ಶಾಂಪೂ, ಸೋಪು, ಕ್ರೀಮುಗಳಿಗಾಗಿ. ಶ್ರೀಮಂತರ ಮನೆಯ ಹುಡುಗಿಯರು ತಮ್ಮ ಅಪ್ಪ ಅಮ್ಮಂದಿರು ಕೊಡಿಸಿದ ಹೊಸವಸ್ತುಗಳನ್ನು ಬ್ಯಾಗಿನಲ್ಲಿ ಬಚ್ಚಿಟ್ಟುತಂದು ಕ್ಲಾಸಿನಲ್ಲಿ ಪ್ರದರ್ಶಿಸುವಾಗ ನಮ್ಮ ಬೇಡಿಕೆಗಳಿಗೆ ಸೊಪ್ಪುಹಾಕದ ನಮ್ಮ ಮಿಡಲ್ ಕ್ಲಾಸ್ ಪೇರೆಂಟುಗಳ ಮೇಲೆ ಒಮ್ಮೊಮ್ಮೆ ಕೋಪವುಕ್ಕಿದರೂ ಪ್ರಯೋಜನವಿಲ್ಲವೆಂದು ಸುಮ್ಮನಾಗುತ್ತ ಇದ್ದೆವು. ನಮ್ಮ ಟಿ.ವಿ. ಹುಚ್ಚಿಗೆ ನಮ್ಮ ಅಪ್ಪಮ್ಮಂದಿರು ಹಿಡಿಶಾಪ ಹಾಕಿಕೊಂಡು ಅವರೂ ಸುಮ್ಮನಾಗುತ್ತಿದ್ದರು. ಈ ಜಾಹೀರಾತುಗಳಲ್ಲಿ ಕಾಣಬರುತ್ತಿದ್ದ ಸುಂದರ ಮಹಿಳೆಯರು, ಹ್ಯಾಂಡ್ಸಂ ಪುರುಷರು, ಅವರ ಉಡುಗೆತೊಡುಗೆಗಳು, ನೀಟಾದ ಮನೆಗಳು, ಆ ಮನೆಗಳ ಆಧುನಿಕ ಸಲಕರಣೆಗಳು ಇವನ್ನೆಲ್ಲ ಅಕ್ಕಪಕ್ಕದ ಮನೆಯ ಹೆಂಗಸರು ನೋಡಿ ಕರುಬಿ ನಿಟ್ಟುಸಿರು ಬಿಡುತ್ತಿದ್ದರೆ ನಾವು ಮಕ್ಕಳು ಮಿಕಿಮಿಕಿ ನೋಡುವುದಾಗಿತ್ತು.

ನಾನು ಮೊದಲಬಾರಿಗೆ ಗೆಳತಿಯೊಬ್ಬಳ ಮನೆಯಲ್ಲಿ ‘ಫೆಮಿನಾ’ ನೋಡಿದ್ದು, ಅದರಲ್ಲಿನ ತರಹೇವಾರಿ ಗೃಹಾಲಂಕಾರದ ಚಿತ್ರಗಳು, ವಿವಿಧ ರಂಗಿನ ಜಾಹೀರಾತುಗಳನ್ನು ನೋಡಿ ಮರುಳಾಗಿದ್ದು, ನನಗೂ ಅವೆಲ್ಲ ದಕ್ಕಬೇಕೆಂಬ ಹಂಬಲ ಉಂಟಾಗಿದ್ದು – ಎಲ್ಲವನ್ನು ನೆನಪಿಸಿಕೊಂಡರೆ ಈಗ ನಗು ಬರುತ್ತದೆ. ‘ಇವೆಲ್ಲ ಪಡೆಯಲು ತುಂಬ ದುಡ್ಡು ಬೇಕು. ಅದು ನಮ್ಮ ಬಳಿ ಇಲ್ಲ’ ಎಂಬ ತರಹದ ಯೋಚನೆಗಳು ಬಂದದ್ದೂ ಆಗಲೆ. ಆಗೆಲ್ಲ ನಾವು ಒಟ್ಟಿಗೆ ಕೂತು ಪೇಪರುಗಳಲ್ಲಿ ರಾಶಿರಾಶಿ ದುಡ್ಡು ತುಂಬಿದ ಮನೆಗಳ ಚಿತ್ರ ಬರೆದುಕೊಂಡು ಸಮಾಧಾನಪಟ್ಟುಕೊಳ್ಳುತ್ತಿದ್ದೆವು. ಒಟ್ಟಿನಲ್ಲಿ ಈ ಜಾಹೀರಾತುಗಳು ಅಲ್ಲಿಯತನಕ ಕೆಲವು ಚಾಕಲೇಟು, ಸಿಹಿತಿಂಡಿಗಳನ್ನು ಮಾತ್ರ ಬಯಸುತ್ತಿದ್ದ ನಮ್ಮ ಮನಸ್ಸಿನಲ್ಲಿ ತರತರಹದ ಆಸೆಗಳನ್ನು ಹುಟ್ಟಿಸಿದ್ದಷ್ಟೇ ಅಲ್ಲ, ನಮ್ಮಲ್ಲಿ ಕ್ಲಾಸ್ ಕಾನ್ಶಿಯಸ್ನೆಸ್ ಅನ್ನು ಕೂಡ ಮೂಡಿಸಲಾರಂಭಿಸಿದವು. ನಾವು ಉಳ್ಳವರ ಮನೆಯ ಮಕ್ಕಳನ್ನು ಆದಷ್ಟು ನಮ್ಮ ಗುಂಪಿನಿಂದ ದೂರವಿಡಲಾರಂಭಿಸಿದೆವು. ಅವರ ಚರ್ಚೆಯ ಕಾಮನ್ ವಿಷಯಗಳಾದಂತಹ ಫಾರಿನ್ ವಸ್ತುಗಳು, ಹೊಸತಾಗಿ ರಿಲೀಸ್ ಆದ ಚಲನಚಿತ್ರಗಳ ವಿಡಿಯೊಕ್ಯಾಸೆಟ್ಟುಗಳು, ಹೊಸಬ್ರ್ಯಾಂಡಿನ ವಾಚು, ಶೂ, ಆಭರಣಗಳು ಇತ್ಯಾದಿಗಳ ಜತೆ ನಮ್ಮನ್ನು ರಿಲೇಟ್ ಮಾಡಿಕೊಳ್ಳಲು ಸಾಧ್ಯವಾಗದೆ ಪರದಾಡುತ್ತ ನಮಗೇ ಅರಿವಿಲ್ಲದ ಹಾಗೆ ನಾವು ಅಂತಹ ಮಕ್ಕಳಿಂದ ದೂರವಾಗತೊಡಗಿದೆವು. ಅವರಿಗಿಂತ ಸಾಮಾನ್ಯವಾಗಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದಾಗೆಲ್ಲ ನಮ್ಮ ’ಈಗೋ’ಗಳೆಂಬ ಬೆಂಕಿ ಸ್ವಲ್ಪವಾದರು ಆರುತ್ತಿತ್ತು. ಕಾಲೇಜು ಓದುವಾಗ ಗೆಳತಿಯರು ನನ್ನ ಹೊಸ ಬಟ್ಟೆ, ಚಪ್ಪಲಿಗಳ ನಿರ್ಮೋಹದ ಬಗ್ಗೆ ಛೇಡಿಸಿ ‘ನೀನು ಹುಡುಗಿಯಾಗಿರಲಿಕ್ಕೆ ನಾಲಾಯಕ್ಕು!’ ಅನ್ನುತ್ತಿದ್ದರು. ಅವರೆಲ್ಲ ಬೀದಿಯ ಬಿಲ್ಬೋರ್ಡುಗಳ ನೋಡಿ ಕನಸು ಕಟ್ಟುವಾಗ ನಾನು ಮೂರು ಮಕ್ಕಳನ್ನು ತನ್ನ ಸಂಬಳದಲ್ಲಿ ಓದಿಸಬೇಕಾಗಿದ್ದ ಅಮ್ಮನನ್ನು ನೆನೆದು ನಕ್ಕು ಸುಮ್ಮನಾಗುತ್ತಿದ್ದೆ. ಎಂ.ಎ ಓದುವಾಗ ನಮ್ಮ ಲೆಕ್ಚರರೊಬ್ಬರು ‘ಜಾಹೀರಾತು ಸಂಸ್ಕೃತಿಯ ಮೇಲೆ ಸೆಮಿನಾರು ಮಾಡಿ’ ಎಂದು ಹೇಳಿದಾಗ ತಮಾಷೆಯೆನಿಸಿತ್ತು. ಆದರೆ ಚರ್ಚೆ ಮಾಡುತ್ತ ಹೋದಹಾಗೆ ನಾವೆಲ್ಲ ಈ ಜಾಹೀರಾತು ಸಂಸ್ಕೃತಿಯ ಅದೃಶ್ಯ ಭಾಗಗಳೆ ಎಂದು ಅರಿವಾದಾಗ ಅಷ್ಟೇನೂ ತಮಾಷೆಯ ಭಾವನೆ ಉಂಟಾಗಲಿಲ್ಲ. 

ಪ್ರತಿಷ್ಠಿತ ಶಾಲೆಯೊಂದರಲ್ಲಿ ಓದುತ್ತಿದ್ದ ಹುಡುಗನೊಬ್ಬ ತನ್ನ ತಂದೆ ಮೊಬೈಲುಫೋನು ಕೊಡಿಸದಿದ್ದಕ್ಕೆ ಹತಾಶನಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಗ್ಗೆ ಗೆಳತಿ ಸುಪ್ರಿಯಾ ಹೇಳುತ್ತ ಈಗಿನ ಮಕ್ಕಳು ನಮ್ಮ ಹಾಗೆ ಅಡ್ಜಸ್ಟ್ ಮಾಡ್ಕೊಳೊಲ್ಲ ಕಣೆ. ನನ್ನ ಮಗನ ಹತ್ರ ಬೇಬ್ಲೇಡ್ (ಒಂದು ರೀತಿಯ ಆಟಿಕೆ) ಇರಲಿಲ್ಲ ಅಂತ ನಮ್ಮ ಅಪಾರ್ಟ್ಮೆಂಟಿನ ಮಕ್ಕಳು ಆಟಕ್ಕೇ ಸೇರಿಸ್ತಿರ್ಲಿಲ್ಲ. ಪಾಪ. ಡಿಪ್ರೆಸ್ ಆಗ್ಬಿಟ್ಟಿದ್ದ. ನಂಗೆ ತಡ್ಕೊಳೋಕಾಗದೆ ಅವನು ಹೇಳಿದಂಥದೆ ಕೊಡಿಸಿದೆ. ಭಯ ಆಗತ್ತೆ ಕಣೆ ಅನ್ನುತ್ತಿದ್ದಳು. ಜಾಹೀರಾತು ಸಂಸ್ಕೃತಿ ಇವತ್ತು ನಮ್ಮನ್ನು ಹಿಂದೆಂದೂ ಇಲ್ಲದಂತೆ ಆವರಿಸಿಕೊಂಡುಬಿಟ್ಟಿದೆ. ಕಂಪನಿಗಳು ಮಕ್ಕಳು, ಹೆಂಗಸರು, ಗಂಡಸರು, ಯುವಕಯುವತಿಯರು, ವಯಸ್ಸಾದವರು ಎಂದು ಮುಂತಾಗಿ ವರ್ಗೀಕರಿಸಿ, ಪ್ರತಿಯೊಂದು ವರ್ಗವನ್ನೂ ವಿಶೇಷ ಜಾಹೀರಾತುಗಳ ಮೂಲಕ ಓಲೈಸಲಾರಂಭಿಸಿವೆ. ಜಾಹೀರಾತುಗಳ ಮೇಲೆ ಕೋಟಿಗಟ್ಟಲೆ ಖರ್ಚು ಮಾಡುತ್ತವೆ. ‘ನಮ್ಮ ಕಂಪನಿಯ ವಸ್ತು ಕೊಂಡರೇ ನಿಮಗೆ ಮೋಕ್ಷ’ ಎಂದು ಸಾರುತ್ತವೆ. ನಮಗೆ ಇತ್ತೀಚೆಗೆಲ್ಲ ಬೀದಿಬದಿಯ ಸಣ್ಣ ಅಂಗಡಿಗಳಲ್ಲಿ ಮಾರಲ್ಪಡುವ ಲೋಕಲ್ ಕಂಪನಿಯ ಪದಾರ್ಥಗಳು ಒಗ್ಗುವದಿಲ್ಲ. ಮಕ್ಕಳು ಗಲಾಟೆ ಮಾಡದಿರಲು ಟಿ.ವಿ ತೋರಿಸುವವರೂ ನಾವೆ. ಮಕ್ಕಳನ್ನು ಸೂಪರ್ ಮಾರ್ಕೆಟ್ಟಿಗೆ ಕರೆದುಕೊಂಡು ಹೋಗುವವರೂ ನಾವೆ. ಅಲ್ಲಿ ಕಂಡ ವಸ್ತುಗಳು ಬೇಕೆಂದು ಅವರು ರಂಪಾಟ ಮಾಡಿದರೆ ಹುಸಿಕೋಪ ತೋರುತ್ತ ಮುಜುಗರದ ನಗೆ ನಗುತ್ತ ನಮ್ಮ ಕೈಗೆಟುಕದಿದ್ದರೂ ಕೊಡಿಸುವವರೂ ನಾವೆ. ಅವರಿಗೆ ನಮ್ಮ ತೊಂದರೆಗಳು ಎಂದೆಂದಿಗೂ ಅರಿವಿಗೆ ಬರದಂತೆ ಮಾಡುವವರೂ ನಾವೆ. ಅಲ್ಲವೆ?
 
ಸುಪ್ರಿಯಾಳ ತರಹ ನನಗೂ ಭಯವಾಗುತ್ತಿದೆ.

ಚಿತ್ರಕೃಪೆ: http://www.pagog.com

 

Advertisements

5 thoughts on “ಝಗಮಗವೆನ್ನುವ ಜಾಹೀರಾತು

 1. ಟೀನಾರವರೆ,
  ಜಾಹೀರಾತು ಪ್ರಪಂಚ ಜಗಜ್ಜಾಹೀರಾತಾದಮೇಲೆ ಬದುಕು ರಂಗು ಬಿರಂಗಿಯಾಗಿದೆ. ಹಾಗೇ ದುಸ್ತರವಾಗಿದೆ ಕೂಡ. ವಿಪರ್ಯಾಸವೆಂದರೆ, ಎಲ್ಲ ವಸ್ತುಗಳಿಗೂ ಜಾಹೀರಾತಿಲ್ಲದೆ ನಮಗೆ ನಂಬಿಕೆ ಹುಟ್ಟುವುದೇ ಇಲ್ಲ. ಬೆಳಗ್ಗೆ ಹಲ್ಲುಜ್ಜೋ ಟೂತ್ ಪೇಸ್ಟ್ ನಿಂದ ಹಿಡಿದು ಶವ ಹೊರೋ ಪೆಟ್ಟಿಗೆಗಳವರೆಗೂ ಥರಹೇವಾರಿ ಜಾಹೀರಾತುಗಳಿವೆ. ಜನಪ್ರಿಯ ವ್ಯಕ್ತಿಗಳನ್ನೇ ತಮ್ಮ್ ಪ್ರಾಡಕ್ಟುಗಳನ್ನ್ ಜನಪ್ರಿಯಗೊಳಿಸಲಿಕ್ಕೆ ಬಳಸಿಕೊಳ್ಳುತ್ತಾರೆ. ಇದರಿಂದ, ನಟರೂ ಆಗಾಗ ತೆರೆ ಮೇಲೆ ಬಂದಂತಾಗುತ್ತೆ, ಪ್ರಾಡಕ್ಟೂ ಪರಿಚಿತವಾಗುತ್ತೆ. ಹೀಗೆ ಪರಸ್ಪರ ಒಪ್ಪಂದಗಳು ನೆಡೆದು ಜಾಹೀರಾತುಗಳು ಗ್ರಾಹಕನ ಜೇಬಿಗೆ ಕೈಹಾಕುತ್ತವೆ.
  ನೀವು ಹೇಳಿದಂತೆ ದುಬಾರಿ ಪ್ರಾಡಕ್ಟುಗಳು ದುಡ್ಡಿಲ್ಲದ, ಇದ್ದರೂ ಅಷ್ಟೊಂದನ್ನ ಅದಕ್ಕೇ ಸುರಿಯಲಾಗದ ಮಧ್ಯಮ, ಕೆಳ ಮಧ್ಯಮ ವರ್ಗದ ಪೋಷಕರು, ಮಕ್ಕಳಲ್ಲಿ ಕೀಳರಿಮೆ ಬೆಳೆಸುತ್ತಿವೆ. ಇದು ಅಪಾಯಕಾರಿ ಬೆಳವಣಿಗೆ.

  ಇನ್ನೊಂದು ವಿಷ್ಯ.
  ನಾನೂ ವರ್ಜಿನ್ ಮೊಬೈಲ್ ಜಾಹೀರಾತಿನ ಬಗ್ಗೆ ಒಂದು ಲೇಖನ ಬರೆದಿದ್ದೇನೆ. ಒಮ್ಮೆ ಕಣ್ಣು ಹಾಯಿಸಿ.
  http://www.pratispandana.wordpress.com/

 2. ಕೊಳ್ಳುಬಾಕ ಸಂಸ್ಕೃತಿ ಹಾಗು ಇದನ್ನು ಉತ್ತೇಜಿಸುವ ಜಾಹಿರಾತುಗಳು, ಇಂದಿನ ಜಾಗತೀಕರಣಗೊಂಡ ಜಗತ್ತಿನ ವಾಸ್ತವ. We can`t do much about this.ಆದರೆ ಇಂದಿನ ಪೋಷಕರು, ತಮ್ಮ್ ಮಕ್ಕಳಿಗೆ ಪ್ರತಿಯೊಂದನ್ನು ಕೊಡಿಸುವುದರ ಮೂಲಕ, ಅವರನ್ನು ಸಂತೋಷವಾಗಿಡುತ್ತೇವೆನ್ನುವ ಭ್ರಮೆಯಲ್ಲಿದ್ದಾರೆ. I think they are unable to find other ways and means to keep their children`s morale and motivation high. ತಮ್ಮ ಆರ್ಥಿಕ ಪರಿಸ್ಥಿತಿ ಹಾಗು ಕಷ್ತ್ಟಗಳು ಮಕ್ಕಳಿಗೆ ತಿಳಿಯಾಬಾರದೆನ್ನುವ ಧೋರಣೆ ನಿಜವಾಗಿಯೂ ತಪ್ಪು. ಇದು ಅವರನ್ನು ಸದಾ ಭ್ರಮಾಲೊಕದಲ್ಲಿ ವಿಹರಿಸುವಂತೆ ಮಾಡುತ್ತದೆ. ನನ್ನ ಪ್ರಕಾರ ಈ ಕೊಳ್ಳುಬಾಕ ಸಂಸ್ಕೃತಿಯನ್ನು ತಿರಸ್ಕರಿಸಲು ಬೇಕಾದ ಅಡಿಪಾಯ ಮನೆಯಲ್ಲೇ ಹಾಕಬೇಕಿದೆ.

  -Prasad.

 3. ಹಹ್ಹಾ.. ನನಗೂ ಈ ಬೇಬ್ಲೇಡಿನ ಕಾಟ ಗೊತ್ತಿದೆ. ಅನ್ನಲಿಕ್ಕೇ ಕಷ್ಟವೆನ್ನಿಸುವ, ನನಗೆ ಗೊತ್ತೇ ಇಲ್ಲದ ಇದು ಇದೆಂಥ ಅದ್ಭುತವಿರಬೇಕೆಂದು ಸೋಜಿಗಪಟ್ಟಿದ್ದೆ, ನನ್ನ ಅಕ್ಕನ ಮಗ ಮೇಲಿಂದ ಮೇಲೆ ಅದರ ಬಗ್ಗೆ ಮಾತನಾಡಿ ಅವರಪ್ಪನನ್ನು ಕಾಡುವುದನ್ನು ಕೇಳಿದಾಗ. ಹಾಗೆಯೇ ವಾರಕ್ಕೊಂದನ್ನು ಮುರಿದು, ಅಥವಾ ಬೇರೊಬ್ಬರದ್ದು ಇನ್ನೂ ಚೆನ್ನಾಗಿರುವುದನ್ನು ಕಂಡುಕೊಂಡು, ಹೊಸದು ಬೇಕೆಂದು ರಂಪ ಹಿಡಿಯುತ್ತಿದ್ದ. ಕೆಲವೇ ರೂಪಾಯಿಗಳಿಂದ ಹಿಡಿದು ಸಾವಿರಾರು ರೂಪಾಯಿಗಳವರೆಗಿನ ಬೇಬ್ಲೇಡುಗಳಿರುವುದನ್ನೂ, ಅದರಲ್ಲಿ ಅವರು ಬಳಸುವ ನಾನಾ ನಮೂನೆಯ ಹೊಸ ತಂತ್ರಜ್ಞಾನಗಳನ್ನೂ ಕಣ್ಣರಳಿಸಿ ಅವನಿಂದ ಕೇಳಿ ಅರಿತುಕೊಂಡಿದ್ದೆ. ಆಹಾ ಬೇಬ್ಲೇಡೇ!

 4. ಜಾತ್ರೆಯಲ್ಲಿ ಎನೋ ಕೇಳಿ ಮುಖ ಊದಿ ಹೋಗುವಂತೆ ಹೊಡೆತ ತಿಂದಿದ್ದೆ ನಾನು. ನಾ ಕೇಳಿದ ಸೈಕಲ್ಲು, ವಾಚು ನನಗೆ ಸಿಗಲೇ ಇಲ್ಲಾ. “ನಂಗೊಂದು ರೌಂಡ ಸೈಕಲ್ಲು ಕೊಡು” ಅಂತಾ ಇದ್ದವರನ್ನು ಕೇಳುವಾಗಲೆಲ್ಲಾ, ಹೊಟ್ಟೆ ಉರಿದು ಹೋಗುತಿತ್ತು.. ಬಟ್ಟೆ ಅಂಗಡಿಗಳಲ್ಲಿ ಆಯ್ಕೆಯ ಸ್ವಾತಂತ್ರವೇ ಇರಲಿಲ್ಲಾ..
  ನಮ್ಮ ಮನೆಯಲ್ಲಿನ ಮಕ್ಕಳನ್ನೆ ನೋಡಿದರೆ ಒಮ್ಮೆಮ್ಮೆ ಅಸೂಯೆಯೂ ಆಗುತ್ತೆ, ಖುಷಿಯೂ ಆಗುತ್ತೆ..

 5. ಈ ಬೇಬ್ಲೇಡ್ ವಿಷಯ ಗೊತ್ತಿಲ್ಲ ನನಗೆ – ಪ್ರಸಾದರು ಮೇಲೆ ಹೇಳಿದ್ದಂತೆ ಕೊಳ್ಳುಬಾಕ ಸಂಸ್ಕೃತಿಯ ನಿರಾಕರಣ ಮನೆಯಿಂದಲೇ ಆಗಬೇಕು.

  ಮಕ್ಕಳು ಕೇಳಿದ್ದೆಲ್ಲ ಕೊಡಿಸದೇ, ಹಣದ ಬೆಲೆಯನ್ನೂ, ಇಂತಹ ವಸ್ತುಗಳಿದ್ದರೇ ಜೀವನ ಅನ್ನುವ ಭಾವನೆಯನ್ನು ಮೈಗೂಡಿಸಿಕೊಳ್ಳದೇ ಬೆಳೆಸಲು ಪ್ರಯತ್ನವಂತೂ ಪಡುತ್ತಿದ್ದೇನೆ. ಅದರಿಂದ ಕಷ್ಟವಾಗಿದೆ ಅಂತ ಅವರಿಂದ ಯಾವ ದೂರೂ ಬಂದಿಲ್ಲ. ಅಂದಮೇಲೆ, ಮನೆಯೇ ಮೊದಲ ಪಾಠಶಾಲೆ ಅನ್ನೋದಂತೂ ನಿಜ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s