ನೋವಿಗೆ ಬಣ್ಣ ನೀಡಿದ ಫ್ರೀಡಾ

 

ಸಂಜೆ ಬಂದವನ ಮುಖದ ಮೇಲೆ ಒಂದು ಸಣ್ಣ ನಗು. ’ಯಾಕೆ?’ ಕೇಳಿದೆ. ’ನಿನ್ನೆ ನಂಜೊತೆ ಜಗಳ ಮಾಡಿದ್ದಕ್ಕೆ ಇದು ಉತ್ತರ!’ ಅಂದು ಒಂದು ಡಿವಿಡಿ ಕೈಗಿತ್ತ. ಹಿಂದಿನ ಸಂಜೆ ಪೆಯಿಂಟಿಂಗುಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾಗ ಸಾಲ್ವಡಾರ್ ಡಾಲಿಯ ಬಗ್ಗೆ ಮಾತು ಬಂತು. ಮಾಮೂಲು ಹೊಗಳಿಕೆ, ಉದ್ಗಾರಗಳು. ನನ್ನ ವುಮನಿಸ್ಟ್ ಪ್ರಜ್ನೆ ಇದ್ದಕ್ಕಿದ್ದಹಾಗೆ ಜಾಗೃತವಾಗಿಬಿಟ್ಟಿತು. ’ಈ ಪೆಯಿಂಟರುಗಳ ಬಗ್ಗೇ ಮಾತಾಡೋವಾಗ ಯಾವಾಗಲು ನಾವು ಮಾತಾಡೋದೇ ಪಿಕಾಸೋ, ವ್ಯಾನ್ಗಾಗ್, ಎಮೆಫ್ ಹುಸೇನ್, ಡಾಲಿ..ಬರೀ ಗಂಡಸ್ರು ಮಾತ್ರಾನೇ ಯಾಕೆ? ಇಂಡಿಯಾನಲ್ಲು ಫೀಮೇಲ್ ಪೆಯಿಂಟರ್ ಅಂದರೆ ಒಂಜೋಲಿ ಇಲಾ ಮೆನನ್ ಮಾತ್ರಾನೇ! ಯಾರೂ ಇಲ್ವಾ? ಅಥ್ವಾ ಈ ಫೀಲ್ಡಿನಲ್ಲಿ ಹೆಂಗಸ್ರು ಸಕ್ಸೆಸ್ಫುಲ್ ಆಗಕ್ಕೆ ಸಾಧ್ಯ ಇಲ್ವಾ?’ ಎಂದು ವಿಷಯವೆ ಇಲ್ಲದೆ ಕಿತ್ತಾಡಿದ್ದೆ. ಇವ ’ಯಾಕಿಲ್ಲ? ಇದಾರೆ. ಐ ವಿಲ್ ಗೆಟ್ ಯು ಪ್ರೂಫ್!’ ಅಂದಿದ್ದ. ಈಗ ನನ್ನ ಕೈಯಲ್ಲಿ ಸಲ್ಮಾ ಹಯೆಕ್ ನಟಿಸಿರುವ ‘ಫ್ರೀಡಾ’ ಚಲನಚಿತ್ರದ ಡಿವಿಡಿ.

1907ರಲ್ಲಿ ಮೆಕ್ಸಿಕೋ ನಗರದ ಹೊರವಲಯದಲ್ಲಿದ್ದ ಮನೆಯೊಂದರಲ್ಲಿ ಜನಿಸಿದ ಫ್ರೀಡಾ ಕಾಹ್ಲೋ ಆರನೆ ವಯಸ್ಸಿಗೇ ಪೋಲಿಯೋ ಖಾಯಿಲೆಗೆ ತುತ್ತಾದಳು. ಆಕೆಯ ಒಂದು ಕಾಲು ಇನ್ನೊಂದಕ್ಕಿಂತ ಸಣ್ಣ. ಇದನ್ನು ಮರೆಮಾಚಲು ಆಕೆ ಸದಾ ಉದ್ದನೆಯ ಸ್ಕರ್ಟುಗಳನ್ನೆ ಧರಿಸುತ್ತಿದ್ದಳು. ದೈಹಿಕ ನ್ಯೂನತೆಯಿದ್ದರು ಆಕೆ ತನ್ನ ಶಾಲಾ ದಿನಗಳಲ್ಲಿ ಒಳ್ಳೆಯ ಬಾಕ್ಸಿಂಗ್ ಪಟುವಾಗಿದ್ದಳು! ಮೆಕ್ಸಿಕೋನ ಬಹಳ ಒಳ್ಳೆಯ ಶಾಲೆಯೊಂದರಲ್ಲಿ ತನ್ನ ಪ್ರತಿಭೆಯಿಂದಾಗಿ ಪ್ರವೇಶ ಪಡೆದುಕೊಂಡಳು. ತಂದೆಯ ಮೂಲ ಜರ್ಮನಿ, ತಾಯಿ ಸ್ಪ್ಯಾನಿಶ್. 1925ರ ಒಂದು ಬಸ್ ಅಪಘಾತದಲ್ಲಿ ಸಿಕ್ಕಿಹಾಕಿಕೊಂಡ ಫ್ರೀಡಾಳ ದೇಹ ಜರ್ಝರಿತವಾಯಿತು. ಬೆನ್ನುಹುರಿ, ಸೊಂಟ, ಭುಜ, ಎದೆಗೂಡುಗಳಿಗೆ ತೀವ್ರ ಜಖಮು, ಬಲಗಾಲಿನಲ್ಲಿ ಹನ್ನೊಂದು ಫ್ರಾಕ್ಚರುಗಳು, ಜಜ್ಜಿಹೋದ ಬಲಪಾದ, ಇದನ್ನೆಲ್ಲ ಮೀರಿ ಆಕೆಯ ಹೊಟ್ಟೆ ಮತ್ತು ಯೋನಿಯನ್ನು ಭೇದಿಸಿದ ಒಂದು ಕಬ್ಬಿಣದ ಸರಳು!! ಈ ಅಪಘಾತದಿಂದ ಹೊರಬರಲು ಫ್ರೀಡಾಳ ಮೇಲೆ ಸುಮಾರು ಮೂವತ್ತೈದು ಆಪರೇಶನ್ನುಗಳು ನಡೆದವು. ಆಕೆ ಮಕ್ಕಳನ್ನು ಪಡೆಯುವಂತಿರಲಿಲ್ಲ. ಹೊರದೇಹ ಸರಿಹೋದಂತೆ ಕಂಡರು ಆಕೆ ಜೀವನವಿಡೀ ಅಪಾರ ಯಾತನೆ ಅನುಭವಿಸಿದಳು. ಒಮ್ಮೊಮ್ಮೆ ನೋವು ಶುರುವಾದರೆ ಆಕೆ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿಯೆ ಇರಬೇಕಾಗಿ ಬರುತ್ತಿತ್ತು. ಈ ಕಾಲಘಟ್ಟದಲ್ಲಿಯೆ ಆಕೆ ತನ್ನ ವೈದ್ಯಕೀಯ ಅಧ್ಯಯನಕ್ಕೆ ಮಂಗಳ ಹಾಡಿದಳು. ಆಸ್ಪತ್ರೆಯ ಬೇಸರ ಕಳೆಯಲು ಚಿತ್ರ ರಚಿಸಲು ತೊಡಗಿದ ಫ್ರೀಡಾ ಚಿತ್ರಕಲಾವಿದೆಯಾಗಲು ನಿಶ್ಚಯಿಸಿದ್ದು ಕೂಡ ಆಗಲೆ. ಹೆಚ್ಚಿನ ಚಿತ್ರಗಳಲ್ಲಿ ತಾನೆ ಮಾಡೆಲ್ ಆಗಿರುವ ಬಗ್ಗೆ ಆಕೆ ಹೇಳುತ್ತಿದ್ದಿದ್ದು, ’ನಾನು ಒಂಟಿ ಮತ್ತು ನನಗೆ ಚೆನ್ನಾಗಿ ಗೊತ್ತಿರುವ ವಿಷಯ ಅಂದರೆ ನಾನು. ಹಾಗಾಗಿ ನನ್ನ ಪೆಯಿಂಟಿಂಗುಗಳಲ್ಲಿ ಹೆಚ್ಚಾಗಿ ನಾನೆ ಕಾಣುವುದು”. ಸುಮಾರು 143 ಚಿತ್ರಗಳನ್ನು ರಚಿಸಿರುವ ಫ್ರೀಡಾಳ ಚಿತ್ರಗಳಲ್ಲಿ 55 ಆಕೆಯದೆ ಭಾವಚಿತ್ರಗಳು!

ಮೂಲತಃ ಜರ್ಮನ್ನಳಾದರೂ ಮೆಕ್ಸಿಕನ್ ಸಂಸ್ಕೃತಿಯಿಂದ ಪ್ರಭಾವಿತಳಾಗಿದ್ದ ಫ್ರೀಡಾಳ ವರ್ಣಚಿತ್ರಗಳಲ್ಲಿ ಗಾಢ ಬಣ್ಣಗಳು ಹಾಗೂ ಮೆಕ್ಸಿಕನ್ ಸಂಕೇತಗಳು ಕಾಣುತ್ತವೆ. ಮೆಕ್ಸಿಕನ್ ಸಂಸ್ಕೃತಿಯಲ್ಲಿ ಕಾಮುಕತೆಯ ಸಂಕೇತವಾದ ಮಂಗ ಆಕೆಯ ಹಲವಾರು ಚಿತ್ರಗಳಲ್ಲಿ ಕಂಡುಬರುತ್ತದೆ.. ಆಕೆಯ ಭಾವಚಿತ್ರಗಳಲ್ಲಿ ಆಕೆಯ ದೈಹಿಕ ಹಾಗೂ ಮಾನಸಿಕ ನೋವಿನ ಚಿತ್ರಣವಿದೆ. ಉದಾಹರಣೆಗೆ ಆಕೆಯ ಕತ್ತಿಗೆ ಹಾರದ ಬದಲು ಮುಳ್ಳುಕಂಟಿಗಳು ಸುತ್ತಿಕೊಂಡಿರುವುದು, ಇನ್ನೊಂದರಲ್ಲಿ ಆಕೆಯ ಎದೆ ಕತ್ತಿನ ಭಾಗಗಳು ತೆರೆದುಕೊಂಡು ರಕ್ತ ಸುರಿಯುತ್ತಿರುವುದು.. ಆಕೆಯ ಪ್ರಮುಖ ಭಾವಚಿತ್ರವಾದ ‘ರೂಟ್ಸ್’ ಆಕೆಯನ್ನು ಭೂಮಿಗೆ ಬೇರುಬಿಟ್ಟುಕೊಂಡು ಮಲಗಿರುವ ಹೆಣ್ಣಿನಂತೆ ಬಿಂಬಿಸುತ್ತದೆ. ಈ ಚಿತ್ರ ಹರಾಜಿನಲ್ಲಿ ಸುಮಾರು 5.6 ಬಿಲಿಯನ್ ಡಾಲರು ಗಳಿಸಿತು.

ವಿಖ್ಯಾತ ಮ್ಯೂರಲ್ ಕಲಾವಿದ ಡಿಯೆಗೋ ರಿವೆರಾನನ್ನು 1929ರಲ್ಲಿ ಮದುವೆಯಾದ ಫ್ರೀಡಾಳ ವೈವಾಹಿಕ ಜೀವನ ಸದಾ ಏಳುಬೀಳುಗಳಿಂದ ಕೂಡಿತ್ತು. ಇಬ್ಬರದೂ ಕೋಪಿಷ್ಠ ಸ್ವಭಾವ. ಮೇಲಾಗಿ ಫ್ರೀಡಾಳ ಹೆಂಗಸರ, ಗಂಡಸರ ಜೊತೆಗಿನ ಲೈಂಗಿಕಸಂಬಂಧಗಳು ಸುಮಾರು ಜಗಳಗಳಿಗೆ ಕಾರಣವಾದವು. ರಿವೇರಾ ತನ್ನ ತಂಗಿಯೊಡನೆ ಸಂಬಂಧ ಬೆಳೆಸಿದಾಗ ಆತನಿಂದ ವಿಚ್ಛೇದನ ಪಡೆದ ಫ್ರೀಡಾ ಕೆಲಕಾಲದ ನಂತರ ಪುನಃ ಆತನನ್ನೆ ಮದುವೆಯಾದಳು. ಆದರೂ ಇಬ್ಬರ ಸಂಬಂಧದಲ್ಲಿ ಯಾವುದೆ ವ್ಯತ್ಯಾಸವಾಗದೆ ಇಬ್ಬರೂ ಜಗಳವಾಡಿಕೊಂಡೆ ಇದ್ದರು. ಕೊನೆಕೊನೆಗೆ ಇಬ್ಬರೂ ಒಂದೇ ಸೂರಿನಡಿ ಇದ್ದರೂ ಬೇರೆಬೇರೆ ಕೊಠಡಿಗಳಲ್ಲಿ ವಾಸವಾಗಿದ್ದರು. ರಿವೆರೋನಿಂದ ಆಕೆಯ ಶೈಲಿ ಯಾವಾಗಲು ಪ್ರಭಾವಿತವಾಗಲಿಲ್ಲ. ಕಮ್ಯುನಿಸ್ಟರ ಬಗ್ಗೆ ಒಲವು ಹೊಂದಿದ್ದ ರಿವೆರಾ ಮತ್ತು ಫ್ರೀಡಾ ರಶಿಯಾದಿಂದ ರಾಜಕೀಯ ಶರಣು ಕೋರಿ ಬಂದಿದ್ದ ಟ್ರಾಟ್ಸ್ಕಿಗೆ ತಮ್ಮ ಮನೆಯಲ್ಲಿ ಆತಿಥ್ಯ ನೀಡಿದರು.

ಫ್ರೀಡಾಳ ಕೊನೆಯ ದಿನಗಳು ಬಹಳ ನೋವಿನಿಂದ ಕೂಡಿದ್ದವು. ಒಂಟಿತನ ಆಕೆಯ ಜೀವನದ ಅವಿಭಾಜ್ಯ ಅಂಗವಾಗಿತ್ತು. ಸಾಯುವ ಕೆಲದಿನಗಳ ಮುನ್ನ ತನ್ನ ದಿನಚರಿಯಲ್ಲಿ ’ಈ ತೆರಳುವಿಕೆ ಸಂತಸಮಯವಾಗಿರಲೆಂದು ಆಶಿಸುವೆ. ವಾಪಾಸು ಬರುವ ಇಚ್ಛೆ ನನಗಿಲ್ಲವೇ ಇಲ್ಲ – ಫ್ರೀಡಾ’ ಎಂದು ಬರೆದುಕೊಂಡಿದ್ದಳು. 1954ರ ಜುಲೈ 13ರಂದು ಪಲ್ಮನರಿ ಎಂಬೋಲಿಸಂ ಎಂಬ ತೊಂದರೆಯಿಂದ ಆಕೆ ಸಾವನ್ನಪ್ಪಿದಳು ಎಂದು ವರದಿಯಾದರು ಆಕೆ ಹೆಚ್ಚು ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಳೆಂದು ಹೇಳಲಾಗುತ್ತದೆ. ಆಕೆಯ ಸಾವಿನ ನಂತರ ರಿವೆರಾ ಆಕೆಯ ಬಗ್ಗೆ ತನಗಿದ್ದ ಪ್ರೇಮವನ್ನು ಕಂಡುಕೊಂಡ. ಆಕೆಯ ಕಲೆಯ ನಿಜವಾದ ಬೆಲೆಯನ್ನು ಅರಿತಿದ್ದ ರಿವೆರೊ ಅವರು ವಾಸವಾಗಿದ್ದ ಸುಂದರ ‘ಬ್ಲೂ ಹೌಸ್’ ಅನ್ನು ಫ್ರೀಡಾಳಿಗೋಸ್ಕರ ಮ್ಯೂಸಿಯಂ ಆಗಿ ದಾನ ಮಾಡಿದ.. ಅದೇ ಮನೆಯಲ್ಲಿ ಫ್ರೀಡಾಳ ಅಸ್ಥಿಗಳು ಒಂದು ಸುಂದರವಾದ ಮಣ್ಣಿನ ಜಾಡಿಯಲ್ಲಿ ಪ್ರದರ್ಶನಕ್ಕಿಡಲ್ಪಟ್ಟಿದೆ. ಎಂಭತ್ತರ ದಶಕದಲ್ಲಿ ಆಕೆಯ ಚಿತ್ರಗಳು ಮೆಕ್ಸಿಕೋ, ಅಮೆರಿಕಾಗಳಲ್ಲಿ ಹೆಚ್ಚು ಹೆಸರು ಮಾಡಿದವು. ಫ್ರೀಡಾಳ ಜೀವನ, ಕಲೆಗಳ ಬಗ್ಗೆ ಹಲವಾರು ಚಲನಚಿತ್ರ, ಪುಸ್ತಕಗಳು ಹೊರಬಂದಿವೆ. ತನ್ನ ನೋವನ್ನು ಸುಂದರ ಬಣ್ಣಗಳನ್ನಾಗಿ ಪರಿವರ್ತಿಸಿದ ಫ್ರೀಡಾ ತನ್ನ ಕ್ಯಾನ್ವಾಸುಗಳಲ್ಲಿ ಇಂದಿಗೂ ಜೀವಂತಳಾಗಿದ್ದಾಳೆ.
 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s