ನಂಬಿಕೆ ಎಂಬ ಪುಟ್ಟ ಪದ.

 

ನಂಬಿಕೆ. ಫೆಯಿತ್.
ಎಷ್ಟು ಪುಟ್ಟ ಪದ!
ಆದರೆ ಅಷ್ಟೆ ದೊಡ್ಡದು ಕೂಡ.

ಎಲ್ಲೀ ಆರೋವೇ ಒಬ್ಬ ವಿಜ್ನಾನಿ. ಅಂತರಿಕ್ಷದಲ್ಲಿ ಇತರ ಜೀವಿಗಳು ಇರುವ ಸಾಧ್ಯತೆಗಳನ್ನು ಹುಡುಕುತ್ತ ತನ್ನ ಜೀವನವನ್ನೆ ಕಳೆದಿರುವಾಕೆ. ಆಕೆಗೆ ತನ್ನ ಕೆಲಸದೆದುರು ಎಲ್ಲವೂ ಗೌಣ. ಆಕೆಯನ್ನು ಪ್ರೀತಿಸುವ ಪ್ರಸಿದ್ಧ ಆಧ್ಯಾತ್ಮಿಕ ಚಿಂತಕ ಪಾಮರ್ ಜಾಸನನ್ನು ಕೂಡ ಈ ಕಾರಣದಿಂದ ನಿರಾಕರಿಸಿರುವಾಕೆ. ಬಹಳ ಶ್ರಮಿಸಿ, ಅಡಚಣೆಗಳನ್ನು ಎದುರಿಸಿದ ಮೇಲೆ ಒಂದು ದಿನ ಎಲ್ಲೀ ನಕ್ಷತ್ರವೊಂದರ ಕಡೆಯಿಂದ ಬಂದ ಒಂದು ಸಿಗ್ನಲ್ಲನ್ನು ಯಶಸ್ವಿಯಾಗಿ ಪಡೆದುಕೊಳ್ಳುತ್ತಾಳೆ. ಸಿಗ್ನಲ್ಲನ್ನು ಡಿಕೋಡ್ ಮಾಡಿ ಅದರಲ್ಲಿ ಸೂಚಿಸಿರುವಂತೆ ಇನ್ನೊಂದು ಪ್ರಪಂಚವನ್ನು ತಲುಪಲು ಯಂತ್ರವೊಂದನ್ನು ನಿರ್ಮಿಸಲಾಗುತ್ತದೆ. ಭೂಮಿಯನ್ನು ಪ್ರತಿನಿಧಿಸಲು ಸರಿಯಾದ ಅಭ್ಯರ್ಥಿಗೆ ಹುಡುಕಾಟ ಆರಂಭವಾಗುತ್ತದೆ. ಆಯ್ಕೆಸಮಿತಿಯೆದುರು ಎಲ್ಲೀ ಬಂದುನಿಲ್ಲುತ್ತಾಳೆ. ಆದರೆ ಸಮಿತಿಯಲ್ಲಿರುವ ಪಾಮರ್ ಜಾಸನಿಗೆ ಆಕೆಯನ್ನು ಹೋಗಗೊಡಲು ಇಷ್ಟವಿಲ್ಲ. ಆತ ಎಲ್ಲರ ಮುಂದೆ ಎಲ್ಲೀಯನ್ನು ಕುರಿತು ’ನಿನಗೆ ದೇವರಲ್ಲಿ ನಂಬಿಕೆಯಿದೆಯೆ?’ ಎಂದು ಪ್ರಶ್ನಿಸುತ್ತಾನೆ. ದೇವರನ್ನು ನಂಬದ ಆಕೆ ಈ ಪ್ರಶ್ನೆಯ ಮಹತ್ವವನ್ನು ಪ್ರಶ್ನಿಸುತ್ತಾಳೆ. ’ಭೂಮಿಯ ಹೆಚ್ಚೂಕಡಮೆ ತೊಂಭತ್ತೈದು ಪರ್ಸೆಂಟು ಜನ ದೇವರನ್ನು ನಂಬುವವರು. ಹಾಗಾಗಿ ಭೂಮಿಯನ್ನು ಪ್ರತಿನಿಧಿಸುವ ಅಭ್ಯರ್ಥಿಯಲ್ಲಿ ಕೂಡ ನಂಬಿಕೆಯಿರುವುದು ಬಹಳ ಅವಶ್ಯ ’ ಎನ್ನುತ್ತಾನೆ ಪಾಮರ್. ಎಲ್ಲೀಯ ಮೌನ ಆಕೆಯನ್ನು ಅನರ್ಹಳನ್ನಾಗಿ ಮಾಡುತ್ತದೆ.

ಜೋಡೀ ಫಾಸ್ಟರ್ ಮತ್ತು ಮ್ಯಾಥ್ಯೂ ಮೆಕ್ಕೋನಾಹೀ ನಟಿಸಿರುವ ‘ಕಾಂಟ್ಯಾಕ್ಟ್’ ಚಲನಚಿತ್ರದಲ್ಲಿ ನಡೆವ ಘಟನೆಯಿದು. ವಿಜ್ನಾನಿಯಾಗಿರುವ ಎಲ್ಲೀಯ ತೊಳಲಾಟ ಇಲ್ಲಿ ಬಹಳ ಮುಖ್ಯವಾದ್ದು. ಜೀವನವಿಡೀ ರಾಶನಲ್ ಆಗಿ ಪ್ರತಿಯೊಂದನ್ನೂ ಪ್ರಶ್ನಿಸಿಕೊಂಡು ಬೆಳೆದ ವಿಜ್ನಾನಿಯೊಬ್ಬಳು ತನ್ನ ಜೀವನದ ಅತ್ಯಂತ ಪ್ರಮುಖ ಅವಕಾಶವನ್ನು ತನ್ನ ನಂಬಿಕೆಯ ಕಾರಣದಿಂದಾಗಿ ಕಳೆದುಕೊಳ್ಳಬೇಕಾಗಿ ಬರುವ ಸನ್ನಿವೇಶ. ದೇವರಲ್ಲಿ ನಂಬಿಕೆಯಿದೆ ಎಂದರೆ ಆಕೆ ಇಲ್ಲಿಯತನಕದ ತನ್ನ ಕೆಲಸಕ್ಕೆ, ತನ್ನ ವೈಯುಕ್ತಿಕ ನಂಬಿಕೆಗೆ ಕೊಡಲಿಪೆಟ್ಟು ಹಾಕಿದಹಾಗಾಗುತ್ತದೆ. ಇಲ್ಲವೆಂದರೆ ಆಕೆಯ ಇಲ್ಲಿಯತನಕದ ಶ್ರಮವೆಲ್ಲ ಹೊಳೆಯಲ್ಲಿ ಹುಣಿಸೆಹಣ್ಣಿನ ಹಾಗೆ ತೊಳೆದುಹೋಗುತ್ತದೆ. ಸಾಕ್ರಟೀಸನ ಮುಂದೆಯೂ ಇಂಥದೇ ಪ್ರಶ್ನೆಯಿದ್ದದ್ದು. ಆತ ಆಯ್ಕೆಮಾಡಿಕೊಂಡಿದ್ದು ವಿಷವನ್ನು. ಗೆಲಿಲಿಯೊನ ವಿಷಯದಲ್ಲಿ ನಡೆದದ್ದೂ ಇದೇ. ಸೂರ್ಯ ಸ್ಥಿರವಾದ್ದೆಂದೂ, ಭೂಮಿ ತಿರುಗುವುದೆಂಬ ತನ್ನ ವಾದವನ್ನು ಬಿಟ್ಟುಕೊಡಲು ಆತ ಸಿದ್ಧನಿರಲಿಲ್ಲ. ಆದರೆ ಭೂಮಿ ತಿರುಗದೆಂದು ಪಾಶ್ಚಿಮಾತ್ಯ ಬೈಬಲ್ಲಿನಲ್ಲಿ ಬರೆದಿದ್ದು ಗೆಲಿಲಿಯೋನ ವಾದ ಇದಕ್ಕೆ ಧಕ್ಕೆಯಾಗುವಂತಿತ್ತು ಎಂಬುದು ಚರ್ಚಿನ ವಾದ. ತನ್ನ ಅರಿವಿನೆಡೆಗೆ ವಾಲಿನಿಂತ ಗೆಲಿಲಿಯೋನನ್ನು ಗೃಹಬಂಧನದಲ್ಲಿರಿಸಲಾಯಿತು. ಸುಮಾರು ಮುನ್ನೂರು ವರುಷಗಳ ನಂತರ ಪೋಪ್ ಪಯಸ್ ಗೆಲಿಲಿಯೋನ ಯಾರಿಗೂ ತಲೆಬಾಗದ ಚೈತನ್ಯವನ್ನು ಪ್ರಶಂಸಿಸಿದರು. ಚರ್ಚು ಆಗಿನಕಾಲದ ಸಮಾಜದ ನಂಬಿಕೆಯನ್ನು ಎತ್ತಿಹಿಡಿಯಲು ಗೆಲಿಲಿಯೋನ ವಿರುದ್ಧ ತಾವು ಮಾಡಿದ್ದು ಸರಿ ಎಂದು ತನ್ನ ನಿಲುವನ್ನು ಸಮರ್ಥಿಸಿಕೊಂಡಿತು.

ಈಗಿನ ದಿನಗಳ ಬಗ್ಗೆ ಮಾತನಾಡುವದಾದರೆ ನಾವು ಬಲುದೂರ ಸಾಗಿಬಂದಿದ್ದೇವೆ. ನಮ್ಮ ನಂಬಿಕೆ ಶ್ರದ್ಧೆಗಳು ಹೆಚ್ಚಿನಪಕ್ಷ ನಮ್ಮ ಆಯ್ಕೆಗೆ ಒಳಪಟ್ಟಿವೆ. ಸಾಮಾಜಿಕ ಚೌಕಟ್ಟುಗಳ ಆಚೆ ನಿಂತು ನಮ್ಮ ನಂಬಿಕೆಗಳನ್ನು ಅಳೆದುಕೊಳ್ಳುವದು ನನ್ನಂತಹ ಜನಸಾಮಾನ್ಯರಿಗು ಇಂದು ಸಾಧ್ಯವಿದೆ. ಕೆಲವೆಡೆ ಇದು ಟೀಕೆಗೆ, ಕೆಲವೆಡೆ ಪ್ರಶಂಸೆಗೆ ಗುರಿಯಾಗಿದೆ. ನಂಬಿಕೆಯಿರುವ ಒಬ್ಬ ವ್ಯಕ್ತಿ ನಂಬಿಕೆಯನ್ನು ಪ್ರಶ್ನಿಸುವ ವ್ಯಕ್ತಿಯೊಡನೆ ಕೂತು ವಿಚಾರವಿನಿಮಯ ನಡೆಸುವ ಸಾಧ್ಯತೆಗಳು ಇವತ್ತು ಇವೆ. ನಾವು ನೈತಿಕ ಅವನತಿಯ ಕಡೆ ಸಾಗಿದ್ದೇವೆಯೆ ಅಥವಾ ಏಳಿಗೆಯೆಡೆ ಹೆಜ್ಜೆಹಾಕುತ್ತಿದ್ದೇವೆಯೆ, ನಿರ್ಧಾರ ನಿಜಕ್ಕು ಕಷ್ಟ. ಆದರೆ ನಂಬಿಕೆಯ ಎರಡೂ ಮುಖಗಳು ಒಂದನ್ನೊಂದು ಕಣ್ಣಿಟ್ಟು ನೋಡುವುದು ಸಾಧ್ಯವಾಗಿರುವುದು ನಮ್ಮ ಕಾಲದಲ್ಲಿಯೇ ಎನ್ನುವದು ಹೆಮ್ಮೆಯ ವಿಚಾರ. ಹಲವಾರು ವೈರುಧ್ಯಗಳು ನಮ್ಮೊಳಗೇ ಇವೆ. ಅವು ನಮ್ಮ ನಂಬಿಕೆಯನ್ನು ಪ್ರಶ್ನಿಸುತ್ತ ಅವನ್ನು ಗಟ್ಟಿಗೊಳಿಸುತ್ತಲೋ, ಇಲ್ಲ ಕಡಿಮೆಮಾಡುತ್ತಲೋ ಹೋಗುತ್ತವೆ.

‘ಕಾಂಟ್ಯಾಕ್ಟ್’ ಚಲನಚಿತ್ರದಲ್ಲಿ ಎಲ್ಲೀ ಆರೋವೇಗೆ ಕೊನೆಗೂ ಆ ಇನ್ನೊಂದು ಪ್ರಪಂಚಕ್ಕೆ ಹೋಗುವ ಅವಕಾಶ ದೊರೆಯುತ್ತದೆ. ಸುಮಾರು ಇಪ್ಪತ್ತಾರು ಜ್ಯೋತಿರ್ವರ್ಷಗಳನ್ನು ದಾಟಿ ಹೊಸಲೋಕಕ್ಕೆ ಕಾಲಿಡುವ ಎಲ್ಲೀ ತಾನು ಕಾಣುವ ಅದ್ಭುತ ನೋಟಗಳಿಗೆ ನಿಬ್ಬೆರಗಾಗಿ ಕಣ್ಣೀರು ಸುರಿಸುತ್ತ ತನಗೆ ಅರಿವಿಲ್ಲದಂತೆ, ’ಓಹ್, ದೇವರೆ!” ಎಂದು ಉದ್ಗರಿಸುತ್ತಾಳೆ. ’ಇಲ್ಲಿಗೆ ನನ್ನ ಬದಲು ಕವಿಯೊಬ್ಬರನ್ನು ಕಳಿಸಿರಬೇಕಿತ್ತು’ ಎಂದು ಯೋಚಿಸುತ್ತಾಳೆ. ಮಾನವಜನಾಂಗಕ್ಕೆ ಆಕೆಗಿಂತ ಒಳ್ಳೆಯ ಪ್ರತಿನಿಧಿ ಸಿಗುವುದು ಸಾಧ್ಯವಿತ್ತೆ?

 ಚಿತ್ರಕೃಪೆ: www.impawarads.com ಮತ್ತು www.seti.org

 

 

 

 

 

Advertisements

11 thoughts on “ನಂಬಿಕೆ ಎಂಬ ಪುಟ್ಟ ಪದ.

 1. ‘…ನಂಬಿಕೆಯ ಎರಡೂ ಮುಖಗಳು ಕಣ್ಣಿಟ್ಟು ನೋಡುವುದು ಸಾಧ್ಯವಾಗಿರುವುದು ನಮ್ಮ ಕಾಲದಲ್ಲಿಯೇ…’
  ನಾನು ಒಪ್ಪುವುದಿಲ್ಲ.
  ಉಳಿದಂತೆ ಬರಹ ಮೆಚ್ಚುವಂತಿದೆ.
  – ಹರೀಶ್ ಕೇರ

 2. ಟೀನಾರೇ,
  ಮತ್ತೊಂದು ಫಿಲ್ಮ್ ನೋಡೋದಿಕ್ಕೆ ಸಿಕ್ತು. ಮುಂದಿನ ವಾರ ಬೆಂಗ್ಳೂರಿಗೆ ಬರೋದಿದೆ. ದೊಡ್ಡ ಲಿಸ್ಟ್ ರೆಡಿಯಾಗಿದೆ. ಅದಕ್ಕೆ ಮತ್ತೊಂದು ಹೆಸರು ಸೇರಿಸಿದ್ದೇನೆ. ಬರಹ ಚೆನ್ನಾಗಿದೆ, ನೋಡಿದ ಮೇಲೆ ಉಳಿದ್ದದ್ದು ಬರೀತೀನಿ.
  ನಾವಡ

 3. ಬರಹ ಚೆನ್ನಾಗಿದೆ ಟೀನ್,
  ಯಾಕೋ ಇತ್ತೀಚೆಗೆ ಎಲ್ಲರೂ ಒಂದಲ್ಲ ಒಂದು ಮೂವೀ ನೋಡಲು ಪ್ರೇರೇಪಿಸ್ತಲೇ ಇದ್ದಾರೆ. ನೀನು ಕೊಟ್ಟಿರುವ ವಿವರಗಳು ಇದನ್ನೂ ನೋಡಲು ಪ್ರೇರಿಸ್ತಿದೆ.
  ನಂಬಿಕೆ….. ಊಹೂಂ… ನಂಬುವ- ನಂಬದಿರುವಿಕೆಯ ನಡುವೆ ಇವತ್ತು ಆರೋಗ್ಯಕರ ಸಂಘರ್ಷವೇ ಇಲ್ಲ ಅನಿಸತ್ತೆ ನಂಗೆ. “ನಾನಿದನ್ನ ನಂಬ್ತೇನೆ / ನಂಬೋದಿಲ್ಲ” ಅಂತ ನೇರಾನೇರ ಹೇಳಿಕೊಳ್ಳಲಾಗದ ಸೋಗಲಾಡಿತನವೂ ಇವತ್ತಿನ ನಮ್ಮಲ್ಲಿದೆ ಅಂತಲೂ ನಂಗನಿಸತ್ತೆ. ಹಾಗಂತ ನಾನು ‘ನೇರವಾಗಿಯೇ’ ನಂಬಿದ್ದೇನೆ!

  ಚೇತ್

 4. ಅಪಾರ,
  ತ್ಯಾಂಕು!!

  ಹರೀಶರೆ,
  ನಿಮಗೆ ಸಮಯವಿದ್ದರೆ ತಾವು ಯಾಕೆ ಒಪ್ಪುವದಿಲ್ಲ ಅಂತ್ ಕಾರಣ ಕೊಡಲು ಸಾಧ್ಯವೆ?
  ನಾವಡರೆ,
  ಬೆಂಗಳೂರಿನಿಂದ ಸಿಡಿ ಖಜಾನೆ ಹೊತ್ತುಕೊಂಡುಹೋಗುವ ಅಂದಾಜು ಇರುವ ಹಾಗಿದೆ. ನಿಮ್ಮ ಲಿಸ್ಟಿನ ಬಗ್ಗೆ ನನಗೂ ತಿಳಿಸಿ.

  ಚೇತೂ,
  ನಾನು ಹೇಳಿರುವದು ಇಡೀ ಮೂವೀಯ ಒಂದು ಭಾಗ ಅಷ್ಟೆ. ನೋಡು, ಸುಮಾರು ಟಾಪಿಕುಗಳು ಹುಟ್ಟುವ ಹಾಗೆ ಮಾಡತ್ತೆ ಈ ಮೂವೀ, ಮಾನವನ ಕುತೂಹಲದ ಬಗ್ಗೆ, ತಂತ್ರಜ್ನಾನದ ಬಗ್ಗೆ, ಪ್ರಾಮಾಣಿಕತೆಯ ಬಗ್ಗೆ,, ಹೀಗೇ.. ಆಮೇಲೆ ನಾನು ನಂಬಿಕೆಯ ಬಗ್ಗೆ ಮಾತನಾಡಿದ್ದು ಸ್ಟ್ರಿಕ್ಟ್ ಲೀ ಕಂಪ್ಯಾರಿಟಿವ್ ಲೆವೆಲಿನಲ್ಲಿ. ಎರಡರ ನಡುವೆ ನಿಲ್ಲುವ ಸೋಗಲಾಡಿತನ ಮನುಷ್ಯನಲ್ಲಿ ಈವಾಗಿಂದಲ್ಲ, ಮೊದಲಿನಿಂದಲೂ ಇದ್ದಿದ್ದೇ. ಮೊದಲು ತಮ್ಮ ನಂಬಿಕೆಗಳು ಸತ್ಯವಾಗಿರುವುದೆಂದು ಆಗಿನ ಸಾಮಾಜಿಕ ಪದ್ಡತಿಯ ವಿರುದ್ಡ ನಿಂತು ದನಿಯೆತ್ತುವ ಸಾಹಸ ಮಾಡಿದವರನ್ನು ನಿರ್ದಯವಾಗಿ ಹೊಸಕಿಹಾಕಲಾಗುತ್ತಿತ್ತು. ಇಂದು ಹಾಗಿಲ್ಲ. ಅಂದಿನ ಸತ್ಯ ಇಡೀ ಸಮಾಜಕ್ಕೆ ಸಂಬಂಧಪಟ್ಟುದೂ, ನಿರ್ಧರಿಸಲ್ಪಡುವಂಥದೂ ಆಗಿತ್ತು. ಈಗ ನಮ್ಮ ನಂಬಿಕೆ ಸತ್ಯಗಳು ಬಹಳಮಟ್ಟಿಗೆ ವ್ಯಕ್ತಿಗತ ಲೆವೆಲ್ಲಿಗೆ ಬಂದು ನಿಂತಿವೆ. ನಮ್ಮ ನಡುವೆ ಈ ಬಗ್ಗೆ ಸಂವಾದವೋ ವಾಗ್ವಾದವೋ ನಡೆಯುವುದು ಸಾಧ್ಯ ಆಗ್ತಾ ಇದೆ. ಈ ಸಂಘರ್ಷ ಕೆಲವೊಮ್ಮೆ ಅಪಾಯಕಾರಿ ಮಟ್ಟಕ್ಕೆ ಬಂದು ನಿಲ್ಲುವ ಸಾಧ್ಯತೆಗಳನ್ನ ನಾನು ಅಲ್ಲಗಳೆದಿಲ್ಲ. ಅಂಥ ಬಹಳ ಘಟನೆಗಳನ್ನ ನಾವು ಕಾಣ್ತಲೇ ಇದೇವೆ. ಆದರೆ ಇನ್ನೊಂದು ಲೆವೆಲ್ಲಿನಲ್ಲಿ ನೋಡಿದಾಗ ನಮ್ಮ ಟಾಲರೆನ್ಸ್ ಲೆವೆಲ್ ಮೇಲಕ್ಕೆ ಹೋಗಿರುವುದೂ ಕಾಣ್ತದೆ. ಒಂದೆಡೆ ಅಲ್ ಕಾಯಿದಾ, ಇರಾಕಿನಂಥ ಅಮಾನವೀಯತೆ ಕಂಡರೆ (ಇಂಥ ಅಮಾನವೀಯತೆ ನಮಗೆ ಹೊಸತೇನಲ್ಲ!) ನಮ್ಮ ಬೆಂಗಳೂರಿನಂಥ ನಗರಿಗಳಲ್ಲಿ ಎಲ್ಲವನ್ನೂ ಒಳಗೊಂಡು ಬದುಕುವಂತಹ ಜೀವನ್ಮುಖೀ ಆಟಿಟ್ಯೂಡು ಇದೆ. ಒಂದೆಡೆ ಅಮೆಜಾನಿನ ಮಳೆಕಾಡುಗಳನ್ನ ನಾವು ನಾಶ ಮಾಡುತ್ತಿದ್ದರೆ ಇನ್ನೊಂದೆಡೆ ಗ್ರೀನ್ ಪೀಸ್, ಸಾಲುಮರದ ತಿಮ್ಮಕ್ಕ, ಮೇಧಾ ಪಾಟ್ಕರ್ , ಪಾಳೇಕರ್ ಮುಂತಾದವರು ಕೂಡ ಇದ್ದಾರೆ. ಅದಕ್ಕೇ ನಾನು ಹೇಳಿದ್ದು, ವೈರುಧ್ಯಗಳು ನಮ್ಮೊಳಗೇ ಇವೆ ಅಂತ!!

 5. ಟೀನ್,
  ನನ್ನ ಮಟ್ಟಿಗೆ ಃಏಳೋದಾದ್ರೆ, “ನಾನು ನಂಬಿಕೆಯ ‘ಭ್ರಮೆ’ಯ ಮೇಲೆಯೇ ಬದುಕಿರೋದು!
  ಇದೊಂದು ಮಾತೇ ನನ್ನೊಳಗಿನ ದ್ವಂದ್ವ- ವೈರುಧ್ಯಗಳನ್ನು ಹೇಳಿಬಿಡುತ್ತದೆಯಲ್ಲವೇ?
  ಹೌದು. ಭಯೋತ್ಪಾದಕ ಸಂಘಟನೆಗಳೂ ಕೂಡ ಯಾವುದೋ ನಮ್ಭಿಕೆಯಿಂದೆದ್ದು ಬಂದವು.
  ಬಹುಶಃ ಮತ್ತೆ ನಾನು ಔಟ್ ಆಫ್ ಟಾಪಿಕ್ ಮಾತಾಡ್ತಿದೇನೆ. ಆಗ ಕೂಡ… ಅರಿವಿದ್ದೇ ಇಡಿಯ ಬರಹ- ಪಿಚ್ಚರನ್ನು ಬಿಟ್ಟು ಕೇವಲ ‘ನಂಬಿಕೆ ಅನ್ನುವ ಪುಟ್ಟ ಪದ’ದ ಬಗ್ಗೆ ಬರೆದೆ! ಹೀಗೇ ಸುಮ್ನೆ.. 🙂

  -ಚೇತ್

 6. ಹೇ ದುರ್ಗೇ,
  ಚೆನ್ನಾಗಿದೆ!! (;))
  ಆಮೇಲೆ ನೀನು ಖಂಡಿತವಾಗ್ಲೂನೂ ಔಟ್ ಆಫ್ ಟಾಪಿಕ್ ಮಾತಾಡ್ತಿಲ್ಲ. ನಮ್ಮ ನಂಬಿಕೆ “ಹೋಪ್” ಕೂಡ ಆಗಿರಬಹುದು!! ನೀನು ಹೀಗಿದೆ ಅಂತ ಹೇಳಿಕೊಳ್ಳುತ್ತಿದೀಯ, ಅದು ಖುಶಿ.

  -ಟೀನಾ.

 7. Tina:

  I have mixed feelings about your penultimate paragraph. It’s true, on the one hand, we have come a far way in coming to terms with our own belief (or the lack of it) based on our individual world view, rather than basing it in the social context. However, on the other hand, the pressure to conform also is increasing. Similarly, it’s true and not true at the same time that different kinds of faiths can have a civilised conversation. Institutionalisation of individuals’ beliefs is on the rise. At the same time, more and more individuals are growing aware of their own importance.

  All in all, we live in interesting times. By the way, the phrase “interesting times” itself has a curious history. “May you live in interesting times!” is an ancient Chinese curse! 🙂

 8. ಟೀನಾ ಅವರೇ,

  ’ನಂಬಿಕೆ ಎಂಬ ಪುಟ್ಟಪದ’ ಬರಹ ನನಗೆ ’Da Vinci Code’ ಹಾಗೂ ‘Deception Point’ ಕಾದಂಬರಿಗಳನ್ನು ನೆನಪಿಸಿತು. ಹೊಸ ರೀತಿಯ ವಿಚಾರ ಹಾಗೂ ಅವನ್ನು ಕೃತಿಯ ರೂಪಕ್ಕೆ ಇಳಿಸುವುದು ನಮ್ಮಲ್ಲೂ ನಡೆದರೆ ಎಷ್ಟು ಖುಷಿಯಾಗಬಹುದು, ಅಲ್ಲವೆ? ಎಷ್ಟೊಂದು ಭಿನ್ನ ಸಂಗತಿಗಳು ನಿತ್ಯವೂ ನಮ್ಮ ಸುತ್ತಮುತ್ತ ನಡೆಯುತ್ತಿರುತ್ತವೆ. ತಂತ್ರಜ್ಞಾನದ ಅಗಾಧ ಖರ್ಚನ್ನು ಕನ್ನಡ ಚಿತ್ರರಂಗ ಭರಿಸಲಿಕ್ಕಿಲ್ಲ. ಆದರೆ, ಭಾವನೆಗಳ ಸೂಕ್ಷ್ಮವನ್ನು ತೋರಿಸಲು ಅಷ್ಟೊಂದು ಖರ್ಚಾಗುತ್ತದೆಯೆ?

  ಟೈಟಾನಿಕ್‌ ಸಿನಿಮಾವನ್ನೇ ಉದಾಹರಣೆಗೆ ತೆಗೆದುಕೊಂಡರೆ, ಅಲ್ಲಿರುವುದು ಭಾವನೆಗಳ ಚಿತ್ರಣವೋ ಅಥವಾ ಟೈಟಾನಿಕ್‌ನ ಅಗಾಧತೆಯ ಚಿತ್ರಣವೋ. ನನ್ನ ಪ್ರಕಾರ, ಎರಡೂ ಹೌದು. ಟೈಟಾನಿಕ್‌ ಹಡಗಿನ ಅಗಾಧತೆ ತೋರಿಸುತ್ತಲೇ ಮನುಷ್ಯನ ಸಹಜ ಭಾವನೆಗಳ ಆಳವನ್ನು ತೋರಿಸುತ್ತಾನೆ ನಿರ್ದೇಶಕ. ಹೀಗಾಗಿ ಚಿತ್ರ ಮನಸ್ಸಿನಲ್ಲಿ ಇಳಿಯುತ್ತದೆ, ಉಳಿಯುತ್ತದೆ.

  ನಮ್ಮಲ್ಲು ಆಲಮಟ್ಟಿ ಅಣೆಕಟ್ಟು ಕಟ್ಟಿದಾಗ ಬಾಗಲಕೋಟೆ ನಗರದ ಅರ್ಧ ಭಾಗ ಹಾಗೂ ನೂರಾರು ಹಳ್ಳಿಗಳು ಮುಳುಗಿದವು. ಅದ್ಯಾವುದೂ ನಮ್ಮ ಭಾವನೆಯನ್ನೇ ತಾಕಲಿಲ್ಲವಲ್ಲ! ’ದ್ವೀಪ’ ಸಿನಿಮಾದ ಮೂಲಕ ಅಂಥದೊಂದು ಪ್ರಯತ್ನ ನಡೆಯಿತಾದರೂ ಏಕೋ ಅದು ತಟ್ಟಲಿಲ್ಲ. ತಲೆಮಾರುಗಳೇ ಹುಟ್ಟಿ ಬೆಳೆದಂಥ ಪರಿಸರ ನೀರಲ್ಲಿ ಮುಳುಗಿ ಹೋಗುವ ನೋವು, ಭಾವನೆ ಸುಲಭವಾಗಿ ದಕ್ಕುವುದಿಲ್ಲ. ಇಂಥದೊಂದು ವಿಷಯದ ಮೇಲೆ ಸಿನಿಮಾ ಮಾಡಲು ಎಷ್ಟು ಖರ್ಚಾಗುತ್ತದೆ?

  ಹೊಸ ರೀತಿಯ ಚಿಂತನೆ ಮುಂದೆ ಎಲ್ಲ ಸಮಸ್ಯೆಗಳು ಸುಲಭವಾಗಿ ಕರಗಬಹುದು. ಹಾಗಂತ ಅಂದುಕೊಂಡೇ, ಅಂಥದೊಂದು ಒಳನೋಟ ಕೊಟ್ಟ ಬರವಣಿಗೆಗೆ ಕೃತಜ್ಞತೆಗಳು.

  – ಚಾಮರಾಜ ಸವಡಿ
  http://chamarajsavadi.blogspot.com

 9. ವಿಜ್ನಾನಿಯನ್ನ – ವಿಜ್ಞಾನಿ ಅಂತ ತಿದ್ದಿ. vij~jaani. ಸ್ಪೆಲ್ಲಿಂಗ್ ಇನ್ನೂ ಬರಲ್ಲ. ಛೇ…ಛೇ…ನೀವೂ ಮಗಳ ಜೊತೆ ಅ..ಆ..ಇ..ಈ..ಕಲೀರಿ 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s