ಅರಿವು, ನಿದ್ದೆಗಳ ಕಂಸದೊಳಗೆ..

 

Life Is something which happens when you can’t get to sleep – Fran Lebowitz.

ಬೆಳಜಾವ. ಅರೆ ತೂಕಡಿಕೆ. ಅರೆ ಎಚ್ಚರ. ಎಲ್ಲಿಂದಲೋ ಎಂ.ಎಸ್ ಸುಬ್ಬಲಕ್ಷ್ಮಿಯವರ ಸಖತ್ ಖಡಕ್ಕಾದ ಕಂಠದಿಂದ ‘ಕೌಸಲ್ಯಾ ಸುಪ್ರಜಾರಾಮ..’ ಬೆಳಗ್ಗೆ ಮೂರಕ್ಕೇ ಚುರುಕೇರುವ ಬೀದಿಗಳು. ವಾಕಿಂಗಿಗೆ ಎದ್ದು ಓಡಾಡುವವರ ಮನೆಗಳ ಗೇಟುಸದ್ದು. ಹೊಸ್ತಿಲಿಗೆ ನೀರು ಹುಯಿದು ರಂಗೋಲೆ ಬಿಡುತ್ತ ಬೆಳಗಿನ ತಿಂಡಿ, ಕಟ್ಟಬೇಕಾಗಿರುವ ಟಿಫನ್ ಬಾಕ್ಸು ಹಾಗು ಸಂಜೆಯ ಶಾಪಿಂಗ್ ಲಿಸ್ಟಿನ ಲೆಕ್ಕಾಚಾರ ಮಾಡುತ್ತ ಇರುವ ಮಲ್ಟಿಟಾಸ್ಕರ್ ಮನೆಯೊಡತಿ. ಹಾಲು, ಪೇಪರು, ಹೂವು ಮಾರುವವರ ಸೈಕಲಿನ ಕಿಣಿಕಿಣಿ. ನಿದ್ದೆಬಾರದೆ ಕಷ್ಟಪಡುತ್ತ ಈಮೇಲು ನೋಡಲು ಲಾಗಿನ್ನಾದರೆ, ಈ ಹೊತ್ತಲ್ಲದ ಹೊತ್ತಲ್ಲಿ ಸಕ್ಕರೆನಿದ್ದೆ ಹೊಡೆವುದ ಬಿಟ್ಟು ದೆವ್ವದ ಹಾಗೆ ಎಚ್ಚರವಿದೀಯಲ್ಲ ಎಂದು ಅಣಗಿಸುವ ದೂರದೇಶದ ಸ್ನೇಹಿತ. ಮೂರುಗಂಟೆಗೆ ಅಲಾರಮು ಇಟ್ಟು ಎದ್ದು ಓದುತ್ತ ಇರುವ ಹಿಂದಿನ ಮನೆಯ ಹುಡುಗ.

ನಿದ್ದೆಗೆಡುವುದು ಅಂದರೆ ಆಗುತ್ತಿರಲಿಲ್ಲ ನನಗೆ. ಮನೆಯಲ್ಲಿ ಯಾವಾಗಲು ನನ್ನ ನಿದ್ದೆಯ ಬಗ್ಗೆ ಕಂಪ್ಲೇಂಟುಗಳೆ. ಹತ್ತನೆ ಕ್ಲಾಸಿನಲ್ಲಿರುವಾಗ ಅಮ್ಮ ಒಮ್ಮೆ ಹಠಾತ್ತನೆ ನನ್ನ ಸ್ಕೂಲಿಗೆ ಭೇಟಿನೀಡಿ ನನ್ನ ಮೇಷ್ಟರುಗಳ ಬಳಿ ನನ್ನ ನಿದ್ದೆಖೋರತನದ ಬಗ್ಗೆ ತಿಳಿಸಿಬಿಟ್ಟು ನನಗೆ ಫಜೀತಿ ಮಾಡಿದ್ದರು. ಆಗಿಂದ ನನಗೆ ಡಬಲ್ ಹೋಂವಕರ್ು, ಟಿಆರೆನ್ ಮೇಷ್ಟರು ಹೇಳದೆ ಕೇಳದೆ ನನ್ನ ಓದಿನ ಬಗ್ಗೆ ವಿಚಾರಿಸಲು ಮನೆಗೆ ಭೇಟಿ ನೀಡುವುದು, ಇತ್ಯಾದಿ ತೊಂದರೆಗಳು ಆರಂಭವಾದವು. ಅದಕ್ಕು ಮುಂಚೆ ಪುಟ್ಟದಾಗಿದ್ದಾಗ ಎಷ್ಟು ಚೆನ್ನಾಗಿತ್ತು ಅಂದುಕೊಳ್ಳುತ್ತ ಇದ್ದೆ. ಸಂಜೆಯಾದರೆ ಕರೆಂಟು ಇರುತ್ತಿರಲಿಲ್ಲ. ಹೊರಗೆ ಯಾವಾಗಲು ಸುರಿಯುತ್ತಲೆ ಇರುವ ಮಳೆ. ಮನೆಯಲ್ಲಿ ನನ್ನ ಅಜ್ಜಿಯನ್ನು ನೋಡಲು ಬರುವ ಮುದುಕಿಯರು ವಿಧೇಯಳಂತೆ ಕಾಣುತ್ತಿದ್ದ ನನ್ನ ಕೂರಿಸಿಕೊಂಡು ಪ್ರಾರ್ಥನೆಗಳನ್ನು ಹೇಳಿಕೊಡುವರು. ಅದಾದ ಮೇಲೆ ನಾನು ಅವರನ್ನು ಕಥೆ ಹೇಳಲು ಗೋಗರೆಯುವೆ. ಆವಾಗ ಅವರು ತಮ್ಮ ಅಜ್ಜಿಯಂದಿರು ತಮಗೆ ಹೇಳಿದ ರಾಜರಾಣಿಯರ, ಪ್ರಾಣಿಪಕ್ಷಿಗಳ, ಭೀಕರ ಡಕಾಯಿತರ, ಭೂತಪ್ರೇತಗಳ ಕಥೆಗಳನ್ನು ರಿಪೀಟು ಮಾಡುವರು. ಆ ಮೂಲಕ ನನ್ನಲ್ಲಿ ದೈವಭೀತಿಯನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗುವರು. ಲಾಟೀನಿನ ಮಂದಬೆಳಕಿನಲ್ಲಿ ಅವರ ಮುಖಗಳು ಹಗಲಿನಲ್ಲಿ ಕಾಣುವುದಕ್ಕಿಂತ ವಿಚಿತ್ರವಾಗಿ ಕಂಡು ನಾನು ಕಂಬಳಿಯನ್ನು ಗಟ್ಟಿಯಾಗಿ ಹೊದ್ದುಕೊಳ್ಳುವ ಹಾಗೆ ಮಾಡುತ್ತಿದ್ದವು. ಗೋಡೆಯ ಮೇಲೆ ಆಡುವ ನಮ್ಮ ನೆರಳುಗಳನ್ನೆ ನೋಡುತ್ತ ಮಳೆಯ ಸದ್ದು ಕೇಳುತ್ತ ನಾನು ನಿದ್ರೆಗೆ ಜಾರುತ್ತಿದ್ದೆ.

ಒಮ್ಮೊಮ್ಮೆ ಅಪ್ಪ ಅಮ್ಮ ಇಬ್ಬರೂ ಕೆಲಸದ ಮೇರೆಗೆ ಎಲ್ಲಾದರು ಹೋಗಬೇಕಾಗಿ ಬಂದಾಗ ಕೆಪಿಜಿ ಮೇಷ್ಟರ ಮಗಳು ಸಂಧ್ಯಾ ನಮ್ಮ ಜತೆ ಬಂದು ಇರುವುದಿತ್ತು. ಎಸೆಸೆಲ್ಸಿ ಎಕ್ಸಾಮಿನ ಸಮಯ. ಆಕೆ ರಾತ್ರಿಯೆಲ್ಲ ಕರೆಂಟು ಇಲ್ಲದಿದ್ದರು ಚಿಮಣಿಎಣ್ಣೆದೀಪದ ಬೆಳಕಲ್ಲಿ ಓದುವಳು. ಚಿಮಣಿ ಬುಡ್ಡಿಯಿಂದ ಪುಸ್ತಕದ ಮೇಲೆ ಸಿಡಿವ ಕಪ್ಪನ್ನು ಮೆಲ್ಲಗೆ ಒರೆಸುತ್ತ.. ಕಣ್ಣಿಗೆ ಆಗಾಗ ರೋಸ್ ವಾಟರು ಬಿಟ್ಟುಕೊಳ್ಳುತ್ತ…ಅವಳ ಗುಂಗುರುಕೂದಲು, ಪುಸ್ತಕದುದ್ದಕ್ಕು ಹರಿದಾಡುವ ಚುರುಕುನೋಟ, ಪೆನ್ಸಿಲಿನ ಹರಿದಾಟ…. ನೋಡನೋಡುತ್ತ ನನಗೆ ತೂಕಡಿಕೆ. ‘ಒಂದಿನಾನಾದ್ರು ಅವಳ ಹಾಗೆ ಓದಿದೀಯೇನೆ?’ ಎಂದು ಬೇಸರಿಸುವ ಅಮ್ಮ. ನನ್ನ ಎಸೆಸೆಲ್ಸಿಯ ದಿನಗಳಲ್ಲಿ ನಾನು ನಿದ್ದೆಗೆಟ್ಟು ಓದಿದ್ದು ಕೊನೆಯ ಹದಿನೈದು ದಿನಗಳು ಮಾತ್ರ. ಅದೂ ಅಮ್ಮನ ಕಾಫಿ, ಅಲಾರಮ್ಮುಗಳ ದೆಸೆಯಿಂದ. ‘ಮನಸ್ಸಿಟ್ಟು ಓದಿದ್ದಿದ್ರೆ ಇನ್ನೂ ಹೆಚ್ಚಿಗೆ ಸ್ಕೋರು ಮಾಡ್ತಿತ್ತು’ ಎಂದು ಅಮ್ಮ ಅಪ್ಪ ಮಾತಾಡಿಕೊಂಡಾಗ ತಲೆಕೆರೆದುಕೊಂಡು ಸುಮ್ಮನೆ ಕೂತಿದ್ದೆ.  ಹಾಸ್ಟೆಲು ಸೇರಿದ ಮೇಲೆ ಹಾಳು ನಿದ್ದೆ ಎಲ್ಲಿ ಹಾರಿಹೋಯಿತೊ ತಿಳಿಯದು. ಮನೆಯಲ್ಲಿ ತಬ್ಬಿಕೊಳ್ಳುತ್ತಿದ್ದ ಸಿಹಿನಿದ್ದೆ ಯಾಕೊ ಬರಲೆ ಒಲ್ಲೆನೆನ್ನತೊಡಗಿತು. ಎಷ್ಟೆಷ್ಟೋ ಹೊತ್ತಿಗೆ ಮಲಗುವದು, ಏಳುವದು, ಓದುವದು.. ಹತ್ತಕ್ಕೆ ಮಲಗಿ ಐದಕ್ಕೇಳುವ ರುಟೀನು ಮರೆತೇ ಹೋಯಿತು.

ಮಗಳು ಹುಟ್ಟಿನಿಂದಲೆ ನಿಶಾಚರಿ. ಹಗಲೆಲ್ಲ ಮಲಗಿ ರಾತ್ರಿಯೆಲ್ಲ ಆಡುವ ಚಕೋರಿ. ನನಗೋ ನಿದ್ದೆಗೆಟ್ಟು ಹಲುಬುವಂತಾಗುತ್ತಿತ್ತು. ಕಣ್ಣ ಸುತ್ತ ಕಪ್ಪು ವತರ್ುಲಗಳು. ಸುಮಾರುಸಾರಿ ಮಗುವನ್ನು ತೊಡೆಯಮೇಲಿಟ್ಟುಕೊಂಡು ‘ಮಲಗೇ ತಾಯಿ!’ ಎಂದು ಗೋಳಾಡುತ್ತ ಇದ್ದೆ. ಅದು ನನ್ನ ಮುಖ ನೋಡಿ ಕಿಲಕಿಲ ನಗುತ್ತಿತ್ತು. ಆಕೆಗಾಗಿ ಹಾಡುವದು, ಕಥೆ ಹೇಳುವುದು, ಆಟವಾಡುವದು.. ಇದು ನಾನೇ ಏನು? ಅಮ್ಮನ ಮಾತು ಕೇಳದೆ ನಿದ್ದೆಮಾಡುತ್ತಿದುದಕ್ಕೆ, ಅವರ ರಾತ್ರಿಗಳ ನಿದ್ದೆಗೆಡಿಸಿದ್ದಕ್ಕೆ ನನಗೆ ದೊರಕಿರುವ ಶಿಕ್ಷೆಯಿದು ಎಂದು ಅಂದುಕೊಳ್ಳುತ್ತಿದ್ದೆ. ಆದರೆ ಆ ರಾತ್ರಿಗಳಲ್ಲಿ ನಾನು ಕಂಡುಕೊಂಡ ಮಮತೆ, ಅಕ್ಕರೆ, ಹೊಳಹುಗಳಿಗೆ ಯಾವ ಯಮನಿದ್ದೆಯೂ ಸಾಟಿಯಾಗಲಾರದು.

ಈಗ ಬೇಕೆಂದರು ನಿದ್ದೆ ಬರದು. ಎಚ್ಚರವಾದೊಡನೆ ಕಿಟಕಿಯಿದೆ, ಹೊರಗಿನ ನೀರವ ಬೀದಿಗಳಿವೆ. ಹಿಂದಿನ ಮನೆಯ ಇನ್ಸೊಮ್ನಿಯಾಕ್ ಮುದುಕಿಯ ಗೊಣಗಾಟಗಳಿವೆ, ಶೆಲ್ಫಿನಲ್ಲಿ ಓದದೆ ಬಿಟ್ಟಿರುವ ಪುಸ್ತಕಗಳಿವೆ, ಲೇಖನಿಯಿದೆ. ನಿದ್ರೆ ಬರದ ರಾತ್ರಿಗಳೆ ಸಿಹಿಯಾಗಿ ಕಾಣತೊಡಗಿವೆ. ಕನ್ನಡಿ ಕಂಡಕೂಡಲೆ ನಿಂತು ಪ್ರತಿಬಿಂಬ ನೋಡಿಕೊಳ್ಳುವ ಹಾಗೆ, ಒಂದು ರೀತಿಯ ಚಟ ಇದು. ಹಗಲಿನ ಎಲ್ಲ ಖಾಲಿತನ, ನಾಟಕಗಳ ಅವಲೋಕಿಸಲು ಸರಿಯಾದ ಸಮಯ. ಯಾವುದನ್ನು ನಾನು ನನ್ನ ಜೀವನದ ಪ್ರಮುಖ ಭಾಗವೆಂದುಕೊಡಿದ್ದೆನೋ ಅದು ಇಂದು ಗೌಣವಾಗಿರುವುದು, ನಿದ್ದೆಗೆಟ್ಟು ಕೂರುವ ಸಂತಸಕ್ಕಾಗಿ ನಾನು ಹೀಗೆ ಎಚ್ಚರಗೊಳ್ಳುವುದು, ಹಳೆಯ ಮುದುಕಿಯರ ಕಥೆಗಳಷ್ಟೆ ಆತ್ಮೀಯವೆನಿಸುವುದು. ಯಾವುದೊ ರೇಡಿಯೋ ಚ್ಯಾನೆಲ್ಲಿನಲ್ಲಿ ಹಾಡುಗಾರನೊಬ್ಬ ತಾರಸ್ಥಾಯಿಯಲ್ಲಿ ಗುನುಗುತ್ತಿರುವ:
 

And you can’t fight the tears that ain’t coming
Or the moment of truth in your lies
When everything feels like the movies
Yeah you bleed just to know you’re alive

(Iris, City of Angels)

 

Pic courtesy: www.victorainweb.org

Pic info: ‘A Fairy Tale’ by Arthur Wardle RBI RBA, 1864-1949. Oil on canvas. 115 x 165 centimetres. “All seemed to Sleep, the timid Hare on Form” — Scott. Exhibited at the Royal Academy, 1895 (no. 222). The artrist’s well-known skill at drawing and painting animals here plays a part in a late example of ‘Fairy Painting’ 

Advertisements

9 thoughts on “ಅರಿವು, ನಿದ್ದೆಗಳ ಕಂಸದೊಳಗೆ..

 1. ನಿದ್ದೆ ಒಂದು ಎನಿಗ್ಮಾ. ಇಲ್ಲದೆ ಹೋದಲ್ಲಿ ನಾನು ಈ ಹೊತ್ತಿನಲ್ಲಿ ಕಮೆಂಟ್ ಬರೆಯುತ್ತಿರಲಿಲ್ಲ. ವಿಪರ್ಯಾಸವೆಂದರೆ, ನನಗೆ ಈ ನೀರವ ಬೀದಿಗಳು, ನಿದ್ದೆಗೆಡುವುದು, ಇನ್ಸೊಮ್ನಿಯಾದ ಸುಖ, ತಲ್ಲಣ.. ಎಲ್ಲ ಬೇಡಾಗಿದೆ. ಸಾಮಾನ್ಯ ಮನುಷ್ಯರ ಸಾಮಾನ್ಯ ದಿನಚರಿ ಬೇಕಾಗಿದೆ. ನೋಡೋಣ, ಅದು ಸಾಧ್ಯವೋ ಎಂದೋ.

  ನಿಮ್ಮ ಗೂ ಗೂ ಡಾಲ್ಸ್ ಹಾಡು ಕೇಳುತ್ತ…

  And I don’t think they’d understand…

 2. ಅದೆನೊ ಗೊತ್ತಿಲ್ಲ ಯಾವಾಗ ಮಲ್ಗುದ್ರೂ ನಿದ್ದೆ ಬರುತ್ತೆ… exams timeನಲ್ಲಂತೂ… ನೆನ್ನೆ ಎ಼ಅಮು ಮುಗೀತು ನಿದ್ರೆನೇ ಇಲ್ಲ.. ಎನ್ ವಿಚಿತ್ರ….. ಆದ್ರು ಮೂರ್ ಗಂಟೆಗೆ ಎದ್ದು ಕೂತ್ಕೊತಿರ ಅಂದ್ರೆ…. ಹ್ಮ್ಹ್ಹ್ಹ್ಹ್

 3. ಚಕೋರ,
  ಸುಮಾರು ವಿಚಿತ್ರ ಅನುಭವಗಳು – ಇನ್ಸೊಮ್ನಿಯಾವನ್ನ ಒಳಗೊಂಡು – ನಮಗೆ ಬೇಕಾಗಿ ತಂದುಕೊಳ್ಳುವಂಥದ್ದಲ್ಲ. ನಾನೂ ಅದನ್ನ ಬೇಕಾಗಿ ಅನುಭವಿಸುತ್ತಿಲ್ಲ. ಆದರೆ ಇರುವದನ್ನು ನಮಗೆ ಬೇಕಂತೆ ಮಾರ್ಪಡಿಸಿಕೊಳ್ಳುವದು ಅಸಾಧ್ಯವೇನಲ್ಲ. ನಿಮ್ಮ ಏಕಾಂತ ನಿಮ್ಮ ಇನ್ಸೊಮ್ನಿಯಾವನ್ನ ಹೆಚ್ಚಿಸಿರಬಹುದು. ನಾನೂ ಅದನ್ನು ನ್ಯಾಚುರಲ್ಲಾಗಿ ಕಡಿಮೆ ಮಾಡುವ ಯತ್ನ ಮಾಡುತ್ತಿದೇನೆ, ಕೆಲವು ಚಟಗಳನ್ನ, ಅಭ್ಯಾಸಗಳನ್ನ ಬಿಡುವುದರ ಮೂಲಕ, ಕಳೆದುಹೋಗಿದ್ದ ಶಿಸ್ತಿನ ಜೀವನವನ್ನು ಬಲವಂತವಾಗಿ ರೂಢಿಸಿಕೊಳ್ಳಲು ಯತ್ನಿಸುವುದರ ಮೂಲಕ..ಆದರೆ ಇದು ನನಗೆ ಯಾವಾಗಲೂ ಬೇಸರ ತರಿಸಿಲ್ಲ. ಕೆಲ್ವೊಮ್ಮೆ ಇದೆಲ್ಲ ನನಗೆ ಬೇಕೆಂದೇ ಆಗುತ್ತಿದೆ, ಇದು ಸಬ್ ಕಾನ್ಶಿಯಸ್ ಆಗಿ ನಾನೇ ತಂದುಕೊಂಡದ್ದು ಅಥವ ಇದೆಲ್ಲ ದೊಡ್ಡದೊಂದು ಕನಸಿನ ಭಾಗವೇನೊ, ಒಮ್ಮೆ ಚಿವುಟಿಕೊಂಡರೆ ಎಚ್ಚರವಾಗಬಹುದು ಎಂದು ಕೂಡ ಅನ್ನಿಸುವದುಂಟು. ಅದಕ್ಕೆ ನಾನು ಕೋಟ್ ಮಾಡಿದ್ದು ..
  “Yeah you bleed just to know you’re alive”

  ಮಲ್ನಾಡ್ ಹುಡ್ಗೀ,
  ನಂಗೂ ನಿನ್ನ ಥರ ಇದ್ದಾಗ ನಿನ್ನ ಹಾಗೇ ಎಕ್ಸಾಮಿನ ಸಮಯದಲ್ಲೆ ಜಾಸ್ತಿ ನಿದ್ದೆ ಬರೋದು. ಆಮೇಲೆ ಯಾಕೊ ನನ್ನ ಬರಹ ಒದಿದ ಮೇಲೆ ಮೂರು ಗಂಟೆಗೆಲ್ಲ ಎಚ್ಚರವಾಯಿತು ಅಂತಿದೀ. ಹುಷಾರು ಮಾರಾಯಿತಿ, ಇದು ನಿನ್ನಂಥ ಮುದ್ದು ಹುಡುಗೀರಿಗೆ ಒಳ್ಳೇದಲ್ಲ. ಚೆನ್ನಾಗಿ ನಿದ್ದೆ ಮಾಡು!! ನನ್ನ ನೆನಪು ಮಾಡಿಕೊಂಡಿದ್ದಕ್ಕೆ ಥ್ಯಾಂಕ್ಯೂ!!

  -ಟೀನಾ.

 4. ಗಣೇಶ್,
  ಒಳ್ಳೆ ಪಾಯಿಂಟು. ಆದರೆ ಕಾಫಿನಾಡಿಂದ ಬಂದ ನನಗೆ ಕಾಫಿ ಬಿಟ್ರೆ ಬೇರೆ ಯಾವ ರುಚೀನೂ ಹಿಡ್ಸೊಲ್ಲ ಕಣ್ರಿ!! ಆದ್ರು ನಿಂ ಅಡ್ವೈಸು ತಗೊಂಡು ರಾತ್ರೆ ಕಾಫಿ ಕುಡಿಯೋದು ಬಿಡ್ತೀನ್ನೋಡಿ.
  ಕಾಲೇಜಲ್ಲೆಲ್ಲ ಇದೇ ’ಕಾಫೀನಾ? ಟೀನಾ?’ ಕೇಳೀ ಕೇಳೀ ಸಾಕಾಗಿತ್ತು. ನೀವು ಇಲ್ಲಿ ಮುಂದುವರೆಸ್ತಾ ಇದೀರಿ!!:)

  ಸುಧೇಶ್,
  The pleasure is mine!! ನಿಮಗೆ ಬೇಸರವನ್ನ ನನ್ನ ಬರಹ ಕಳೆಯಿತು, ಇದಕ್ಕಿಂತ ದೊಡ್ಡ ಕಾಂಪ್ಲಿಮೆಂಟು ಬೇಕೆ?

  ಟೀ-ನಾ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s